ಮೀಸಲಾತಿ ಬಗ್ಗೆ ಒಂದಿಷ್ಟು…

ಮೀಸಲಾತಿ ಹಾಗೂ ಮೆರಿಟ್

ಡಾ.ಎಸ್.ಬಿ.ಜೋಗುರ

‘Reservations for positions and places in public services and in educational institutions should also consider secular attributes like functions or occupational activivities of people in categorising the backward classes’

-I.P.Desai

ಜಾತಿಯಾಧಾರಿತ ಮೀಸಲಾತಿ ಎನ್ನುವುದು ನಮ್ಮ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಅನೇಕ ಬಗೆಯ ಗೊಂದಲಗಳಿಗೆ ಕಾರಣವಾಗಿದೆ. ಮೀಸಲಾತಿ ಪಡೆಯುವವರ ಬಗೆಗೆ ಒಂದು ಬಗೆಯ ಆರೋಪಿತ ನಾಮಗಳು, ಪೂರ್ವಾಗ್ರಹಗಳು ಸೃಷ್ಟಿಯಾಗಿವೆ. ಜಾತಿಯಾಧಾರಿತ ಮೀಸಲಾತಿ ಎನ್ನುವುದು ನಮ್ಮಲ್ಲಿ 1882 ರ ಸಂದರ್ಭದಲ್ಲಿ ಹಂಟರ್ ಕಮಿಷನ್ ನ ಶಿಫಾರಸುಗಳ ಮೂಲಕ ಶೈಕ್ಷಣಿಕ ವಲಯದಲ್ಲಿ ಆತ್ಯಂತಿಕವಾಗಿ ಹಿಂದಿರುವ, ಪ್ರಾತಿನಿಧಿಕತೆ ಬಿಲ್ಕುಲ್ ಇಲ್ಲ ಎನ್ನುವಂತಹ ಅಲ್ಪಸಂಖ್ಯಾತ ಸಮುದಾಯಗಳ ಹಿನ್ನೆಲೆಯಲ್ಲಿ ಪರಿಚಯಿಸಲಾಯಿತಾದರೂ ಕೆಲ ವಿಶೇಷವಾದ ನಿಯಮಾವಳಿಗಳ ಮೂಲಕ ಹಿಂದುಳಿದ ಸಮುದಾಯಗಳನ್ನೂ ಈ ಕಕ್ಷೆಗೆ ತರಲಾಯಿತು.

ಕ್ರಮೇಣವಾಗಿ ಉದ್ಯೋಗ ಮತ್ತು ಶೈಕ್ಷಣಿಕ ವಲಯಗಳಲ್ಲಿ ಜಾತಿಯಾಧಾರಿತ ಮೀಸಲಾತಿ ಆರಂಭವಾಯಿತು. ಶೈಕ್ಷಣಿಕ ವಲಯದೊಂದಿಗಿನ ಆರಂಭದ ರಿಯಾಯತಿಗಳ ಮೂಲಕವೇ ಜಾತಿಯಾಧಾರಿತ ಮೀಸಲಾತಿಯನ್ನು ಕುರಿತು ಚರ್ಚಿಸುವ ಅಗತ್ಯವಿದೆ. ಮಹಿಳೆಯರು, ಶೂದ್ರರು, ಆದಿವಾಸಿಗಳು 19 ನೇ ಶತಮಾನದಲ್ಲಿ ಶಿಕ್ಷಣ ಪಡೆಯುವಂಥಾದದ್ದು ಬ್ರಿಟಿಷ್ ಉದಾರವಾದಿಗಳು ಮತ್ತು ಭಾರತೀಯ ಸಾಮಾಜಿಕ ಸುಧಾರಣಾ ಆಂದೋಲನಾವಾದಿಗಳ ಪ್ರಯತ್ನದಿಂದ ಎಂದು ಹೇಳಬಹುದು.

ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದು ಜೂನ್-1856 ರಲ್ಲಿ. ಆಗಿನ ಮುಂಬೈ ಕರ್ನಾಟಕದ ಭಾಗವಾಗಿದ್ದ ಧಾರವಾಡದ ಸರಕಾರಿ ಶಾಲೆಯೊಂದರಲ್ಲಿ ಎನ್ನುವದನ್ನು ಕೆ.ಎಸ್.ಚಲಂ ಅವರು ಉಲ್ಲೇಖಿಸುತ್ತಾರೆ. ಆಗಿನ ಸಾಂಪ್ರದಾಯಿಕ ಸಾಂಸ್ಥಿಕ ಪರಿಸರದಲ್ಲಿ ಒಂದು ಬಗೆಯ ಅಲ್ಲೋಲ ಕಲ್ಲೋಲವನ್ನೇ ಅದು ಉಂಟು ಮಾಡಿತು. 1872 ರವರೆಗೆ ಬ್ರಿಟಿಷರು ಕೂಡಾ ಈ ಬಗ್ಗೆ ಗಂಭೀರವಾಗಿ ಯೋಚಿಸಿರಲಿಲ್ಲ. ಅಲ್ಲಿಯವರೆಗೆ ಶಿಕ್ಷಣ ಎನ್ನುವುದು ಕೇವಲ ಸಮಾಜದ ಮೇಲಿನ ಸ್ತರಗಳಿಗೆ ಮಾತ್ರ ಸಾಧ್ಯವಿತ್ತು. ಈ ಬಗೆಯ ಸ್ಥಿತಿ ಮುಕ್ತವಾಗಿತ್ತು ಎಂದು ಕರೆಯಿಸಿಕೊಳ್ಳುವ ವರ್ಣ ವ್ಯವಸ್ಥೆಯಲ್ಲಿಯೂ ಇತ್ತು. ಅಲ್ಲಿಯೂ ಶೂದ್ರರಿಗೆ ಶಿಕ್ಷ್ಶಣ ಪಡೆಯುವ ಹಕ್ಕನ್ನು ನಿರಾಕರಿಸಲಾಗಿತ್ತು. ಭಗವಂತನಿಂದಲೇ ಸೃಷ್ಟಿಯಾದ ವರ್ಣಗಳಲ್ಲಿಯೂ ತರತಮಗಳಿದ್ದವು.

ಮಹಾತ್ಮಾ ಜ್ಯೋತಿರಾವ್ ಫಾಲೆ ಅವರು ಹಂಟರ್ ಆಯೋಗದ ಎದುರು ಈ ತರತಮಗಳನ್ನು ಕುರಿತು ಪ್ರಶ್ನಿಸಿದ ಪರಿಣಾಮವಾಗಿ 1872 ರಲ್ಲಿ ಜಾತಿ ಅನರ್ಹತಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಇದು ಕೆಳಜಾತಿಗಳಿಗೆ ಜಾತಿಯಾಧಾರಿತ ಮೀಸಲಾತಿಯ ಮೂಲಕ ಶಿಕ್ಷಣ ಪಡೆಯುವಲ್ಲಿ ನೆರವಾಯಿತು. ನಾರಾಯಣ ಗುರು, ಜ್ಯೋತಿರಾವ್ ಫಾಲೆ ಮತ್ತು ಬ್ರಹ್ಮ ನಾಯ್ಡು ಮುಂತಾದವರ ಧೋರಣೆಯಿಂದಾಗಿ ಮೊಟ್ಟ ಮೊದಲಬಾರಿಗೆ ಜೂನ್ 21-1895 ರಲ್ಲಿ ಆಗಿನ ಮೈಸೂರು ಸರಕಾರ ದಲಿತರಿಗಾಗಿ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಘೋಷಿಸಿತು. 25 ಜುಲೈ 1921 ರಲ್ಲಿ ಮುಂಬೈ ಶಾಸನಸಭೆಯ ಸದಸ್ಯ ಡಿ.ಡಿ.ಗೊಲಾಪ ದಲಿತರಿಗಾಗಿ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕನ್ನು ಜಾರಿಗೊಳಿಸಿದರು.

ಅದೇ ಸಂದರ್ಭದಲ್ಲಿ ಸಿ.ಕೆ.ಬೋಲೆ ಎನ್ನುವವರು ದಲಿತರಿಗೆ, ಅಸ್ಪ್ರಶ್ಯರಿಗೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾದ ಪ್ರವೇಶವನ್ನು ಆಗ್ರಹಪಡಿಸಿದರು. ಇದು ಮುಂದೆ ಪಂಜಾಬನ ಅಧರ್ಮ ಚಳುವಳಿ [1926], ಅಂಬೆಡ್ಕರ್ ಮಹಾರಾಷ್ಟ್ರದಲ್ಲಿ ಹಮ್ಮಿಕೊಂಡ ಚಳುವಳಿ[1924-25] ಬೆಂಗಾಳದಲ್ಲಿ ಆರಂಭವಾದ ನಾಮಶೂದ್ರ ಚಳುವಳಿ, ತಮಿಳುನಾಡಿನ ಆದಿ ದ್ರಾವಿಡ ಚಳುವಳಿ, ಆಂದ್ರಪ್ರದೇಶದ ಆದಿಆಂದ್ರ ಚಳುವಳಿಗಳಿಗೆ ಕಾರಣವಾಯಿತು.

1943 ರ ಸಂದರ್ಭದಲ್ಲಿ ಅಂಬೇಡ್ಕರ್ ಅಸ್ಪ್ರಶ್ಯರಿಗಾಗಿ 8.3 ಪ್ರತಿಶತ ಮೀಸಲಾತಿ ಕಲ್ಪಿಸಲು ಹೋರಾಟ ಮಾಡಿದರು. 1952 ರ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಪ್ರಾಂತ ಮೀಸಲಾತಿ ನೀತಿಯನ್ನು ಜಾರಿಗೊಳಿಸಿತು. ಜಾತಿಯಾಧಾರಿತ ಮೀಸಲಾತಿಗೆ ಸಂಬಂಧಿಸಿ ಕಾಕಾ ಕಾಲೇಲಕರ್ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಲಾಯಿತು. ಆದರೆ ಅದು ನಿರೀಕ್ಷಿತ ಪರಿಣಾಮವನ್ನುಂಟು ಮಾಡಲಿಲ್ಲ. 1978 ರ ಸಂದರ್ಭದಲ್ಲಿ ಜನತಾ ಸರಕಾರ ಬಿಂದೇಶ್ವರ ಪ್ರಸಾದ ಮಂಡಲ ಅವರ ನೇತೃತ್ವದಲ್ಲಿ ಒಂದು ಆಯೋಗವನ್ನು ನೇಮಿಸಿತು ಅದು 1980 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಸಾಕಷ್ಟು ವಾದವಿವಾದಗಳನ್ನು ಹುಟ್ಟು ಹಾಕಿದ ಆ ಮಂಡಲ ವರದಿಯನ್ನು 1990 ರಲ್ಲಿ ಭಾರತ ಸರಕಾರ ಜಾರಿಗೊಳಿಸಿತು. ಮೊದಲೇ ಏಣಿ ಶ್ರೇಣಿಯನ್ನಾಧರಿಸಿದ ಜಾತಿಪದ್ಧತಿಯಲ್ಲಿ ಇನ್ನಷ್ಟು ಅಸಮಾನತೆಗಳನ್ನು ಹುಟ್ಟು ಹಾಕುವಲ್ಲಿ ಈ ಮೀಸಲಾತಿ ಕಾರಣವಾಯಿತು ಎನ್ನುವ ವಾದವೂ ಇದೆ.

ಮೀಸಲಾತಿ ಹಾಗೂ ಮೆರಿಟ್

ಜಾತಿಯಾಧಾರಿತ ಮೀಸಲಾತಿಯ ಪ್ರಶ್ನೆ ಬಂದಾಗಲೆಲ್ಲಾ ಮೀಸಲಾತಿಗೆ ಒಳಪಡದ ಜಾತಿಗಳು, ಮೀಸಲಾತಿ ಪಡೆಯುವ ಜಾತಿಗಳನ್ನು ತಾತ್ಸಾರದಿಂದ ನೋಡುವದಿದೆ. ತಮ್ಮಲ್ಲಿ ಮೆರಿಟ್ ಇಲ್ಲದಿರುವಾಗಲೂ ಮೆರಿಟ್ ಉಳ್ಳವರ ಹಕ್ಕುಗಳನ್ನು ಇವರು ಕಸಿಯುತ್ತಾರೆ ಎಂದು ಒಮ್ಮುಖವಾಗಿ ಯೋಚಿಸುವ ಇವರಿಗೆ ಅವರ ತಲೆತಲಾಂತರದ ಶೊಷಣೆಯಾಗಲೀ, ಅವರ ಕುಟುಂಬದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಶೈಕ್ಷಣಿಕ ಹಿನ್ನೆಲೆಯಾಗಲೀ ಇವರಿಗೆ ದೃಷ್ಟಿಗೋಚರವಾಗದು. ಮನೆಯಲ್ಲಿ ಒಂದು ವಿಕಲಚೇತನ ಮಗುವಿಗೆ ಸಿಗುವ ವಿಶೇಷ ಖಾಳಜಿಯಿಂದ ಇನ್ನೊಂದು ಮಗು ಅಸೊಯೆ ಪಡುವಷ್ಟೇ ಇದು ಯಥಾರ್ಥವಾಗಿರುತ್ತದೆ. ಅಷ್ಟಕ್ಕೂ ಯಾರ ಹಕ್ಕು ಯಾರೂ ಕಸಿಯುವದಿಲ್ಲ. ತಲೆತಲಾಂತರದಿಂದಲೂ ಅಕ್ಷರವಂಚಿತ ಸಮುದಾಯಕ್ಕೆ ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಒದಗಿಸುವ ಕ್ರಮ ಇವರ ಮೆರಿಟ್ ಗೆ ಧಕ್ಕೆ ತರುತ್ತದೆ ಎನ್ನುವ ಮಾತು ಅರ್ಧಸತ್ಯವೇ ಹೌದು. ಈ ಮೀಸಲಾತಿ ಮೆರಿಟ್ ಅನ್ನು ವಂಚಿಸುತ್ತಿದೆ ಎಂದು ಕೂಗುವವರಿಗೆ ಸಮಾಧಾನವಾಗುವ ಹಾಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಬಹುದಾಗಿದೆ.

ಮೀಸಲಾತಿ ಪಡೆಯುವ ಮತ್ತು ಪಡೆಯದಿರುವ ಸಮುದಾಯಗಳ ನಡುವೆ ಪ್ರತ್ಯೇಕವಾದ ಮೆರಿಟ್ ಆಧಾರಿತ ಸೌಲಭ್ಯಗಳನ್ನು ಒದಗಿಸಬೇಕು. ದೊಡ್ಡ ದೊಡ್ಡ ಅಖಾಡಾಗಳಲ್ಲಿ ಕುಸ್ತಿ ಆಡುವವನ ಜೊತೆಯಲ್ಲಿ ಹೀಗೇ ಅಪರೂಕ್ಕೊಮ್ಮೆ ಕುಸ್ತಿ ಹಿಡಿಯುವವನ್ನು ಆಡಿಸುವದು ಸರಿಯಲ್ಲ. ಆಯಾ ಗಡಿಗಳ ಸಾಮಥ್ರ್ಯಕ್ಕೆ ತಕ್ಕಂತೆ ಸ್ಪರ್ಧೆ ಇರಬೇಕು. ಹುಟ್ಟುತ್ತಲೇ ಅಕ್ಷರ ಸಹವಾಸ ಇರುವ ಸಂಸ್ಕೃತಿಯವನನ್ನು ಒಟ್ಟಾರೆ ಹತ್ತಾರು ತಲೆಮಾರುಗಳವರೆಗೆ ಅಕ್ಷರವಂಚಿತ ಸಂಸ್ಕೃತಿ ಇರುವವನೊಡನೆ ಮೀಸಲಾತಿಯಾಧರಿಸಿ ಸ್ಪರ್ಧೆ ಏರ್ಪಡಿಸುವದು ತಪ್ಪಲ್ಲವಾದರೂ ಇದು ಅನ್ಯಾಯ, ಮೆರಿಟ್ ಮೇಲಿನ ಆಕ್ರಮಣ ಎಂದು ಕೂಗುವವರಿಗೆ ಪ್ರತ್ಯೇಕವಾದ ಮೆರಿಟ್ ಆಧಾರಿತ ಸ್ಪರ್ಧೆ ಮತ್ತು ಮೀಸಲಾತಿಯನ್ನು ಒದಗಿಸುವಂತಾಗಬೇಕು.

ಮೀಸಲಾತಿ ಮತ್ತು ದಕ್ಷತೆ

ಈ ದಕ್ಷತೆ ಇಲ್ಲವೇ ಸಾಮರ್ಥ್ಯ ಎನ್ನುವದು ಅತಿ ಮುಖ್ಯವಾಗಿ ಎರಡು ಸಂಗತಿಗಳನ್ನು ಆಧರಿಸಿರುತ್ತದೆ ಒಂದನೆಯದು ಆತ ಹೊಂದಿರುವ ಸಾಮಾಜಿಕ, ಆರ್ಥಕ ಸಾಂಸ್ಕೃತಿಕ ಹಿನ್ನೆಲೆ ಇನ್ನೊಂದು ಆತನ ಬುದ್ದಿಮತ್ತೆ. ಇವೆರಡೂ ಒಂದಕ್ಕೊಂದು ಪೂರಕ ಪರಿಪೂರಕ. ಸಾಂಪ್ರದಾಯಿಕವಾಗಿ ಶೈಕ್ಷಣಿಕ ಪರಿಸರವಿರುವ, ತಂದೆ-ತಾಯಿ ಓದು ಬರಹ ಬಲ್ಲವರಾಗಿರುವ, ಶಿಷ್ಟ ಭಾಷೆಯ ಜೊತೆಗೆ ಸಹವಾಸವಿರುವ ಹಿನ್ನೆಲೆಯಿಂದ ಬಂದವನು ಸಹಜವಾಗಿ ಒಳ್ಳೆಯ ಸಾಮಥ್ರ್ಯವನ್ನು ಹೊಂದಿರುವದು ಸ್ವಾಭಾವಿಕ. ಇವೆಲ್ಲವುಗಳಿಂದ ವಂಚಿತನಾಗಿರುವಾತ ಸಹಜವಾಗಿ ಕಡಿಮೆ ದಕ್ಷತೆಯನ್ನು ಹೊಂದಿರಲಿಕ್ಕೆ ಸಾಧ್ಯ. ಜಾತಿಯಾಧಾರಿತ ಸಾಮಾಜಿಕ ಪರಿಸರದಲ್ಲಿ ಹುಟ್ಟಿದಾರಭ್ಯದಿಂದ ಬರುವ ಸ್ಥಾನಮಾನಗಳನ್ನು ಇದ್ದಕ್ಕಿದ್ದಂತೆ ಅದಲು ಬದುಲು ಮಾಡಿದಾಗ ಆಗುವ ಗೊಂದಲಗಳಷ್ಟೇ ಸಹಜವಾಗಿ ಕೆಳಸ್ತರದ ವ್ಯಕ್ತಿಯೊಬ್ಬ ಉನ್ನತ ಹುದ್ದೆಗೆ ಏರಿದಾಗ ಆಗುವದಿದೆ. ಅದೇ ಒಂದೊಮ್ಮೆ ಆ ಕೆಳಸ್ತರದ ವ್ಯಕ್ತಿ ಎರಡು ಮೂರು ತಲೆ ಮಾರುಗಳ ವರೆಗೆ ಸುಶಿಕ್ಷತನಾಗಿದ್ದು, ತನ್ನ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಿ ಉನ್ನತ ಹುದ್ದೆಗೆ ಕಳುಹಿಸಿದರೆ ಅವರು ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುವ ಉದಾಹರಣೆಗಳೂ ಇವೆ ಆಗ ಮೀಸಲಾತಿ ದಕ್ಷತೆಯ ಮೇಲೆ ಮಾರಕ ಪರಿಣಾಮವನ್ನು ಬೀರುವದಿಲ್ಲ.

ಜಾತಿಯಾಧಾರಿತ ಮೀಸಲಾತಿ ಮತ್ತು ಧರ್ಮನಿರಪೇಕ್ಷತೆ

ಮೀಸಲಾತಿ ಎನ್ನುವದು ಜಾತಿಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುವ ಜೊತೆಗೆ ಜಾತ್ಯಾತೀತತೆಯ ಗುಣಕ್ಕೆ ಪೆಟ್ಟು ಕೊಡುತ್ತದೆ ಎಂದು ವಾದ ಮಾಡುವವರೂ ಇದ್ದಾರೆ. ಭಾರತೀಯ ಸಮಾಜ ಮೂಲಭೂತವಾಗಿ ಜಾತಿಯಾಧಾರಿತ ಏಣಿಶ್ರೇಣಿಕೃತ ಸಮೂಹ. ಬೇರೆ ರಾಷ್ಟ್ರಗಳ ಸಮೂಹಗಳಲ್ಲಿ ಅಂತರಸಮೂಹಗಳ ಸಂಚಲನೆಗೆ ಅವಕಾಶವಿದೆ. ನಮ್ಮಲ್ಲಿದ್ದದ್ದು ಕೇವಲ ಸಮಾನಾಂತರ ಸಂಚಲನೆ ಮಾತ್ರ. ತಲೆತಲಾಂತರದಿಂದಲೂ ಮೇಲಿನ ಜಾತಿಯ ಜನರು ಮಾತ್ರ ಎಲ್ಲ ಬಗೆಯ ಹಕ್ಕು ಮತ್ತು ಸೌಲಭ್ಯಗಳನ್ನು ಅನುಭವಿಸುತ್ತಿರುವದಿತ್ತು. ಅದಕ್ಕೆ ಪೆಟ್ಟು ಬಿದ್ದದ್ದೇ ಈ ಮೀಸಲಾತಿಯಿಂದ. ಮೀಸಲಾತಿಯ ಮೂಲಕ ಕೆಳಸ್ತರದ ಸಮೂಹಗಳು ಮುಖ್ಯ ವಾಹಿನಿಗೆ ಬರುವ ಮೂಲಕ ಅಲ್ಲಿರುವ ನಿರ್ಬಂಧಗಳನ್ನು ಮೀರುವಂತಾದದ್ದು ಈ ಮೀಸಲಾತಿಯ ಮೂಲಕವೇ.. ಜೊತೆಗೆ ಸಾವಿರಾರು ವರ್ಷಗಳಿಂದ ಈ ಕೆಳಜಾತಿಗಳ ಬಗೆಗಿರುವ ಪೂರ್ವಾಗ್ರಹಗಳು ಕೂಡಾ ಸಡಿಲುಗೊಳ್ಳಲು ಈ ಮೀಸಲಾತಿ ನೆರವಾಯಿತು. ಮೀಸಲಾತಿ ಎನ್ನುವದು ಹಕ್ಕು ಮತ್ತು ಅವಕಾಶಗಳ ಸಮಾನ ಹಂಚಿಕೆಯನ್ನು ಕುರಿತು ಮಾತನಾಡುತ್ತದೆಯೇ ಹೊರತು ಜಾತ್ಯಾತೀತತೆಯ ವಿರೋಧ ನೆಲೆಯನ್ನಲ್ಲ. ಮೇಲಿನ ಸ್ತರಗಳು ಕೆಳಗಿನ ಸ್ತರಗಳನ್ನು ಅವು ಪಡೆಯುವ ಮೀಸಲಾತಿಯ ಕಾರಣಕ್ಕೆ ಅವುಗಳನ್ನು ದ್ವೆಷಿಸುವ ಗುಣವೇ ಜಾತ್ಯಾತೀತ ಮನೋಭಾವನೆಗೆ ಧಕ್ಕೆ ತರುವಂಥದಾಗಿದೆ.

 

‍ಲೇಖಕರು avadhi

May 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. nagaraj hettur

    meesalati kuritha lekhana prastutavaagide. ee kurithante nimma nikara abhipraaya spastapadisilla……

    ಪ್ರತಿಕ್ರಿಯೆ
  2. Kiran

    The world has progressed more in last 50 years than 20000 years of human race. The present concept of reservation is at a very critical phase in the history of India. Good/bad/ugly of reservation will be a question that will be answered by future generations of India (cynics would say if reservation allows such a future to exist!). However, ಮನೆಯಲ್ಲಿ ಒಂದು ವಿಕಲಚೇತನ ಮಗುವಿಗೆ ಸಿಗುವ ವಿಶೇಷ ಖಾಳಜಿಯಿಂದ ಇನ್ನೊಂದು ಮಗು ಅಸೊಯೆ ಪಡುವಷ್ಟೇ ಇದು ಯಥಾರ್ಥವಾಗಿರುತ್ತದೆ is ridiculous. The section which is getting benefitted by reservation at the cost of present generation (Remember, this generation has no role to play for the supposed mistakes of their elders) should be greatful. However, it is impossible to make a prejudiced mind understand reality.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: