
ರಹಮತ್ ತರೀಕೆರೆ
ಮುನ್ನುಡಿ
ಲೇಖಕಿ ಎನ್ ಗಾಯತ್ರಿ ಅವರ ಈ ಸಂದರ್ಶನ ಸಂಪುಟಕ್ಕೆ ಮುನ್ನುಡಿ ಬರೆಯಲು ಸಂತೋಷವಾಗುತ್ತಿದೆ. ಕಾರಣ, ನಾನೂ ಈ ಪ್ರಕಾರದಲ್ಲಿ ಏಗಿ ಕಷ್ಟಸುಖ ಉಂಡವನು. ಕಷ್ಟವೇನೆಂದರೆ ಸಂದರ್ಶನ ಕೊಡುವ ಸಾಧಕರನ್ನು ಒಪ್ಪಿಸುವುದು, ಅವರ ಸಮಯಕ್ಕಾಗಿ ಕಾಯುವುದು, ಮನೆಗೆ ಹೋಗುವುದು, ಅವರು ಮಾತಾಡಿದ್ದನ್ನು ಬರೆಹಕ್ಕಿಳಿಸುವುದು, ಮಾತುಕತೆಯ ಭರದಲ್ಲಿ ಬಂದದ್ದನ್ನೆಲ್ಲ ಕೇರಿ ತೂರಿ ಜೋಡಿಸಿ ಅಂತಿಮ ರೂಪ ಸಿದ್ದಪಡಿಸುವುದರಲ್ಲಿ ಜೀವ ಹೈರಾಣವಾಗುತ್ತದೆ. ಆದರೆ ಸಂದರ್ಶನವನ್ನು ಓದುಗರು ಮೆಚ್ಚಿಕೊಂಡಾಗ ಪಟ್ಟಕಷ್ಟವೆಲ್ಲ ಆವಿಯಂತೆ ಹಾರಿಹೋಗುತ್ತದೆ.
ಸಂದರ್ಶನಗಳು ಪತ್ರಿಕೆಯಲ್ಲೇ ಇರಲಿ, ಪುಸ್ತಕ ರೂಪದಲ್ಲೇ ಇರಲಿ, ಸಾಧಕರು ತೆರೆದ ಮನಸ್ಸಿನಿಂದ ತಮ್ಮ ಭಾವನೆ ಚಿಂತನೆ ಹಂಚಿಕೊಳ್ಳುವ, ನಾಟಕೀಯ ವಿನ್ಯಾಸದಲ್ಲಿರುವ ಕಾರಣದಿಂದ ಓದುಗರಿಗೆ ಇಷ್ಟವಾಗುತ್ತವೆ. ಕನ್ನಡದಲ್ಲಿ ಸಾವಿರಾರು ಸಂದರ್ಶನಗಳು ಪ್ರಕಟವಾಗಿವೆ. ಸಂಕಲನವಾಗಿ ಪ್ರಕಟವಾಗಿರುವುದು ಕಡಿಮೆ.
ಮಾಸ್ತಿ, ಕುವೆಂಪು, ನರಸಿಂಹಸ್ವಾಮಿ ಮುಂತಾದ ಹಿರಿಯ ಲೇಖಕರ ಸಂದರ್ಶನಗಳ ಪ್ರತ್ಯೇಕ ಸಂಪುಟ ಬಂದಿವೆ. ಆದರೆ ಬೇರೆಬೇರೆ ವ್ಯಕ್ತಿಗಳ ಸಂದರ್ಶನಗಳನ್ನುಳ್ಳ ಸಂಕಲನಗಳು ಕಡಿಮೆ. ಅಂತಹ ಕೂಡುಸಂಕಲನವನ್ನು ಪ್ರಕಟಿಸಿದವರಲ್ಲಿ ರಾಮಚಂದ್ರ ಶರ್ಮರು (‘ಪ್ರತಿಭಾ ಸಂದರ್ಶನ’) ಪ್ರಥಮರೆನ್ನಬಹುದು. ತರುವಾಯ ಹಲವಾರು ಸಂದರ್ಶನ ಸಂಕಲನಗಳು ಪ್ರಕಟವಾದವು. ಅವುಗಳ ಹಿನ್ನೆಲೆಯಲ್ಲಿ ಪ್ರಸ್ತುತ ಸಂದರ್ಶನ ಲೇಖನಗಳ ಸಂಕಲನವು ನಾಲ್ಕು ಕಾರಣಗಳಿಂದ ವಿಶಿಷ್ಟವಾಗಿದೆ.
ಮೊದಲನೆಯದಾಗಿ ಇಲ್ಲಿನ ಸಂದರ್ಶನಗಳಿಗಿರುವ ಸೈದ್ಧಾಂತಿಕ ಚೌಕಟ್ಟಿನ ಕಾರಣದಿಂದ. ಇದೊಂದು ಸ್ತ್ರೀವಾದಿ ಮಾಕ್ರ್ಸಿಸ್ಟ್ ಚೌಕಟ್ಟು. ಹೆಚ್ಚಿನ ಸಂದರ್ಶನ ನೀಡುಗರು ಎಡಪಂಥೀಯರೂ ಮಹಿಳೆಯರೂ ಆಗಿರುವುದರಿಂದ ಇದು ಸಾಧ್ಯವಾಗಿದೆ.
ಬಹುತೇಕ ಪ್ರಶ್ನೆ ಮತ್ತು ಉತ್ತರಗಳು ಈ ಚೌಕಟ್ಟಿನೊಳಗಿಂದಲೇ ಹೊಮ್ಮಿ ಬಂದಿವೆ. ಹೀಗಾಗಿ ಸಂಕಲನವು ತಾತ್ವಿಕ ಜಿಜ್ಞಾಸೆಯ ಸಂಪುಟವಾಗಿದೆ. ಈ ಜಿಜ್ಞಾಸೆಗೆ ಸಾಧಕರ ವೈಯಕ್ತಿಕ ಅನುಭವದ ಆಪ್ತತೆಯ ಅಂಚಿದೆ.
ಎರಡನೆಯದಾಗಿ, ಇಲ್ಲಿನ ಸಂದರ್ಶನಗಳು ಕಟ್ಟಿಕೊಡುತ್ತಿರುವ ಚರಿತ್ರೆಯ ಕಾರಣದಿಂದ. ಭಾರತದ ಅರ್ಧ ಶತಮಾನದ ಚಳುವಳಿಗಳ ಚರಿತ್ರೆಯೇ ಇಲ್ಲಿ ಮೈದೆರೆಯುತ್ತದೆ. ಕಳೆದೆರಡು ದಶಕಗಳಲ್ಲಿ ನಡೆದಿರುವ ವಿದ್ಯಮಾನಗಳ ಕನ್ನಡಿ ನೋಟವೂ ಸಿಗುತ್ತದೆ. ಹೀಗಾಗಿ ಇದೊಂದು ವಿಭಿನ್ನ ಪ್ರದೇಶ ಮತ್ತು ಕಾಲಘಟ್ಟಗಳಲ್ಲಿ ನಡೆದ ಜನಪರ ಚಳುವಳಿಗಳ ಸೋಲು-ಗೆಲುವಿನ ಚರಿತೆ.
ಸಂದರ್ಶನ ಮತ್ತು ವ್ಯಕ್ತಿಚಿತ್ರಗಳ ಮೂಲಕ ಕಟ್ಟಿಕೊಳ್ಳುವ ಇಲ್ಲಿನ ಚರಿತ್ರೆ ಮಾನವೀಯ ಘಟನೆಗಳಿಂದ ಕೂಡಿದೆ. ಕನ್ನಡದಲ್ಲಿ ಮಹಿಳಾ ಸಾಹಿತ್ಯ ಚರಿತ್ರೆಗಳಿವೆ. ಆದರೆ ಮಹಿಳಾ ಆಕ್ಟಿವಿಸ್ಟರ ಚರಿತ್ರೆಗಳು ಕಡಿಮೆ. ಇಲ್ಲಿನ ಸಾಧಕಿಯರು ಬದುಕನ್ನು ಕಟ್ಟಿಕೊಳ್ಳಲು ಹಾಗೂ ಸಮಾಜವನ್ನೂ ಕಟ್ಟಲು ಮಾಡಿರುವ ಸೆಣಸಾಟ ಅಪೂರ್ವವಾಗಿವೆ. ಸಾಂಪ್ರದಾಯಿಕ ಚರಿತ್ರೆಯು ಬಿಟ್ಟುಹೋಗಿರುವ ಲೋಕಗಳನ್ನು ಒಳಗೊಂಡಿರುವ ಇದೊಂದು ಪರ್ಯಾಯ ಚರಿತ್ರೆಯ ಸಂಪುಟವಾಗಿದೆ.

ಮೂರನೆಯದಾಗಿ, ಚರಿತ್ರೆಯಲ್ಲಿ ನಡೆದುಹೋದ ವಿದ್ಯಮಾನಗಳನ್ನು ವರ್ತಮಾನದ ಕಠೋರ ವಾಸ್ತವದಲ್ಲಿ ಮತ್ತು ನಿಕಷದಲ್ಲಿ ಇಟ್ಟು ಮಾಡಲಾಗಿರುವ ವಿಮರ್ಶೆಯಿಂದ. ಇದೊಂದು ಬಗೆಯಲ್ಲಿ ಸಾಧಕರ ಹಾಗೂ ಅವರು ನಂಬಿದ ಸಿದ್ಧಾಂತ ಮತ್ತು ಮಾರ್ಗಗಳ ಸ್ವವಿಮರ್ಶೆಯೂ ಆಗಿದೆ.
ಮಾರುಕಟ್ಟೆವಾದವೂ ಮತೀಯವಾದವೂ ವಿಜೃಂಭಿಸುತ್ತಿರುವ ಹಾಗೂ ಜನಪರ ಸಿದ್ಧಾಂತ, ಚಳುವಳಿ ಹಾಗೂ ರಾಜಕಾರಣಗಳು ಹಿನ್ನಡೆ ಅನುಭವಿಸುತ್ತಿರುವ ಈ ಕಾಲಘಟ್ಟದಲ್ಲಿ, ಈ ಪ್ರಾಮಾಣಿಕವೂ ಮುಕ್ತವೂ ಆದ ಈ ಸ್ವ ವಿಮರ್ಶೆಗಳಿಗೆ ಚಾರಿತ್ರಿಕ ಮಹತ್ವವಿದೆ.
ನಾಲ್ಕನೆಯದಾಗಿ, ಇಲ್ಲಿರುವ ಮುಂಗಾಣ್ಕೆಯ ಆಯಾಮದಿಂದ. ಸಂದರ್ಶನ ನೀಡಿರುವ ಬಹುತೇಕರು ಆಕ್ಟಿವಿಸ್ಟರು. ಸಮಾಜಕ್ಕಾಗಿ ಬಾಳನ್ನೇ ತೇದವರು. ಹೀಗಾಗಿ ಇಲ್ಲಿನ ಸೈದ್ಧಾಂತಿಕ ಚರ್ಚೆ ಕೇವಲ ಶೈಕ್ಷಣಿಕ ನೆಲೆಯಲ್ಲಿಲ್ಲ. ಕ್ರಿಯಾಚರಣೆಯ ನೆಲೆಯಲ್ಲೂ ಇದೆ. ಸಿದ್ಧಾಂತ, ವಾಸ್ತವ ಹಾಗೂ ಕ್ರಿಯೆಯ ನಡುವಣ ಬೆಸುಗೆ ಮತ್ತು ಬಿರುಕುಗಳನ್ನು ಸಾಧಕರು ತಮ್ಮ ಅನುಭವ ಮತ್ತು ಚಿಂತನೆಯ ಮೂಲಕ ಕಾಣಿಸಿರುವರು.
ಚಳುವಳಿಗಳನ್ನೂ ಅವುಗಳ ತಾತ್ವಿಕತೆಯನ್ನೂ ಹೇಗೆ ಮರುಕಟ್ಟಬೇಕೆಂದು ಹೊಳಹು ಕೊಡುವರು. ಅದರಲ್ಲೂ ಗೋವಿಂದ ಪನ್ಸಾರೆಯವರು ಭಾರತದ ಕಮ್ಯುನಿಸ್ಟ್ ಚಳುವಳಿಯು ಸಾಂಸ್ಕೃತಿಕ ಪರಂಪರೆಗಳ ಜತೆ ಮಾಡುವ ಅನುಸಂಧಾನ ಕುರಿತು ಆಡಿರುವ ಮಾತುಗಳು; ದಲಿತರನ್ನು ಮತ್ತು ರೈತರನ್ನು ಒಳಗೊಳ್ಳುವ ಕನ್ಹಯ್ಯನವರ ಮಾತುಗಳು ಮಹತ್ವದವಾಗಿವೆ.
ಮುಕ್ತಾ ದಾಭೋಳ್ಕರ್ ಅವರು ಮಹಾರಾಷ್ಟ್ರದಲ್ಲಿ ವಿಚಾರವಾದಿ ಚಳುವಳಿಯನ್ನು ಕೇವಲ ಸಂಪ್ರದಾಯವಾದಿಗಳನ್ನು ಪ್ರತಿರೋಧಿಸುವ ನೆಲೆಯಲ್ಲಿ ಕಟ್ಟುವುದಕ್ಕೆ ಬದಲಾಗಿ, ಬೇರೆ ಬೇರೆ ಜನಸಮುದಾಯಗಳನ್ನು ಒಳಗೊಳ್ಳುವ ನೆಲೆಯಲ್ಲಿ ಮಾಡಿರುವ ಪ್ರಯೋಗಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಯೋಗಗಳಲ್ಲಿ ಕರ್ನಾಟಕದ ಚಳುವಳಿಗಳು ಕಲಿಯಬೇಕಾದ ಪಾಠದ ಎಳೆಗಳಿವೆ. ಹೀಗಾಗಿ ಈ ಸಂಕಲನವು ಹೊಸದಾಗಿ ಚಳುವಳಿಗಳನ್ನು ಕಟ್ಟುವ ಕಾಣ್ಕೆಗಳಿರುವ ಮ್ಯಾನಿಫೆಸ್ಟೊ ಆಗಿದೆ.
ಇಲ್ಲಿನ ಸಂದರ್ಶನಗಳು ಸಾಧಕರ ವ್ಯಕ್ತಿಚಿತ್ರಗಳೂ ಆಗಿವೆ. ಗೋವಿಂದ ಪಾನ್ಸರೆ, ಅನಸೂಯಮ್ಮ, ರಂಗನಾಯಕಮ್ಮ, ಪ್ರತಿಭಾರೇ, ಕೋಟೇಶ್ವರಮ್ಮ, ವಿಜಯಮ್ಮ ಅವರ ಅನುಭವ ಮತ್ತು ವ್ಯಕ್ತಿಚಿತ್ರಗಳು ವಿಶಿಷ್ಟವಾಗಿದೆ. ಸಂದರ್ಶನಗಳು ಗಾಯತ್ರಿಯವರ ಪರಿಚಯಾತ್ಮಕ ಟಿಪ್ಪಣಿ ಹಾಗೂ ಜೀವನ ಚರಿತ್ರಾತ್ಮಕ ವಿವರಣೆಯಿಂದಲೂ, ಸೈಡ್‍ವಿಂಗಿನ ಕೆಲವು ಮಾಹಿತಿಗಳಿಂದಲೂ (ಉದಾ: ರಂಗನಾಯಕಮ್ಮನವರ ಮನೆಯಲ್ಲಿರುವ ಸೂಚನಾಫಲಕಗಳು,) ಸ್ವಾರಸ್ಯಕರವಾಗಿ ಓದಿಸಿಕೊಳ್ಳುವ ಲೇಖನಗಳೂ ಆಗಿವೆ.
ಪಾನ್ಸರೆ ಹಾಗೂ ಪ್ರತಿಭಾ ರೇ ಅವರ ಮಾತು ಕತ್ತಿವರಸೆಯಂತೆ ಖಡಕ್ಕಾಗಿವೆ. ಕನ್ಹಯ್ಯ ಮುಕ್ತಾ ಸರಸ್ವತಿ ಬಿಟ್ಟರೆ ಇಲ್ಲಿನ ಹೆಚ್ಚಿನ ಸಾಧಕರು ಹಿರಿಯರು. ಹೀಗಾಗಿ ಈ ಸಂಕಲನದ ಓದು ಫಲಬಿಟ್ಟ ಮರಗಳಿರುವ ತೋಟದಲ್ಲಿ ವಿಹಾರ ಮಾಡಿದ ಅನುಭವ ಕೊಡುತ್ತದೆ. ಪಾನ್ಸರೆ ಹಾಗೂ ಪ್ರತಿಭಾ ರೇ ಅವರ ಮಾತು ಕತ್ತಿವರಸೆಯಂತೆ ಖಡಕ್ಕಾಗಿವೆ.
ಇಲ್ಲಿನ ಪ್ರಶ್ನೆಗಳಲ್ಲಿ ಕೆರಳಿಸಿ ವಾಗ್ವಾದಕ್ಕೆಳೆಯುವುದಕ್ಕಿಂತ ಹೆಚ್ಚಾಗಿ ಅನುಭವ ಸಂಗ್ರಹಿಸುವ ಹಾಗೂ ಚಿಂತನೆ ಪಡೆದುಕೊಳ್ಳುವ ನಮ್ರ ವಿನ್ಯಾಸವಿದೆ. ಹೀಗಾಗಿ ಭಿನ್ನ ಮತಗಳ ಜತೆ ವಾಗ್ವಾದ ಮಾಡುವ ಗುಣ ಕಡಿಮೆಗೊಂಡಿದೆ. ಹಾಗೆ ಭಿನ್ನಮತ ತೋರುವ ಕಡೆ ಸಂದರ್ಶನ ಜೀವ ತಳೆವ ಪರಿಯನ್ನು ವೈದೇಹಿಯವರ ಸಂದರ್ಶನದಲ್ಲಿ ನೋಡಬಹುದು.
ಚರಿತ್ರೆಯ ನೋಟವನ್ನೂ ವರ್ತಮಾನದ ವಿಶ್ಲೇಷಣೆಯನ್ನೂ ನಾಳಿನ ಮುನ್ನೋಟವನ್ನೂ ಏಕಕಾಲಕ್ಕೆ ಕಟ್ಟಿಕೊಡುತ್ತಿರುವ ಈ ಸಂದರ್ಶನಗಳು, ಕನ್ನಡಿಗರ ರಾಜಕೀಯ ಸಾಮಾಜಿಕ ಪ್ರಜ್ಞೆಯನ್ನು ವಿಸ್ತರಿಸುವ ಕಸುವನ್ನು ಹೊಂದಿವೆ. ಈ ಕೃತಿ ಕನ್ನಡದ ಪ್ರಜ್ಞಾವಂತ ಓದುಗರಿಗೆ ಪ್ರಿಯವಾಗಲಿದೆ ಎಂದು ನನ್ನ ನಂಬಿಕೆ. ಗಾಯತ್ರಿಯವರಿಗೂ ನವಕರ್ನಾಟಕಕ್ಕೂ ಓದುಗರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

ಎನ್. ಗಾಯತ್ರಿ
ಅರಿಕೆ
ವೃತ್ತಿಯಿಂದ ಪತ್ರಕರ್ತೆಯಾಗದಿದ್ದರೂ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು, ಸಾಹಿತಿಗಳನ್ನು , ಸಾರ್ವಜನಿಕ ವ್ಯಕ್ತಿಗಳನ್ನು ಸಂದರ್ಶನ ಮಾಡುವುದು ನನ್ನ ಪ್ರಿಯ ಹವ್ಯಾಸಗಳಲ್ಲಿ ಒಂದು. ಮೊದಲಿಗೆ ನಾನು ಮಾಡಿದ ಸಂದರ್ಶನ ಆಕಾಶವಾಣಿಗೆಂದು. 1976ರಲ್ಲಿ ಡಾ| ಎಚ್ ನರಸಿಂಹಯ್ಯನವರು, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ, ನ್ಯಾಷನಲ್ ಕಾಲೇಜಿನಲ್ಲಿ ಬಿಎ ಓದುತ್ತಿದ್ದ ಸಂದರ್ಭದಲ್ಲಿ ನಾನು ಮತ್ತು ಗೆಳತಿ ಬಿ ಕೆ ಗಾಯತ್ರಿ ಆಕಾಶವಾಣಿಗೆ ಹೋಗಿ ಅವರ ಸಂದರ್ಶನ ಮಾಡಿದ್ದೆವು.
ನಂತರ ಕೆ ವಿ ಅಯ್ಯರ್, ನಿರಂಜನ, ಸರೋಜಿನಿ ಮಹಿಷಿ, ವೈದೇಹಿ, ಸುನಂದಾ ಬೆಳಗಾಂವಕರ್.. ಹೀಗೆ ಆಕಾಶವಾಣಿಗೆಂದು ಮಾಡಿರುವ ಸಂದರ್ಶನಗಳು ಹಲವಾರು. ಆದರೆ ನಾನು ಸಂದರ್ಶನ ಲೇಖನಗಳನ್ನು ಬರಹಕ್ಕೆ ಇಳಿಸಿ ಪ್ರಕಟಿಸಲು ಆರಂಭಿಸಿದ್ದು ಸಮುದಾಯ ವಾರ್ತಾಪತ್ರ, ಅಚಲ, ಹೊಸತು, ಮತ್ತು ಪ್ರಜಾವಾಣಿಯಲ್ಲಿ.
20 ವರ್ಷಗಳಿಂದ ಯಶಸ್ವಿಯಾಗಿ ಪ್ರಕಟವಾಗುತ್ತಿರುವ ‘ಹೊಸತು’ ಪತ್ರಿಕೆಯ ಭಾಗವಾಗಿರುವ ನನಗೆ ಸಂದರ್ಶನ ಮಾಡುವ ಹಲವಾರು ಅವಕಾಶಗಳು ಸಿಕ್ಕಿವೆ. ಈ ಪತ್ರಿಕೆಗೆಂದೇ ಸುಮಾರು ಐವತ್ತಕ್ಕೂ ಹೆಚ್ಚು ಸಂದರ್ಶನಗಳಲ್ಲಿ ಭಾಗಿಯಾಗಿದ್ದೇನೆ. ಈ ಪತ್ರಿಕೆಯು ನಡೆಸುವ ಸಂದರ್ಶನದ ಶೈಲಿಯೂ ವಿಶಿಷ್ಟ.
ಅಲ್ಲೊಂದು ಸಾಮೂಹಿಕ ಭಾಗವಹಿಸುವಿಕೆ ಇರುತ್ತದೆ. ಹಾಗಾಗಿ ನನ್ನ ಜೊತೆ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರುಗಳು, ಇಲ್ಲವೇ ತಜ್ಞರು ಇರುತ್ತಿದ್ದರು. ಅದೊಂದು ಕಲಿಕೆಯ ಪ್ರಯೋಗ. ಕೆಲವು ಬಾರಿ ನಾನು ಒಬ್ಬಳೇ ಬೇರೆ ಕಾರಣಕ್ಕೆ ಊರುಗಳಿಗೆ ಹೋಗಿದ್ದಾಗ ಸಂದರ್ಶನಗಳನ್ನು ನಡೆಸಿದ್ದಿದೆ.
ಮತ್ತೆ ಕೆಲವು ಸಂದರ್ಭಗಳಲ್ಲಿ ಸಂದರ್ಶನಕ್ಕಾಗಿಯೇ ಸಂದರ್ಶಿತರ ಊರುಗಳಿಗೆ ಹೋಗಿರುವುದೂ ಉಂಟು. ದೂರದ ಕೊಲ್ಹಾಪುರ, ವಿಶಾಖಪಟ್ಟಣ, ಹೈದರಾಬಾದ್, ಮೈಸೂರು, ಕೋಲಾರ ಹೀಗೆ.. ಹೊರ ಊರುಗಳಿಗೆ ಸಂದರ್ಶನಕ್ಕೆಂದೇ ಹೋದ ಸಂದರ್ಭಗಳಲ್ಲಿ ಪತ್ರಿಕೆಯ ಸಂಪಾದಕರಾದ ಡಾ. ಜಿ ರಾಮಕೃಷ್ಣ ಅವರೂ ನನ್ನೊಡನಿರುತ್ತಿದ್ದುದುಂಟು.
ಸಂದರ್ಶನವನ್ನು ಹೀಗೇ ಮಾಡಬೇಕೆಂಬ ನೀತಿ-ನಿಯಮಾವಳಿ ಏನಾದರೂ ಇದೆಯೇ? ನನಗೆ ಗೊತ್ತಿಲ್ಲ. ಸಂದರ್ಶನವೆಂದರೆ ಪ್ರಶ್ನೋತ್ತರ ಮಾತ್ರವೇ? ಇಲ್ಲ, ಮಾತು-ಕತೆಯಷ್ಟೆಯೇ? ನನಗೇನೋ ಇದು ಇವೆಲ್ಲಕ್ಕಿಂತ ಮೀರಿದ್ದು. ಸಂದರ್ಶನ ನಡೆಸುವುದಕ್ಕೆ ಮಾಡುವ ಪೂರ್ವ ತಯಾರಿಯೇ ಒಂದು ಜ್ಞಾನಾರ್ಜನೆ.

ಸಂದರ್ಶನಗಳು ಸ್ವರೂಪದಲ್ಲಿ ಪ್ರಶ್ನೋತ್ತರವೇ ಆದರೂ ಸಂದರ್ಶನ ಪ್ರಕ್ರಿಯೆಯಲ್ಲಿ ಬಿಚ್ಚಿಕೊಳ್ಳುವ ಸಂದರ್ಶಿತರ ವಿಚಾರಲೋಕ ನನಗೆ ಹೊಸದೊಂದು ಜ್ಞಾನದ ವಿಶ್ವವನ್ನೇ ತೆರೆದಿದೆ. ಕೆಲವೊಮ್ಮೆ ಸಂದರ್ಶಿತ ಮತ್ತು ಸಂದರ್ಶಕರ ವಿಚಾರ ವಿನಿಮಯಗಳು ಚರ್ಚೆಯ ಸ್ವರೂಪವನ್ನು ಪಡೆಯಬಹುದು; ಎಷ್ಟೋ ಕ್ಲಿಷ್ಟಕರ ಸಮಸ್ಯೆಗಳಿಗೆ ಉತ್ತರ ಸಿಗಬಹುದು.
ವೈದೇಹಿಯವರ ಸಂದರ್ಶನದಲ್ಲಿ ವೈದೇಹಿಯವರು ನನಗೇ ಪ್ರಶ್ನೆ ಮಾಡಿ ಉತ್ತರ ನೀಡಬೇಕೆಂದು ಒತ್ತಾಯಿಸಿದ ಪ್ರಕರಣವಿದೆ. ಇದಕ್ಕೆ ನನ್ನ ಗುರುಗಳಾದ ಕಿ ರಂ ನಾಗರಾಜ ಅವರು “ಓಹೋ! ಸಂದರ್ಶನದಲ್ಲಿ ಹೀಗೂ ಮಾಡಬಹುದೇ?” ಎಂದು ತಮಾಷೆ ಮಾಡಿದ್ದರು. ಇಲ್ಲಿ ಸಂದರ್ಶನ ಮಾಡಿದ ಕೆಲವರನ್ನು ನಾನು ಕೆಲವು ವರ್ಷಗಳ ಅಂತರದಲ್ಲಿ ಎರಡೆರಡು ಬಾರಿ ಸಂದರ್ಶಿಸಿದ್ದೂ ಇದೆ. ಉದಾಹರಣೆಗೆ ಸಾರಾ ಅಬೂಬಕ್ಕರ್, ಕ್ಯಾಪ್ಟನ್ ಲಕ್ಷ್ಮಿ, ವೈದೇಹಿ, ಬರಗೂರು ರಾಮಚಂದ್ರಪ್ಪ ಇತ್ಯಾದಿ.
ಆಗ ಅವರ ವಿಚಾರಗಳಲ್ಲಾದ ಬದಲಾವಣೆಯ ಬಗ್ಗೆಯೂ ಪ್ರಶ್ನೆ ಕೇಳುವ ಅವಕಾಶಗಳು ಸಿಕ್ಕಿವೆ. ಒಟ್ಟಿನಲ್ಲಿ ನಾನು ಸಂದರ್ಶನಕ್ಕೆ ಇಂತಿಂಥವೇ ಮಾನದಂಡಗಳನ್ನು ಹಾಕಿಕೊಂಡಿಲ್ಲ. ಸಂದರ್ಶನಗಳನ್ನು ಮಾಡಿ ಪ್ರಕಟಿಸಿಯಾದ ಮೇಲೆ ಕೆಲವೊಮ್ಮೆ ಸಂದರ್ಶಿತರ ಅಸಮಾಧಾನ, ಸಿಟ್ಟು, ಸೆಡವುಗಳನ್ನು ಎದುರಿಸಲು ನಾವು ಸಿದ್ಧರಿರಬೇಕಾಗುತ್ತದೆ. ಅಂತಹ ಬಿಸಿ ಅನುಭವಗಳು ನನ್ನ ಬುತ್ತಿಯಲ್ಲಿ ಸಾಕಷ್ಟಿವೆ. ನನ್ನ ಸ್ನೇಹಿತರು ಮತ್ತು ಆಪ್ತರು ನನ್ನ ಈ ಸಂದರ್ಶನ ಲೇಖನಗಳ ಸಂಗ್ರಹವೊಂದನ್ನು ಪ್ರಕಟಿಸಲು ಒತ್ತಾಯಿಸುತ್ತಲೇ ಬಂದಿದ್ದಾರೆ. ಅಂತೂ ಕೊನೆಗೊಮ್ಮೆ ಈಗ ಕಾಲ ಕೂಡಿ ಬಂದಿದೆ.
‘ಹೊಸತು’ ಪತ್ರಿಕೆಯಲ್ಲಿ ಪ್ರಕಟವಾದ ಇಪ್ಪತ್ತೈದು ಸಂದರ್ಶನಗಳನ್ನು, ಪ್ರಜಾವಾಣಿ, ಅಚಲ ಮತ್ತು ಕಿರಣ ಸಂಚಿಕೆಯ ಮೂರು ಸಂದರ್ಶನಗಳನ್ನು ಆಯ್ಕೆ ಮಾಡಿ ಈ ಸಂಗ್ರಹದಲ್ಲಿ ಸೇರಿಸಿದ್ದೇನೆ. ಇಲ್ಲಿ ಲೇಖನಗಳನ್ನು ಪ್ರಕಟಿಸಲು ಅನುಮತಿ ಕೊಟ್ಟ ಈ ಪತ್ರಿಕೆಗಳ ಸಂಪಾದಕರಿಗೆ ನನ್ನ ವಂದನೆಗಳು. ನನ್ನ ಸಂದರ್ಶನ ಪ್ರಕ್ರಿಯೆಯಲ್ಲಿ ಜೊತೆಯಾದ ಸಹಪಯಣಿಗರನ್ನು ಇಲ್ಲಿ ಪ್ರೀತಿಯಿಂದ ನೆನೆಸಿಕೊಳ್ಳುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಅಮೂಲ್ಯ ಸಮಯವನ್ನು ನೀಡಿದ ಎಲ್ಲ ಸಂದರ್ಶಿತರೂ ಮತ್ತು ನಮಗೆ ಸುಗ್ರಾಸ ಭೋಜನವನ್ನು ನೀಡಿದ ಅವರ ಕುಟುಂಬದವರಿಗೂ ನನ್ನ ಅನಂತ ವಂದನೆಗಳು.
ಕನ್ನಡದ ಖ್ಯಾತ ವಿಮರ್ಶಕರೂ ಸಂಸ್ಕೃತಿ ಚಿಂತಕರೂ ಆದ ಡಾ|| ರಹಮತ್ ತರೀಕೆರೆಯವರು ನನ್ನ ಈ ಪುಸ್ತಕಕ್ಕೆ ಆತ್ಮೀಯತೆಯಿಂದ ‘ಮುನ್ನುಡಿ’ಯ ವಿಶ್ಲೇಷಣಾತ್ಮಕ ಹೊದಿಕೆಯನ್ನು ಹಾಕಿದ್ದಾರೆ. ಅವರಿಗೆ ನನ್ನ ವಿಶ್ವಾಸಪೂರ್ವಕ ವಂದನೆಗಳು.
ಚಿಕ್ಕ ವಯಸ್ಸಿಗೇ ಬೆರಗು ಹುಟ್ಟಿಸುವ ಪ್ರತಿಭೆಯನ್ನು ತೋರುತ್ತಿರುವ ಅಪ್ರತಿಮ ಕಲಾವಿದೆ ನಭಾ ಒಕ್ಕುಂದ ಪುಸ್ತಕದ ರಕ್ಷಾಪುಟಕ್ಕೆ ಅರ್ಥಪೂರ್ಣವಾದ ಕಲಾಕೃತಿಯನ್ನು ರಚಿಸಿ ನನ್ನ ಖುಷಿಯನ್ನು ಹೆಚ್ಚಿಸಿದ್ದಾಳೆ. ಅವಳಿಗೆ ನನ್ನ ಪ್ರೀತಿಯ ವಂದನೆಗಳು. ರಕ್ಷಾಪುಟಕ್ಕೆಂದು ಅಂದವಾದ ಛಾಯಚಿತ್ರವನ್ನು ತೆಗೆದುಕೊಟ್ಟ ಸ್ನೇಹಿತ ಕೌಶಿಕ್ ಆರ್ ಮುಡುಪಿರಿ ಅವರ ವಿಶ್ವಾಸವನ್ನು ನೆನೆಯುತ್ತೇನೆ.
ಇಲ್ಲಿನ ಸಂದರ್ಶನಗಳಿಗೂ ಮತ್ತು ಈ ಪುಸ್ತಕದ ರಚನೆಗೂ ನನಗೆ ಒತ್ತಾಸೆಯಾದ ಡಾ|| ಜಿ ಆರ್ ಅರವರ ಸಹಕಾರವನ್ನು ಪ್ರೀತಿಯಿಂದ ನೆನೆಯುತ್ತೇನೆ. ನನ್ನೆಲ್ಲ ಬರಹದ ಹಿಂದೆ ತಾಳ್ಮೆಯಿಂದ ಸಹಕರಿಸಿರುವ ಬಾಳ ಸಂಗಾತಿ ಟಿ ವಿ ಎಂ ಮತ್ತು ಮಗಳು ಮೈತ್ರಿಗೂ ನನ್ನ ನೆನಕೆಗಳು. ಈ ಪುಸ್ತಕ ಪ್ರಕಟವಾಗಲು ಮುಖ್ಯ ಕಾರಣಕರ್ತರಾದ ಶ್ರೀ ರಮೇಶ್ ಉಡುಪ ಮತ್ತು ಡಾ|| ಸಿದ್ದನಗೌಡ ಪಾಟೀಲ ಅವರಿಗೂ ಪ್ರಕಟಣೆಯ ಪ್ರಕ್ರಿಯೆಯಲ್ಲಿ ನೆರವಾದ ಅನಿತಾ, ಸುಲಕ್ಷಣ ಮತ್ತು ತುಳಸಿ ಅವರಿಗೂ ವಂದನೆಗಳು.






0 Comments