ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಬೈ ಕನ್ನಡಿಗರ ಸಂಭ್ರಮ

ಮುಂಬೈ ಕನ್ನಡಿಗರ ಸ್ವಂತಿಕೆಯ ನೆಲೆ ಕರ್ನಾಟಕ ಸಂಘ, ಮುಂಬೈಯ
ನೂತನ ಕಟ್ಟಡದ ಶಿಲಾನ್ಯಾಸ

ಶ್ಯಾಮಲಾ ಮಾಧವ 

ಮುಂಬೈ ಕನ್ನಡಿಗರನ್ನು ವರ್ಷದಿಂದ ಕಾಡಿದ ಅನಾಥಭಾವ ಮಾಯವಾಗಿ ಕನಸು ನನಸಾಗುವ ಸುದಿನ ಮೈದೋರಿದ ದಿನ.

ನವೀಕರಣದ ಯೋಜನೆಯಲ್ಲಿ ಎರಡು ವರ್ಷಗಳಿಂದ ತಟಸ್ಥವಾಗಿದ್ದ ಹಳೆಯ ಕಟ್ಟಡ ಅಳಿದು ನೂತನ ಸಮುಚ್ಚಯದ ಕಟ್ಟಡಕ್ಕೆ ಶಿಲಾನ್ಯಾಸದ ಸಂಭ್ರಮ. ನಾಡು ನುಡಿಯ ಸೇವೆಯಲ್ಲಿ ಸತತ ನಡೆಯುತ್ತಿದ್ದ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕೋತ್ಸವ, ಕಲಾಭಾರತಿಯ ಸಂಗೀತ ರಸದೌತಣ, ಕೃತಿ ಬಿಡುಗಡೆ, ಸಾಹಿತ್ಯ ಸಮಾವೇಶಗಳು, ನುಡಿಹಬ್ಬಗಳು ಹೀಗೆ ಎಲ್ಲ ಸಂಭ್ರಮವೂ, ನಮ್ಮದೆಂಬ ಈ ತಾಣದಲ್ಲಿ ಪುನಃ ಬೇಗನೇ ಸಂಪನ್ನಗೊಳ್ಳುವ ಭರವಸೆಗೆ ಇಂಬಾದ ಸುದಿನ.

ಶಿಲಾನ್ಯಾಸ ನೆರವೇರಿಸಿದ ಕರ್ನಾಟಕ ಸರಕಾರ ನಗರಾಭಿವೃಧ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರ ಕನ್ನಡ ನಾಡು, ನುಡಿಯ ಪ್ರೀತಿಯ ಸರಳ, ನಿರರ್ಗಳ, ಆಪ್ತ ನುಡಿಗಳು ಅಲ್ಲಿ ನೆರೆದಿದ್ದ ಎಲ್ಲ ಕನ್ನಡ ಮನಸುಗಳನ್ನೂ ಹೃದ್ಯವಾಗಿ ತಟ್ಟಿ ಅರಳಿಸಿದುವು. ತಾಯ್ನುಡಿ ಮತ್ತು ಸಂಸ್ಕೃತಿಯನ್ನು ಬೆಳೆಸುವ ಪ್ರೀತಿಯೊಡನೆ ಇತರ ಭಾಷೆಗಳನ್ನೂ ಅರಿತು ಬೆಳೆಯ ಬೇಕಾದ ಅಗತ್ಯದ ಬಗ್ಗೆ ಆಡಿದ ಅವರು, ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯರೆಲ್ಲರಿಗೆ ಗೌರವವನ್ನು ಸಲಿಸುತ್ತಾ, ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಕರ್ನಾಟಕ ಸರಕಾರದಿಂದ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆಯ ಮಾತುಗಳನ್ನಾಡಿದರು.

ವಿದುಷಿ, ಗಾಯಕಿ ಶ್ಯಾಮಲಾ ಪ್ರಕಾಶ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನ್ಯಾಶನಲ್ ಕನ್ನಡ ಎಜುಕೇಶನ್ ನೊಸೈಟಿ ಶಾಲೆಯ ಚಿಣ್ಣರು, ಕರ್ನಾಟಕ ಹಾಗೂ ಮಹಾರಾಷ್ಟ ನಾಡಗೀತೆಗಳನ್ನು ಹಾಡಿ ಉತ್ಸವ ಕಳೆ ಮೂಡಿಸಿದರು.

ಭೂಮಿಪೂಜೆಯೊಂದಿಗೆ ಶಿಲಾನ್ಯಾಸ ನೆರವೇರಿದ ಬಳಿಕ ಶಿಲಾನ್ಯಾಸ ಫಲಕವನ್ನು ಸಚಿವ ಯು.ಟಿ.ಖಾದರ್ ಅನಾವರಣ ಗೊಳಿಸಿದರು.
ಸಂಘದ ಅಧ್ಯಕ್ಷ ಮನೋಹರ ಎಂ.ಕೋರಿ ಅವರ ಅಧ್ಯಕ್ಷತೆಯಲ್ಲಿ, ಅತಿಥಿಗಳಾಗಿ ಆಗಮಿಸಿದ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ, ಸೂರತ್‌ನ ಆದಾಯ ಕರ ಆಯುಕ್ತ ಶ್ರೀನಿವಾಸ ಬಿದರಿ, ನಿವೃತ್ತ ಐ,ಎ.ಎಸ್, ಅಧಿಕಾರಿ ಐ.ಎಂ.ವಿಠಲಮೂರ್ತಿ ಅವರೊಡನೆ ಮೈಸೂರ್ ಅಸೋಸಿಯೇಶನ್‌ನ ಅಧ್ಯಕ್ಷೆ ಕೆ.ಕಮಲಾ ಹಾಗೂ ಸಂಘಟಕ ಕೆ. ಮಂಜುನಾಥಯ್ಯ, ಸಾಹಿತಿ ಜಯತೀರ್ಥರಾವ್ ಹಾಗೂ ಮುಂಬೈಯ ಹಲವಾರು ಕನ್ನಡ ಸಂಘ, ಸಂಸ್ಥೆಗಳ ಪ್ರಮುಖರು ವೇದಿಕೆಯಲ್ಲಿದ್ದರು.

ಸಾಹಿತಿ ರಾಜೀವ್ ನಾಯಕ್, ಕಲಾವಿದರಾದ ಅವಿನಾಶ್ ಕಾಮತ್, ಸುರೇಂದ್ರಕುಮಾರ್ ಶೆಟ್ಟಿ ಮಾರ್ನಾಡ್‌ರ ಸೊಗಸಾದ ನಿರೂಪಣೆಯೊಡನೆ ನೆರೆದ ಕನ್ನಡಾಭಿಮಾನಿಗಳ ಆಶಯ, ಧ್ಯೇಯೋದ್ಧೇಶಗಳ ಪ್ರತೀಕವಾಗಿ ಸಮಾರಂಭ ಸಂಪನ್ನಗೊಂಡಿತು.

‍ಲೇಖಕರು avadhi

5 March, 2019

2 Comments

  1. ರಾಜೀವ ನಾಯಕ

    ಶ್ಯಾಮಲಾ ಮ್ಯಾಡಮ್! ಮುಂಬೈ ಕನ್ನಡಿಗರ ತವರು ಸಂಸ್ಥೆಯಾದ ಕರ್ನಾಟಕ ಸಂಘದ ನೂತನ ಕಟ್ಟಡದ ಶಿಲಾನ್ಯಾಸದ ಚಿತ್ರ- ಬರಹ ಖುಶಿಕೊಟ್ಟಿತು. ಆ ದಿನದ ಉತ್ಸಾಹ ನೋಡಿದರೆ ಮುಂಬೈ ಕನ್ನಡಿಗರ ಕನಸು ಆದಷ್ಟು ಬೇಗ ಸಾಕಾರಗೊಳ್ಳಲಿದೆ ಅನಿಸುತ್ತದೆ.
    ಕೊನೆಯ ಫ್ರೇಮ್ ನಲ್ಲಿ ನಾನಿರುವ ಚಿತ್ರವನ್ನೂ ಸೆರೆ ಹಿಡಿದಿರುವಿರಿ..ಥ್ಯಾಂಕ್ಸ್ ನಿಮಗೆ:)

  2. Shyamala Madhav

    ಕನಸು ನನಸಾಗುವ. ಸಂತಸದಲ್ಲ್ಲಿ ನಾವೆಲ್ಲರೂ ಸಹಭಾಗಿಗಳು, ಅಲ್ವೇ, ರಾಜೀವ್? ನಿಮ್ಮ ಸಹಸ್ಪಂದನಕ್ಕೆ ಧ್ಯಾಂಕ್ಸ್!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading