ಡಾ.ಡಿ. ಮಂಗಳಾ ಪ್ರಿಯದರ್ಶಿನಿ
ಚುನಾವಣೆಗಳೆಂದರೆ ನಮ್ಮೂರಿನ ಬಾಲ್ಯಕಾಲದ ಚುನಾವಣಾ ಸಂಭ್ರಮದ ನೆನಪುಗಳಲ್ಲೇ ಮನಸ್ಸು ಸುತ್ತುತ್ತದೆ . ತುರ್ತು ಪರಿಸ್ಥಿತಿಯ ನಂತರದ ಚುನಾವಣೆಯಲ್ಲೇ ನಾನು ನನ್ನ ಮೊದಲ ಮತದಾನ ಮಾಡಿದ್ದು . ಚುನಾವಣೆಯೆಂದರೆ ರಾಜಕೀಯ ನಾಯಕರ ಕೆಸರೆರೆಚಾಟದ ಭಾಷಣಗಳು , ಆಟೋಗಳಲ್ಲಿ ಮೈಕಿನ ಮೂಲಕ ನಡೆಸುವ ಉದ್ಘೋಷಗಳು , ಮುಖ್ಯ ಬೀದಿ , ರಸ್ತೆಯ ತಿರುವು , ಪಾರ್ಕುಗಳಲ್ಲಿ ಪಕ್ಷದ ರಾಜಕೀಯ ನಾಯಕರ ನಡುವೆ ಕೈ ಮುಗಿದು ವಿನಮ್ರನಾಗಿ ನಿಂತ ಅಭ್ಯರ್ಥಿಯ ಚಿತ್ರಗಳು ,
ಅವನ ಪ್ರತ್ಯೇಕ ಅಡಿಗಳುದ್ದದ ಕಟೌಟುಗಳು , ಫ್ಲಕ್ಸ್ ಬೋರ್ಡುಗಳು , ಮನೆ ಮನೆಯ ಕಾಂಪೌಂಡಿಗೂ ರಾತ್ರೋ ರಾತ್ರಿ ಗೋಂದು ಸವರಿ ಕದ್ದು ಹಚ್ಚಿದ ಅಭ್ಯರ್ಥಿ ಪರ ಪ್ರಚಾರ ಸಾಹಿತ್ಯಗಳು , ಎಲ್ಲಿಲ್ಲದ ಚಟುವಟಿಕೆಗಳಿಂದ ಓಡಾಡುತ್ತ ಮತಭಿಕ್ಷೆ ಯಾಚಿಸುವ ಕಾರ್ಯಕರ್ತರು , ರಾತ್ರಾನು ರಾತ್ರಿ ಪಕ್ಷ ಭೇದವಿಲ್ಲದೆ ಅವಶ್ಯವಿರುವವರಿಗೆ ಮತಕೊಳ್ಳಲು ಸರಬರಾಜಾಗುವ ಸೀರೆ , ಪಂಚೆ , ಮೂಗುತಿ , ಮಾಂಗಲ್ಯ , ಹಣ , ಹೆಂಡ , ಮಿಕ್ಸಿ , ಟಿ ವಿ – ಇತ್ಯಾದಿಗಳು , ಜೋರಾಗಿ ಅರಚುವ ಮೈಕಾಸುರ , ಜನಪ್ರಿಯ ಗೀತೆಗಳನ್ನು ಆಯ್ಕೆ ಮಾಡಿ , ಆ ಸಾಹಿತ್ಯಕ್ಕೆ ತಮ್ಮ ಪಕ್ಷ , ಅಭ್ಯರ್ಥಿಗಳನ್ನು ಕೂರಿಸಿ ಬರೆದ ಲಾವಣಿಗಳು , ಗೀತ – ಸಂಗೀತಗಳು …. ಒಂದೇ , ಎರಡೇ ?
ಚುನಾವಣೆ ಎಂದರೆ , ನಮ್ಮೂರಿನ ಸಂಭ್ರಮವೇ ಬೇರೆ . ಕಾರ್ಯಕರ್ತರಿಗಂತೂ ಸುಲಭವಾಗಿ ಕಾಸು ಸಂಪಾದಿಸುವ ಮಾರ್ಗವಾದರೆ , ಅಭ್ಯರ್ಥಿಗೆ ಬಚ್ಚಿಟ್ಟ ಕಪ್ಪು ಹಣದ ಹೊಳೆಯನ್ನು ಹರಿಸುವ ಅವಕಾಶ . ಒಂದು ಪಕ್ಷದ ಅಭ್ಯರ್ಥಿಯ ಘೋಷಣೆ ಆಗುವವರೆಗೂ ಮತ್ತೊಂದು ಪಕ್ಷದ ಅಭ್ಯರ್ಥಿಯ ಗುಟ್ಟುಬಿಡದೆ ನಡೆಸುವ ರಹಸ್ಯ ಕಾರ್ಯಾಚರಣೆಗಳು , ಲೆಕ್ಕಾಚಾರಗಳು , ಅದನ್ನು ಭೇದಿಸಲು ಪೈ ಪೋಟಿ ನಡೆಸುವ ಮಾಧ್ಯಮ ಮಿತ್ರರು – ಅದೂ ತಾವೇ ಮೊದಲು ಎಂಬ ಎಚ್ಚರಿಕೆ , ಭರವಸೆಗಳೊಂದಿಗೆ .
ಈಗ ಕರ್ನಾಟಕದಲ್ಲಿಯೂ ನವೆಂಬರ್ ಮೂರರಂದೇ ರಾಜ ರಾಜೇಶ್ವರಿ ನಗರ ಹಾಗೂ ಸಿರಾ ವಿಧಾನ ಸಭೆಯ ಉಪ ಚುನಾವಣಾ ಪೈಪೋಟಿ . ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಅಭ್ಯರ್ಥಿ ಪಕ್ಷ ಬದಲಾಯಿಸಿ , ತನ್ನ ಸೀಟಿಗೆ ತಾನೇ ಸ್ಪರ್ಧಿ . ನಾನು ಮತದಾನ ಮಾಡಬೇಕಿದ್ದ ಕ್ಷೇತ್ರ ಅದು . ಆ ಅಭ್ಯರ್ಥಿ ಕ್ಷೇತ್ರದಲ್ಲಿ ಹೆಚ್ಚು ಪರಿಚಿತನಾಗಿದ್ದು , ಮೊನ್ನೆ ಗೌರಿ , ಗಣೇಶ ಹಬ್ಬದಲ್ಲಿ ತನ್ನ ಕ್ಷೇತ್ರದ ಎಲ್ಲ ಭಕ್ತರಿಗೂ ಗೌರಿ , ಸಿದ್ಧಿ ಪ್ರದ ವಿನಾಯಕ ಮೂರ್ತಿಗಳನ್ನು ನೀಡಿ ಮತದಾರರ ಮನದ ಮೂಲೆಯಲ್ಲಿ ಭದ್ರವಾಗಿ ತನ್ನ ಸ್ಥಾನ ಉಳಿಸಿಕೊಂಡಿರುವುದು ವಿಶೇಷ .
ಅದರೊಂದಿಗೆ ಕಾಗ್ರೆಸ್ ಪಕ್ಷದ ಶಕ್ತಿ ದೇವತೆ , ಮೃತ ಐ ಎ ಎಸ್ ಅಧಿಕಾರಿ ಡಿ ಕೆ ರವಿ ಅವರ ಪತ್ನಿಯಾಗಿ ಮಹಿಳಾ ಅಭ್ಯರ್ಥಿ , ವಿದ್ಯಾವಂತೆ ಕುಸುಮಾ ಅವರು ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡುತ್ತಿರುವುದೂ ಕುತೂಹಲಕಾರಿಯೇ .
ಅಮೆರಿಕಾದಲ್ಲಿ ಅದೇ ದಿನ , ವಿಶ್ವವೇ ಕಾತುರದಿಂದ ನಿರೀಕ್ಷಿಸುತ್ತಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ . ಈ ವೇಳೆ ನಾನು ಇಲ್ಲೇ ಇದ್ದರೂ , ಮತದಾನದ ಹಕ್ಕಿಲ್ಲದೆ ಚುನಾವಣಾ ವೈಖರಿಗಳನ್ನು ಗಮನಿಸುತ್ತಿರುವ ಮೂಕ ಪ್ರೇಕ್ಷಕಿ .
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ತಯಾರಿ , ಅಧ್ಯಕ್ಷೀಯ ಅಭ್ಯರ್ಥಿ ಘೋಷಣೆ , ಹೆಚ್ಚೂ ಕಡಿಮೆ ವರ್ಷದ ಹಿಂದೇ ಆಗಿದ್ದು , ಅಮೆರಿಕಾ ಪ್ರಜೆಗಳು ಅಭ್ಯರ್ಥಿಗಳ ನಡೆ , ನುಡಿ , ಮನೋಭಾವ , ಕಾರ್ಯ ಪ್ರವೃತ್ತಿಗಳನ್ನು ಕೂಲಂಕುಷವಾಗಿಯೇ ಗಮನಿಸುತ್ತಿದ್ದಾರೆ . ಇಲ್ಲಿರುವುದು ಮುಖ್ಯವಾಗಿ ಎರಡೇ ಪಕ್ಷಗಳು . ಆಡಳಿತ ಪಕ್ಷವಾದ ರಿಪಬ್ಲಿಕನ್ ಹಾಗೂ ವಿರೋಧ ಪಕ್ಷವಾಗಿ ಡೆಮಾಕ್ರಟಿಕ್. ಯಥಾ ಪ್ರಕಾರ , ಒಬ್ಬರ ನಡತೆಯನ್ನು ಮತ್ತೊಬ್ಬರು ಸಾರ್ವಜನಿಕ ಚರ್ಚೆಗಳಲ್ಲಿ ಮತದಾರರ ಮುಂದೆ ಕಾಲೆಳೆದು ಕೆಡವಲು ಪ್ರಯತ್ನಿಸುತ್ತಲೇ ಇರುತ್ತಾರೆ .
ಅಮೆರಿಕಾ ಸಂಸ್ಥಾನ ಐವತ್ತು ರಾಜ್ಯಗಳ ಬೃಹತ್ ರಾಷ್ಟ್ರವಾಗಿದ್ದು , ರಿಪಬ್ಲಿಕನ್ ಪಕ್ಷವನ್ನು ಜಿ ಓಪಿ – ‘ ಗ್ರ್ಯಾಂಡ್ ಓಲ್ಡ್ ಪಾರ್ಟಿ ‘ ಎಂದೇ ಕರೆಯಲಾಗಿದೆ . ಈ ಪಕ್ಷ ಈಗ ಆಳುವ ಪಕ್ಷವಾಗಿದ್ದು , ತೆರಿಗೆಗಳನ್ನು ಇಳಿಸುವ , ಶಸ್ತ್ರಾಸ್ತ್ರ ಕಾಯಿದೆಯನ್ನು ಉಳಿಸಿ ಕೊಳ್ಳುವ ಹಾಗೂ ಮುಖ್ಯವಾಗಿ ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತಿತರ ಅವಕಾಶಗಳನ್ನು ನೀಡುವಂತೆ ಇಮಿಗ್ರೇಷನ್ ಮೇಲೆ ನಿರ್ಬಂಧ ಮಾಡುವ ಯೋಜನೆಗಳನ್ನು ಮುಖ್ಯವಾಗಿ ತನ್ನ ಪಕ್ಷದ ಅಜೆಂಡವಾಗಿ ಈ ಚುನಾವಣೆಯಲ್ಲಿ ಘೋಷಿಸಿ ಕೊಂಡಿದೆ.

ಇದಕ್ಕೆ ಪ್ರತಿಯಾಗಿ ಡೆಮಾಕ್ರೆಟಿಕ್ ಪಕ್ಷ ಹೆಚ್ಚು ಉದಾರೀ ನಿಲುವನ್ನೊಳಗೊಂಡ ಪಕ್ಷವಾಗಿದ್ದು ,ಅಮೆರಿಕನ್ನರಿಗೆ ಹೆಚ್ಚು ಹೆಚ್ಚು ಉದ್ಯೊಗಾವಕಾಶ ಕಲ್ಪಿಸುವುದಕ್ಕಾಗಿ ಹೊಸ ಉದ್ದಿಮೆಗಳ ಸ್ಥಾಪನೆ , ಮುಖ್ಯವಾಗಿ ಪ್ರತಿಯೊಬ್ಬ ಅಮೆರಿಕಾ ಪ್ರಜೆಗೆ ಆರೋಗ್ಯ ಭಾಗ್ಯ – ತನ್ನ ಒಬಾಮ ಸರ್ಕಾರದ ಜನಪ್ರಿಯ ಒಬಾಮಾ ಆರೋಗ್ಯ ಕಾಳಜಿ, ರಕ್ಷಣೆ , ಡ್ರಗ್ ಕಾಯಿದೆಯಲ್ಲಿನ ಮಾರ್ಪಾಟುಗಳನ್ನು ಎತ್ತಿಹಿಡಿದಿದೆ .
ಎರಡು ಅವಧಿಗೆ ಅಮೆರಿಕಾ ಅಧ್ಯಕ್ಷರಾಗಿದ್ದ ಒಬಾಮಾ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್ ಅವರು ಡೆಮಾಕ್ರಟಿಕ್ ಪಕ್ಷವನ್ನು ಪ್ರತಿನಿಧಿಸಿದ್ದರೆ , ರಿಪಬ್ಲಿಕನ್ ಪಕ್ಷದ ಪ್ರತಿನಿಧಿಯಾಗಿ ಪ್ರಸಕ್ತ ಅಮೆರಿಕನ್ ಅಧ್ಯಕ್ಷರಾದ ಡೊನಾಲ್ಡ್ ಟ್ರ್ಂಪ್ ಅವರು ಮರು ಆಯ್ಕೆಯನ್ನು ಬಯಸಿದ್ದಾರೆ .
ಟ್ರ್ಂಪ್ ಆಗಲಿ , ಜೋ ಬೈಡನ್ ಆಗಲಿ ಎಪ್ಪತ್ತರ ಹರೆಯ ದಾಟಿದ ಪ್ರಬುದ್ಧ ರಾಜಕಾರಣಿಗಳೆ . ಶ್ರೀಮಂತಿಕೆಯ ಹಿನ್ನೆಲೆಯಲ್ಲಿ ಬಂದ ಟ್ರ್ಂಪ್ ಆಗಲಿ , ಮಧ್ಯಮ ವರ್ಗದಿಂದ ಬಂದು , ಜನ ಸಾಮಾನ್ಯರ ಬಗೆಗೆ ಮಿಡಿಯುವ ಬೈಡನ್ ಆಗಲಿ , ಇಬ್ಬರೂ ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿ ಕೊಂಡಿದ್ದಾರೆ .
ಈಗಾಗಲೇ ವರ್ಷದಿಂದ ಅಭ್ಯರ್ಥಿಗಳು ತಮ್ಮ ತಮ್ಮ ನಿಲುವುಗಳನ್ನು ಸಾರ್ವಜನಿಕವಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ . ಈಗಾಗಲೇ ಮೂರೂ ಮುಖಾ ಮುಖಿ ವಾದ – ವಿವಾದ , ಡಿಬೇಟುಗಳು ( ಕೋವಿಡ್ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಎರಡನೆಯ ಡಿಬೆಟ್ಟಿಗೆ ಸ್ವತಃ ಟ್ರಂಪ್ ಅವರ ಗೈರು ಹಾಜರಿ )ನಡೆದು ಸಾಕಷ್ಟು ಸಂಚಲನ , ಗೊಂದಲಗಳೂ ಸೃಷ್ಟಿಯಾಗಿದ್ದು , ಬಹುತೇಕ ಮತದಾರರು ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ರೂಪಿಸಿಕೊಂಡಿದ್ದಾರೆ .
ಮುಖಾಮುಖೀ ಚರ್ಚೆಗಳು ಅನಾದಿ ಕಾಲದಿಂದಲೂ ನಡೆದು ಬಂದಿರುವ ಅಮೆರಿಕಾ ಚುನಾವಣಾ ಸಂಪ್ರದಾಯ . ಅಭ್ಯರ್ಥಿಗಳು ಒಬ್ಬರ ಸಮ್ಮುಖದಲ್ಲಿ ಮತ್ತೊಬ್ಬರು ನಿಂತು ತಮ್ಮ ಪಕ್ಷದ ಧೋರಣೆಗಳು , ತಮ್ಮ ಕೊಡುಗೆಗಳು , ಏನು ಕೊಟ್ಟಿದ್ದೇವೆ , ಏನು ಕೊಡಲಿದ್ದೇವೆ ಎಂಬುದನ್ನು ಪ್ರಾಮಾಣಿಕವಾಗಿ ಹೇಳಿಕೊಳ್ಳ ಬೇಕು . ಈ ಚರ್ಚೆ 90 ನಿಮಿಷಗಳದ್ದಾಗಿದ್ದು , ಮೂರು ಘಟಕಗಳನ್ನೊಳಗೊಂಡಿರುತ್ತದೆ .
ನುರಿತ ರಾಜಕೀಯ ವಿಶ್ಲೇಷಕರು ಜನಪ್ರಿಯ ಹಾಗೂ ಸೂಕ್ಷ್ಮ ಪ್ರಶ್ನೆಗಳೊಂದಿಗೆ ಮಾಡರೇಟ್ ಮಾಡುತ್ತಾರೆ . ಪ್ರತಿಯೊಬ್ಬ ಅಭ್ಯರ್ಥಿಯೂ ಕೇಳುವ ಪ್ರಶ್ನೆಗೆ ಎರಡು ನಿಮಿಷಗಳಲ್ಲಿ ಚುಟುಕು ಉತ್ತರ ನೀಡ ಬೇಕು . ಯಾವುದೇ ಕಾರಣಕ್ಕೂ ಮಧ್ಯ ಬಾಯಿ ಹಾಕುವಂತಿಲ್ಲ . ಎದುರಾಳಿ ಮಾತನಾಡುವಾಗ ಈತನ ಮೈಕ್ ಮ್ಯೂಟ್ ಆಗಿರುತ್ತದೆ . ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಡಿಬೇಟಿಗೆ ಬಹಳ ಮಹತ್ವವುಂಟು . ಇಂಥ ಚರ್ಚೆಗಳು ಮುಂದಿನ ಅಧ್ಯಕ್ಷರ ನಿಲುವು , ಅವರ ಬಾಡಿ ಲ್ಯಾಂಗ್ವೇಜ್ , ವ್ಯಕ್ತಿತ್ವಗಳನ್ನು ನಿರ್ಧರಿಸುವುದರಿಂದ ಜನರ ಆಯ್ಕೆಗೆ ಸಹಾಯಕವಾಗುತ್ತದೆ .
ಅಮೇರಿಕಾ ಅಧ್ಯಕ್ಷೀಯ ಚುನಾವಣೆಗಳು , ಆಯ್ಕೆಯ ಪ್ರಕ್ರಿಯೆ , ಅದರಹಿಂದಿನ ನಿಯಮಾವಳಿಗಳು ಅಷ್ಟು ಸರಳವಾದುದಲ್ಲ . ಎಂತಹ ಬಿ ಬಿ ಸಿ, ಸಿ ಎನ್ಎನ್ , ಫಾಕ್ಸ್ – ಮುಂತಾದ ರಾಜಕೀಯ , ಚುನಾವಣಾ ವಿಶ್ಲೇಷಕರಿಗೇ ಚಳ್ಳೇ ಹಣ್ಣು ತಿನ್ನಿಸುವಂತಹದು . 2000ದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಬುಷ್ ಹಾಗೂ ಆಲ್ ಗೋರೆ ಅವರ ಚುನಾವಣಾ ಸಮಯದಲ್ಲಿ ಫಲಿತಾಂಶಗಳನ್ನು ಸುಪ್ರೀಂ ಕೋರ್ಟ್ ನೀಡ ಬೇಕಾಯಿತು .
2016ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಹಿಲರಿ ಕ್ಲಿನ್ ಟನ್ ಅವರು ಟ್ರಂಪ್ ಅವರಿಗಿಂತ ಮೂರು ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದರೂ , ಪ್ರಜೆಗಳ ಮತ ,ಆಯ್ಕೆ ಆಕೆಯೇ ಆಗಿದ್ದರೂ , ಎಲೆಕ್ಟರಲ್ ಕಾಲೇಜು ,ಹಾಗೂ ಬ್ಯಾಟಲ್ ಗ್ರೌಂಡ್ ರಾಜ್ಯಗಳು ಆಯ್ಕೆ ಮಾಡಿದ್ದು ಟ್ರಂಪ್ ಅವರನ್ನೇ. 538 ಸ್ಥಾನಗಳಲ್ಲಿ 270 ಸ್ಥಾನಗಳನ್ನು ಪಡೆದ ಅಭ್ಯರ್ಥಿಗೆ ಜಯ .

ಹೀಗಾಗಿ ಈ ಜಯ ಘೋಷಣೆಯ ಹಿನ್ನಲೆಯಲ್ಲಿ ಪ್ರಧಾನ ಪಾತ್ರ ವಹಿಸುವುದು ಎಲೆಕ್ಟರಲ್ ಕಾಲೇಜುಗಳು ಹಾಗೂ ಬ್ಯಾಟಲ್ ಗ್ರೌಂಡ್ ರಾಜ್ಯಗಳು – ಅವನ್ನು ನಿರ್ಧರಿಸುವುದು ಆಯಾ ರಾಜ್ಯಗಳ ಜನಸಂಖ್ಯೆ – ಉದಾ . ಕ್ಯಾಲಿಫೋರ್ನಿಯಾದಲ್ಲಿ ಅತಿ ಹೆಚ್ಚಿನ 55 ಎಲೆಕ್ಟರಲ್ ಕಾಲೇಜುಗಳಿದ್ದರೆ , ಟೆಕ್ಸಾಸ್ 38 , ಫ್ಲಾರಿಡಾ 29 , ನ್ಯೂಯಾರ್ಕ್ 29 , ಮಿಷಿಗನ್ 16,ವ್ಯೊಮಿಂಗ್ ಬರೀ 3 ಇರುವಂತಹದು . ರಾಷ್ಟ್ರಮಟ್ಟದ ಆಯ್ಕೆಗಿಂತ ರಾಜ್ಯ ಮಟ್ಟದ ಆಯ್ಕೆಗೇ ಪ್ರಾಮುಖ್ಯತೆ . ಹೀಗಾಗಿ ಜನಮತಕ್ಕಿಂತಲೂ ಈ ಎರಡು ವಿಚಾರಗಳು ಅಭ್ಯರ್ಥಿಯ ಗೆಲುವಿನ ಹಿಂದೆ ನಿರ್ಣಾಯಕ ಪಾತ್ರ ವಹಿಸುತ್ತದೆ .
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳ ವಿಶ್ಲೇಷಣೆ ನಮ್ಮೂರಿನ ಚುನಾವಣಾ ವಿಶ್ಲೇಷಣೆಗಳಂತಲ್ಲ . ಹಳ್ಳಿಯ ಮುದುಕಪ್ಪ ಮೋಟು ಬೀಡಿಯ ದಮ್ಮು ಎಳೆಯುತ್ತಾ ಅರಳಿ ಕಟ್ಟೆಯ ಕೆಳಗೆ ಕುಳಿತೋ , ನಮ್ಮ ಹೆಂಗಳೆಯರು ನೀರು ಜಗ್ಗುತ್ತಾ ಆಡುವ ಮಾತುಗಳಷ್ಟು ಸರಳವಲ್ಲ . ಹೆಜ್ಜೆ ಹೆಜ್ಜೆಗೂ ರಾಜಕೀಯ ಲೆಕ್ಕಚಾರ ಕುತೂಹಲ ಕೆರಳಿಸುವಂತಹದು . ರಾಜಕೀಯ ನಮಗೆ ಬೇಡವೆಂದರೂ ರಾಜಕೀಯಕ್ಕೆ ನಾವು ಬೇಕೇ ಆಗಿದ್ದೇವೆ , ಎಂಬ ಪ್ರಜ್ಞೆ ಬಹುಶಃ ನಮ್ಮಲ್ಲಿ ಹೆಚ್ಚು ಉಂಟೇನೋ?
ಇನ್ನೊಂದೆಡೆ ಮನೆ ಯಜಮಾನ ಹೇಳಿದ ಪಾರ್ಟಿ , ಅಭ್ಯರ್ಥಿಗೆ ಮನೆಮಂದಿಯೆಲ್ಲ ಓಟು ಒತ್ತುವ ಸಂಪ್ರದಾಯವೂ ನಮ್ಮಲ್ಲಿ ಹೆಚ್ಚು . ಆಟವಾಡುವ ಮಗುವನ್ನು ಕೇಳಿದರೂ ಈ ಪಕ್ಷವೇ ಗೆಲ್ಲುತ್ತದೆ ಎಂದು ಹೇಳುವ ರಾಜಕೀಯ ಪ್ರಜ್ಞೆಯೂ ಉಂಟು . ನಾನು ಕಂಡ ಹಾಗೆ ಇಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ನಿಲುವುಗಳು . ಅಜ್ಜಿ ಒಂದು ಪಕ್ಷಕ್ಕೆ ಮತ ಚಲಾಯಿಸಿದರೆ ,ಮಗಳು , ಮೊಮ್ಮಗಳು ಮತ್ತೊಂದಕ್ಕೆ. ಮನೆ ಯಜಮಾನ ನಿರಾಸಕ್ತ . ನನಗೆ ಯಾರೂ ಇಷ್ಟವಿಲ್ಲ , ನಾನು ಯಾರಿಗೂ ಮತದಾನ ಮಾಡುವುದಿಲ್ಲ , ಎಂಬ ಹಠ ಮಾಡಬಹುದು .
ಅಮೆರಿಕೆಯಲ್ಲಿ ನವೆಂಬರ್ ಮೂರು ಮತದಾನದ ದಿನವಾಗಿದ್ದು , ಅದಕ್ಕಿಂತ ಮುಂಚಿನಿಂದಲೇ ಮತದಾನದ ಪ್ರಕ್ರಿಯೆ ಪ್ರಾರಂಭವಾಗಿದೆ . ಅರವತ್ತೈದು ವರ್ಷ ಮೀರಿದ ಹಿರಿಯ ನಾಗರೀಕರಿಗೆ , ಅಂಗ ವಿಕಲರಿಗೆ, ರೋಗಿಗಳಿಗೆ ಮತದಾನ ಮಾಡಲು ಪ್ರತಿ ವರ್ಷ ಮುಂಚಿತ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದ್ದು , ಅಂತಹವರು ಅಂಚೆ ಮೂಲಕವಾಗಿಯಾದರೋ ಅಥವಾ ಮತ ಕೇಂದ್ರಗಳಿಗೆ ಹೋಗಿ ತಮ್ಮ ಮತ ಚೀಟಿಯನ್ನು ಮತ ಪೆಟ್ಟಿಗೆಗಳಿಗೆ ಹಾಕಬಹುದು .
ಎಂತಹ ಮತದಾನಕ್ಕೂ ನೋಂದಣಿ ಕಡ್ಡಾಯ . ಈಗ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಿದ್ದು , ನೋಂದಾಯಿಸದಿದ್ದರೆ ನಿಮಗೆ ಮತದಾನ ಮಾಡುವ ಎಲ್ಲ ಅರ್ಹತೆಗಳಿದ್ದರೂ , ಮತ ಚಲಾಯಿಸಲು ಸಾಧ್ಯವೇ ಇಲ್ಲ .
ಈ ಬಾರಿ ವಯಸ್ಸು , ಆರೋಗ್ಯ ಸಮಸ್ಯೆ , ಅಂಗ ವಿಕಲತೆ ಎನ್ನದೆ ಕೋವಿಡ್ – 19 ರ ಭೀತಿಯ ಹಿನ್ನಲೆಯಲ್ಲಿ ಮತದಾನದಂದು ಮತಕಟ್ಟೆಯಲ್ಲಿ ಉದ್ದುದ್ದ ಸಾಲುಗಳನ್ನು ತಪ್ಪಿಸಲು , ಮತದಾರರ ಸುರಕ್ಷತೆಗಾಗಿ ಮತದಾನದ ದಿನಕ್ಕಿಂತಲೂ ಮುಂಚಿತವಾಗಿ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ .
ಈಗಾಗಲೇ ಚುನಾವಣಾ ಸಮೀಕ್ಷೆಯ ಪ್ರಕಾರ 60 ಮಿಲಿಯನ್ ಅಮೆರಿಕಾ ಮತದಾರರು ಮತದಾನ ಮಾಡಿ ಅಮೆರಿಕಾ ಅಧ್ಯಕ್ಷರ ಭವಿಷ್ಯವನ್ನು ಭದ್ರವಾಗಿ ಬಂಧಿಸಿ ಪೆಟ್ಟಿಗೆಯೊಳಗಿಟ್ಟಿದ್ದಾರೆ . ಕೋವಿಡ್ ಸೃಷ್ಟಿಸಿರುವ ಭಯಾನಕತೆಯ ಕಾರಣದಿಂದ ಈ ವರ್ಷ ಅಂಚೆ ಮೂಲಕ ಮತಗಳು ಓತಃಪ್ರೋತವಾಗಿ ಹರಿದು ಬರುತ್ತಿವೆ .
ರಿಪಬ್ಲಿಕನ್ ಪಕ್ಷದ ಸರ್ಕಾರ , ಅಂಚೆ ಮೂಲಕ ಮತದಾನದಲ್ಲಿ ಮೋಸ ಸಂಭವಿಸ ಬಹುದು , ಅದನ್ನು ನಿರ್ಬಂಧಿಸಿ ಎಂದು ಅಮೆರಿಕಾ ಸುಪ್ರೀಂ ಕೋರ್ಟಿಗೆ ಅಪೀಲು ಹೋಗಿದ್ದು , ಸುಪ್ರೀಂ ಕೋರ್ಟ್ ಆಳುವ ಪಕ್ಷದ ಅಪೀಲನ್ನು ತಿರಸ್ಕರಿಸಿ, ಜನಪರ ಸಂವೇದನೆಯನ್ನು ಪುರಸ್ಕರಿಸಿ , ಅಂಚೆಯ ಮೂಲಕವಾಗಿ ಅರ್ಹ ಮತದಾರರು ಮತ ಚಲಾಯಿಸುವ ಅವಕಾಶ ಕಲ್ಪಿಸಿ ಕೊಟ್ಟಿರುವುದು ಚಾರಿತ್ರಿಕ ದಾಖಲೆಯಾಗಿದೆ .
ಅಮೆರಿಕೆಯಲ್ಲಿ ಕೋವಿಡ್ ಮಹಾಮಾರಿಯ ಅಟ್ಟಹಾಸ ಮತ್ತೊಮ್ಮೆ ತಾರಕಕ್ಕೇರಿದೆ .ಹೀಗಾಗಿ ಬಹಳಷ್ಟು ಮತದಾರರು ಮತಗಟ್ಟೆಯ ದರ್ಶನ ಮಾಡದೆ ಅಂಚೆ ಮತದಾನದ ಮೂಲಕವೋ , ಇಲ್ಲವೇ ಬಿಡುವಾದಾಗ ಮತ ಕೇಂದ್ರಗಳಿಗೆ ಹೋಗಿ ಮತ ಪೆಟ್ಟಿಗೆಗಳೊಳಗೆ ಮತ ಜಾರಿಸಿ ಬರುತ್ತಿದ್ದಾರೆ . ನವೆಂಬರ್ ಮೂರರಂದು ಮತಗಟ್ಟೆಗಳ ಮುಂದೆ ಉದ್ದುದ್ದದ ಸಾಲುಗಳನ್ನು ಮುರಿಯುವ ಪರಿ ಇದು . ಕೋವಿಡ್ ಭಯದಿಂದ ನೋಂದಣಿ ಮಾಡಿರುವ ಮತದಾರರೂ ಮತ ಚಲಾಯಿಸದೆಯೂ ಹೋಗುವ ಸಾಧ್ಯತೆಗಳುಂಟು , ಎಂಬುದು ಚುನಾವಣಾ ವಿಶ್ಲೇಷಕರ ಅಭಿಮತ .
ಇಷ್ಟಾಗಿಯೂ ಎಲ್ಲವೂ ಗಣಕಕೀಕರಣದ ಮೂಲಕವೇ ನಡೆದು ಮರು ದಿನವೇ ಪತ್ರಕರ್ತರಿಗೆ ಚುನಾವಣಾ ಫಲಿತಾಂಶದ ಜಾಡು ದೊರಕಿದರೂ , ಮತ್ತೆ ಅಂಚೆ ಮತಗಳು , ಎಲೆಕ್ಟರಲ್ ಕಾಲೇಜುಗಳು, ಬ್ಯಾಟಲ್ ಗ್ರೌಂಡ್ ರಾಜ್ಯಗಳ ನಿರ್ಣಯಗಳು -ಇವೆಲ್ಲ ದೊರೆತು ಫಲಿತಾಂಶ ಬರಲು ವಾರಗಳೇ ಆಗಬಹುದು .

ಬಂದ ಈ ಫಲಿತಾಂಶವನ್ನು ಒಪ್ಪಿಕೊಳ್ಳದೆ , 2000ದ ಬುಷ್ ಚುನಾವಣೆಯಲ್ಲಿ ನಡೆದಂತೆ ಸೋತ ಪಕ್ಷ ಸುಪ್ರೀಂ ಕೋರ್ಟಿಗೆ ಮನವಿ ಹೋಗುವ ಸಾಧ್ಯತೆಗಳೂ ಉಂಟು .ಅದೇನೇ ಇರಲಿ , ಈ ಫಲಿತಾಂಶ ಬರೀ ಅಮೆರಿಕನ್ನರನ್ನ ಷ್ಟೇ ಅಲ್ಲದೆ , ಇಡೀ ಜಗತ್ತಿನ ಮೇಲೂ ಪರಿಣಾಮ ಬೀರ ಬಲ್ಲ ಚುನಾವಣೆ ಹಾಗೂ ಫಲಿತಾಂಶ ,ಎನ್ನುವುದರಲ್ಲಿ ಎರಡು ಮಾತಿಲ್ಲ .
ಬರಾಕ್ ಒಬಾಮಾ ಅವರು ಎರಡನೆಯ ಬಾರಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದಾಗ ನಾನು ಕಾರಣಾಂತರಗಳಿಂದ ಅಮೇರಿಕೆಯಲ್ಲೇ ಇದ್ದು , ಅವರ ಅಧ್ಯಕ್ಷ ಭಾಷಣ ಕೇಳಿ ರೋಮಾಂಚಿತಗೊಂಡಿದ್ದೆ . ಅಬ್ರಹಾಂ ಲಿಂಕನ್ನರು ಜಗತ್ತಿನ ಪ್ರಜಾ ಪ್ರಭುತ್ವಕ್ಕೆ ನೀಡಿದ ಗೌರವದ ಘೋಷ ವಾಕ್ಯಗಳಾದ ‘By the people , for the people ,of the people ‘ ಎಂಬ ಸಂದೇಶದಿಂದ ಪ್ರೇರಿತರಾದ ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ನೆಲದಿಂದ ಬಂದ ನಾನು , ಸಹಜವಾಗಿಯೇ ಈ ಅಧ್ಯಕ್ಷೀಯ ಚುನಾವಣೆಗಳನ್ನು ಒಬ್ಬ ಸಾಮಾನ್ಯ ಭಾರತೀಯ ಪ್ರಜೆಯಾಗಿ ಬಿಡುಗಣ್ಣಿನಿಂದ ನೋಡುತ್ತಿದ್ದೇನೆ.
ಅದೇನೇ ಇದ್ದರೂ ಇಲ್ಲಿ , ನಮ್ಮೂರಿನ ಚುನಾವಣೆಗಳ ಖದರು , ಲೆಕ್ಕಾಚಾರಗಳು , ಅರೆ ಮಿಲಿಟರಿಯೇನು , ಪೂರ್ಣ ಮಿಲಿಟರಿ ಪಡೆಗಳನ್ನೇ ಕೇಂದ್ರದಿಂದ ಕರೆಸಿ ಬಿಡ ಬೇಕು ಎಂಬ ಆತಂಕ , ತಲ್ಲಣಗಳಿಲ್ಲದ ತಣ್ಣನೆಯ ವಾತಾವರಣವೆ . ಕೋವಿಡ್ ಕಾರಣದಿಂದ ಮಿಲಿಯನ್ ಗಟ್ಟಲೆ ಅಮೆರಿಕನ್ನರು ಕೆಲಸ , ಆರೋಗ್ಯ ಕಳೆದು ಕೊಂಡು ಬೀದಿಗೆ ಬಿದ್ದಿದ್ದಾರೆ . ದಿನ ನಿತ್ಯದ ಅವಶ್ಯಕತೆಗಳಿಗೆ ಪರದಾಡುವ , ಬದುಕಿನ ಹೋರಾಟದಲ್ಲಿ ಮುಳುಗಿರುವ ನಿಸಾರರ ‘ ರಾಮನ್ ಸತ್ತ ಸುದ್ದಿಯಲ್ಲಿ ‘ ಕಾಣುವ ಹನುಮರಂತಾಗಿದ್ದಾರೆ . ಇನ್ನು ಅವರಿಗೆ ಈ ಅಧ್ಯಕ್ಷೀಯ ಚುನಾವಣೆಗಳು ಯಾವ ಮಹಾ ಅರ್ಥ ಸ್ಫುರಿಸಿಯಾವು ?
ಈ ಬಾರಿ ಮೂರನೇ ಹಾಗೂ ಕೊನೆಯ ಅಧ್ಯಕ್ಷೀಯ ಡಿಬೇಟು ಪ್ರಾರಂಭವಾದದ್ದೇ ಕೋವಿಡ್ ,ಒಬಾಮಾ ಆರೋಗ್ಯ ರಕ್ಷಣೆ , ಮಾಸ್ಕ್ ಗಳಿಂದ . ಇಲ್ಲೊ , ಎಲೆ ಉದುರಿಸಿಕೊಂಡು ನಗ್ನಳಾಗುತ್ತಿರುವ ಪ್ರಕೃತಿಯಲ್ಲೀಗ ಕಾವೇ ಇಲ್ಲದ ಮೈ ನಡುಗಿಸುವ ದರಿದ್ರ ಥಂಡಿ . ಈ ಥಂಡಿಗೆ ಇಲ್ಲಿ ಬೀಸುತ್ತಿರುವ ಕುಳಿರ್ಗಾಳಿ ಕಾರಣವೋ , ಕೋವಿಡ್ ಮಹಾ ಮಾರಿ ಸೃಷ್ಟಿ ಮಾಡಿರುವ ಭೀತಿ ಕಾರಣವೋ ಅಥವಾ ಅಮೆರಿಕೆಯ ಶ್ರೀ ಸಾಮಾನ್ಯನ ರಾಜಕೀಯ ಅಜ್ಞಾನ , ನಿರಾಸಕ್ತಿ ಕಾರಣವೋ ? ಗೊತ್ತಾಗುತ್ತಿಲ್ಲ .
ಫಲಿತಾಂಶ ಏನೇ ಆಗಲಿ ,ಪ್ರಜೆಗಳಿಗೆ ಒಳಿತಾಗಲಿ ಎಂಬ ಹಾರೈಕೆ ನನ್ನದು .









ವಿಚಾರಪೂರ್ಣ ಬರಹ
ಉತ್ತಮ ಲೇಖನ. ದಿನವೊಂದರಲ್ಲಿ ಸರಾಸರಿ ಪ್ರತಿ ಪ್ರಜೆಗೂ ಬರುತ್ತಿರುವ 12 ಕ್ಕೂ ಹೆಚ್ಚು ಫೋನ್ ಸಂದೇಶಗಳ ತಮಾಷೆ ಯ ಬಗ್ಗೆಯೂ ಸೇರಿಸಬಹುದಿತ್ತು.
ಅಮೇರಿಕಾ ದ ರಾಜಕೀಯ ಸಂಸ್ಕೃತಿ ಬಹಳ ಭಿನ್ನ.
ತುಂಬಾ ಚೆನ್ನಾಗಿ ವಿಶ್ಲೇಷಿಸಿ ನಮ್ಮಲ್ಲೂ ಕುತೂಹಲ ಮೂಡಿಸಿದ್ದೀರಿ, ಮಂಗಳಾ. ನಿಮ್ಮ ಕೊನೆಯ ಮಾತಿನ ತಣ್ಣಗಿನ ಸತ್ಯ ಮನಕೆ ನಾಟಿತು!