
“ಓಹ್ ಮೈ ನಿನಾ, ಜೀಸಸ್ ಸೇವ್ ಹರ್” ಎಂದು ಹುಡುಗಿ ಮನೆಗೆ ಕಾಲಿಡುತ್ತಲೇ ಅವಳ ಮನೆಯೊಡತಿ ಕಿರುಚಲು ಶುರು ಮಾಡಿದಳು. ಇನ್ನೇನೋ ಹೊಸ ನಾಟಕ, ಪರಮ ನಾಸ್ತಿಕಳಾದ ತನ್ನನ್ನ ಮುನ್ನೂರಮೂವತ್ತುಮೂರು ಕೋಟಿ ದೇವತೆಗಳನ್ನ ನಂಬದವಳಿಗೆ ಹೊಸ ದೇವರನ್ನ ಕಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾಳಾ ಎಂದು ಕೊಂಚ ವಾರೆನೋಟದಿಂದ ನೋಡುತ್ತಿರುವಾಗಲೇ, ತನ್ನ ದೇವರಕೋಣೆಯಿಂದ ಬೈಬಲ್ ತಂದು “ಇದರ ಮೇಲೆ ಪ್ರಮಾಣ ಮಾಡಿ ಹೇಳು, ನೀನು ಹೀಗೆಲ್ಲಾ ಮತ್ತೆ ಮಾಡಲ್ಲ” ಎಂದು ಕನ್ನಡ ಸೀರಿಯಲ್ಲಿನ ಹೀರೋಯಿನ್ ಅಮ್ಮ ಆಡುವ ಹಾಗೆ ಆಡುತ್ತಿದ್ದಳು. ಅಂಥದ್ದೇನು ಮಾಡಿದ್ದೀನಿ ಎಂದು ಅಂದುಕೊಳ್ಳುವಾಗಲೇ, “ಟೀವಿಯಲ್ಲಿ ನಿನ್ನ ನೋಡಿದೆ ಆ ರಕ್ತ ಪಾತದಲ್ಲಿ, ನೀನ್ಯಾಕೆ ಇಲ್ಲಿನ ಜನರ ಹೋರಾಟದ ಮಧ್ಯ ಸೇರಿಕೊಂಡಿದ್ದೀಯ, ನಿಮ್ಮಪ್ಪ ಅಮ್ಮ ಎಷ್ಟು ಪ್ರೀತಿಯಿಂದ ನಿನ್ನನ್ನ ಬಿಟ್ಟುಹೋಗಿದ್ದಾರೆ, ಒಳ್ಳೆ ಬುದ್ಧಿ ಇರುವವಳು ನಿಂಗ್ಯಾಕೆ ಇವೆಲ್ಲಾ” ಎಂದು ಮಾತಾಡುತ್ತಲೇ ಇದ್ದಳು. ಪಕ್ಕದ ಮನೆಯ ಸೂಸನ್ ದಂಪತಿಗಳು, ಮೇಲಿನ ಮನೆಯ ಕತಲಾನ್ ಅಜ್ಜ ಎಲ್ಲರೂ ಕೆಳಗಡೆ ಬಂದು ಅವಳನ್ನ “ನಾದಾ ನಾದಾ” ಎಂದು ಹೇಳುತ್ತಲೇ ಇದ್ದರು.
“ನಾನು ಆ ಹೋರಾಟಕ್ಕೆ ಹೋಗಲೇ ಇಲ್ಲ, ನನ್ನ ಗೆಳತಿಯೊಡನೆ ಮನೆಗೆ ಬರುವಾಗ ಹೀಗೆಲ್ಲಾ ಆಗಿದ್ದು, ಆ ಸಂದರ್ಭದಲ್ಲಿ ನಾನಿದ್ದೆ ಅಷ್ಟೆ, ನನ್ನ ನಂಬಿ ಪ್ಲೀಸ್” ಎಂದು ಹೇಳುತ್ತಿದ್ದರೂ, ಪಕ್ಕದ ಸೂಸನ್ ಆಂಟಿ, ಮೇಲಿನ ಮನೆಯ ಅಜ್ಜ “ಇಲ್ಲ ನೀನಿನ್ನು ಚಿಕ್ಕವಳು ಬಿಸಿ ರಕ್ತ ನಿನಗೆ, ಹೀಗೆಲ್ಲಾ ಆಗತ್ತೆ, ಇಲ್ಲಿ ಕೊಲೆಯೆಲ್ಲಾ ಮಾಡುತ್ತಾರೆ, ಇಷ್ಟು ಬುದ್ಧಿವಂತೆಯನ್ನ ನಾವು ಕಳೆದುಕೊಳ್ಳೋದಕ್ಕೆ ಇಷ್ಟ ಇಲ್ಲ, ನೋಡು ನೀ ಹೀಗೆಲ್ಲಾ ಮಾಡಬೇಡ, ನನ್ನ ಮೇಲೆ ಪ್ರಾಮಿಸ್ ಮಾಡು” ಎಂದೆಲ್ಲಾ ಹುಡುಗಿಯನ್ನ ಸುತ್ತು ಹಾಕಿಕೊಂಡು ಅಪಾರ್ಟ್ಮೆಂಟಿನ ಜನರೆಲ್ಲಾ ಒಟ್ಟಾಗಿ ಬಿಟ್ಟಿದ್ದರು.
ಹುಡುಗಿ ಮತ್ತೆ ಮತ್ತೆ, “ಇಲ್ಲ ನಾ ಹೋಗಿಲ್ಲ, ನಿಜವಾಗಿಯೂ” ಎಂದು ಎಷ್ಟೇ ಹೇಳಿದರೂ ಅವಳ ಮಾತನ್ನ ಕೇಳಲೇ ತಯಾರಿರಲ್ಲಿಲ್ಲ. ಆಮೇಲೆ ಅಪಾರ್ಟ್ಮೆಂಟಿನ ಅಸೋಸಿಯೇಷನ್ ಅಧ್ಯಕ್ಷ ಮೆಲ್ಲೋ ಎಂಬ ಫ್ರೆಂಚ್ ವೃದ್ಧ ಬಂದು, “ನೋಡು ಮಗು ನೀನು ನನ್ನ ಮೊಮ್ಮಗಳ ವಯಸ್ಸಿನವಳು, ನಿನಗೆ ಅನ್ಯಾಯದ ವಿರುದ್ಧ ಹೋರಾಡುವ ಹುಮ್ಮಸ್ಸಿರುತ್ತದೆ, ಅದಕ್ಕೆ ಇಲ್ಲಾಗುವ ಎಲ್ಲಾ ವಿಷಯಕ್ಕೂ ಪ್ರತಿಕ್ರಿಯೆ ನೀಡುತ್ತೀಯಾ, ಒಳ್ಳೆಯದೇ ಆದರೆ ಅದನ್ನ ನೀನು ನಿನ್ನ ದೇಶದಲ್ಲಿ ಹೋಗಿ ಮಾಡು, ನೀನು ಎಷ್ಟೆ ಆದರೂ ಹೊರಗಿನವಳು, ನಿನಗೆ ಕೆಲವು ವಿಷಯಗಳು ಗೊತ್ತಾಗುವುದೇ ಇಲ್ಲ, ಈಗ ನಿಮ್ಮಲ್ಲಿ ಸಿಪಾಯಿ ದಂಗೆ ಆಯಿತ್ತಲ್ಲಾ.. ” ಎನ್ನುವಾಗ, “ಇಲ್ಲ ಅದು ದಂಗೆ ಅಲ್ಲ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಎಂದು ಹುಡುಗಿ ಸರಿ ಮಾಡಿದಳು. “ಹೌದು ಮಗು ಅದೇ, ನಮಗೆ ಅದನ್ನ ಬೇರೆ ಥರಹವೇ ಚಿತ್ರಣ ಮಾಡಿದ್ದಾರೆ, ಹಾಗೆಯೇ ನಮ್ಮ ದೇಶದ ಹೋರಾಟವನ್ನೂ ನಿನಗೆ ಯಾವುದೋ ಹೀರೋ ದೃಷ್ಠಿಯಿಂದ ತೋರಿಸಿದ್ದಾರೆ, ನೀನು ಅದನ್ನ ನಂಬಿದ್ದೀಯ, ನಾನು ಮತ್ತು ಗಡಾಲ್ಫ್ ಇಬ್ಬರೂ ವಿಶ್ವಯುದ್ಧದಲ್ಲಿ ಪಾಲ್ಗೊಂಡವರು, ನಮಗಿಂತ ಸ್ವಾತಂತ್ರ್ಯದ ಬೆಲೆ ಮತ್ತೊಬ್ಬರಿಗೆ ಗೊತ್ತಿದೆಯಾ ಹೇಳು” ಎಂದು ಮಹಡಿಯ ಮನೆಯ ಅಜ್ಜನ ಹತ್ತಿರ ಬೆರಳು ತೋರಿಸಿದರು.

ಗಡಾಲ್ಫ್ ಮತ್ತು ಮೆಲ್ಲೋ ಇಬ್ಬರು ಹುಡುಗಿಯ ಪಕ್ಕ ಕೂತು, “ನೋಡು ಇಂತದನೆಲ್ಲಾ ಮಾಡೋಕೆ ನಿನ್ನನ್ನ ಇಲ್ಲಿ ಕಳುಹಿಸಿಲ್ಲ, ಇದೆಲ್ಲಾ ನಿನಗೆ ಸಂಬಂಧ ಪಡುವಂಥದಲ್ಲ, ಬಿಡು ” ಎಂದು ತಲೆ ಸವರಿ ಮನೆಗೆ ಕಳುಹಿಸಿದರು. ಮನೆಯೊಡತಿ ಮಾತ್ರ “ಸೈತಾನ್, ಸೈತಾನ್” ಎಂದು ಮಡಿಕೆಯಲ್ಲಿ ಏನೇನೂ ಹಾಕಿಕೊಂಡು ಬಂದು ಅದರ ಒಳಗೆ ಥೂ ಥೂ ಎಂದು ಉಗಿಸಿ ಅದನ್ನ ತೆಗೆದು ರಸ್ತೆಗೆ ಎಸೆದಳು. “ನೀನು ಹಾಕಿಕೊಂಡಿರುವ ಬಟ್ಟೆಯನ್ನು ಎಸಿ” ಎಂದಳು “ಇಲ್ಲಾ” ಎಂದು ಹುಡುಗಿ ಅಂದ ಮೇಲೆ ಅವಳು ಅಲ್ಲಿ ಬಿಚ್ಚಿಟ್ಟಿದ್ದ ಸಾಕ್ಸನ್ನು ಆಚೆ ಎಸೆದಳು.
ರೂಮು ಬಾಗಿಲು ಹಾಕಿಕೊಂಡವಳು ಮಲಗಿ ಎದ್ದು, ಮತ್ತೆ ಬಾಗಿಲು ತೆಗೆದರೆ, ಒಡತಿ ಆಚೆ ಬಂದು, “ನೀನು ಮತ್ತೆ ಎಲ್ಲೆಲ್ಲೋ ಹೋಗುವ ಹಾಗಿಲ್ಲ” ಎಂದು ಹೇಳಿದ ಮೇಲೆ ಮೆಟ್ಟಿಲು ಹತ್ತಿ ಕತಲಾನ್ ಅಜ್ಜನ ಮನೆಗೆ ಹೋದಳು. ಅಲ್ಲಿ ನೋಡಿದರೆ ಮೆಲ್ಲೋ ಅಜ್ಜ ಸಹ ಅಲ್ಲಿ ಕೂತಿದ್ದರು. ವೈನ್ ಹೀರುತ್ತಾ ಹಳೆ ಪುಸ್ತಕಗಳನ್ನ ತಿರುವು ಹಾಕುತ್ತಿದ್ದರು. “ಓಹ್ ಬಂದ್ಯಾ ಒಳ್ಳೇದಾಯಿತು, ನೀನು ಕೇಳಿರುವ ಕತಲಾನ್ ಕಥೆಗೂ ನಾವು ಈಗ ಹೇಳುವ ಕತಲಾನ್ ಕಥೆಗೂ ಬಹಳ ವ್ಯತ್ಯಾಸವಿದೆ ಕೇಳು” ಎಂದರು.
ಹುಡುಗಿ ಮಾತ್ರ, “ನೋಡಿ ನೀವು ನಿಮ್ಮ ಮೂಗಿನ ನೇರಕ್ಕೆ ಎಲ್ಲಾ ಮಾತನ್ನ ಆಡುತ್ತೀರಾ ನನಗೆ ಗೊತ್ತು, ನಮ್ಮ ಮನೆಯಲ್ಲಿ ನಮ್ಮಜ್ಜಿಯೂ ಹಾಗೆ ಆಟೋದವನ ಹತ್ತಿರ ಜಗಳ ಆಡಬೇಡ, ಬಸ್ಸಿನಲ್ಲಿ ಚಿಲ್ಲರೆ ಕೊಟ್ಟಿಲ್ಲ ಅಂತ ಗಲಾಟೆ ಮಾಡಬೇಡ, ೫ ೧೦ ರುಪಾಯಿಗೆ ಏನೇನೋ ಮಾಡಬೇಡ ” ಎಂದು ಹೇಳುತ್ತಲೇ ಇರುತ್ತಾರೆ. “ನಿಮಗೆಲ್ಲಾ ವಯಸ್ಸಾಗಿದೆ, ಒಂದು ಥರಹದ ಸನ್ಯಾಸತ್ವ ಬಂದಿದೆ, ಅದಕ್ಕೆ ನಿಮಗೆ ಎಲ್ಲೂ ಗಲಾಟೆ ಬೇಡ, ನೀವು ಯುದ್ಧ ಭೂಮಿಯಲ್ಲಿ ಬಂದೂಕು ಹಿಡಿದವರು, ನಿಮಗ್ಯಾಕೆ ಈ ಸನ್ಯಾಸತ್ವ?” ಎಂದು ಖಾರವಾಗಿ ನುಡಿದಳು.
“ನಿನ್ನ ವಯಸಿನಲ್ಲಿ ನಾನೂ ಹೀಗೆ ಆವೇಶ ಪಟ್ಟುಕೊಂಡೇ ನಾನೂ ಯುದ್ಧ ಮಾಡಿದ್ದು, ಅಷ್ಟು ವರ್ಷ ಹೊಡೆದಾಡಿದೆವಲ್ಲಾ ಎಲ್ಲಿ ಶಾಂತಿ ನೆಲೆಸಿದೆ ಹೇಳು, ಇಲ್ಲಿ ಇವರೆಲ್ಲಾ ಸಣ್ಣ ಹುಡುಗರನ್ನ ಉದ್ರೇಕಿಸುತ್ತಿದ್ದಾರಲ್ಲ ಅವರೆಲ್ಲಾ ಮುಂದೆ ಏನಾಗುತ್ತಾರೆ, ಓದಿಲ್ಲ ಬರಹವಿಲ್ಲ, ಅವರಿಗೆ ಅಸಲಿಗೆ ಯಾಕೆ ಹೋರಾಟ ಮಾಡುತ್ತಿದ್ದಾರೆ ಎಂಬ ಅರಿವೂ ಇಲ್ಲ, ಒಂದು ಸಣ್ಣ ಪ್ರದೇಶಕ್ಕೆ ಯಾಕೆ ಸ್ವಾತಂತ್ರ್ಯ ಬೇಕು, ಸ್ವಾಯತ್ತತೆಯನ್ನ ಒಪ್ಪಿಕೊಳ್ಳೋಣ, ಅಕಸ್ಮಾತ್ ಸ್ವಾತಂತ್ರ್ಯ ಕೊಟ್ಟರೆ ನಾಳೆ ಮೊರಕ್ಕನ್ನರು, ಅಥವಾ ಫ್ರೆಂಚಿನವರು ಬಂದು ಮತ್ತೆ ಇವರನ್ನ ಮಟ್ಟ ಹಾಕುವುದಿಲ್ಲವಾ, ಇಲ್ಲಾ ಅಂದೋರಾದ ಹಾಗೆ ಆರು ತಿಂಗಳು ಫ್ರೆಂಚ್, ಇನ್ನಾರು ತಿಂಗಳು ಸ್ಪೇನಿನವರು ಆಳಬೇಕಾ , ಅಂತಾರಾಷ್ಟ್ರೀಯ ಕಡಲ ಕಿನಾರೆಯಿದೆ ಇಲ್ಲಿ ಡ್ರಗ್ಸ್ ದಂಧೆ ನಡೆಯುತ್ತದೆ, ಗನ್ನುಗಳು ಎಲ್ಲೆಲ್ಲೋ ಹರಿದಾಡುತ್ತದೆ, ಟೆರರಿಸಂ ಇದೆ ಇಷ್ಟೆಲ್ಲಾ ನಡೆಯುವ ಸಮಯದಲ್ಲಿ ಇವರು ಸ್ವಾತಂತ್ರ್ಯ ಎಂದು ಬಾಯಿ ಬಡಿದುಕೊಂಡರೆ ಬಾಗಿಲು ಇಲ್ಲದ ಮನೆ ಕಟ್ಟಿಕೊಂಡ ಹಾಗಾಗುತ್ತದೆ. ಸ್ವಲ್ಪ ಕಾಮನ್ ಸೆನ್ಸ್ ಇರಬೇಕು” ಎಂದು ಬೈಯ್ಯುತ್ತಾ ವೈನ್ ಹೀರುತ್ತಾ ಇದ್ದರು.

“ನಿಮ್ಮ ಸ್ವಾತಂತ್ರ್ಯ ಸಂಗ್ರಾಮವನ್ನೇ ನೋಡು, ನಿಮ್ಮಲ್ಲೆ ದೊಡ್ಡ ದೊಡ್ಡ ಮಹನೀಯರು ಇದರ ಮುಂದಾಳತ್ವ ವಹಿಸಿದ್ದರು, ಪರ ವಿರೋಧದ ಗುಂಪಲ್ಲೂ ದೊಡ್ದ ಮಹನೀಯರೇ ಇದ್ದರು. ಸಾಂವಿಧಾನಿಕವಾಗಿ ನಿಮಗೆ ಸ್ವಾತಂತ್ರ್ಯ ಬಂತು, ಸಂವಿಧಾನವನ್ನೇ ದೇವರು ಎಂದು ಬದುಕುತ್ತಿರುವ ದೇಶ ನಿಮ್ಮದು, ಆ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಘನತೆ ಇತ್ತು, ನಮ್ಮದರಲ್ಲಿ ಏನಿದೆ ಹೇಳು” ಎಂದು ಭುಜ ಅಲುಗಾಡಿಸಿ ಕೇಳಿದರು.
ಹುಡುಗಿ ಏನೂ ಮಾತಾಡೋಕೆ ಗೊತ್ತಾಗದೇ ನಿಂತಿದ್ದಳು. “ಈ ಹೋರಾಟ ಇದೆಯಲ್ಲಾ ಇದನ್ನ ಇಲ್ಲಿನ ದೊಡ್ಡ ಶ್ರೀಮಂತರು ಫಂಡ್ ಮಾಡುತ್ತಿದ್ದಾರೆ. ಬಾರ್ಸಾದ ಸಮುದ್ರದ ಬಳಿ ತೈಲನಿಕ್ಷೇಪವಿದೆ, ಅದನ್ನ ಸರ್ಕಾರ ಪಿ ಎಸ್ ಯೂ ಮಾಡಲು ಹೊರಟಿದೆ, ಅದನ್ನ ತಡೆಯಬೇಕೆಂದರೆ ಇಲ್ಲಿ ಸ್ವಾತಂತ್ರ್ಯ ಬಂದರೆ ಮಾತ್ರ, ದೇಶದ ಆರ್ಥಿಕ ವ್ಯವಸ್ಥೆ ಕುಸಿದಾಗ, ಇಲ್ಲಿನ ಪ್ರಧಾನಿ ಶ್ರೀಮಂತನ ಹತ್ತಿರ ಮಂಡಿಯೂರುತ್ತಾನೆ. ಅವನು ತೈಲದ ಬಾವಿ ನನಗೆ ಕೊಡು, ಎಂದಾಗ ಮಾತಾಡದೇ ಕೊಡುತ್ತಾರೆ ಅಲ್ಲಿಗೆ ಇವರು ಡೆಮಾಕ್ರೆಸಿ ಎಂದು ಬಾಯಿ ಬಡಿದುಕೊಂಡು ಹೋರಾಡೋದು ಯಾವೊಬ್ಬನೋ ಸಿರಿವಂತನ ಮನೆಯ ಅಂಗಳದಲ್ಲಿ ಅಧಿಕಾರ ಬಂದು ಬೀಳುತ್ತದೆ. ೫ , ೬ ತಲೆಮಾರು ಇವರನ್ನ ಜೀತದಾಳನ್ನಾಗಿ ಮಾಡುತ್ತದೆ ಅಷ್ಟೆ, ಹೋಗಿ ಹೋಗಿ ಇಂಥದನ್ನ ಸ್ವಾತಂತ್ರ್ಯ, ಸ್ವಾಯತ್ತತೆ ಎಂದು ಅಂದುಕೊಂಡು ನಿನಗೆ ಸಂಬಂಧ ಪಡದ್ದದ್ದನ್ನು ಏನೇನೋ ಅರ್ಥೈಸಿಕೊಳ್ಳುತ್ತೀಯಲ್ಲಮ್ಮಾ ನಿನಗೆ ಅರಿವಿಲ್ಲವೇ ಹೇಳು, ನಿಮ್ಮ ದೇಶದ ಹೋರಾಟಕ್ಕೆ ಬೇರೆ ದೇಶದವರ ಬೆಂಬಲ ಇತ್ತಾ ಇಲ್ಲವಾ ? ಸ್ವರಾಜ್ಯ, ಸ್ವದೇಶ ಎಂಬ ಹೋರಾಟ ನಿಮ್ಮಲ್ಲಿ ಆಗಲಿಲ್ಲವಾ, ನಮಗ್ಯಾಕೆ ಅಮದು ಸ್ವಾತಂತ್ರ್ಯ ಹೋರಾಟಗಾರರು ಬೇಕು ? ಹೇಳು, ನಮ್ಮ ಹೋರಾಟಕ್ಕೆ ಪರದೇಶದವರ ದುಡ್ಡು, ಮೀಡಿಯಾ, ಹೋರಾಟಗಾರರ ಅವಶ್ಯಕತೆ ಇಲ್ಲಾ… , ಬೈದವೇ ಕಾಶ್ಮೀರದ ಹೋರಾಟಕ್ಕೆ ನಾಳೆ ನಾನು ಬಂದರೆ ನೀನು ಏನು ಮಾಡುತ್ತೀಯಾ?”
“ಅಂಕಲ್ ಅದು ನಮ್ಮ ಇಂಟರ್ನಲ್ ಮ್ಯಾಟರ್…” ಎಂದು ತಕ್ಷಣ ಹೇಳಿದಳು. ಅದಕ್ಕೆ ಮೆಲ್ಲೋ “ಹಹಹ ಇದು ನಮ್ಮದು, ನೀನು ಇದಕ್ಕೆಲ್ಲಾ ಬಾಯಾಗುವ ಅವಶ್ಯಕತೆ ಇಲ್ಲಾ..” ಎಂದಾಗ ಹುಡುಗಿ ಕೋಪಮಾಡಿಕೊಂಡು ಎಲೆನಾ ಮನೆಗೆ ಟ್ರೈನು ಹತ್ತಿದಳು…
ಆಮೇಲೆ…






Mundhina kanthalli enu bareetaro Meghana, antha kayuvanthe ide. Nimma baravanigeya shaili nanage tumba ishtavaythu. Heege bareyuttiri
ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಿ ಮೇಘನಾ