ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಚ್ಚುವ ಮಾತಿನ ಹಿಂದೆ ಕೀಳರಿಮೆಯಿದೆಯೇ?

 

-ಸಂತೋಷ್ ತಮ್ಮಯ್ಯ

ಮಕ್ಕಳ ಶಿಕ್ಷಣದ ಬಗ್ಗೆ ಓರ್ವ ಶಿಕ್ಷಣ ಮಂತ್ರಿ ಆಡುವ ಮಾತುಗಳಿಗಿಂತ ಓರ್ವ ತಂದೆಯಾಡುವ ಮಾತುಗಳಲ್ಲೇ ಹೆಚ್ಚು ತೂಕವಿರುತ್ತದೆ. ಅಧಿಕೃತತೆಯಿರುತ್ತದೆ. ಹಾಗಾಗಿ ಕಾಗೇರಿಯವರು ಕನ್ನಡ ಮಾಧ್ಯಮ ಮತ್ತು ಸರಕಾರಿ ಶಾಲೆ ಎಂದಾಗಲೆಲ್ಲಾ ಏನೋ ಹೇಳುತ್ತಿದ್ದಾರೆ ಎಂದು ಅನಿಸುವುದಿಲ್ಲ. ಶಿಕ್ಷಣದಲ್ಲಿ ನಿಜವಾಗಿಯೂ ಏನೋ ಸಮಸ್ಯೆಯಿದೆ ಎಂದೇ  ಅನಿಸುತ್ತದೆ. ಈ ಅನಿಸಿಕೆ ಗಾಂಧಿ ಪ್ರತಿಮೆಯಡಿಯಲ್ಲಿ ಕುಳಿತು ಬೊಬ್ಬಿರಿಯುವ ಜನರಿಂದಲೂ ಅನಿಸುವುದಿಲ್ಲ. ಪಂಪ-ಕುಮಾರವ್ಯಾಸರನ್ನು ಬ್ರೆಕ್ಟ್-ಕೀಟ್ಸ್‌ಗಳವರೆಗೆ  ಕೊಂಡೊಯ್ದು ಅರ್ಥವಾಗದ ಭಾಷೆಗಳಲ್ಲಿ ವಿಮರ್ಶೆ ಮಾಡುವ ತಜ್ಞರ ಭಾಷಣಗಳಿಂದಲೂ ಅನಿಸುವುದಿಲ್ಲ. ಟಿವಿ ಚ್ಯಾನಲ್‌ಗಳ ಪ್ಯಾನಲ್ ಚರ್ಚೆಗಳಿಂದಲೂ ಅನಿಸುವುದಿಲ್ಲ. ಆದರೆ ಕಾಗೇರಿಯವರ ಮಾತುಗಳಿಂದ ಅನಿಸುತ್ತದೆ. ಏಕೆಂದರೆ ಶಿಕ್ಷಣ ಸಚಿವ ಕಾಗೇರಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಅಪ್ಪನೂ ಆಗಿರುವುದರಿಂದ ಅವರು ಶಿಕ್ಷಣದ ಬಗ್ಗೆ ಮಾತಾಡುವಾಗಲೆಲ್ಲಾ ರಾಜ್ಯ ಅದನ್ನು ಆಲಿಸುತ್ತದೆ. ಕಡಿಮೆ ಮಕ್ಕಳಿರುವ ಸರಕಾರಿ  ಶಾಲೆಗಳನ್ನು ಮುಚ್ಚಲಾಗುವುದು ಎಂದು ಹೇಳಿದಾಗ ಕೂಡ ರಾಜ್ಯ ಅದನ್ನು ವಿಶೇಷವಾಗಿ ಆಲಿಸಿತ್ತು. ಅವರ ಮಾತುಗಳಿಗೆ  ಅಧಿಕೃತತೆಯೊಟ್ಟಿಗೆ ಪಾಲಿಸಿಯೇಬಿಡುವ  ಗುಣಲಕ್ಷಣಗಳಿರುವುದರಿಂದ   ಅದಕ್ಕೆ ವಿರೋಧಗಳು ವ್ಯಕ್ತವಾದವು. ಆಲಿಸಿದವರು ತಮ್ಮ ತಮ್ಮ  ಶಕ್ತ್ಯಾನುಸಾರ  ಚರ್ಚೆ ನಡೆಸಿದರು. ವಿವಾದಗಳಾದವು. ಗಲಾಟೆಗಳಾದವು. ಸರಕಾರ ಕೊನೆಗೆ ಮುಚ್ಚಲಾರೆವು ಎಂದಿತು.

ಸರಕಾರಿ ಶಾಲೆಗಳಿಗೆ ಇಂದು ಮಕ್ಕಳ ಕೊರತೆ  ಇರುವುದು  ಕೇವಲ ಒಂದೆರಡು ಜಿಲ್ಲೆಗಳ ಸಂಗತಿಗಳಲ್ಲ. ಖಾಸಗಿಯವರ ಅಬ್ಬರ, ಇಲಾಖೆಯವರ ಮುಠಾಳತನ, ಜನರ ಮರಳುತನ ಮೊದಲಾದ  ಕಾರಣಗಳಿಂದ  ಇಂದು ಬಹುತೇಕ ಸರಕಾರಿ ಶಾಲೆಗಳಲ್ಲಿ ಹತ್ತು ಮಕ್ಕಳೂ ಇಲ್ಲ.  ಮುಂದಿನ ವರ್ಷದಿಂದ ಆರು-ಏಳು ಮಕ್ಕಳಿರುವ ಶಾಲೆಗಳೂ ಬಹಳಷ್ಟಿವೆ. ಅವುಗಳಲ್ಲಿ ಸಚಿವರು ಹೇಳಿರುವ, ಮುಚ್ಚಲು ಯೋಗ್ಯವಾಗ  ಹತ್ತಕ್ಕಿಂತ ಕಡಿಮೆ ಮಕ್ಕಳಿರುವ  ಶಾಲೆಗಳಷ್ಟೇ ಅಲ್ಲದೆ ಹದಿಮೂರು, ಹದಿನಾಲ್ಕು ಮಕ್ಕಳ ಶಾಲೆಗಳೇ ಹೆಚ್ಚಿವೆ. ಆದರೆ ಸಚಿವರು ಅವುಗಳ ಬಗ್ಗೆ ಹೇಳಲಿಲ್ಲ. ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಯೊಟ್ಟಿಗೆ ವಿಲೀನಗೊಳಿಸಿ, ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ “ಒಗ್ಗಟ್ಟಿನಲ್ಲಿ ಬಲವಿದೆ” ಎಂದು ನೀತಿ ಪಾಠ ಮಾಡುವುದು  ಕಾಗೇರಿಯವರ ಮಾತಿನ ಮತಿತಾರ್ಥವಾಗಿರಬಹುದು. ಹೊರನೋಟಕ್ಕೆ ಮಕ್ಕಳೇ ಇಲ್ಲದಿದ್ದರೆ ಇಂಥ ಶಾಲೆಗಳನ್ನೇನು ಮ್ಯೂಸಿಯಂ ಮಾಡುವುದೇ ಎಂಬ ಪ್ರಶ್ನೆಯೂ  ಬಾರದಿರದು.  ಆದರೆ ಇದು ಸರಕಾರಿ ಮಾತುಗಳು. ಪ್ರತಿ ಮಾತಿನ ಹಿಂದೆ ಸಾವಿರಾರು ಕಥೆಗಳಿರುತ್ತದೆ. ಇಂದಿನ ಪರಿಸ್ಥಿತಿ ಹಾಗೆಯೇ ಇರಬಹುದು. ಆದರೆ ಅದರ ಹಿನ್ನಲೆಯೂ ಯೋಚಿಸತಕ್ಕ  ಸಂಗತಿಯೇ. ಆದರೆ ಕನ್ನಡದ ಕಟ್ಟಾಳುಗಳೆಂಬುವವರು  ಅದರ ಜಾಡು ಹಿಡಿದು ಹೋಗಲಾರರು. ಅಲ್ಲಿ ವಿಲೀನಕ್ಕಿಂತ ಮುಚ್ಚುವಿಕೆಗೇ ಪ್ರಾಶಸ್ತ್ಯ. ಪ್ರಸ್ತತ ಚಳವಳಿ -ಪ್ರತಿಭಟನೆಗಳು ಆ ನಿಟ್ಟಿನಲ್ಲೇ ನಡೆದವು.

