ವೈ ಬಿ ಹಾಲಬಾವಿ
ನನ್ನೊಳಗಿನ ಕಣ್ಣು ಅವಳೊಳಗಿಲ್ಲ..

ಬಿರು ಬಿಸಿಲ ದಿನ ಸ್ವಚ್ಛ ಬಾನು ಅಲ್ಲಲ್ಲಿ ಅಲೆಯುವ ಬಿಳಿ ತುಂಡು ಮೋಡಗಳು. ನಿಧಾನಕ್ಕೆ ಉರಿಗಣ್ಣ ಸೂರ್ಯ ತನ್ನ ದಿನಚರಿ ಮುಗಿಸುತ್ತ ಸಾಗುತ್ತಿದ್ದ… ರಾಯಚೂರಿನಿಂದ ಗುಲಬರ್ಗಾಕ್ಕೆ ನನ್ನವಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕಿಟಕಿ ಬದಿಯ ಆಸನ ಸಿಕ್ಕಿದ್ದರಿಂದ ಮನಸಿಗೆ ಹಿತವೆನಿಸಿತ್ತು. ಬೀಸುತ್ತಿದ್ದ ಬಿಸಿ ಗಾಳಿ ಮೈಬೆವರಿನೊಂದಿಗೆ ಕಚಗುಳಿ ಇಡುತ್ತಿತ್ತು. ಪಕ್ಕದಲ್ಲಿ ಕುಳಿತ್ತಿದ್ದ ನನ್ನವಳು ನಿಧಾನಕ್ಕೆ ನನ್ನ ಹೆಗಲಿಗೊರಗಿ ಸಣ್ಣಗೆ ನಿದ್ದೆ ತೆಗೆಯುತ್ತಿದ್ದಳು. ದಿನದ ಕಾವು ಕಡಿಮೆಯಾಗತೊಡಗಿತು. ಪಶ್ಚಿಮದ ದಿಕ್ಕು ಕ್ರಮೇಣ ಹೊಂಬಣ್ಣಕ್ಕೆ ತಿರುಗುತ್ತಿತ್ತು. ಮನಸ್ಸು ಕಿಟಕಿಯಾಚೆಗಿನ ಆಗಸದೆಡೆಗೆ ನೆಟ್ಟಿತು. ಅಂಡಲೆಯುತ್ತಿದ್ದ ಬಿಳಿ ತುಂಡು ಮೋಡಗಳೆಲ್ಲ ರಂಗು ರಂಗಾಗಿ ಚಿತ್ರ ವಿಚಿತ್ರ ರೂಪ ತಳೆಯುತ್ತಿದ್ದವು. ನನಗೇ ನಾ ನಂಬದಂತಹ ಪ್ರಾಣಿ, ಪಕ್ಷಿ, ದೇವರುಗಳು ಮೂಡತೊಡಗಿದವು. ನೋಡ ನೋಡತ್ತಿದ್ದಂತೆಯೇ ದೊಡ್ಡದೊಂದು ಮೋಡ ಮನ ಮೋಹಕ ಶಿವನ ರೂಪವನ್ನು ತಳೆದು ನಿಂತಿತು. ಇದು ನಿಜವೋ, ಭ್ರಮೆಯೋ ಎನ್ನುವಂತಹ ಸಂದಿಗ್ಧತೆ ನನ್ನದಾಯಿತು. ಮಾತೇ ಹೊರಡದ ಮೂಕನಂತಾದೆ. ನಿಧಾನಕ್ಕೆ ನನ್ನವಳಿಗೆ ತಿವಿದು ಎಚ್ಚರಿಸಿ ಕಿಟಕಿಯಾಚೆಗಿನ ದಿಗಂತದೆಡೆಗೆ ಬೆರಳು ತೋರಿಸಿ ಆ…ಮೋಡದಲ್ಲಿ ನಿನಗೆ ಏನು ಕಾಣುತಿದೆ ಎಂದೆ. ಅದಕ್ಕೆ ಅವಳು ಆ…ಮೋಡವೊಂದು ಬ್ರಹದಾಕಾರದ ಬಂಡೆಯಂತೆ ಕಾಣುತಿದೆ ಎಂದಳು. ಆ…ಮೋಡ ಕರಗತೊಡಗಿತು. ರೈಲು ನಿಧಾನಕ್ಕೆ ಕತ್ತಲ ಗೂಡ ಸೇರಿತು. ಶಿವನ ರೂಪ ತುಂಬಿಕೊಂಡ ಮನಸ್ಸು ಆಹ್ಲಾದದಿಂದ ನಲಿಯಿತು. ನಾ ಕಂಡ ದೃಶ್ಯ ಅವಳಿಗೇಕೆ ಕಾಣಲಿಲ್ಲ, ನನ್ನೊಳಗಿನ ಕಣ್ಣು ಅವಳೊಳಗೇಕಿಲ್ಲ ಎಂದು ಯೋಚಿಸುತ್ತ ಅವಳೊಂದಿಗೆ ರೈಲಿನಿಂದ ಕೆಳಗಿಳಿದ ನಾನು ಮನೆ ಕಡೆಗೆ ಹೆಜ್ಜೆ ಹಾಕತೊಡಗಿದೆ…
ಆ ಗುಂಗು ಇಳಿಯಲ್ಲಿಲ್ಲ…
ಬಹಳ ದಿನಗಳಿಂದ ಊರಗೆ ಹೋಗಿರಲಿಲ್ಲ. ಅಕ್ಕ ಭಾವರನ್ನು ನೆನೆದು ಮತ್ತೆ ಮತ್ತೆ ಹಳ್ಳಿ ಕಡೆಗೆ ಮನಸ್ಸು ಜಾರುತ್ತಿತ್ತು. ನನ್ನೂರು ಗುಡ್ಡಗಾಡಿನಿಂದ ಕೂಡಿದ ಒಂದು ಪುಟ್ಟ ಹಳ್ಳಿ. ಅದೊಂದು ದಿನ ನನ್ನೆಲ್ಲ ಕೆಲಸ ಕಾರ್ಯಗಳ ಒತ್ತಡದಲ್ಲಿಯೂ ಬಿಡುವು ಮಾಡಿಕೊಂಡು ಹಳ್ಳಿಗೆ ಹೊರಡಲು ಸಿದ್ಧನಾದೆ. ಹೇಳಿಕೊಳ್ಳುವಂತಹ ಬಸ್ಸಿನ ಸೌಕರ್ಯವಿಲ್ಲದಿದ್ದರೂ ಸಣ್ಣ ಪುಟ್ಟ ಖಾಸಗಿ ವಾಹನಗಳಿಗೇನೂ ಕೊರತೆ ಇರಲಿಲ್ಲ. ಹೇಗೋ ಒಂದು ಮಿನಿ ಬಸ್ಸಿನಲ್ಲಿ ಹತ್ತಿ ಊರಿಗೆ ಹೊರಟೆ. ಮಕ್ಕಳು, ಮುದುಕರು, ಹೆಂಗಸರು, ಗಂಡಸರು, ಪಡ್ಡೆ ಹುಡುಗರು ಸಾಲದೆಂಬಂತೆ ಅಲ್ಲಲ್ಲಿ ಸೀಟಿನ ಕೆಳಗೆ ಕೋಳಿ, ಕುರಿಗಳಿಂದ ಕಿಕ್ಕಿರಿದ ಬಸ್ಸು ತುಂಬು ಬಸುರಿಯಂತೆ ನಿಧಾನಕ್ಕೆ ಚಲಿಸುತ್ತಿತ್ತು. ಕಾಲಿಡಲು ಜಾಗವಿಲ್ಲದ ಬಸ್ಸು ಅಕ್ಷರಶ: ಕಿಷ್ಕಿಂದೆಯಾಗಿತ್ತು. ಕಂಡ ಕಂಡಲ್ಲಿ ಬಸ್ ನಿಲ್ಲಿಸುವ ಡ್ರೈವರ್, ಟಿಕೇಟ್… ಟಿಕೆಟ್… ಎಂದು ನುಸುಳುವ ಕಂಡೆಕ್ಟರ್ ನಿಜಕ್ಕೂ ಸರ್ಕಸ್ನ ರಿಂಗ್ ಮಾಸ್ಟರ್ಗಳಂತೆ ಕಾಣುತ್ತಿದ್ದರು. ಯಾವುದೋ ಹಳೆ ಹಾಡನ್ನು ಕರ್ಕಶವಾಗಿ ಕಿರುಚುವ ಲೌಡ್ಸ್ಪಿಕರ್, ಮಕ್ಕಳ ಅಳು, ಮುದುಕರ ಕೆಮ್ಮು, ಹೆಂಗಸರ ಮಾತು, ಪಡ್ಡೆ ಹುಡುಗರ ಹಾಡಿನಿಂದ ಬಸ್ಸು ವಿಲಕ್ಷಣ ನಾದದಿಂದ ಮತ್ತೇರಿದಂತೆ ಚಲಿಸುತ್ತಿತ್ತು. ಎಲೆ, ಅಡಿಕೆ, ತಂಬಾಕು ಮೆಲ್ಲುವ ಮುದುಕರು, ಒತ್ತೊತ್ತಾಗಿ ಕುಳಿತ ನಡು ವಯಸ್ಸಿನ ಗಂಡಸರು ಸೇದಿ ಬಿಡುವ ಬೀಡಿಯ ಹೊಗೆಯ ಘಾಟು, ಪಡ್ಡೆ ಹುಡುಗರು ತಿಂದು ಉಗುಳುವ ಗುಟಕಾ. ಕೋಳಿ, ಕುರಿಗಳ ಉಚ್ಚೆ, ಹಿಕ್ಕೆಗಳ ಕೆಟ್ಟ ವಾಸನೆ ಇಡೀ ಬಸ್ಸನ್ನು ಆವರಿಸಿತ್ತು. ಈ ವಿಚಿತ್ರ ಗುಂಗಿನಲ್ಲಿ ಊರು ಬಂದದ್ದೆ ಗೊತ್ತಾಗಲಿಲ್ಲ. ಬಸ್ಸಿನಿಂದಿಳಿದರೂ ಆ…ಗುಂಗು ಇಳಿಯಲಿಲ್ಲ.
ಇನ್ನೊಂದು ಯಾತನೆಗೆ ಮಗ್ಗಲು ಬದಲಿಸಿ…
ಸಂಜೆ ಆಗಸ ಕೆಂಪಾಗಿತ್ತು. ನಿಧಾನಕ್ಕೆ ಕತ್ತಲು ಆವರಿಸಿದಂತೆ ಆಕಾಶದ ಕೆಂಪು ಕರಗತೊಡಗಿತು. ಆ…ವಟಾರದಲ್ಲಿ ದೀಪಗಳು ಹೊತ್ತಿಕೊಂಡವು. ವಟಾರಕ್ಕೆ ಉನ್ಮಾದದ ಕಳೆ ಕಟ್ಟಿತು. ನಿಧಾನಕ್ಕೆ ಹೆಜ್ಜೆ ಬದಲಿಸಿದಂತೆ ಜೀವ ಚಲಿಸತೊಡಗಿದವು. ಮುಡಿದ ಮಲ್ಲಿಗೆ ಕಂಪು ದೀಪದ ಕೆಂಪು ಹರಡಿದಂತೆ ಕತ್ತಲೆಗೆ ನಶೆ ಏರಿಸಿತು. ಜೀವ ಮಿಸುಕಾಡಿದಂತೆ ಕಟ್ಟಿಕೊಂಡ ಕನಸುಗಳು ಕುಸಿಯತೊಡಗಿದವು. ನಿದ್ದೆಯಿಲ್ಲದೆ ಮಂಚ ಅದೆಷ್ಟೋ ಮಗ್ಗಲುಗಳನ್ನು ಬದಲಿಸಿತು ಯಾಂತ್ರಿಕವಾಗಿ. ಎದೆಯಲ್ಲಿ ಮಡುಗಟ್ಟಿದ ದು:ಖ ಗಾಢಾಂಧಕಾರದಲ್ಲಿ ಹೆಪ್ಪುಗಟ್ಟಿತು. ಎಂದೆಂದೂ ಮುಗಿಯದ ನೀಲಿ ರಾತ್ರಿಗಳಲ್ಲಿ ಕನಸುಗಳು ಹೀಗೆ ಕೊಲೆಯಾಗುತ್ತವೆ. ನಿಟ್ಟುಸಿರಿನಲ್ಲಿ ಜೀವನ ಕರಗುತ್ತದೆ ಇನ್ನೊಂದು ಯಾತನೆಗೆ ಮಗ್ಗಲು ಬದಲಿಸಿ…








0 Comments