ಮುಂಗಾರು ಮಳೆಯಲ್ಲಿ ಕುಣಿದಾಡಿದ ಆ ಕ್ಷಣ..

ರಾಘವೇಂದ್ರ ಈ ಹೊರಬೈಲು

ಮಲೆನಾಡಿನಲ್ಲಿ ಹುಟ್ಟಿ, ಬೆಳೆದ ನಾನು ಮಲೆನಾಡಿನ ಮಳೆಗಾಲದ ಅನುಭವ ಹಂಚಿಕೊಳ್ಳದಿದ್ದರೆ ಜೀವನದ ಅನುಭವವೇ ಅಪೂರ್ಣವೆನಿಸುತ್ತದೆ. ಮಲೆನಾಡಿನ ಮಳೆಗಾಲದ ಸೊಬಗನ್ನು ಹನಿಹನಿಯಾಗಿ ಹೀರಿದವನು ನಾನು. ಅಷ್ಟೇ ಅಲ್ಲದೆ ಅದರ ಜೋರಿಗೆ ಬೆಚ್ಚಿ, ಕಿರಿಕಿರಿ ಅನುಭವಿಸಿ ಅದೆಷ್ಟೋ ಬಾರಿ ಮನಸಾರೆ ಶಪಿಸಿದ್ದೂ ಇದೆ.

‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂದು ಮುಂಗಾರಿನ ಮೃದು ಮಳೆಯಲಿ ಮುದಗೊಂಡು ಕುಣಿದಾಡಿದ ಕ್ಷಣಗಳಿಂದ ಹಿಡಿದು, ಛಂಡಿ ಮಳೆಯಲಿ ನೆನೆದು ಥಂಡಿ ಹಿಡಿಸಿಕೊಂಡು, ಕೆಮ್ಮುತ್ತಾ, ಚಳಿಯಲ್ಲಿ ನಡುಗುತ್ತಾ, ಮನೆಯಿಂದಾಚೆ ಬರಲಾಗದೆ ಒದ್ದಾಡಿದ, ಶುಂಠಿ ಕಷಾಯ, ಮೆಣಸಿನ ಕಾಳಿನ ಕಷಾಯ ಕುಡಿದು ಕೆಮ್ಮು, ಥಂಡಿಗಳಿಗೆ ಮನೆಯಲ್ಲೇ ಮದ್ದು ಮಾಡಿಕೊಂಡ ಆ ಕ್ಷಣಗಳು ಈಗಲೂ ಮನಸ್ಸಿನ ಮೂಲೆಮೂಲೆಯಲ್ಲೂ ರೋಮಾಂಚನವುಕ್ಕಿಸುತ್ತವೆ.

 

 

ಬಿರು ಬೇಸಿಗೆಯ ಬಿಸಿಲಿನ ಬೇಗೆಗೆ ಬೆಂದು ಬೆಂಡಾಗಿರುತ್ತಿದ್ದ ಭೂಮಿಯ ಮೇಲೆ ತಂಪನ್ನು ಸುರಿದು, ಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತಿದ್ದ ಮಳೆಗಾಲ ಬಂತೆಂದರೆ, ನನಗೂ, ನನ್ನ ಜೊತೆಗಾರರಿಗೂ ಚಿಕ್ಕವರಿದ್ದಾಗ ಅದೇನೋ ಹಿಗ್ಗೋ ಹಿಗ್ಗು. ಬತ್ತಿ, ಬಿರುಕು ಬಿಟ್ಟಿರುತ್ತಿದ್ದ ಹಳ್ಳ-ಕೊಳ್ಳಗಳು, ಗದ್ದೆ ಬಯಲುಗಳು ತುಂಬಿ ನೀರು ಎಲ್ಲೆಲ್ಲೂ ಹರಿಯುತ್ತಿದ್ದರೆ ನಮಗಂತೂ ಎಲ್ಲಿಲ್ಲದ ಖುಷಿ. ಗದ್ದೆ, ಬಯಲುಗಳನ್ನು ದಾಟಿಯೇ ಶಾಲೆಗೆ ಹೋಗಬೇಕಾಗಿದ್ದುದರಿಂದ, ನಡೆದೇ ಹೋಗುತ್ತಿದ್ದ ನಾವು ಚಪ್ಪಲಿಯನ್ನು ಕೈಯಲ್ಲಿ ಎತ್ತಿ ಹಿಡಿದುಕೊಂಡು ದಾಟಬೇಕಾಗುತ್ತಿತ್ತು.

ಪ್ಯಾಂಟ್ ಹಾಕುವ ವಯಸ್ಸಿಗೆ ಬಂದ ಮೇಲೆ, ಮಳೆಗಾಲ ಬಂತೆಂದರೆ ಪ್ಯಾಂಟನ್ನು ಹಳ್ಳ ದಾಟುವುದಕ್ಕೆ ಮಾತ್ರವಲ್ಲದೆ, ಶಾಲೆಯವರೆಗೂ ಯಾವಾಗಲೂ ಮೇಲೆತ್ತಿ ಮಡಚಿಕೊಂಡೇ ಹೋಗುತ್ತಿದ್ದೆವು. ಇಲ್ಲದಿದ್ದರೆ ಆಗಿನ ಹವಾಯಿ ಚಪ್ಪಲಿಯಿಂದ ಚಿಮ್ಮುತ್ತಿದ್ದ ಕೆಸರು, ಪ್ಯಾಂಟುಗಳನ್ನು ತನಗಿಷ್ಟ ಬಂದಂತೆ ಕೊಳಕಾಗಿಸುತ್ತಿತ್ತು.

ಮನೆಯಲ್ಲಿರುತ್ತಿದ್ದ ಒಂದೇ ಒಂದು ಉದ್ದ ದಿಂಡಿನ ಕೊಡೆಯನ್ನು (ಆಗಿನ ಛತ್ರಿಗಳ ದಿಂಡು ಉದ್ದವಿದ್ದು, ಹಿಂಭಾಗ ಭರ್ಜಿಯಂತೆ ಚೂಪಾಗಿರುತ್ತಿತ್ತು) ಮಗ ಮಳೆಯಲ್ಲಿ ನೆನೆಯಬಾರದೆಂದು ನನಗೆ ಕೊಟ್ಟು ಕಳುಹಿಸಿದ್ದರೆ, ಆ ಕೊಡೆಯನ್ನು ಮಳೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬಳಸುವುದರ ಜೊತೆಜೊತೆಗೇ ಹೋಗಿ-ಬರುವ ದಾರಿಯಲ್ಲಿ ಗದ್ದೆ ಬಯಲಿನಲ್ಲಿ ಎಲ್ಲೆಲ್ಲೂ ಹರಿದಾಡುತ್ತಿದ್ದ ಬೆಳ್ಳೇಡಿಗಳನ್ನು ತಿವಿದು ಚುಚ್ಚಲು ಬಳಸಿ, ಛತ್ರಿಯ ಆ ಚೂಪಾದ ಹಿಂಬದಿಯನ್ನಿ ಬಳಸಿ, ಛತ್ರಿಯನ್ನು ಮುರಿದು ಹಾಕಿ, ಮನೆಯವರಿಂದ ಚೆನ್ನಾಗಿ ರುಬ್ಬಿಸಿಕೊಳ್ಳುತ್ತಿದ್ದೆವು. ಆ ನೆನಪುಗಳನ್ನು ಮರೆಯಲು ಸಾಧ್ಯವೇ?

ಮುಂಗಾರು ಮಳೆ ಬೀಳುತ್ತಿದ್ದಂತೆ ಜೀವ ಕಳೆದುಕೊಂಡಿದ್ದ ಹಸಿರೆಲ್ಲ ಪುನಃ ಜೀವ ತಳೆದು ನಳನಳಿಸುತ್ತದೆ. ಮಳೆ ಸುರಿದು ಎಲ್ಲೆಲ್ಲೂ ನೀರುಕ್ಕಿದರೆ, ಬೇಸಿಗೆಯಲ್ಲಿ ನೀರಿಲ್ಲದೆ, ನೆಲದಾಳದಲ್ಲಿ, ನೀರಿನ ಪಸೆಯಿರುವ ಜಾಗದಲ್ಲಿ ಹುದುಗಿಕೊಂಡಿದ್ದ ಮೀನುಗಳಲ್ಲಿ ಮಿಂಚಿನ ಸಂಚಾರವಾಗಿ, ನೀರಿದ್ದಲ್ಲೆಲ್ಲಾ ಮಿಂಚುತ್ತಿರುತ್ತವೆ. ಹೊಸ ನೀರಿನಲ್ಲಿ ಖುಷಿಯಿಂದ ಹೊರಡುವ ಮೀನುಗಳನ್ನು ಬೇಟೆಯಾಡುವುದೇ ಮಳೆಗಾಲದಲ್ಲಿ ಒಂದು ಮಜ. ಚಿಕ್ಕವರಿದ್ದಾಗ ನಾವು ನೋಡಿದಂತೆ, ನಮ್ಮ ಸುತ್ತಮುತ್ತಲಿನವರು ಮಳೆಗಾಲಕ್ಕೂ ಮುಂಚೆಯೇ ಮೀನು ಹಿಡಿಯುವ ತಯಾರಿಯಾಗಿ ಬಲೆಗಳನ್ನು, ಗಾಳವನ್ನು, ಕೂಣಿಗಳನ್ನು, ಮೀನು ಕತ್ತಿಗಳನ್ನು ಸಿದ್ಧ ಮಾಡಿಟ್ಟುಕೊಂಡು ಮಲೆನಾಡಿನ ಮಳೆ ಪ್ರಾರಂಭವಾಯಿತೆಂದರೆ, ಮುಗಿಬಿದ್ದು ಮೀನು ಹಿಡಿಯುತ್ತಿದ್ದರು.

ಆ ಸಂದರ್ಭದಲ್ಲಿ ಮೀನು ಹಿಡಿಯುವುದು ಒಂಥರ ಹಬ್ಬವಿದ್ದಂತೆ. ಅದರ ಮಜವೇ ಬೇರೆ. ಹಳ್ಳಗಳಿಗೆ ಅಡ್ಡಲಾಗಿ ಬಲೆಯನ್ನು ಕಟ್ಟಿ, ಕೂಣಿಗಳನ್ನು ಗದ್ದೆಯ ಬದುವಿನಲ್ಲಿ ನೀರು ಹರಿಯುವ ಸಣ್ಣ ತೋಡಿನಲ್ಲಿಟ್ಟು ಮೀನು ಹಿಡಿಯುವುದೊಂದಿಷ್ಟು ರೀತಿಯಾದರೆ, ಮೀನು ಕತ್ತಿಗಳನ್ನು ಹಿಡಿದು ರಾತ್ರಿ ಸಂದರ್ಭಗಳಲ್ಲಿ ಮೊಟ್ಟೆಯಿಡಲು ಕೆರೆ, ಹೊಳೆ, ಹಳ್ಳಗಳ ಅಂಚಿಗೆ ಬರುವ ಮೀನುಗಳನ್ನು ಹೊಂಚುಹಾಕಿ, ಹತ್ತುಮೀನು ಕೊಚ್ಚುವುದು, ಹಗಲಿನಲ್ಲಿ ಗಾಳ ಹಾಕಿ ಹಿಡಿಯುವುದು ಇವೆಲ್ಲ ಸಾಗುತ್ತಿತ್ತು.

ಮಲೆನಾಡು ಜಡಿಮಳೆಗೆ ಹೆಸರುವಾಸಿ. ಕೆಲವು ಸಾರಿ ಒಮ್ಮೆ ಶುರುವಾದರೆ ತಿಂಗಳುಗಟ್ಟಲೆ ಎಡೆಬಿಡದೆ ಸುರಿದುಬಿಡುತ್ತದೆ. ಹಾಗಾಗಿ ಮುನ್ನೆಚ್ಚರಿಕೆಯಾಗಿ ಮಳೆಗಾಲದಲ್ಲಿ ಮಾಡಲಾಗದ ಸಾಕಷ್ಟು ಕೆಲಸಗಳನ್ನು ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಮುಗಿಸಿಕೊಳ್ಳಬೇಕಾಗುತ್ತಿತ್ತು. ಹಾಗೆಯೇ ಅನೇಕ ವಸ್ತುಗಳನ್ನು ಕೂಡ ಸಂಗ್ರಹಿಸಿಟ್ಟುಕೊಳ್ಳಬೇಕಾಗಿತ್ತು. ಎತ್ತಿನಗಾಡಿಯೇ ಆಗಿನ ಹಳ್ಳಿಗಳಲ್ಲಿ ಪ್ರಮುಖ ವಾಹನವಾಗಿದ್ದರಿಂದ, ಅಕ್ಕಿ, ಹಿಟ್ಟು ಮುಂತಾದ ಗಿರಣಿಗಳು ಕೂಡಾ ದೂರದ ನಗರಗಳಲ್ಲಿರುತ್ತಿದ್ದುದರಿಂದ ಬೇಸಿಗೆಯಲ್ಲಿಯೇ ಮುಂದಿನ ಮಳೆಗಾಲಕ್ಕಾಗುವಷ್ಟು ಮಾಡಿಸಿಟ್ಟುಕೊಂಡಿರಬೇಕಾಗುತ್ತಿತ್ತು.

ಹಾಗೆಯೇ ಎಲ್ಲೆಲ್ಲೂ ಸೌದೆ ಒಲೆಗಳು ಮಾತ್ರವಿರುತ್ತಿದ್ದುದರಿಂದ ಮಳೆಗಾಲ ಪೂರ್ತಿಗೆ ಸೌದೆಯನ್ನೂ ಮೊದಲೇ ಸಂಗ್ರಹಿಸಡಬೇಕಾಗಿತ್ತು. ಹಪ್ಪಳ-ಸಂಡಿಗೆಗಳೂ ಮಳೆಗಾಲಕ್ಕಾಗಿ ತಯಾರಾಗುತ್ತಿದ್ದವು. ಇವೆಲ್ಲ ದೊಡ್ಡವರ ಕೆಲಸಗಳಾದರೆ, ಚಿಕ್ಕ ಹುಡುಗರಾಗಿದ್ದ ನಾವು ಮಳೆಗಾಲಕ್ಕಾಗಲಿ ಎಂದು ಮೊದಲೇ ಊರುಗಳಲ್ಲಿ ಹೇರಳವಾಗಿ ದೊರಕುತ್ತಿದ್ದ ಹಲಸಿನ ಬೀಜ, ಗೇರು ಬೀಜ (ಗೋಡಂಬಿ) ಮುಂತಾದವುಗಳನ್ನು ಮಳೆಗಾಲದ ಬಾಯಿ ರುಚಿಗೆ ಶೇಖರಿಸಿಡುತ್ತಿದ್ದೆವು.

ಹೀಗೆ ನೂರಾರು ಸವಿ ನೆನಪುಗಳೊಂದಿಗೆ ಮಲೆನಾಡಿನ ಮಳೆಗಾಲ ನಮ್ಮನ್ನು ಪುಳಕಿತರನ್ನಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹ ಮಳೆಗಾಲವೂ ಕಾಣೆಯಾಗಿದೆ. ನಾವು ಅಂದು ಅನುಭವಿಸುತ್ತಿದ್ದ ಆ ಮಜದ ಕ್ಷಣಗಳೂ ಇಂದಿನ ಚಿಕ್ಕ ಮಕ್ಕಳಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ. ಆ ಮಟ್ಟಿಗೆ ನಾವೇ ಧನ್ಯರು.

ಇಂತಹ ಅಮೂಲ್ಯವಾದ ಬಾಲ್ಯಕ್ಕೆ ಸಾಕ್ಷಿಯಾದ, ಇನ್ನೂ ಅನೇಕ ಅನುಭವಗಳನ್ನು ನೀಡಿದ, ಹಸಿರಾದ ನೆನಪುಗಳನ್ನು ಹಸಿಹಸಿಯಾಗಿ ಉಳಿಸಿದ ಅಂದಿನ ಆ ಮಳೆಗಾಲಕ್ಕೆ ನನ್ನದೊಂದು ಸಲಾಂ.

‍ಲೇಖಕರು avadhi

September 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ekanath bongale

    ಚೆಂದದ ಬರಹ ಅಂದದ ಚಿತ್ರಗಳು ….
    ವಾವ್ !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: