ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಡಲಪಾಯದ ಕನ್ನಡಿಯಲ್ಲಿ ಕಂಡ ‘ಪೂತನಿ’

ಯಕ್ಷಗಾನಕ್ಕೆ ಸಾಧ್ಯವಾದದ್ದು ಮೂಡಲಪಾಯಕ್ಕೇಕೆ ಸಾಧ್ಯವಿಲ್ಲ? ಎನ್ನುವ ಒಂದು ಪ್ರಶ್ನೆಯನ್ನು ರಂಗ ನಿರ್ದೇಶಕ ಮಲ್ಲಿಕಾರ್ಜುನ ಮಹಾಮನೆ ಅವರು ತಮ್ಮ ಎದುರು ನಿಲ್ಲಿಸಿಕೊಂಡ ಕಾರಣದಿಂದಾಗಿ ರೂಪುಗೊಂಡದ್ದು ‘ಪೂತನಿ’ ಪ್ರದರ್ಶನ. ಕರಾವಳಿಯ ಎಲ್ಲೆಯನ್ನೂ ಮೀರಿ ಯಕ್ಷಗಾನವನ್ನು ಜಗತ್ತಿನ ಎಲ್ಲೆಡೆ ಹರಡಲು ಸಾಧ್ಯವಾಗಿದೆ.

ವ್ಯವಸ್ಥಿತವಾದ ಸಂಘಟನೆ, ಹೊಸ ಪ್ರಸಂಗಗಳು, ಅದಕ್ಕೆ ಸಮಕಾಲೀನ ಸ್ಪರ್ಶ, ಅದನ್ನೂ ಮೀರಿ ವ್ಯವಸಾಯಿ ಶಿಸ್ತು ಈ ಎಲ್ಲವೂ ಯಕ್ಷಗಾನ ಪ್ರತಿಯೊಬ್ಬರಿಗೂ ಪರಿಚಯ ಎನ್ನುವಂತೆ ಮಾಡಿದೆ. ಆದರೆ ಈ ಎಲ್ಲವನ್ನೂ ಅಷ್ಟೇ ಪ್ರಬಲವಾದ ಕಲೆಯಾದ ಮೂಡಲಪಾಯ ಯಕ್ಷಗಾನಕ್ಕೆ ಅಳವಡಿಸುವುದು ಹೇಗೆ ಎಂದು ಚಿಂತಿಸಿದ ಮಹಾಮನೆ ಅವರು ಅದಕ್ಕೆ ಉತ್ತರ ತಮ್ಮಿಂದಲೇ ಶುರುವಾಗಲಿ ಎಂದು ಕೈಗೆತ್ತಿಕೊಂಡ ಪ್ರಸಂಗ- ಪೂತನಿ.

ನಮ್ಮ ಮನಸ್ಸಿನ ರಂಗದಲ್ಲಿ ಈಗಾಗಲೇ ಅಚ್ಚೊತ್ತಿ ನಿಂತಿರುವ ಪೂತನಿಯ ಪಾತ್ರವನ್ನು ಆಶಾ ರಘು ತಮ್ಮದೇ ಶೈಲಿಯಲ್ಲಿ ಮುರಿದು ಕಟ್ಟಿದ್ದರು. ತಾಯ್ತನದ ಪ್ರೀತಿ ಒಸರುವ ಪೂತನಿಯಾಗಿ ರೂಪಿಸಿದ್ದರು. ಮಲ್ಲಿಕಾರ್ಜುನ ಮಹಾಮನೆ ಅವರು ಈ ನಾಟಕವನ್ನು ಮೂಡಲಪಾಯ ಶೈಲಿಯಲ್ಲಿ ರಂಗಕ್ಕೇರಿಸಬೇಕು ಎಂದು ಹೊರಡಲು ಕಾರಣವಿತ್ತು.

ಮಲ್ಲಿಕಾರ್ಜುನ ಮಹಾಮನೆ ಅವರು ಮೂಲತಃ ನಾಗಮಂಗಲದವರು. ಮೂಡಲಪಾಯ ಯಕ್ಷಗಾನದ ಪ್ರಭಾವ ದಟ್ಟವಾಗಿರುವ ಪ್ರದೇಶ ಅದು. ಅವರು ರಂಗಭೂಮಿಗೆ ಹೆಜ್ಜೆ ಇಡುವ ವೇಳೆಗೆ ಮೂಡಲಪಾಯ ಹಿಂದೆ ಸರಿದು ಪೌರಾಣಿಕ ನಾಟಕಗಳ ಅಲೆ ಶುರುವಾಗಿತ್ತು. ರಂಗಭೂಮಿಯ ವಿದ್ಯಾರ್ಥಿಯಾಗಿ ಅನೇಕ ಯಕ್ಷಗಾನ ಪ್ರಸಂಗಗಳನ್ನು ನೋಡಿದ ಮಹಾಮನೆ ಅವರಿಗೆ ಈ ಕಲೆಗೆ ಸಿಕ್ಕಿರುವ ಯಶಸ್ಸನ್ನು ತನ್ನ ನೆಲದ ಮೂಡಲಪಾಯಕ್ಕೂ ಕಲ್ಪಿಸಿಕೊಡಬೇಕು ಅನಿಸಿತು.

ಇದರ ಮುಂದಿನ ಹೆಜ್ಜೆಯೇ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ‘ಮೂಡಲಪಾಯ: ಪ್ರಯೋಗ ಮತ್ತು ಪರಿಷ್ಕರಣೆ’ ಎನ್ನುವ ವಿಷಯದಲ್ಲಿ ಅಧ್ಯಯನ ನಡೆಸಿದ್ದು. ಸಂಶೋಧನೆಯ ನಂತರ ಇವರು ನಿಸರ್ಗಪ್ರಿಯ ಅವರ ಕರಿಬಂಟನ ಕಾಳಗವನ್ನು ಮೂಡಲಪಾಯ ಶೈಲಿಯಲ್ಲಿ ರಂಗಕ್ಕೆ ತಂದರು. ನಾಟಕ ಅಕಾಡೆಮಿಯ ಮೂಲಕ ಮೂಡಲಪಾಯ ಕುರಿತ ಶಿಬಿರ, ಪ್ರಾತ್ಯಕ್ಷಿಕೆ, ಸಂಕಿರಣವನ್ನು ನಡೆಸಿದರು. ಅದರ ಮುಂದಿನ ಹೆಜ್ಜೆ ಪ್ರಖ್ಯಾತ ಮ್ಯಾಕ್ ಬೆತ್ ನಾಟಕವನ್ನು ಮೂಡಲಪಾಯ ಶೈಲಿಯಲ್ಲಿ ರಂಗಕ್ಕೆ ತಂದದ್ದು. 112 ಕಲಾವಿದರನ್ನು ಮೂಡಲಪಾಯದ ಹಿರಿಯರ ಜೊತೆ ಮುಖಾಮುಖಿಯಾಗಿಸಿ ರಂಗಕ್ಕೆ ತಂದಾಗ ಸಿಕ್ಕ ಯಶಸ್ಸು ಇವರನ್ನು ಮತ್ತೆ ‘ಪೂತನಿ’ಯನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು.

‘ರಂಗಮಂಡಲ’ ಪ್ರದರ್ಶಿಸಿದ ಈ ಪ್ರಯೋಗದ ವಿಶೇಷತೆ ಇದ್ದದ್ದು ಇದನ್ನು ಮೂಡಲಪಾಯ ಶೈಲಿಯಲ್ಲಿ ಅಭಿನಯಿಸಿದ ಏಕವ್ಯಕ್ತಿ ಪ್ರದರ್ಶನ ಎನ್ನುವ ಕಾರಣಕ್ಕೆ. ಈ ಶೈಲಿಯ ಪುನರುಜ್ಜೀವನಕ್ಕೆ ಸಾಕಷ್ಟು ಕೆಲಸ ಮಾಡಿದ ಸಂಪಿಗೆ ತೋಂಟದಾರ್ಯ ಅವರು ಆಶಾ ರಘು ಅವರ ನಾಟಕವನ್ನು ಮೂಡಲಪಾಯ ಶೈಲಿಗೆ ಒಗ್ಗಿಸಿದರು.

ಮೂಡಲಪಾಯ ಯಕ್ಷಗಾನವನ್ನು ಆಧುನಿಕ ಮನಸ್ಸಿನ ಎಲ್ಲರ ಜೊತೆಗೂ ಬೆಸೆಯಲು ಪ್ರಯತ್ನಿಸುತಿರುವವರಿಗೆ ಮುಖ್ಯ ಮಾರ್ಗದರ್ಶಿ ಅರಳಗುಪ್ಪೆ ಪುಟ್ಟಸ್ವಾಮಿ ಅವರ ತಂಡ. ಮೂಡಲಪಾಯವನ್ನು ಹೊಸ ಕಣ್ಣುಗಳಿಂದ ನೋಡುತ್ತಿರುವವರಿಗೆ ಅದರ ಮಟ್ಟನ್ನೂ, ಧೀಂಗಿಣವನ್ನೂ ಕಲಿಸುವುದು ಸುಲಭದ ಕೆಲಸವೇನೂ ಅಲ್ಲ. ಅಂತಹ ಮೇಳ ಹಾಗೂ ನುರಿತ ಕಲಾವಿದೆ ನಿರ್ಮಲಾ ನಾದನ್ ಅವರನ್ನು ಜೊತೆಗೂಡಿಸಿಕೊಂಡು ಮಹಾಮನೆ ಈ ವಿಶೇಷ ಪ್ರಯೋಗ ಕಟ್ಟಿದ್ದಾರೆ.

ಈ ಪ್ರಯೋಗ ಮೂಡಲಪಾಯವನ್ನು ಹವ್ಯಾಸಿ ರಂಗದೊಂದಿಗೆ ಕಸಿ ಮಾಡುವ ಸಾಧ್ಯತೆಯ ಯಶಸ್ಸು ಹಾಗೂ ವೈಫಲ್ಯ ಎರಡಕ್ಕೂ ಕನ್ನಡಿ ಹಿಡಿಯಿತು. ಭಾಗವತಿಕೆ ಹಾಗೂ ಅಭಿನಯ ಎರಡರ ನಡುವೆ ಇರಬೇಕಾದ ಬೆಸುಗೆ ಇರದೆ ಮೇಳ ಹಾಗೂ ನಟಿ ಇಬ್ಬರೂ ಪ್ರತ್ಯೇಕವಾಗಿಯೇ ಉಳಿದರು. ಇಡೀ ಪ್ರಯೋಗವನ್ನು ರೂಪಿಸಿರುವುದೇ ಪೂತನಿ ಹಾಗೂ ಮೇಳದ ಸಾರಥಿಯ ನಡುವಿನ ಸಂಭಾಷಣೆಯಾಗಿ. ಈ ಇಬ್ಬರ ನಡುವಿನ ಜುಗಲಬಂದಿ ಆಗಬೇಕಾಗಿದ್ದದ್ದು ಎರಡು ಪ್ರತ್ಯೇಕ ದ್ವೀಪವಾಗಿಯೇ ಉಳಿಯಿತು. ಈ ಪ್ರಯೋಗಕ್ಕೆ ಮೂಡಲಪಾಯ ಯಕ್ಷಗಾನದ ಬಗ್ಗೆಯೇ ಸಂಶೋಧನೆ ನಡೆಸಿದ ಡಾ ನರಸೇಗೌಡರು ಪದ್ಯಗಳನ್ನು ಬರೆದಿದ್ದರು. ಮರೂರ್ ರಮೇಶ್ ಮುಖವೀಣೆಯಲ್ಲಿ, ಯೋಗೀಶ್ ಎಸ್ ಪಿ ಅವರು ಮದ್ದಳೆಯಲ್ಲಿ ಸಾಥ್ ನೀಡಿದ್ದರು.

ಈ ನಾಟಕದ ಯಶಸ್ಸು ಇದ್ದದ್ದು ಪ್ರಸಾಧನ (ಎಸ್ ಮೋಹನ್ ಕುಮಾರ್) ರಂಗ ಸಜ್ಜಿಕೆ (ಮಂಜುನಾಥ ಮಂಡಿ), ವಸ್ತ್ರ ವಿನ್ಯಾಸ (ಮಹೇಂದ್ರ ), ಬೆಳಕು (ರವಿಕುಮಾರ್) ಹಾಗೂ ಕಲೆಯಲ್ಲಿ (ಮಧು ಆರ್ಯ) ತವರೂರಿನ ದಿಣ್ಣೆ ಮೇಲೆ ಪಡ್ಡೆ ಹುಡುಗರೊಂದಿಗೆ ಚಿನ್ನಿದಾಂಡು, ಮರಕೋತಿ ಆಟವಾಡಿಕೊಂಡು ಇದ್ದ ಪೂತನಿ ತನ್ನ ಪ್ರಿಯಕರ ಪ್ರದ್ಯೋತನ ಕಾರಣಕ್ಕಾಗಿ ಕಂಸನ ಕೋಟೆಯೊಳಗೆ ನಡೆದು ಬರುತ್ತಾಳೆ.

ಆ ನಂತರ ಅವಳದ್ದು ಹೆತ್ತ ಗಂಡು ಮಕ್ಕಳನ್ನೆಲ್ಲಾ ಕೊಲ್ಲುವ ಕೆಲಸವೆ. ಆದರೆ ಕೃಷ್ಣನ ಬಾಯಿಗೆ ತನ್ನ ಮೊಲೆ ಮೊಳೇ ತೊಟ್ಟನಿಟ್ಟಾಗ ಆಕೆಗೆ ತನ್ನೊಳಗಿನ ತಾಯ್ತನ ಎಚ್ಚರವಾಗುತ್ತದೆ, ತಾನು ಕೊಂದ ಮಕ್ಕಳ ಮುಖ ಎದುರು ನಿಲ್ಲುತ್ತದೆ, ತಾಯಂದಿರ ಆಕ್ರಂಧನ ಕೇಳುತ್ತದೆ. ಕಂಸನ ಆಜ್ಞೆಯನ್ನೂ ಧಿಕ್ಕರಿಸಿ ಪೂತನಿ ಹೊರಟೇಬಿಡುತ್ತಾಳೆ.

ಇಡೀ ಪ್ರಯೋಗವನ್ನು ನಿರ್ಮಲಾ ನಾದನ್ ಅವರು ತಮ್ಮ ಹೆಗಲ ಮೇಲೇ ಹೊತ್ತು ನಡೆದರೆನೋ ಎನ್ನುವಂತೆ ಹೊತ್ತು ಯಶಸ್ವಿಗೊಳಿಸಿದ್ದಾರೆ. ನಿರ್ದೇಶಕ ಮಹಾಮನೆ ಅವರು ನಾಟಕದ ಅಂತ್ಯಕ್ಕೆ ಕೊಟ್ಟಿರುವ ತಿರುವು ಪೂತನಿಯ ಎಳೆತನ, ಯೌವ್ವನ, ತಾಯ್ತನಕ್ಕೆ ಕೊಟ್ಟ ತಿರುವು ಪ್ರದರ್ಶನವನ್ನು ಗೆಲ್ಲಿಸಿದೆ.

‍ಲೇಖಕರು Editor

5 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading