ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಧೋಳದಲ್ಲಿ ಡಾ ಶಿವಾನಂದ ಕುಬಸದ್ ಅವರ ಪುಸ್ತಕ ಬಿಡುಗಡೆ

ನಾಳೆ ಡಾ ಶಿವಾನಂದ ಕುಬಸದ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಇಲ್ಲಿದೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ಕವಿಯ ನುಡಿ


ನಿಮ್ಮೆದುರಿಗೆ….
ಹಲವು ವರ್ಷಗಳಿಂದ ನಾನು ಬರೆದ ಕವನಗಳನ್ನು ಪುಸ್ತಕ ರೂಪದಲ್ಲಿ ನಿಮ್ಮೆದುರು ಇಟ್ಟಿದ್ದೇನೆ. ನಾನು ವೈದ್ಯಕೀಯ ವಿದ್ಯಾಲಯದಲ್ಲಿ ಇದ್ದಾಗಿನಿಂದ ಇಲ್ಲಿಯವರೆಗೆ ಬರೆದ ಒಟ್ಟು ಕವನಗಳ ಮೊತ್ತ ಇದು. ಈ ಕವನಗಳು ಯಾವುದೇ ಒಂದು ಕಾವ್ಯ ಪ್ರಕಾರಕ್ಕೆ ಸೇರಿದವುಗಳಲ್ಲ. ಹಾಗಾಗಿ ಇವು ‘ಚೌಕಟ್ಟಿಲ್ಲದ ಚಿತ್ರಗಳಂತೆ.’ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಹೊರಹಾಕಲು ಕವನ ಆಕರ್ಷಕ ಮಾಧ್ಯಮ ಎಂದು ನನ್ನ ಭಾವನೆ. ಹೀಗಾಗಿ ಯಾವುದಾದರೊಂದು ಸಂತೋಷದ ಅಥವಾ ಖೇದದ ಬಾವ ಮೂಡಿದಾಗ, ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಷಣಕ್ಕಾಗಿ ಆಹ್ವಾನಿಸಿದಾಗ ನನ್ನ ಮಾತುಗಳಿಗೆ ರಮ್ಯತೆ ಬೆರೆಸಲೂ, ಮಾತಿಗೊಂದು ಚೆಂದದ ಅರ್ಥ ನೀಡಲೂ ನಾನು ಕಾವ್ಯದ ಮೊರೆ ಹೋಗಿದ್ದೇನೆ. ರಮ್ಯತೆ, ಗೇಯತೆ, ವಿಡಂಬನೆ, ಶೃಂಗಾರ, ಮನೋಲ್ಲಾಸ, ಮನೋರಂಜನೆ, ಮುಂತಾದವುಗಳಿಗೆ ಕಾವ್ಯದಂಥ ಮಾಧ್ಯಮ ಮತ್ತೊಂದಿರಲಾರದು ಎಂದೇ ನನ್ನ ಅನಿಸಿಕೆ.
ಇತ್ತೀಚಿಗೆ ನಾನು ‘ಫೇಸ್ಬುಕ್’ ನಲ್ಲಿ ನನ್ನ ‘ಖಾತೆ’ ತೆಗೆದ ನಂತರ ನನ್ನ ‘ಕಾವ್ಯಕೃಷಿ’ ಹುಲುಸಾಗಿ ಬೆಳೆಯಿತೆಂದೇ ಹೇಳಬೇಕು. ಕವನ ಬರೆದ ಮರುಗಳಿಗೆಯೇ ಫೇಸ್ಬುಕ್ನಲ್ಲಿ ಪ್ರಕಟಿಸುವುದು, ಅವುಗಳು ಕ್ಷಣ ಮಾತ್ರದಲ್ಲಿ ಜಗದಗಲ ಸಂಚರಿಸಿ ಮೂಲೆ ಮೂಲೆಯಲ್ಲಿರುವ ಸ್ನೇಹಿತರಿಗೆ ತಲುಪುವುದು, ಆಗಿಂದಾಗ್ಗೆ ಅವರಿಂದ ಬರುವ ಲೈಕ್ಗಳು, ಕಮೆಂಟ್ಗಳೂ ಒಂದು ರೀತಿಯಿಂದ ನನ್ನನ್ನು ಪುಸಲಾಯಿಸಿದುವೆಂದೇ ಹೇಳಬೇಕು. ಹಾಗೆ ನೋಡಿದರೆ ಈ ಕವನ ಸಂಕಲನಕ್ಕೆ ಹೆಸರು ಕೊಟ್ಟ ಕವನ ಇಷ್ಟು ಮಾಡಿದ್ದೇನೆ..!! ಎಂಬುದು ಕೂಡ ಫೇಸ್ಬುಕ್ನಲ್ಲಿ ಬಂದ ಒಂದು ‘ಸ್ಟೇಟಸ್’ನಿಂದ ಪ್ರೇರಿತವಾದುದು. ಹೀಗೆ ನಾನು ಫೇಸ್ಬುಕ್ನಲ್ಲಿ ಬರೆದ ಕಾವ್ಯಗಳೆ ಸುಮಾರು ಇಪ್ಪತ್ತೈದರಷ್ಟಿರಬೇಕು. ಫೇಸ್ಬುಕ್ ಬಗ್ಗೆ ಅದೆಷ್ಟೇ ನಿಮ್ನ ಅಭಿಪ್ರಾಯಗಳಿದ್ದರೂ ಅದೊಂದು ಅದ್ಭುತ ಮಾಧ್ಯಮ. ಅನೇಕ ಬಾರಿ ಫೇಸ್ಬುಕ್ನಲ್ಲಿ ಬರೆಯುವವರನ್ನು ಮುಖೇಡಿಗಳು ಎಂದು ಗೇಲಿ ಮಾಡುವವರನ್ನೂ ನೋಡಿದ್ದೇನೆ. ಒಳ್ಳೆಯ ಸಾಹಿತ್ಯಕ್ಕೆ ಇಂಥದೇ ಮಾಧ್ಯಮ ಇರಬೇಕು ಎಂದೇನೂ ಇಲ್ಲ. ಸಂದರ್ಭಕ್ಕೆ ತಕ್ಕಂತೆ ನಾವು ಬದಲಾಗಬೇಕಾದ್ದು ಅಗತ್ಯ ಎಂದುಕೊಳ್ಳುತ್ತೇನೆ. ಪತ್ರಿಕೆಗಳಲ್ಲಿ ಅಥವಾ ಕವನ ಸಂಕಲನದ ರೂಪದಲ್ಲಿ ಬಂದರೆ ಮಾತ್ರ ಅದು ಗುಣಮಟ್ಟದ ಸಾಹಿತ್ಯ ಎನ್ನುವುದಕ್ಕೆ ನನ್ನ ವಿರೋಧವಿದೆ.
ಇವುಗಳಲ್ಲಿ ಕೆಲವು ಕಾವ್ಯಗಳು ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ವಿಜಯ ಕರ್ನಾಟಕ, ಈ ಭಾನುವಾರ ಮುಂತಾದ ಪ್ರಿಂಟ್ ಮಾಧ್ಯಮಗಳಲ್ಲೂ; ಅವಧಿ ಎಂಬ ಇಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಪ್ರಕಟವಾಗಿವೆ. ಅಲ್ಲದೇ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ, ರಾಜ್ಯ ಸರಕಾರಿ ನೌಕರರ ಸ್ಮರಣ ಸಂಚಿಕೆ, ಸ್ವಾತಂತ್ರ್ಯ ಸ್ವರ್ಣಮಹೋತ್ಸವಕ್ಕಾಗಿ ಮುಧೋಳ ತಾಲೂಕಿನ ಕವಿಗಳಿಂದ ರಚಿತವಾದ ಕವನ ಸಂಕಲನದಲ್ಲೂ ಪ್ರಕಟವಾಗಿವೆ. ಅವರಿಗೆಲ್ಲ ನಾನು ಋಣಿಯಾಗಿದ್ದೇನೆ.
ಇಷ್ಟು ಮಾಡಿದ್ದೇನೆ..!! ಎಂದು ನಾನು ಈ ಸಂಕಲನಕ್ಕೆ ಹೆಸರಿಸಿರುವುದು ಎರಡು ಉದ್ದೇಶಗಳಿಗಾಗಿ. ಮೊದಲನೆಯದಾಗಿ, ನಾನು ವೈದ್ಯವೃತ್ತಿಯಲ್ಲಿ ಈ ತನಕ ಮಾಡಿದ್ದನ್ನು ಧ್ವನಿಸುವ ಕವನವದು. ಅದು ‘ಇಷ್ಟೆಲ್ಲಾ ಮಾಡಿದ್ದೇನೆ’ ಎನ್ನುವುದಕ್ಕಿಂತ ‘ನಾನು ಇಷ್ಟೇ ಮಾಡಿದೆ, ಇನ್ನಷ್ಟು ಮಾಡಬಹುದಿತ್ತೇನೋ..?’ ಎನ್ನುವ ನನ್ನ ಭಾವನೆಯನ್ನೇ ಹೇಳುತ್ತದೆ. ಎರಡನೆಯದಾಗಿ ನನ್ನ ಕಾವ್ಯಪ್ರವೃತ್ತಿಗೂ ಕೂಡ ನಾನು ಅದನ್ನೇ ಅನ್ವಯಿಸಬಯಸುತ್ತೇನೆ.
ಕವನ ಸಂಕಲನದ ಪ್ರಕಟಿಸುವುದು ನನ್ನ ಆಶಯವಾಗಿರಲಿಲ್ಲ. ಮನತೃಪ್ತಿಗಾಗಿ ಬರೆಯುವುದು ಮತ್ತೆ ಗೆಳೆಯರೆದುರಿಗೆ, ಮನೆಯವರೆದುರಿಗೆ ಹಾಗೂ ಸಭೆಗಳಲ್ಲಿ ಓದಿ ಖುಷಿ ಪಡುವುದಕ್ಕಷ್ಟೇ ನನ್ನ ಕವನಗಳು ಸೀಮಿತವಾಗಿದ್ದವು. ಆದರೆ ಸಂಗಮೇಶ ಕೋಟಿ ಹಾಗೂ ಇನ್ನಿತರ ಅನೇಕರ ಒತ್ತಾಸೆಗೆ ಮಣಿದು ಈ ಸಂಕಲನವನ್ನು ಪ್ರಕಟಿಸುವ ಧೈರ್ಯ ಮಾಡುತ್ತಿದ್ದೇನೆ. ಒಂದಿಷ್ಟು ಜನ ಕಾವ್ಯಪ್ರಿಯರು ಓದಿದರೆ ಇದನ್ನು ಪ್ರಿಂಟಿಸಿದ್ದು ಸಾರ್ಥಕ.
ಈ ಕವನಸಂಕಲನ ಪ್ರಕಟಗೊಳ್ಳುವ ವೇಳೆ ನಾನು ಹಲವರನ್ನು ಕೃತಜ್ಞತೆಯಿಂದ ನೆನೆಯುವುದು ನನ್ನ ಕರ್ತವ್ಯ.
ಈ ಸಂಕಲನಕ್ಕೆ ‘ಬೆನ್ನುಡಿ’ ಬರೆದು ನನ್ನ ಸಾಹಿತ್ಯ ಕೃಷಿಗೆ ಬೆನ್ನುಲುಬಾಗಿರುವ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಗೆಳೆಯ ಸಂಗಮೇಶ ಕೋಟಿಯವರನ್ನು,
ತಮ್ಮ ಅವಿರತ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಪ್ರೀತಿಯಿಂದ ನನ್ನ ಕವನಗಳನ್ನು ಓದಿ, ಆತ್ಮೀಯ, ಅರ್ಥಪೂರ್ಣ ‘ಮುನ್ನುಡಿ’ ಬರೆದು ಕೊಟ್ಟ, ಹಿರಿಯ ಸಾಹಿತಿ, ಕವಿ, ಜಮಖಂಡಿ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷ ಸಿದ್ಧರಾಜ ಪೂಜಾರಿ ಅವರನ್ನು,
ಬಿಡದೇ ಬೆನ್ನುಹತ್ತಿ ಪ್ರೊತ್ಸಾಹಿಸಿ, ತಮ್ಮ ಪ್ರಕಾಶನದಲ್ಲೇ ನನ್ನ ಕವನ ಸಂಕಲನ ಪ್ರಕಟಿಸಿದ, ‘ಸಂಗಮ ಪ್ರಕಾಶನ’ದ ಸಂಚಾಲಕರು ಹಾಗೂ ಕರ್ನಾಟಕ ನಾಟಕ ಅಕಾಡಮಿ ಸದಸ್ಯರೂ ಆದ ಗೆಳೆಯ ಎಸ್. ಕೆ. ಕೊನೆಸಾಗರ್ ಅವರನ್ನು,
ಅಂದದ ಮುಖಪುಟ ಬರೆದ ‘ಪ್ರಜಾವಾಣಿ’ ಕಲಾವಿದ ಶಿವಲಿಂಗಪ್ಪ ಹೂಗಾರ ಅವರನ್ನು,
ಅಚ್ಚಿಗೆ ಹೋಗುವ ಮೊದಲು ಕವನಗಳನ್ನು ಓದಿ, ಅಭಿಪ್ರಾಯ ತಿಳಿಸಿ, ಸಲಹೆ ನೀಡಿದ ಕನ್ನಡದ ‘ಗಜಲ್’ ಕವಿ ಕನಕಗಿರಿ ಅಲ್ಲಾಗಿರಿರಾಜ ಅವರನ್ನು,
ನನ್ನ ಕವನಗಳನ್ನು ‘ಅಪ್ಲೋಡ್’ ಮಾಡಿದ ಮರುಗಳಿಗೆಯೇ ನೋಡಿ, ಓದಿ, ಲೈಕಿಸಿ, ಕಮೆಂಟಿಸಿ ಪ್ರೋತ್ಸಾಹಿಸಿ, ನನ್ನ ಅನೇಕ ಕವನಗಳಿಗೆ ಪ್ರೇರಣೆಯಾದ ಎಲ್ಲ ಫೇಸ್ಬುಕ್ ಗೆಳೆಯರನ್ನು, ಕವನ ಬರೆಯಲು ‘ಅನುಮತಿ’ ನೀಡಿ, ನಾನದನ್ನು ಓದುವಾಗ ಆಸಕ್ತಿಯಿಂದ ಆಲಿಸಿ ಪ್ರೋತ್ಸಾಹಿಸಿದ ಮಡದಿ ಕಮಲಳನ್ನು, ನನ್ನ ಕವನಗಳನ್ನು ಓದಿ ಬೆರಗುಗೊಂಡು ಮೆಚ್ಚುಗೆ ವ್ಯಕ್ತಪಡಿಸಿದ ಮಗಳು ವಿದ್ಯಾ, ಅಳಿಯ ಅನಿಲ, ಮಗ ಅನುಪ, ಸೊಸೆ ದೀಪಾರನ್ನು ಅಲ್ಲದೆ ನನ್ನ ಸೋದರರಾದ ಶಿವಶಂಕರ, ಸಂಗಮೇಶ, ಸೋದರಿಯರಾದ ಗಂಗಾ, ಶಾಂತಾ ಹಾಗೂ ಅವರ ಮನೆಯವರನ್ನು, ನಮ್ಮ ಆಸ್ಪತ್ರೆಯ ಸಿಬ್ಬಂದಿ ವರ್ಗದವರನ್ನು ಮನತುಂಬಿ ನೆನಯುತ್ತೇನೆ.
ವೈದ್ಯರ ದಿನ, 2014
-ಡಾ.ಶಿವಾನಂದ ಕುಬಸದ
ಮುಧೋಳ
 

‍ಲೇಖಕರು G

2 August, 2014

8 Comments

  1. lakshmikanth itnal

    ಪ್ರಾಮಾಣಿಕ ಪ್ರಾಂಜಲ ಮನದ ಅನಿಸಿಕೆಗಳು, ಆಪ್ತತೆ ಸೂಸುತ್ತವೆ, ಕಾರ್ಯಕ್ರಮ ಯಶಸ್ವಿಯಾಗಲಿ, ಪುಸ್ತಿಕೆ ನಮ್ಮಂತಹ ಎಲ್ಲ ಓದುಗರ ಕೈಲಿ ಸಿಗುವಂತಾಗಲಿ ಎಂಬೀ ಹಾರೈಕೆಯೊಂದಿಗೆ…ಅಭಿನಂದನೆಗಳು ಡಾ. ಕುಬಸದ್ ಜಿ.

  2. ಡಾ.ಶಿವಾನಂದ ಕುಬಸದ

    ದಯವಿಟ್ಟು ಗಮನಿಸಿ…
    ಪುಸ್ತಕಾವಲೋಕನದ ದಿನಾಂಕ ..
    10-೦೮-೨೦೧೪ ರವಿವಾರ

  3. ಡಾ.ಶಿವಾನಂದ ಕುಬಸದ

    ಧನ್ಯವಾದಗಳು..ಲಕ್ಷ್ಮಿಕಾಂತ ಇಟ್ನಾಳ ರವರೆ..

  4. Suresh Rajamane, ranna belagali

    ವೈದ್ಯ ಲೋಕಕ್ಕೊಂದು ಸಾಹಿತ್ಯದ ಸವಿರುಚಿ ಉಣಿಸುವ ಟಾನಿಕ್ ಆಗಲಿ..
    ನಿಮ್ಮ ಕವಿತೆಗಳ ಈ ಗುಚ್ಚ
    ಅದರಲ್ಲಿರುವ ಕವಿತೆಗಳಿರಬಹುದು…
    ನಿಜ ನಿಮ್ಮ ಮನಸಿನಷ್ಟೇ ಸ್ವಚ್ಚ..
    ನಾನು ನೀವು
    ಅಕ್ಕಪಕ್ಕದಲ್ಲೇ ಇದ್ದರೂ ಆಪ್ತರಾಗಲು ಅಂತರ್ಜಾಲವೇ ಅದರಲ್ಲೂ ಈ ಮುಖಪುಸ್ತಕವೇ ಕಾರಣ
    ನಿಮ್ಮಂತ ಸಹಿತಿಗಳನ್ನು ಸಾಹಿತ್ಯದ ಆರಾಧಕರನ್ನು ಪರಿಚಯಿಸಿದ ಅದಕ್ಕೆ ನನ್ನ ಧನ್ಯವಾದಗಳು.
    ನಿಮಗೆ
    ಅಭಿನಂದನೆಗಳು ಸರ್..
    =ಸೂರ್ಯ*
    ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

  5. Suresh Rajamane, ranna belagali

    ಕ್ಷಮೆ ಇರಲಿ ಅದರಲ್ಲಿ ಸಹಿತಿ ಅಂತ ಟೈಪಾಗಿದೆ ಅದು ಸಾಹಿತಿಗಳನ್ನು..ಅಂತ

  6. Anonymous

    Well dun Uncle, Ur Grate, Not only in ur Field, Ur Grate Poet & Aswell as Grate Humanbeing, Also, If Possible We came to that Function, on 10/8/14..

  7. mmshaik

    haarykegalondige shubhvaagali..

  8. ಹನಮಂತ ಹಾಲಿಗೇರಿ

    ಬರಲು ಪ್ರಯತ್ನಿಸುತ್ತಿನಿ ಸರ್. ನಿಮ್ಮ ಮಾತುಗಳು ತುಂಬಾ ಆಪ್ತತೆಯಿಂದ ಕೂಡಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading