–ಎಂ ಎಸ್ ಪ್ರಕಾಶ್ ಬಾಬು
ಟಿ ಜೆ ಎಸ್ ಜಾರ್ಜ್ ಅವರು ನಮ್ಮನ್ನಗಲಿದ್ದಾರೆ. ಅವರು ನಮ್ಮ ದೇಶದ ಪ್ರಮುಖ ಪತ್ರಕರ್ತರಷ್ಟೇ ಅಲ್ಲ, ಅವರು ಬರೆದ ಕೃತಿಗಳಲ್ಲೇ “ಎಂ ಎಸ್ ಸುಬ್ಬಲಕ್ಷ್ಮಿ ಯವರ ಜೀವನಚರಿತ್ರೆ” ಒಂದು ಮೇರು ಕೃತಿ. ನಾನು ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವಾಗ ಪ್ರತೀ ವಾರ ಇವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ಬರೆಯುತ್ತಿದ್ದ ಕಾಲಂ ಓದುತ್ತಿದ್ದೆ, ಅದು ನಾನು ಆಗ ವಾರಕ್ಕೊಮ್ಮೆ ರಚಿಸುತ್ತಿದ್ದ ಪೊಲಿಟಿಕಲ್ ಕಾರ್ಟೂನಿಗೆ ಸಹಕಾರಿಯಾಗಿತ್ತು.
ಒಮ್ಮೆ ನನ್ನ ಗೆಳೆಯರಾದ ಹಾಗು ಟೈಮ್ಸ್ ನಲ್ಲಿ ಅಸೋಸಿಯೇಟ್ ಎಡಿಟರ್ ಆಗಿದ್ದ ವಿ.ಕೃಷ್ಣ ಅವರು ನನ್ನನ್ನು ಕರೆದು ಟಿ ಜೆ ಎಸ್ ಜಾರ್ಜ್ ಅವರನ್ನು ಭೇಟಿಯಾಗಲು ತಿಳಿಸಿದರು. ನಾನು ಇಂಡಿಯನ್ ಎಕ್ಸ್ ಪ್ರೆಸ್ಸ್ ಆಫೀಸಿಗೆ ಹೋಗಿ ಅವರನ್ನು ಭೇಟಿಯಾದೆ. ಮೊದಲ ಭೇಟಿಯೇ ಆತ್ಮೀಯವಾಗಿತ್ತು, ಸಾಕಷ್ಟು ಸಮಯ ನನ್ನೊಂದಿಗೆ ಮಾತನಾಡಿ, ನನ್ನ ಕಲೆ ಮತ್ತು ಇತರೇ ಆಸಕ್ತಿಗಳ ಬಗ್ಗೆ ತಿಳಿದುಕೊಂಡ ನಂತರವೇ ಅವರ ಕೃತಿಯೊಂದಕ್ಕೆ ಮುಖಪುಟದೊಂದಿಗೆ ಇತರೆ ಕೆಲವು ಇಲ್ಲಸ್ಟ್ರೇಷನ್ ಮಾಡಿಕೊಡಲು ಒಪ್ಪಿಸಿದರು. ನಾನು ಸಂತೋಷದಿಂದ ಅವರು ನಿಗದಿಪಡಿಸಿದ ಸಮಯಕ್ಕೆ ಮುಂಚಿತವಾಗಿ ಮುಖಪುಟದ ವಿನ್ಯಾಸ ಮತ್ತು ಇಲ್ಲಸ್ಟ್ರೇಷನ್ ಗಳನ್ನು ತಲುಪಿಸಿದೆ. ಹೀಗೆ ನನ್ನ ಮತ್ತು ಅವರ ಒಡನಾಟ ಬೆಳೆಯಿತು.
ಆಗ ನಮ್ಮ ಮನೆ ವಯ್ಯಾಲಿಕಾವಲಿನಲ್ಲಿ ಇತ್ತು, ಅವರ ಮನೆಯೂ ಸದಾಶಿವ ನಗರದಲ್ಲಿದ್ದರಿಂದ ತುಂಬಾ ಸಮೀಪವಾದ್ದರಿಂದ ಒಂದು ಬೆಳಗ್ಗೆ ನಮ್ಮ ಮನೆಯ ಗೇಟಿನ ಮುಂದೆ ಹಾಜರಾಗಿದ್ದರು. ನಾನು ಅವರನ್ನು ಒಳಗೆ ಕರೆದೆ, ತುಂಬಾ ಹೊತ್ತು ಹರಟುತ್ತಾ ಕುಳಿತೆವು. ನಾನು ನನ್ನ ಸಿನೆಮಾ ಆಸಕ್ತಿಯ ಬಗ್ಗೆ ಹೇಳುತ್ತಾ ಹೋದೆ, ಅವರು ಚಲನಚಿತ್ರಗಳಿಗೆ ಕೊಡುವ ನ್ಯಾಷನಲ್ ಅವಾರ್ಡ್ ಗಳ ಜ್ಯೂರಿ ಆಗಿದ್ದ ಅನುಭವನ್ನು ಹಂಚಿಕೊಂಡರು.
ಮಾತು ಕೇರಳ ಸಾಹಿತ್ಯ, ಚಿತ್ರಕಲೆ, ಸಿನೆಮಾ ಕಡೆ ಹೊರಳಿತು. ಹೀಗೆ ಇಬ್ಬರೂ ಆತ್ಮೀಯರಾದೆವು. ಅವರು ಅಂದು ಬಂದ ಉದ್ದೇಶ ಅವರ ಮಗ ಜೀತ್ ಥಾಯಿಲ್ ಅವರ ೨೦೧೨ರಲ್ಲಿ ಬೂಕರ್ ಪ್ರೈಸ್ ಗೆ ನಾಮಿನಿಯಾದ “ನಾರ್ಕೋಪೋಲೀಸ್” ಕೃತಿಯ ಮಲಯಾಳಂ ಅನುವಾದಿತ ಪುಸ್ತಕಕ್ಕೆ ಮುಖಪುಟ ವಿನ್ಯಾಸ ಮಾಡಿಸುವುದಾಗಿತ್ತು. ನಾನು ಸಂತೋಷದಿಂದ ಒಪ್ಪಿಕೊಂಡು ಮಾಡಿಕೊಟ್ಟೆ. ಜೀತ್ ತಾಯಿಲ್ ಅವರೂ ಕೂಡ ತಂದೆಯಂತೆಯೇ ಪ್ರಸಿದ್ಧರು, ಒಳ್ಳೆಯ ಕವಿ ಮತ್ತು ಕಾದಂಬರಿಕಾರರು.

ಟಿ ಜೆ ಎಸ್ ಜಾರ್ಜ್ ಅವರು ಸದಾಶಿವ ನಗರದಿಂದ ಕಾಕ್ಸ್ ಟೌನಿಗೆ ಹೊಸ ವಿಲ್ಲಾ ಒಂದನ್ನು ಕೊಂಡುಕೊಂಡು ಶಿಫ್ಟ್ ಆದಾಗ ನನ್ನೊಂದಿಗೆ ನನ್ನ ಪತ್ನಿ ಭವಾನಿ ಮತ್ತು ಮಗ ಚಾರುನನ್ನೂ ಆಹ್ವಾನಿಸಿದ್ದರು. ಆಗ ಅವರು ಅವರ ಮನೆಯ ಸಂಗ್ರಹದಲ್ಲಿದ್ದ ಚೈನೀಸ್, ಜಪಾನೀಸ್ ಪೇಟಿಂಗ್ಸ್ ಮತ್ತು ಸಾಕಷ್ಟು ಕರಕುಶಲ ವಸ್ತುಗಳನ್ನು ತೋರಿಸಿದರು. ಅವರ ಸಂಗ್ರಹದಲ್ಲಿದ್ದ ಬಹು ದೊಡ್ಡ ಪುಸ್ತಕ ಭಂಢಾರವನ್ನು ನೋಡಿ ನಾನು ಧಂಗಾಗಿ ಹೋದೆ. ಆನಂತರ ನಮ್ಮ ಸಂಪರ್ಕ ಕ್ಷೀಣಿಸುತ್ತಾ ಹೋಯಿತು.
ಒಮ್ಮೆ ನನ್ನ ಗೆಳೆಯ ಬಸವ ಬಿರಾದಾರ್ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರಿನಲ್ಲಿ ಅಡೂರು ಗೋಪಾಲಕೃಷ್ಣ ಅವರ ಮಥಿಲೆಗಳ್ ಸಿನೆಮಾ ಪ್ರದರ್ಶನ ಮತ್ತು ಅಡೂರರೊಂದಿಗೆ ಸಂವಾದವನ್ನು ಏರ್ಪಡಿಸಿದ್ದರು. ಸಿನೆಮಾ ಮುಗಿದ ನಂತರವೇ ನನಗೆ ಗೊತ್ತಾಗಿದ್ದು ನನ್ನ ಮುಂದಿನ ಸಾಲಿನಲ್ಲಿ ಟಿ ಜೆ ಎಸ್ ಜಾರ್ಜ್ ಕುಳಿತಿದ್ದಿದ್ದಾರೆಂದು. ಅವರ ಬಳಿಗೆ ಹೋಗಿ ಮಾತಾಡಿಸಿದೆ.
ಅದೇ ಆತ್ಮೀಯತೆಯಿಂದ ನನ್ನ ಕೈಯನ್ನು ಅದುಮಿ ಹಿಡಿದು ಅಡೂರು ಗೋಪಾಲಕೃಷ್ಣ ಅವರ ಬಳಿಗೆ ಕರೆದೊಯ್ದು ಪರಿಚಯ ಮಾಡಿಸಿದರು. ಅವರು ಆ ಸಮಯದಲ್ಲಿ ನನ್ನನು ಕೇಳಿದ್ದರು “ನಾನು ಎರಡು ಪುಸ್ತಕಗಳನ್ನು ಬರೆಯುವ ಆಸಕ್ತಿಯಲ್ಲಿದ್ದೇನೆ, ಆದರೆ ಸಮಯದ ಅಭಾವದಿಂದಾಗಿ ಒಂದನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ತೊಡಗಿಸಿಕೊಳ್ಳಬೇಕು, ಒಂದು ಮಹಾ ಪಾಂಡಿತ್ಯವನ್ನು ಹೊಂದಿದ್ದ ರಾವಣನ ಬಗ್ಗೆ, ಇನ್ನೊಂದು ಇಂದಿನ ಪತ್ರಿಕೋದ್ಯಮದ ಅಧೋಗತಿಯ ಬಗ್ಗೆ. ನಿನ್ನ ಆಯ್ಕೆ ಯಾವುದು” ಎಂದು. ನಾನು ಒಂದು ರೀತಿಯ ಸಂದಿಗ್ದಕ್ಕೆ ಸಿಲುಕಿದೆ. ಸ್ವಲ್ಪ ಹೊತ್ತು ಯೋಚಿಸಿ ರಾವಣನ ಬಗ್ಗೇ ಬರೆಯಿರಿ, ಅದೇ ಇಂದಿನ ಸಮಾಜಕ್ಕೆ ಪ್ರಸ್ತುತ ಅಂದೆ. ಅವರು ಮರು ಮಾತಾಡಲಿಲ್ಲ. ಅದೇ ನನ್ನ ಮತ್ತು ಅವರ ಕೊನೆಯ ಭೇಟಿ. ಹೋಗಿ ಬನ್ನಿ ಮಿಸ್ಟರ್ ಜಾರ್ಜ್.






0 Comments