ಸರಕಾರಿ ಶಾಲೆಗಳು ಹೀಗೇಕಾಯಿತು ಎಂದರೆ ಕಾಣುವುದು ಚಿತ್ರ ವಿಚಿತ್ರವಾದ ಸಂಗತಿಗಳು. ಸದ್ಯದ ಶಿಕ್ಷಣ ಕಾನೂನಿನ ಪ್ರಕಾರ ಪ್ರತಿ ಒಂದು ಕಿ.ಮೀ ಗೊಂದರಂತೆ ಕಿರಿಯ ಪ್ರಾಥಮಿಕ ಶಾಲೆಗಳೂ  ಪ್ರತೀ ೨ ಕಿ.ಮೀ ಗೊಂದರಂತೆ ಹಿರಿಯ ಪ್ರಾಥಮಿಕ ಶಾಲೆಗಳೂ  ಇರಬೇಕೆಂಬ ನಿಯಮವಿದೆ. ಅಂದರೆ ಮಗುವಿಗೆ ಮನೆಯ ಕೂಗಳತೆಯ ದೂರದಲ್ಲೇ ಶಾಲೆ ಇರಬೇಕು, ಮಗುವಿಗೆ ತ್ರಾಸವಾಗದೆ  ಶಾಲೆಗೆ ಬರಬೇಕು, ಅದಕ್ಕೆ ತೊಂದರೆಯಾಗಬಾರದೆಂದು  ಯಾರೋ ಪುಣ್ಯಾತ್ಮರು ರೂಪಿಸಿದ ಕಾನೂನದು. ಅಂದರೆ ಪ್ರತಿ ೨೦೦ ಜನಸಂಖ್ಯೆಗೊಂದು ಶಾಲೆ ಇರಲೇ ಬೇಕು. ಈ ಕಾನೂನಿನನ್ವಯ ರಾಜ್ಯಾದ್ಯಂತ ಸರಕಾರಿ ಶಾಲೆಗಳು ಆರಂಭಗೊಂಡವು. ರಾಜಕಾರಣಿಗಳು ಊರಿಗೆ ಬಂದವರೇ  ಭಾಷಣದ ಮಧ್ಯದಲ್ಲೇ ಏನೋ ನೆನಪಾದವರಂತೆ ಶಾಲೆಗಳನ್ನ್ನು ಮಂಜೂರು ಮಾಡಿಯೇಬಿಟ್ಟರು. ಅದಾಗಲೇ ಆ ಊರಿನಲ್ಲಿ ಶಾಲೆಗಳಿದ್ದರೂ  ಕಿ.ಮೀ ಅಳತೆಯಲ್ಲಿ  ಕಟ್ಟಡಗಳು ಎದ್ದುನಿಂತವು. ಪಕ್ಷದ ಕಾರ್ಯಕರ್ತರಿಗೆ ಕಾಂಟ್ರಾಕ್ಟುಗಳು ಪ್ರಧಾನವಾದವು. ಶಾಲಾಕಟ್ಟಡವನ್ನು ಅವರಿಂದಲೇ ಉದ್ಘಾಟನೆಯನ್ನೂ ಮಾಡಿಸಲಾಗಿ  ಮಗ್ಗಿ ಪುಸ್ತಗಳೂ ಬಂಡಲಾಗಿ  ಬಂದು ಬಿದ್ದವು. ಇಂದು ಮುಚ್ಚಲು ಅರ್ಹವಾದ  ಹತ್ತು ಮಕ್ಕಳಿಗಿಂತ  ಕಡಿಮೆ ಇರುವ ಶಾಲೆಗಳೆಲ್ಲವೂ ಹೀಗೆ ಭಾಷಣದಿಂದ ನಿರ್ಮಾಣವಾದ ಸರಕಾರಿ ಶಾಲೆಗಳು  ಎಂಬುದು ವಿಪರ್ಯಾಸ.

ಇದು ದ.ಕನ್ನಡದಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ನಡೆದ ಒಂದು ಘಟನೆ.

ಬಂಟವಾಳ ತಾಲೂಕಿನ ದೇವಸ್ಯಮೂಡೂರು ಎಂಬ ಗ್ರಾಮದಲ್ಲಿ ಸರಕಾರಿ ಶಾಲೆಯೊಂದು ಹಿಂದಿನಿಂದಲೇ  ವ್ಯವಸ್ಥಿತವಾಗಿ ನಡೆಯುತ್ತಿತ್ತು. ಮಕ್ಕಳೂ ಯಥೇಚ್ಛವಾಗಿದ್ದು ಸುತ್ತು ಮುತ್ತಲ ಊರುಗಳಿಂದಲೂ ಶಾಲೆಗೆ ಬರುತ್ತಿದ್ದವು. ಆಟ, ಪಾಠಗಳಲ್ಲೆಂದೂ ಕೊರತೆ ಬಂದಿರಲಿಲ್ಲ. ಅದೇ ಸಮಯದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಪುಡಾರಿಯೊಬ್ಬರು ಅಕಸ್ಮಾತ್ ಚುನಾವಣೆಯಲ್ಲಿ  ಗೆದ್ದು ಬಂದರು. ಗೆದ್ದಮೇಲೆ ಇನ್ನುಂಟೇ ? ಆಶ್ವಾಸನೆಗಳ ಸುರಿಮಳೆಗಳಾದವು. ಮಾನ ಸಮ್ಮಾನಗಳಲ್ಲೆಲ್ಲಾ  ಯೋಜನೆಗಳ ಮಂಜೂರು , ಅನುದಾನಗಳ  ಕಾರ್ಯಕ್ರಮಗಳಾದವು. ಅಂದಾದುಂದಿ  ಕಾರ್ಯಕ್ರಮಗಳಿಗೆ ಕಾಳಜಿಯ ಹಂಗುಂಟೇ ಎನ್ನುವಂತೆ ದೇವಸ್ಯ ಮೂಡೂರು ಗ್ರಾಮದ ಪಕ್ಕದ ಊರುಗಳಾದ ಮಣಿ ನಾಲ್ಕೂರು ಮತ್ತು ನಮ್ಕೆಮಾರು ಗ್ರಾಮಗಳಿಗೆ ಶಾಲೆಗಳೆರಡು ಮಂಜೂರಾದವು.  ಕಿ.ಮೀ ಲೆಕ್ಕದಲ್ಲಿ  ಆ ಗ್ರಾಮಗಳು  ಸರಕಾರಿ ನಿಯಮಗಳಿಗೆ ಸರಿಹೊಂದುತ್ತಿದ್ದವು. ಹೀಗೆ ಮಂಜೂರಾದ  ಶಾಲೆಗಳಿಗೆ  ಕಟ್ಟಡಗಳೂ ಎದ್ದು ,ಶಿಕ್ಷಕರೂ ನೇಮಕವಾದರೂ ಹತ್ತು ಮಕ್ಕಳೂ ಸಿಗಲಿಲ್ಲ.  ಪಕ್ಕದ ಊರಿನ ಹಳೆಯ ಶಾಲೆಯಿಂದ ಮಕ್ಕಳನ್ನು ತಂದು ತರಗತಿಗಳನ್ನು  ತುಂಬಲಾಯಿತು. ಈ  ಶಾಲೆ ಸರಿಯಾಗಿ ಐದು ವರ್ಷವೂ ನಡೆಯಲಿಲ್ಲ. ಇದೀಗ ಮುಚ್ಚಬಹುದು ಎಂಬ ಶಾಲೆಗಳ ಪಟ್ಟಿಯಲ್ಲಿ ಈ ಮೂರೂ ಶಾಲೆಗಳು ಇವೆ.  ಖಾಸಗಿ ಶಾಲೆಗಳು  ನಾಯಿಕೊಡೆಗಳಂತೆ ಏಳುತ್ತಿವೆ ಎನ್ನುವ ವಾದ  ಹೇಗೆ ಸರಿಯೋ ಸರಕಾರಿ ಶಾಲೆಗಳೂ ನಾಯಿಕೊಡೆಗಳಂತಾಗಬಾರದು ಎಂಬುದೂ  ಕೂಡ ನಿಜವೇ.  ಏಕೆಂದರೆ  ಕಿಮೀ ಲೆಕ್ಕದಲ್ಲಿ  ಶಾಲೆಗಳ ಸ್ಥಾಪನೆಯಾಗಬೇಕು ಎಂಬ ನಿಯಮವೇ ಒಂಥರಾ ಪುಸ್ತಕ ಓದಿ ಅಡುಗೆ ಮಾಡಿದಂತೆ .  ಪ್ರತೀ ಸಂದರ್ಭದಲ್ಲೂ  ವೈಜ್ಞಾನಿಕ ಎನ್ನಲು ಸಾಧ್ಯವಿಲ್ಲ. ಮಲೆನಾಡು ಮತ್ತು ಕರಾವಳಿಯ ಕೆಲವು  ಭಾಗದಲ್ಲಿ ಇಂದಿಗೂ ಹದಿನೈದು ಇಪ್ಪತ್ತು ಕೀಮೀ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳಿಲ್ಲದಿರುವ ಪ್ರದೇಶಗಳೂ ಇವೆ. ಶಿಕ್ಷಣ ಸಚಿವರ ಹೇಳಿಕೆಯಿಂದ ಪುಳಕಿತಗೊಂಡ ಖಾಸಗಿ ಶಾಲೆಗಳು ಈಗಾಗಲೇ ಸುಬ್ರಹ್ಮಣ್ಯ ಪರಿಸರದಲ್ಲಿ ಸ್ಕೂಲ್ ವ್ಯಾನ್ ಗಳಿಗೆ ಬುಕ್ಕಿಂಗ್ ನಡೆಸಿವೆಯಂತೆ. ವ್ಯಾನ್‌ನಲ್ಲಿ ಕಳುಹಿಸಿ ಖಾಸಗಿಯಲ್ಲಿ ಓದಿಸಲಾಗದ ಪೋಷಕರು ದಿಕ್ಕುತೋಚದಂತಾಗಿದ್ದಾರಂತೆ.

ಇನ್ನು  ಮುಚ್ಚುವ ಸಂದರ್ಭ ಬಂದಾಗಲೆಲ್ಲಾ ಏಕೆ ಸರಕಾರಗಳಿಗೆ ಖಾಸಗಿ ಶಾಲೆಗಳು ಕಾಣುವುದಿಲ್ಲ. ಸರ್ವರಿಗೂ ಶಿಕ್ಷಣವನ್ನು ಒದಗಿಸುವ ಹಕ್ಕು ಸರಕಾರದ್ದು. ಒಂದು ಶಾಲೆಯನ್ನು ಮುಚ್ಚಬೇಕು ಎಂಬ ಪ್ರಶ್ನೆ ಬರುವುದು ಶಿಕ್ಷಣ ವ್ಯಾಪಾರಿಕರಣಗೊಂಡಾಗ ಮಾತ್ರ. ಮಕ್ಕಳ ಸಂಖ್ಯೆ ಕಡಿಮೆ, ವೆಚ್ಚ ಹೆಚ್ಚು ಎಂದೆಲ್ಲಾ ನೆಪಗಳನ್ನು ಕೊಡುವುದು ಶಿಕ್ಷಣದ ಹಕ್ಕಿಗೆ ವಿರುದ್ಧವಾದ ನಿಯಮಗಳು. ಸರಕಾರಕ್ಕೆ ಶಿಕ್ಷಣದ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಹಲವು ಖಾಸಗಿ ಶಾಲೆಗಳನ್ನೇ ಮುಚ್ಚಬೇಕು.  ಅಥವಾ ಏಕರೂಪದ ಶಿಕ್ಷಣ ಸೂತ್ರವನ್ನು ಅಳವಡಿಸಬೇಕು. ಏಕೆಂದರೆ ೧೯೯೪ ರ ಅನಂತರ ಕರ್ನಾಟಕದಲ್ಲಿ ಎಲ್ಲಿಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅನುಮತಿಯಿಲ್ಲ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಸ್ಥಾಪನೆಯಾದ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಎಗ್ಗಿಲ್ಲದೆ ನಡೆಯುತ್ತಿದೆ. ಅನುಮತಿ ಇಲ್ಲದೆ ಮಾಡುವ ಭೋದನೆ ಸರಕಾರಕ್ಕೆ ಕಾಣುತ್ತಿಲ್ಲವೇಕೆ? ಇಂಥ ಸಂಗತಿಗಳನ್ನಿಟ್ಟುಕೊಂಡು ಸರಕಾರಿ ಶಾಲೆಗಳನ್ನು ಮುಚ್ಚಲು ಹೇಗಾದರೂ ಮನಸು ಬರುತ್ತವೆ?  ಸರಕಾರವೇ ಪ್ರತಿ ವರ್ಷ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು  ಪೂರೈಸುತ್ತವೆ.  ಹೀಗೆ ಸರಕಾರ ಪೂರೈಸಿದ ಪಠ್ಯಗಳನ್ನೇ ಭೋದಿಸದಿದ್ದ ಮೇಲೆ ಅಂಥ ಖಾಸಗಿಯವರನ್ನು ಇಟ್ಟುಕೊಳ್ಳುವುದೇಕೆ? ಇಲಾಖೆ ಅಂಥವನ್ನು ಮುಚ್ಚುವುದು ಬಿಡಿ ಅನುಮತಿಯನ್ನು ಕೊಡಲು ವಿಳಂಭವನ್ನೂ ಮಾಡುವುದಿಲ್ಲ. ಸರಕಾರ ಯಾವುದೇ ಬರಲಿ ಅಧಿಕಾರ ಶಾಹಿಯ ದುರಾಡಳಿತವನ್ನು  ನೋಡಬೇಕೆಂದರೆ ಶಿಕ್ಷಣ ಇಲಾಖೆಗೇ ಬರಬೇಕು. ಇಲ್ಲಿ ಅಧಿಕಾರಿಗಳ  ಕೈಬೆಚ್ಚಗೆ ಮಾಡಿದರೆ  ಕನ್ನಡ ಶಾಲೆಯ ಅನುಮತಿಯಲ್ಲೇ ಇಂಗ್ಲಿಷನ್ನು ಪಾಠ ಮಾಡುವುದು ಹೇಗೆಂಬ ತಂತ್ರವನ್ನೂ ಹೇಳಿಕೊಡುತ್ತಾರೆ ಎಂಬ ಮಾತಿದೆ.  ಇನ್ನು ನೇಮಕಾತಿ ಎಂಬುದು ಕುಂಟು ಕುದುರೆಯೇ ಸೈ. ಇಂಥಿಂಥ  ವರ್ಷ ಇಂಥಿಂಥ ಶಾಲೆಯಲ್ಲಿ ಇಂಥಿಂಥ ಶಿಕ್ಷಕರು ನಿವೃತ್ತರಾಗುತ್ತಾರೆ ಎಂದು ಗೊತ್ತಿದ್ದರೂ ಹೊಸ ನೇಮಕಾತಿ ಶಿಘ್ರವಾಗಿ ಆಗುವುದಿಲ್ಲ. ಇನ್ನು ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಹೇಗೆ ಸಾಧ್ಯ? ಇದೆಲ್ಲದರ ನಡುವೆಯೂ ಮುಚ್ಚುವ ಮನಸ್ಸು ಬರುವುದಾದರೂ  ಹೇಗೆ ?

ಸಮಾಜದ ಮಾನಸಿಕತೆ ಇಂದು ವಿಪರೀತವಾದ ಕೀಳರಿಮೆಯಿಂದ ಬಳಲುತ್ತಿದೆ. ಆದರೆ ಸರಕಾರವೂ ಅದಕ್ಕೆ ಇಂಬು ಕೊಡುವುದು ಸರಿಯೇ? ಇಂದು ಸರಕಾರಕ್ಕೆ ಶಿಕ್ಷಣ ಇಲಾಖೆಯನ್ನು ಅತ್ಯದ್ಭುತವಾಗಿ ರೂಪಿಸಬಲ್ಲ ತಾಕತ್ತಿದೆ. ಖಾಸಗಿ ಸಂಸ್ಥೆಗಳಿಗಿಂತಲೂ ಪ್ರತಿಭಾವಂತರಾದ ಶಿಕ್ಷಕರು ಸರಕಾರಿ ಸಂಸ್ಥೆಗಳಲ್ಲಿದ್ದಾರೆ. ಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸಬಲ್ಲ ಅನಿವಾರ್ಯತೆಯೂ ಇರುವ ಈ ಹೊತ್ತಿನಲ್ಲಿ ಸರಕಾರಕ್ಕೇ ದ್ವಂದ್ವಗಳಿದ್ದರೆ ನಿರೀಕ್ಷೆಗಳು ಇನ್ನಾರ ಮೇಲೆ ಇಟ್ಟುಕೊಳ್ಳೋಣ? ನಿಜವಾಗಿಯೂ  ಸರಕಾರಿ ಶಾಲಾ ಮಕ್ಕಳಲ್ಲಿ ಇಂದಿಗೂ ಜೀವಂತಿಕೆ ಇದೆ. ಅವರಿಗೆ ಬಸವಣ್ಣ ಗೊತ್ತಿದ್ದಾನೆ. ಬಾಪೂಜಿ ಪರಿಚಯವಿದ್ದಾನೆ. ಕಗ್ಗದ ಪದ್ಯಗಳು, ತಿರುಕನ ಕನಸ್ಸುಗಳು ಅವರಿಗೆ ಗೊತ್ತಿದೆ. ಅದನ್ನು ಮತ್ತಷ್ಟು ಪ್ರಭಾವಿಗೋಳಿಸುವ ಪ್ರಯತ್ನ ಮಾಡಬೇಕಲ್ಲದೆ  ಮುಚ್ಚುವ ಮಾತನ್ನಾಡುವುದೇ?

ಒಂದು ವೇಳೆ ಸರಕಾರಿ ಶಾಲೆಗಳನ್ನು ಮುಚ್ಚುವುದೇ ಆದರೆ ಪ್ಯಾಕೇಜಿನಂತೆ ಶಿಕ್ಷಣವನ್ನು ಮಾರುವವರಿಗೆ ಲಾಭವೇ ಆಗುತ್ತದೆ. ಸ್ಕೂಲ್ ಡೇ ನಲ್ಲಿ ಝಾನ್ಸಿರಾಣಿಯ ವೇಷ ಹಾಕಿಸಿ ಇಂಗ್ಲಿಷಿನಲ್ಲಿ ಡೈಲಾಗ್ ಹೊಡೆಸುವ, ಎಕಾನ್ ಹಾಡಿಗೆ ಡ್ಯಾನ್ಸ್ ಮಾಡಿಸುವ, ಹೋಮ್ ವರ್ಕ್ ಕೊಟ್ಟು ಹೊರೆಯನ್ನು ಕಮ್ಮಿ ಮಾಡಿಕೊಳ್ಳುವ ,ರೈನ್‌ರೈನ್ ಗೋ ಅವೇ ಎಂದು ಮಳೆರಾಯನನ್ನೇ ದೂರ ಓಡಿಸುವ ಪದ್ಯವನ್ನು ಕಲಿಸುವ, ಕುಣಿಯುವ ವಯಸ್ಸಲ್ಲಿ  ಒತ್ತಡವನ್ನು ಬೆಳೆಸುವ, ಹಳಸಿದ ಸ್ನ್ಯಾಕ್ಸ್ ಬಾಕ್ಸ್‌ಗಳಲ್ಲಿ ಹಳಸಿದ್ದನ್ನೇ ತಿನ್ನಿಸುವ ಡಾನ್, ಡೂನ್, ಮ್ಯಾಂಚೆಷ್ಟರ್, ಕ್ಯಾಂಬ್ರಿಜ್,ಸೈಂಟ್ ,ಇಂಟರ್‌ನ್ಯಾಷನಲ್ ಸ್ಕೂಲುಗಳಿಗೆ  ಮತ್ತಷ್ಟು ಬಲಬಂದತೆಯೇ. ಅಂಥವುಗಳ ಸಂಖ್ಯೆ ಹೆಚ್ಚಾದಂತೆಯೇ .

ಮುಚ್ಚುವ ಮಾತಿನ ಹಿಂದೆ  ಕೀಳರಿಮೆಯಿಲ್ಲವಷ್ಟೇ?

ನಿಜವಾಗಿಯೂ  ಸರಕಾರಿ ಶಾಲಾ ಮಕ್ಕಳಲ್ಲಿ ಇಂದಿಗೂ ಜೀವಂತಿಕೆ ಇದೆ. ಅವರಿಗೆ ಬಸವಣ್ಣ ಗೊತ್ತಿದ್ದಾನೆ. ಬಾಪೂಜಿ ಪರಿಚಯವಿದ್ದಾನೆ. ಕಗ್ಗದ ಪದ್ಯಗಳು, ತಿರುಕನ ಕನಸ್ಸುಗಳು ಅವರಿಗೆ ಗೊತ್ತಿದೆ. ಅದನ್ನು ಮತ್ತಷ್ಟು ಪ್ರಭಾವಿಗೋಳಿಸುವ ಪ್ರಯತ್ನ ಮಾಡಬೇಕಲ್ಲದೆ  ಮುಚ್ಚುವ ಮಾತನ್ನಾಡುವುದು ಸರಿಯೇ?

 

 

‍ಲೇಖಕರು avadhi

5 December, 2011

1 Comment

  1. vijayaraghavan

    Nice. I endorse the opinion
    vijayaraghavan

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading