ಮುರ್ಡೋಕ್ ಎಂಬ ‘ಸಿಟಿಜನ್ ಕೇನ್’

ಜಿ ಎನ್ ಮೋಹನ್

 

‘ನನಗೆ ಒಂದು ಕೊನೆಯ ಅವಕಾಶ ಸಿಕ್ಕಿದ್ದಲ್ಲಿ ನಾನು ರೂಪರ್ಟ್ ಮುರ್ಡೋಕ್ ಗೆ ಗುಂಡಿಕ್ಕಲು ಬಯಸುತ್ತೇನೆ’ ಎಂದಿದ್ದು ಜಗತ್ತಿನ ಖ್ಯಾತ ನಾಟಕಕಾರ, ನೊಬೆಲ್ ಪ್ರಶಸ್ತಿ ವಿಜೇತ ಹೆರಾಲ್ಡ್ ಪಿಂಟರ್. ಮುರ್ಡೋಕ್ ಪತ್ರಿಕೋದ್ಯಮದ ಬಗ್ಗೆ ಇಂಗ್ಲೆಂಡ್ ಅಸಹ್ಯಪಟ್ಟುಕೊಂಡಿದ್ದು ಹೀಗೆ . ಆಸ್ಟ್ರೇಲಿಯಾದ ಮುರ್ಡೋಕ್ ಅಮೆರಿಕಾಗೆ ಹಾರಿ ಅಲ್ಲಿನ ಪ್ರಜೆಯಾಗಿ, ಕೈ ಹಾಕಿದ್ದು ಮಾತ್ರ ಇಂಗ್ಲೆಂಡ್ ಪತ್ರಿಕೋದ್ಯಮಕ್ಕೆ. ಯಾವಾಗ ಮುರ್ಡೋಕ್ ಇಂಗ್ಲೆಂಡ್ ಗೆ ಕಾಲಿಟ್ಟರೋ ಅಲ್ಲಿನ ಪತ್ರಿಕೋದ್ಯಮದ ನೀತಿ ನಿಯಮಗಳು ಗಾಳಿಗೆ ತೂರಿಹೋದವು. ಇವತ್ತು ಜಗತ್ತಿನ ಮುಂದೆ ಮುರ್ಡೋಕ್ ತಲೆತಗ್ಗಿಸಬೇಕಾಗಿ ಬಂದ ‘ನ್ಯೂಸ್ ಆಫ್ ದಿ ವರ್ಲ್ಡ್’ ಪ್ರಕರಣ ಮುರ್ಡೋಕ್ ನ ನಾಲ್ಕನೇ ದರ್ಜೆಯ ಪತ್ರಿಕೋದ್ಯಮದ ರೀತಿಗೆ ಸಾಕ್ಷಿ ನುಡಿಯುತ್ತಿದೆ. ಆದರೆ ಮುರ್ಡೋಕ್ ಜಗತ್ತಿನಾದ್ಯಂತ ನಡೆಸಿದ ಮಾಧ್ಯಮ ಅನಾಚಾರದಲ್ಲಿ ಇದು ಒಂದು ಕುದಿ ಬಿಂದು ಮಾತ್ರ.

ಮುರ್ಡೋಕ್ 1968 ರಲ್ಲಿ ನ್ಯೂಸ್ ಆಫ್ ದಿ ವರ್ಲ್ಡ್ ಪತ್ರಿಕೆ ಕೊಳ್ಳೆಲೆಂದು ಬ್ರಿಟನ್ನಿಗೆ ಕಾಲಿಟ್ಟಾಗಲೇ ಇಡೀ ಬ್ರಿಟನ್ ಮುರ್ಡೋಕ್ ವಿರುದ್ಧ ಬೊಬ್ಬೆ ಹಾಕಿತ್ತು. ಹಾಗೆ ದನಿ ಎತ್ತಲು, ಮುರ್ಡೋಕ್ ಬ್ರಿಟನ್ನಿಗೆ ಕಾಲಿಡದಂತೆ ಮಾಡಬೇಕು ಎನ್ನುವದಕ್ಕೆ ಬ್ರಿಟಿಷರ ಮುಂದೆ ಆಸ್ಟ್ರೇಲಿಯಾದ ಪತ್ರಿಕೋದ್ಯಮ ಕಂಡ ಅವನತಿಯ ಉದಾಹರಣೆಯಿತ್ತು. ಪತ್ರಿಕೆಗಳ ಬೆಲೆ ಇಳಿಸಿ, ಎದುರಾಳಿಗಳನ್ನು ಮುಗಿಸಿ, ಸರ್ಕಾರಗಳನ್ನು ಕುಣಿಸಿ, ತನಗೆ ಬೇಕಾದಂತೆ ನಿಯಮ ತಿದ್ದಿ, ಬೇಕಾದವರನ್ನು ಆಡಳಿತದಲ್ಲಿ ಕೂರಿಸಿ, ಅಶ್ಲೀಲ ಸುದ್ಧಿಗಳನ್ನು ತೂರಿಸಿ, ಸುದ್ದಿಗಾಗಿ ಕದ್ದಾಲಿಸಿ, ಕೈ ಬೆಚ್ಚಗೆ ಮಾಡಿ, ಬೆದರಿಸಿ ಹೀಗೆ.. ಮುರ್ಡೋಕ್ ಆಸ್ಟ್ರೇಲಿಯಾ ಪತ್ರಿಕೋದ್ಯಮವನ್ನು ಗಾಳಿಗೆ ತೂರಿದ್ದು ಬ್ರಿಟನ್ನಿಗೆ ಗೊತ್ತಿತ್ತು. ಆ ಕಾರಣದಿಂದಾಗಿಯೇ ನ್ಯೂಸ್ ಆಫ್ ದಿ ವರ್ಲ್ಡ್ ಪತ್ರಿಕೆಯನ್ನು ಕೊಳ್ಳಲು ರೂಪರ್ಟ್ ಮುರ್ಡೋಕ್ ಮುಂದಾದಾಗ ಹಾಹಾಕಾರವೇ ಎದ್ದಿತ್ತು. ಮುರ್ಡೋಕ್ ಸೋಲು ಉಂಡು ಗೊತ್ತಿರದ ವ್ಯಕ್ತಿ. ಪತ್ರಿಕೆ ಬಗಲಿಗೆ ಬಿತ್ತು. ಅಲ್ಲಿಂದ ಆರಂಭವಾದ ಪತ್ರಿಕೋದ್ಯಮದ ಅವನತಿ ಕೇವಲ ಬ್ರಿಟನ್ ಮಾತ್ರವಲ್ಲ ಇಡೀ ಜಗತ್ತಿನ ಪತ್ರಿಕೋದ್ಯಮಕ್ತೆ ಮಸಿ ಬಳೆದಿದೆ.

ಭಾರತದಲ್ಲೂ ಮಾಧ್ಯಮ ರಂಗದಲ್ಲಿ ವಿದೇಶಿ ಸಂಸ್ಥೆಗಳಿಗೆ ಅವಕಾಶಕೊಡಬೇಕು ಎಂಬ ಚರ್ಚೆ ಎದ್ದಾಗ ವಾದ ವಿವಾದ, ಪರ ವಿರೋಧ ತೀವ್ರಗೊಂಡಾಗ ಖ್ಯಾತ ವ್ಯಂಗ್ಯ ಚಿತ್ರಕಾರ ಅಬು ಅಬ್ರಹಾಂ ‘ನಾಲ್ಕನೆಯ ಆಸ್ತಿ’ಯನ್ನು ನಾಲ್ಕನೇ ದರ್ಜೆಯ ಜನರ ಕೈಗೆ ಒಪ್ಪಿಸಬೇಕೇ? ಎನ್ನುವ ಪ್ರಶ್ನೆಯನ್ನು ಮುಂದು ಮಾಡಿದ್ದರು. ‘ವಿದೇಶಿ ಪತ್ರಿಕಾ ಸಂಸ್ಥೆಗಳಿಗೆ ಭಾರತ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ವಾದ ಮಾಡುತ್ತಿರುವವರಿಗೆ, ಇಂಗ್ಲೆಂಡ್ ನ ಪತ್ರಿಕೋದ್ಯಮ ಯಾವ ಸ್ಥಿತಿ ತಲುಪಿದೆ ಎಂದು ಅಧ್ಯಯನ ಮಾಡಲು ಇಂಗ್ಲೆಂಡಿಗೆ ಒಂದು ವಾರ ಭೇಟಿ ನೀಡಲು ನಾನು ಸಲಹೆ ಮಾಡುತ್ತೇನೆ. ಪ್ರಸಾರ ಮತ್ತು ಜಾಹಿರಾತಿಗಾಗಿ ಅಲ್ಲಿ ಎಂತಹ ಸ್ಪರ್ಧೆ ನಡೆದಿದೆ ಎಂದರೆ ಎಲ್ಲಾ ಪತ್ರಿಕೆಗಳು ಗಂಭೀರ ಸುದ್ದಿ ಮತ್ತು ವಿಶ್ಲೇಷಣೆ ನೀಡುವುದರ ಬದಲು ಮನರಂಜನೆಯಲ್ಲಿ ಮುಳುಗಿವೆ. ಎಲ್ಲವೂ ಗಂಭೀರತೆಯನ್ನು ಕಳೆದುಕೊಂಡಿವೆ. ಸಂಪಾದಕೀಯ ಪುಟಗಳು ಕಳೆಗೆಟ್ಟಿವೆ. ಸಂಪಾದಕೀಯಗಳೂ ತಮ್ಮ ಗಟ್ಟಿತನವನ್ನು ಕಳೆದುಕೊಂಡಿವೆ. ಪತ್ರಿಕೆಗಳ ನಡುವೆ ಏನಾದರೂ ವ್ಯತ್ಯಾಸವಿದ್ದರೆ ಅದು ಅದರ ಆಕಾರ ಮತ್ತು ಮುದ್ರಣದ ಶೈಲಿಯಲ್ಲಿ ಮಾತ್ರ. ಬ್ರಿಟಿಷ್ ಪತ್ರಿಕೋದ್ಯಮದ ಇಂದಿನ ಸ್ಥಿತಿಗೆ ಎಲ್ಲರೂ ಮುರ್ಡೋಕ್ ನತ್ತಲೇ ಬೊಟ್ಟುಮಾಡುತ್ತಾರೆ. ಇಂತಹ ಮುರ್ಡೋಕ್ ನನ್ನು ಇಲ್ಲಿಗೆ ಬಂದು ಪತ್ರಿಕೆಗಳನ್ನು ಆರಂಭಿಸುವಂತೆ ಆಹ್ವಾನ ನೀಡಬೇಕೆ? ಎಲ್ಲರನ್ನೂ ಆಘಾತಗೊಳಿಸುವಂತೆ ಆತ ಭಾರತದ ಪತ್ರಿಕೆಗಳ ರೀತಿಯನ್ನೇ ಬದಲಿಸಿಹಾಕುತ್ತಾನೆ. ಮ್ಯಾಕ್ಡೋನಾಲ್ಡ್ ತನ್ನ ಹ್ಯಾಂಬರ್ಗರ್ ಅನ್ನು ಮಾರಾಟ ಮಾಡಿದಂತೆ ಆತ ಪತ್ರಿಕೆಗಳನ್ನು ಮಾರುತ್ತಾನೆ’ ಎಂದು ಹೇಳಿದ್ದರು. ಜಾಗತೀಕರಣ, ಮುಕ್ತ ಅರ್ಥಿಕ ನೀತಿ, ಮಾಹಿತಿ ವಿತರಣೆ, ಮುಕ್ತ ಆಲೋಚನೆ ಹೆಸರಿನಲ್ಲಿ ನಾವು ನಮ್ಮ ನಾಲ್ಕನೆಯ ಆಸ್ತಿಯನ್ನು ನಾಲ್ಕನೇ ದರ್ಜೆಯ ಜನರ ಕೈಗಿಡುವುದು ಬೇಡ ಎನ್ನುವುದು ಅವರ ಸಲಹೆಯಾಗಿತ್ತು.

ಇಡೀ ವಾರ ಇಂಗ್ಲೆಂಡ್ ನ ಪತ್ರಿಕೋದ್ಯಮದಲ್ಲಿ ಎದ್ದಿರುವ ಬಿರುಗಾಳಿಯನ್ನು ನೋಡಿದರೆ ಅಬು ಹೇಳಿದ ಮಾತು ಎಷ್ಟು ನಿಜ ಎನ್ನುವುದು ಅರಿವಾಗುತ್ತದೆ. ಆಕ್ಸ್ ಫಾರ್ಡ್ ನಲ್ಲಿ ಪತ್ರಿಕೋದ್ಯಮ ಪದವಿ ಗಳಿಸಿ ಅಲ್ಲಿನ ‘ಡೈಲಿ ಎಕ್ಸ್ಪ್ರೆಸ್’ ನಲ್ಲಿ ಉಪ ಸಂಪಾದಕನಾಗಿದ್ದ. ಮುರ್ಡೋಕ್ ತಂದೆಗೆ ಆಸ್ಟ್ರೇಲಿಯಾದಲ್ಲಿ ಪತ್ರಿಕೆ, ರೇಡಿಯೋ ಸ್ಟೇಶನ್ ಗಳಿದ್ದವು. ತಂದೆ ಸತ್ತ ನಂತರ ಆಸ್ಟ್ರೇಲಿಯಾದ ಪತ್ರಿಕೆಗಳನ್ನು ಕೈಗೆತ್ತಿಕೊಂಡ. ಮುರ್ಡೋಕ್ ಗೆ ಇದ್ದ ಗುರಿ ಒಂದೇ- ಹೇಗಾದರೂ ಗೆಲ್ಲುವುದು. ಕೊಲೆ,ಸುಲಿಗೆ, ಅತ್ಯಾಚಾರ ಮೊದಲ ಪುಟದಿಂದ ಕೊನೆ ಪುಟದವರೆಗೆ ವ್ಯಾಪಿಸಿ ನಿಂತವು. ಮರಣಶಯ್ಯೆಯಲ್ಲಿದ್ದ ಪತ್ರಿಕೆಗಳು ಯಾವಾಗ ಲಾಭ ತಂದುಕೊಟ್ಟಿತೋ ಪತ್ರಿಕೆ ಎಂದರೆ ಹೀಗೇ ಇರಬೇಕು ಎನ್ನುವ ನಿಲುವಿಗೆ ಅಂಟಿಕೊಂಡರು. ಅಲ್ಲಿಂದ ಶುರುವಾಯಿತು ಮುರ್ಡೋಕ್ ಪತ್ರಿಕೋದ್ಯಮದ ದಂಡಯಾತ್ರೆ. ಆಸ್ಟ್ರೇಲಿಯಾದ ಒಂದೊಂದೇ ಪತ್ರಿಕೆ ಕೊಂಡು, ಪ್ರಸಾರ ಮಾಧ್ಯಮಗಳನ್ನು ನುಂಗಿಹಾಕುವ ವೇಳೆಗೆ ಇಂಗ್ಲೆಂಡ್ ನಲ್ಲಿ ‘ನ್ಯೂಸ್ ಆಫ್ ದಿ ವರ್ಲ್ಡ್’ ಮಾರಾಟಕ್ಕೆ ಬಂದು ನಿಂತಿತ್ತು.

ಪತ್ರಿಕೋದ್ಯಮಕ್ಕೆ ಮಾದರಿಯಾಗಿದ್ದ ‘ನ್ಯೂಸ್ ಆಫ್ ದಿ ವರ್ಲ್ಡ್’ಗೆ ಮುರ್ಡೋಕ್ ‘ತಮ್ಮದೇ ಟಚ್’ ನೀಡಿದರು. ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಶಿಸ್ತಿನ ಪತ್ರಿಕೆ ಕ್ರೈಂ ವರದಿಗಳ ಪತ್ರಿಕೆಯಾಗಿ ನಿಂತಿತ್ತು. ಕ್ರಿಮಿನಲ್ ಗಳ ಕಥೆ, ಬ್ರಿಟಿಷ್ ಸಂಪುಟ ಉರುಳಿಸಿದ ವೇಶ್ಯೆಯರ ಕಥೆ ಧಾರಾವಾಹಿಯಾಗಿ ಪ್ರಕಟವಾಯಿತು. ಈ ಮಧ್ಯೆ ದಿಡ್ಹೀರನೆ ಪತ್ರಿಕೆ ಬೆಲೆ ಇಳಿಸಿ ಸಮರ ನಡೆಸಲಾಯಿತು. ಈ ನ್ಯೂಸ್ ಆಫ್ ದಿ ವರ್ಲ್ಡ್ ಪತ್ರಿಕೆಯ ಲಾಭದ ಹತಾಶೆ ಪ್ರತಿ ದಿನವೂ ಒಂದಲ್ಲಾ ಒಂದು ಅತಿರಂಜಿತ , ಉದ್ರೇಕಕಾರಿ ಸುದ್ದಿಗೆ ಕೈ ಹಾಕುವಂತೆ ಮಾಡಿತು. ‘ಸಿಟಿಜನ್ ಕೇನ್’ ಸಿನೆಮಾದಲ್ಲಿ ಪತ್ರಿಕೆಗೆ ಅತಿರಂಜಿತ ಸುದ್ದಿ ಸಿಗದಾಗ ಮಾಲೀಕ ತಾನೇ ಕೊಲೆ ಮಾಡಿಸಿ ಸುದ್ದಿ ಮಾಡುವ ಸ್ಥಿತಿಗೆ ತಲುಪುವಂತೆ ನ್ಯೂಸ್ ಆಫ್ ದಿ ವರ್ಲ್ಡ್ ಕೂಡಾ ಬಂದು ತಲುಪಿತು. ಮಾರುಕಟ್ಟೆಗೆ ಇಳಿದರೆ ಸಾಕು ಹಾಟ್ ಕೇಕ್ ನಂತೆ ಮಾರಾಟವಾಗಿಬಿಡಬೇಕು, ಜೇಬು ತುಂಬಾ ಹಣ ತರಬೇಕು ಎನ್ನುವ ಕಾರಣಕ್ಕೇ ಕಂಡ ಕಂಡವರ ಫೋನ್ ಗಳನ್ನು ಕದ್ದಾಲಿಸಲಾಯಿತು. ಕಳ್ಳ ಮಾರ್ಗದಿಂದ ಕಂಪ್ಯೂಟರ್ ಮಾಹಿತಿಗಳನ್ನು ವಶಪದಿಸಿಕೊಳ್ಳಲಾಯಿತು. ಪೋಲೀಸ್ ಇಲಾಖೆಯನ್ನೇ ಬುಟ್ಟಿಗೆ ಹಾಕಿಕೊಳ್ಳಲಾಯಿತು. ದನಿ ಎತ್ತಿದವರನ್ನು ಬೆದರಿಸಲಾಯಿತು. ಈ ಎಲ್ಲವೂ ಈಗ ಬೆಳಕಿಗೆ ಬಂದು ಬಿಟ್ಟ ಕಾರಣಕ್ಕೇ ಮುರ್ಡೋಕ್ ಚಕ್ರಾಧಿಪತ್ಯ ಈಗ ಜಗತ್ತಿನ ಕಟಕಟೆಯಲ್ಲಿ ಬಂದು ನಿಂತಿದೆ.168-ವರ್ಷಗಳ ಇತಿಹಾಸವಿರುವ ನ್ಯೂಸ್ ಆಫ್ ದಿ ವರ್ಲ್ಡ್ ಪತ್ರಿಕೆ ಬಾಗಿಲು ಮುಚ್ಚಿದೆ. ಮುರ್ಡೋಕ್ ಬ್ರಿಟಿಷರ ಕ್ಷಮೆ ಯಾಚಿಸಿದ್ದಾರೆ. ಮುರ್ಡೋಕ್ ರತ್ತ ಬೂಟಿನ ಬದಲು ಕ್ರೀಂ ತಟ್ಟೆ ಎಸೆದು ಅವಮಾನ ಮಾಡಲಾಗಿದೆ. ಆದರೆ ಮುರ್ಡೋಕ್ ಸುಖಾಸುಮ್ಮನೆ ಸೋಲೋಪ್ಪಿಕೊಳ್ಳುವ ಪೈಕಿಯಲ್ಲ. ಕ್ಷಮೆ ಎನ್ನುವುದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಅಸ್ತ್ರ ಮಾತ್ರ.

‘ನಾನು ತಿಂಡಿಗೆ ಪುಸ್ತಕಗಳನ್ನೂ, ಊಟಕ್ಕೆ ಸ್ಯಾಟಲೈಟ್ ಟಿ ವಿ ಯನ್ನೂ ತಿನ್ನುತ್ತೇನೆ’ ಎಂದು ಘಂಟಾಘೋಷವಾಗಿ ಸಾರಿದ್ದ ಮುರ್ಡೋಕ್ ಇವತ್ತು ಜಗತ್ತಿನ ಮೂರನೇ ಒಂದು ಏನನ್ನು ಓದಬೇಕು, ಏನನ್ನು ನೋಡಬೇಕು, ಏನನ್ನು ಕೇಳಬೇಕು ಎಂದು ನಿರ್ಧರಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಇಂಗ್ಲಿಷ್ ನಿಂದ ಹಿಡಿದು ಹೀಬ್ರೂ ಭಾಷೆಯವರೆಗೆ, ದಿನಪತ್ರಿಕೆಯಿಂದ ಹಿಡಿದು ಪುಸ್ತಕ ಪ್ರಕಟನೆಯವರೆಗೆ, ಚಲನಚಿತ್ರಗಳಿಂದ ಹಿಡಿದು ಟಿ ವಿ ಯವರೆಗೆ, ಫಿಜಿಯಿಂದ ಹಿಡಿದು ಅಮೆರಿಕೆಯವರೆಗೆ, ರೇಸ್ ಪುಸ್ತಕದಿಂದ ಹಿಡಿದು ವಿಮಾನ ಯಾನದವರೆಗೆ, ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ಅಥವಾ ಗೋಳದ ತುಂಬೆಲ್ಲಾ ಮುರ್ಡೋಕ್ ತಮ್ಮ ಇರುವಿಕೆಯನ್ನು ಸಾರಿ ಬಿಟ್ಟಿದ್ದಾರೆ.

ಒಂದೆಡೆ ನೇರವಾಗಿ ಮುರ್ಡೋಕ್, ಇನ್ನೊಂದೆಡೆ ಮುರ್ಡೋಕ್ ನ ಲಾಭದಿಂದಾಗಿ ಅದೇ ಮಾದರಿಯನ್ನು ಅನುಸರಿಸುತ್ತಿರುವ ಮುರ್ಡೋಕ್ ಪ್ರತಿರೂಪಗಳು- ಈ ಎರಡನ್ನೂ ಭಾರತದ ಪತ್ರಿಕೋದ್ಯಮ ಕಾಣುತ್ತಿದೆ. ಲಾಭ ಬರುತ್ತದೆ ಎನ್ನುವುದಾದರೆ ಎಂತದ್ದಕ್ಕೂ ಸೈ ಎನ್ನುವ ಕಾಲ ಇಂಗ್ಲೆಂಡ್ ನಲ್ಲಿ ಮಾತ್ರವಲ್ಲ ಭಾರತಕ್ಕೂ ಬಂದಾಗಿದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲು ಮಾತ್ರ ಧೈರ್ಯವಿಲ್ಲ.

 

‍ಲೇಖಕರು G

July 25, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Badarinath Palavalli

    ಯಾವುದೇ ಉದ್ಯಮದಲ್ಲಿ ದಿಢೀರಾಗಿ ಮಿಂಚುವ ಪ್ರಭುತಿಗಳೆಲ್ಲ ಏನೇನಾಗಿ ಹೋದರು ಎಂಬುದು ಕಾಲವೇ ನಿರ್ಧರಿಸಿದೆ.
    ಪತ್ರಿಕೋಧ್ಯಮದ ಪಾತಿವ್ರ್ಯತೆಯನ್ನು ಹಾಳುಮಾಡುವ, ಆ ಮೂಲಕ yellow journalist ಗಳನ್ನು ಬೆಳೆಸುವ ಯಾರೇ ಆದರೂ ಶಿಕ್ಷಾರ್ಹರು.
    ಮುರ್ಡೋಕನ ಪತನ ಡೋಂಗೀ ಪತ್ರಕರ್ತರಿಗೆ ಒಳ್ಳೆ ಪಾಠವಾಗಲಿ.

    ಪ್ರತಿಕ್ರಿಯೆ
  2. sandhya

    Who will guard the guards?…. ಇದೇ ಬೆಳವಣಿಗೆ ಈಗ ಇಲ್ಲೂ ಸಹ ಕಾಣುತ್ತಿರುವುದು ದುರ೦ತ…

    ಪ್ರತಿಕ್ರಿಯೆ
  3. Keshav Kulkarni

    ಕನ್ನಡದ ಹಳದಿ ಪತ್ರಿಕೆಗಳು ಇಂಥಹ ಮಾದರಿಯನ್ನೇ ಅನ್ನುಸರಸಿ ದುಡ್ಡು ಮಾಡಿದ್ದು ನಮ್ಮ ಕಣ್ಮುಂದೆ ಇದೆ.

    ಪ್ರತಿಕ್ರಿಯೆ
  4. Subhash Hugar

    Good one, defenetly this is alaraming situation. everyone who involved in this profession need to introspect.

    ಪ್ರತಿಕ್ರಿಯೆ
  5. suvarna

    uppu thindavaru neeru kudiylee beku murdok agali mathhobbragali sir namaskara nanna hesaru suvarna nimma lekhanagalannu vijayakarnatakadalli ooduthhidde avu bahala muda needuthhiddavu aluru chandrashekar avaru avadi pathrike prichaya madisidaru eega avadiyannu dailly nooduthhene itis sooooo nice

    ಪ್ರತಿಕ್ರಿಯೆ
  6. Kallare

    Good One sirr…
    Seeds of Moral hazard – as termed by Michel Anteby.
    Nesting doll model applied to media – to describe murdoch’s case -for the first time?
    In a way, nimma article illina mediavannoo kooda ‘nest’olage sariyagi serside…

    ಪ್ರತಿಕ್ರಿಯೆ
  7. ushakirana

    todays indian journalism also iin same way …here also so many ropert murdoch s spoiling the ethics of journalism .in karnataka its starts from vijayasankeshwar

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: