ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

 ಮುಂಬಯಿ ಏಕಾಂತಕ್ಕೂ ಸೈ ಲೋಕಾಂತಕ್ಕೂ ಜೈ!!

ಮುಂಬಯಿ ಬಯಲೆಂಬೋ ಆಲಯ!ಏಕಾಂತಕ್ಕೂ ಸೈ ಲೋಕಾಂತಕ್ಕೂ ಜೈ!!

ಒಂದು ಊರು ಅಥವಾ ನಗರಕ್ಕೆ ಯಾವುದು ಮುಖ್ಯ? ರಸ್ತೆ, ಕಟ್ಟಡಗಳು, ಕೆರೆಬಾವಿ, ಒಳಚರಂಡಿ ವ್ಯವಸ್ಥೆ, ಕಲ್ಯಾಣ ಮಂಟಪ, ಸ್ಕೂಲು ಕಾಲೇಜುಗಳು,  ಮಂದಿರ, ಪಾರ್ಕು, ಆಸ್ಪತ್ರೆ? ಬಹುಶ: ಈ ಎಲ್ಲ ನಾಗರಿಕ ವ್ಯವಸ್ಥೆಗಳು ಬಹಳ ಮುಖ್ಯವಾಗಿರುವಂಥವೇ!

ಆದರೆ ಊರಿಗೊಂದಾದರೂ ಬಯಲು ಇಲ್ಲದಿದ್ದರೆ ಆ ಊರು ಊನವಾದಂತೆಯೇ! ನಗರಗಳಿಗಂತೂ ಓಪನ್ ಪ್ಲೇಸ್ ಅಂದರೆ ಸಾರ್ವಜನಿಕ ವೆಂಟಿಲೇಟರ್ ಇದ್ದ ಹಾಗೆ! ಕಾಂಕ್ರೀಟ್ ಕಾಡಿನ  ನಡುವೆ ಒಂದಿಷ್ಟು ಖಾಲಿ ಸ್ಥಳವಿದ್ದರೂ ಅದು ನೀಡುವ ನಿರಾಳತೆ ಅನುಪಮವಾದದ್ದು.

ಮೈದಾನಗಳಂಥ ಸಾರ್ವಜನಿಕ ಸ್ಥಳಗಳು ನಗರವಾಸಿಗಳ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡುತ್ತವೆ. ಇಕ್ಕಟ್ಟಿನ ನಡುವೆಯೂ ದಕ್ಷಿಣ ಮುಂಬೈನಲ್ಲಿ ವಿಶಾಲವಾದ ನಾಲ್ಕಾರು ಮೈದಾನಗಳು ಅಸ್ತಿತ್ವದಲ್ಲಿರುವುದು ಮುಂಬೈಕರರ ಅದೃಷ್ಟವೇ ಸರಿ!

ಬೆತ್ತಲಾಗದೇ ಬಯಲು ಸಿಕ್ಕದಿಲ್ಲಿ ಎಂದು ನಮ್ಮ ಅನುಭಾವಿಗಳು ಹಾಡಿದ್ದಾರೆ. ಬಯಲಿನ ರೂಪಕದಲ್ಲಿ ಪ್ರಾಪಂಚಿಕ ಮತ್ತು ಪಾರಮಾರ್ಥಿಕ ನೆಲೆಗಳಲ್ಲಿ ಬದುಕಿನ ಅರ್ಥವನ್ನು ಮಥಿಸಿದ್ದಾರೆ. ಮಹಾಲೌಕಿಕ ನಗರಿಯಾದ ಮುಂಬೈನ ಕೆಲವು ಬಯಲುಗಳು ಏಕಾಂತಕ್ಕೂ ಲೋಕಾಂತಕ್ಕೂ ಸಲ್ಲುವ ನೆಲವಾಗಿರುವುದು ಕುತೂಹಲಕಾರಿಯಾಗಿದೆ!

ಮೊನ್ನೆ ಸಹಸ್ರಾರು ರೈತರು ನಾಸಿಕ್‌ನಿಂದ ಮುಂಬೈ ವರೆಗೂ ಸುಮಾರು ಇನ್ನೂರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ನಡೆಯುತ್ತಾ ಮುಂಬೈನ ಆಜಾದ್ ಮೈದಾನಕ್ಕೆ ಬಂದದ್ದು ಇಡೀ ದೇಶದಲ್ಲಿ ಸಂಚಲನ ಮೂಡಿಸಿತು. ಮುಂಬೈಕರರ ಮನಸ್ಸಿನಲ್ಲಂತೂ ಆ ರೈತರು ಆರ್ದ್ರ ಸೆಲೆಯನ್ನು ಜಿನುಗಿಸಿ ವಾಪಾಸಾಗಿದ್ದಾರೆ.

ತಮ್ಮ ಕಡುಬಡತನ, ಬದುಕಿನ ತಾಪತ್ರಯಗಳ ನಡುವೆಯೂ ನಗರವಾಸಿಗಳ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಒಂದಿನಿತೂ ತಕಲೀಫ್ ಆಗದಂತೆ ನೋಡಿಕೊಂಡರು. ಸಾಮಾನ್ಯ ಸ್ಥಿತಿಗಳಲ್ಲೇ  ಹದಗೆಡುವ ಮುಂಬೈ ಟ್ರಾಫಿಕ್ ತಮ್ಮ ಮೋರ್ಚಾದಿಂದ ಇನ್ನಷ್ಟು ಅಸ್ತವ್ಯಸ್ತಗೊಳ್ಳಲು ಅವಕಾಶ ಕೊಡಲಿಲ್ಲ. ಹಿಂದಿನ ದಿನ ಕಡುಬಿಸಿಲಲ್ಲಿ ನಡೆದು ಸುಸ್ತಾಗಿದ್ದರೂ ನಡುರಾತ್ರಿಯೇ ಎದ್ದು ಮುಂದಕ್ಕೆ ನಡೆದು ನಸುಕಿನ ಜಾವದಲ್ಲಿ ವಿಶಾಲ ಆಜಾದ್ ಮೈದಾನ ತಲುಪಿ ಅಲ್ಲಿ ಒರಗಿಕೊಂಡರು.

ರಾತ್ರಿ ಮಲಗುವ ಮುನ್ನ ಮರುದಿನದ ಟ್ರಾಫಿಕ್ಕಿನ ಖರಾಬ್ ಹಾಲತ್ ಬಗ್ಗೆ ಚಿಂತಿಸುತ್ತಾ ಮಲಗಿದ್ದ ಮುಂಬೈಕರರಿಗೆ ಒಬ್ಬನೇ ಒಬ್ಬ ರೈತನೂ ಕಣ್ಣಿಗೆ ಬೀಳಲಿಲ್ಲ; ಟ್ರಾಫಿಕ್ಕಿನಲ್ಲಿ ಏನೂ ಅಡಚಣೆಯಾಗಲಿಲ್ಲ. ಯಾರ ಕಣ್ಣಿಗೂ ಬೀಳದೇ ಯಾವುದೇ ಘೋಷಣೆ ಕೂಗದೇ ಆಜಾದ್ ಮೈದಾನ ತಲುಪಿದ್ದ ಕಿಸಾನ್ ಮಂದಿ ನಗರವಾಸಿಗಳ ಶ್ರೀಮಂತಿಕೆ ಮತ್ತು ಆಧುನಿಕ ಸವಲತ್ತುಗಳ ಬಗ್ಗೆ ಕುರುಬಲಿಲ್ಲ, ಕೋಪಗೊಳ್ಳಲಿಲ್ಲ. ಪರೀಕ್ಷೆ ಬರೆಯಬೇಕಾದ ನಗರದ ಮಕ್ಕಳನ್ನು ತಮ್ಮ ಮಕ್ಕಳ ಹಾಗೇ ಕಂಡರು. ಈ ಬಡ ರೈತರು ತೋರಿದ ಉದಾರತೆ ಮುಂಬೈಕರರ ಅಂತ:ಕರಣವನ್ನು ತಟ್ಟಿತು.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ವಿಟಿ ಸ್ಟೇಶನ್) ಎದುರಿಗೇ ಇರುವ ಆಜಾದ್ ಮೈದಾನವು ಅತ್ಯಂತ ದೊಡ್ಡ ಮೈದಾನಗಳಲ್ಲಿ ಒಂದು. ನೂರಾರು ವರ್ಷಗಳ ಇತಿಹಾಸವಿರುವ ಈ ಮೈದಾನವು ಸುಮಾರು ಇಪ್ಪತೈದು ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಹಲವಾರು ಕ್ರಿಕೆಟ್ ಪಿಚ್ ಇರುವ ಈ ಮೈದಾನದಲ್ಲಿ ಹಗಲಿಡೀ ನೂರಾರು ಶಾಲಾ ಕಾಲೇಜು ಮಕ್ಕಳು ಕ್ರಿಕೆಟ್ ಆಡುತ್ತಿರುತ್ತಾರೆ.

ನಮ್ಮ ಸಚಿನ್ ಮತ್ತು ವಿನೋದ ಕಾಂಬ್ಳಿ ಸ್ಕೂಲಿನಲ್ಲಿರುವಾಗ ದಾಖಲೆ ಜೊತೆಯಾಟದ ಸ್ಕೋರ್ 664 ಮಾಡಿದ್ದು ಇದೇ ಮೈದಾನದಲ್ಲೇ! ಈ ಮೈದಾನದ  ಒಂದು ಭಾಗದಲ್ಲಿ ಸದಾ ಒಂದಿಲ್ಲೊಂದು ಸಭೆ ಸಮ್ಮೇಳನ ಪ್ರತಿಭಟನಾ ಮೆರವಣಿಗೆ ಧರಣಿ ಹರತಾಳ ನಡೆಯುತ್ತಿರುತ್ತದೆ. ಮಹಾರಾಷ್ಟ್ರ ರಾಜ್ಯದ ಯಾವುದೋ ಪ್ರದೇಶಗಳಿಂದ ನ್ಯಾಯಕ್ಕಾಗಿ, ಅನ್ಯಾಯದ ವಿರುದ್ಧ ಪ್ರತಿಭಟನೆಗಾಗಿ ಇಲ್ಲಿ ಒಂದುಗೂಡುತ್ತಾರೆ.  ಮಹಾತ್ಮಾ ಗಾಂಧಿಯವರ ಸಭೆಯೊಂದಕ್ಕೆ ದಾಖಲೆ ಸಂಖ್ಯೆಯಲ್ಲಿ ಜನ ಸೇರಿದ ಇತಿಹಾಸ ಈ ಆಜಾದ್ ಮೈದಾನಕ್ಕಿದೆ.

ಇದರ ಪಕ್ಕದಲ್ಲೇ ಕ್ರಾಸ್ ಮೈದಾನವೊಂದಿದೆ. ಈ ಮೈದಾನದಲ್ಲಿ ಫೋರ್ಚುಗೀಸರ ಕಾಲದಲ್ಲಿ ನಿರ್ಮಿಸಿದ ಸಿಲುಬೆ ಇರುವುದರಿಂದ ಅದಕ್ಕೆ ಕ್ರಾಸ್ ಮೈದಾನ ಎನ್ನುವ ಹೆಸರು ಬಂದಿದೆ. ಈ ಮೈದಾನದ ಅಂಚಿನಲ್ಲೇ ಮುಂಬೈನ ಪ್ರಸಿದ್ಧ ಫ್ಯಾಶನ್ ಸ್ಟ್ರೀಟ್ ಇದೆ. ಇದೊಂದು ರಸ್ತೆ ಪಕ್ಕದ ಹೊಸ ಟ್ರೆಂಡ್ ಬಟ್ಟೆಗಳನ್ನು ಮಾರುವ ಮಾರ್ಕೆಟ್.

ಕಡಿಮೆ ಬೆಲೆಯಲ್ಲಿ ಲೇಟೆಸ್ಟ್ ಡಿಸೈನುಗಳ ಬಟ್ಟೆಗಳು ಮತ್ತು ಇತರ ಅಕ್ಸೆಸ್ಸರೀಗಳು ಸಿಗುವುದರಿಂದ ಯುವ ಜನರ ಇಷ್ಟದ ಜಾಗವಾಗಿದೆ. ಕ್ರಾಸ್ ಓವರ್  ಮೈದಾನದ ದಕ್ಷಿಣ ತುದಿಯಲ್ಲಿ ಮುನ್ನೂರು ವರ್ಷ ಹಳೆಯದಾದ ಭಿಕಾ ಬೆಹ್ರಮ್ ಬಾವಿಯಿದೆ. ಸುತ್ತಲೂ ಸಮುದ್ರವಿರುವ ಮುಂಬೈ ದ್ವೀಪದಲ್ಲಿ ಇದೊಂದೇ ಸಿಹಿ ನೀರಿನ ಬಾವಿಯಾಗಿತ್ತಂತೆ! ಪಾರ್ಸಿಗಳು ಈ ಬಾವಿಯ ನೀರನ್ನು ಪವಿತ್ರವೆಂದು ಪರಿಗಣಿಸುತ್ತಾರೆ.

ಇವೆರಡು ಮೈದಾನಗಳ ನಂತರ ಓವಲ್ ಗ್ರೌಂಡ್ ಇದೆ. ಆಜಾದ್ ಮೈದಾನಕ್ಕಿಂತ ಸ್ವಲ್ಪ ಚಿಕ್ಕದಾದರೂ ಅದಕ್ಕಿಂತ ಸುಂದರವಾಗಿದೆ. ಯಾವುದೇ ರಾಜಕೀಯ ಅಥವಾ ಧಾರ್ಮಿಕ ಮೆರೆವಣಿಗೆ ಮತ್ತು ಸಭೆ ಸಮಾರಂಭಗಳಿಗೆ ಇಲ್ಲಿ ಅವಕಾಶ ಇರುವುದಿಲ್ಲ. ಹಗಲು ಹೊತ್ತಿನಲ್ಲಿ ನೂರಾರು ತಂಡಗಳು ಕ್ರಿಕೆಟ್ ಆಡುತ್ತಿರುತ್ತವೆ. ಮಳೆಗಾಲದಲ್ಲಿ  ಫುಟಬಾಲ್ ಆಡುತ್ತಿರುತ್ತಾರೆ. ಮುಂಬೈನ ಅಮೀರಿ ಗರೀಬಿ ಮಕ್ಕಳೆಲ್ಲರೂ ಕುಣಿದಾಡುವ ಅಂಗಳವಿದು. ಆಡುವ ಮಕ್ಕಳು ತುಳಿದಷ್ಟೂ ಓವಲ್ ತಾಯಿಗೆ ಪುಳಕ!

ಈ ಗ್ರೌಂಡ್ ಬೃಹತ್ ಅಂಡಾಕಾರದಲ್ಲಿದ್ದು ಸಾಲು ತಾಳೆ ಮರಗಳು ಮೈದಾನದ ಪರಿಧಿಯುದ್ದಕ್ಕೂ ಲಂಬವಾಗಿ ನಿಂತಿರುವುದರಿಂದ ಪೂರ್ತಿ ಬಟಾ ಬಯಲಾದಂತೆಯೂ ಅನಿಸುವುದಿಲ್ಲ. ರಾತ್ರಿ ಸಮಯದಲ್ಲಿ ಈ ಗ್ರೌಂಡಿನ ನಡುಬಂದು ಕಾಲುಚಾಚಿ ಕೂತರೆ ಮುಂಬೈ ಅನುಭವಕ್ಕೆ ಬರುವ ಪರಿಯೇ ಬೇರೆ!

ಮೈದಾನದಾಚೆ ಸುತ್ತಲೂ ಬೆಳಗುವ ರಸ್ತೆದೀಪಗಳು, ಅವುಗಳಾಚೆಯ ಬಹುಮಹಡಿಗಳ ಕೋಣೆಗಳಿಂದ ಹೊಮ್ಮುವ ಮಂದ ಪ್ರಭೆ, ಸಾಲುಗಳಲ್ಲಿ ಚಲಿಸುವ ವಾಹನಗಳ ಕುಲುಕುವ ದೀಪಗುಚ್ಚಗಳು, ಮೇಲೆ ಆಕಾಶದಲ್ಲಿ ಮಿಣುಕುವ ನಕ್ಷತ್ರಗಳು-ಎಲ್ಲವೂ ಕ್ಷೀಣಶಬ್ದದಲ್ಲಿ ಒಂದು ಅದ್ಭುತ ಲೋಕವನ್ನು ಸೃಷ್ಟಿಸುತ್ತವೆ. ಮಳೆಗಾಲದಲ್ಲಿ ಮೈದಾನದ ಮಜಕೂರು ಬೇರೇನೇ! ಪ್ರತಿವರ್ಷವೂ  ಸುರಿಯುವ ಮಳೆಯಲ್ಲಿ ಒಂದು ಸುತ್ತು ಹಾಕುವುದನ್ನು ಈ ಲೇಖಕನಂತೂ ಹರಕೆಯಂತೆ ಪಾಲಿಸಿಕೊಂಡು ಬಂದಿದ್ದಾನೆ!

ಓವಲ್ ಮೈದಾನದ ಒಂದು ಬದಿಯಲ್ಲಿ ವಸಾಹತುಶಾಹಿ ಜಮಾನಾ ನೆನಪಿಸುವಂಥ ಕಟ್ಟಡಗಳು. ಬಾಂಬೆ ಹೈ ಕೋರ್ಟು, ಸಿಟಿ ಸಿವಿಲ್ ಕೋರ್ಟು ಮತ್ತು ಮುಂಬೈ ವಿಶ್ವವಿದ್ಯಾಲಯದಂಥ ಮೋಹಕ ಹೆರಿಟೇಜ್ ಬಿಲ್ಡಿಂಗ್‌ಗಳಿವೆ. ವಿಶ್ವವಿದ್ಯಾಲಯದ ಆವರಣದಲ್ಲಿರುವ ರಾಜಾಭಾಯ್ ಕ್ಲಾಕ್ ಟಾವರ್ ಎತ್ತರದಲ್ಲಿ ಎದ್ದು ನಿಂತಿದೆ. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಬಾರಿಸುವ ಗಂಟೆನಾದ ಧಾವಂತದಲ್ಲಿರುವ ಮುಂಬೈಗೆ ಅಲ್ಪವಿರಾಮ ಕೊಡುತ್ತಿರುವಂತೆ ಅನಿಸುತ್ತದೆ.

ಓವಲ್ ಗ್ರೌಂಡಿನ ಇನ್ನೊಂದು ಸೆರಗಿನಲ್ಲಿ ಚರ್ಚಗೇಟು ಮತ್ತು ಆಧುನಿಕ ಕಟ್ಟಡಗಳು ಸಾಲಾಗಿ ನಿಂತಿವೆ. ಹಗಲಲ್ಲಿ ಗಿಜಿಗುಡುವ ಮೈದಾನವು ರಾತ್ರಿಯಲ್ಲಿ ಬೇರೆಯೇ ಆಗಿ ಕಾಣುತ್ತದೆ. ಜನ ಜಂಗುಳಿಯಿಂದ ತಪ್ಪಿಸಿಕೊಳ್ಳಬೇಕು ಅನಿಸಿದರೆ, ಮನಸ್ಸು ಏಕಾಂತವನ್ನು ಬಯಸಿದರೆ ಓವಲ್ ಮೈದಾನಕ್ಕಿಂತ ಒಳ್ಳೆಯ ತಾಣ ಬೇರೆಲ್ಲೂ ಸಿಗದು ಎಂದು ನನ್ನ ನಂಬಿಕೆ. ಕತ್ತಲಾವರಿಸುತ್ತಿದ್ದಂತೆಯೇ ಮೌನದಲ್ಲಿ ವಿರಮಿಸುವ ಓವಲ್ ಗ್ರೌಂಡಿನ ನಡುವೆ ಏಕಾಂತದಲ್ಲಿ ಕೂತಾಗ ದೇಹ ಮನಸ್ಸುಗಳು ಹಗುರಾಗುತ್ತವೆ. ಮುಂಬೈನ ಜನದಟ್ಟಣೆಯಲ್ಲಿ ಪರಕೀಯ ಭಾವ ಫೀಲ್ ಆದಾಗಲೆಲ್ಲ ಬಯಲಿನ ಏಕಾಂತವು ಪ್ರೀತಿಯಿಂದ ಪೊರೆಯುತ್ತದೆ.

ದಾದರ್‌ನ ಶಿವಾಜಿ ಪಾರ್ಕ್ ಐತಿಹಾಸಿಕ ಮಹತ್ವ ಪಡೆದ ಇನ್ನೊಂದು ಪ್ರಸಿದ್ಧ ಮೈದಾನ. ಕಡಲ ಭೋರ್ಗೆರತವನ್ನು ಆಲಿಸಬಹುದಾದಷ್ಟು ಸಮುದ್ರಕ್ಕೆ  ಹೊಂದಿಕೊಂಡಿರುವ ಈ ವಿಶಾಲ ಮೈದಾನವು ಸುಮಾರು ಇಪ್ಪತ್ತೇಳು ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಮೈದಾನದ ಸುತ್ತಲೂ ವಾಕಿಂಗ್, ಜಾಗಿಂಗ್ ಮತ್ತು ನಾನಾ- ನಾನಿ ಪಾರ್ಕುಗಳೂ, ಮಂದಿರಗಳೂ ಇರುವುದರಿಂದ ಸದಾ ಜನರಿಂದ ತುಂಬಿರುತ್ತದೆ. ಮೈದಾನದ ಸುತ್ತಲೂ ಕಟ್ಟಿರುವ ಮೊಣಕಾಲೆತ್ತರದ ಅಡ್ದಗೋಡೆಯ ಮೇಲೆ ಸಾವಿರಾರು ಜನ ಸಂಜೆಯ ಹೊತ್ತಿನಲ್ಲಿ ಇಲ್ಲಿ ಕೂತಿರುವುದನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.

ಇನ್ಫೋಸಿಸ್‌ನ ಸಂಸ್ಥಾಪಕರು ಇದೇ ಜಾಗದಲ್ಲಿ ಕೂತು ತಮ್ಮ ಕಂಪನಿಯ ಹೆಸರನ್ನು ನಿರ್ಧರಿಸಿದ್ದರಂತೆ! ಕ್ರಿಕೆಟ್‌ನ ದಿಗ್ಗಜರಾದ ಗಾವಸ್ಕರ್, ತೆಂಡುಲ್ಕರ್ ಇವರೆಲ್ಲರೂ ಈ ಮೈದಾನದ ಧೂಳನ್ನು ತಮ್ಮ ಪಾದಗಳಿಗಂಟಿಸಿಕೊಂಡವರೇ! ಶಿವಸೇನೆಯ ಬಾಳಾ ಸಹೇಬ ಠಾಕ್ರೆ ಮರಾಠಿಗರ ಅಸ್ಮಿತೆಯನ್ನು ಜಾಗೃತಗೊಳಿಸುತ್ತಿದ್ದದ್ದು ಇದೇ ಶಿವಾಜಿ ಪಾರ್ಕಿನಲ್ಲಿಯೇ! ಅಂಬೇಡ್ಕರರ ಸಮಾಧಿ ಚೈತ್ಯ ಭೂಮಿ ಶಿವಾಜಿ ಪಾರ್ಕಿನಲ್ಲೇ ಇರುವುದರಿಂದ ಅವರ  ಜನ್ಮದಿನ ಮತ್ತು ಮಹಾಪರಿನಿರ್ವಾಣ ದಿನಗಳಂದು ಲಕ್ಷಾಂತರ ಜನ ದೇಶದ ನಾನಾಕಡೆಯಿಂದ ಇಲ್ಲಿಗೆ ಬರುತ್ತಾರೆ. ಆ ಎರಡು ದಿನಗಳಲ್ಲಿ ಮುಂಬಯಿಗರು ಕಾಣುವ ಭಾರತವೇ ಬೇರೆ!

ಸಿಟಿಗಳನ್ನು ನಾವು ಅದೆಷ್ಟೇ ಸ್ಮಾರ್ಟ್ ಮಾಡಿದರೂ ಸಮಾಜದ ಭೌತಿಕ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಪೊರೆಯಬಲ್ಲ ಬಯಲುಗಳನ್ನು ಕಾದುಕೊಳ್ಳದಿದ್ದರೆ ಯಾವುದಕ್ಕೂ ಅರ್ಥವಿಲ್ಲ. ಈ ಬಯಲುಗಳು ಭೌತಿಕವಾಗಿ ಬರಿದಾದರೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕ ಆಯಾಮವನ್ನೂ ಹೊಂದಿರುತ್ತವೆ.

ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರ ಸರಕಾರವು ಡಾನ್ಸ್ ಬಾರ್‌ಗಳನ್ನು ನಿಷೇಧಿಸಿದಾಗ ಸಾವಿರಾರು ಬಾರ್ ಬಾಲೆಯರೆಲ್ಲ ಸೇರಿ ತಮ್ಮ ಬದುಕುವ  ಹಕ್ಕಿಗಾಗಿ ಧ್ವನಿಯೆತ್ತಿದ್ದು ಇದೇ ಆಜಾದ್ ಮೈದಾನದಲ್ಲೇ!  ಕತ್ತಲಲ್ಲಿ ಝಗಮಗಿಸುವ ಬಾರ್ ಬಾಲೆಯರ ಬದುಕಿನ ಕಠೋರ ವಾಸ್ತವಗಳು ಮೊತ್ತಮೊದಲ ಬಾರಿಗೆ ಬೆಳಕಿಗೆ ಬಂದಿದ್ದವು. ಮೊನ್ನೆಯ ಕಿಸಾನ್ ಮೋರ್ಚಾವನ್ನೂ ಒಳಗೊಂಡು ಆಜಾದ್ ಮೈದಾನದಲ್ಲಿಯ ಅನೇಕ ಮೆರವಣಿಗೆಗಳು ಮಾನವೀಯ ಮತ್ತು ಸಮಾಜಮುಖಿ ಚಿಂತನೆಗೆ ಮತ್ತು ಐತಿಹಾಸಿಕ ನಿರ್ಧಾರಗಳಿಗೆ ಕಾರಣವಾಗಿವೆ.

ಮುಂಬೈನಲ್ಲಿ ವಿಶಾಲವಾದ ಇಂಥ ನಾಲ್ಕಾರು ಮೈದಾನಗಳು ಇರುವುದು ಅಮ್ಚಿ ಮುಂಬೈನ ಅದೃಷ್ಟವೇ ಸರಿ! ಯಾಂತ್ರಿಕವಾಗುವ ನಗರ ಬದುಕಿಗೆ, ಧಾವಂತದಲ್ಲಿ ಮೊಂಡುಗೊಳ್ಳುವ ಸಂವೇದನೆಗೆ, ದಸ್ ಬೈ ದಸ್ ಕೋಣೆಯಲ್ಲಿ ಮತಲಬಿಯಾಗುವ ಮನಸ್ಸುಗಳಿಗೆ ಹೀಗೆ ಸಾಣೆ ಹಾಕುವವರು ಮುಂಬೈ ಬಯಲಿಗೆ ಆಗಾಗ ಬರುತ್ತಿರಲಿ!

‍ಲೇಖಕರು Avadhi GK

24 March, 2018

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. ರಘುನಾಥ

    ಆಗಸ್ಟ್ ಕ್ರಾಂತಿಮೈದಾನ ಹೆಸರೂ ಇದೆ.ಆಜಾದ ಮೈದಾನಕ್ಕೆ.ಈ ಬಯಲುಗಳೇ ಆಲಯಗಳು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading