ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಘನಾ ಸುಧೀಂದ್ರ ಅಂಕಣ: ಪೊಲೀಸ್ ಗೆ ಕಂಪ್ಲೇಂಟ್

“ನೀವು ಯಾಕೆ ಸುಮ್ಮನೆ ನನ್ನ ಕೈ ಹಿಡಿದು ತಡೆಯುತ್ತಿದ್ದೀರ” ಎಂದು ಕೋಪದಿಂದಲೇ ಹುಡುಗಿ ನುಡಿದಳು. ಆಗ ಆ ಅಶಿಕಿ ಮೆತ್ತಗೆ “ಅಲ್ಲ ನಿಮ್ಮ ಪುಸ್ತಕ ಬಿಟ್ಟಿದ್ದೀರಾ ತಗೊಳ್ಳಿ” ಎಂದ. “ಓಹ್ ಎಲೆನಾಗೆ ಹೇಳಬೇಕಾಗಿದ್ದ ಪಾಯಿಂಟ್ಸ್ ಇರುವ ಪುಸ್ತಕವನ್ನ ಬಿಡುತ್ತಿದ್ದೀನಲ್ಲಾ” ಎಂದು ಅಂದುಕೊಂಡು ಮೆಲ್ಲಗೆ ಅದನ್ನ ತೆಗೆದುಕೊಂಡು ಇಳಿದಳು. ಅಷ್ಟರಲ್ಲಿ ಅವನೂ ಇಳಿದ. “ನೀನು ಏನು ಬರೆದುಕೊಂಡಿದ್ದೀಯಾ ಎಂದು ಓದಬಹುದಾ” ಎಂದು ಕೇಳಿದ ಆಶಿಕಿ. “ಇಲ್ಲ ಇಲ್ಲಾ ನೀನ್ಯಾರು ಅಂತಾನೆ ನನಗೆ ಗೊತ್ತಿಲ್ಲ ಹೇಗೆ ನಿನ್ನನ್ನ ನಂಬಲಿ, ಛಾನ್ಸೇ ಇಲ್ಲ, ಜಾಸ್ತಿ ಹಿಂಬಾಲಿಸಿದರೆ ಪೊಲೀಸನ್ನ ಕರೆಯುತ್ತೇನೆ” ಎಂದು ಹೇಳಿದಳು ಹುಡುಗಿ.

ಇನ್ನೂ ಹಿಂಬಾಲಿಸಿ ಬರುತ್ತಿದ್ದವನ್ನನ್ನ ಕಂಡು ಹೆದರಿ, ೧೧೨ಗೇ ಕರೆ ಮಾಡಿದಳು. ಇದು ನಮ್ಮ ೧೦೦ ಇದ್ದಂಗೆ. ಭಾರತದಲ್ಲಿ ಹೀಗೆಲ್ಲಾ ಆದಾಗ ಯಾವತ್ತೂ ೧೦೦ ಕರೆ ಮಾಡಿರಲ್ಲಿಲ್ಲ. ಅನಾವಶ್ಯಕ ಪ್ರಶ್ನೆಗಳು ಹೆಣ್ಣುಮಕ್ಕಳೇ ಅನುಭವಿಸಬೇಕಾದ್ದರಿಂದ ಅದನ್ನ ಆದಷ್ಟು ಅವಾಯ್ಡ್ ಮಾಡುತ್ತಿದ್ದಳು. ಇಲ್ಲಿ ಕಂಪ್ಲೇಟ್ ಕೊಟ್ಟವರಿಗಿಂತ ಕೊಟ್ಟವರ ಮೇಲೆ ಜಾಸ್ತಿ ವಿಚಾರಣೆಯಾಗುವುದರಿಂದ, ಈ ಕರ್ಮ ನಮಗ್ಯಾಕೆ ಎಂದು ಹಿಂದೆ ಸರಿಯುವವರೇ ಇರುತ್ತಾರೆ ಆದರೆ ಇಲ್ಲಿ ಹಾಗೆಲ್ಲ ಆಗುವುದು ಕಷ್ಟ. ಒಮ್ಮೆ ಇಂಡಿಯನ್ ಡ್ರೆಸ್ ಹಾಕಿಕೊಂಡು ಮೆಟ್ರೋದಿಂದ ಇಳಿದು ಮನೆಗೆ ಹೋಗುವಾಗ ಒಂದು ಗಂಡಸರ ಗುಂಪು ಚುಡಾಯಿಸುತ್ತಿದ್ದದ್ದನು ಕಂಡ ಪೆಟ್ರೋಲ್ ಪೊಲೀಸರು ಹುಡುಗಿ ಮನೆಗೆ ಹೋಗುವವರೆಗೂ ಫಾಲೋ ಮಾಡಿಕೊಂಡು ಬಂದು ಬಿಟ್ಟಿದ್ದರು. ಹೀಗೆ ಇರುವ ವ್ಯವಸ್ಥೆಯಲ್ಲಿ ಹೋಗಿ ಕಂಪ್ಲೇಂಟ್ ಕೊಡೋದು ಸಮಂಜಸ ಎನ್ನಿಸಿ ಹುಡುಗಿ ಕರೆ ಮಾಡಿದಳು. ತಕ್ಷಣ ಪೊಲೀಸ್ ಬಂದು ಅಲ್ಲೇ ವಿಚಾರಣೆ ನಡೆಸೋದಕ್ಕೆ ಶುರು ಮಾಡಿದ್ದರು.

ಒಬ್ಬ ಅಧಿಕಾರಿ ಮಾತ್ರ, ಸ್ಪಾನಿಷಿನಲ್ಲಿ “ಇವನ್ಯಾರು ಗೊತ್ತಾ ಇವನ ಅಪ್ಪ ಯಾರು ಎಂದು ತಿಳಿದಿದೆಯಾ ” ಎಂದು ಕೇಳಿದರು. “ನಮ್ಮ ದೇಶದ ಹಾಗೆ ಇಲ್ಲೂ ನಡೆಯುತ್ತದೆ” ಎಂದು ನಸುನಕ್ಕು, “ಯಾರಾದರೇನು, ಇವನು ನನ್ನನ್ನ ಫಾಲೋ ಮಾಡುತ್ತಿದ್ದಾನೆ, ನನಗಿಷ್ಟವಿಲ್ಲ” ಎಂದರೂ ಎಂದು ಬಹಳ ಧೈರ್ಯದಿಂದ ಹೇಳಿದರು. ಇದೇ ಹುಡುಗಿ ಎರಡು ವರ್ಷದ ಹಿಂದೆ ತೀರ ರಾಗಿಗುಡ್ಡ ದೇವಸ್ಥಾನದ ಮುಂದೆ ಯಾವುದೋ ಹುಡುಗ ಚುಡಾಯಿಸಿದರೆ ಕಣ್ಣೀರು ಹಾಕಿಕೊಂಡು ಬಂದಿದ್ದಳು. ಒಂದೆರಡು ದಿವಸ ಆ ಕಡೆ ತಲೇನೆ ಹಾಕಿರಲ್ಲಿಲ್ಲ. ಈಗ ಅದೆಲ್ಲಿಂದ ಧೈರ್ಯ ಬಂತೋ ಕಂಪ್ಲೇಂಟ್ ರೆಜಿಸ್ಟರ್ ಮಾಡಿ ಎಂದು ಹಠ ಮಾಡುತ್ತಿದ್ದಳು. ದೇಶವೇ ಹತ್ತಿ ಉರಿಯುತ್ತಿರುವಾಗ ಅಲ್ಲಿ ಯುದ್ಧ ಖೈದಿಗಳು, ದೇಶದ್ರೋಹದ ಖೈದಿಗಳನ್ನ ಮತ್ತು ಈ ಗಲಾಟೆ, ಕಳ್ಳತನದ ಜನರನ್ನ ಸಂಭಾಳಿಸಿ ಹೊತ್ತಿ ಉರಿಯುತ್ತಿರುವ ಪೊಲೀಸಿಯಾಗೆ ಸುಮ್ಮನೆ ಯಾವನೋ ಬಂದು ನನ್ನನ್ನ ಫಾಲೋ ಮಾಡುತ್ತಿದ್ದಾನೆ ಎಂದರೆ ಯಾಕೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕು ಎಂದು ಅರ್ಥವಾಗಲ್ಲಿಲ್ಲ. ಅದು ತುಂಬಾ ಕ್ಷುಲಕ ವಿಷಯವಾಗಿ ಪೊಲೀಸರಿಗೆ ಅನ್ನಿಸುತ್ತಿತ್ತು. ಆದರೆ ಹುಡುಗಿ ಮೈಗ್ರೆಂಟ್ ಆದ್ದರಿಂದ ಅವಳನ್ನ ಅವಳ ದೂರನ್ನು ಬಿಡುವ ಹಾಗಿರಲ್ಲಿಲ್ಲ ಸರಿ ಪಾಸ್ಪೋರ್ಟ್ ನಂಬರ್ ತಗೊಂಡು ಅವಳ ದೂರನ್ನ ದಾಖಲಿಸಿಕೊಂಡರು.

ಮತ್ತೊಬ್ಬ ಅಧಿಕಾರಿ ಮಾತ್ರ, “ಮಾಫಿಯಾ, ಮಾಫಿಯ” ಎಂದು ಥೇಟ್ ‘ಓಂ’ ಸ್ಟೈಲಿನಲ್ಲಿ ಹೇಳಿದ್ದು ನೋಡಿ “ಇವರೆಲ್ಲಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು” ಎಂದು ಬೈದುಕೊಂಡು ಎಲೆನಾ ಮನೆಯ ಹತ್ತಿರ ಹೆಜ್ಜೆ ಹಾಕಿದ್ದಳು. ಸಿಕ್ಕಾಪಟ್ಟೆ ಸುಂದರವಾದ ಹಳ್ಳಿಯಾಗಿತ್ತು ಅದು. ಒಂದು ದೊಡ್ಡ ನದಿ, ನದಿಯ ಪಕ್ಕ ಕೃಷಿ, ಅದರ ಪಕ್ಕ ಮನೆ, ಇನ್ನೊಂದು ಕಡೆ ಇಟ್ಟಿಗೆ ಕಾರ್ಖಾನೆ, ಮತ್ತೊಂದು ಕಡೆ ಬಹಳ ತಿಳಿಯಾದ ಝರಿ ಹೀಗೆ ಒಂದು ಸುಂದರ ಲೋಕವೇ ಅಲ್ಲಿತ್ತು. ಅಲ್ಲಲ್ಲಿ ಕೆಂಪು ಹಳದಿ ಧ್ವಜ, ಕತಲನ್ನರು ಕನ್ನಡದವರಾಗಿದ್ದರೆ ನಮ್ಮ ಕನ್ನಡ ಯಾವುದೇ ಕಾರಣಕ್ಕೂ ಕಡಿಮೆಯಾಗುತ್ತಿರಲ್ಲಿಲ್ಲ ಅಲ್ಲವಾ ಎಂದು ಅಂದುಕೊಂಡೇ ಆ ಹಾದಿಯನ್ನ ಹಿಡಿದಳು.

ಎಲೆನಾ ಮನೆಯ ಕರೆಗಂಟೆ ಬಾರಿಸಿದರೆ ಅವಳ ಬೆಕ್ಕು, ನಾಯಿ ಮತ್ತು ಗಿಣಿಯ ಸಮೇತ ಅವಳಮ್ಮ ಬಂದು ಬಾಗಿಲು ತೆಗೆದರು. ಅವರಿಗೆ ಇದ್ಯಾವುದು ಹುಡುಗಿ ಎಂದು ಆಶ್ಚರ್ಯದಿಂದ ನೋಡುವಾಗ ಎಲೆನಾಳೆ ಬಂದು ಒಳಗೆ ಕರೆದುಕೊಂಡು ಹೋದಳು. ನೀನು ಬರೋದು ಪೊಲೀಸರಿಂದ ಗೊತ್ತಾಯಿತು ಎಂದು ಕಿಸಕ್ಕನೆ ನಕ್ಕಳು. “ಆ ಪೊಲೀಸ್ ನನ್ನ ಮನೆಯ ಪಕ್ಕದವರು, ನನ್ನ ಮನೆಯ ವಿಳಾಸ ಅವರಿಗೆ ತೋರಿಸಿದ್ದರಿಂದ, ಅವರೇ ಮೆಸೇಜು ಮಾಡಿ ಹೇಳಿದ್ದರು, ಪರವಾಗಿಲ್ಲ ಏನೋ ಕ್ರಾಂತಿ ಮಾಡಿ ಬಂದಿದ್ದೀಯ, ಆ ಮನುಷ್ಯನ್ನನ್ನ ಎದುರು ಹಾಕಿಕೊಳ್ಳುವುದು ಕಷ್ಟ, ಇಲ್ಲಿನ ಜನರೇ ಹೆದರಿಕೊಳ್ಳುತ್ತಾರೆ, ನೀನು ಪರವಾಗಿಲ್ಲ” ಎಂದು ನಕ್ಕಳು.

ಅವಳಮ್ಮ ಚುರೋಸ್ ತಂದು ಟೇಬಲ್ಲಿನ ಮೇಲಿಟ್ಟರು. ಮೊದಲ ಬಾರಿಗೆ ಒಬ್ಬಳು ಭಾರತೀಯಳನ್ನ ಇಷ್ಟು ಹತ್ತಿರದಿಂದ ನೋಡುತ್ತಿರುವುದು, ನಿಮ್ಮ ಕಾಂಪ್ಲೆಕ್ಶನ್ ಎಷ್ಟು ಚೆನ್ನಾಗಿದೆ. ಬಿಳಿಯೂ ಅಲ್ಲ, ಕಪ್ಪೂ ಅಲ್ಲ, ಕಂದೂ ಅಲ್ಲ. ಎಂದು ಕೈ ಮುಟ್ಟಿ ನೋಡಿದರು. ಹುಡುಗಿ ನಕ್ಕು, “ಹಹ ನಮ್ಮ ದೇಶದಲ್ಲಿ ನಿಮ್ಮ ಹಾಗಾಗಲು ಅದೆಷ್ಟು ದೊಡ್ಡ ದೊಡ್ಡ ಬಾಟಲಿನ ಕ್ರೀಮ್ ಹಚ್ಚಿಕೊಳ್ಳುತ್ತಾರೆ, ನಿಮ್ಮ ದೇಶದಲ್ಲಿ ನಮ್ಮ ಬಣ್ಣ ಚೆನ್ನಾಗಿದೆ ಅಂತಾರೆ, ಒಟ್ಟಿನಲ್ಲಿ ದೂರದ ಬೆಟ್ಟ ನುಣ್ಣಗೆ” ಎಂದು ಕಿಸಕಿಸನೆ ನಕ್ಕಳು .

ಬಂದ ಉದ್ದೇಶವನ್ನ ತಿಳಿಸಿ ಸ್ವಲ್ಪ ಗಂಭೀರವಾಗಿರಲು ಪ್ರಯತ್ನ ಪಟ್ಟಳು. ಡೈರಿಯಲ್ಲೆ ಬರೆದಿದ್ದ ಅಷ್ಟೂ ವಿಷಯಗಳನ್ನ ಎಲೆನಾ ಮುಂದೆ ವಾಂತಿ ಮಾಡಿ ಅವಳು ನಗುವುದನ್ನು ಕಂಡಳು. “ಅಂಥದ್ದೇನಿದೆ ನಗೋದಕ್ಕೆ ನೀನು ನನ್ನನ್ನ ದಾರಿ ತಪ್ಪಿಸುತ್ತಿರುವುದರ ಬಗ್ಗೆ ಹೇಳಿದ್ದು. ಅಲ್ಲಾ ನಿಮಗೆಲ್ಲಾ ದೌರ್ಜನ್ಯ ಆಗಿದೆ ಎಂದೆಲ್ಲಾ ನನಗೆ ಹೇಳಿ ಒಂದು ಸೈಡಿನ ಕಥೆ ಹೇಳಿ ನನಗೆ ನಿಮ್ಮ ಮೇಲೆ ಕನಿಕರ ಬರುವ ಹಾಗೆ ಮಾಡಿದ್ದೀಯಲ್ಲಾ ಇದು ಎಷ್ಟು ಸರಿ ಹೇಳು, ನಮ್ಮ ಅಪಾರ್ಟ್ಮೆಂಟಿನ ಜನ ಎಲ್ಲಾ ನನಗೆ ಬುದ್ಧಿ ಹೇಳಿದರು. ಛೆ.. ” ಎಂದು ಬೇಜಾರು ಪಟ್ಟುಕೊಂಡಾಗ, ಎಲೆನಾ, “ಅವರೆಲ್ಲಾ ಯಾವ ಪಾರ್ಟಿಗೆ ಸೇರ್ಕೊಂಡಿದ್ದಾರೆ ಎಂದು ಕೇಳು ಮೊದಲು, ನೋಡು ಇಲ್ಲಿ ಸ್ವಾತಂತ್ರ್ಯ ಬೇಕೆಂದು ಹೋರಾಡುವ ನಾವು ನಮ್ಮ ಎಲ್ಲಾ ಉತ್ಪನ್ನಗಳಿಂದ ಹಿಡಿದು ಉಪ್ಪಿನ ತನಕ ನಮ್ಮದೇ ಆಗಬೇಕೆಂಬ ಆಸೆಯಿದೆ. ಅದಕ್ಕೆ ನಾವು ಹೋರಾಡುತ್ತಿದ್ದೇವೆ, ನೀವು ಸ್ವದೇಸಿ ಅಂದೋಲನ ಮಾಡಲಿಲ್ಲವಾ? ಉಪ್ಪಿನ ಸತ್ಯಾಗ್ರಹ ಮಾಡಲಿಲ್ಲವಾ ? ಅವೆಲ್ಲಾ ಯಾಕೆ ಆಯಿತು ಹೇಳು, ನಿಮ್ಮವರೇ ನಿಮ್ಮನ್ನ ಆಳಬೇಕು ಅನ್ನೋದಕ್ಕೆ ಮಾತ್ರ. ಇದು ಒಂದು ಥರಹ ಹಾಗೆ, ನಿನಗೆ ತಲೆ ಕೆಡಿಸಿರುವ ವೆಟರನ್ನುಗಳು ಅವರ ಆಯಸ್ಸು ಮುಗಿದಿದೆ. ಅವರ ಸೋಷಿಯಲ್ ಸೆಕ್ಯೂರಿಟಿ ಪಕ್ಕಾ ಆಗಿದೆ ಅದಕ್ಕೆ ಅವರಿಗೆ ಹೊಟ್ಟೆ ತುಂಬಿದೆ. ಅವರಿಗೆ ಕರೆಂಟು, ನೀರು ಎಲ್ಲವೂ ಉಚಿತ. ಅದನ್ನ ಕೊಡೋರು ಯಾರು? ಸ್ಪಾನಿಷ್ ಸರ್ಕಾರ, ಕತಲಾನ್ ಸರ್ಕಾರ ಬಂದರೆ ಮೊದಲು ಅವನ್ನೆಲ್ಲಾ ತೆಗೆಯುತ್ತಾರೆ, ಇದು ಅವರಿಗೆ ಇಷ್ಟವಿಲ್ಲದಿರುವುದು, ವಯಸ್ಸಾದಂತೆ ಆದಂತೆ ಅವರಿಗೆ ಅವರು ಮಾಡಿದೆಲ್ಲಾ ಸರಿಯೆಂದು ತೋರಿಸುವ ಹುಕಿ ಅವರಿಗೆ ಬರುತ್ತದೆ. ಚಿಕ್ಕವರೆಲ್ಲಾ ಸರಿಯಾಗಿಲ್ಲ ಎಂದು ಶುರು ಮಾಡುತ್ತಾರೆ. ನೋಡು ಈ ದೊಡ್ದವರಿಗೆ ಮನೆಯ ಸಮಸ್ಯೆ ಅರ್ಥವಾಗದೇ ಇಷ್ಟು ವರ್ಷ ಜೀವನ ಸಾಗಿಸಿರುತ್ತಾರೆ, ಆಮೇಲೆ ಮನೆಯ ಮಕ್ಕಳು ಕೈ ತೋರಿಸಿದಾಗ ಅವರಿಗೆ ಅವಮಾನ ಆಗಿ ತಮ್ಮ ತಪ್ಪನ್ನ ಮುಚ್ಚಿಡಲು ಪ್ರಯತ್ನ ಮಾಡುತ್ತಾರೆ, ಇಲ್ಲೂ ಅದೇ ಆಗಿರೋದು. ಅವರ ಪೀಳಿಗೆ ನೆಟ್ಟಗೆ ಆಳಿಲ್ಲ, ನಾವು ಆಳುತ್ತೇವೆ ಎಂದರೂ ಬಿಡಲ್ಲ ಅಷ್ಟೇ ಕಥೆ” ಎಂದು ಹೇಳಿದಳು ಎಲೆನಾ..

ಅಲ್ಲಿಗೆ ಚುರೋಸ್ ಸಾಸ್ ಫ್ರಾಕಿಗೆ ಬಿದ್ದು ಬಟ್ಟೆಯೆಲ್ಲಾ ಮಸಿಯಾಯ್ತು… ಎಲೆನಾ, “ನೋಡು ಆಗೋದೆಲ್ಲಾ ಒಳ್ಳೆದಕ್ಕೆ ಇನ್ನೊಂದಷ್ಟು ಹೇಳುತ್ತೇನೆ ಬಾ ” ಎಂದು ಬಟ್ಟೆ ಕೊಡಲು ಬಂದಳು…

ಆಮೇಲೆ…

‍ಲೇಖಕರು avadhi

28 March, 2020

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading