ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮೆಕ್ಕಾ ದಾರಿ'ಯ ಹಿಂದಿನ ಕಥೆ-ವ್ಯಥೆ

ಇತ್ತೀಚಿಗೆ ಪ್ರಸನ್ನ ನಿರ್ದೇಶಿಸಿದ ‘ಮೆಕ್ಕಾ ದಾರಿ’ ನಾಟಕದ ವಿಮರ್ಶೆಯನ್ನು ಪ್ರಕಟಿಸಿದ್ದೆವು. ಈಗ ಆ ಮೆಕ್ಕಾ ದಾರಿಯ ಕಥೆಯ ಹಿಂದಿನ ಕಥೆಯನ್ನು ಓದಿ

‘ಗೂಬೆ ಮನೆ’ಯ ನೈಜಕಥೆ ; ‘ಮೆಕ್ಕಾ ದಾರಿ’ಯ ಹಿಂದಿನ ವ್ಯಥೆ.

ಶಶಿಕಾಂತ ಯಡಹಳ್ಳಿ

ಆ ‘ಗೂಬೆ ಮನೆ’ಯ ಒಡತಿಯ ಹೆಸರು ಹೆಲೆನ್ ಎಲೆಜೆಬೆತ್ ಮಾರ್ಟಿನ್ಸ್. ಹುಟ್ಟಿದ್ದು ದಕ್ಚಿಣ ಆಫ್ರಿಕಾದ ‘ನ್ಯೂ ಬೆಥೆಸ್ಡಾ’ ಎಂಬ ಪುಟ್ಟ ಹಳ್ಳಿಯಲ್ಲಿ 1897 ಡಿಸೆಂಬರ್ 23 ರಂದು. ಆ ಹಳ್ಳಿಗೆ 50 ಕಿ.ಮಿ ಸಮೀಪದ ಪಟ್ಟಣ ಗ್ರಾಫ್ ರೈನೆಟ್ನಲ್ಲಿ ಶಿಕ್ಷಕ ವೃತ್ತಿಯ ಡಿಪ್ಲೋಮಾ ಕಲಿತ ಹೆಲೆನ್ 1919 ರಲ್ಲಿ ಟ್ರಾನ್ಸ್ವಾಲ್ ನಲ್ಲಿ ಶಿಕ್ಷಕ ವೃತ್ತಿ ಆರಂಭಿಸುತ್ತಾಳೆ. ಅಲ್ಲಿ ಇನ್ನೊಬ್ಬನಿದ್ದ ಮೆಷ್ಟ್ರು. ಹೆಲೆನ್ಳನ್ನು ಪ್ರೀತಿಸ್ತೀನಿ ಅಂದಾ. ಆಕೇನೂ ಹೂಂ ಅಂದ್ಲು. ಯಾಕೆಂದ್ರೆ ಆತ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ. 1920ರಲ್ಲಿ ಮದುವೇನೂ ಆಯ್ತು. ಆತನ ಹೆಸರು ವಿಲ್ಲಿಯಂ ಜಾಹ್ನ್ಸ ಪಿಯನರ್.
ತದನಂತರ ದಂಪತಿಗಳು ಆ ಪ್ರಾಂತ್ಯದಲ್ಲಿ ಹಲವಾರು ನಾಟಕಗಳಲ್ಲಿ ಜೊತೆಯಾಗೇ ಅಭಿನಯಿಸಿದರು. ಈ ನಾಟಕದವರಿಗೆ ಹೆಂಗಸರ ಶೋಕಿ ಜಾಸ್ತಿ ಅನ್ನೋ ಆರೋಪ ಇದೆಯಲ್ಲಾ ಅದನ್ನ ಆತ ರುಜುವಾತುಮಾಡಿಬಿಟ್ಟ. ಪಿಯನರ್ ಹೆಂಗಸೊಬ್ಬಳ ಹಿಂದೆ ಬಿದ್ದ. ಹೆಲೆನ್ ಬದುಕು ಮೂರಾಬಟ್ಟೆ ಆಯ್ತು. ಆಕೆ ಬೇಕಾದಷ್ಟು ಸಲ ಗಂಡನ ಈ ಎಕ್ಸಟ್ರಾ ಶೋಕಿಯನ್ನು ವಿರೋಧಿಸಿ ಮನೆ ಬಿಟ್ಟು ಹೋಗಿದ್ದಳು. ಏನೇನೂ ಪ್ರಯೋಜನವಾಗಲಿಲ್ಲ. ಕೊನೆಗೂ ವಿವಾಹ ಎನ್ನೋ ಬಂಧನ ಮುರಿದುಬಿತ್ತು. ಇಬ್ಬರಿಗೂ ವಿಚ್ಚೇದನವಾಯ್ತು.

ಬೇಸತ್ತ ಹೆಲೆನ್ ತನ್ನ ಹಳ್ಳಿ ಬೆಥೆಸ್ಡಾಗೆ 1928 ರಲ್ಲಿ ವಾಪಸ್ ಬಂದಳು. 17 ವರ್ಷಗಳ ಕಾಲ ಹೆತ್ತವರ ಸೇವೆಯಲ್ಲೇ ಜೀವನ ಸವೆಸಿದಳು. 1945 ರಷ್ಟರಲ್ಲಿ ತಂದೆ ತಾಯಿ ಇಬ್ಬರೂ ಕಾಲವಶರಾದರು. ಮತ್ತೊಮ್ಮೆ ಹೆಲೆನ್ ಸಂಪೂರ್ಣವಾಗಿ ಅನಾಥಳಾದಳು. ಜೀವನ ಜರ್ಜರಿತವಾಯಿತು. ಮನೆಯಿಂದ ಹೊರಗೆ ಬರುವುದನ್ನೇ ನಿಲ್ಲಿಸಿದಳು. ಜಗತ್ತಿನ ಜೊತೆಗೆ ಸಂಪರ್ಕವನ್ನೇ ಕಳೆದುಕೊಂಡು ತಾನಾಯಿತು ತನ್ನ ಮನೆಯಾಯಿತು, ತನ್ನ ಮನೆ ಮುಂದಿನ ತೋಟವಾಯಿತು ಎಂದು ಇರತೊಡಗಿದಳು. ಬದುಕಿನ ಬಗ್ಗೆ ಆಸಕ್ತಿಯೇ ಹೊರಟುಹೋಗಿತ್ತು. ಊರ ಜನರ ಕಣ್ಣಲ್ಲಿ ಆಕೆ ನಿಗೂಢ, ವಿಲಕ್ಷಣ ಹೆಂಗಸಾದಳು. ಗೇಲಿಯ ವಸ್ತುವಾದಳು. ‘ಮಿಸ್ ಹೆಲೆನ್’ ಎಂದು ಸಿಕ್ಕಸಿಕ್ಕವರು ನಿಂದಿಸಿ ಅವಮಾನಿಸತೊಡಗಿದರು.
ಇಷ್ಟೆಲ್ಲಾ ತೊಂದರೆಗಳ ಜೊತೆಗೆ ಸಂದಿವಾತ ಬೇರೆ ಸೇರಿಕೊಂಡಿತು. ನರದೌರ್ಬಲ್ಯದಿಂದಾಗಿ ಕಾಲುಗಳೇ ದುರ್ಬಲವಾದವು. ಕಾಲ್ಬೆರಳುಗಳು ಚಿಕ್ಕದಾಗತೊಡಗಿದವು. ಮಕ್ಕಳು ಹಾಕುವಂತಹ ಚಿಕ್ಕ ಶೂಗಳನ್ನು ಹಾಕಿಕೊಳ್ಳಬೇಕಾಯಿತು. ಅದಕ್ಕೂ ಜನ ಹಾಸ್ಯಮಾಡತೊಡಗಿದರು. ಆಕೆಯ ಬದುಕೇ ದುಸ್ತರವಾಯಿತು. ಸಾವು ಮನೆಯ ಸುತ್ತ ಗಿರಿಕಿ ಹೊಡೆಯಲಾರಂಭಿಸಿತು.
ಆದರೆ ಅದೊಂದು ದಿನ ಹೆಲನ್ಗೆ ಗೂಬೆಯೊಂದು ಕಾಣಿಸಿತು. ಬೆಳಕಿನಲಿ ಕುರುಡಾಗಿ ಕೂತಿದ್ದು ಕತ್ತಲಲ್ಲಿ ಬೆಳಕು ಕಂಡಂತೆ ಜೀವನೋತ್ಸಾಹ ಪಡೆದ ಗೂಬೆ ಆಕೆಯಲ್ಲಿ ಪ್ರೇರಣೆ ನೀಡಿದಂತಾಯಿತು. ತನ್ನ ಅಂಧಕಾರದ ಬದುಕಿನಲಿ ಬೆಳಕಿನ ಕಿರಣವೊಂದು ಮೂಡಿದಂತಾಯಿತು. ಯಾರ ಹಂಗಿಲ್ಲದೇ ಸ್ವತಂತ್ರವಾಗಿ ಬದುಕಬೇಕೆಂದು ನಿರ್ಧರಿಸಿದಳು. ಸಾವಿಗೆ ಬೆನ್ನು ಹಾಕಿ ಬದುಕಲು ಶಪಥ ಮಾಡಿದಳು. ಅಂಗಳದಲ್ಲೇ ಕಾಯುತ್ತಿದ್ದ ಸಾವು ಮರುಮಾತಾಡದೇ ಜಾಗ ಖಾಲಿಮಾಡಿತು.

ಆದರೆ… ಅಸಹಾಯಕ ಹಿಂದೆ ಮುಂದೆ ದಿಕ್ಕಿಲ್ಲದ ಅನಾಥ ಹೆಂಗಸು ಊರವರ ವಿರೋಧ ಕಟ್ಟಿಕೊಂಡು ಮಾಡುವುದಾದರೂ ಏನು? ಬದುಕಬೇಕೆಂದರೆ ಏನನ್ನಾದರೂ ಮಾಡಲೇ ಬೇಕಿತ್ತು. ಕತ್ತಲೆ ಕಳೆದು ಬೆಳಕು ಹರಿಯಲೇಬೇಕಿತ್ತು. ಆಗ ಹೆಲೆನ್ಳ ಒಳಗಿಂದ ಅಮೂರ್ತ ಪರಿಕಲ್ಪನೆಯೊಂದು ಹೊರಹೊಮ್ಮಿತು. ಚಿತ್ರ ವಿಚಿತ್ರ ಚಿತ್ತಾರಗಳು ಮನದಲ್ಲಿ ಮೂಡತೊಡಗಿದವು. ಅಂತರಂಗದಲ್ಲಿ ಹೆಪ್ಪುಗಟ್ಟಿದ್ದ ಕ್ರಿಯಾಶೀಲತೆ ಹೊರಬರಲು ಹಾತೊರೆಯತೊಡಗಿತು. ಪ್ರತಿಮೆಗಳನ್ನು ಮಾಡುವ ತುಡಿತ ತಕತಕ ಕುಣಿಯತೊಡಗಿತು. ಆಕೆ ಸಮಯ ವ್ಯರ್ಥಮಾಡಲಿಲ್ಲ. ಮನೆಯ ಮುಂದಿರುವ ಒಂಟೆ ಕಟ್ಟುವ (ಕ್ಯಾಮೆಲ್ ಯಾರ್ಡ) ಜಾಗವನ್ನು ತನ್ನ ಕೆಲಸಕ್ಕೆ ಆಯ್ಕೆ ಮಾಡಿಕೊಂಡಳು. ಕುರಿಗಾಹಿ ಹುಡುಗ ಕೂಸ್ ಮಾಲ್ಗಾಸ್ನನ್ನು ತನ್ನ ಸಹಾಯಕ್ಕೆ ನಿಯಮಿಸಿಕೊಂಡಳು. ತನ್ನ ಕೆಲಸಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಗಳನ್ನು ತರಿಸಿಕೊಂಡಳು. ಹಾಗೆ ಮೊಟ್ಟಮೊದಲು ಆಕೆ ತಯಾರಿಸಿದ ಶಿಲ್ಪ ಯಾವುದು ಗೊತ್ತಾ? ಅದು ಗೂಬೆ !
ಎಲ್ಲರಿಗೂ ಅಪಶಕುನದ ಹಕ್ಕಿಯಾದ ಗೂಬೆ ಹೆಲೆನ್ಳಿಗೆ ಮಾತ್ರ ಕತ್ತಲಲ್ಲಿ ಬೆಳಕು ಕಾಣುವ ಶುಭ ಶಕುನದ ಪಕ್ಷಿಯಾಗಿತ್ತು. ಅವಳು ಮುಂದೆ ಸೃಷ್ಟಿಸಿದ ಪ್ರತಿಮೆಗಳಲ್ಲಿ ಗೂಬೆಗಳದೇ ದೊಡ್ಡ ಸಂಖ್ಯೆ. ಅಷ್ಟೊಂದು ಪ್ರೀತಿ ಅವಳಿಗೆ ಗೂಬೆಗಳ ಮೇಲೆ. ಗೂಬೆಗಳನ್ನು ಅಂತರ್ ದೃಷ್ಟಿ ಇರುವ ಸ್ವತಂತ್ರ ಪಕ್ಷಿಗಳೆಂದೇ ಹೆಲೆನ್ ನಂಬಿದ್ದಳು. ಆಕೆಯ ನಂಬಿಕೆ ಕೈಬಿಡಲಿಲ್ಲ. ಮೊದಲ ಗೂಬೆಯನ್ನು ಸೃಷ್ಟಿಸಿದ ನಂತರ ಆಕೆ ಮಾನಸಿಕವಾಗಿ ದೃಢವಾಗುತ್ತಾ ಹೋದಳು. ತನ್ನ ಶಿಲ್ಪಕಲಾ ಸಂಗ್ರಹಾರಕ್ಕೆ ‘ಗೂಬೆ ಮನೆ’ (ಓವಲ್ ಹೌಸ್) ಎಂದೇ ಹೆಸರಿಟ್ಟಿದ್ದಳು.
ಸಿಮೆಂಟ್ ಗಾರೆ, ಗಾಜಿನ ಪಿಂಗಾಣಿ, ಖಾಲಿ ಬಾಟೆಲ್ಗಳು…..ಜಲ್ಲೀ ಕಲ್ಲು… ವ್ಯರ್ಥ ಕಬ್ಬಿಣದ ತುಂಡುಗಳು…. ಹೀಗೆ… ಸಿಕ್ಕ ವಸ್ತುಗಳೆಲ್ಲಾ ಕಲಾಕೃತಿಯ ರೂಪ ಪಡೆಯತೊಡಗಿದವು. ಬರುಬರುತ್ತಾ ಸಹಾಯಕ ಮಾಲ್ಗಾಸ್ ಆಕೆಯ ಆತ್ಮೀಯ ಸ್ನೇಹಿತನಾದ. ಒಂಟಿ ಜೀವಕ್ಕೊಂದು ಜೊತೆಗಾರನಾದ. ಅವನಿಗೂ ಮತ್ತು ಹೆಲೆನ್ಳಿಗೂ ಅಕ್ರಮ ಸಂಬಂಧದ ಕಥೆ ಕಟ್ಟಿದ ಜನತೆ ಕುಹಕವಾಡತೊಡಗಿದರು. ಅದೆಲ್ಲಾ ಕಿವಿಗೆ ಬಿದ್ದರೂ ಹೆಲೆನ್ ನಿರ್ಲಕ್ಷಿಸಿದಳು. ಆಕೆಯ ಬದುಕಿನ ಕೊನೆಯ 12 ವರ್ಷಗಳ ಕಾಲ ಆತ ಆಕೆಗೆ ಬೆನ್ನೆಲುವಾಗಿ ನಿಂತ. ಸತ್ತೇ ಹೋಗಿದ್ದ ಆನಂದವನ್ನು ಆತನ ಜೊತೆ ಹಾಗೂ ತನ್ನ ಕಲಾಕೃತಿಗಳ ಜೊತೆ ಹಂಚಿಕೊಂಡ ಹೆಲೆನ್ ತನ್ನ ಕತ್ತಲೆಯ ಬದುಕಲ್ಲಿ ಬೆಳಕನ್ನು ಕಾಣತೊಡಗಿದಳು. ಬೆಳಕು ಎನ್ನುವುದು ಅವಳಿಗೆ ಅದೆಷ್ಟು ಪ್ರೀಯವಾಗಿತ್ತು ಎಂದರೆ ತನ್ನೆಲ್ಲಾ ಶಿಲ್ಪಕಲಾಕೃತಿಗಳನ್ನು ಆಕೆ ಬೆಳಕು ಮೂಡಿಬರುವ ಪೂರ್ವ ದಿಕ್ಕಿನತ್ತಲೇ ಮುಖ ಮಾಡಿ ಪ್ರತಿಷ್ಠಾಪಿಸಿದಳು.
ಒಂದಾ ಎರಡಾ… ಮುನ್ನೂರಕ್ಕೂ ಹೆಚ್ಚು ಕಲಾಕೃತಿಗಳು ಮೈತಳೆದವು. ಯಾವುದನ್ನೂ ಆಕೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆಂದು ತಯಾರಿಸಲಿಲ್ಲ. ಕೇವಲ ತನ್ನ ಖುಷಿಗೋಸ್ಕರ ತಯಾರಿಸಿದಳು. ಅವೆಲ್ಲವೂ ಅವಳ ಪ್ರೀಯವಾದ ‘ಕೆಮೆಲ್ ಯಾರ್ಡ’ನಲ್ಲಿ ಪ್ರದರ್ಶನಗೊಂಡವು. ಗೂಬೆಗಳು, ಒಂಟೆಗಳು, ನವಿಲುಗಳು, ಬೆಕ್ಕು..ಹೀಗೆ ಅನೇಕ ಪ್ರಾಣಿ ಪಕ್ಷಿ ಮನುಷ್ಯರು ಹೆಲೆನ್ಳ ಸ್ಪರ್ಷದಲ್ಲಿ ವಿಶಿಷ್ಟ ರೀತಿಯ ಆಕರ್ಷನೀಯ ಪ್ರತಿಮೆಗಳಾದವು. ಬೈಬಲ್ ಮತ್ತು ಪೌವರ್ಾತ್ಯ ತತ್ವಶಾಸ್ತ್ರಗಳನ್ನಾಧರಿಸಿದ ಪ್ರತಿಮೆಗಳೂ ರೂಪಗೊಂಡವು. 12 ವರ್ಷಗಳಲ್ಲಿ ನೋಡುಗರಿಗೆ ದಿಗ್ಬ್ರಮೆ ಹುಟ್ಟಿಸುವಷ್ಟು ವಿಚಿತ್ರ, ವಿಶಿಷ್ಟ ಶಿಲ್ಪಕಲಾಕೃತಿಗಳ ಒಂದು ಅಸಾಧಾರಣ ಲೋಕವನ್ನೇ ಹೆಲೆನ್ ತನ್ನ ಸುತ್ತಮುತ್ತ ಸೃಷ್ಟಿಸಿಕೊಂಡಳು.

ಸಾವಕಾಶವಾಗಿ ಹೆಲೆನ್ಳ ಶಿಲ್ಪಕಲಾಕೃತಿಗಳ ಸುದ್ದಿ ಸುತ್ತಮುತ್ತ ಹರಡಿ ಪಟ್ಟಣ ನಗರಗಳಿಗೂ ಮುಟ್ಟಿತು. ಅನೇಕರು ಕುತೂಹಲದಿಂದ ನೋಡಲು ಬಂದರು. ಹಲವಾರು ಕಲಾವಿದರು ಅಧ್ಯಯನ ಮಾಡಲು ಬಂದರು. ಬಂದವರು ಇನ್ನಷ್ಟು ಜನರಿಗೆ ಹೇಳಿ ಕಳುಹಿಸಿದರು. ಆಕೆಯ ಕಲಾಕೃತಿಗಳೇ ಅಷ್ಟೊಂದು ವಿಶಿಷ್ಟವಾಗಿದ್ದವು. ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿದ್ದವು. ಇಲ್ಲಿವರೆಗೂ ಈ ರೀತಿಯ ಪ್ರತಿಮೆಗಳನ್ನೂ ಎಲ್ಲೂ ಯಾರೂ ಮಾಡಿರಲಿಲ್ಲ. ಇನ್ನೇನು ಹೆಲೆನ್ ಪ್ರಸಿದ್ದಿ ಗಳಿಸಿ ಸಾಧನೆಯ ಗುರಿ ಮುಟ್ಟಬೇಕಿತ್ತು. ಆದರೆ….
ಮತ್ತೊಮ್ಮೆ ಹೆಲೆನ್ ಬದುಕಿನಲ್ಲಿ ಬರಸಿಡಿಲು ಬಡಿಯಿತು. ಇಷ್ಟೆಲ್ಲಾ ಅಪರೂಪದ ಕಲಾಕೃತಿಗಳನ್ನು ಸೃಷ್ಟಿಸಿದಾಕೆಯ ದೃಷ್ಟಿಯೇ ಕೈಕೊಟ್ಟಿತು. ಬರುಬರುತ್ತಾ ಮಂದವಾಗತೊಡಗಿತು. ಬದುಕಿನಾದ್ಯಂತ ಯಾವ ಬೆಳಕಿಗಾಗಿ ಆ ಹೆಣ್ಣು ಜೀವ ಹಂಬಲಿಸಿತ್ತೋ ಈಗ ಆ ಬೆಳಕೇ ಖಾಯಂ ಆಗಿ ಮಾಯವಾಗಿ ಸುತ್ತಲೂ ಬರೀ ಕತ್ತಲೆ ತುಂಬಿಕೊಂಡಿತು. ಬದುಕೆ ದುಸ್ತರವಾಯಿತು. ಬದುಕನ್ನು ಬೆಳಕನ್ನು ಎಲ್ಲಕ್ಕಿಂತ ಹೆಚ್ಚೆಚ್ಚು ಪ್ರೀತಿಸಿದ ಹೆಲೆನ್ ದೃಷ್ಟಿಹೀನತೆಯಿಂದಾಗಿ ಗಾಡಾಂಧಕಾರದಲ್ಲಿ ಮುಳುಗಿದಳು. ಬದುಕಿನ ಆಸೆಯನ್ನೇ ಕಳೆದುಕೊಂಡಳು.
ಅದೊಂದು ದುದರ್ಿನ ತನ್ನ ಜೀವನದ ಬಹುದೊಡ್ಡ ಅಂತಿಮ ನಿಧರ್ಾರವನ್ನು ಮಾಡಿಬಿಟ್ಟಳು. ಬೆಳಕೆಂಬುದೇ ಅವಳ ಬದುಕು ಹಾಗೂ ಕಲಾಕೃತಿಗಳ ಮೂಲ ದ್ರವ್ಯವಾಗಿತ್ತು. ಬೆಳಕಿಲ್ಲದ ಮೇಲೆ ಬದುಕೇಕೆ ಎಂದುಕೊಂಡು ಶಾಶ್ವತವಾಗಿ ಕತ್ತಲಲ್ಲಿ ಕರಗಿಹೋಗುವುದೆಂದು ಆಲೋಚಿಸಿದಳು. ಸಾವು ಹುಡುಕಿ ಬಂದಾಗ ದಿಕ್ಕರಿಸಿ ಬದುಕಿದ ಹೆಲೆನ್ ಈಗ ಸಾವನ್ನು ಖುದ್ದಾಗಿ ಆಹ್ವಾನಿಸುವ ಸಂಕಲ್ಪ ಮಾಡಿದಳು.
ಕೊನೆಗೂ ಬರಬಾರದ ಆ ದುರಂತದ ದಿನ ಬಂದಿತು. ಅಂದು 1976 ಆಗಸ್ಟ್ 5, ಕಾಸ್ಟಿಕ್ ಸೋಡಾದಲ್ಲಿ ಆಲಿವ್ ಎಣ್ಣೆಯನ್ನು ಕಲೆಸಿ ಅದರಲ್ಲಿ ಗಾಜಿನ ಪುಡಿಯನ್ನು ಮಿಶ್ರಗೊಳಿಸಿ, ಗಟ್ಟಿ ಮನಸ್ಸು ಮಾಡಿ ಬಟ್ಟಲು ಬಾಯಿಗಿಟ್ಟು ಹೊಟ್ಟೆಗೆ ಹಾಲಾಹಲ ಸುರಿವಿಕೊಂಡು ಬಿಟ್ಟಳು.
ಆದರೆ ಅಲ್ಲೂ ಸಾವು ಮೋಸಮಾಡಿತು. ಕರೆದರೂ ಹತ್ತಿರ ಬರದೇ ಸತಾಯಿಸಿತು. ಗ್ರಾಫ್ ರೈನೆಟ್ ಪಟ್ಟಣದ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ನಿರಂತರ ಕಣ್ಣು ಮುಚ್ಚಾಲೆ ಆಡಿದ ಸಾವು ಕೊನೆಗೂ ಆಗಸ್ಟ್ 8 ರಂದು ಹೆಲೆನ್ಳನ್ನು ಅಪ್ಪಿಕೊಂಡಿತು. ಜೊತೆಗೆ ಕರೆದೊಯ್ಯಲು ಒಪ್ಪಿಕೊಂಡಿತು. ಸದಾ ಬೆಳಕಿಗಾಗಿ ಹಂಬಲಿಸಿದ ಹೆಲೆನ್ ಕಾಲನ ಕಗ್ಗತ್ತಲೆಗೆ ಸೇರಿಹೋದಳು. ನ್ಯೂ ಬೆಥೆಸ್ಡಾದ ಮಣ್ಣಲ್ಲಿ ಮಣ್ಣಾದಳು. ಹೋಗುವ ಮೊದಲು ಅಪೂರ್ವ ಕಲಾಕೃತಿಗಳನ್ನು ಲೋಕಕ್ಕೆ ಅಪರ್ಿಸಿ ಹೋದಳು. ಆ ಮೂಲಕ ತನ್ನ ನೆನಪುಗಳನ್ನು ಇತಿಹಾಸದುದ್ದಕ್ಕೂ ಬಿಟ್ಟುಹೋದಳು.
ಸಾಯುವ ಮುನ್ನ ತನ್ನದೊಂದು ಕೊನೆಯಾಸೆಯನ್ನು ಕೂಸ್ ಮಾಲ್ಗಾಸ್ಗೆ ಹೇಳಿದ್ದಳು. ತನ್ನೆಲ್ಲಾ ಕಲಾಕೃತಿಗಳ ಮ್ಯೂಸಿಯಂ ಆಗಬೇಕೆಂದು ಆಶಿಸಿದ್ದಳು. ಆದರೆ ಆಕೆಯ ಕನಸು ನನಸಾಗಿದ್ದು ಹೆಲೆನ್ ನಿರ್ಗಮನದ 15 ವರ್ಷಗಳ ನಂತರ. 1991 ರಲ್ಲಿ ದಕ್ಷಿಣ ಆಫ್ರಿಕಾದ ಸರಕಾರ ‘ಗೂಬೆ ಮನೆ’ಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿತು. ಕೆಮೆಲ್ ಯಾರ್ಡನ್ನು ಕಲಾವಸ್ತು ಸಂಗ್ರಹಾಲಯವನ್ನಾಗಿ ಸರಕಾರ ಅಭಿವೃದ್ದಿ ಪಡಿಸಿತು. ಓವಲ್ ಹೌಸ್ ಪೌಂಡೇಷನ್ ಅದರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿತು. ಹೆಲೆನ್ಳ ಕೊನೆಗಾಲದ ಜೊತೆಗಾರ ಕೂಸ್ ಮಾಲ್ಗಾಸ್ ತನ್ನ ಕೊನೆಉಸಿರು ಇರುವವರೆಗೂ ‘ಗೂಬೆ ಮನೆ’ಯ ನಿರ್ವಹಣೆಯಲ್ಲಿ ಬದುಕು ಸವೆಸಿದ.
ಯಾವ ಊರಿನ ಜನ ಹೆಲೆನ್ಳನ್ನು ಅವಮಾನಿಸಿ ತುಚ್ಚೀಕರಿಸಿದ್ದರೋ, ಯಾವ ನೆರಹೊರೆಯವರು ಅದ್ಭುತ ಕಲಾವಿದೆಗೆ ಕೊಡಬಾರದ ಹಿಂಸೆ ಕೊಟ್ಟಿದ್ದರೋ… ಈಗ ಅದೇ ಊರ ಜನ ಆಕೆಯನ್ನು ಆಕೆಯ ಸಾವಿನ ನಂತರ ಗೌರವಿಸತೊಡಗಿದರು. ಹೆಲೆನ್ ಪ್ರತಿಭಾನ್ವಿತ ಕಲಾವಿದೆ” ಎಂದು ಹೆಮ್ಮೆಯಿಂದ ಹೇಳತೊಡಗಿದರು. ಹೀಗಳೆದವರಿಗೆ ಹೀಗಳಿಯದೇ ತನ್ನ ಪ್ರತಿಭೆಯಿಂದಲೇ ತಾನು ಏನು ಎನ್ನುವುದನ್ನು ಸಾಬೀತು ಪಡಿಸಿದ ಹೆಲೆನ್ ಎಲ್ಲರ ಕಣ್ಣಲ್ಲಿ ಬಲು ದೊಡ್ಡವಳಾದಳು. ಆಡಿಕೊಂಡ ಊರಜನ ತೀರ ಸಣ್ಣವರಾದರು.
ಇದೆಲ್ಲಾ ಈಗ ಇತಿಹಾಸ. ಬರೀ ಮೂಸಿಯಂ ಆಗಿದ್ದರೆ ಹೆಲೆನ್ ಎಲೆಜೆಬೆತ್ ದಕ್ಚಿಣ ಆಫ್ರಿಕಾದ ಹೊರಗೆ ಸುದ್ದಿ ಆಗ್ತಿರಲಿಲ್ಲವೇನೋ. ಸತ್ತ ಮೇಲೂ ಆಕೆಯ ಬದುಕು ಜಗತ್ತಿಗೆ ತಿಳಿವಂತಾಗಿದ್ದು ‘ಎಲ್ಸಾ’ ಎಂಬ ಮಹಿಳೆಯಿಂದ. ಹೆಲೆನ್ ಬದುಕಿದ್ದಾಗ ತನ್ನ ಅಧ್ಯಯನಕ್ಕೆಂದು ಓವಲ್ ಹೌಸ್ಗೆ ಬೇಟಿ ಕೊಟ್ಟ ಎಲ್ಸಾಳು ಹೆಲೆನ್ಳ ಪೂವರ್ಾಪರಗಳೆಲ್ಲವನ್ನು ತಿಳಿದುಕೊಂಡಳು. ಮುಂದೊಮ್ಮೆ ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಅಥೋಲ್ ಫುಗಾರ್ಡರನ್ನು ‘ಎಲ್ಸಾ’ ಬೇಟಿಮಾಡಿದ್ದಾಗ ‘ಗೂಬೆ ಮನೆ’ಯ ವೃತ್ತಾಂತದ ಜೊತೆಗೆ ಹೆಲೆನ್ಳ ದುರಂತಗಾತೆಯನ್ನೂ ಹೇಳಿದಳು. ಎಲ್ಲಾ ಕೇಳಿದ ಅಥೋಲ್ ಹೋಗಿ ಕುಳಿತಿದ್ದು ಹೆಲೆನ್ ಕುರಿತು ನಾಟಕ ಬರಿಯೋಕೆ.
ಆ ನಾಟಕವೇ ವೇ ಟು ಮೆಕ್ಕಾ. ಹೆಲೆನ್ ಜೊತೆ ಎಲ್ಸಾಳನ್ನೂ ಪಾತ್ರವಾಗಿಸಿ, ಇಬ್ಬರನ್ನೂ ಮುಖಾಮುಖಿಯಾಗಿಸಿ ನಾಟಕವನ್ನು ಹೆಣೆದು ಹೆಲೆನ್ಳ ತಲ್ಲಣಗಳನ್ನು ಬಿಚ್ಚಿಟ್ಟ ಅಥೋಲ್ ಎರಡು ಪ್ರಮುಖ ಕಾಲ್ಪನಿಕ ಅಂಶಗಳನ್ನು ನಾಟಕದಲ್ಲಿ ಸೇರಿಸಿಬಿಟ್ಟ. ಮೊದಲನೆಯದಾಗಿ ಚರ್ಚ ಸಮಿತಿಯ ಪಾದ್ರಿಯ ಪಾತ್ರ ಹುಟ್ಟು ಹಾಕಿ ಹೆಲೆನ್ಳ ಮನೆ ಕಬಳಿಸಲು ಆತ ಆಕೆಯನ್ನು ಜನರ ಕಣ್ನಲ್ಲಿ ಹುಚ್ಚಿಯನ್ನಾಗಿಸಿದ ಹಾಗೂ ವೃದ್ದಾಶ್ರಮ ಸೇರಿಸಲು ಒತ್ತಾಯಿಸಿದ ಎಂಬುದು. ಎರಡನೆಯದಾಗಿ ಹೆಲೆನ್ಳ ‘ಕ್ಯಾಮೆಲ್ ಯಾರ್ಡ’ನಲ್ಲಿ ಒಂಟೆಯ ಕಲಾಕೃತಿಗಳಿದ್ದವಲ್ಲಾ ಅವುಗಳನ್ನು ಅರಬಸ್ತಾನದ ಒಂಟೆಗಳಿಗೆ ಗಂಟುಹಾಕಿ ಅಲ್ಲಿಂದ ಇಸ್ಲಾಮಿನ ಮೆಕ್ಕಾದವರೆಗೂ ತನ್ನ ಊಹೆಯನ್ನು ವಿಸ್ತರಿಸಿ ಹೆಲೆನ್ಳಿಗೆ ಮೆಕ್ಕಾದ ದಾರಿ ತೋರಿದ. ಆಕೆಯ ಬದುಕಲ್ಲಿ ಮೆಕ್ಕಾವನ್ನು ಬೆಳಕಿನ ಸಂಕೇತವಾಗಿಸಿದ. ಹೀಗೆ ಧಾಮರ್ಿಕ ಸಂಘರ್ಷ ಮತ್ತು ಸೌಹಾರ್ದತೆಗಳನ್ನು ಹೆಲೆನ್ಳ ಮೇಲೆ ಹೇರಿ ‘ವೇ ಟು ಮೆಕ್ಕಾ’ ನಾಟಕ ಸಿದ್ದವಾಯಿತು.
ದಕ್ಷಿಣ ಆಫ್ರಿಕಾ ಮಾತ್ರವಲ್ಲ ಇಂಗ್ಲೆಂಡಿನ ಪ್ರತಿಷ್ಟಿತ ಬ್ರಾಡ್ ವೇ ಥೇಯಟರ್, ಪ್ಲೋರಿಡಾದ ರೆಪೆರ್ಟರಿ ಥೀಯಟರ್… ಹೀಗೆ ಹಲವಾರು ದೇಶಗಳ ಪ್ರತಿಷ್ಠಿತ ರಂಗಮಂದಿರಗಳಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ಈಗ ‘ಪ್ರಸನ್ನ’ರವರು ಆ ನಾಟಕವನ್ನು ‘ಮೆಕ್ಕಾ ದಾರಿ’ ಹೆಸರಲ್ಲಿ ಕನ್ನಡಕ್ಕೆ ರೂಪಾಂತರಿಸಿ ನಿದರ್ೆಶಿಸಿದ್ದಾರೆ. ಎಲ್ಲಿಯ ದಕ್ಷಿಣ ಆಫ್ರಿಕಾದ ಕುಗ್ರಾಮ ಎಲ್ಲಿಯ ಕನರ್ಾಟಕ ಎತ್ತನಿಂದೆತ್ತ ಸಂಬಂಧ. ಆದರೆ ರಂಗಭೂಮಿಯಲ್ಲಿ ಎಲ್ಲವೂ ಸಾಧ್ಯ. ಹೀಗಾಗಿ ಹೆಲೆನ್ ಮೆಕ್ಕಾದ ದಾರಿಯಲ್ಲಿ ಮೂಡಿ ಬಂದಿದ್ದಾಳೆ. ಪ್ರಸನ್ನರವರು ಈ ನಾಟಕವನ್ನು ಮನಮಿಡಿಯುವಂತೆ ಕಟ್ಟಿಕೊಟ್ಟಿದ್ದಾರೆ. ಹೆಲೆನ್ ತನ್ನ ಕಲಾಕೃತಿಗಳ ಮೂಲಕ ಪ್ರಸಿದ್ದಳಾಗಿರುವಂತೆಯೇ ನಾಟಕದ ಮೂಲಕ ವಿಶ್ವವ್ಯಾಪಿಯಾಗಿ ಅಮರಳಾಗಿದ್ದಾಳೆ.

‍ಲೇಖಕರು G

14 September, 2013

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Prabhakar Nimbargi

    Reminds me of a personal feeling. In the midnight on day, I heard the hooting of an owl behind the valley of my single room of Shalmala Hostel, Karnatak Univ. Belonging to an othrodox family, I was frightened a bit. Next day nothing happened. As the days passed on I became addicted to the owl’s hooting, I couldn’t sleep until I heard it. When I didn’t hear its hooting for several days, I really worried about its welfare. I was too young to understand the meaning of the feeling. If one is unholy, it’s man and none else in nature.

  2. shobhavenkatesh

    kathe hinde vytheyannu chennagi teredittideeri shashikanth.chennagide

  3. g.n.nagaraj

    ಗೂಬೆ ಮನೆಯ ಹೆಲೆನಳ ಕಥೆಯನ್ನು ಹೇಳಿ ಒಂದು ಹೊಸ ಜೀವನ ಗಾಥೆ ತಿಳಿಸಿದ್ದೀರಿ ವಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading