'ಮುತ್ತುಪ್ಪಾಡಿ'ಯ ಕನ್ನಡಿಯಲ್ಲಿ ಕಂಡ ಬೊಳುವಾರು

ಜಿ ಎನ್ ಮೋಹನ್
ಅಲ್ಲಿ ಅವರು ಸಿಕ್ಕರು..

ಕಲ್ಲು ಬೆಂಚಿನ ಮೇಲೆ ಕತೆ ಹೇಳುತ್ತಾ ಕುಳಿತ ಮುದುಕ, ಅದ್ರಾಮನ ಅಜ್ಜಿ ಪಾತುಮ್ಮ, ಆಕೆಯ ಮಗ ಖಾದರ್, ಜೊತೆಗೆ ಹಾಲೀಮಾ, ಸಖೀನಾ, ನಾಲ್ಕು ಮಕ್ಕಳ ತಾಯಿ- ವಿಧವೆ ಸಾರಮ್ಮ, ರೈಟರ್ ವೆಂಕಣ್ಣ, ‘ವಲು’ ಮುಗಿಸಿ ಬಸಳೆ ಗಿಡದ ಬಳಿ ತುಸು ಬಾಗಿ ಅಂಗಳ ಹತ್ತುವ ಮೂಸಜ್ಜ, ಮನೆಗೆಲಸದ ಹೆಂಗಸಿಗೆ ಬುತ್ತಿ ಕಟ್ಟಿ ಕಳಿಸುತ್ತಿರುವ ಕೈಜಮ್ಮ, ವರ್ಷಾನುಗಟ್ಟಲೆ ಉರುಳಿ ಎಲ್ಲ ಮರೆತು ಹೋಗೇ ಹೋಯಿತು ಎನ್ನುವಾಗ ಹಾಜರಾದ ಬದ್ರುದ್ದೀನ್, ಆಕರ್ಷಕ ಉಬ್ಬು ತಗ್ಗಿನ ಚೆಲುವೆ ರುಖಿಯಾ, ಹೋದ ಬಂದ ಗಾಡಿಗಳ ಹಿಂದೆಲ್ಲ ಓಡುವ- ತೋಟ ಮತ್ತು ಮನೆಯ ಕಾವಲುಗಾರ ‘ಚುಮ್ಮಿ’, ಎಲ್ಲಿ ತನ್ನ ಗುಡಿಸಲು ಕೀಳುತ್ತಾರೋ ಎಂದು ಆತಂಕದಲ್ಲಿ ಕೂತಿರುವ ಕೂಸಮ್ಮ, ದೇವರಾಜ ಅರಸು ಅವರೇ ಕನಸಲ್ಲಿ ಬಂದು ಏನು ಪಾತುಮ್ಮ ಎಂದು ವಿಚಾರಿಸಿಕೊಂಡ ಪಾತುಮ್ಮ, ತಿಜೋರಿಯ ತಲೆ ಸವರಿ ಆಗ ತಾನೇ ಮುಖ ಮೇಲೆತ್ತಿರುವ ಶ್ರೀನಿವಾಸ ಆಚಾರ್ಯರು, ರಾಮದಾಸ ಕಿಣಿಗಳು, ಕರಸೇವೆಗೆ ಹೋಗಿ ಬಂದಿರುವ ಚಂದ್ರಣ್ಣ.. ರೊಟ್ಟಿ ಪಾತುಮ್ಮ..

.. ಮುಬಾರಕ್ ಟೂರ್ ಅಂಡ್ ಟ್ರಾವಲ್ಸ್ ನ ಕಾಸಿಂ ಭಾವಾ, ಅನ್ ಎಂಪ್ಲಾಯ್ಡ್ ಗ್ರಾಜುಯೇಟ್ ಆರ್ ಸದಾಶಿವ, ಪಕಪಕನೆ ಸ್ವರವೆಬ್ಬಿಸಿ ನಗುವ ಕೇಶವಾಚಾರ್ಯರು, ಗಣೇಶ ಕ್ಲಾಥ್ ಎಂಪೋರಿಯಂ ನ ಗೋಪಾಲ ಕೃಷ್ಣ ಕಾಮತ್, ರಹಮತ್ ಕ್ಲಾಥ್ ಸೆಂಟರ್ ನ ಸುಲೇಮಾನ್ ಸಾಹುಕಾರ್, ಜನ್ನಾತುಲ್ ಫಿರ್ದೋಸ್ ಅತ್ತರಿನ ಪರಿಮಳದ ಅದ್ರಾಮ ಬ್ಯಾರಿ, ಕವಡೆ ಚೆಲ್ಲಿ ಕೂತಿರುವ ಸುಬ್ರಾಯ ಜೋಯಿಸರು…ಹೀಗೆ ಅವರೆಲ್ಲರೂ ಸಿಕ್ಕರು.

ಬಹುಷಃ ಸುಮಾರು ವರ್ಷಗಳೇ ಆಗಿ ಹೋಗಿತ್ತು. ಆ ಕಡೆ ಹೋಗಿ. ಹಿಂದೆ ಅವರ ಜೊತೆಯೇ ಬದುಕುತಿದ್ದ ನನಗೆ ಈ ನಡುವೆ ನೂರೆಂಟು ಕೆಲಸಗಳು, ತರಲೆ ತರದೂದುಗಳು. ಹಾಗಾಗಿ ಇವರತ್ತ ಹೋಗುವ, ಕೈ ಕುಲುಕುವ, ಮಾತನಾಡಿಸುವ, ಒಂದು ಮುಗುಳ್ನಗು ಎಸೆದು ಬರುವ ಸಮಯವೇ ಬಂದಿರಲಿಲ್ಲ.

ಮೊನ್ನೆ ಇದ್ದಕ್ಕಿದ್ದಂತೆ ಯಾಕೋ ಇವರನ್ನೆಲ್ಲಾ ಒಂದು ರೌಂಡು ಕಂಡು ಬಂದೇಬಿಡಬೇಕು ಅನಿಸಿತು. ಹಾಗೆ ಅನಿಸುವುದಕ್ಕೂ ಕಾರಣ ಇತ್ತು. ಮೊದಲೇ ಹೇಳಿ ಕೇಳಿ ಕಡಲ ಬದಿಯ ಊರು ಅದು. ಕಡಲೇ ಊರನ್ನು ಮುಕ್ಕಿ ಹಾಕಬಹುದು ಇಲ್ಲಾ ಈಗ ದಿನದಿನವೂ ಉಕ್ಕುವ ವಿಷಯಗಳೇ ಸಾಕು ಯಾರನ್ನು ಬೇಕಾದರೂ ಕೊಚ್ಚಿ ಹಾಕಬಹುದು, ಇಲ್ಲಾ ಅಲ್ಲಿರುವ ಎಷ್ಟೋ ಜನ ಆಗಲೇ ರೈಟರ್ ವೆಂಕಣ್ಣ ಕೊಡಿಸಿದ ಊರುಗೋಲು ಇದ್ದರೂ ಎದ್ದೇಳಲು ಕಷ್ಟಪಡುತ್ತಿರುವವರು, ಮನೆಯ ಬಾಗಿಲಿಗೆ ಬಂದು ಜನ ನಿಂತರೂ ಗುರುತಿಸಲು ಆಗದಷ್ಟು ಕಣ್ಣು ಮಂಜಾದವರು ಹಾಗಾಗಿ ಅವರ ಆಯಸ್ಸು ಎಷ್ಟೋ ಎನ್ನುವ ಚಿಂತೆ..

ಹಾಗಾಗಿ ಹೋಗಿ ಬಂದೇ ಬಿಡುವ.. ಎಂದು ಹೊರಟೆ
ಹ್ಞೂ.. ಹೋಗಿ ಎಲ್ಲರನ್ನೂ ಮಾತಾಡಿಸಿ ಇನ್ನೇನು ಹೊರಬೇಕು ಎನ್ನುವಾಗ ಈ ಸುದ್ದಿ ಬಂದುಬಿಡಬೇಕೆ..!!
ಬೊಳುವಾರು ಅಣ್ಣನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಂತೆ ಅಂತ

ಆ ಅದ್ರಾಮ, ಆ ಜೋಯಿಸರು, ಆ ರುಖಿಯಾ, ಆ ಆಚಾರ್ಯರು, ಕೂಸಮ್ಮ, ಪಾತುಮ್ಮ, ಸದಾಶಿವ ಎಲ್ಲರೂ ‘ಹೋ’ ಎನ್ನುತ್ತಾ ದನಿ ಎತ್ತಿಯೇ ಬಿಟ್ಟರು. ನೋಡ ನೋಡುತ್ತಿದ್ದಂತೆ ಆ ಊರಿಗೆ ಊರೇ ಖುಷ್ ಆಗಿ ಹೋಯಿತು. ಒಂದಷ್ಟು ಮನೆಯಲ್ಲಿ ಖೀರು, ಇನ್ನೊಂದಿಷ್ಟು ಮನೆಯಲ್ಲಿ ವೆಂಕಟರಮಣ ಮುಂದೆ ಇಟ್ಟ ಪ್ರಸಾದ, ಚರ್ಚ್ ನಲ್ಲಿ ವೈನ್ ನಲ್ಲಿ ಅದ್ದಿದ ಬಿಸ್ಕತ್ತು.. ಹೀಗೆ ಕೈ ಬದಲಾದವು. ಎಲ್ಲರೂ ಬೊಳುವಾರು ಅಣ್ಣನಿಗೆ ಮನಸ್ಸಿನಲ್ಲಿಯೇ ಒಂದು ಸಲಾಮ್ ಹಾಕಿದರು.

ಅಷ್ಟು ದೊಡ್ಡ ಸಂಭ್ರಮ ಯಾಕೆಂದರೆ ನಾನಿದ್ದದ್ದು ‘ಮುತ್ತುಪ್ಪಾಡಿ’ಯಲ್ಲಿ. ಅವರೆಲ್ಲರೂ ಆ ಬೊಳುವಾರು ಮಹಮದ್ ಕುಂಇ ವರ್ಷಾನುಗಟ್ಟಲೆ ತಾಳ್ಮೆಯಿಂದ, ಸಂತಸದಿಂದ, ಸಿಡುಕಿನಿಂದ, ಕಣ್ಣೀರಿನಿಂದ, ತಮಾಷೆಯಿಂದ ಸೃಷ್ಟಿಸಿದ ಪಾತ್ರಗಳು. ಬೊಳುವಾರು ಮಹಮದ್ ಕುಂಇ ತಾನು ಹಿಂದೆ ಎಂದೋ ಬರೆದ ‘ಸ್ವಾತಂತ್ರ್ಯದ ಓಟ’ ಎನ್ನುವ, ‘ಒಂದು ತುಂಡು ಗೋಡೆ’ಯಲ್ಲಿ ಬಚ್ಚಿಟ್ಟುಕೊಂಡಿದ್ದ ಕಥೆ ತನ್ನ ಎದೆಯನ್ನು ಒತ್ತುತ್ತಿದೆ, ರಾತ್ರಿ ನಿದ್ದೆ ಮಾಡಲೂ ಬಿಡುತ್ತಿಲ್ಲ, ಸರೀಕರೊಂದಿಗೆ ಕುಶಾಲು ಮಾತಾಡುವಾಗಲೂ ಬಂದು ಯಾಕೋ ನನ್ನ ಕೈ ಜಗ್ಗುತ್ತಿದೆ ಎಂದು ಅನಿಸಿ ಇದರಿಂದ ಪಾರಾಗಲೇಬೇಕು ಎಂದು ಎರಡು ವರ್ಷಕ್ಕೂ ಹೆಚ್ಚು ಕಾಲ ಬರೆದ, ಬರೆಯುವಾಗಲೇ ಸುಮಾರು ೨೪ ಮಂದಿ ಓದಿ ತಾವೂ ಈ ಕೃತಿ ಸೃಷ್ಟಿಸುವ ಸಂಭ್ರಮದಲ್ಲಿ ಮುಳುಗಿದ ಕೃತಿ ಇದು. ಹಾಗಾಗಿ ಆ ಕೃತಿಗೆ ಪ್ರಶಸ್ತಿ ಎಂದರೆ ಮುತ್ತುಪ್ಪಾಡಿಯ ಜನರೆಲ್ಲಾ ಯಾಕೆ ಬಿಟ್ಟಾರು..

ದಿವ್ಯ ಕುರಾನ್ ನ ಶೈಲಿಯ ಮುಖಪುಟ ಹೊತ್ತು ಸರಿಯಾಗಿ ೧೧೧೧ ಪುಟಗಳ ಈ ಕೃತಿ ೨೦೧೨ ರಲ್ಲಿ ಮಾರುಕಟ್ಟೆಗೆ ಬಂದಾಗ ಅದರ ಗಾತ್ರಕ್ಕೆ ಪುಸ್ತಕ ಕೊಳ್ಳುವವರಿರಲಿ, ಅಂಗಡಿಗಳವರೇ ಹೌಹಾರಿ ಹೋಗಿದ್ದರು. ಪ್ರಕಾಶಕರ ಮಾತು ಬಿಡಿ.. ಹಾಗಾಗಿ ‘ಮುತ್ತುಪ್ಪಾಡಿ ಪುಸ್ತಕ’ ಎನ್ನುವ ಹೆಸರಿನಲ್ಲಿಯೇ ‘ಸ್ವಾತಂತ್ರ್ಯದ ಓಟ’ ಹೊರಬಂತು.

“ನನ್ನ ಈ ಪುಸ್ತಕವೂ ಎರಡು ಮುದ್ರಣ ಮುಗಿಸಿ ಮೂರನೆಯದ್ದಕ್ಕೆ ಕಾಲಿಡುತ್ತಿದೆ” ಎನ್ನುವಾಗ ಬೊಳುವಾರರ ದನಿಯಲ್ಲಿದ್ದ ಆ ಸಂತಸವನ್ನು ಒಮ್ಮೆ ಸ್ಪರ್ಶಿಸಬೇಕು ಎಂದು ನನಗೆ ಅನಿಸಿಹೋಯಿತು. ಆದರೆ ಮರುನಿಮಿಷವೇ ಅವರ ದನಿಯಲ್ಲಿ ಒಂದು ವಿಷಾದ ಭಾವವೂ ಕಾಣಿಸಿತು. “ಇದನ್ನು ನಮ್ಮ ಸಾಹಿತಿ ವಿಮರ್ಶಕರು ಓದಿದ್ದಾರೆ ಅಂದುಕೊಂಡಿದ್ದೀರಾ.. ಅವರಿಗಿಂತ ಹೆಚ್ಚಾಗಿ ಓದಿದ್ದು ಆಟೋ ಓಡಿಸುವವರು, ಸೈಕಲ್ ರಿಪೇರಿ ಮಾಡುವವರು ಮಾರಾಯರೆ..” ಎಂದರು

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತಲ್ಲಾ ಎಂದು ಮುತ್ತುಪ್ಪಾಡಿಯ ಅಷ್ಟೂ ಮಂದಿಗೆ ತನ್ನ ಸೃಷ್ಟಿಕರ್ತನ ಜೊತೆ ಮಾತಾಡಿ, ಶುಭಾಷಯ ಹೇಳುವ ತವಕ. ಆದರೆ ಮುತ್ತುಪ್ಪಾಡಿಗೆ ಇನ್ನೂ ‘ಜಿಯೋ’ ಕಾಲಿಟ್ಟಿಲ್ಲ. ಹಾಗಾಗಿ ‘೪-ಜಿ’ ಇಲ್ಲದೆ ಅಲ್ಲಿಂದ ನೆಟ್ ವರ್ಕ್ ಸಿಗುವ ಮಾತು ಇಲ್ಲವೇ ಇಲ್ಲ.

ಹಾಗಾಗಿ ನಾನೇ ‘ಮುಬಾರಕ್ ಟ್ರಾವಲ್ಸ್’ ಹತ್ತಿ ಬೆಂಗಳೂರಿಗೆ ಬಂದ ಮೇಲೆ ಫೋನಾಯಿಸಿದೆ. “ಪ್ರಶಸ್ತಿ ಬೇಡ ಅನ್ನುವುದಕ್ಕೆ ನಾನೇನು ದೇವರೋ..” ಎನ್ನುವ ಶೈಲಿಯಲ್ಲಿ ಮಾತು ಮುಂದುವರೆಸಿದರು. “ಪ್ರಶಸ್ತಿ ಬರುತ್ತೆ ಅಂತ ಖಂಡಿತಾ ಅಂದುಕೊಂಡಿರಲಿಲ್ಲ, ಆದರೆ ಬರಬೇಕು ಅನ್ನುವ ಆಸೆಯಂತೂ ಬಿಟ್ಟು ಹೋಗಿರಲಿಲ್ಲ” ಎಂದು ‘ಬೊಳುವಾರು ಪಂಚ್’ನಲ್ಲಿ ಮಾತನಾಡಿದ ಅವರು “ಈ ಪುಸ್ತಕಕ್ಕೆ ಅವಾರ್ಡ್ ಬರಬೇಕು ಅಂತ ಆಸೆ ಇದ್ದದ್ದು ಖರೆ ಮಾರಾಯಾ. ಯಾಕೆ ಗೊತ್ತುಂಟಾ…?” ಅಂದರು. ಯಾಕೆ ಅಂತ ಅವರ ಮುಖ ನೋಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ನಾವು ಮಾತನಾಡುತ್ತಿದ್ದದ್ದು ಫೋನ್ ನಲ್ಲಿ. ಹಾಗಾಗಿ ಅವರು ಹೇಳಿದ್ದು ಕೇಳಿಸಿಕೊಂಡೆ- “ಈ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದರೆ ಆ ಕೃತಿ ಎಲ್ಲಾ ಭಾಷೆಗೂ ಭಾಷಾಂತರವಾಗುವ ಸೌಭಾಗ್ಯ ಒಂದು ಇದೆ. ಅದಕ್ಕಿಂತ ಬೇರೆ ಏನು ಬೇಕಪ್ಪಾ.. ನನ್ನ ಮುತ್ತುಪ್ಪಾಡಿ ಜನರೆಲ್ಲಾ ಇನ್ನು ನ್ಯಾಷನಲ್ ಟೂರ್ ಹೊರಟಂತೆಯೇ ಸರಿ” ಎಂದು ತಮ್ಮದೇ ಗಂಭೀರ ಸ್ಟೈಲ್ ನಲ್ಲಿ ಹೇಳಿದರು.

ಓಹ್ ! ಬೊಳುವಾರರೊ.. ಅವರ ಸಂಸಾರವೋ.. ಜನಗಣತಿ ಮಾಡಲು ಕೇಂದ್ರ ಸರ್ಕಾರ ಮುಂದಾದರೆ ಇವರ ಮುತ್ತುಪ್ಪಾಡಿ ಜನರ ಲೆಕ್ಕ ಹಾಕಲೇ ಒಂದಿನ್ನೂರು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಚ್ಚಬೇಕಾಗುತ್ತದೆ. ಒಂದೆರಡು ತಿಂಗಳಾದರೂ ಬೇಕು ಸೆನ್ಸಸ್ಸಿಗೆ.. ಅಷ್ಟು ಜನರನ್ನು ಸೃಷ್ಟಿಸಿ ತಾವೇ ಒಂದು ಊರು ಹುಟ್ಟು ಹಾಕಿ ಅಲ್ಲಿ ಕೂಡಿಸಿದ್ದಾರೆ.

ಹೀಗಿರುವಾಗಲೇ ‘ಚಾಂದ್ ಅಲಿ’ ಕೂಡಾ ಮುತ್ತುಪ್ಪಾಡಿ ಸೇರಿಬಿಟ್ಟ. ಪಾಕಿಸ್ತಾನದಲ್ಲಿದ್ದ ಚಾಂದ್ ಅಲಿ ಇಬ್ಬರು ಸಿಖ್ ಹೆಣ್ಣು ಮಕ್ಕಳನ್ನು ಸೌಖ್ಯವಾಗಿ ಗಡಿ ದಾಟಿಸಲು ಅಂತ ಬಂದ ಹುಡುಗ ಭಾರತ ಸೇರಿಬಿಟ್ಟ. ಹಿಂದೆ ಹೋಗಲಾಗದ ಇಕ್ಕಟ್ಟು. ಕೊನೆಗೆ ಏನೂ ಮಾಡಲಾಗದೆ, ಏನೂ ಹೇಳಲಾಗದೆ ಬಾಯಿ ಹೊಲಿದುಕೊಂಡು ಬದುಕಿದ. ಬೊಳುವಾರರ ಕೈಗೆ ಚಾಂದ್ ಅಲಿ ಸಿಕ್ಕಾಗ ಅವನನ್ನು ನೇರ ಅವರ ಮುತ್ತುಪ್ಪಾಡಿಗೆ ಸೇರಿಸಿಬಿಟ್ಟರು. ಚಾಂದ್ ಅಲಿಗೆ ಈಗ ಮುತ್ತುಪ್ಪಾಡಿಯೇ ತನ್ನ ಲಾಹೋರ್, ತನ್ನ ಬಹವಾಲಾಪುರ. ಬಹವಾಲಾಪುರದ ಆಗಸದಲ್ಲಿ ಕಂಡ ಚಂದ್ರನೂ… ಮುತ್ತುಪ್ಪಾಡಿಯಲ್ಲಿ ಕಾಣುತ್ತಿರುವ ಚಂದ್ರನೂ ಒಂದೆಯೇ ಎನ್ನುವ ಕಕ್ಕುಲಾತಿಯಲ್ಲಿಯೇ ಸ್ವಾತಂತ್ರ್ಯದ ಓಟ ೧೧೧೧ ಪುಟಗಳನ್ನೂ ದಾಟಿದೆ.

ಇರಲಿ.. ಬೊಳುವಾರು ಕೆತ್ತಿದ ಪಾತ್ರಗಳೂ, ಆ ಮುತ್ತುಪ್ಪಾಡಿ ಎಂಬ ಊರೂ ಓದುಗರ ಎದೆಯೊಳಗೆ ನಡೆದುಕೊಂಡು ಬಂದು ಬಿಟ್ಟ ರೀತಿ ಇದೆಯಲ್ಲಾ ಅದು ಮರೆಯಲಾಗದ ಅಚ್ಚರಿ. ಬೊಳುವಾರರು ಜೊತೆಯಾದರೆ, ಎದುರಾದರೆ, ಫೋನಲ್ಲಿ ಸಿಕ್ಕರೆ, ಸಭೆಯಲ್ಲಿ ಕಂಡರೆ, ಭಾಷಣಕ್ಕೆ ನಿಂತರೆ ಜನ ಮುತ್ತುಪ್ಪಾಡಿಯನ್ನೂ, ಅಲ್ಲಿನ ಒಂದಷ್ಟು ತಮ್ಮ ಪ್ರೀತಿಯ ಪಾತ್ರಗಳನ್ನೂ ತಮ್ಮ ಮಾತಿನಲ್ಲಿ ಎಳೆತರದೆ ಬಿಡುವುದೇ ಇಲ್ಲ. ‘ಮಾಲ್ಗುಡಿ’ ಇತ್ತು. ಅಲ್ಲಿ ಆಗಿನ ಮೈಸೂರೇನೋ ಎನ್ನುವಂತೆ ಒಂದಿಷ್ಟು ಪಾತ್ರಗಳು ಮಾತ್ರ ಬಂದು ಹೋದವು. ಆದರೆ ಈಗ ಮುತ್ತುಪ್ಪಾಡಿ ಇದೆ.

“ಸುಮಾರು ನಾಲ್ಕು ದಶಕಗಳ ಕೆಳಗೆ, ಬರೆಯಲು ಆರಂಭಿಸಿದಾಗ ನನ್ನೆದುರು ಹಲವು ‘ಲೋಕ’ಗಳಿದ್ದವು; ಆದ್ದರಿಂದಲೇ ನನ್ನ ಕಥಾ ಪಾತ್ರಗಳ ಬದುಕಿಗಾಗಿ ‘ಮುತ್ತುಪ್ಪಾಡಿ’ ಎಂಬ ನನ್ನದೇ ಆದ ‘ಲೋಕ’ವೊಂದನ್ನು ಕಟ್ಟಿಕೊಂಡಿದ್ದೆ. ಮುತ್ತುಪ್ಪಾಡಿಯ ತುಂಬಾ ಮನುಷ್ಯರನ್ನು, ಅವರಿಗೆ ನಂಬಲೆಂದು ದೇವರುಗಳನ್ನು, ಪೂಜಿಸಲು ಮಂದಿರಗಳನ್ನು, ಪ್ರಾರ್ಥಿಸಲು ಮಸೀದಿಗಳನ್ನು, ಆರಾಧಿಸಲು ಚರ್ಚುಗಳನ್ನು, ಓದಲು ಶಾಲೆಗಳನ್ನು, ಆಡಲು ಬಯಲುಗಳನ್ನು, ಕವಾಯಿತಿಗೆ ಮೈದಾನಗಳನ್ನು, ಆಳಲು ಪೊಲೀಸರನ್ನು, ವಂದಿಸಲು ಧ್ವಜಗಳನ್ನು, ಈಜಲು ಹೊಳೆಗಳನ್ನು, ಹಾರಲು ಕೆರೆಗಳನ್ನು, ಮಲಗಲು ಆಸ್ಪತ್ರೆಗಳನ್ನು, ಸುಡಲು ಸ್ಮಶಾನಗಳನ್ನು, ಹೂಳಲು ಕಬರಸ್ಥಾನಗಳನ್ನು ಹೀಗೆ, ನಾಗರಿಕ ಜೀವನಕ್ಕೆ ಏನೇನು ಬೇಕೋ ಅವೆಲ್ಲವನ್ನೂ ಒದಗಿಸಿದ್ದೆ. ಆನಂತರ; ಮುತ್ತುಪ್ಪಾಡಿಯ ಮನುಷ್ಯರಿಗೆ ಅವರಿಷ್ಟ ಬಂದಂತೆ ಬದುಕುವ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ಅವರವರದೇ ಬದುಕಿನ ಕತೆಗಳನ್ನು ಒಂದೊಂದಾಗಿ ಬರೆದಿದ್ದೆ; ಇನ್ನು ಸಾಕು ‘ ಎಂದು ಬೊಳುವಾರರೇ ಸುಮ್ಮನಾಗಿ ಹೋದರು. “ಸ್ವಾತಂತ್ರ್ಯದ ಓಟ ಇದುವರೆಗೆ ನಾನು ಬರೆದ ಮತ್ತು ಬರೆಯದೆ ಉಳಿದಿದ್ದ ಮುತ್ತುಪ್ಪಾಡಿಯ ಮನುಷ್ಯರ ‘ಸ್ವಾತಂತ್ರ್ಯದ ಓಟಗಳ’ ಕೊನೆಯ ಸುತ್ತು” ಎನ್ನುತ್ತಾರೆ.

ಇರಲಿ, ಬೊಳುವಾರರಿಗೂ ಈ ನಡುವೆ ತಮ್ಮ ಮುತ್ತುಪ್ಪಾಡಿಯ ಜನರು ಎಂದಿನಂತಿಲ್ಲ ಅನಿಸಿಬಿಟ್ಟಿದೆ. ಸೃಷ್ಟಿಕರ್ತನಾದ ನನ್ನ ಮಾತನ್ನೂ ಕೇಳುತ್ತಿಲ್ಲ ಎನ್ನುವುದು ಮನಸ್ಸಿಗೆ ಬಂದಿದೆಯೇನೋ.. “ಮನಕರಗಿಸುವ ಘಟನೆಗಳೊಂದಿಗೆ ಬೆಳೆಯುತ್ತಾ ನಾಟಕೀಯವಾಗಿ ಕೊನೆಗೊಳ್ಳುವ ಕತೆಗಳೆಂದರೆ ನನಗೆ ಬಹಳ ಇಷ್ಟ. ಆದರೆ ನಾನು ಬಹಳವಾಗಿ ಹಚ್ಚಿಕೊಂಡಿರುವ ಮುತ್ತುಪ್ಪಾಡಿಯ ಮನುಷ್ಯರ ಇತ್ತೀಚಿನ ವರ್ತನೆಗಳು ಎಷ್ಟೊಂದು ಮಾಮೂಲಿಯೆನ್ನಿಸತೊಡಗಿವೆಯೆಂದರೆ, ಇವರ ಬಗ್ಗೆ ಹೇಳಹೊರಟಾಗ ಒಂದಿಷ್ಟು ರೋಚಕತೆಯನ್ನಾಗಲೀ ಅಥವಾ ಒಂದೆರಡು ತೊಟ್ಟು ಕಣ್ಣೀರನ್ನು ಚಿಮ್ಮಿಸುವ ಭಾವುಕತೆಯನ್ನಾಗಲೀ ಚಿತ್ರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಇತ್ತೀಚಿಗೆ ಕೆಲವು ವರ್ಷಗಳಿಂದ ಈ ಮನುಷ್ಯರು ಪ್ರೀತಿಯ ಬಗ್ಗೆ, ಪ್ರೇಮದ ಬಗ್ಗೆ ಅಥವಾ ಕನಿಷ್ಠ ಕಾಮದ ಬಗ್ಗೆ ಕೂಡಾ ಯೋಚಿಸುವುದನ್ನು ನಿಲ್ಲಿಸಿಬಿಟ್ಟಿದ್ದಾರೆ..”

ಮುತ್ತುಪ್ಪಾಡಿಯ ಬೊಳುವಾರರ ಬಗ್ಗೆ ನನಗೆ ಒಂದು ಹಿಡಿ ಹೆಚ್ಛೇ ಪ್ರೀತಿ.

ಯಾಕೆಂದರೆ ಅವರು ಮುತ್ತುಪ್ಪಾಡಿಯನ್ನು ನಿರ್ಮಿಸಿವಾಗ ಅದನ್ನು ‘ಅಮರಾವತಿ’ ಎಂದು ಭಾವಿಸಲಿಲ್ಲ. ಮುತ್ತುಪ್ಪಾಡಿಯನ್ನು ನಿರ್ಮಿಸುವಾಗ ಬಾಹುಬಲಿ ರಾಜಮೌಳಿಯನ್ನು ಕರೆಸಿ ಸಲಹೆ ಕೇಳಲಿಲ್ಲ, ಮುತ್ತುಪ್ಪಾಡಿಯನ್ನು ನಿರ್ಮಿಸುವಾಗ ಇಂಗ್ಲೆಂಡ್ ನ ಆರ್ಕಟೆಕ್ಟ್ ಕಂಪನಿ ‘ಫಾಸ್ಟರ್ ಅಂಡ್ ಪಾರ್ಟ್ನರ್ಸ್’ ಏ ಆಗಬೇಕೆಂದು ಪಟ್ಟು ಹಿಡಿದು ಕೂರಲಿಲ್ಲ. ಮುತ್ತುಪ್ಪಾಡಿಯನ್ನು ತಮ್ಮ ನೋವಿನಲ್ಲಿ ಅದ್ದಿ ತೆಗೆದು ಕಟ್ಟಿದರು.

‍ಲೇಖಕರು Admin

December 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Umesh

    ಖಂಡಿತ ಈ ಪ್ರಶಸ್ತಿಗೆ ಬೊಳುವಾರರು ಮತ್ತು ಅವರ ಸ್ವಾತಂತ್ರ್ಯ ಓಟ ಅರ್ಹರು ೩ ವರ್ಷದ ಹಿಂದೆ ಮೈಸೂರಿನ ಇಂಜಿನಿಯರ್ಸ್ ಸಭಾಂಗಣದಲ್ಲಿ ಬಿಡುಗಡೆ ದಿನ ಖರೀದಿಸಿದ ಸ್ವಾತಂತ್ರ್ಯ ಓಟ ಮಹಾ ಕಾದಂಬರಿಯನ್ನು ಮನೆಗೆ ಕೊಂಡ್ಯೊದಾಗ ನನ್ನ ಹೆಂಡತಿ ನೋಡಿ ಹೌಹಾರಿದಳು, ಕಾರಣ ಇತ್ತೀಚೆಗೆ ನಾನು ಮಹಾ ಕಾದಂಬರಿಗಳನ್ನು ಓದುವ ತಾಳ್ಮೆ ಕಡಿಮೆಯಾಗಿರುವುದು, (ಕ್ಷಮಿಸಿ ಅಂತರ್ಜಾಲ ಪ್ರಭಾವ) ಆದರೆ ಓದುತ್ತಾ ಹೋದಂತೆ ಈ ಕಾದಂಬರಿ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ಮುಂತಾದ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವ ಮಹಾನ್ ಕಾದಂಬರಿ ಎನ್ನಿಸಿತು. ಆ ಚಾಂದಜ್ಜ ಆದ ಚಾಂದ್ ಆಲಿ , ಪಾತುಮ್ಮ ಸದಾಶಿವ ಕೂಸಮ್ಮ, ಸುಲೇಮಾನ್ ಸಾಹುಕಾರ್ ಇಡಿ ಮುತ್ತುಪಾಡಿ ಕಣ್ಣ ಮುಂದೆ ಬಂದಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: