ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಮ್ತಾಜ್ ಬೇಗಂ ಓದಿದ ‘ದೀವಟಿಗೆ’

ಡಾ ಮುಮ್ತಾಜ್ ಬೇಗಂ

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಪ್ಪತ್ತರ ದಶಕ ತುಂಬಾ ಮಹತ್ವದ ಕಾಲಘಟ್ಟವಾಗಿದೆ. ಅಲ್ಲಿಯವರೆಗೆ ಅಭಿವ್ಯಕ್ತಿಯಾಗದ ವಿಶಿಷ್ಟ ಸಂವೇದನೆಗಳು ಸಾಹಿತ್ಯ ಮುಖೇನ ಮೂಡಿ ಬಂದದ್ದು ವಿಶೇಷವಾಗಿದೆ. ದಲಿತ ಸಂವೇದನೆ, ಮುಸ್ಲಿಂ ಸಂವೇದನೆ, ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿಗೆ ಸ್ಥಾನ ದೊರಕಿದ್ದು ಈ ಕಾಲದಲ್ಲಿಯೆ. ಹೀಗಾಗಿ ಅನೇಕ ಮಹಿಳೆಯರು ಬರಹದಲ್ಲಿ ತೊಡಗಿಸಿಕೊಂಡರು, ಅಂತವರಲ್ಲಿ ಡಿ.ಬಿ.ರಜಿಯಾ ಅವರು ಪ್ರಮುಖರು.

ಡಿ.ಬಿ. ರಜಿಯಾರವರು ತುಂಬಾ ಸೂಕ್ಷ್ಮ ಸಂವೇದನೆಯ ಬರಹಗಾರ್ತಿ. ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ, ಅದನ್ನು ಮೆಲುದನಿಯಲ್ಲಿ ಹೇಳುವ ಕವಯತ್ರಿ. ಆಸಕ್ತಿಯ ಓದಿನ ಪರಿಣಾಮವಾಗಿ ಬರಹಲೋಕವನ್ನು ಪ್ರವೇಶಿಸಿದವರು. ಇದುವರೆಗೂ ಎಂಟು ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ್ದಾರೆ.

ಬದುಕಿನ ಒಳಮುಖದ ಪಯಣ, ಮಾನವೀಯತೆ, ಅಂತಃಕರಣ ಇವರ ಬರಹಗಳ ಮುಖ್ಯ ಕಾಳಜಿಯಾಗಿವೆ. ಜೀವನದ ಏಳು-ಬೀಳುಗಳ ಮಧ್ಯಯೂ ಸಮಚಿತ್ತದಿಂದ ಸಾಗುವ ಮನಸ್ಥಿತಿಯನ್ನು ಇವರ ಬರಹ ಅಭಿವ್ಯಕ್ತಿಸುತ್ತವೆ. ಮಹಿಳಾ ಪರವಾದ ಧ್ವನಿ ತಣ್ಣನೆಯ ಪ್ರತಿರೋಧವಿದ್ದು, ಪ್ರತಿಭಟನಾತ್ಮಕ ನೆಲೆಗೆ ತಲುಪುವುದಿಲ್ಲ.

ಇವರ ಕವಿತೆಗಳು ಬೌದ್ಧಿಕ ಕಸರತ್ತುಗಳಿಗಿಂತ ಭಾವನಾ ಪ್ರಧಾನತೆಗೆ ಹೆಚ್ಚು ಒತ್ತು ಕೊಡುತ್ತವೆ. ಸಮಾಜವನ್ನು ನೋಡುವ ನೋಟಕ್ರಮದಲ್ಲಿ ಸ್ವಕೇಂದ್ರೀತ ನೆಲೆಯಿಂದ ಸಾಮಾಜೀಕರಣಗೊಳ್ಳುವಾಗ ಅನುಭವಗಳು ಸಾರ್ವತ್ರಿಕವಾಗುತ್ತವೆ. ಪದಲೋಲುಪತೆ ಇಲ್ಲದೆ ಸಂವೇದನಾಶೀಲ ಅಭಿವ್ಯಕ್ತಿಯ ನೇಯ್ಗೆಯಲ್ಲಿ ಮೂಡಿ ಬಂದಿರುವ ಕವನಗಳು ಬದುಕನ್ನು ಮತ್ತಷ್ಟು ಚೈತನ್ಯಶೀಲವಾಗಿಸುವಲ್ಲಿ ಆಪ್ತವಾಗುತ್ತವೆ.

