ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಲನದ ತುತ್ತತುದಿಗೇರಿದರೆ 'ಆಹಾ ಚಹಾ'

ಶ್ರೀದೇವಿ ಕೆರೆಮನೆ 

ಚಹಾ ಆಗುವುದೆಂದರೆ ಅದು ಸುಲಭದ ಮಾತಲ್ಲ
ಲೋಟದಲ್ಲಿ ಲೆಕ್ಕ ಮಾಡಿ ನೀರನ್ನು
ಪಾತ್ರೆಯ ಒಳಗೆ ಬಂಧಿಸಿಡಬೇಕು
ಒಲೆಯ ಮೇಲಿಟ್ಟ ನೀರು ನಿಧಾನಕ್ಕೆ
ಶಾಖ ಹೆಚ್ಚಿಸಿಕೊಂಡು
ಕುದಿ ಬಿಂದು ತುತ್ತತುದಿಗೇರಿ
ಮೈತುಂಬಾ ಬೊಬ್ಬೆಯೇಳಬೇಕು
ಚಹಾ ಆಗುವುದೆಂದರೆ ಅದು ಹುಬ್ಬು ಹಾರಿಸಿದಂತಲ್ಲ
ಇಷ್ಟ ಕಷ್ಟದ ಬಗ್ಗೆ ತುಟಿ ಪಿಟಕ್ಕೆನ್ನದೇ
ಕುದಿವ ಒಡಲಲ್ಲಿ ಪುಡಿಯ ಜೊತೆ
ಬೇಧವಿಲ್ಲದೇ ಬೆರೆತು ಒಂದಾಗಬೇಕು
ಪುಡಿಯ ಸಾರವನ್ನೆಲ್ಲ ತನ್ನ ಬಸಿರೊಳಗೆ ಧರಿಸಿ
ಕೆಂಪು ಕಂದಾಗಿ ತಿರುಗಿ
ಮೂಲತ್ವವನ್ನೇ ಮರೆತು ಬಿಡಬೇಕು
ಚಹಾ ಆಗುವುದೆಂದರೆ ತುಟಿ ಪಿಸಿದು ನಕ್ಕಂತಲ್ಲ
ತಿರಸ್ಕರಿಸುವ ಯಾವ ಮಾತು ತುಟಿಯಂಚಲ್ಲಿ
ಮೂಡುವ ಮುನ್ನ ನುಂಗಿಕೊಳ್ಳಬೇಕು
ಸಕ್ಕರೆಯ ಒಡಲೊಳಗೆ ಕರಗಿಸಿಕೊಂಡು
ಒಳಗಿನ ಒಗರು ಹೊರಲೋಕದ ಕಣ್ಣಿಗೆ
ಒಂದಿನಿತೂ ತೋರದಂತೆ
ಬರಿಯ ಸಿಹಿಯ ಲೇಪನವಾಗಬೇಕು
ಚಹಾ ಆಗುವುದೆಂದರೆ ಎದೆ ಸವರಿ ಉದ್ರೇಕಗೊಂಡಂತಲ್ಲ
ಒಳಗಿನ ಸ್ವಾದ ಆಸ್ವಾದಿಸಲಾಗದ ಮುಖಹೇಡಿಗಳು
ಕಂದು ಬಣ್ಣವ ಕೀಳೆಂದು ಹೀಯಾಳಿಸಿ ನಗುವಾಗ
ಪಟ್ಟಭದ್ರರ ಕಣ್ಣಿಗೆ ಹಿತವಾಗುವಂತೆ
ಬಿಳಿಯ ನೊರೆ ಹಾಲಿನೊಂದಿಗೆ ಬೆರೆತು
ಸಮಾಜ ಬಯಸುವ ಗೌರವ ವರ್ಣ ಖುದ್ದಾಗಿ ಪಡೆಯಬೇಕು
ಚಹಾ ಆಗುವುದೆಂದರೆ ಮಿಲನದ ತುತ್ತತುದಿಗೇರಿ
ಪಕ್ಕಕ್ಕೆ ಹೊರಳಿ ಕ್ಷಣ ಮಾತ್ರದಲ್ಲಿ ಗೊರಕೆ ಹೊಡೆದಂತಲ್ಲ
ತನ್ನೊಳಗಿನ ಸುಳಿಯಲ್ಲಿ ಬುಗಿಲೇಳುವ ಸ್ವಾದವ
ತಾನು ಬಯಸೆದೆಯೂ ತುಂಬಿಕೊಳ್ಳಬೇಕು
ಹೊಕ್ಕಳ ಸುಳಿಯ ಹಬೆಯೊಳಗೆ
ಅಲೆ ಅಲೆಯಾಗಿ ಮತ್ತೇರಿಸುವ ಘಮಕ್ಕೆ
ಸೆಳೆಯುವ ಹುನ್ನಾರಗಳ ಪ್ರತಿ ಕ್ಷಣವೂ ಯೋಚಿಸಬೇಕು
ಚಹಾ ಆಗುವುದೆಂದರೆ ಅದು ಗಂಡಸಾಗುವುದಲ್ಲ
ಕುದಿಯ ಬೇಕು; ಕದ್ದು ಬಸವಳಿಯಬೇಕು
ಉರಿವ ಒಡಲಲ್ಲಿ ಬೆಂದದ್ದೂ ಗೊತ್ತಾಗದಂತೆ
ಅರೆ ಬಿರಿದ ತುಟಿಗೆ ರಂಗು ಲೇಪಿಸಿಕೊಂಡಂತೆ
ನಸುನಗುವನ್ನು ಅಂಟಿಸಿಕೊಂಡೆ ಇರಬೇಕು
ನಶೆಯೇರಿಸುವ ಮಾತನಾಡುತ್ತ
ಒಳಗೊಳಗೇ ನವೆಯುವ ಸ್ವತಃ ಹೆಣ್ಣಾಗಬೇಕು
 

‍ಲೇಖಕರು avadhi

31 March, 2017

4 Comments

  1. Anonymous

    Awesome

  2. Suma

    Wow Sridevi, kaviyaguva kale nimage siddhiside….hageye henntanada savalugalanna vyaktagolisuva reetuyu….hats off!!

  3. Ramesh gabbur

    ಯಪ್ಪಾ. …. ಚಹಾ ಕವಿತೆ ಚೆಂದ….

  4. Sreenivasa

    ಚಹಾದ ಕುದಿಯುವ ಬಿಂದುಗಳ ತಳಮಳದೊಳಗೆ
    ನಮ್ಮನ್ನೂ ಸುಲಭವಾಗಿ ಸಿಲುಕಿಸಿದಿರಿ, ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading