ಮುಲ್ಲಾನಾಸಿರುದ್ದೀನ್ ಕಥೆಗಳು

ಮುಲ್ಲಾ ತನ್ನ ಗೆಳೆಯ ವಿದ್ವಾಂಸರ ಜತೆ ಚರ್ಚಿಸುತ್ತಿದ್ದ. ಒಬ್ಬಾತ ಮುಲ್ಲಾನಿಗೊಂದು ಪ್ರಶ್ನೆ ಎಸೆದ.

“ಪ್ರಾಪಂಚಿಕ ವಸ್ತುಗಳು ಮತ್ತು ಪರಲೋಕದ ವಸ್ತುಗಳ ನಡುವಣ ಸಂಬಂಧ ವಿವರಿಸುತ್ತೀಯಾ?”

“ಸರಿ, ನೀನು ರೂಪಕಗಳನ್ನು ಅರ್ಥ ಮಾಡಿಕೊಳ್ಳಬೇಕು.”

“ನಿನ್ನ ಒಗಟು ಬೇಡ. ಪ್ರಾಯೋಗಿಕವಾದ ಏನನ್ನಾದರೂ ತೋರಿಸು. ಉದಾಹರಣೆಗೆ ಸ್ವರ್ಗದ ಸೇಬು.”

ಮುಲ್ಲಾ ಅಲ್ಲೇ ಇದ್ದ ಹಣ್ಣುಗಳ ರಾಶಿಯಿಂದ ಒಂದು ಸೇಬನ್ನು ತೆಗೆದು ಪ್ರಶ್ನೆ ಕೇಳಿದಾತನಿಗೆ ಕೊಟ್ಟ. ಇದನ್ನು ತೆಗೆದುಕೊಂಡ ಪ್ರಶ್ನಿಸಿದಾತ “ಇದು ಒಂದು ಕಡೆ ಕೆಟ್ಟಿದೆ. ಸ್ವರ್ಗದ ಸೇಬು ಪರಿಪೂರ್ಣವಾಗಿರಲೇಬೇಕು” ಎಂದ.

ಮುಲ್ಲಾನ ಉತ್ತರ ಬಂತು. “ಸ್ವರ್ಗದ ಸೇಬು ಪರಿಪೂರ್ಣವೇ. ಈ ಭ್ರಷ್ಟ ಜಗತ್ತಿನಲ್ಲಿ, ಭ್ರಷ್ಟವಾಗಿ ಹೋಗಿರುವ ಪ್ರಜ್ಞೆಯನ್ನು ಉಳಿಸಿಕೊಂಡು ಸ್ವರ್ಗದ ಸೇಬು ಹೇಗಿರಬೇಕು ಎಂದು ನೀನು ತೀರ್ಮಾನಿಸಬಹುದಾದರೆ ಇದು ನಿನಗೆ ಸಿಗಬಹುದಾದ ಅತ್ಯುತ್ತಮ ಸ್ವರ್ಗದ ಸೇಬು.”

*

ಮುಲ್ಲಾನಾಸಿರುದ್ದೀನ್ ಖಾಝಿಯಾಗಿದ್ದ ದಿನಗಳವು. ಇಬ್ಬರು ವ್ಯಾಜ್ಯವೊಂದನ್ನು ತಂದರು. ವಾದಿ ಆರೋಪಿಸಿದ “ಆತ ನನ್ನ ಕಿವಿಯನ್ನು ಕಚ್ಚಿ ಹರಿದ.”

ಪ್ರತಿವಾದಿ ಹೇಳಿದ “ನಾನು ಕಚ್ಚಲೂ ಇಲ್ಲ, ಹರಿಯಲೂ ಇಲ್ಲ. ಆತನೇ ಕಿವಿ ಕಚ್ಚಿ ಹರಿದುಕೊಂಡಿದ್ದಾನೆ.”

ನಾಸಿರುದ್ದೀನ್ ಅಂದು ವಿಚಾರಣೆಯನ್ನು ಅಲ್ಲಿಗೇ ಮುಗಿಸಿ ಅವರನ್ನು ಮರುದಿನ ಹಾಜರಾಗಲು ತಿಳಿಸಿದ. ಮನೆಗೆ ಹೋದ ನಾಸಿರುದ್ದೀನ್ ತನ್ನ ಕಿವಿಯನ್ನು ತಾನೇ ಕಚ್ಚಲು ಪ್ರಯತ್ನಿಸಿ ಸೋತ. ಇದರ ಪರಿಣಾಮವಾಗಿ ಹಣೆಯಲ್ಲಿ ಗಾಯವಾಯಿತು.

ಮರುದಿನ ವಿಚಾರಣೆ ಆರಂಭಗೊಂಡಿತು. ವಾದಗಳನ್ನು ಆಲಿಸಿದ. ಭಟರಿಗೆ ಆದೇಶಿಸಿದ. “ಕಿವಿ ಹರಿದುಕೊಂಡವನನ್ನು ಪರೀಕ್ಷಿಸಿ. ಅವನ ಹಣೆಯಲ್ಲಿ ಗಾಯವಾಗಿದ್ದರೆ ಅವನ ಕಿವಿಯನ್ನು ಅವನೇ ಕಚ್ಚಿಕೊಂಡಿದ್ದಾನೆ. ಇಲ್ಲದಿದ್ದರೆ ಮತ್ತೊಬ್ಬ ಕಚ್ಚಿದ್ದಾನೆ. ಆತ ಕಚ್ಚಿಸಿಕೊಂಡವನಿಗೆ ಮೂರು ಬೆಳ್ಳಿ ನಾಣ್ಯಗಳ ಪರಿಹಾರವನ್ನು ನೀಡಲಿ.”

*

ಮುಲ್ಲಾನನ್ನು ಆತನ ಶಿಷ್ಯನೊಬ್ಬ ತನ್ನ ಊರಿಗೆ ಕರೆದೊಯ್ದ. ಸಂಜೆ ಊರು ನೋಡಲು ಗುರುವನ್ನು ಕರೆದೊಯ್ದ ಆತ ಸುತ್ತಮುತ್ತೆಲ್ಲಾ ಪ್ರಸಿದ್ಧವಾಗಿದ್ದ ಆ ಊರಿನ ಬೆಟ್ಟದ ತಪ್ಪಲಲ್ಲಿ ಸರೋವರ ಇರುವ ಸುಂದರ ದೃಶ್ಯವನ್ನು ತೋರಿಸಿದ.

hands.jpg“ಎಷ್ಟು ಸುಂದರ” ಎಂದು ಉದ್ಗರಿಸಿದ ಶಿಷ್ಯ.

“ಎಷ್ಟು ಸುಂದರ, ಆದರೆ…” ಎಂದು ರಾಗವೆಳೆದ ಮುಲ್ಲಾ

“ಯಾಕೆ” ಶಿಷ್ಯನ ಪ್ರಶ್ನೆ.

“ಏನಿಲ್ಲ, ಅದರೊಳಗೆ ನೀರು ತುಂಬಿಸದೇ ಇದ್ದಿದ್ದರೇ ನಿಜಕ್ಕೂ ಸುಂದರ…” ಎಂದ ಮುಲ್ಲಾ.

*

ಒಂದು ದಿನ ಮುಲ್ಲಾ ಹೆಂಡತಿಯನ್ನು ಕರೆದು ಹಲ್ವಾ ತಯಾರಿಸಲು ಹೇಳಿದ. ಅದಕ್ಕೆ ಬೇಕಾದ ಎಲ್ಲಾ ಸಾಮಾನನ್ನೂ ತಂದುಕೊಟ್ಟ. ಆಕೆ ಹಲ್ವಾ ತಯಾರಿಸಿದಳು. ಅದರಲ್ಲಿ ಬಹುಪಾಲನ್ನು ಮುಲ್ಲಾ ತಿಂದು ಮಲಗಿದ.

ಮಧ್ಯರಾತ್ರಿ ಇದ್ದಕ್ಕಿದ್ದಂತೆ ಎದ್ದು ಕುಳಿತ ಮುಲ್ಲಾ ಹೆಂಡತಿಯನ್ನೂ ಎಬ್ಬಿಸಿದ. ಆಕೆ ಏನೆಂದು ಕೇಳಿದಳು.

“ಏನಿಲ್ಲ, ಒಂದು ಹೊಸ ಚಿಂತನೆ.”

“ಏನದು”

“ಹಲ್ವಾ ಉಳಿದಿದ್ದರೆ ಅದನ್ನು ತಾ, ಆಮೇಲೆ ಹೇಳುತ್ತೇನೆ” ಎಂದ ಮುಲ್ಲಾ.

ಹೆಂಡತಿ ಹಲ್ವಾ ತಂದುಕೊಟ್ಟಳು.

ಅದನ್ನು ತಿಂದು ಮುಗಿಸಿದ ಮುಲ್ಲಾ ಹೇಳಿದ “ಅಂದು ಮಾಡಿದ ಹಲ್ವಾವನ್ನು ಅಂದೇ ತಿಂದು ಮುಗಿಸು!”

*

ಮುಲ್ಲಾ ಒಂದು ಅಂಗಡಿಗೆ ನುಗ್ಗಿದ. ಅಂಗಡಿಯಾತ ಮುಲ್ಲಾನನ್ನು ಸ್ವಾಗತಿಸಿ ವ್ಯಾಪಾರಕ್ಕೆ ಸಿದ್ಧನಾದ. ಮುಲ್ಲಾ ಹೇಳಿದ, “ವ್ಯಾಪಾರ ಮತ್ತೆ. ಕೆಲವು ಪ್ರಶ್ನೆಗೆ ಮೊದಲು ಉತ್ತರಿಸು.”

ಅಂಗಡಿಯಾತ “ಆಗಬಹುದು” ಎಂದ.

“ನಾನು ಅಂಗಡಿಗೆ ಬಂದದ್ದನ್ನು ನೋಡಿದೆಯಾ?”

“ಖಂಡಿತವಾಗಿಯೂ ಸ್ವಾಮಿ.”

“ಈ ಮೊದಲು ಎಂದಾದರೂ ನನ್ನನ್ನು ನೋಡಿದ್ದೆಯಾ?”

“ಖಂಡಿತವಾಗಿಯೂ ಇಲ್ಲಾ ಸ್ವಾಮಿ”

“ಹಾಗಾದರೆ ಅಂಗಡಿಗೆ ಬಂದದ್ದು “ನಾನೇ” ಎಂದು ನಿನಗೆ ಹೇಗೆ ಗೊತ್ತಾಯಿತು?”

‍ಲೇಖಕರು avadhi

August 23, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: