ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಇತ್ತೀಚಿಗೆ ಧಾರವಾಡದಲ್ಲಿ ಮಾತನಾಡುತ್ತ ಸರ್ದಾರ್ ವಲ್ಲಭಬಾಯ್ ಪಟೇಲ್ ಹಾಗೂ ಗಾಂಧಿಯನ್ನು ಪ್ರಸ್ತಾಪಿಸಿದ್ದರು.
ಅದು ಚರ್ಚೆಗೆ ದಾರಿಮಾಡಿಕೊಟ್ಟಿತ್ತು.
ಸಾಹಿತಿ, ಪತ್ರಕರ್ತ ಜಗದೀಶ ಕೊಪ್ಪ ಅವರು ಈ ಭಾಷಣಕ್ಕೆ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದರು.
ಇದಕ್ಕೆ ಇಂಗ್ಲೆಂಡ್ ನಿಂದ ‘ಅವಧಿ’ಯ ಬರಹಗಾರರಾದ ಡಾ ಬಿ ಪ್ರೇಮಲತಾ ಅದಕ್ಕೆ ಪ್ರತಿಕ್ರಿಯಿಸಿದರು. ಅದು ಇಲ್ಲಿದೆ.
ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರಾದ ನಾ ದಿವಾಕರ್ ಅವರು ಈಗ ತಮ್ಮ ನೋಟವನ್ನು ಮುಂದಿಟ್ಟಿದ್ದಾರೆ.
ಇದು ‘ಜುಗಾರಿ ಕ್ರಾಸ್’ – ಚರ್ಚೆಗೆ ಮುಕ್ತವಾದ ವೇದಿಕೆ
ನಿಮ್ಮ ಅಭಿಪ್ರಾಯವನ್ನು avadhimag@gmail.com ಗೆ ಮೇಲ್ ಮಾಡಿ.
ಗಾಂಧಿ ಪಟೇಲ್ ಮತ್ತು ಸಮಕಾಲೀನ ಭಾರತ
ನಾ ದಿವಾಕರ
ಎಸ್ ಎಲ್ ಭೈರಪ್ಪನವರ ಗಾಂಧಿ-ಪಟೇಲ್ ಕುರಿತ ಹೇಳಿಕೆಗೆ ಜಗದೀಶ್ ಕೊಪ್ಪ ಅವರ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈ ಲೇಖನ –
ಇತ್ತೀಚೆಗೆ ಧಾರವಾಡದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಕುರಿತು ಮಾತನಾಡುತ್ತಾ ಖ್ಯಾತ ಲೇಖಕ ಎಸ್ ಎಲ್ ಭೈರಪ್ಪನವರು ಗಾಂಧೀಜಿ ಮತ್ತು ಪಟೇಲ್ ನಡುವೆ ಇದ್ದಿರಬಹುದಾದ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಎಳೆದುತಂದಿದ್ದಾರೆ. ಈ ಕುರಿತು ಜಗದೀಶ್ ಕೊಪ್ಪ ಅವರ ತೀಕ್ಷ್ಣ ಪ್ರತಿಕ್ರಿಯೆಯೂ ಸಹ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿ ಜಗದೀಶ್ ಕೊಪ್ಪ ಅವರು ತಮ್ಮ ಆಕ್ರೋಶವನ್ನು ಹೊರಗೆಡಹುವ ರೀತಿಯಲ್ಲಿ ಭೈರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿರುವುದು ಸ್ಪಷ್ಟ. ಇದು ಗಾಂಧೀಜಿಯನ್ನು ಕುರಿತ ಅಪಾರ ಪ್ರೀತ್ಯಾದರಗಳ ಪರಿಣಾಮವೂ ಇರಬಹುದು, ಭೈರಪ್ಪನವರ ಸಂಪ್ರದಾಯವಾದಿ ಸಾಹಿತ್ಯವನ್ನು ಕುರಿತ ವಿಮರ್ಶಾತ್ಮಕ ನಿಲುವಿನ ಪರಿಣಾಮವೂ ಇರಬಹುದು.
ಗಾಂಧೀಜಿ ಭಾರತೀಯ ಇತಿಹಾಸದ ಒಂದು ವಿಶಿಷ್ಟ ವಿದ್ಯಮಾನ ಎಂದರೆ ಉತ್ಪ್ರೇಕ್ಷೆಯೇನಲ್ಲ. ಕಾಲದಿಂದ ಕಾಲಕ್ಕೆ ಎಷ್ಟೇ ಅಲ್ಲಗಳೆಯಲ್ಪಟ್ಟರೂ ಸಾರ್ವಜನಿಕ ಚರ್ಚೆಯಲ್ಲಿ ಸದಾ ಜೀವಂತವಾಗಿರುವ ಏಕೈಕ ಚಾರಿತ್ರಿಕ ವ್ಯಕ್ತಿ ಗಾಂಧಿ ಎಂದರೂ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಭಾರತದ ಇತಿಹಾಸ ಮತ್ತು ಗಾಂಧೀಜಿ ಪರಸ್ಪರ ಹೊಸೆದುಕೊಂಡಿರುವುದು, ಬೆಸೆದುಕೊಂಡಿರುವುದು ಸರ್ವವಿಧಿತ.
ಭೈರಪ್ಪನವರಂತಹ ಬಲಪಂಥೀಯ ಸಂಪ್ರದಾಯವಾದಿಗಳಿಗೆ ಅಥವಾ ಅಂಬೇಡ್ಕರ್ ವಾದಿಗಳಿಗೆ (ಸ್ವಘೋಷಿತ) ಗಾಂಧೀಜಿಯನ್ನು ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ ಎನ್ನುವ ಕೊಪ್ಪ ಅವರ ಹೇಳಿಕೆಯನ್ನು ಒಪ್ಪುವುದು ಕಷ್ಟ. ಏಕೆಂದರೆ ಗಾಂಧೀಜಿ ಒಂದು ವಿದ್ಯಮಾನ, ಒಬ್ಬ ಸಾರ್ವಜನಿಕ ವ್ಯಕ್ತಿ ಮತ್ತು ಇತಿಹಾಸ ಪುರುಷ. ಹಾಗಾಗಿ ಅವರನ್ನು ಕುರಿತ ಟೀಕೆ, ವಿಮರ್ಶೆ, ನಿಂದನೆ, ದೂಷಣೆ ಎಲ್ಲವನ್ನೂ ಸ್ವೀಕರಿಸಬೇಕಾದ್ದು, ಪ್ರಜಾತಂತ್ರ ಮೌಲ್ಯಗಳನ್ನು ನಂಬಿಕೆ ಇಟ್ಟಿರುವವರಿಗೆ ಅತ್ಯವಶ್ಯ.
ಇನ್ನು ಭೈರಪ್ಪನವರ ಸಾಹಿತ್ಯವನ್ನು ಕುರಿತಂತೆ ಕೊಪ್ಪ ಅವರ ನೇರ ಟೀಕಾಸ್ತ್ರಗಳನ್ನು ವಿಮರ್ಶೆಯ ನೆಲೆಯಲ್ಲಿ ಸ್ವೀಕರಿಸಬೇಕೇ ಹೊರತು ಇದನ್ನು ವ್ಯಕ್ತಿ ದ್ವೇಷದ ನೆಲೆಯಲ್ಲಿ ನೋಡಲಾಗುವುದಿಲ್ಲ. ಆದರೆ “ಶತಮಾನಗಳ ಹಿಂದಿನ ಪುರಾಣದ ಕಥೆಗಳನ್ನು ತಂದು ಕಾದಂಬರಿಯಲ್ಲಿ ಕಾಗಕ್ಕ, ಗೂಬಕ್ಕನ ಪಾತ್ರಗಳಂತೆ ಚಿತ್ರಿಸುವ ರೀತಿಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ, ಗಾಂಧೀಜಿಯವರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ” ಎನ್ನುವ ಮಾತುಗಳನ್ನು ಒಪ್ಪಲೇಬೇಕು. ಇತಿಹಾಸ ಮತ್ತು ಪುರಾಣ ಎರಡರ ನಡುವೆ ವ್ಯತ್ಯಾಸ ಇರುವುದೇ ಇಲ್ಲಿ. ಪುರಾಣವನ್ನು ನಮ್ಮ ಮನೋವೃತ್ತಿಗೆ ಒಗ್ಗುವ ರೀತಿಯಲ್ಲಿ ಹಿಗ್ಗಿಸಿ, ಕುಗ್ಗಿಸಿ, ಎಳೆದು, ಅಳೆದು ಸುರಿದು ಬಳಸಿಕೊಳ್ಳಲು ಸಾಧ್ಯವಿದೆ. ಏಕೆಂದರೆ ಇಲ್ಲಿ ಯಾವುದೇ ನಿರ್ದಿಷ್ಟ ವ್ಯಾಖ್ಯಾನಗಳಿಗೂ ಸ್ಪಷ್ಟ ನೆಲೆ ಇರುವುದಿಲ್ಲ. ಮುನಿರತ್ನಂ ‘ಕುರುಕ್ಷೇತ್ರ’ ಚಿತ್ರವನ್ನೇ ನೋಡಿದರೆ ತಿಳಿಯುತ್ತದೆ. ಆದರೆ ಇತಿಹಾಸದ ಕಾಲಘಟ್ಟಗಳಲ್ಲಿ ನಡೆದ ಘಟನೆಗಳನ್ನು ಮತ್ತು ಸಂಭವಿಸಿದ ತಪ್ಪು ಒಪ್ಪುಗಳನ್ನು ಚಾರಿತ್ರಿಕ ನಿಖರತೆಯೊಂದಿಗೆ ಮಾತ್ರವೇ ನಿಷ್ಕರ್ಷೆಗೊಳಪಡಿಸಬೇಕಾಗುತ್ತದೆ. ಬಹುಶಃ ಭೈರಪ್ಪನವರು ತಮ್ಮ ‘ಆವರಣ’ ಮತ್ತಿತರ ಕಾದಂಬರಿಗಳಲ್ಲಿ ಈ ಪ್ರಯತ್ನದಲ್ಲಿ ತೊಡಗಿ ಅಪಹಾಸ್ಯಕ್ಕೀಡಾಗಿರುವುದು ಜಗದೀಶ್ ಕೊಪ್ಪ ಅವರ ಟೀಕಾಸ್ತ್ರಗಳಿಗೆ ಕಾರಣ ಇರಬಹುದು.

ಗಾಂಧೀಜಿ, ಪಟೇಲ್ ಮತ್ತು ನೆಹರೂ ಸ್ವತಂತ್ರ ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವಂತಹ ವ್ಯಕ್ತಿತ್ವಗಳು. ಈ ಮೂವರೂ ನಾಯಕರ ಮೂಲ ತಾತ್ವಿಕ ನಿಲುವುಗಳು ಭಿನ್ನ, ಸೈದ್ಧಾಂತಿಕ ನಂಬಿಕೆಗಳು ಭಿನ್ನ, ವ್ಯಕ್ತಿಗತ ನಿಲುವುಗಳೂ ಭಿನ್ನ. ಆದರೂ ಈ ತ್ರಿಮೂರ್ತಿಗಳ ಐಕಮತ್ಯದ ಫಲವನ್ನು ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಕಾಣಬಹುದಾದರೆ ಅದಕ್ಕೆ ಕಾರಣ ಮೂವರಲ್ಲೂ ಇದ್ದ ನಿಷ್ಠೆ, ಬದ್ಧತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಮಂತ್ರ . ಸರ್ದಾರ್ ಪಟೇಲ್ ಒಬ್ಬ ದಕ್ಷ ಆಡಳಿತಗಾರ, ನೆಹರೂ ಒಬ್ಬ ರಾಜತಾಂತ್ರಿಕ ನಿಪುಣ ಮತ್ತು ಗಾಂಧೀಜಿ ರಾಜಕೀಯ ತಂತ್ರಗಾರಿಕೆಯಲ್ಲಿ ಚಾಣಾಕ್ಷ. ಇತಿಹಾಸದ ಕೆಲವು ಸಂದರ್ಭಗಳಲ್ಲಿ ಇದು ನಿರೂಪಿತವಾಗಿರುವುದೂ ಹೌದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮೂವರೂ ನಾಯಕರು ತಮ್ಮದೇ ಆದ ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ತನುಮನಧನಗಳನ್ನು ಅರ್ಪಿಸುತ್ತಿದ್ದಾಗ, ಬ್ರಿಟೀಷರ ವಿರುದ್ಧ ಸೊಲ್ಲೆತ್ತದೆ ಮತೀಯವಾದಿ ರಾಜಕಾರಣದಲ್ಲಿ ತೊಡಗಿದ್ದ ಸೈದ್ಧಾಂತಿಕ ಗುಂಪೊಂದನ್ನು ಸಮರ್ಥಿಸುವವರು ಇಂದು ಈ ಮೂವರೂ ನಾಯಕರ ನಡುವೆ ಕಂದರ ಸೃಷ್ಟಿಸಲು ಯತ್ನಿಸುತ್ತಿರುವುದು ಕ್ಷುದ್ರ ರಾಜಕಾರಣದ ಸಂಕೇತ.
ಜಗದೀಶ್ ಕೊಪ್ಪ ಅವರು ಹೇಳಿರುವಂತೆ ಗಾಂಧಿ ಮತ್ತು ಪಟೇಲ್, ನೆಹರೂ ಮತ್ತು ಪಟೇಲ್ ನಡುವೆ ಇದ್ದ ಬಾಂಧವ್ಯವನ್ನು ಹಲವಾರು ಚಾರಿತ್ರಿಕ ದಾಖಲೆಗಳಲ್ಲಿ ಗುರುತಿಸಬಹುದು. ಹಾಗೆಯೇ ಇವರ ನಡುವೆ ಇದ್ದ ಸೈದ್ಧಾಂತಿಕ ಕಲಹ ಮತ್ತು ತಾತ್ವಿಕ ಸಂಘರ್ಷಗಳನ್ನೂ ಗುರುತಿಸಬಹುದು. ಪ್ರಶ್ನೆ ಎಂದರೆ ನಾವು ಇತಿಹಾಸವನ್ನು ನೋಡುವಾಗ ಯಾವ ಮಸೂರ ತೊಟ್ಟಿರುತ್ತೇವೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಗಾಂಧೀಜಿಯನ್ನು ವಿಶ್ವಮಾನ್ಯ ನಾಯಕರನ್ನಾಗಿ ಬಿಂಬಿಸುವ ಸಾವಿರಾರು ಪುಟಗಳ ನಡುವೆಯೇ ಅವರ ಚಾರಿತ್ರ್ಯ ವಧೆ ಮಾಡಲೆಂದೇ ಇತಿಹಾಸವನ್ನು ವಿಕೃತ ದೃಷ್ಟಿಯಿಂದ ನೋಡುವ ಅಕ್ಷರ ಪುಂಜಗಳೂ ಕಾಣುತ್ತವೆ. ನೆಹರೂ ಅವರನ್ನು ಕುರಿತಂತೆಯೂ ಇದನ್ನು ಗಮನಿಸಬಹುದು. ಆದರೆ ಪಟೇಲ್ ಪ್ರಧಾನಿಯಾಗುವುದನ್ನು ಗಾಂಧೀಜಿ ತಪ್ಪಿಸಿದ್ದರು, ಗಾಂಧೀಜಿ ಇಲ್ಲದೆ ಹೋಗಿದ್ದರೆ ನೆಹರೂ ಪ್ರಧಾನಿಯಾಗುತ್ತಿರಲಿಲ್ಲ ಎಂದು ಹೇಳುವವರು ಆ ಕಾಲಘಟ್ಟದ ರಾಜಕೀಯ ಪಲ್ಲಟಗಳನ್ನೂ, ಪ್ರಕ್ಷುಬ್ಧ ವಾತಾವರಣವನ್ನೂ ಚಾರಿತ್ರಿಕ ನೆಲೆಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಬಹುತ್ವ ಭಾರತದ ಪರಿಕಲ್ಪನೆಯನ್ನೇ ಹೊಸಕಿ ಹಾಕುತ್ತಿರುವ ಇವತ್ತಿನ ಸಂದರ್ಭದಲ್ಲಿ 1948ರ ರಾಜಕಾರಣವನ್ನು ವಿಮರ್ಶಿಸುತ್ತಾ ಹೋದರೆ ಅಲ್ಲಿ ಪಟೇಲ್ ಸ್ಥಾನವನ್ನು ಮೋದಿ ಆಕ್ರಮಿಸುತ್ತಾರೆ, ನೆಹರೂ ಸ್ಥಾನವನ್ನು ಸೋನಿಯಾ ಆಕ್ರಮಿಸುತ್ತಾರೆ. ಗಾಂಧಿ ಸ್ವಚ್ಚ ಭಾರತದ ಸಂಕೇತವಾಗಿ ಪೊರಕೆ ಹಿಡಿಯುತ್ತಾರೆ. ಎಸ್ ಎಲ್ ಭೈರಪ್ಪ ಈ ತಂತ್ರಗಾರಿಕೆಯ ವಕ್ತಾರರಾಗಿ ಕಂಡರೆ ಅಚ್ಚರಿಯೇನಿಲ್ಲ.
ಪಟೇಲ್ ಪ್ರಧಾನಿಯಾಗಿದ್ದಿದ್ದಲ್ಲಿ ಕಾಶ್ಮೀರ ಸಂಪೂರ್ಣವಾಗಿ ಭಾರತದ ಭಾಗವಾಗುತ್ತಿತ್ತು ಎನ್ನುವ ಅಪ್ರಬುದ್ಧ ಪ್ರಜ್ಞೆಯೇ ಇಂದು ಕಾಶ್ಮೀರದಲ್ಲಿನ ಸನ್ನಿವೇಶವನ್ನೂ ಸಮರ್ಥಿಸಿಕೊಳ್ಳುತ್ತದೆ ಅಲ್ಲವೇ ? 550 ಸಂಸ್ಥಾನಗಳನ್ನು ಒಂದುಗೂಡಿಸಿ ಒಂದು ದೇಶವನ್ನು ರೂಪಿಸಿದ ಕೀರ್ತಿಗೆ ಭಾಜನರಾಗಿದ್ದು ಸರ್ದಾರ್ ಪಟೇಲ್ ಎನ್ನುವುದು ನಿಜ, ಆದರೆ ಅದು ಪಟೇಲ್ ಅವರ ಏಕಾಂಗಿ ಹೋರಾಟವಾಗಿರಲಿಲ್ಲ. ಅಥವಾ ನೆಹರೂ-ಗಾಂಧೀಜಿ ನಿಲುವನ್ನು ವಿರೋಧಿಸಿ ಪಟೇಲ್ ಕೈಗೊಂಡ ಹೋರಾಟವೂ ಆಗಿರಲಿಲ್ಲ. ಸ್ವತಂತ್ರ ಭಾರತವನ್ನು ರೂಪಿಸಿದ ಪ್ರತಿಯೊಬ್ಬ ನಾಯಕರ ಒಮ್ಮತದ ನಿರ್ಣಯವನ್ನು ಸಾಕಾರಗೊಳಿಸಲು ಸಾರಥ್ಯ ವಹಿಸಿದ್ದು ಸರ್ದಾರ್ ಪಟೇಲ್ ಎನ್ನುವುದನ್ನು ಗಮನಿಸಬೇಕು. ಪಟೇಲ್ ಅವರ ಸೇನಾ ಕಾರ್ಯಾಚರಣೆಯ ಹಿಂದೆ ಸಂಸ್ಥಾನಗಳನ್ನು ವಿಲೀನಗೊಳಿಸುವುದೊಂದೇ ಅಲ್ಲದೆ, ದೇಶದ ಕೆಲವು ಭಾಗಗಳಲ್ಲಿ ತಲೆ ಎತ್ತಿದ್ದ ಕ್ರಾಂತಿಕಾರಿ ಹೋರಾಟಗಳನ್ನು ದಮನಿಸುವುದೂ ಒಂದು ನಿರ್ದಿಷ್ಟ ಉದ್ದೇಶವಾಗಿತ್ತು ಎನ್ನುವುದನ್ನೂ ಇತಿಹಾಸದ ನೆಲೆಯಲ್ಲಿ ಗಮನಿಸಬಹುದು. ಕಾಶ್ಮೀರ, ಜುನಘಡ್, ಈಶಾನ್ಯ ರಾಜ್ಯಗಳು, ನಿಜಾಮನ ಹೈದರಾಬಾದ್ ಸಂಸ್ಥಾನಗಳೊಂದಿಗೇ ಇತರ ಐನೂರಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತ ಎಂಬ ಭೌಗೋಳಿಕ ರಾಷ್ಟ್ರದ ಒಂದು ಭಾಗವನ್ನಾಗಿ ಮಾಡಲೆಂದೇ ಭಾರತದ ಸಂವಿಧಾನದಲ್ಲಿ ಮತ್ತೊಂದು ಅಗೋಚರ ಸಂವಿಧಾನ ರೂಪುಗೊಂಡಿದ್ದನ್ನೂ ಚಾರಿತ್ರಿಕ ನೆಲೆಯಲ್ಲಿ ಗಮನಿಸಬೇಕು.

ಮೊಘಲ್ ದೊರೆ ಔರಂಗಜೇಬ್‍ನ ಮತಾಂಧತೆ ಮತ್ತು ಕ್ರೌರ್ಯವನ್ನು ಸಮಕಾಲೀನ ರಾಜಕೀಯದ ನೆಲೆಯಲ್ಲಿ ವಿಶ್ಲೇಷಿಸುವ ಮೂಲಕ ಇಂದಿನ ಮತೀಯ ರಾಜಕಾರಣಕ್ಕೆ ಒಂದು ಹೊಸ ಆಯಾಮವನ್ನು ನೀಡುವ ಪ್ರಯತ್ನವನ್ನು ತಮ್ಮ ‘ಆವರಣ’ ಕೃತಿಯಲ್ಲಿ ಭೈರಪ್ಪನವರು ಮಾಡಿರುವುದನ್ನು ಗಮನಿಸಿದಾಗ, ಬಹುಶಃ ಸರ್ದಾರ್ ಪಟೇಲ್ ಸಹ ಈ ಆಯಾಮದ ಮತ್ತೊಂದು ಬಿಂದುವಾಗಿ ಕಾಣುತ್ತಾರೆ. 1950ರ ಆಸುಪಾಸಿನಲ್ಲಿ ಪಟೇಲ್ ಅನುಸರಿಸಿದ ಸೇನಾ ಕಾರ್ಯಾಚರಣೆಯ ವಿಧಾನವನ್ನೇ ಇಂದಿಗೂ ಅನುಸರಿಸುವುದು ಸೂಕ್ತ ಎನ್ನುವುದಾದಲ್ಲಿ ಆಗತಾನೇ ಉದಯಿಸಿದ ಪ್ರಜಾತಂತ್ರ ವ್ಯವಸ್ಥೆಗೂ, 70 ವರ್ಷಗಳ ಸ್ವತಂತ್ರ ಆಳ್ವಿಕೆ ನಡೆಸಿದ ಪ್ರಜಾತಂತ್ರ ವ್ಯವಸ್ಥೆಗೂ ಏನೇನೂ ವ್ಯತ್ಯಾಸವಿಲ್ಲ ಎಂದು ಒಪ್ಪಿದಂತಾಗುತ್ತದೆ ಅಲ್ಲವೇ ? ಪ್ರಸ್ತುತ ಕಾಶ್ಮೀರದಲ್ಲಿ ಇದು ನಡೆದಿರುವುದು ಕಾಕತಾಳೀಯವಾದರೂ ವಾಸ್ತವ. ಪಟೇಲ್ ಆಗ ಪ್ರಧಾನಿಯಾಗಿದ್ದಿದ್ದರೆ ಕಾಶ್ಮೀರ ನಮ್ಮ ಕೈತಪ್ಪಿಹೋಗುತ್ತಿರಲಿಲ್ಲ ಎನ್ನುವವರು ಪಟೇಲ್ ಇಂದು ಪ್ರಧಾನಿಯಾಗಿದ್ದಿದ್ದರೆ ಇವತ್ತಿನ ವಿದ್ಯಮಾನಗಳನ್ನು ಒಪ್ಪುತ್ತಿದ್ದರೇ ಎಂಬ ಪ್ರಶ್ನೆಗೂ ಉತ್ತರಿಸಬೇಕಲ್ಲವೇ ?
ಬಿಜೆಪಿ, ಸಂಘ ಪರಿವಾರ ಮತ್ತು ಬಲಪಂಥೀಯ ಇತಿಹಾಸಕಾರರು ಭಾರತದ ಸಮಗ್ರ ಚರಿತ್ರೆಯನ್ನೇ ಬುಡಮೇಲು ಮಾಡುವ ಹುನ್ನಾರದಲ್ಲಿದ್ದಾರೆ. ಹಾಗಾಗಿ ದಶಾವತಾರಗಳಿಂದ ಹಿಡಿದು ವಿಧಿ 370ರ ರದ್ದತಿಯವರೆಗಿನ ಪ್ರತಿಯೊಂದು ಸಂದರ್ಭವನ್ನೂ ಬಹುತ್ವ ಭಾರತದ ಪರಿಕಲ್ಪನೆಯ ವಿನಾಶದ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಪ್ರಯತ್ನದಲ್ಲಿ ಸುಭಾಷ್ ಬೋಸ್ ಈಗಾಗಲೇ ಬಲಿಯಾಗಿದ್ದಾರೆ. ತಮ್ಮ ಕಠಿಣ ನಿಲುವು ಮತ್ತು ಸೇನಾ ಕಾರ್ಯಾಚರಣೆಯಲ್ಲಿನ ವಿಶ್ವಾಸದಿಂದಲೇ ಸಮಕಾಲೀನ ರಾಜಕಾರಣದ ಐಕಾನ್ ಆಗುತ್ತಿರುವ ಸರ್ದಾರ್ ಪಟೇಲ್, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿರೋಧದ ದನಿಯನ್ನು ದಮನಿಸಲು ಬಳಸಬಹುದಾದ ಚಾರಿತ್ರಿಕ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆ. ಹಾಗಾಗಿಯೇ ಅತಿ ಎತ್ತರದ ಪ್ರತಿಮೆ ಅವರನ್ನು ನೆನಪಿಸುವಂತೆ ಮಾಡಲಾಗಿದೆ.
ಈ ನಡುವೆ ಗಾಂಧೀಜಿ ಶಾಶ್ವತ ಖಳನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಸಿನಿಮಾ ಪರದೆಯ ಮೇಲಿನ ‘ಕುರುಕ್ಷೇತ್ರ’ ಅಥವಾ ‘ಸರ್ಜಿಕಲ್ ಸ್ಟ್ರೈಕ್’ ರೋಮಾಂಚನ ಸೃಷ್ಟಿಸುತ್ತದೆ. ಆದರೆ ಎರಡು ದೇಶಗಳ ನಡುವೆ ನಡೆಯುವ ಭೀಕರ ಯುದ್ಧ, ಒಂದು ದೇಶದ ಜನತೆಯ ನಡುವೆ ಏರ್ಪಡುವ ಅಂತರಿಕ ಕಲಹ ವಿನಾಶದ ಕಂದಕಗಳನ್ನು ಸೃಷ್ಟಿಸುತ್ತದೆ. ಈ ವ್ಯತ್ಯಾಸವನ್ನು ಅರಿತವರು ಗಾಂಧಿ-ಪಟೇಲ್, ನೆಹರೂ-ಪಟೇಲ್ ನಡುವೆ ಇಲ್ಲದ ಕಂದಕಗಳನ್ನು ಸೃಷ್ಟಿಸಲು ಮುಂದಾಗುವುದಿಲ್ಲ. ಬಹುಶಃ ಎಸ್ ಎಲ್ ಭೈರಪ್ಪ ತಮ್ಮ ಅಪ್ರಬುದ್ಧ, ಅವಾಸ್ತವಿಕ ಹೇಳಿಕೆಗಳಲ್ಲಿ ಈ ಕೊರತೆಯನ್ನು ಪ್ರದರ್ಶಿಸುತ್ತಿದ್ದಾರೆ ಎನಿಸುತ್ತದೆ.






0 Comments