-ಬಸವರಾಜ ಮುದನೂರ್
ನಾನಾಗ ನನ್ನೂರು ಶಹಾಪುರದ ಚರಬಸವೇಶ್ವರ ಹೈಸ್ಕೂಲಿನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ. ಎಂದಿನಂತೆ ಶಾಲಾ ತರಗತಿಯಲ್ಲಿದ್ದವನನ್ನು ದೊಡ್ಡಣ್ಣ ಚಂದ್ರು ಬಂದು ಮೇಷ್ಟ್ರ ಬಳಿ ರಿಕ್ವೆಸ್ಟ್ ಮಾಡಿ ಜಾವಾ ಗಾಡಿ ಮೇಲೆ ಕರೆದುಕೊಂಡು ಹೊರಟ. ನನಗೋ ಅಣ್ಣ ಯಾವುದೋ ನೆಂಟರ ಊರಿಗೆ ಕರೆದುಕೊಂಡು ಹೋಗುತ್ತಿರಬೇಕೆಂಬ ಖುಷಿ. ಆದರೆ, ಏಕಾಏಕಿ ಸಿಪಿಎಸ್ ಶಾಲೆ ಗ್ರೌಂಡಿಗೆ ಕರೆದೊಯ್ದು ನನ್ನ ಕೈಲಿದ್ದ ಬ್ಯಾಗ್ ನ್ನು ‘ಕೊಡಿಲ್ಲಿ’ ಎಂದು ಇಸಿದುಕೊಂಡ. ಅಲ್ಲಿ ಜಿಲ್ಲಾ ಮಟ್ಟದ ಎಂಟು ನೂರು ಮೀಟರ್ ಓಟದ ಸ್ಪರ್ದೆ ನಡೆಯುತ್ತಿತ್ತು.
‘ನೋಡಲ್ಲಿ, ಈ ಓಟದಲ್ಲಿ ನೀನು ಭಾಗಿಯಾಗಿ ಗೆದ್ದು ಬರಬೇಕು’ ಅಂದುಬಿಟ್ಟ. ಎಂದೂ ರನ್ನಿಂಗ್ ನ ಅನುಭವ ಇಲ್ಲದ ನನಗೆ ಅಡ್ಡ ಕತ್ತರಿಗೆ ಸಿಕ್ಕ ಅನುಭವ. ಇಲ್ಲ ಅನ್ನುವಂತಿಲ್ಲ; ಓಡಲು ಧೈರ್ಯ ಸಾಲುತ್ತಿಲ್ಲ. ‘ಓಟಕ್ಕೆ ಸಿದ್ಧರಾಗಿ’ ಎಂದು ಮೈಕಿನಲ್ಲಿ ಘೋಷಿಸುತ್ತಿದ್ದರು… ಅಣ್ಣ ನನ್ನ ಹೆಸರು ನಮೂದಿಸಿ ಅರೆಕ್ಷಣದಲ್ಲಿ ನನ್ನ ಶರ್ಟು, ಪ್ಯಾಂಟು ಬಿಚ್ಚಿಸಿ ಬನೀನು, ಚಡ್ಡಿ ಮೇಲೆ ನಿಲ್ಲಿಸಿಯೇ ಬಿಟ್ಟ.
‘ಒನ್ , ಟೂ , ಥ್ರೀ… ಗೋ ಅಂದರು’ ಫಿಸಿಕಲ್ ಮೇಷ್ಟ್ರು, ಓಡಲಾರಂಭಿಸಿದೆ. ಅಣ್ಣ, ಅಣ್ಣನ ಸ್ನೇಹಿತರು ‘ಕಮಾನ್ ಬಸು, ಕಮಾನ್ ನೀನೆ ಗೆಲ್ಲೋದು ಓಡು ಓಡು..: ಅಂತ ಹುರಿದುಂಬಿಸಿದರು. ನಾನು ಓಡುವ ರಭಸ ಕಂಡು ಅಣ್ಣ ಮೀಸೆ ತಿರುವಿದ. ನನಗೆ ನನಗಿಂತ ಅಣ್ಣ ಸೋಲ ಕೂಡದೆಂಬ ಹಠ ಮೂಡಿತು. ಮನದಲ್ಲೇ ಮನೆದೇವರು ಬಲಭೀಮನ ನೆನೆದೆ, ಅದ್ಯಾವ ಶಕ್ತಿ ಆವರಿಸಿತೋ ಗೊತ್ತಿಲ್ಲ. ಎಂದೂ ಓಡದ ನಾನು ಜಿಲ್ಲಾ ಮಟ್ಟದ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.
ಅಣ್ಣ ಮತ್ತು ಸ್ನೇಹಿತರು ಓಡೋಡಿ ಬಂದು ನನ್ನ ಎತ್ತಿಕೊಂಡು ಕೇಕೆ ಹಾಕಿದರು. ‘ನಾನು ಮೊದಲೇ ಹೇಳಿರಲಿಲ್ಲವೇ. ನಮ್ಮ ಬಸು ಕನಿಷ್ಟ ಮೊದಲನೇ ಮೂರು ಸ್ಥಾನಗಳಲ್ಲಿ ಗೆದ್ದು ಬರ್ತಾನೆ ಅಂತ’ ಎಂದು ಹೇಳುತ್ತ ಜಂಬ ಕೊಚ್ಚಿಕೊಂಡು ನನ್ನಣ್ಣ ಬೀಗಿದ. ಗೆದ್ದ ಖುಷಿಯಲ್ಲಿ ಎಲ್ಲರಿಗೂ ಉಡುಪಿ ಹೋಟೆಲ್ಗೆ ಕರೆದುಕೊಂಡು ಹೋಗಿ ಇಡ್ಲಿ ತಿನ್ನಿಸಿದ. ‘ನಮ್ಮ ಬಸುಗೆ ಇಡ್ಲಿ ಅಂದ್ರೆ ಬಲು ಇಷ್ಟ. ಮಂತ್ರಾಲಯಕ್ಕೆ ಹೋದಾಗಲೂ ಇಡ್ಲಿ ಕೇಳಿದ್ದ ದಡ್ಡ ಇವನು’ ಎಂದು ಗೆಳೆಯರ ಬಳಿ ಹೇಳಿ ನಕ್ಕನು. ಅವರೆಲ್ಲಾ ಚಹಾ ಕುಡಿದು ನನಗೆ ಮಾತ್ರ ಬೋರ್ನವಿಟಾಕೊಡಿಸಿದರು.
ಸಂಜೆ ವೇಳೆಗೆ ನನಗೆ ಕಾಲು, ಇಮ್ಮಡಿ, ತೊಡೆ, ನೋವು ಶುರುವಾಯಿತು. ಅಮ್ಮ ಬಿಸಿ ಬಿಸಿ ರೊಟ್ಟಿ, ಬದನೇಕಾಯಿ ಪಲ್ಯ, ಅನ್ನ- ಬೇಳೆಸಾರು ಮಾಡಿದ್ದಳು. ಬೇಗನೆ ಉಂಡವನೇ ಮನೆ ಮಾಳಿಗೆಗೆ ಹೋಗಿ ಸಂಜೆ ಏಳು ಗಂಟೆಗೇ ಕೌದಿ ಹೊದ್ದುಕೊಂಡು ಮಲಗಿ ಬಿಟ್ಟೆ. ಶಾಲೆ ಡ್ಯೂಟಿ ಮುಗಿಸಿ ಮನೆಗೆ ಬಂದ ಅಪ್ಪ ಊಟ ಮಾಡಿ ಕುಳಿತರೂ ನನ್ನ ಸುಳಿವಿಲ್ಲದ್ದನ್ನು ಗಮನಿಸಿ ‘ಎಲ್ಲಿ ಬಸವಾ ಕಾಣಿಸ್ತಾನೇ ಇಲ್ಲ’ ಅಂದಾಗ ಅಮ್ಮ, ಅಕ್ಕ ಮತ್ತು ಅಣ್ಣಂದಿರು ಹೇಳಿದ ಓಟದ ವಿಷಯ ತಿಳಿದು ನಸುನಗುತ್ತ ‘ಬಸವ ಬಸವಾ…’ ಎಂದು ಕೂಗುತ್ತಲೇ ಮಾಳಿಗೆಗೆ ಬಂದರು.

ಮಲಗಿದವನ ತಲೆ ನೇವರಿಸುತ್ತ ‘ಯಾಕಿಷ್ಟು ಜಲ್ದಿ ಮಲಗಿದಿಯಲ್ಲಾ’ ಅಂದರು. ನಾನು ‘ಹುಂ ಅಂದೆ’ ಅಷ್ಟೇ. ‘ದಡ್ಡ ದಡ್ಡ… ಅದಕ್ಕೆ ಹೆಳೋದು ಮನುಷ್ಯ ಗಟ್ಟಿ ಮುಟ್ಟಾಗಿರಬೇಕು. ಚನ್ನಾಗಿ ಊಟ ಮಾಡಬೇಕು, ಓಡಾಟ, ವ್ಯಾಯಾಮ ಮಾಡಬೇಕು ಅಂತ. ಏನೂ ಇಲ್ಲ ಮಗ. ಉಣ್ಣೋದು ಶಾಲೆಗೆ ಹೋಗಿ ಬರೋದು, ಅದೆಂಥದೋ ಕ್ರಿಕೆಟ್ ಆಡೋದು ಅದ್ರಿಂದೇನು ಶಕ್ತಿ ಬರಲ್ಲ. ನೋಡು ಒಂದು ರೌಂಡ್ ಓಡಿದ್ದಕ್ಕೆ ಸುಸ್ತಾಗಿದ್ದೀಯಲ್ಲ. ಇಷ್ಟು ಬೇಗ ಉಂಡು ಹೊದ್ಕಂಡು ಮಲಗೀದಿ. ಏನು ಹುಡುಗ್ರೋ ನೀವೆಲ್ಲಾ. ಇವತ್ತು ಓಡಿದ್ದಿಯಲ್ಲ ಅದೇ ರೀತಿ ದಿನಾ ಓಡಿ ನೋಡು ಹೇಗಿರುತ್ತೆ’ ಎಂದರು.
ಅಷ್ಟರಲ್ಲೇ ಅಣ್ಣಂದಿರು, ಅಕ್ಕ, ಅಮ್ಮ ಎಲ್ಲರೂ ಮಾಳಿಗೆಗೆ ಬಂದರು. ‘ಭಾಳ ಸುಸ್ತಾಗಿದ್ದರ ಹೇಳು ರಾಮ್ ರಾವ್ ಡಾಕ್ಟರ್ ಹತ್ರ ಹೋಗಿ ಬರೋಣ. ಒಂದು ಇಂಜಕ್ಷನ್ ಮಾಡಿಸಿದ್ರ ಸರಿ ಹೋಗುತ್ತೆ’ ಅಂದರು. ‘ಅದ್ಯಾಕವ ಇಂಜಕ್ಷನ್ನೂ ಬೇಡ, ಏನೂ ಬೇಡ. ನಾಳೆಯಿಂದ ಹಿಂಗೆ ದಿನಾ ಓಡೋದು, ವ್ಯಾಯಾಮ ಮಾಡೋದು ಮಾಡಿದ್ರ ಸರಿ ಹೋಗುತ್ತೆ’ ಅಂದರು ಅಪ್ಪ. ಎಲ್ಲರೂ ಗೊಳ್ಳೆಂದು ನಕ್ಕರು.
‘ಇದು ನಗೋ ವಿಷಯ ಅಲ್ಲ ಕೇಳ್ರಿಲ್ಲಿ. ಶಾಲಾ ಮೇಷ್ಟ್ರಂದ್ರ ಮೆತ್ತಗಿರ್ತಾರೆ, ಓದುವುದು -ಓದಿಸೋದು ಅಷ್ಟೇ ಕೆಲಸ ಎಂಬುದೊಂದು ಸಿದ್ಧ ಚೌಕಟ್ಟು ಇರುತ್ತದೆ. ಧೋತ್ರ, ನೆಹರು ಶರ್ಟು, ಕನ್ನಡಕ, ಒಂದು ಕೈಯಲ್ಲಿ ಛತ್ರಿ, ಮತ್ತೊಂದು ಕೈಯಲ್ಲಿ ಪುಸ್ತಕ, ಬ್ಯಾಗು. ಶಾಲೆಗೆ ಹೋಗೋದು, ಮನೆಗೆ ಬರೋದು ಅಷ್ಟೇ ಎಂಬ ಭಾವನೆ ಇದೆ. ನಾನು ಸಹ ಬಹುತೇಕ ಹಾಗೇ ಇರ್ತೀನಲ್ಲ!’.
ಆದರೆ, ‘ನಾನು ಮದರಕಲ್ ಗ್ರಾಮದ ಶಾಲೆಗೆ ಹೊಸದಾಗಿ ಶಿಕ್ಷಕನಾಗಿ ಹೋಗಿದ್ದ ಕಾಲವದು. ಶಿಕ್ಷಕ ರೇವಣ್ಣ ಮೇಷ್ಟ್ರು ಮತ್ತು ನಾನು ಕಾರ್ಯ ನಿಮಿತ್ಯ ಪಕ್ಕದ ಜೋಳದಡಗಿ ಗ್ರಾಮಕ್ಕೆ ತೆರಳಿದ್ದೆವು. ಪ್ರಾಯಶಃ ಅದು ಊರ ಜಾತ್ರೆ ನಡೆಯುವ ಸಂದರ್ಭ, ಊರ ಅಗಸಿ ಬಳಿ ಕಲ್ಲುಗುಂಡೆತ್ತುವ ತಯ್ಯಾರಿ ನಡೆದಿತ್ತು. ಕೆಲ ಯುವಕರು ಮೊಳಕೈವರೆಗೆ ಕೈಗೆ ಬಟ್ಟೆ ಸುತ್ತಿಕೊಂಡಿದ್ದು ಐವತ್ತು ಕೆಜಿ ಕಲ್ಲಿನ ಗುಂಡುಗಳನ್ನು ಎತ್ತಿ ಬಿಸಾಕಲು ತಿಣುಕಾಡುತ್ತಿದ್ದರು. ಸುತ್ತ ಜಮಾಯಿಸಿದ್ದ ಹಿರಿಯ ಪೈಲ್ವಾನರು, ಕುಸ್ತಿಪಟುಗಳು, ಗ್ರಾಮೀಣ ಜನ ಯುವಕರನ್ನು ಹುರಿದುಂಬಿಸುತ್ತಿದ್ದರು. ಎತ್ತು … ಎತ್ತು.. ನಿನಗಾಗುತ್ತೆ.. ಇನ್ನು ಸ್ವಲ್ಪ ಶಕ್ತಿ ಹಾಕು… ಆಗುತ್ತೆ ನಿನ್ನಿಂದ ಅಂತ ಜೋಶ್ ತುಂಬುತ್ತಿದ್ದರು’.
‘ನಾನು ಒಂದರ್ಧ ತಾಸು ಕಾಲ ನಿಂತು ನೋಡಿದೆ. ಕೆಲ ಯುವಕರು ಅರ್ಧಕ್ಕೆ ಗುಂಡೆತ್ತುವುದು ಮತ್ತು ಕೈ ಚೆಲ್ಲುವುದನ್ನು ಕಂಡು ಬೇಸರ ಆಗುತ್ತಿತ್ತು. ನನ್ನೊಂದಿಗಿದ್ದ ರೇವಣ್ಣ ಮೇಷ್ಟ್ರಿಗೆ ಗುಂಡು ಎತ್ತುವುದನ್ನು ನೋಡಲು ಇಷ್ಟೊತ್ತೇಕೆ ನಿಂತಿದ್ದಾರೆ ಈ ಮೇಷ್ಟ್ರು ಅಂತ ಒಳಗೇ ಬೇಗುದಿ’. ‘ಬರೀ ಮೇಷ್ಟ್ರೇ ನಮ್ ಕೆಲಸಕ್ಕೆ ನಾವು ಹೊಗೋಣ. ನಮ್ಗೇನು ಕೆಲಸ ಇಲ್ಲಿ ಅಂದರು’. ಮೊದಲೇ ಬೇಸರಗೊಂಡಿದ್ದ ನಾನು ‘ಅರೇ ಇಷ್ಟು ಗುಂಡು ಎತ್ತಲು ಆಗುತ್ತಿಲ್ಲವಲ್ಲ ಈ ಹಳ್ಳಿ ಹೈದರಿಗೆ’ ಎಂದು ಜೋರಾಗಿಯೇ ಹೇಳಿಬಿಟ್ಟೆ.
‘ಎಲ್ಲರೂ ನನ್ನತ್ತ ದಿಟ್ಟಿಸಿ ನೋಡಿದರು. ಕೆಲವರು ಯಾರೀ ನೀವು’ ಎಂದು ಕೇಳಿದರು. ‘ಜೊತೆಗಿದ್ದ ಶಿಕ್ಷಕ ರೇವಣ್ಣ ಇವರೂ ಸಂಗಪ್ಪ ಮಾಸ್ಟರ್ ಅಂತ ನಮ್ಮ ಶಾಲೆಗೆ ಶಿಕ್ಷಕರಾಗಿ ಬಂದಿದ್ದಾರೆ; ಹೊಸಬರು ಅಂದರು. ‘ಹೋಗ್ರಿ ಮತ್ತೆ ನಿಮ್ಮ ಕೆಲಸಕ್ಕೆ ನೀವು. ಇಲ್ಲಿ ನಿಮಗೇನು ಕೆಲಸ. ಯುವಕರಿಗೆ ಪ್ರೋತ್ಸಾಹ ನೀಡುವುದು ಬಿಟ್ಟು ಏನ್ರೀ ಅದು ಅಂತ ರೇಗಿದರು’. ‘ಕೆಲವರು ಬರೀ ಮತ್ತೆ ತಾಕತ್ತಿದ್ದರೆ ಗುಂಡು ಎತ್ತಿ ತೋರಿಸಿ’ ಅಂತ ಸವಾಲೆಸೆದರು. ಜತೆಗಿದ್ದ ರೇವಣ್ಣ ಮೇಷ್ಟ್ರು ‘ಇಲ್ಲ ಬಿಡ್ರಿ ಅವ್ರು ಹೊಸದಾಗಿ ಬಂದಿದ್ದಾರೆ ಈ ಊರ ವಿಷಯ ಗೊತ್ತಿಲ್ಲ ಅವರಿಗೆ ಅಂತ ಹೇಳಿ ನನ್ನನ್ನು ಬಚಾವ್ ಮಾಡಲೆತ್ನಿಸಿದರು’. ‘ಬನ್ನಿ ಸಾರ್ ಇಲ್ಲಿಂದ ಹೊರಡೋಣ ಅಂತ ನನ್ನ ಕೈ ಹಿಡಿದು ಸುಮ್ಮನೆ ಯಾಕೆ ಈ ಹಳ್ಳಿ ಜನರ ಸಹವಾಸ ಅಂತ ಕಿವಿಯಲ್ಲಿ ಮೆತ್ತಗೆ ಹೇಳಿದರು’.
‘ಅಷ್ಟರಲ್ಲೇ ಮತ್ತೊಬ್ಬ ಬನ್ರೀ ಮೇಷ್ಟೇ ಮತ್ತೆ ನಿಮ್ಮ ತಾಕತ್ ತೋರಿಸ್ರಿ. ಧಮ್ ಇದ್ದರೆ ಬನ್ನಿ ಅಂತ ಕೆಣಕಿದ. ಸುತ್ತಲಿದ್ದ ಜನ ಜೋರಾಗಿ ನಕ್ಕರು’. ‘ನಾನೇನು ಮಾತಾಡಲಿಲ್ಲ , ಕೈಲಿದ್ದ ಬ್ಯಾಗು ರೇವಣ್ಣ ಮೇಷ್ಟ್ರಿಗೆ ಕೊಟ್ಟು ನೆಹರು ಶರ್ಟ್ ಬಿಚ್ಚಿ, ದೋತ್ರ ಮುಡಿ ಕಟ್ಟಿದೆ. ನನ್ನ ದೇಹದಾರ್ಢ್ಯತೆ ಕಂಡು ಎಲ್ಲರೂ ಒಂದು ಕ್ಷಣ ಶಾಕ್ ಆದರು. ಹಿರಿಯ ಪೈಲ್ವಾನರಿಗೆ ಇದು ಗಟ್ಟಿ ದೇಹ ಎಂಬುದು ಮನವರಿಕೆ ಆಯಿತು’. ‘ಭೂಮಿಗೆ ಹಣೆ ಹಚ್ಚಿ, ದೈವಕ್ಕೆ ನಮಿಸಿ ಕೈಗೆ ಕರವಸ್ತ್ರ ಸುತ್ತಿ ನಿಂತೆ.
ಧಮ್ ಇದ್ದರೆ ಗುಂಡೆತ್ತಿ ಅಂದವರೇ ಮುಂದೆ ಬಂದು ಭುಜ ತಟ್ಟಿ ‘ಬೇಡ ಬಿಡಿ ಸಾರ್ ನಮ್ ಮಾತು ಅಷ್ಟು ಸೀರಿಯಸ್ ಆಗಿ ತಗೊಳ್ಬೇಡಿ. ನಾವೇನೋ ಹುಡಗಾಟಕ್ಕೆ ಹೇಳಿದ್ವಿ . ನೀವು ನಮ್ಮ ಭಾಗದ ಶಾಲಾ ಮೇಷ್ಟ್ರು, ಹೊಸದಾಗಿ ಬೇರೆ ಬಂದಿದ್ದೀರಿ ಯಾಕೆ ಸುಮ್ಮನೆ ರಿಸ್ಕ್ ತಗೋಳ್ತೀರಿ. ಯಾವೂರು ನಿಮ್ಮದು’ ಅಂದರು. ‘ಬಿಡಿ ಜಾಗ ಅಂದವನೇ ಒಂದೇ ಸಲಕ್ಕೆ ಸಲೀಸಾಗಿ ಗುಂಡು ಎತ್ತಿ ದೈವಕ್ಕೆ ತೋರಿಸಿ ನೆಲಕ್ಕೆಸೆದೆ. ಅಪಹಾಸ್ಯ ಮಾಡಿದ್ದ ಜನರಿಂದಲೇ ಶಿಳ್ಳೆ ಚಪ್ಪಾಳೆಯ ಸದ್ದು ಮೊಳಗಿತು. ಹಿರಿಯ ಪೈಲ್ವಾನರು ಹಾರ ತರಿಸಿ ಹಾಕಿ ಬೆನ್ನು ತಟ್ಟಿದರು. ಕಿರಿಯರು ಕೈ ಮುಗಿದು ನಮಸ್ಕರಿಸಿದರು. ಜತೆಗಿದ್ದ ಮೇಷ್ಟ್ರು ಧಿಲ್ ಖುಷ್ ಆದರು’. ಎಂದರು ಅಪ್ಪ. ಅಪ್ಪನ ನಿಜ ಜೀವನದ ಕಥೆ ಕೇಳಿ ನಾನು ಜಾಗೃತನಾಗಿ ಎದ್ದು ಕುಳಿತೆ.
‘ಅಂದು ಸುಮ್ಮನೆ ಏಕಾಏಕಿ ಗುಂಡು ಎತ್ತಿದ್ದಲ್ಲ. ಚಿಕ್ಕಂದಿನಿಂದ ಕಾಡು ಮೇಡು ಸುತ್ತಿದ್ದು, ಗೆಳೆಯರ ಜತೆ ಸೇರಿ ಕಸರತ್ತು ಮಾಡಿದ ಹಿನ್ನೆಲೆ ಇದೆ. ಬೆಟ್ಟಗುಡ್ಡಗಳಿಂದ ಕಟ್ಟಿಗೆ ಹೊರೆ ತರಬೇಕಿತ್ತು. ಇಬ್ಬರು ಸೇರಿ ಎತ್ತಿದರೂ ಏಳದಂಥ ಹೊರೆ ಹೊತ್ತರೆ ಸಂಜೀವಿನಿ ಪರ್ವತ ಹೊತ್ತು ಬರುವ ಆಂಜನೇಯನಂತೆ ಕಾಣುತ್ತಿದ್ದೆವು. ಅಸಲಿಗೆ ಕಟ್ಟಿಗೆ ಬಡತನದ ಬದುಕಿಗೆ ಸಂಜೀವಿನಿಯೇ ಆಗಿತ್ತು. ಅಂತೆಯೇ ಕಟ್ಟಿಗೆ ಕಡಿಯುವುದು, ಬಾವಿಯಿಂದ ನೀರು ತರುವುದು. ಇತರೆ ಮನೆ ಕೆಲಸಗಳು, ಓದಿನ ಜತೆಗೆ ಗರಡಿ ಮನೆ ಅಭ್ಯಾಸವೂ ಚಾಲ್ತಿ ಇರುತ್ತಿತ್ತು’.
‘ವ್ಯಾಯಾಮ, ದೇಹದಾರ್ಢ್ಯದ ಕಸರತ್ತುಗಳು ತಪ್ಪಿಸುತ್ತಿರಲಿಲ್ಲ. ಕುಸ್ತಿ, ಕಬಡ್ಡಿ , ಗುಂಡೆತ್ತುವ ಸ್ಪರ್ದೆ ಎಲ್ಲದರಲ್ಲೂ ಮುಂದಿರುತ್ತಿದ್ದೆವು. ವಯಸ್ಸಿನಲ್ಲಿದ್ದಾಗ ನೆಲಗುದ್ದಿ ನೀರು ತರುವಷ್ಟು ಶಕ್ತಿಯಿರುತ್ತದೆ. ಮೈದುಡಿಸಿದಷ್ಟು ಗಟ್ಟಿ ಆಗುತ್ತದೆ. ಯಾವುದೇ ವೃತ್ತಿ ಆಗಿರಲಿ ಬುದ್ಧಿಯ ಜತೆಗೆ ದೇಹ ಆರೋಗ್ಯ ಕಾಪಾಡಿಕೊಂಡು ಬಲಿಷ್ಟವಾಗಿರಬೇಕೆಂದು’ ಅಪ್ಪ ಹೇಳಿದರು. ಅಪ್ಪನಿಗೀಗ ಭರ್ತಿ 80ವರ್ಷ ದಾಟಿದೆ. ಈಗಲೂ ದುರ್ಗಕ್ಕೆ ಬಂದರೆ ಏಳುಸುತ್ತಿನ ಕೋಟೆ ಸುತ್ತಿ ಬರುವಷ್ಟು ಜೀವನೋತ್ಸಾಹ ಅವರಲ್ಲಿದೆ.






0 Comments