ಸಾಮಾಜಿಕ ಜಾಲಗಳ ಅಬ್ಬರದ ಮಧ್ಯ ಸಹೃದಯರು ಕಡಿಮೆ ಸಮಯದ ಮಿತಿಯಲ್ಲಿ ಓದಿ ಮುಗಿಸುವ ವಸ್ತುವಿಷಯವನ್ನು ಹೆಚ್ಚು ಬಯಸುತ್ತಾರೆ. ಹನಿ ಕವಿತೆಗಳ ಪ್ರಕಾರಕ್ಕೆ ಹೆಚ್ಚು ಲೈಕ್ ಕಮೆಂಟುಗಳು ಕೊಡುವ ಕಾಲದಲ್ಲಿದ್ದೇವೆ. ಆದ್ದರಿಂದ ಕಾಲದ ಆಸಕ್ತಿಗೆ ತಕ್ಕಂತ ಹನಿ ಕವಿತೆಗಳ ಸಂಕಲನವನ್ನು ಡಿ.ಬಿ. ರಜಿಯಾರವರು ದೀವಟಿಗೆ ಹೆಸರಿನಲ್ಲಿ ಕೃತಿ ಹೊರತಂದಿರುವುದು ಸಂತಸದ ಸಂಗತಿ.

ದೀವಟಿಗೆ ಸಂಕಲನದಲ್ಲಿ ಎಂಭತ್ತೆರಡು ಹನಿ ಕವಿತೆಗಳಿವೆ. ಈ ಸಂಕಲನದ ಹನಿಗವಿತೆಗಳಲ್ಲಿ ವಿಡಂಬನೆ, ವಿಷಾದ, ಬದುಕಿನ ಕಟುಸತ್ಯ, ವಾಸ್ತವಗಳ ಆತಂಕವಿದೆ. ಅಲ್ಲದೆ ಅದಕ್ಕೂ ಮಿಗಿಲಾಗಿ ಮಾತಿಗೂ ಮಿಗಿಲಾದ ಮೌನವಿದೆ. ಜೀವನ ಪ್ರೀತಿಯ ಹರಡುವ ಗುಣ ಇವರ ಹನಿ ಕವಿತೆಗಳಿಗಿದೆ.

ಬದುಕಿನ ಸಂಬ೦ಧಗಳ ನೇಯ್ಗೆ ತುಂಬಾ ಸೂಕ್ಷö್ಮವಾದದ್ದು, ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಿರಂತರವಾಗಿ ಇರಬೇಕು ಎಂಬುದು ಕವಯತ್ರಿಯ ಆಶಯವಾಗಿದೆ. ಜೀವನದ ನೋವು ನಲಿವುಗಳು ಕಾಲಸರಿದಂತೆ ಸದ್ದಿಲ್ಲದೆ ಸರಿದುಹೋಗುತ್ತವೆ. ಆ ಸತ್ಯವನ್ನು ಅರ್ಥೈಸಿಕೊಂಡು ಬದುಕಿದರೆ ಜೀವನ ಸುಂದರಗೊಳ್ಳಲು ಸಾಧ್ಯವೆಂಬ ಆಶಯಗಳನ್ನು ವ್ಯಕ್ತಪಡಿಸುತ್ತಾರೆ. ಬದುಕಿನ ವಾಸ್ತವದ ಸತ್ಯಗಳನ್ನು ಇವರ ಹನಿಗವಿತೆಗಳು ಸಶಕ್ತವಾಗಿ ಹಿಡಿದಿಡುತ್ತವೆ ಎನ್ನುವುದಕ್ಕೆ ಈ ಕೆಳಗಿನ ಕವಿತೆಯನ್ನು ನೋಡಬಹುದು
ಋತು ಚಕ್ರದ ಪರಿಧಿಗೆ
ಕವಲೊಡೆದ ಕರುಳ ಬಳ್ಳಿ
ಗೂಡು ಚದುರಿ
ಹಾರಿದ ಹಕ್ಕಿಗಳು..
ಬಾಳ ಪಯಣದೊಳು
ಹಂಚಿಹೋದ೦ತೆ
ವರ್ತಮಾನದ ಏಕಾಕಿತನಕ್ಕೆ
ಭೂತದ ಸ್ತಬ್ಧ ಚಿತ್ರಗಳೇ
ಈ ವಾತ್ಸಲ್ಯಗಳು?!
ಇಂದಿನ ಸಮಾಜದಲ್ಲಿ ತಂದೆ ತಾಯನ್ನು ಬಿಟ್ಟು ವಲಸೆ ಹೋದ ಎದೇಷ್ಟೋ ಮಕ್ಕಳು ಇದ್ದಾರೆ. ಇಳಿವಯಸ್ಸಿನಲ್ಲಿ ಮಕ್ಕಳೊಂದಿಗೆ ಇರಲಾದ, ಕೌಟುಂಬಿಕ ವಿಘಟಣೆಯಿಂದ ಅತಂತ್ರತೆ ಮತ್ತು ಅಭದ್ರತೆಯನ್ನು ಬದುಕಿನ ಮುಸಂಜೆಯಲ್ಲಿ ಈ ವೇದನೆಯನ್ನು ಅನುಭವಿಸುತ್ತಿರುವ ಅದೇಷ್ಟೋ ತಾಯ್ತಂದೆಯರಿದ್ದಾರೆ. ಅಂತವರ ನೋವು ವರ್ತಮಾನದ ಏಕಾಕಿತನಕ್ಕೆ ಭೂತದ ಸ್ತಬ್ಧ ಚಿತ್ರಗಳಂತೆ ವಾತ್ಸಲ್ಯ ತೋರಿದ ಕರಳು ಕುಡಿಗಳು ಕಾಣುತ್ತಿರುವುದು ಸುಡು ವಾಸ್ತವತೆಯನ್ನು ಚಿತ್ರಿಸುವಲ್ಲಿ ಕವಯತ್ರಿ ಯಶ ಕಂಡಿದ್ದಾರೆ.

ಕವಯತ್ರಿಯ ಕವಿತೆಗಳು ಯಾವುದೇ ಸಿದ್ಧಾಂತಗಳಿಗೆ ಬಂಧಿಯಾಗಿಲ್ಲ. ಶಾಂತ ಮನಸ್ಥಿತಿಯ ಧೋರಣೆಗಳನ್ನು ಅನುಭವದ ಮೂಸೆಯಲ್ಲಿ ಹೊಸೆದು ಪರಿಚಿತ ಲೋಕವನ್ನು ಅನಾವರಣಗೊಳಿಸುತ್ತವೆ. ಮನುಷ್ಯ ಮನುಷ್ಯನ ಮಧ್ಯೆದ ನಂಬಿಕೆಯೂ ಈಹೊತ್ತಿಗೆ ಸಾಕ್ಷಿಯನ್ನು ಕೇಳು ಕಾಲವಿದು. ಆದ್ದರಿಂದ ಯಾವುದೇ ನಯವಾದ ಮಾತನ್ನು ಹಿತವಾಗಿ ಸ್ವೀಕರಿಸುವಂತಿಲ್ಲ ಎನ್ನುವುದಕ್ಕೆ ಈ ಹನಿ ಕವಿತೆ ಸಾಕ್ಷಿ ನೀಡುತ್ತದೆ.
ಆ-ನಯವಾದ
ಮಾತು..
ಕೇಳಿದಾಗ;
ಗಾಬರಿಯಾಗುವೆ
ಮತ್ತೇನೊ ಮೋಡಿಯ
ಹೊಂಚು ಎಂಬ
ಅಳುಕಲ್ಲೇ-
ಎನ್ನುವಲ್ಲಿ ವಂಚನೆಯ ಮಾತುಗಳು ಎಲ್ಲಿ ಅಡಗಿವೆ ಎಂಬ ಸುಳಿವಿಲ್ಲದೆ ನಯವಾದ ಮುಖವಾಡ ಹಾಕಿಕೊಂಡು ವಂಚಿಸಿ ಬಿಡುವ ಕಾಲವಿದು ಎಂಬ ಎಚ್ಚರವನ್ನು ಕವಿತೆ ಧ್ವನಿಸುತ್ತದೆ.

ಹೆಣ್ಣು ಅನಾದಿಕಾಲದಿಂದಲೂ ಸ್ಥಾಪಿತ ಮೌಲ್ಯಗಳ ವಾರುಸುದಾರಿಕೆಯನ್ನು ತುಟಿಬಿಚ್ಚದೆ ರವಾನಿಸುತ್ತಲೇ ಬಂದಿದ್ದಾಳೆ. ವಾಸ್ತವದ ಸಂದರ್ಭದಲ್ಲಿ ಪುನರ್ ಮೌಲ್ಯಮಾಪನಕ್ಕೆ ಒಳಪಡಿಸಿದಾಗ ಎದುರಾಗುವ ಬಿಕ್ಕಟ್ಟುಗಳನ್ನು ಇಂದಿನ ಹೆಣ್ಣು ಅನುಭವಿಸುತ್ತಿರುವುದರ ಅರಿವು ಕವಿಯತ್ರಿಗೆ ಇದೆ.

ಈ ಒಲೆಯಲ್ಲಿ
ಬೆಂಕಿ
ಉರಿಯುತ್ತಲೇ ಇಲ್ಲ
ಮೇಲಿಟ್ಟ ಪಾತ್ರೆಯಲ್ಲಿ
ನನ್ನ ಹನಿ ಹನಿ ಭಾವನೆಗಳು
ಕಾಮನೆಗಳು
ಹಾಗೆ ಉಳಿದಿವೆ
ತಣ್ಣಗೆ
ಹೆಣ್ಣಿನ ನೋವಿನ ನೆಲೆಗಳು ಬದಲಾಗಿಲ್ಲ ಎಂಬುದನ್ನು ಕವಿತೆ ಧ್ವನಿಸುತ್ತದೆ. ಹೆಣ್ಣಿಗೆ ಇರಬಹುದಾದ ಅಭಿವ್ಯಕ್ತಿಯ ಅವಕಾಶಗಳನ್ನು ಪುರುಷಶಾಹಿತ್ವ ತನ್ನ ಹಿಡಿತದಲ್ಲಿ ಹಿಡಿದುಕೊಳ್ಳುವ ಮೂಲಕ ತಾನು ನಿರ್ದೇಶಿಸಿದಂತೆ ಅಭಿನಯಿಸಬೇಕೆಂದು ಬಯಸಿದ್ದೆ ಹೆಚ್ಚು. ಆದ್ದರಿಂದಲೇ ಓಲೆಯ ಮೇಲಿಟ್ಟ ಪಾತ್ರೆಯಲಿ ಬಿದ್ದ ಹನಿಗಳು, ಕಾಮನೆಗಳು ತಣ್ಣಗೆ ಹಾಗೆ ಉಳಿದಿವೆ ಎಂಬ ವಿಷಾದವನ್ನು ವ್ಯಕ್ತಪಡಿಸುತ್ತದೆ.

‘ಕಣ್ಣ ದೀವಿಗೆಯಲ್ಲಿ ನೀ ಹೊತ್ತಿಸಿದ ದೀಪ..ದೂರವಾದ ಹಾದಿಯವರೆಗೂ ಬೆಳಕಾಗೆ ನಡೇಸಿತು’. ಶತಮಾನಗಳ ಕಾಲ ಕತ್ತಲ ಜಗತ್ತನ್ನೆ ತನ್ನದೆಂದು ಬದುಕಿದ ಹೆಣ್ಣಿಗೆ ದೀವಟಿಗೆಯ ಅಗತ್ಯದ ಬಗ್ಗೆ ಕವಿತೆ ಮಾತನಾಡುತ್ತದೆ. ಶಿಕ್ಷಣವೆನ್ನುವ ದೀವಿಗೆ ಹೊತ್ತಿಸಬೇಕಾಗಿದೆ. ಆ ದೀಪದ ಬೆಳಕು ಹೆಣ್ಣಿನ ಬದುಕಿನಲ್ಲಿ ಹೊಸಬೆಳಕು ನೀಡುತ್ತದೆ ಎಂಬ ಭರವಸೆ ವ್ಯಕ್ತಪಡಿಸುತ್ತದೆ.
ಅಮ್ಮ ಉಟ್ಟ
ಆರು ಮೊಳದ ಸೀರೆ
ಅಕ್ಕನುಟ್ಟ ಗಾರ್ಡನ್
ಸ್ಯಾರಿಯೂ;
ಶುಷ್ಮಾಳು ತೊಟ್ಟ ಸಲ್ವಾರು
ಸಾಲು-ಸಾಲಾಗಿ ಬದಲಾಗುತ್ತಿದ್ದರೂ
ಬದಲಾಗಲಿಲ್ಲಾ
ಒಳ ಚಿಂತೆಯಲ್ಲಿ
ಒತ್ತಿಕೊ೦ಡ ‘ಹಳೆಯದೇ-ಸೀಲು’
ಮಹಿಳಾ ಸಂವೇದನೆಯ ವಾಸ್ತವದ ಸ್ಥಿತಿಯನ್ನು ಬಿಂಬಿಸುವ ಸಾಲುಗಳು; ಮಹಿಳೆಯ ಬದುಕು ಮತ್ತು ಆಕೆಯ ಬಗೆಗಿನ ನಿರ್ವಚನಗಳು ಇನ್ನೂ ಬದಲಾಗದ ಅವಸ್ಥೆಯಲ್ಲಿ ಇದ್ದೇವೆ. ಸಮ ಸಮಾಜದ ಕಲ್ಪನೆಯ ಅನುಷ್ಠಾನದ ಕುರಿತು ಮಾತನಾಡುವ ಸಮಾಜ, ಹೆಣ್ಣಿಗೆ ನೀಡಬೇಕಾದ ಸಮಾನತೆಯನ್ನು ನೀಡಿದೇಯಾ? ಎನ್ನುವ ಪ್ರಶ್ನೆಗೆ ಉತ್ತರ ಕೊಡಲು ಎಷ್ಟರ ಮಟ್ಟಿಗೆ ಈ ವ್ಯವಸ್ಥೆ ಸಿದ್ಧವಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಬದುಕಿನ ಸ್ಥಿತ್ಯಂತರದಲ್ಲಿ ಸಮಸ್ಯೆಗಳು ಪಲ್ಲಟಗಳನ್ನು ಹೊಂದಿವೆ. ಆದರೆ ಹೊಸ ಬಗೆಯ ಸಮಸ್ಯೆಗಳಲ್ಲಿ ಮತ್ತೆ ಬಳಲುತ್ತಿರುವುದನ್ನು ಕಾಣುತ್ತೇವೆ. ಆದ್ದರಿಂದ ಹೊರಗಿನ ಪಲ್ಲಟದ ಚಲನೆಗಳಿಂದ ಹೆಣ್ಣಿನ ಬದುಕು ಬದಲಾಗದು ಒಳಗಿನ ಮನೋವಿನ್ಯಾಸದ ಕ್ರಮಗಳು ಬದಲಾಗಬೇಕಾಗಿವೆ ಎಂಬ ಇಂಗಿತವನ್ನು ವ್ಯಕ್ತಪಡಿಸುತ್ತವೆ.

‘ನನ್ನ ಕಣ್ಣಿರು ನದಿಯಾಗಿ ಹರಿದು ಕಡಲ ಸೇರಿ ಮತ್ತೆ ಮಳೆಯಾಗಿ ಸುರಿದಿದ್ದು ಮರಭೂಮಿಯಲ್ಲಿ ಎಂಬ ಅರಿವಾಗುವಲ್ಲಿ ಮತಿಭ್ರಮಣೆಯಾಯಿತು’ ಎನ್ನುವಲ್ಲಿ ಕವಯತ್ರಿಗೆ ಈ ಸುಡು ವಾಸ್ತವದಲ್ಲಿ, ಬದುಕಿನ ವಿಪರ್ಯಾಸಗಳಲ್ಲಿ ತಲ್ಲಣದ ಬದುಕಿಗೆ ನೆಮ್ಮದಿಯ ನೆಲೆ ಇಲ್ಲದೇ ಮತ್ತೆ ಮತ್ತೆ ಪರಿತಪಿಸುವ ಹಪಹಪಿಯಿದೆ. ತನ್ನ ಕಣ್ಣಿರ ಹನಿಯೂ ನದಿಯಾಗಿ ಹರಿದು ಕಡಲ ಸೇರಿದರೆ ಹನಿಗೆ ಸಾರ್ಥಕ. ಆದರೆ ಮರಭೂಮಿಯಲ್ಲಿ ಭೋರ್ಗರೆದು ಮಳೆ ಸುರಿದರೆ ಪ್ರಯೋಜನ ಮತ್ತು ಪರಿಣಾಮಗಳೇನು ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದ್ದರಿಂದ ಹೆಣ್ಣಿನ ಬದುಕು ಯಾಜಮಾನ್ಯ ಧೋರಣೆಯ ಮರಭೂಮಿಯನ್ನು ಹಸಿರಾಗಿಸುವ ಪ್ರಯತ್ನ ಶತಮಾನಗಳಿಂದಲೂ ನಡೆದಿದೆ. ಅದರ ಫಲಾಫಲಗಳು ಎಷ್ಟು ಎಂಬ ಪ್ರಶ್ನೆಯನ್ನು ಕವಯತ್ರಿ ಸಹೃದಯರಿಗೆ ಬಿಟ್ಟುಕೊಡುತ್ತಾರೆ.

ರಜಿಯಾರವರ ಕವಿತೆಗಳು ನಿರಾಸೆಯ ನೆರಳಿನಲ್ಲೇ ಉಳಿದು ಹೋಗುತ್ತವೆ ಅಂತೇನು ಇಲ್ಲ. ‘ಗಾಯಕ್ಕೆ ಉಪ್ಪೆರಚಿದ್ದ ನಗೆಯ ವ್ಯಂಗ್ಯ ಗುರಿಯತ್ತ ಗಟ್ಟಿಗೊಳಿಸಿತು’ ಎನ್ನುವಲ್ಲಿ ಬದುಕಿನ ದೃಢ ನಿರ್ಧಾರದ ಸ್ಪಷ್ಟತೆ ಇದೆ. ನಡೆವ ನೆಲ, ತಲುಪುವ ಗುರಿಯ ಬಗ್ಗೆ ನಿಚ್ಛಳ ನಿಲುವಿದೆ. ಆದುದರಿಂದಲೇ ಬದುಕನ್ನು ಸದಾ ಪ್ರವಹಿಸುವ ನದಿಯಂತೆ ನಿರಂತರ ಕಾಪಾಡಿಕೊಂಡು ಗುರಿ ತಲುಪುವತ್ತ ಚಲನಶೀಲತ್ವವನ್ನು ಹೊಂದುವ೦ತೆ ಮನುಷ್ಯ ಬದುಕು ಸಾಗಬೇಕೆಂಬ ಆಶಾವಾದಿತನವನ್ನು ಕಾಣುತ್ತೇವೆ.

‘ಮಂದಿರ ಪ್ರವೇಶ ಮಾಡದೆ ಧರ್ಮಗ್ರಂಥ ಓದದೆ ಅಹಂ ಓಡಿಸಿದಾಗಲೇ ಮನಸ್ಸು ಪ್ರಜ್ವಲಿಸಿ ದೀಪ್ತಿಯಾಗುತ್ತದೆ. ರಜಿಯಾ ಅವರ ಕವಿತೆಗಳು ಮನುಷ್ಯ ಪ್ರೀತಿಯನ್ನು ಜತನ ಮಾಡಿಕೊಂಡು ಜೀವನ ಮೀಮಾಂಸೆಯನ್ನು ಅಭಿವ್ಯಕ್ತಿಸುತ್ತವೆ. ಅವರ ಕವಿತೆಗಳ ಒಟ್ಟು ಕೇಂದ್ರ ಆಶಯವೇ ಮನುಷ್ಯ ಬದುಕಿನ ಚಿಂತನೆಗಳು. ಸಮಾಜದ ಮೌಢ್ಯಗಳನ್ನು ಅಳಿಸಬೇಕಿದೆ, ವೈರುಧ್ಯದ ಅಭಿರುಚಿಯಲ್ಲಿ ಸೌಹಾರ್ದದ ಸಹಿಸುವಿಕೆ ಇದೆ. ಪಲ್ಲಟದ ಚಲನೆಯಲ್ಲಿ ಜಿಡ್ಡುಗಟ್ಟಿದ ಚಿಂತನೆಗಳ ಉಳಿದಿರುವುದರ ಬಗೆಗೆ ಆತಂಕವಿದೆ. ಕತ್ತಲನ್ನು ದಾಟಿ ಬೆಳಕಿಗೆ ಬದುಕನ್ನು ತೆರೆದುಕೊಳ್ಳಲು ಬೇಕಾದ ಕಾಳಜಿ ಇವೆ. ಆದ್ದರಿಂದ ರಜಿಯಾ ಅವರ ಕವಿತೆಗಳು ಅಬ್ಬರಿಸುವುದಿಲ್ಲ, ಪದಪುಂಜಗಳ ನರ್ತನವಿಲ್ಲ, ಆಡಂಬರದ ವೈಭವೀಕರಣವಿಲ್ಲ. ಬದಲಿಗೆ ತಣ್ಣನೆಯ ಒಳದನಿಯ ಪ್ರತಿರೋಧವಿದೆ. ಮನುಷ್ಯ ಬದುಕಿನ ಬಗೆಗೆ ಪ್ರೀತಿಯ ಕಾಳಜಿ ಅಪಾರವಾಗಿದೆ. ಬುದ್ದಿ ಪ್ರಧಾನತೆಗಿಂತ ಭಾವಪ್ರಧಾನತೆ ಎದ್ದು ಕಾಣುತ್ತದೆ. ಸ್ತ್ರೀ ಮನಸ್ಸಿನ ತಲ್ಲಣಗಳು ಸಶಕ್ತವಾಗಿ ಹನಿ ಕವಿತೆಗಳಲ್ಲಿ ಮೂಡಿ ಬಂದಿದೆ.

ವೈಯಕ್ತಿಕ ಪ್ರಜ್ಞೆಯ ನೆಲೆಗಳನ್ನು ಸಾಮುದಾಯಿಕ ನೆಲೆಗೆ ತೆಗೆದುಕೊಂಡು ಹೋಗುವಲ್ಲಿ ರಜಿಯಾ ಅವರ ವಿಶಿಷ್ಠ ಸಂವೇದನೆ ಯಶ ಕಾಣುತ್ತದೆ. ಆಧುನಿಕ ಮಹಿಳಾ ಸಂಕಟಗಳು, ಮೌಲ್ಯಗಳ ಕುಸಿತ, ಸಂಬ೦ಧಗಳ ಶೀಥಿಲತೆ, ಸಮ ಸಮಾಜದ ಕನಸುಗಳಿವೆ. ಸಮಾಜದಲ್ಲಿ ನಡೆವ ಅನಾಚಾರಗಳನ್ನು ತುಂಬಾ ಸೂಕ್ಷ್ಮವಾಗಿ ಪ್ರತಿರೋಧಿಸುವ ಧ್ವನಿಯನ್ನು ಅವರ ಕವಿತೆಗಳಲ್ಲಿ ಕಾಣುತ್ತೇವೆ. ಛಂದಸ್ಸು, ಪ್ರಾಸ, ಗಣಗಳ ಗೊಂದಲವಿಲ್ಲದೆ ಸರಳತೆ ಮತ್ತು ಆಪ್ತ ಓದಿನ ಕಾರಣಕ್ಕೆ ರಜಿಯಾರವರು ಓದುಗರನ್ನು ಬೇಗನೆ ತಲುಪುತ್ತಾರೆ.

‍ಲೇಖಕರು avadhi

7 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading