'ಮೆದುಳಿನಲ್ಲೊಂದು ಭ್ರೂಣ' – ರೋಚಕತೆಗೆ ಮಿತಿ ಬೇಡವೇ?

ನಾ ದಿವಾಕರ

ನೆನ್ನೆ ಕನ್ನಡ ಟಿವಿ ವಾಹಿನಿಯೊಂದನ್ನು ವೀಕ್ಷಿಸುತ್ತಿದ್ದೆ. ಒಂದು ವಿಶೇಷ ಸುದ್ದಿ ಪ್ರಸಾರವಾಗುತ್ತಿತ್ತು. ರೋಚಕ ಅಥವಾ ರೋಮಾಂಚಕಾರಿ ಎನ್ನಲು ಅಡ್ಡಿಯಿಲ್ಲ. ರೋಚಕ ಸುದ್ದಿ ಎಂದರೆ ಗಂಟೆಗಟ್ಟಳೆ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ನೋಡುಗರನ್ನು ಟಿವಿ ಪರದೆಗೆ ಅಂಟಿಕೊಳ್ಳುವಂತೆ ಮಾಡುವ ಸುದ್ದಿ ಎಂದು ಹೇಳಬೇಕಿಲ್ಲ. ಇದು ವಿದ್ಯುನ್ಮಾನ ಮಾಧ್ಯಮಗಳ ತಂತ್ರವೂ ಹೌದು. ದೇವನೊಬ್ಬ ನಾಮ ಹಲವು ಎನ್ನುವಂತೆ ಅರ್ಥವೊಂದೇ ವಾಕ್ಯಗಳು ಹಲವು ಎನ್ನುವ ಮಾಧ್ಯಮಗಳು ಒಂದೇ ಅರ್ಥದ ಮಾತುಗಳನ್ನು ಹಲವು ರೀತಿಗಳಲ್ಲಿ ಉಚ್ಚರಿಸುತ್ತಾ ಕಾರ್ಯಕ್ರಮ ಪ್ರಸ್ತುತಪಡಿಸುವುದು ಟಿವಿ ವೀಕ್ಷಕರಿಗೆ ಹೊಸ ಅನುಭವವೇನಲ್ಲ. ಈ ಸುದ್ದಿಯ ಕೇಂದ್ರ ಬಿಂದು ಒಬ್ಬ 26 ವರ್ಷದ ಯುವತಿ. ಈ ಸ್ನಾತಕೋತ್ತರ ವಿದ್ಯಾಥರ್ಿನಿಯ ಮೆದುಳಿನಲ್ಲಿ ಭ್ರೂಣ ಪತ್ತೆಯಾಗಿದೆ. ವೈದ್ಯರು ಹೊರತೆಗೆದಿದ್ದಾರೆ. ಸಾಕಲ್ಲವೇ ಸುದ್ದಿಯ ಸರಕಿಗೆ ! ಮೆದುಳಿನಲ್ಲಿ ಭ್ರೂಣ ಅದೂ ವಿವಾಹವಾಗದ ಯುವತಿಯ ಮೆದುಳಿನಲ್ಲಿ ಎಂದಾಕ್ಷಣ ನಿರೂಪಕರಿಗೆ ಸುಗ್ಗಿ, ನೋಡುಗರ ತಲೆಯಲ್ಲಿ ಬಿಸಿಬಿಸಿ ಹುಗ್ಗಿ.
ವಾಹಿನಿಯಲ್ಲಿ ರೋಚಕವಾಗಿ ಪ್ರಸಾರ ಮಾಡಿದ ಸುದ್ದಿಯ ಸಾರಾಂಶ ಇಷ್ಟು 26 ವರ್ಷದ ಯುವತಿಯ ಮೆದುಳಿನಲ್ಲಿ ವೈದ್ಯರು ಭ್ರೂಣವೊಂದನ್ನು ಪತ್ತೆ ಹಚ್ಚಿದ್ದಾರೆ. ಗಭರ್ಾಶಯದಲ್ಲಿರಬೇಕಾದ ಭ್ರೂಣ ಮೆದುಳಿನಲ್ಲಿ ಇರುವುದು ವೈದ್ಯಲೋಕವನ್ನು ಬೆಚ್ಚಿ ಬೀಳಿಸಿದೆ. ಪತ್ತೆಯಾದ ಭ್ರೂಣದಲ್ಲಿ ಹಲ್ಲು, ಕೂದಲು ಮತ್ತು ಮೂಳೆ ಪತ್ತೆಯಾಗಿದೆ. ಇದು ಪ್ರಕೃತಿ ವಿಸ್ಮಯ ಮತ್ತು ಅಪರೂಪವಾದ ಘಟನೆ ಎಂದು ವೈದ್ಯರು ಬಣ್ಣಿಸಿದ್ದಾರೆ. ವಿವಾಹವಾಗದ ಯುವತಿಯ ದೇಹದಲ್ಲಿ ಭ್ರೂಣ ಇರುವುದಾದರೂ ಹೇಗೆ ? ಅದೂ ಮೆದುಳಿನಲ್ಲಿ ? ಈ ಪ್ರಶ್ನೆಗಳಿಗೆ ವೈದ್ಯರು ಉತ್ತರ ಹುಡುಕುತ್ತಿದ್ದಾರೆ. ಇತ್ಯಾದಿ ಇತ್ಯಾದಿ !!!!. ಸುದ್ದಿಯ ನಿರೂಪಕಿಯ ವಿಸ್ಮಯ, ಅಚ್ಚರಿ ಮತ್ತು ರೋಚಕತೆ ಎಂತಹ ವೀಕ್ಷಕರನ್ನೂ ಬೆರಗು ಮಾಡುವಂತಹುದು. ವಾಹಿನಿಯಲ್ಲಿ ತೋರಿಸಿದ ಚಿತ್ರಗಳು ಕೃತಕವಾದದ್ದು ಎನ್ನುವುದೂ ಅನೇಕರಿಗೆ ತಿಳಿಯಲಿಕ್ಕಿಲ್ಲ. ಏಕೆಂದರೆ ಅಲ್ಲಿ ಕಾಣಿಸಿದ ಭ್ರೂಣದಲ್ಲಿನ ಕೂದಲಿನ ಪ್ರಮಾಣ ಅಷ್ಟಿತ್ತು. ಇರಲಿ, ಇದು ಟಿಆರ್ಪಿ ಹೆಚ್ಚಿಸಲು ಸಹಾಯಕವಾಗಬಹುದೇನೋ. ಅಂತರ್ಜಾಲದಲ್ಲಿ ಶೋಧಿಸಿದ ನಂತರ ಈ ವಿಚಾರದಲ್ಲಿ ನನಗೆ ತಿಳಿದುಬಂದಿದ್ದು ಇಷ್ಟು :-

ಇಂಡಿಯಾನ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿನಿ ಯಾಮಿನಿಗೆ ಓದಿನಲ್ಲಿ ಮನಸ್ಸು ಕೇಂದ್ರೀಕೃತವಾಗುತ್ತಿರಲಿಲ್ಲ. ಕಾಲೇಜಿನಲ್ಲಿ ಪಾಠ ಪ್ರವಚನವನ್ನು ಗ್ರಹಿಸಲಾಗುತ್ತಿರಲಿಲ್ಲ. ಇತರರೊಡನೆ ಸಂವಹನ ನಡೆಸಲು ಕಷ್ಟವಾಗುತ್ತಿತ್ತು. ನರರೋಗ ವೈದ್ಯರು ಪರಿಶೀಲನೆ ನಡೆಸಿ ಆಕೆಯ ಮೆದುಳಿನ ಮಧ್ಯಭಾಗದಲ್ಲಿ ಒಂದು ಗಡ್ಡೆ ಅಥವಾ ಪೂತಿಕೋಶ(ಸಿಸ್ಟ್)ಇದೆ ಎಂದು ಹೇಳಿದ್ದಾರೆ.ಕ ಕೀಹೋಲ್ ತಂತ್ರಜ್ಞಾನದ ಮೂಲಕ ವೈದ್ಯರು ಈ ಗಡ್ಡೆಯನ್ನು ಹೊರತೆಗೆದಿದ್ದಾರೆ. ಈ ಗಡ್ಡೆಯನ್ನು ವೈದ್ಯಕೀಯ ಭಾಷೆಯಲ್ಲಿ ಟೆರಾಟೊಮಾ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದರಲ್ಲಿ ಮೂಳೆ, ಕೂದಲು ಮತ್ತು ಹಲ್ಲಿನ ಟಿಶ್ಯೂ ಇರುವುದು ಸಹಜ ಎಂದು ವೈದ್ಯರು ಹೇಳುತ್ತಾರೆ. ಇಂತಹ ಪ್ರಕರಣಗಳು ಕಳೆದ ಒಂದು ಶತಮಾನದಿಂದಲೂ ವೈದ್ಯರನ್ನು ಕಾಡುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಇದು ವಾಸ್ತವವಾಗಿ ಭ್ರೂಣ ಅಲ್ಲ, ಭ್ರೂಣದ ಒಂದು ತುಣುಕು ಅಥವಾ ಮಿನಿಯೇಚರ್ ಎನ್ನಬಹುದು. ಇದು ಮೆದುಳನ್ನು ಹೇಗೆ ಪ್ರವೇಶಿಸುತ್ತದೆ ? ಇದು ಕೌತುಕ ಸೃಷ್ಟಿಸುವ ವಿಚಾರ. ಟಿವಿ ವಾಹಿನಿಯ ಟಿಆರ್ಪಿ ಹೆಚ್ಚಿಸುವ ವಿಚಾರವೂ ಹೌದು.
ಇರಲಿ, ವೈದ್ಯಶಾಸ್ತ್ರದ ಪ್ರಕಾರ ಯಾಮಿನಿಯ ತಾಯಿ ಗಭರ್ಿಣಿಯಾಗಿದ್ದಾಗ ಅವಳಿ ಭ್ರೂಣ ಸೃಷ್ಟಿಯಾಗಿದೆ. ಒಂದು ಭ್ರೂಣ ಪೂರ್ಣಪ್ರಮಾಣದಲ್ಲಿ ಬೆಳೆದಿದ್ದು ಯಾಮಿನಿ ಜನಿಸಿದ್ದಾಳೆ. ಮತ್ತೊಂದು ಭ್ರೂಣ ಬೆಳವಣಿಗೆ ಕಾಣದೆ ಗರ್ಭದಲ್ಲಿದ್ದ ಯಾಮಿನಿಯ ದೇಹದಲ್ಲಿ ಸಮ್ಮಿಳಿತಗೊಂಡಿದೆ. ಈ ಸಂದರ್ಭದಲ್ಲಿ ಇದು ಯಾಮಿನಿಯ ಮೆದುಳನ್ನು ಪ್ರವೇಶಿಸಿದೆ. ಕೆಲವೊಮ್ಮೆ ಈ ಟೆರಾಟೊಮಾ ಮತ್ತೊಂದು ಶಿಶುವಿನ ದೇಹಕ್ಕೆ ಅಂಟಿಕೊಂಡೇ ಹೊರಬರುತ್ತದೆ. ಸಣ್ಣ ಗಾತ್ರದ ಟೆರಾಟೊಮಾಗಳು ದೇಹದೊಳಗೆ ಪ್ರವೇಶಿಸುತ್ತವೆ. ಈ ಗಡ್ಡೆಯೊಳಗೆ ಹಲ್ಲಿನ ಟಿಷ್ಯೂಗಳಿವೆ, ಅಲ್ಪ ಪ್ರಮಾಣದ ಕೂದಲು ಮತ್ತು ಮೂಳೆ ಇರುತ್ತದೆ.
ಇಂತಹ ಕೌತುಕಮಯ ಸುದ್ದಿಯನ್ನು ಬಿತ್ತರಿಸುವಾಗ ವಿದ್ಯುನ್ಮಾನ ಮಾಧ್ಯಮಗಳು ರೋಚಕತೆಗೆ ಶರಣಾಗದೆ, ಈ ವಿಸ್ಮಯದ ಹಿಂದಿನ ವೈಜ್ಞಾನಿಕ ನೆಲೆಯನ್ನು ವಿವರಿಸಿದರೆ ಬಹುಶಃ ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬಹುದು. ಇಲ್ಲವಾದಲ್ಲಿ ನಮ್ಮ ಟಿವಿ ಪಂಡಿತೋತ್ತಮರು ಇಂತಹ ಪ್ರಸಂಗ ಮಹಾಭಾರತ-ರಾಮಾಯಣದಲ್ಲೂ ನಡೆದಿದೆ ಎಂದು ಹೇಳುವ ಸಾಧ್ಯತೆಗಳೇ ಹೆಚ್ಚು.
 
 
 

‍ಲೇಖಕರು G

May 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಇದನ್ನು ನಾನೂ ನೋಡಿ ಬಹಳ ಹೊತ್ತು ಯೋಚಿಸಿದೆ. ಭ್ರೂಣದ ಹೊಟ್ಟೆ ಅಥವಾ ಎದೆಯೊಳಗೆ ತಾಯಿಯ ಗರ್ಭಚೀಲದ ಒಂದು ಭಾಗ ಸೇರಿಬಿಡುವುದೂ ಮತ್ತು ಆ ಭ್ರೂಣ ಬೆಳೆದು ಭೂಮಿಗೆ ಬಂದ ಅನೇಕ ವರ್ಷಗಳ ನಂತರ ಈ ತುಣುಕು ಪತ್ತೆಯಾಗುವುದು ಅಲ್ಲಲ್ಲಿ ನಡೆದಿದೆ ಮತ್ತು ಇದು ಸಾಧ್ಯವೂ ಹೌದು. ಆದರೆ ಅವಳಿ ಭ್ರೂಣವೊಂದರ ಇಡಿಯೋ ಅಥವಾ ಮುರುಕೋ ಇನ್ನೊಂದು ಭ್ರೂಣದ ಮೆದುಳಿಗೆ ಪ್ರವೇಶಿಸುವುದು ಜೀವಶಾಸ್ತ್ರದ/ವೈದ್ಯಶಾಸ್ತ್ರದ ಅಪರೂಪದ ಘಟನೆ. ಇದಕ್ಕೆ ರೋಚಕತೆಗಿಂತ ವಾಸ್ತವಿಕ ಭ್ರೂಣಚಲನದ ಅರಿವಿದ್ದವರ ಜೊತೆಗಿನ ವಿಚಾರಹಂಚಿಕೆ ಸಮರ್ಪಕವಾದದ್ದು. ನನ್ನಂತ ಕೆಲವರಾದರೂ ಕುತೂಹಲಿಗಳಿದ್ದಾರು. ನಾನೂ ಅಲ್ಲಲ್ಲಿ ತಡಕಾಡಿದೆ,ವಿವರಗಳೇನೂ ಸಿಕ್ಕಲಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: