ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೀನಾಕುಮಾರಿ’ ಎಂಬ ಒಗಟು ನಮ್ಮನ್ನು ಕಾಡುತ್ತಲೇ ಇದೆ.

1

ಏಕ್ ಥೀ ಮೀನಾಕುಮಾರಿ

 

lakshmikanth itnal

 

 

 

 

 

 

 

 

 

ಲಕ್ಷ್ಮೀಕಾಂತ ಇಟ್ನಾಳ 

ಮೀನಾಕುಮಾರಿ ಎಂದೊಡನೆ ಮೊದಲು ರವೀಂದ್ರನಾಥ ಠಾಕೂರ ಖಾನದಾನನತ್ತ ವಾರೆನೋಟವೊಂದನ್ನು ಹರಿಸಲೇಬೇಕು. ಅವರ ಸಹೋದರ ಸುಕುಮಾರ ಠಾಕೂರರ ಮಗ ರೇವ್ಬಿಲ್ನಿಗೆ ಹೇಮಸುಂದರಿ ಎಂಬ ಬಾಲಕನ್ಯೆಯೊಂದಿಗೆ ವಿವಾಹ ಮಾಡಲಾಗಿತ್ತು.. ಬಾಲ್ಯವಿವಾಹವದು. ಆದರೆ ರೇವ್ಬಿಲ್ ಸಣ್ಣವಯಸ್ಸಿನಲ್ಲಿಯೇ ತೀರಿಕೊಂಡ. ಹೇಮಸುಂದರಿ ಠಾಕೂರ ಸಂಪ್ರದಾಯದಂತೆ ಬದುಕಿನುದ್ದಕ್ಕೂ ವಿಧವೆಯಾಗಿರಲು ಒಪ್ಪದೇ, ಗಂಡನ ಸಕಲ ಆಸ್ತಿಯನ್ನು ಧಿಕ್ಕರಿಸಿ, ಇಸಾಯಿ ಧರ್ಮ ಸ್ವೀಕರಿಸಿ ಮೀರತ್ ಗೆ ಬಂದು ಕಥೆಗಾರ ಪ್ಯಾರೇಲಾಲನೊಂದಿಗೆ ಮದುವೆಯಾಗುತ್ತಾಳೆ.

meenakumari poster 1ಇವರ ಮಗಳು ಪ್ರಭಾವತಿ. ಗಾಯನದಲ್ಲಿ ಆಸಕ್ತಿಯಿಂದ ಸಂಗೀತವನ್ನು ಕಲಿತು ಗಾಯಕಿಯಾಗಿದ್ದಳು. ಇದೇ ಗುಂಗು ಅವಳನ್ನು ಮುಂಬಯಿಗೆ ಕರೆತಂತು. ಅಲೀಭಕ್ಷ ಎಂಬ ಫಾರ್ಸಿ ಥೇಟರಿನ ಹಾರ್ಮೋನಿಯಂ ಕಲಾವಿದನ ಪರಿಚಯವಾಗಿ, ಇವರಿಬ್ಬರೂ ಇಷ್ಟಪಟ್ಟು ಮದುವೆಯಾದರು, ಈಗ ಪ್ರಭಾವತಿ ಇಕ್ಬಾಲ್ಬಾನೋ ಆಗಿ ಮಾರ್ಪಟ್ಟಳು. ಈ ದಂಪತಿಯ ಮೂರನೇ ಕುಡಿಯೇ ಮೆಹಜಬೀನ್ ನಾಜ್. ಖುರ್ಷಿದ್’ ಹಾಗೂ ‘ಮಧು’ಳ ನಂತರ ಹುಟ್ಟಿದ ಕೂಸು. ತಂದೆ ತಾಯಂದಿರು ಕರೆದ ಹೆಸರು ಮಹಜಬೀನ್ ಬಾನೊ.

ಇವಳೇ ಬೇಬಿ ಮೀನಾ ಎಂದು ಬಾಲನಟಿಯಾಗಿ ಮುಂಬಯಿ ಚಿತ್ರರಂಗಕ್ಕೆ ಪ್ರವೇಶಿಸಿದಳು. ಇದೇ ಬೇಬಿ ಮೀನಾ ಮುಂದೆ ಮೀನಾಕುಮಾರಿಯಾಗಿ ಅಖಂಡ ಮೂವತ್ತೈದು ವರ್ಷ ಮುಂಬಯಿ ಚಿತ್ರಲೋಕವನ್ನು, ಅಭಿಮಾನಿಗಳ ಎದೆಗಳನ್ನು ಅಕ್ಷರಶ: ಆಳಿದ್ದು ಇತಿಹಾಸ. ಈ ಮಹಾತಾರೆ ನಮ್ಮನ್ನಗಲಿ ಈಗ 43 ವರ್ಷಗಳಾದರೂ ಇನ್ನೂ ‘ಮೀನಾಕುಮಾರಿ’ ಎಂಬ ಒಗಟು ನಮ್ಮನ್ನು ಕಾಡುತ್ತಲೇ ಇದೆ.

ಬಾಲಕಿಯಾಗಿದ್ದಾಗಲೇ ಚಿತ್ರರಂಗಕ್ಕೆ ಅಪ್ಪ ಅಮ್ಮಂದಿರ ಒತ್ತಾಯದಿಂದ ಬಂದ ಮೀನಾಗೆ ನಿಜಕ್ಕೂ ಶಾಲೆಗೆ ಹೋಗುವ ಪ್ರೀತಿ. ಅದಕ್ಕಾಗಿಯೇ ಮನೆಯಲ್ಲಿ ರಚ್ಚೆ ಹಿಡಿದು ಕುಳಿತುಬಿಡುತ್ತಿತ್ತು ಮಗು. ಆದರೆ ಮನೆಯಲ್ಲಿಯ ಬಡತನ, ಖಾಲಿಹೊಟ್ಟೆಗಳು ಇವಳನ್ನು ಒಲ್ಲೆ ಒಲ್ಲೆಯೆಂದರೂ ಬಾಲನಟಿಯಾಗಿ ದುಡಿಯಲು ಹಚ್ಚಿಬಿಟ್ಟಿತ್ತು. ಇವಳ ಮೃದು ಮಧುರ ಗೆಜ್ಜೆ ಕಾಲು ಹೆಜ್ಜೆಗಳು, ಹಣೆಯ ಮೇಲಿನ ಆ ಮುಂಗುರುಳು, ಆ ಮುಗ್ಧ ಮಗುವಿನಂತಹ ನಗು, ಆ ಕನಸಿನಂತಹ ಮನಸು, ಜಗದ ಎಲ್ಲವನ್ನೂ ಬೆರಗುಗಣ್ಣಿನಿಂದ ನೋಡುವ ಆ ಕಣ್ಣುಗಳ ಮುಗ್ಧ ಭಾಷೆಯೊಂದಿಗೆ, ಭಾವದೊಂದಿಗೆ ಯಾರೂ ಬೆರೆಯಲಿಲ್ಲ, ಸಂಭಾಷಿಸಲಿಲ್ಲ. ತುಂಟಾಟ ಆಡಿಕೊಂಡು ತಾಯಿಯ ಕೈತುತ್ತಿಗೆ ಆಸೆಪಡುವ ವಯೋಮಾನದಲ್ಲಿ ಅಪ್ಪ ಅಮ್ಮನಿಗೆ ಅನ್ನ ರೊಟ್ಟಿಯನ್ನು ಒದಗಿಸುವ ಯಂತ್ರವಾಗುತ್ತಾಳೆಂದರೆ ಸಹೃದಯರೇ, ನೀವು ನಂಬಲೇಬೇಕು. ತಾನು, ತಾನಾಗಿ ಬೆಳಯಬೇಕೆಂಬ ಅವಳ ಹಂಬಲದ ಕನಸು ಕನಸಾಗಿಯೇ ಉಳಿಯಿತು.

ಜಗತ್ತನ್ನು ಸೆಲ್ಯುಲಾಯ್ದ್ ನಿಂದ, ಬಣ್ಣದಲ್ಲದ್ದಿದ, ಕಂಠಪಾಠದ ಮಾತುಗಳಿಂದಲೇ ಮಾತ್ರ ನೋಡಿದ ದುರದೃಷ್ಟದ ಪಾಪದ ಹುಡುಗಿ. ಕೇವಲ ತುಟಿಯಂಚಿನ ಮಾತಿನ, ನಗುವೆಂಬ ಮುಖವಾಡದ ಬದುಕಿನ ಬಾಜಾರಿನಲ್ಲಿ ಹೃದಯದ ಹಸಿವನ್ನು ಕೇಳುವವರಾರು?. ಕವಾಟುಗಳ ದುನಿಯಾಗಳಲ್ಲಿ ಹೃದಯಗಳ ಮಿಡಿತಗಳಿಗೆ ಬೆಲೆ ಯಾರು ಕೊಟ್ಟಾರು?, ಇಂತಹುದೇ ಸಂತೆಯಲ್ಲಿ ತನ್ನನ್ನೇ ಒಡ್ಡಿಕೊಂಡು ಇಡೀ ಸಂಸಾರದ ಭಾರವನ್ನು ಹೊರಬೇಕಾಗಿ ಬಂದದ್ದು ಬಾಲಕಿ ಮೀನಾಳ ಬದುಕಿನ ವಿಪರ್ಯಾಸ., ಬೇರೆಯವರಿಗೆ ಚಿನ್ನದ ಥೈಲಿಯನ್ನು ತುಂಬುವ ಅಕ್ಷಯಪಾತ್ರೆಯಾದರೂ, ತನ್ನದೇ ಬದುಕಿನ ಬುತ್ತಿಯನ್ನು ಬಿಚ್ಚಿ ಮನಸಾರೆ ಸವಿಯುವಾಸೆ ಎಂದೂ ಕೈಗೂಡಲೇ ಇಲ್ಲ. ಚಿತ್ರರಂಗಕ್ಕೆ ಬಂದು ಕ್ಯಾಮರಾ ಮುಂದೆ ನಿಂತಾಗ ಅವಳ ವಯಸ್ಸು ಕೇವಲ ನಾಲ್ಕೈದಿದ್ದೀತು. …ಸುಮ್ಮನೆ ಒಮ್ಮೆ ನೆನಪಿಸಿಕೊಳ್ಳಿ ….ಅಂದಿನ ಕಾಲಘಟ್ಟದಲ್ಲಿ ಅವಳ ವಯಸ್ಸಿನ ಕೋಟಿ ಕೋಟಿ ಮಕ್ಕಳು ಚಡ್ಡಿಯನ್ನು ಕೂಡ ಹಾಕುತ್ತಿರಲಿಲ್ಲ ಅಂದರೂ ಒಪ್ಪಲೇ ಬೇಕಾದಂಥ ದಿನಗಳವು!

ಮೀನಾ ಅಲೀಭಕ್ಷನ ಸಂಸಾರದಲ್ಲಿ ಕಣ್ಣುಬಿಟ್ಟಾಗಲೇ ಬಡತನ ತುಂಬಿ ತುಳುಕುತ್ತಿತ್ತು. ಆಸ್ಪತ್ರೆಯಲ್ಲಿ ಹೆರಿಗೆಯ ಬಿಲ್ ಕೂಡ ಪಾವತಿಸಲು ಬೇಕಾದ ದುಡ್ಡು ಕುಟುಂಬದ ಹತ್ತಿರ ಇರದಷ್ಟು ಬಡತನ. ಅದು 1 ನೇ ಅಗಸ್ಟ, 1932. ಹುಟ್ಟಿದ ಕ್ಷಣದಲ್ಲಿ ಅಳುವ ಮಗುವನ್ನು ಸಾಕುವುದಾಗುವುದಿಲ್ಲವೆಂದು ಮುಸ್ಲಿಂ ಅನಾಥಾಲಯವೊಂದಕ್ಕೆ ನೀಡಿ ಬಂದಿದ್ದರು ಫಾರ್ಸಿ ಥೇಟರ್ನಲ್ಲಿ ದುಡಿಯುತ್ತಿದ್ದ ಅಪ್ಪ ಅಲಿಭಕ್ಷ ತಾಯಿ ಇಕ್ಬಾಲ್ ಬೇಗಂ(ಬಾನೊ), ನಟಿಯಾಗಿ- ಕಾಮಿನಿ, ನಿಜ ನಾಮ- ಪ್ರಭಾವತಿ ಸ್ಟೇಜ್ ನರ್ತಕಿಯಾಗಿ, ಅಪ್ಪ ವಾದ್ಯಗಾರನಾಗಿ ಬದುಕಿನ ಬಂಡಿ ಎಳೆಯುತ್ತಿದ್ದರು. ಕೊನೆಗೂ ಇಕ್ಬಾಲ್ಬೇಗಂಳ ದು:ಖ ತಡೆಯಲಾಗದೇ ನಂತರ ಕೂಸನ್ನು ಮನೆಗೆ ಎತ್ತಿಕೊಂಡು ಬಂದಿದ್ದ. ಇಬ್ಬರು ಪುತ್ರಿಯರ ನಂತರ ಗಂಡುಮಗು ಬೇಕೆನಿಸಿ ಹೆತ್ತ ಕೂಸು ಹೆಣ್ಣಾದಾಗ ಕುಟುಂಬಕ್ಕೆ ಬೇಡವಾದವಳು ಮೀನಾ. ಬಾಲ್ಯವನ್ನೇ ಕಳೆದುಕೊಂಡ ಬದುಕಿನ ಮಹಜಬೀನ್. ಅಳು ಆತಂಕಗಳೇ ಬಾಲ್ಯದ ಸಂಗಾತಿಗಳಾಗಿದ್ದ ದಿನಗಳವು.

ಬಾಲನಟಿಯಾಗಿ ಬೇಬಿ ಮೀನಾಳ ಮೊದಲ ಚಿತ್ರ ವಿಜಯ್ ಭಟ್ ನಿರ್ದೇಶನದ ‘ಲೆದರ್ ಫೇಸ್’ (ಕೆಲವು ಮೂಲಗಳು ಫರ್ಜಂದೇ ವತನ್’ ಎನ್ನುತ್ತವೆ.) (39) ಅವಳ ನಾಲ್ಕು-ಐದನೆಯ ವರ್ಷದಲ್ಲಿ ಕ್ಯಾಮರಾ ಎದುರಿಸಿ ನಿಂತಿದ್ದಳು, ಸಂಸಾರದ ನೊಗಹೊತ್ತು. ನಂತರ ಒಂದೊಂದೇ ‘ಏಕ್ ಹೀ ಭೂಲ್, ಪೂಜಾ ‘ ಸಾಲು ಹಿಡಿದವು. ಅದು 1941, ಇವಳ ಒಂಭತ್ತನೇ ವಯದಲ್ಲೇ ವಿಖ್ಯಾತ ಸಂಗೀತಗಾರ ಅನಿಲ್ ಬಿಸ್ವಾಸ್ರು ‘ಬೆಹನ್’ ಚಿತ್ರಕ್ಕಾಗಿ ಮೀನಾಕುಮಾರಿಯನ್ನು ಚಿತ್ರದ ನಟನೆ ಜೊತೆಗೆ ಹಿನ್ನೆಲೆಗಾಯಕಿಯನ್ನಾಗಿ ಪರಿಚಯಿಸಿದರು. ಮುಂದೆ ಕೆಲವೇ ವರ್ಷಗಳಲ್ಲಿ ಅಂದರೆ 1947 ರಲ್ಲಿ ‘ಪಿಯಾ ಘರ್ ಆಜಾ’ ದ ಎಲ್ಲಾ ಹಾಡುಗಳನ್ನು ಹಾಡುವ ಅವಕಾಶ ಮೀನಾಕುಮಾರಿಗೆ ಒದಗಿ ಬಂದದ್ದು ಇಲ್ಲಿ ಉಲ್ಲೇಖನೀಯ.

ಮೊದಮೊದಲು ಪೌರಾಣಿಕ ಚಿತ್ರಗಳಲ್ಲಿ ಸಿಗುತ್ತಿದ್ದ ಪಾತ್ರಗಳು. ನಂತರ ಸಾಮಾಜಿಕ ಚಿತ್ರಗಳ ಯುಗ ಪ್ರಾರಂಭವಾಗುತ್ತಲೇ ವಿಜಯ್ ಭಟ್ ನಿರ್ದೇಶನದ ‘ಬೈಜು ಬಾವರಾ’ ಚಿತ್ರದ ಯಶಸ್ಸು ಮೀನಾಳನ್ನು ಪ್ರಸಿದ್ಧಿಯ ತುತ್ತ ತುದಿಗೇರಿಸಿತು. ಮುಂಬಯಿಯಲ್ಲಿ ನೂರು ವಾರ ನಡೆದು ದಾಖಲೆ ನಿರ್ಮಿಸಿದ ಚಿತ್ರವಿದು. ಬಿಡುಗಡೆಯಾದಲ್ಲೆಲ್ಲ ಸಿಲ್ವರ್, ಗೋಲ್ಡನ್ ಜುಬಿಲಿಯೊಂದಿಗೆ ಹೌಸ್ ಫುಲ್ನಲ್ಲಿ ಮಿಂದೆದ್ದ ಚಿತ್ರ ‘ಬೈಜುಬಾವರಾ’. ಭಾರತೀಯ ಚಿತ್ರರಂಗಕ್ಕೆ ಹೊಸ ದಿಶೆಯನ್ನೇ ನೀಡಿತ್ತು.

ಈ ಚಿತ್ರದಲ್ಲಿ ಮೂವರು ಮುಸ್ಲಿಂ ದಿಗ್ಗಜರು ನೀಡಿದ ಕೊಡುಗೆಯೊಂದನ್ನು ಸ್ಮರಿಸಲೇಬೇಕು. ಸಂಗೀತದಲ್ಲಿ ನೌಶಾದ್, ಶಕೀಲ್ ಬದಾಯುನಿ ಲಿರಿಕ್ಷ್ ಹಾಗೂ ಮಹಮ್ಮದ್ ರಫಿಯ ಕಂಠದಲ್ಲಿ ರಾಗ ಮಾಲಕಂಸ್ದಲ್ಲಿ ಹಾಡಿದ ಭಜನ್, ‘ಮನ ತಡಪತ ಹರಿ ದರುಶನ ಕೊ ಆಜ್’ ಇಂದಿಗೂ ಭಾರತೀಯ ಮಂದಿರಗಳಲ್ಲಿ,, ಭಕ್ತಿ ಸಮಾರಂಭಗಳಲ್ಲಿ ಭಜಿಸಲಾಗುತ್ತದೆ. ಇಂದಿಗೂ ದೇಶದ ಹತ್ತು ಜನಪ್ರಿಯ ಭಕ್ತಿಗೀತೆಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ. ಹಿಂದು ಮುಸ್ಲಿಂ ಭಾವೈಕ್ಯತೆಗೆ ಸದ್ದಿಲ್ಲದೇ ತನ್ನ ಕೊಡುಗೆ ನೀಡಿದ ಇಂತಹ ಅನೇಕ ಸಂಗತಿಗಳು ಬಹುಶ: ಅನೇಕರ ಗಮನಕ್ಕೆ ಬಂದಿರಲಿಕ್ಕಿಲ್ಲ.

ಇದೇ ಚಿತ್ರದಿಂದ ಭಾರತೀಯ ಜನಮಾನಸದಲ್ಲಿ ಯುವಕರಾದಿಯಾಗಿ ಎಲ್ಲರ ಹೃದಯಗಳಲ್ಲಿ ಮೀನಾಕುಮಾರಿ, ಕನಸಿನ ರಾಜಕುಮಾರಿಯಾಗಿ ಪ್ರತಿಷ್ಠಾಪಿಸಿ ಮೆರೆದದ್ದು ಇತಿಹಾಸ. ಅಲ್ಲಿಂದ ಮೀನಾಕುಮಾರಿ ಎಂಬ ಉಚ್ಛ್ರಾಯ ನಟಿಯ ಯುಗವೊಂದು ಆರಂಭವಾಗಿತ್ತು. ಇದೇ ಚಿತ್ರದ ನಟನೆಗೆ 1953ರಲ್ಲಿ ಫಿಲ್ಮಫೇರ್ ಪ್ರಶಸ್ತಿ ಮೀನಾಳನ್ನು ಹುಡುಕಿ ಬಂದಿತ್ತು. ನಂತರದ ದಿನಗಳಲ್ಲಿ ಬಿಡುವಿಲ್ಲದೇ ದಾಯರಾ, ದೋ ಬೀಘಾ ಜಮೀನ್ (53), ಆಝಾದ, ಪರಿಣೀತಾ,(55) ಏಕ್ ಹೀ ರಾಸ್ತಾ,(56) ಶಾರದಾ, ಮಿಸ್ ಮೇರೀ(57), ಶರಾರತ್(59), ದಿಲ್ ಅಪನಾ ಔರ್ ಪ್ರೀತ ಪರಾಯೆ, ಕೊಹಿನೂರ್(60) ಚಿತ್ರಗಳಿಂದ ಪ್ರಸಿದ್ಧಿಯತ್ತ ಸಾಗಿ ಮನೆ ಮನೆಗೂ , ಮನ ಮನಕ್ಕೂ, ತಲುಪಿ, ಗೋಡೆ, ಕಪಾಟುಗಳ ಮೇಲೆಲ್ಲ ತಗುಲಿದಳು ಕನಸಿನ ಬೊಂಬೆಯಾಗಿ. ಮೀನಾ ಅನೇಕರಿಗೆ ಈಗ ನೆರೆಮನೆಯ ಹುಡುಗಿಯಷ್ಟೆ ಆತ್ಮೀಯಳಾಗಿದ್ದಳು.

ಕಿಶೋರ ವಯಸ್ಸು ಮಾಗಿ ಯೌವ್ವನಕ್ಕೆ ಕಾಲಿಟ್ಟ ಹುಡುಗಿಯ ಹೃದಯದಲ್ಲಿ ಪ್ರೇಮದ ಅಲೆಗಳ ಸ್ಪಂದನಗಳು ಎದ್ದು ಹೃದಯವನ್ನು ಮೀಟುತ್ತಿದ್ದವು, ದಟ್ಟ ಅರಣ್ಯದಲ್ಲಿ, ವೀರಾನ ಮರಳಬಯಲುಗಳಲ್ಲಿ ಲಂಗು ಲಗಾಮಿಲ್ಲದೇ ಮನಸ್ಸು ಎಲ್ಲೆಂದರಲ್ಲಿ ಅಲೆಯುತ್ತಿತ್ತು, ಹಾಡುತ್ತಿತ್ತು ಹೀಗೆ ಪ್ರಿಯತಮನಿಗಾಗಿ ಹಾತೊರೆದು…..ಭಾರವಾದ ಒಂಟಿತನದಲ್ಲಿ,…

ಫಿರತೇ ಹೈ ಹಮ್ ಅಕೇಲೆ, ಬಾಹೋಂ ಮೆ ಕೋಯೀ ಲೇಲೆ,
ಆಖಿರ್ ಕೋಯೀ ಕಹಾಂ ತಕ್, ತನ್ಹಾಯೀಯೋಂ ಸೆ ಖೇಲೇ,
ದಿನ್ ಹೋಗಯೇ ಹೈಂ ಜಾಲಿಮ್, ರಾತೇಂ ಹೈಂ ಕಾತಿಲಾನಾ

ಬಾಹುಗಳಲಿ ಕರೆಯಿರಾರೋ , ಅಲೆದಿರುವಿನಿಲ್ಲಿ ಏಕಾಂಗಿ,
ಏಕಾಂತ ಕಳೆವುದೇಗೆ , ಅದಾರೋ ಹೇಳಿ ಹೋಗಿ
ಖೂಳ ದಿನಗಳಿವು, ಇರಿವ ಇರುಳಿವು

ಅದೆಂದೋ…ಹೀಗೆಯೇ ಯೌವ್ವನದ ಕಚಗುಳಿಯ ಕನಸಲ್ಲಿರುವಾಗಲೇ ಅವಳಿಗರಿವಿಲ್ಲದೇ ಸಿನಿಮಾ ಸೆಟ್ಗಳಲ್ಲಿ ಪರಿಚಿತನಾದ ಕವಿ ಹೃದಯಿ, ಸ್ಫುರದ್ರೂಪಿಯಾದ ಕಮಲ್ ಅಮ್ರೋಹಿಯ ಪ್ರೀತಿಯ ಕಂಗಳು ಹಗುರಾಗಿ ಹೊಕ್ಕು ಇವಳನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿದ್ದವು. ಅವಳ ಹೃದಯ ಸಿಂಹಾಸನವನ್ನು ಸಂಪೂರ್ಣವಾಗಿ ಆವರಿಸಿ ಕುಳಿತುಬಿಟ್ಟಿದ್ದ ಕಮಾಲ್ ಅಮ್ರೋಹಿ ಎಂಬ ರಾಜಕುಮಾರ, ಮೂರು ಮಕ್ಕಳ ತಂದೆಯಾದರೂ, ಮೀನಾಳ ಚಿತ್ತ ಅತ್ತ ಚಲಿಸಿರಲೇ ಇಲ್ಲ. ಅದೊಂದು ಕೊರತೆ ಎಂದು ಅವಳಿಗದು ಅನ್ನಿಸಿರಲೇ ಇಲ್ಲ. ಅವಳ ಕನಸಿನ ರಾಜಕುಮಾರನಾಗಿಯೇ ರಾರಾಜಿಸಹತ್ತಿದ್ದ. ಕನಸಿನ ಲೋಕದಲ್ಲಿ ತೇಲುತ್ತಿದ್ದಳು ಹೊಂಗನಸುಗಳನ್ನು ಹೊತ್ತು, ಕಾಲುಗಳು ನೆಲದ ಮೇಲಿರಲಿಲ್ಲ ಈಗ, ಅವನಿಗಾಗಿ ತಮಕಿಸುತ್ತ, ಆರಾಧನೆಯಲ್ಲಿ ಮುಳುಗಿಬಿಟ್ಟಿದ್ದಳು, ಕವಿಹೃದಯಿ, ಮೀನಾ . ಅವಳಿಗಾವ ಜಗದ ಜಂಜಡವೂ , ಗೊಡವೆ, ಏನೂ ಬೇಡವಾಗಿತ್ತು .

ಮೈನೆ ಜಜ್ಬಾತ್ ನಿಭಾಯೆ ಹೈ ಉಸೂಲೋಂ ಕಿ ಜಗಹ್
ಅಪನೇ ಅರಮಾನ್ ಪಿರೋ ಲಾಯಾ ಹೂಂ ಫೂಲೋಂ ಕಿ ಜಗಹ್

ಭಾವದೊಳದ್ದಿ ಮಿಂದು ನಿಂದಿರುವೆ, ರೀತಿಗೀತಿಯ ಬದಲು
ನನ್ನಾಶೆ ಅಭಿಲಾಷೆ ಹೆಣೆದು ತಂದಿರುವೆ, ಹೂಗಳ ಬದಲು

ಹೀಗೆಯೇ ಪರಿಚಿತರಾದ ನಂತರ ಇವಳಿಗಾಗಿ ಮಖನ್ಲಾಲರ ‘ಅನಾರ್ಕಲಿ’ ಚಿತ್ರಕ್ಕಾಗಿ ಹದಿನೈದು ಸಾವಿರಕ್ಕೆ ಒಪ್ಪಂದ ಮಾಡಿಸುತ್ತಾನೆ ನಿದರ್ೇಶಕ ಕಮಲ್ ಅಮ್ರೋಹಿ. ಅದಾಗಲೇ ಶುರುವಾದ ಇವರ ಒಡನಾಟಕ್ಕೆ ನಾಟಕೀಯ ತಿರುವು ಒದಗಿಸಿದ್ದು, ಮೀನಾಗೆ ಪುಣೆಯ ಸಮೀಪದಲ್ಲಿ 1951ರಲ್ಲಾದ ಕಾರು ಅಪಘಾತದಿಂದ. ಅದೊಂದು ದಿನ ಸಹೋದರಿಯರಾದ ಖುಷರ್ಿದ್ ಹಾಗೂ ಮಧುಳನ್ನು ಕರೆದುಕೊಂಡು ವಿಹಾರಕ್ಕಾಗಿ ಕಾರಿನಲ್ಲಿ ತೆರಳಿದಾಗ ಆಗಿದ್ದ ಅಪಘಾತವದು. ಸುಮಾರು ನಾಲ್ಕು ತಿಂಗಳುಗಳ ಕಾಲ ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಆರೈಕೆಗೊಂಡ ಮೀನಾಳನ್ನು ನೋಡಲು ನಿತ್ಯವೂ ಮುಂಬಯಿಯಿಂದ ಕಮಾಲ್ ಹೋಗಿ ಸಂಜೆವರೆಗೂ ಇದ್ದು ಮರಳುತ್ತಿದ್ದ. ನೋವಿನ ದಿನಗಳಲ್ಲಿ ಅವಳ ಕೈಹಿಡಿದು ಧೈರ್ಯತುಂಬುತ್ತಿದ್ದ, ಸಾಂತ್ವನಿಸುತ್ತಿದ್ದ. ಯಾವುದೇ ಸಮಸ್ಯೆಗೆ ‘ಮೈಂ ಹೂಂ ನ’ ಎನ್ನುತ್ತಿದ್ದ. ದಿನವೂ ಮೀನಾಳತ್ತ ಓಡುವುದು ಮತ್ತೆ ಸಂಜೆ ಮರಳುವುದು, ದೈನಂದಿನ ಮಾತಾಗಿಬಿಟ್ಟಿತ್ತು. ಪ್ರೀತಿ ಚಿಗುರೊಡೆದು ಸಂಪೂರ್ಣವಾಗಿ ಅರಳಿ ಆಳ ಬೇರುಬಿಟ್ಟಿತ್ತು.

ಹೀಗಾಗಿ ಸೆಟ್ಗಳಲ್ಲಿ, ಮತ್ತೆ ಸಿನಿ ಬದುಕಿನ ಹೊರಗೂ ಕೂಡ ಅಮ್ರೋಹಿಯನ್ನು ಬಿಟ್ಟಿರದ ಅದಮ್ಯ ಬಲಿತ ಪ್ರೀತಿ ಮೀನಾಳಲ್ಲಿ ಈಗ. ಆಸ್ಪತ್ರೆಯಿಂದ ಬಿಡುಗಡೆಯಾದ ದಿನ ಮಧುಳನ್ನು ತಬ್ಬಿಕೊಂಡು ಗಳಗಳನೆ ಅತ್ತು ಬಿಟ್ಟಿದ್ದಳು ಮೀನಾ, ಕಾರಣ? ಇನ್ನು ಮೇಲೆ ನಿತ್ಯವೂ ಅಮ್ರೋಹಿಯನ್ನು ನೋಡಲಾಗುವುದಿಲ್ಲವಲ್ಲ!. ತನ್ನ ಕನಸಿನ ರಾಜಕುಮಾರನನ್ನು ಅಷ್ಟೊಂದು ಆರಾಧಿಸಿದ್ದಳು. ಮೀನಾಳ ಬದುಕಿನಲ್ಲಿ ಕಮಲ ಅಮ್ರೋಹಿಯ ಪ್ರವೇಶ, ಅದೊಂದು ದೈವಲೀಲೆ. ಅದಾಗಲೇ ರಾಜಕುಮಾರ್, ಭರತಭೂಷಣ ಮುಂತಾದವರು ಇವಳಿಗಾಗಿ ಹಂಬಲಿಸುವ ಸಾಲಿನಲ್ಲಿದ್ದರು. ಈ ಕನಸುಗಣ್ಣಿನ ಪ್ರಿಯತಮ, ಶಾಯರ್ ಮೀನಾಳ ಮೊದಲ ಪ್ರೀತಿ, ಪ್ರಿಯಕರ ಹಾಗೂ ಮೊದಲ ಪತಿ. ಪ್ರತಿ ಬಾರಿಯ ಭೇಟಿಯಲ್ಲೂ ಹೂಗುಚ್ಛವನ್ನೇ ತಂದು ಕೈಲಿಡುತ್ತಿದ್ದನಲ್ಲವೇ ಅಮ್ರೋಹಿ, ಪ್ರೀತಿಯ ಕಡಲಾಗಿದ್ದ, ಕಂಗಳಲ್ಲಿ ಕನಸುಗಳನ್ನೇ ಹೊತ್ತು ತರುತ್ತಿದ್ದ, ಅವುಗಳನ್ನು ಮೀನಾಳಲ್ಲಿ, ಒಮ್ಮೊಮ್ಮೆ ಶಾಯರಿಗಳಿಂದ, ಮತ್ತೊಮ್ಮೆ ಮನದುಂಬಿದ ಮಾತುಗಳಿಂದ ನೇರಾ ನೇರ ಅವಳ ಹೃದಯದಲ್ಲಿ ಸುರಿಯುತ್ತಿದ್ದ, ಪ್ರೀತಿಯಿಂದ ಇವಳು ಅಮ್ರೋಹಿಗೆ ‘ಚಂದನ್’ ಎಂದರೆ ಕಮಾಲ್ ಕರೆಯುವ ಪ್ರೀತಿಯ ಹೆಸರು ‘ಮಂಜು’. ಅವನ ಆ ನಿಷ್ಕಲ್ಮಷ, ಅನೂಹ್ಯ ಪ್ರೀತಿಗೆ ಮನಸೋತು ಕರಗಿ ಬಿಟ್ಟಿದ್ದಳು ಮೀನಾ.

ಇವೆಲ್ಲ ಘಟನಾವಳಿಗಳಿಗೆ ಸಾಥಿ ಹಾಗೂ ಸಾಕ್ಷಿಯಾಗಿ ನೀರೆರೆದದ್ದು ‘ಮಧು’ ಎಂಬ ಅವಳ ಗೆಳತಿಯಂತಹ ಸಹೋದರಿ, ಮತ್ತು ಮುಂದೆ ನಟ ಮೆಹಮ್ಮೂದರ ಪತ್ನಿ. ಅವಳ ಇಂದಿನ ಈ ಸ್ಥಿತಿಯನ್ನು ‘ಪಿಯಾ ಐಸೋ ಜಿಯಾ ಮೇಂ ಸಮಾಯೆ ಗಯೋ ರೆ, ಕೆ ಮೈಂ ತನ್ ಮನ್ ಕಿ ಸೂದ್ ಬೂದ್ ಗಂವಾ ಬೈಠೀ’ (ಪ್ರಿಯಾ ನನ್ನೊಳು ನೀನು ಅವರಿಸಿಬಿಟ್ಟೆ, ಮೈಮನದ ಸ್ವೃತಿಯನ್ನೆ ಕಳೆದುಬಿಟ್ಟೆ’) ಶಕೀಲ್ ಬದಾಯುನಿಯು ಮುಂದೊಮ್ಮೆ ‘ಸಾಹಿಬ್…..’ಗಾಗಿ ಬರೆದ ಸಾಲುಗಳು ಈ ಖರೆ ಸಂಗತಿಯನ್ನು ಅದೆಷ್ಟು ನಿಖರವಾಗಿಸುತ್ತವೆಯಲ್ಲವೇ!

1962 ರಲ್ಲಿ ಬಂದಿದ್ದೇ ಗುರುದತ್ ನೊಂದಿಗೆ, ಅಬ್ರಾರ್ ಅಲ್ವಿಯ ನಿರ್ದೇಶನದಲ್ಲಿ ‘ಸಾಹಿಬ್ ಬೀಬಿ ಔರ್ ಗುಲಾಮ್’ ಎಂಬ ಆಲ್ಟೈಮ್ ಕ್ಲಾಸಿಕ್. ಬರ್ಲಿನ್ ಚಿತ್ರೋತ್ಸವಕ್ಕೆ, ಅಕೆಡಮಿ ಅವಾರ್ಡ್ ಗೂ ಭಾರತೀಯ ನಾಮನಿರ್ದೇಶನ ಹೊಂದಿತ್ತು. ಅವಳ ಜೀವನದ ಕಥೆಯೇ ಎಂದು ಈಗಲೂ ಪರಿಗಣಿಸಲ್ಪಟ್ಟಿದೆ. ಛೋಟಿಬಹುವಾಗಿ, ಇಡೀ ಚಿತ್ರದ ಫ್ರೇಮಿನಲ್ಲೂ ಆವರಿಸಿಕೊಳ್ಳುತ್ತಾಳೆ. ಒಮ್ಮೆ ನೆನಪಿಸಿಕೊಳ್ಳಿ, ಅಲ್ಲಿ ರೆಹಮಾನ್, ವಹೀದಾ ರೆಹಮಾನ್, ಮತ್ತೆ ಗುರುದತ್ ಎಂಬ ಶಿಖರಮಟ್ಟದ ಕಲಾವಿದರಿದ್ದರು. ಆದರೆ ಮೀನಾಕುಮಾರಿಯ ಅಭಿನಯ ಎಲ್ಲರನ್ನೂ, ಎಲ್ಲವನ್ನೂ, ಕಾಲವನ್ನೂ ಮೀರಿ ಅಜರಾಮರವಾಯಿತು. ಅವಳಲ್ಲಿನ ಕಲಾವಿದೆ ವಿಜೃಂಭಿಸಿದ್ದಳು. ಕ್ಲೋಸ್ಅಪ್ ಸೀನ್ಗಳಲ್ಲಿ ಕ್ರಾಂತಿಯನ್ನೇ ಮಾಡಿದ್ದಳು, ನೋವಿಗೆ, ದಾಹಕ್ಕೆ ಹೊಸ ಭಾಷ್ಯ ಬರೆದಿದ್ದಳು, ಇನ್ನಾರಿಗೂ ಎಂದಿಗೂ ಸಾಧ್ಯವಾಗದಂತೆ. ಕಪ್ಪು ಬಿಳುಪಿನ ವಿ. ಕೆ. ಮೂರ್ತಿ ಛಾಯಾಗ್ರಹಣಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಹಾಗಿತ್ತು ಅದು ಕಾಂಬಿನೇಶನ್. ಛೋಟಿ ಬಹು ಪರಿಪರಿಯಾಗಿ ತನ್ನ ಪತಿಗೆ ತನ್ನವನ್ನಾಗಿ ಮಾಡಿಕೊಳ್ಳಲು, ತಾನು ಅವನಲ್ಲಿ ಒಂದಾಗುವ ಕೋರಿಕೆಗಳು ಅವಳ ಒಳ ಹೊರ ಬದುಕಿಗೂ ವ್ಯತ್ಯಾಸವೇ ಇಲ್ಲದಷ್ಟು ಇವು ಅವಳದೇ ಕಥೆಯನ್ನು ಹೇಳುತ್ತವೆ, ತಾನು ಛೋಟಿಬಹುವಾಗಿ ತನ್ನದೇ ಬದುಕನ್ನು ನೆನೆದು ಅಭಿನಯಿಸುತ್ತಿದ್ದೆ ಎಂದಿದ್ದಳೊಮ್ಮೆ.

ಯೆ ಬಿಖರೀ ಜುಲ್ಫೆಂ, ಯೆ ಘುಲತಾ ಕಜರಾ
ಯೆ ಮಹಕೀ ಚುನರೀ, ಯೆ ಮನ್ ಕಿ ಮದಿರಾ
ಯೆ ಸಬ್ ತುಮ್ಹಾರೆ ಲಿಯೆ ಹೈ ಪ್ರೀತಮ್
ಮೈಂ ಆಜ್ ತುಮ್ಕೋ ನ ಜಾನೆ ದೂಂಗಿ, ಜಾನೇನ ದೂಂಗಿ..

ಈ ಹರಡಿದ್ಹೆರಳು, ಈ ತೇವ ಕಾಡಿಗೆ
ಈ ಸುಗಂಧಿ ಸೆರಗು, ಈ ಮನದ ಮದಿರೆ,
ಕಾದಿಹವಿಲ್ಲಿ ನಿನಗಾಗಿ ಪ್ರಿಯನೆ
ನಿನಗಿಂದು ನಾನು ಹೋಗಗೊಡೆನು, ಹೋಗಗೊಡೆನು

ಮೀನಾಕುಮಾರಿಯ ಅಭಿನಯ ಮುಂದೆ ನೂರು ವರ್ಷಗಳವರೆಗೂ ಯಾರೂ ಮಾಡಲಾರದಷ್ಟು ಉತ್ಕೃಷ್ಟವಾಗಿದೆ ಎಂದು ಕ್ರಿಟಿಕ್ಷ್ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಚಿತ್ರದ ಛೋಟಿ ಬಹು ಪಾತ್ರವನ್ನು ಸುರಾಪಾನ ಮಾಡಿ ಅಭಿನಯಿಸಿದ ದೃಶ್ಯಗಳನ್ನು, ಅವಳ ಮುಖಭಾವಗಳೊಂದಿಗೆ ಅವಳ ಆ ಡಯಲಾಗ್ಗಳನ್ನು ಯಾರು ಮರೆತಾರು!, ಆದರೆ ಗೆಳೆಯರೆ, ಅಂದು ಮೀನಾ ಒಂದು ಹನಿ ಶರಾಬು ಕೂಡ ಕುಡಿಯದೇ ಆ ಅಭಿನಯ ಮಾಡಿದ್ದು, ಬಹುತೇಕರಿಗೆ ನಂಬಲಾಗುವುದಿಲ್ಲ. ಈ ಸುರಾಪಾನದ ಅಭಿನಯವನ್ನು ಖುದ್ದು ಅಮ್ರೋಹಿಯೇ ಬಂದು ಅವಳಿಗೆ ಹೇಳಿಕೊಡುವಂತೆ ಅನುಕೂಲ ಮಾಡಿದ್ದ ಗುರುದತ್ತ್. ಇದೇ ಸಂದರ್ಭವಲ್ಲವೇ ಅತ್ಯುತ್ತಮ ನಟಿ ಪ್ರಶಸ್ತಿಗೆ ಇರುವ ಮೂರೂ ನಾಮಿನೇಶನ್ಗಳಲ್ಲಿ ಮೀನಾಕುಮಾರಿಯೇ ಇದ್ದದ್ದು, ಆರತಿ, ಮೈ ಛುಪ್ ರಹೂಂಗಿ, ಸಾಹಿಬ್ ಬೀಬಿ ಔರ್ ಗುಲಾಮ್. ಇವುಗಳಲ್ಲಿ ಅದು ಸಾಹಿಬ್…..ಗೆ ಬಂದಿತ್ತು ಎಂದು ಬೇರೆ ಹೇಳಲೇಬೇಕಿಲ್ಲ.. ಹೀಗೆ ಒಂದೇ ನಟಿಯ ಎಲ್ಲ ಚಿತ್ರಗಳೂ ನಾಮಿನೇಶನ್ ಆಗಿದ್ದು ಇಂದಿಗೂ ದಾಖಲೆಯಾಗಿಯೇ ಉಳಿದಿದ್ದು ಇತಿಹಾಸ.

1952 ರಲ್ಲಿ ಒಂದು ದಿನ ಅಪ್ಪ ಅಲಿಭಕ್ಷ ಅಪಘಾತದಲ್ಲಿ ಇನ್ನೂ ಚೇತರಿಸಿಕೊಳ್ಳದ ಇವಳನ್ನು ಮುಂಜಾನೆ ಫಿಜಿಯೋ ಥೆರಪಿಗಾಗಿ ಬಿಟ್ಟು ಒಂದೆರಡು ತಾಸು ಆದ ನಂತರ ಬಂದು ಅದೇ ಜಾಗದಿಂದ ಮರು ಹತ್ತಿಸಿಕೊಂಡು ಹೊರಡುತ್ತಿದ್ದ. ಇದರಲ್ಲೇ ಹೊಂಚುಹಾಕಿ ಅಮ್ರೋಹಿ, ಮೀನಾಳ ಸೆಕ್ರೆಟರಿ ಅಲಿಬಾಕರ್ನೊಂದಿಗೆ ಮೊದಲೇ ಸಿದ್ಧಪಡಿಸಿದ್ದ, ಮದುವೆ ಮಂಟಪಕ್ಕೆ ಸಿನಿಮಾ ಮಾದರಿಯಲ್ಲಿ ಬಂದು, ಎಲ್ಲಾ ವ್ಯವಸ್ಥೆಯಾದಂತೆ ಸಂಪ್ರದಾಯಗಳಂತೆ ಮದುವೆಯಾಗಿಬಿಟ್ಟ. ಇವರಿಬ್ಬರ ಕೋಟಿ ದುವಾಗಳ ಸಫಲತೆಯ ಧನ್ಯತೆಯ ಗಳಿಗೆಯಲ್ಲಿ ಎರಡೂ ಹೃದಯಗಳ ಮಿಲನವಾಗಿಬಿಟ್ಟಿತು.

ಜಿನ್ಸೆ ಮಿಲ್ನೇ ಕಿ ತಮನ್ನಾ ಥೀ ವಹೀ ಆತೇ ಹೈಂ
ಚಾಂದ್ ತಾರೇ ಮೇರಿ ರಾಹೋಂ ಮೆಂ ಬಿಛೆ ಜಾತೇ ಹೈಂ
ಚೂಮ್ತಾ ಹೈ ತೆರೆ ಕದಮೋಂ ಕೊ ಗಗನ್ ಆಜ್ ಕಿ ರಾತ್
ಸಾರಿ ದುನಿಯಾ ನಜರ್ ಆತೀ ಹೈ ದುಲ್ಹನ್ ಆಜ್ ಕಿ ರಾತ್
ದೋ ಸಿತಾರೋಂ ಕಾ ಜಮೀಂ ಪರ್ ಹೈ ಮಿಲನ್ ಆಜ್ ಕಿ ರಾತ್

ಅದೇ ನಡೆಯಿತು, ಸಂಧಿಸಲವಗೆ ಮನ ಬಯಸಿದ ಹಾಗೆ
ಚುಕ್ಕೆ ಚಂದಿರರಿಲ್ಲಿ, ನನ್ನೀ ದಾರಿಯಲ್ಲಿ ಹಾಸಿಕೊಂಡ ಹಾಗೆ
ಈ ರಾತ್ರಿ ಗಗನವೇ ಬಾಗಿ ನಿನ್ನ ಹೆಜ್ಜೆಗಳಿಗೆ ಚುಂಬಿಸಿದ ಹಾಗೆ
ಕಾಣುತಿದೆ ಜಗವೆಲ್ಲ ಇರುಳಲ್ಲಿ ಮದುವಣಗಿತ್ತಿಯ ಹಾಗೆ
ನೆಲದ ಮೇಲಿಂದು ಈ ರಾತ್ರಿ ತಾರೆಗಳೆರಡರ ಮಿಲನದ ಹಾಗೆ

…ಶಕೀಲ್ ಬದಾಯುನಿಯ ಸಾಲುಗಳು ಇದೇ ಆನಂದದ ಗಳಿಗೆಗಾಗಿ ಮುಂದೊಮ್ಮೆ ‘ಕೊಹಿನೂರ್’ ಗಾಗಿ ಮೂಡುತ್ತವೆಯೇನೊ? ಮೂರು ಮಕ್ಕಳ ತಂದೆ ಎಂದು ಗೊತ್ತಿದ್ದೂ ಕೂಡ ಹಾಗೂ ತನಗಿಂತಲೂ ಅಮ್ರೋಹಿ ಹದನೈದು ವರ್ಷ ದೊಡ್ಡವನು ಎಂಬ ವಿಷಯ ಮಸ್ತಕದ ಸನಿಹ ಕೂಡ ಹಾಯದಿರುವುದು, ಪ್ರೀತಿಯ ಮೋಹದ ಪರದೆ, ಸಮ್ಮೋಹನದ ಸೆಳೆತಕ್ಕೆ ಇರುವ ಮತ್ತೊಂದು ಉದಾಹರಣೆ ಎಂದೇ ಪರಿಗಣಿಸಬೇಕಾಗುತ್ತದೆ. ಮತ್ತೆ ಅಪ್ಪ ಅಲೀಭಕ್ಷ ಬರುವುದರೊಳಗಾಗಿ ಫಿಜಿಯೋಥೆರಪಿ ಸೆಂಟರ್ ಹೊರಗೆ ಕಾಯುತ್ತ ನಿಂತಿದ್ದಳು ಮೀನಾ, ತಂಗಿ ಮಧುಳೊಂದಿಗೆ. ಏನೂ ಆಗಿಲ್ಲದಂತೆ!, ಅಪ್ಪ ಬಂದ ಕೂಡಲೇ ಅವನ ಕಾರಿನಲ್ಲಿ ಎಂದಿನಂತೆ ಅಲ್ಲಿಂದ ಶೂಟಿಂಗ್ಗೆ ತೆರಳಿದರು.

ಆದರೆ ಕಳುವು ಎಲ್ಲಿಯವರೆಗೆ!, ಕೆಂಡದಂತೆ ಸುಡುತ್ತ ಅದೊಂದು ದಿನ ಗೊತ್ತಾಗಿ, ದೊಡ್ಡ ರಂಪವೇ ಆಯಿತು. ಈ ಮದುವೆಗೆ ಕಡುವಿರೋಧಿಯಾಗಿದ್ದ ಅಪ್ಪ ಅಲಿಭಕ್ಷನಿಂದ ಕಮಾಲ್ಗೆ ತಲಾಖ್ ನೀಡಲು ಒತ್ತಾಯ. ಚಿನ್ನದ ತತ್ತಿಯನೀಯುವ ಮಗಳನ್ನು ಕಳೆದುಕೊಳ್ಳಲು ಅಪ್ಪ ಸುತರಾಂ ತಯಾರಿರಲಿಲ್ಲದಿರುವುದು ಒಂದು ಕಾರಣವಾದರೆ, ಮನೆಯಲ್ಲಿ ಅವಳಿಗೆ ಯಾವ ಕೊರತೆಯನ್ನೂ ಮಾಡಿಲ್ಲದಿರುವುದು ಅವನ ಸಹಜ ಅಪ್ಪನಾಗಿ ಅಧಿಕಾರದೊತ್ತಾಸೆಯೂ ಕಾರಣ . ಹೀಗಾಗಿ ಮೀನಾಳಿಗೆ ಅಪ್ಪನನ್ನು ಸುಖಾಸುಮ್ಮನೆ ಧಿಕ್ಕರಿಸುವುದು ಸಾಧ್ಯವಿರಲಿಲ್ಲ. ಆದರೆ ಆಡಾಡತ ಆದ ಪ್ರೀತಿಯ ಸೆಳೆತವೂ ಅಷ್ಟೇ ತೀಕ್ಷ್ನವಾದ ಪರಿಣಾಮವನ್ನು ಉಂಟುಮಾಡಿ ಅದರ ಜಾಲದಲ್ಲಿ ಸಂಪೂರ್ಣ ವಿವಶಳನ್ನಾಗಿ ಮಾಡಿ ಬಿಟ್ಟಿತ್ತು. ಇದೇ ದ್ವಂದ್ವದಲ್ಲಿ ಬಲು ಪೇಚಾಡಿದ್ದಳು, ಆತ್ಮಸಾಕ್ಷಿ ಎರಡಕ್ಕೂ ಸಮ್ಮತಿಸಿ ಬಿಡುತ್ತಿತ್ತು, ನಿರ್ಧಾರ ಓಲಾಡುವಂತೆ ಮಾಡಿತ್ತು. ಆದರೆ ಪ್ರೀತಿಯ ಪ್ರವಾಹದ ಸೆಳೆತಕ್ಕೆ ಯಾವುದೂ ನಿಲ್ಲದೆಂಬ ಮಾತೇ ಸತ್ಯವಾಯಿತು. ಮೀನಾ ಈಗ ಗಟ್ಟಿಯಾಗಿಬಿಟ್ಟಿದ್ದಳು, ನಿರ್ಧಾರ ತೆಗೆದುಕೊಂಡಿದ್ದಳು. ಎಂದಿದ್ದರೂ ಅಪ್ಪ ಅಮ್ಮನ ಮನೆ ಬಿಡಲೇಬೇಕಲ್ಲವೇ?…..ತಪ್ಪು ತಿಳಿಯಬೇಡ ಅಪ್ಪ ಎಂದು ಒಪ್ಪವಾಗಿ ಬೇಡಿಕೊಂಡಿದ್ದಳು ‘ದುವಾ’ ಗಳಲ್ಲಿ….

ಒಂದು ದಿನ ಕಮಲ ಅಮ್ರೋಹಿಯ ಹೊಸ ಸಿನಿಮಾಗೆಂದು ಹೊರಡಲು ಮನೆಯಿಂದ ಹೊರಡಲುದ್ದೇಶಿಸಿದ ಮೀನಾಳನ್ನು ತಡೆದು, ಒತ್ತಾಯಿಸಿ, ಮೆಹಬೂಬಖಾನರ ಸಿನಿಮಾಗೆ ದಿಲೀಪಕುಮಾರ ಎದುರು ನಟಿಸಲು ಒತ್ತಾಯ ಅಲೀಭಕ್ಷನಿಂದ.. ಹೇಗಾದರೂ ಅಮ್ರೋಹಿಯಿಂದ ದೂರವಿಡುವುದು ಅವನ ಯೋಜನೆ. ಹಾಗೊಮ್ಮೆ ಒಪ್ಪದಿದ್ದರೆ ಈ ಮನೆಯು ಅವಳಿಗೆ ಎಂದೆಂದಿಗೂ ಮುಚ್ಚಲ್ಪಡುವುದೆಂದು ನಿರ್ಬಂಧ ಹಾಕಿದಾಗ, ಅಂಜಿಕೆಯಿಂದ ಐದು ದಿನ ಅಪ್ಪನ ಅಣತಿಯಂತೆ ಮೆಹಬೂಬಖಾನ್ ಚಿತ್ರದ ಶೂಟಿಂಗ್ಗೆ ತೆರಳಿದಳು. ಆರನೇ ದಿನ ತಡೆಯಲಾರದೇ ಅಮ್ರೋಹಿಯ ಕ್ಯಾಮರಾದೆಡೆ ಓಡಿಬಿಟ್ಟಿದ್ದಳು ಮೀನಾ. ಆದರೆ ಸಂಜೆ ಮನೆಗೆ ಬಂದಾಗ ಬಾಗಿಲು ಅಕ್ಷರಶ: ಮುಚ್ಚಲ್ಪಟ್ಟಿತ್ತು. ಅಪ್ಪನಿಗೆ ಒಲಿಸಲು, ತಿಳಿಸಿಹೇಳಲು ಮಾಡಿದ ಪ್ರಯತ್ನವೆಲ್ಲ ನಿಷ್ಫಲವಾಗಿ ಮೀನಾ ಅಳುತ್ತ ನಿಂತುಬಿಟ್ಟಿದ್ದಳು ಅದೆಷ್ಟೋ ಹೊತ್ತು ಮುಚ್ಚಿದ ಬಾಗಿಲಿನ ಹೊರಗೆ ರಸ್ತೆಯಲ್ಲಿ. ಎಲ್ಲಿಗೆ ಹೋಗಬೇಕು, ಏನು ಮಾಡುವುದು ಒಂದೂ ತಿಳಿಯದೇ.. ಅಂತೂ ದಿಟ್ಟ ನಿರ್ಧಾರ ಮಾಡಿ ತವರಿನ ಮುಚ್ಚಿದ ಬಾಗಿಲಿನಿಂದ ಗಂಡನ ಮೆನೆಯೆಡೆಗೆ ಕಣ್ಣೀರಿನಲ್ಲಿ ರಾತ್ರಿಯಲ್ಲಿಯೇ ತೆರಳಿದಳು. ಅಮ್ರೋಹಿ ಮನೆಗಾದರೂ ಹೋಗುವುದು ಹೇಗೆ? ಅವರಾದರೂ ತನ್ನನ್ನು ಹೇಗೆ ಸ್ವೀಕರಿಸುವರೋ! ಅಂತೂ ಕಮಾಲ್ಗೆ ಮೀನಾಳ ಸೆಕ್ರೆಟರಿ ಅಲೀಬಾಕರ್ನಿಂದ ವಿಷಯ ಗೊತ್ತಾಗಿ ಕೂಡಲೇ ಧಾವಿಸಿ ಬಂದು ಅವಳನ್ನು ಮನೆತುಂಬಿಸಿಕೊಂಡ. ಆ ಮನೆಯಲ್ಲಿ ಎಲ್ಲರೂ ಪ್ರೀತಿಯಿಂದಲೇ ಮೀನಾಳನ್ನು ಸ್ವಾಗತಿಸಿದ್ದು ಅವಳಿಗೆ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಹೊರಗೆ ‘ಮಶಹೂರ್ ಆಕ್ಟ್ರೆಸ್’, ಒಳಗೆ ಉರಿಯುವ ಕೆಂಡವಾಗಿದ್ದಳು ಮೀನಾ, ಎಂಬ ದುರದೃಷ್ಟದ ನಟಿ. ಅಪ್ಪ ಅಮ್ಮನನ್ನು ತೊರೆದು ಅಮ್ರೋಹಿಯ ಸಂಸಾರದೊಂದಿಗೆ ಇರಹತ್ತಿದಳೀಗ, ಶೈಲೇಂದ್ರನ ಸಾಲುಗಳಂತೆ….

ಅಜೀಬ್ ದಾಸ್ತಾಂ ಹೈ ಯೆ , ಕಹಾಂ ಶುರು ಕಹಾಂ ಖತಮ್
ಯೆ ಮಂಜಿಲೇಂ ಹೈ ಕೌನ್ ಸೀ, ನ ವೊ ಸಮಝ್ ಸಕೆ ನ ಹಮ್

ವಿಚಿತ್ರ ಕತೆಯಿದು, ಶುರುವೆಲ್ಲೊ, ಕೊನೆಯೆಲ್ಲೋ,
ನೆಲೆಗಾಣೆ, ಎಲ್ಲಿ ಏನು ತಿಳಿಯೆನಲ್ಲೋ,

ತುಸು ನೆಮ್ಮದಿಯ ದಿನಗಳೀಗ. ಎಲ್ಲರೊಂದಿಗೆ ಪ್ರೀತಿಯಿಂದಲೇ ಇರುತ್ತಿದ್ದ ಅಮ್ರೋಹಿ, ಅವನ ಮಕ್ಕಳನ್ನು ಮೀನಾ ಕೂಡ ತುಂಬ ಪ್ರೀತಿಸುತ್ತಿದ್ದಳು, ಅಮ್ರೋಹಿಯ ಮೊದಲ ಪತ್ನಿ ಕೂಡ ಇವಳನ್ನು ಒಪ್ಪಿಕೊಂಡು ಅನ್ಯೋನ್ಯವಾಗಿದ್ದಳು. ಸ್ವರ್ಗ ಮೂರೇ ಗೇಣು ಸುಖದ ಸಂಸಾರದಲ್ಲಿ. ಮನೆಯಲ್ಲಿ ಎಲ್ಲರೂ ಕೂಡಿಯೇ ರಾತ್ರಿಯ ಭೋಜನ ಮಾಡುವುದು, ಛೋಟಿ ಅಮ್ಮಿ, ಮೀನಾ ಬರುವವರೆಗೆ ಎಲ್ಲರೂ ಕಾಯುವುದು, ಅದೊಂಥರ ಜಮಾನಾದಿಂದಲೇ ಅವರೊಟ್ಟಿಗೆ ಮೀನಾ ಇರುವಳೇನೋ ಎನ್ನುವಷ್ಟು ಹೊಂದಿಕೊಂಡಿದ್ದರೆಲ್ಲ. ಆದರೆ ಎಲ್ಲೋ ಮೀನಾಳಿಗೆ ಬರಬರುತ್ತ ತನ್ನನ್ನು ಕಮಾಲ್ ಕಡೆಗಣಿಸುತ್ತಿದ್ದಾನೆಂದು ಅನಿಸಹತ್ತಿತ್ತು. ಇದನ್ನು ಸೂಚ್ಯವಾಗಿ ಕೇಳಿದಾಗಲೂ ತನಗೆ ಸಾಂತ್ವನಿಸುವಂತಹ ಮಾತುಗಳು ಅಮ್ರೋಹಿಯಿಂದಲೂ ಬಾರದಾದಾಗ ಮೀನಾ ಮನಸ್ಸು ವ್ಯಗ್ರವಾಗುತ್ತ, ಛಿದ್ರವಾಗುತ್ತ ನಡೆಯಿತು.

ಮೊದಮೊದಲು ನಿತ್ಯವೂ ಅವಳ ಹತ್ತಿರ ಹೋಗಿ ‘ಐ ಲವ್ ಯು’ ಎನ್ನುತ್ತಲೇ ಭೇಟಿಗಾರಂಭಿಸುತ್ತಿದ್ದ. ಮುಂದೆ ಅದೇನು ತಿಳಿಯಿತೋ ಮನೆಯಲ್ಲಿ ನಿತ್ಯವೂ ಕೂಡಿಯೇ ಇರುತ್ತೇವಲ್ಲ ಎಂದು ಕಡಗಣಿಸಿದನೆಂದು ಕಾಣುತ್ತದೆ. ಬೆಳಿಗ್ಗೆ ಎದ್ದವನೇ ‘ಐ ಲವ್ ಯೂ’ ಎನ್ನುವುದನ್ನು ಮರೆತೇಬಿಟ್ಟ.. ಇವೆಲ್ಲ ಮೀನಾಳ ಮೇಲೆ ಗಾಢ ಪರಿಣಾಮ ಬೀರುತ್ತ ಸಾಗಿದವು. ಎಲ್ಲೋ ಏನೋ ಕಳೆದುಕೊಂಡವಳ ಹಾಗೆ ಇರಹತ್ತಿದಳು. ತಾನು ಕಡಗಣಿಸಲ್ಪಟ್ಟವಳು ಎಂದು ಅವಳಿಗೆ ಅನಿಸತೊಡಗಿತ್ತು. ಅವಳ ಅನಿಸಿಕೆಯಂತೆಯೇ ಘಟನಾವಳಿಗಳು ಒಂದಕ್ಕೊಂದು ಹೆಣೆದುಕೊಳ್ಳತೊಡಗಿದವು. ಅಮ್ರೋಹಿಗೆ ಈಗ ಮೀನಾ ಕೇವಲ ಹೆಂಡತಿಯಷ್ಟೆ. ಆದರೆ ಅಲ್ಲಿ ಪ್ರೀತಿಯ ಕೊರತೆಯಿತ್ತು.

ಅವಳ ಎಲ್ಲ ಚಟುವಟಿಕೆಗಳನ್ನು ಎಲ್ಲಿದ್ದರೂ ಗುಮಾನಿಯಿಂದಲೇ ಗಮನಿಸಹತ್ತಿದ. ಅವಳ ಸುತ್ತ ತನ್ನ ಗುಪ್ತ ಗೆಳೆಯರನ್ನು ಬಿಟ್ಟು ಅವಳ ಚಲನ ವಲನಗಳನ್ನು ಗಮನಿಸಹತ್ತಿದ. ಮೊದಮೊದಲು ಹೊಂದಿಕೊಂಡ ಮೀನಾಗೆ ಇದು ವಿಪರೀತವೆನಿಸತೊಡಗಿತು. ಕೇವಲ ತನ್ನ ಸರ್ವಸ್ವವನ್ನೂ ಅಪರ್ಿಸಿ, ಅವನಿಗೆ ಅಷ್ಟೊಂದು ನಿಷ್ಠಳಾಗಿದ್ದರೂ, ಕಮಾಲ್ ಈಗ ಮೊದಲಿನಂತಿರಲಿಲ್ಲ. ಪ್ರತಿ ಭೇಟಿಯಲ್ಲೂ ಹೂಗುಚ್ಛವನ್ನೇ ಹಿಡಿದು ತರುತ್ತಿದ್ದ ಕನಸಿನ ಅಮ್ರೋಹಿ ಈಗ ‘ಐ ಲವ್ ಯೂ’ ಅನ್ನದಷ್ಟು ದೂರವಾಗತೊಡಗಿದ್ದ. ಮೀನಾ ಶೂಟಿಂಗ್ನಿಂದ ಅನಿವಾರ್ಯವಾಗಿ ತಡವಾಗಿ ಬಂದರೂ ಅವಳನ್ನು ಸಂಶಯಿಸುವ ದೃಷ್ಟಿ ಪ್ರಾರಂಭವಾಯಿತು, ಅವಳಿಗೆ ಸಲ್ಲದ ಪ್ರಶ್ನೆಗಳನ್ನು ಕೇಳತೊಡಗಿದ. ಪುಣೆಯ ಸಸೂನ್ ಆಸ್ಪತ್ರೆಯಲ್ಲಿದ್ದಾಗ ಪರಸ್ಪರ ಮುಂಬಯಿ ಪುಣೆಗಳಲ್ಲಿದ್ದರೂ ಎಷ್ಟೊಂದು ಸಮೀಪವಾಗಿದ್ದರು,

ಈಗ ಸಮೀಪವಿದ್ದರೂ ಅದೆಷ್ಟು ದೂರ ದೂರವಾಗಿದ್ದರು.
ಅದೊಮ್ಮೆ ಹೀಗೆ ಬರೆದಿದ್ದಳು, ತನ್ನ ಡೈರಿಯಲ್ಲಿ,

ದಿಲ್ ಸಾ ಸಾಥೀ ಜಬ್ ಪಾಯಾ
ಬೇಚೈನಿ ಭೀ ಸಾಥ್ ಮಿಲೀ

ಹೃದಯದಂತಹ ಪ್ರಿಯಕರನೊಂದಿಗೆ
ಅಶಾಂತಿಯೂ ಅದರೊಡೆ ಬಂತು

ಮೀನಾಕುಮಾರಿಯನ್ನು ಯಾವ ನೆಲೆಯಿಂದ ನೋಡುವುದು, ಸಾಮಾನ್ಯಳನ್ನಾಗಿಯೋ, ಅಸಾಮಾನ್ಯಳನ್ನಾಗಿಯೋ, ತಾರೆಯಾಗಿಯೋ, ಗೆಳತಿಯಾಗಿಯೋ, ಕವಿ, ಶಾಯರ್, ಪ್ರಿಯತಮೆಯಾಗಿಯೋ, ಭಗ್ನಪ್ರೇಮಿಯಾಗಿಯೋ, ಸಾಮಾಜಿಕ ದೃಷ್ಟಿಕೋನದ ನೆಲೆಯಿಂದಲೋ, ಸುಪ್ರಸಿದ್ಧ ವ್ಯಕ್ತಿಯಾಗಿಯೋ, ದಾರಿ ತಪ್ಪಿದ ಜೀವವಾಗಿಯೋ, ಅದು ಹೇಗೆ ನೋಡಿದರೂ, ನಮ್ಮೆಲ್ಲರಿಗೆ ನೋವಿನ ಸಂಕೇತವಾಗಿಯೇ ಗೋಚರಿಸುತ್ತಾಳೆ ಮೀನಾ ಜಿ. ಅವಳ ಬದುಕೊಮ್ಮೆ ಆಕಾರವಾಗಿ, ಇನ್ನೊಮ್ಮೆ ನಿರ್ವಿಕಾರ, ಮತ್ತೊಮ್ಮೆ ವಿಕಾರವಾಗಿರುತ್ತಿತ್ತು. ತನ್ನ ಪ್ರಿಯಕರನೊಂದಿಗೆ ಬದುಕೊಂದನ್ನು ಕಟ್ಟಿಕೊಂಡ ಅವಳ ಮನದಿಚ್ಛೆಯು ಸಾಕಾರವಾದರೂ, ಅವಳ ಒಳ ಪುಕಾರಿಗೆ ಯಾವ ದನಿಯೂ ಓಗೊಡದಿದ್ದು, ವಿಪರ್ಯಾಸ.

‍ಲೇಖಕರು Admin

25 January, 2016

5 Comments

  1. Hanumanth Ananth Patil

    ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
    ’ಎಕ್‌ ಥೀ ಮೀನಾಕುಮಾರಿ’ ಒಂದು ಅದ್ಬುತ ಲೇಖನ ಆಕೆಯ ಕುರಿತು ಸಮಗ್ರ ಪರಿಚಯವನ್ನು ಕಾವ್ಯಮಯವಾಗಿ ನಿರೂಪಿಸಿದ್ದೀರಿ, ಓದಿ ಸಂತಸ ವಾಯಿತು ಬಹಳ ದಿನಗಳ ನಂತರ ಅವದಿಗೆ ಮರಳಿದರೂ ಸುಂದರ ಲೇಖನವೊಂದರ ಮೂಲಕ ಅಗಮಿಸಿದ್ದೀರಿ ಧನ್ಯವಾದಗಳು.

    • Anonymous

      ಆತ್ಮೀಯ ಹನುಮಂತ ಅನಂತ ಪಾಟೀಲರವರಿಗೆ. ಧನ್ಯವಾದಗಳು ಸರ್. ತಮ್ಮ ಮೆಚ್ಚುಗೆಗೆ ವಂದನೆಗಳು.

  2. ಎನ್.ರಮೇಶ ಕಾಮತ್

    ಆತ್ಮೀಯ ಇಟ್ನಾಳರೆ
    ದಿ.ಮೀನಾಕುಮಾರಿಯವರ ಜೀವನದ ವಿವರವಾದ ಘಟನಾವಳಿಗಳನ್ನು ತಮ್ಮ ಎಂದಿನ ಶೈಲಿಯಲ್ಲಿ ಬರೆದ ಲೇಖನ ಓದುತ್ತಿದ್ದರೆ ಯಾರ ಮನಸ್ಸಿನಲ್ಲಾದರೂ ಕೊಂಚ ವಿಶಾದ ಮೂಡದೇ ಇರದು.ಅವರೊಬ್ಬರು ಶ್ರೇಷ್ಟ ಕಲಾವಿದರಾಗಿದ್ದು ಯಾವ ಕಾಲಕ್ಕೂ ಚಿತ್ರರಂಗದ ಮಿನುಗುವ ನಕ್ಷತ್ರರಾಗಿ ಉಳಿಯುತ್ತಾರೆ.

    • Anonymous

      ಆತ್ಮೀಯ ಎನ್. ರಮೇಶ ಕಾಮತ್ ರವರಿಗೆ ವಂದನೆಗಳು. ಹೌದು ತಮ್ಮ ಮಾತು ನಿಜ ಸರ್. ಮೀನಾಕುಮಾರಿ ಎಂದಿಗೂ ಚಿತ್ರರಂಗದ ಮಿನುಗುವ ನಕ್ಷತ್ರವೇ. ತಮ್ಮ ಪ್ರತಿಕ್ರಿಯೆಗೆ ವಂದನೆಗಳು.

  3. Vithal Katti

    ಮೀನಾಕುಮಾರಿ ಅಧ್ಭುತ ಕವಿಯಿತ್ರಿಯೂ ಆಗಿದ್ದಳು. ( ಈ ವಿಷಯ ನಿಮಗೂ ಗೊತ್ತು ) ಅವಳ ಕಾವ್ಯದ ಬಗ್ಗೆ ನಿಮ್ಮಿಂದ ಹೆಚ್ಚಿನದನ್ನು ತಿಳಿಯ ಬಯಸುತ್ತೇನೆ. ಉಳಿದಂತೆ ಬರವಣಿಗೆಯ ಶ್ರೀಮಂತಿಕೆಗಾಗಿ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading