ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂರು ಪ್ರತ್ಯೇಕ ಪತ್ರಗಳು . .

ಪತ್ರ 1 :

ಸಂಜೆ ವಾಕಿಂಗ್ ಮುಗಿಸಿಕೊಂಡು ಬಂದ ಶ್ರೀಕಂಠಪ್ಪ, ಪ್ರತಿದಿನದ ಅಭ್ಯಾಸದಂತೆ  ಟಿ.ವಿ. ಸ್ವಿಚ್‍ಆನ್ ಮಾಡಲು ಸ್ಟ್ಯಾಂಡ್‍ನಲ್ಲಿದ್ದ  ರಿಮೋಟ್ ತೆಗೆದುಕೊಳ್ಳಲು ಹೋಗದಿದ್ದರೆ ಈ ಪತ್ರಕ್ಕೆ ಭವಿಷ್ಯವೇ ಇರುತ್ತಿರಲಿಲ್ಲ.
*              *            *
ಪ್ರೀತಿಯ ಅಪ್ಪ-ಅಮ್ಮರಿಗೆ ,
ನಾನು ಇಂಥದ್ದೊಂದು ಪತ್ರ ಬರೆಯಲು ಕಾರಣ ನೀವಿಬ್ಬರಾಗಿಲ್ಲದಿದ್ದರೆ ನಾನು ಇದನ್ನು ಬರೆಯಬೇಕಾದ ಪ್ರಮೇಯವೇ ಬರುತ್ತಿರಲಿಲ್ಲವೇನೋ.  ಆದರೇನು ಮಾಡಲಿ ? ನಿಮಗೆ ನಿಮ್ಮ ಹಠವೇ ಮುಖ್ಯವಾಯಿತು.  ಮಾತು ಮಾತಿಗೆ ‘ಒಬ್ಬನೇ ಮಗ ಅಂತ  ನೀಡಿದ ಸಲುಗೆ, ಸ್ವಾತಂತ್ರ್ಯ ಹೆಚ್ಚಾಯಿತು ನಿನಗೆ ಅಂದಿರಿ. ನನ್ನ ಕೆ.ಜಿ. ಕ್ಲಾಸುಗಳಿಂದ ಹಿಡಿದು ಮೊನ್ನೆ ಮೊನ್ನೆ ಪಿ.ಹೆಚ್.ಡಿ. ಕಾನ್‍ವಕೇಶನ್ ತೆಗೆದುಕೊಳ್ಳುವರೆಗಿನ ಎಲ್ಲಾ ಹಂತಗಳಲ್ಲೂ ನನಗೆ ಸ್ವಾತಂತ್ರ್ಯ ನೀಡಿದವರು  ನೀವು.  ಮತ್ತು ನಾನು ಅಷ್ಟೇ ಜವಾಬ್ದಾರಿಯಿಂದಿದ್ದೆ.  ನಿಮ್ಮ ಈ  ‘ಪೇರೆಂಟಿಂಗ್ ಪ್ಯಾಟ್ರನ್’ ಬಗ್ಗೆ ನನಗೆ ತುಂಬಾ ಖುಷಿ ಇದೆ.

ಆದರೆ ಕಳೆದವಾರ ನಡೆದ ಆ ಘಟನೆಯಿಂದ ನಾನು ತುಂಬಾ ನೊಂದಿದ್ದೇನೆ.  ರೋಹಿಣಿಯನ್ನು ನಾನು ಕಳೆದ ಐದು ವರ್ಷಗಳಿಂದ ಬಲ್ಲೆ.  ನನ್ನಷ್ಟೇ ನಿಮಗೂ ಅವಳ ಬಗ್ಗೆ ಗೊತ್ತು. ಅವಳ ಸಾಮಾಜಿಕ ಕಳಕಳಿಯ ಬಗ್ಗೆ, ಅವಳು ಕೆಲಸಮಾಡುವ NGO ನ ಬಗ್ಗೆ, ಅವಳಲ್ಲಿರುವ  ವೈಚಾರಿಕ ನಿಲುವುಗಳ ಬಗ್ಗೆ, ಬಾಲ್ಯದಿಂದಲೂ ಅನಾಥೆಯಾಗಿ ಬೆಳೆದ  ಆಕೆಯಲ್ಲಿರುವ ಆತ್ಮಸ್ಥೈರ್ಯ, ಜೀವನೋತ್ಸಾಹದ ಬಗ್ಗೆ ನೀವೇ ನನ್ನ ಬಳಿ ಎಷ್ಟೋ ಸಲ ಅವಳನ್ನು ಕೊಂಡಾಡಿದ್ದೀರಿ. “ಎಂಥ ಒಳ್ಳೆಯ ಮನಸ್ಸು” ಅವಳದ್ದು ಎಂದು ಹೇಳಿದ ನೀವೇ  ‘ಆ ಒಳ್ಳೆಯ ಮನಸ್ಸು’ ನಿಮ್ಮ ಮನೆಗೆ ಬರುವುದು ಬೇಡ ಅಂದಿದ್ದೇಕೆ? ನನ್ನದೋ ಕಂಪನಿಯ ಷೇರುಗಳಲ್ಲಿ ಹಣ ಹೂಡಿ  ಹಣ ಮಾಡುವ  ಮಂದಿಗೆ ಸಮಯೋಚಿತ ಸಲಹೆ ಕೊಡುವ ಕೆಲಸ. ಇದರಿಂದ ನನ್ನ ಸಂಪಾದನೆ ಚೆನ್ನಾಗಿಯೇ ಆಗುತಿದೆ ಬಿಡಿ. ಆದರೆ ಅವಳದ್ದು ಹಾಗಲ್ಲ ನೂರಾರು ಜನರ ಕಣ್ಣಲ್ಲಿ ಜೀವೋತ್ಸಾಹ ಮೂಡಿಸುವ, ಭರವಸೆಯ ಬೆಳಕು ತುಂಬುವ ಸೇವಾರ್ಥ ಸಾರ್ಥಕದ ಕೆಲಸ.  ನಾವಿಬ್ಬರೂ ಪ್ರೀತಿಸಿದ್ದರಲ್ಲಿ ಅದೇನು ತಪ್ಪಿದೆ? ಅವಳೊಬ್ಬಳು ‘ಕನ್‍ವರ್ಟೆಡ್ ಕ್ರಿಶ್ಚಿಯನ್’ ಎಂಬುದೇ? ಒಂದು ಕಡೆಯಿರದೆ ಊರಿಂದೂರಿಗೆ ಸುತ್ತುತ್ತಾಳೆ ಎಂಬುದೇ? ಹಗಲು ರಾತ್ರಿಯೆನ್ನದೆ ಯಾರ್ಯೊರೊಂದಿಗೋ ಎಲ್ಲೆಲ್ಲೋ ಇರಬೇಕಾದ ಪರಿಸ್ಥಿತಿ ಅವಳದ್ದು ಎಂದೇ? ಸಂಬಂಧಿಕರೆಲ್ಲ ಇಂಥ ಮದುವೆಯನ್ನು ಆಡಿಕೊಳ್ಳುತ್ತಾರೆ ಎಂಬುದೇ? ಅವಳಿಗೆ ನಮ್ಮ ಮನೆಯ ದೇವರ ಕೋಣೆಗೆ ಹೇಗೆ ಪ್ರವೇಶ ನೀಡುವುದು ಎಂಬ ಆತಂಕವೆ?

ಇವ್ಯಾವುದನ್ನೂ ಸಕಾರಣವಾಗಿ ಹೇಳದ ನೀವು ಒಂದೇ ಮಾತಿನಲ್ಲಿ ಹೇಳಿದ್ದೇನು? -“ರೋಹಿಣಿಯೇ ಬೇಕೆಂದಾದರೆ ನೀನು ನಮ್ಮನ್ನು  ಮರೆತುಬಿಡು” ಒಂದೇ ಮಾತು. ಖಡಕ್ ಆಗಿ, ಸಿನಿಮಾ ಶೈಲಿಯಲ್ಲಿ ಹೇಳಿ ಹೊರ ನಡೆದಿರಲ್ಲವೆ? ನಾನೂ ಸಿನಿಮಾ ನೋಡುತ್ತೇನೆ.  ಅದೇ ಸಿನಿಮಾ ಶೈಲಿಯಲ್ಲೇ ನಾನೂ ನಿಮಗೆ ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗುವ  ನಿರ್ಧಾರಕ್ಕೆ ಬಂದಿದ್ದೇನೆ.  ನೀವು ನನ್ನ ಮೇಲಿಟ್ಟ ಪ್ರೀತಿ, ಬಾಂಧವ್ಯಗಳಿಗಿಂತ  ರೋಹಿಣಿಯ ಉದ್ದೇಶ ಮತ್ತು ಮಾರ್ಗ ನನಗೆ ದೊಡ್ಡದಾಗಿ ಕಾಣುತ್ತಿದೆ. ಅಲ್ಲದೆ ನೀವು ನನ್ನ ಮೆಲೆ ಅವಲಂಬಿತರಲ್ಲದ ಸ್ವತಂತ್ರ ಜೀವಿಗಳು. ಆರ್ಥಿಕವಾಗಿ ಸದೃಢರೂ ಹೌದೆಂಬ ಅರಿವು ನನಗಿದೆ.  ಕೊನೇ ಪಕ್ಷ ‘ಅಮ್ಮ’ನಾದರೂ  ನನ್ನನ್ನು ಬೆಂಬಲಿಸಿಯಾಳು ಅಂದುಕೊಂಡಿದ್ದೆ. ಆಕೆ ಹೀಗೆ ಕಟ್ಟಳೆಗಳ ಹಿಂದೆ ಹೇಡಿಯಾಗುತ್ತಾಳೆ ಎಂದು ನಾನಂದು ಕೊಂಡಿರಲಿಲ್ಲ.

ಅಂದಹಾಗೆ, ಮೊನ್ನೆ ಮೊನ್ನೆ ’ಅಮ್ಮ’ನಿಗೆ  ಬಿ.ಪಿ. ಶುರುವಾಗಿದೆ ಮತ್ತು ನಿಮಗೆ  ಶುಗರ್ ಲೆವೆಲ್‍ನ್ನು ನಿಯಂತ್ರಣದಲ್ಲಿಡುವ  ಅನಿವಾರ್ಯತೆ ಇದೆ.  ವಯೋಸಹಜವಾಗಿ ನಿಮಗೆ ಪ್ರಾಪ್ತವಾಗಬೇಕಿದ್ದ  ಪ್ರೌಡಿಮೆ, ಹೃದಯ ವೈಶಾಲ್ಯತೆ ಮತ್ತು ದೊಡ್ಡತನಗಳ ಕೊರತೆಯಿಂದಾಗಿಯೆ ಇಂಥದ್ದೊಂದು ಸಂದಿಗ್ಧ ಎದುರಾಗಿದೆ ಎಂದು ನಾನು ಭಾವಿಸುತ್ತೇನೆ.  ಅಲ್ಲದೆ ವೃದ್ಧ ತಂದೆ ತಾಯಿಯರನ್ನು ತೊರೆದು ಹೋಗುವ  ನೀಚ ಮಗ ಎಂದು ನಾನಂದುಕೊಂಡಿಲ್ಲ.

ನಿಮ್ಮ ಪ್ರಕಾರ ನಾನು ಒಬ್ಬಳು ಇಂಜಿನಿಯರನ್ನೋ, ಲೆಕ್ಚರರನ್ನೋ ಎಮ್.ಎನ್.ಸಿ.ಯಲ್ಲಿ ದುಡಿಯುವವಳನ್ನೋ, ಪದವೀಧರೆಯಾಗಿದ್ದರೂ ಮನೆಯಲ್ಲಿದ್ದು ಸದ್ ಗ್ರಹಿಣಿ ಎನಿಸಿಕೊಳ್ಳುವಂತ  ಸ್ವಜಾತಿಯವಳನ್ನೋ… ( ಬೇಡ ಈ ವಿಷಯದಲ್ಲಿ ನಿಮ್ಮಗಳ ಹುನ್ನಾರ ಏನಿತ್ತೋ ನನಗೆ  ತಿಳಿಯದು. ಸುಮ್ಮನೆ ಆರೋಪಿಸಲಾರೆ ) …

ನಿಮ್ಮಿಬ್ಬರ ಆರೋಗ್ಯ ನೋಡಿಕೊಳ್ಳಿ. ಅತ್ತೂ ಕರೆದು ರಂಪ ಮಾಡದೇ ಸುಮ್ಮನಿದ್ದು ಬಿಡಿ.

ಇಂತಿ ನಿಮ್ಮ ,
 ಮಗ 

ಪತ್ರ 2 :

ಹೈದರಾಬಾದ್‍ನಲ್ಲಿ ಟ್ರೈನಿಂಗ್‍ಗೆಂದು ಹೊರಟಿದ್ದ  ‘ಮೋಹನ’ ಆ ಒಂದು ತಾಸಿನ ವಿಮಾನ ಪ್ರಯಾಣದ ಮಧ್ಯೆ ತನ್ನ ಬ್ಯಾಗಿನಲ್ಲಿದ್ದ ಯಾವುದೋ ಪುಸ್ತಕಕ್ಕೆ ಕೈ ಹಾಕಿದಾಗ ಈ ಪತ್ರ ಅಚಾನಕ್ ಆಗಿ ಸಿಕ್ಕಿತು.
*****
ಮಗ ಮೋಹನ್ ಗೆ,

I am sorry . In fact , we are sorry. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ನಿನಗೆ ಹೀಗೆ ಮಾತಾಡದ ನಾವಿಬ್ಬರೂ ಮೊನ್ನೆ ಅಷ್ಟೆಲ್ಲ ಮಾತಾಡಿಬಿಟ್ವಿ ಎಂಬುದನ್ನು ಇಬ್ಬರು ಕೂತು ಆಲೋಚಿಸಿ ತುಂಬಾ ನೊಂದಿದ್ದೇವೆ.  ಇಲ್ಲಿಯತನಕ  ನಮ್ಮ ಪ್ರೀತಿಯನ್ನೆಲ್ಲ  ನಿನ್ನ ಮೇಲೆ ವಂಚನೆಯಿಲ್ಲದೆ ತೋರಿಸಿದದರ ಪರಿಣಾಮ ಅನ್ನಿಸುತ್ತದೆ ನಾವಷ್ಟು ನಿರ್ಭಾವುಕರಾಗಿ ಮಾತಾಡಲು ಸಾಧ್ಯವಾಗಿದ್ದು.
‘How can the bird that is born for joy sit
in a cage and sing?’ ಎಂಬ ‘ಬ್ಲೇಕ್’ನ ಸಾಲುಗಳನ್ನು ಪದೇ ಪದೇ ಉದಾಹರಿಸುತ್ತ  ನಿನ್ನಲ್ಲಿ ‘ಸ್ವತಂತ್ರವಾದ ಜೀವನ’ದ ರುಚಿ ಹತ್ತಿಸಿದವನು ನಾನೆ ಅಲ್ಲವೆ? ಅದೇ ಸ್ವತಂತ್ರವನ್ನು ನೀನೀಗ ಚಲಾಯಿಸುತ್ತಿದ್ದೀ ಎಂಬ ಕನಿಷ್ಠ ಪ್ರಜ್ಞೆ ನಮ್ಮಲ್ಲಿ ಉಳಿದಿದ್ದರೂ  ನಾವಂದು  ಆ ರೀತಿ ಮಾತನಾಡುತ್ತಿರಲಿಲ್ಲವೇನೋ?

ಇರಲಿ. ಆಗಿದ್ದು ಆಗಿ ಹೋಯ್ತು, ಆದರೆ ನಾವೀಗ ಒಂದು ತೀರ್ಮಾನಕ್ಕೆ  ಬಂದಿದ್ದೇವೆ.  ನಿನ್ನ ಶಿಕ್ಷಣ ಮತ್ತು ಉದ್ಯೋಗದ  ಸಲುವಾಗಿಯೇ ಅಲ್ಲವೇ ನಾವು  ಈ ನಗರಕ್ಕೆ  ಬಂದು ಉಳಿದದ್ದು? ಅಲ್ಲಿ ಊರಿನಲ್ಲಿರುವ  ನಮ್ಮ  ಸಣ್ಣ ಮನೆ ಮತ್ತು ತೋಟದಿಂದ ಬರುವ ಆದಾಯ ನಮ್ಮಿಬ್ಬರ ಜೀವನಕ್ಕೆ ಸಾಕಾಗುತ್ತದೆ.  ಇದನ್ನು ನಾವೇನೂ ನೋವಿನಿಂದ ಹೇಳುತ್ತಿಲ್ಲ.  ಪ್ರತಿ ತಿಂಗಳು ಪೂರ್ತಿ ಸಂಬಳವನ್ನು ನನ್ನ  ಕೈಗೇ ತಂದಿಡುತ್ತಿದ್ದ ಸಂಭಾವಿತ ನೀನು. ನಿನ್ನ ಮೇಲೆ ನಾವೆಂದೂ ಆ ವಿಷಯಕ್ಕೆ ದೂರಲಾಗದು.  ಈ ಬಗ್ಗೆ  ನಮ್ಮ ತೋಟ ನೋಡಿಕೊಳ್ಳುತ್ತಿದ್ದ ನಿನ್ನ ಚಿಕ್ಕಪ್ಪನ ಬಳಿಯೂ ಮಾತನಾಡಿದ್ದೇನೆ.  ಈ ಬಾರಿ ನೀನು ಹೈದ್ರಾಬಾದ್‍ನಿಂದ ಬರುವಷ್ಟರಲ್ಲಿ ನಾವು ಇಲ್ಲಿರುವುದಿಲ್ಲ. ಈ ಬಗ್ಗೆ ನೀನೇನೂ  ಆತಂಕಪಟ್ಟುಕೊಳ್ಳಬೇಡ ಮುಂದಿನ ವೀಕೆಂಡ್ ಊರಿಗೆ ಬಾ. ನಿನ್ನ ನಿರ್ಧಾರವನ್ನು ನಾವಿಬ್ಬರೂ ಗೌರವಿಸುತ್ತೇವೆ.  ನಿಮ್ಮಮ್ಮ ಮೊದಲು ಒಪ್ಪಿರಲಿಲ್ಲ. ಆದರೆ ನಿನ್ನ ಸ್ವತಂತ್ರ ನಿನಗೆ ತಂದು ಕೊಡಬಹುದಾದ  ಸಂತೋಷವನ್ನು ನಾನವಳಿಗೆ ಮನವರಿಕೆ  ಮಾಡಿದ ಮೇಲೆ ಊರಿಗೆ ಬಂದಿರಲು ಒಪ್ಪಿದ್ದಾಳೆ.  ಮುಂದಿನ ಶನಿವಾರ ಯಾವ ಬಸ್ಸಿಗೆ ಬರುತ್ತೀಯ ತಿಳಿಸು. ನಾನು ಬಸ್‍ಸ್ಟಾಪಿಗೆ ಬಂದು ಕರೆದುಕೊಂಡು ಹೋಗುತ್ತೇನೆ.

  ಇಂತಿ ನಿನ್ನ 
 ಅಪ್ಪ, ಅಮ್ಮ 

ಪತ್ರ 3 :

ಹಾಯ್ ಮಿ. ‘ಮರೆವು’,

ಹೆಚ್ಚು ವಿವರಿಸಲು ಸಾಧ್ಯವಾಗಿಲ್ಲ. ಅದರ ಅವಶ್ಯಕತೆಯೂ ಈಗ ಇಲ್ಲ. ಇದೊಂದು ಅತೀ ಚಿಕ್ಕ ವಿದಾಯದ ಪತ್ರವೆನಿಸಿಕೊಂಡರೂ ಅಡ್ಡಿಯಿಲ್ಲ. ಅದು ಅಷ್ಟು ಸುಲಭವಲ್ಲ. ‘ನಮ್ಮ ಕನಸುಗಳು ಕೇವಲ ನಮ್ಮವಷ್ಟೇ ಅಲ್ಲ ’  ಎಂಬ ಭ್ರಮೆ ಸರಿದು ವಾಸ್ತವಕ್ಕೆ ಬಂದ ಈ ಹೊತ್ತಲ್ಲಿ ಕಳೆದ  ಕೆಲವು ವರ್ಷಗಳ ನಮ್ಮಬ್ಬಿರ ಕನಸುಗಳು ಕನಸಾಗಿಯೇ ಉಳಿದಲ್ಲಿ ನಿನಗೂ, ನಮಗೂ ಮತ್ತು “ಅವರಿಗೂ” ಎಲ್ಲರಿಗೂ  ನೆಮ್ಮದಿ ಎಂದು ಖಾತರಿಯಾದ ಕಾರಣ ಈ ನಿರ್ಧಾರಕ್ಕೆ ಬರದೇ ಮತ್ತೇನು ತೋಚಲಿಲ್ಲ. ನಂಗೊತ್ತು ಇದು ಕಷ್ಟದ ಮತ್ತು ನೋವಿನ ನಿರ್ಧಾರವಾಗಬಲ್ಲದೆಂದು. ಅದರೇನು ಮಾಡುವುದು ? ‘ಎಲ್ಲ ನೋವುಗಳು ಕ್ರಮೇಣ ಬದುಕಿನ ನಿಯಮಗಳೇ ಆಗಿಬಿಡುತ್ತವೆ ’. ನೀನು ಎಂಥ ‘ಗಟ್ಟಿಗ’ ಎಂದು ತೋರಿಸಿಕೊಳ್ಳಲು ಪ್ರಯತ್ನಿಸು.  ನನಗೋ ಅದು ಆಗಾಗಿನ ಅಭ್ಯಾಸ.  ಬದುಕು ‘ಟೊಳ್ಳಾ’ಗಬಾರದೆಂದರೆ  ನಾವು ಮತ್ತಷ್ಟು ‘ಗಟ್ಟಿ’ಯಾಗಲೇಬೇಕಲ್ಲವೆ?

ಕಳೆದ ಶನಿವಾರವಷ್ಟೇ ನಾನು ನಿನ್ನಲ್ಲಿ ‘ ಮೊದಲ ಮುತ್ತಿನ’ ಬೇಡಿಕೆಯಿಟ್ಟಿದ್ದೆ.  ಜುಗ್ಗ ನೀನು, ಎಲ್ಲವನ್ನು ಕಾಯ್ದಿರಿಸಿ ಒಮ್ಮೆಲೇ ಮುತ್ತಿನ ಮತ್ತೇರಿಸುತ್ತೇನೆ ಎಂದು ನೆಪವೊಡ್ಡಿ ತಪ್ಪಿಸಿಕೊಂಡದ್ದು ಅದೆಷ್ಟು ಒಳ್ಳೆಯದಾಯಿತು ನೋಡು. ಇಲ್ಲವಾದಲ್ಲಿ ‘ ಕೊನೆಯ ಮುತ್ತಾ’ ಗಿಬಿಡುತ್ತಿದ್ದ ಆ ‘ಮೊದಲ ಮುತ್ತು’ ಮಾಡಬಹುದಾಗಿದ್ದ  ಅನಾಹುತವನ್ನು ನೆನೆದರೆ ನನಗೆ ಭಯವಾಗುತ್ತೆ. Thanks for being miser that day .  ಮರೆವು ಎಂಬುದನ್ನು ಮನುಷ್ಯ ಹೊಸದಾಗಿಯೇನು ರೂಡಿಸಿಕೊಳ್ಳಬೇಕಿಲ್ಲ ತಾನೆ? ಒಂದು ‘ಮರೆವು’ ಒಂದು ‘ಬೆಸುಗೆ’ಗೆ ಕಾರಣ ಮತ್ತು ಇದು ಹಾಗೇ ಮುಂದುವರೆಯುವ ಸರಪಳಿ ನಿಯಮ.  ನಾವಿಬ್ಬರೂ  ಆ ಸರಪಳಿಯ ಬಂಧಿಗಳೇ. ದಾರಿ ದೊಡ್ಡದಿದೆ. ನಿನಗೂ, ನನಗೂ.  ಈಗ ‘ಮರೆಯೋಣ’ ಮುಂದೆ ಮತ್ತೊಂದು ‘ ಬೆಸುಗೆ’ಗೆ ಅದು ನಾಂದಿಯಾಗುತ್ತದೆ ಮತ್ತು ಅಂಥದ್ದೇ ಒಂದು ಬೆಸುಗೆಯ ಫಲವೇ ನಾನು ನೀನು ಅಲ್ಲವೆ? ಸುಮ್ಮನೇ ಇನ್ನಾರನ್ನೋ ದೂರುತ್ತಾ ಕೂರುವುದು ಬೇಡ. “Let not what I (we) cannot have (our) my cheers of mind destroy” ( ಯಾವುದು ನಮ್ಮದಾಗಲೂ ಸಾಧ್ಯವೇ ಇಲ್ಲವೋ ಅದು ನಮ್ಮ ಸಂತೋಷವನ್ನು ಕದಡದಿರಲಿ)  ಎನ್ನುವ ಕವಿಯ ಸಾಲುಗಳನ್ನು ಇಬ್ಬರೂ ಸಮಚಿತ್ತದಿಂದ ಒಪ್ಪಿಕೊಳ್ಳೋಣ.   ‘ಮರೆವು ಮತ್ತು ಬೆಸುಗೆ’ಯ ಈ ತಂತ್ರದಲ್ಲಿ ನಾವಿಬ್ಬರೂ ನಿಮಿತ್ತ ಮಾತ್ರ.

ಕ್ಷಮಿಸಿದ್ದೇನೆ, ಕ್ಷಮೆಯಿರಲಿ.
ಇಂತಿ ನಿನ್ನ 
‘ಮರೆವು’

POSTSCRIPT :

* ಈ ಮೂರು ಪತ್ರಗಳನ್ನು ಒಂದಕ್ಕೊಂದು ಜೋಡಿಸಿ ಓದಿಕೊಂಡು ತನ್ಮೂಲಕ ಅವು ಮೂರಕ್ಕೂ ಸಂಬಂಧವಿದೆ ಎಂದು ಲಾಜಿಕ್ ಪಾಯಿಂಟ್ ಹಾಕಿದ್ದಲ್ಲಿ ಕತೆಗಾರನಾದ ನಾನು ಅಸಾಹಯಕನಾಗುತ್ತೇನೆ.

* ಈ ಮೂರು ಪತ್ರಗಳನ್ನು ಅದಲು-ಬದಲು ಮಾಡಿಯೂ ನೀವು ಓದಬಹುದು ಎಂದು ನನಗನ್ನಿಸುತ್ತೆ. ಆಗಲೂ ಇವು ಪರಸ್ಪರ ಸಂಬಂಧಿತ ಪತ್ರಗಳು ಎಂದು ನಿಮಗನ್ನಿಸಿದಲ್ಲಿ ಈ ಲೋಕದಲ್ಲಿ ಅದೆಷ್ಟು ಏಕರೂಪತೆಯಿಂದ ಕೂಡಿದ ಏಕತಾನತೆಯ ಕತೆಗಳಿವೆ ಎಂದು ಅರ್ಥವಾದೀತು.

‍ಲೇಖಕರು avadhi

2 October, 2018

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Boranna

    ಮನಸ್ಸಿಗೆ ತಾಕುವ ಅಂತರಂಗದ ತುಣುಕುಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading