ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲಿಂಗನೆಂಬೋ ಹುಡುಗನ ಕಥೆಯು…

ಮಾಲಿಂಗ

ಮಹದೇವ ಹಡಪದ

ಧೂಳಸಂಜಿ ಯಾಳೇಕ್ಕ ನಮ್ಮೂರಿನ ಗುಡ್ಡ, ಹೊಳಿ ಮತ್ತು ವೆಂಕೋಬಾ ದೇವಳದ ಮುಂದಿನ ಪಾವಟಣಿಗಿ ಯಾವತ್ಕಾಲಕ್ಕೂ ನೆನಪಾಗತಾವು. ಹಂಗ ನೆನಪಾದಾಗಲೆಲ್ಲ ಅಮಾಸ್ಯಾ ಅಂದ್ರ ಮಾಲಿಂಗ ಶಿಂದೊಳ್ಳಿ ಹೆಚ್ಚು ಕಮ್ಮಿ ಕಣ್ಮುಂದ ಬಂದು ಹೋಗ್ತಾನ. ಮಲಪ್ರಭಾ ಹೊಳಿ ತುಂಬಿರಲಿ – ಬತ್ತಿರಲಿ – ಮೈದುಂಬಿ ಊರೆಲ್ಲ ಮುಳಗಿಸಿಕೊಂಡು ಹರಿಯುತಿರಲಿ ಮಾಲಿಂಗನ ನಿತ್ಯ ಹಾಜರಿ ಎಂದೂ ತಪ್ಪತಿರಲಿಲ್ಲ. ಯಾರೋ ಹಮಾಲರವನೋ, ಹಗ್ಗ ಮಾಡೋರು ಪೈಕೀದವನೋ, ಕೂದಲಕ್ಕ ಪಿನ್ನ ಮಾರೋರು ಹುಡಗನೋ ಇರಬೇಕೆಂದು ಭಾವಿಸಿದ್ದ ನನಗೆ ಅವನ ಪರಿಚಿತ ನಗು ದಿನದಿಂದ ದಿನಕ್ಕೆ ಸ್ನೇಹವಾಗಿ ಕಡೆಗೊಂದ ದಿನ ಎಲ್ಲೋ ನಮ್ಮವನೇ ನನ್ನ ತಮ್ಮನೇ ಇರಬೇಕೆನಿಸುವಷ್ಟು ಸಲುಗೆ ಬೇಳೆಸಿತ್ತು. ಕತ್ತಲಿಗೆ ಅಂಜಿಕೊಂಡು ಇರುತ್ತಿದ್ದ ಅಮಾಸ್ಯಾ ತನ್ನ ಎದ್ಯಾಗಿನ ಅಳಕು ತಗದು ನನ್ನ ಕೂಡ ಸಂಜಿ ಹವಾ ತಿನ್ನಲಿಕ್ಕ ಒಂದೊಂದ ಹೆೆಜ್ಜಿ ಹಾಕಲಿಕ್ಕ ಸುರುಮಾಡಿದ್ದ.

ನಾನು ನಿಜಕ್ಕೂ ಅಮಾಸೆಯಲ್ಲಿ ಹುಟ್ಟಿದವನಲ್ಲ, ಕರೀ ಬಣ್ಣದವನಲ್ಲ ಆದರೂ ಮಂದಿ ಹಾಗೆ ಕರಿತಾರೆ ಅನ್ನೋದು ಮಾಲಿಂಗನ ದೊಡ್ಡ ಗೋಳಾಗಿತ್ತು. ಜಾತಿಗ್ಯಾರ ಮಂದಿ ಅಂದ್ರ ಮಗುವಿನಂತ ಮನಸ್ಸಿನವರು ಅನ್ನೋದು ನನಗ ಖಂಡಮ್ ಆದದ್ದು ಆ ಅಮಾಸ್ಯಾನ ಕತಿ ಕೇಳಿದ ಮ್ಯಾಲ ಅನ್ನಬೇಕು. ತಾಯಿ ದ್ಯಾಮಕ್ಕ ಗಂಡನ ಆಸರ ತಪ್ಪಿದರೂ ತನ್ನ ಎಳೆ ಕಂದಮ್ಮಗಳನ್ನ ಎದಿಗವಚಿಕೊಂಡು, ಸಲ್ಲಲಾರದ ಮಾತುಗಳನ್ನ ಸಹಿಸಿಕೊಂಡು ಜೀವ ಹಿಡಿದು ಬದುಕಿದ ರೀತಿ ನೋಡಿದ ಮ್ಯಾಲ ಇವರೆಲ್ಲಾರೂ ನನ್ನವರ ಅನ್ನಸಲಿಕ್ಕ ಸುರುವಾಯ್ತು. ಒಂದೊಂದಸಲ ಬಸ್ಟ್ಯಾಂಡಿನ ಮೂಲಿ ಪ್ಲಾಟಫಾರಮ್ ಮ್ಯಾಲ ಬಸ್ಸಿಗೆ ಕಾಯಕೋತ ನಿಂತಾಗ ಆತನ ತಮ್ಮ ತಂಗಿಯರು ಬಂದು ನನ್ನ ಮುಂದ ಕೈಯೊಡ್ಡಿದಾಗೆಲ್ಲ-ನನ್ನ ತಂಗಿಯರ ನೆನಪಾಗತಿತ್ತು. ನಮ್ಮಪ್ಪ ಕತಿ ಮಾಡಿ ಹಾಡತಿದ್ದ 72ರ ಬರಗಾಲದ ಹಾಡು ನೆನಪಾಗತಿತ್ತು. ಹಿಂಗ ಅಮಾಸ್ಯಾ ನನ್ನ ಖೋಲಿತನಕ ಬಂದು ಹೋಗಿ ಮಾಡತಿರುವಾಗ ಕೆಳಗಿನ ಮನಿಯ ಮಾಲಕರು ‘ದಿನಾ ಮುಂಜಾನೆದ್ದು ಪೇಪರ್ ಹಾಕಲಿಕ್ಕ ಒಬ್ಬ ಹುಡುಗ ಇದ್ದರ ನೋಡ್ರೀ’ ಅಂದ್ರು. ಜೋಶಿ ಅವರ ಪೇಪರ್ ಏಜೆನ್ಸಿಗೆ ಒಬ್ಬ ಆಳ ಬೇಕಿತ್ತು, ನನಗ ಮಾಲಿಂಗೂವಿನ ತಮ್ಮ ತಂಗಿಯರ ಕೈಯಾಗಿನ ತಾಟು-ಫೋಟೋ ಕಿತ್ತ ಬಿಸಾಕಬೇಕಾಗಿತ್ತು. ಮಾರನೇ ದಿನದ ಮುಂಜಾವಿಗೆ ಜೋಶಿ ತನ್ನ ಸೈಕಲ್ ಮ್ಯಾಲ ಕರಕೊಂಡು ತಿರುಗಾಡಿ ಪೇಪರ್ ಹಾಕುವ ಮನಿಗಳನ್ನ ಪರಿಚಯ ಮಾಡಿಸಿಕೊಟ್ಟ.

ದಿನಗಳದಂತೆ ಮಾಲಿಂಗೂವಿನ ಚಾಕರಿ ಜೋಶಿಗೂ ಖುಷಿ ಕೊಟ್ಟಿತ್ತೇನೋ…

ತನ್ನ ಕೈ ಕೆಲಸ ಮನಿಕೆಲಸಕ್ಕ ಲಾಯಕ್ಕಾದ ಹುಡುಗ ಸಿಕ್ಕಿದ ಅನ್ನೋ ಕಾರಣಕ್ಕಾಗಿ ಜೋಶಿ ಮಾಲಿಂಗನಿಗೆ ಹೊಸ ಅರಿವಿ ತಗಿಸಿಕೊಟ್ಟಿದ್ದಲ್ಲದ ಐವತ್ತು ರುಪ್ಯಾ ಪಗಾರ ಹೆಚ್ಚು ಮಾಡಿದ್ದ. ನನ್ನ ಖೋಲಿ ಮತ್ತು ಜೋಶಿಯವರ ಶೆಡ್ ಬಿಟ್ಟು ಮಾಲಿಂಗೂ ಯತ್ತಲಾಗೂ ಹೋಗತಿದ್ದಿಲ್ಲ. ನಸುಕಿನ ನಾಲ್ಕ ಗಂಟೇಕ್ಕ ಎದ್ದು ಕೆಲಸಕ್ಕ ತೊಡಗಿದ ಅಂದ್ರ ಸಂಜೀ ನಾಲ್ಕ ಗಂಟೇತನಕ ಬಿಟ್ಟೂ ಬಿಡದಂಗ ಜೋಶಿಯವರ ಯಾಪಾರಕ್ಕ ಆಸರಾಗಿ ಒದಗಿ ಬರುತ್ತಿದ್ದ. ಮುಳ್ಳೂರು ಇಳಕಲಿನ್ಯಾಗ ವಾಯಾ ಮುಧೋಳ ಗಾಡಿ ಹಾರ್ನ ಹಾಕಿದ್ದು ಕೇಳಿತೋ ಇಲ್ಲವೋ ದಿನಂಪ್ರತಿ ಎದ್ದು ಬಾಗಲಿಗೆ ಬಂದು ನಿಲ್ಲುತ್ತಿದ್ದ. ಬಾಯೊಳಗಿನ ಗಾಯಚಾಪ ತಂಬಾಕಿನ ಜೊಲ್ಲು ತೊಪಕ್ಕೆಂದು ತುಪ್ಪಿದ ಡ್ರಾಯವರ್ ‘ಮಾಲಿಂಗೂ’ ಅಂತ ಕೂಗೋದಕ್ಕೂ ಮುಂಚೆ ಇಂವ ಪೇಪರ್ ಬಂಡಲ್ ಕೈಯಾಗ ಹಿಡಕೊಂಡು ರೈಟ್ ರೈಟ್ ಎನ್ನುತ್ತಿದ್ದ. ಏಜೆನ್ಸಿ ಮಾಲಿಕರಾದ ಜೋಶಿಯವರು ಎದ್ದು ಬರೋದರೊಳಗ ನಿತ್ಯದ ಚಾಕರಿಯನ್ನ ನೀಟ ಮಾಡಿರುತ್ತಿದ್ದ.. ಇವನನ್ನ ಊರ ಮಂದಿ ಅಮಾಸ್ಯಾ ಅಂತ ಕರೆದಾಗಲೆಲ್ಲ ಜೋಶಿಯವರು ಮುಜಗರ ಮಾಡಿಕೊಳ್ಳುತ್ತಿದ್ದರು. ನೀ ಯಾರು, ನಿಮ್ಮ ಅಪ್ಪ ಅವ್ವ ಯಾರು, ನಿನ್ನ ಊರು ಯಾವುದು, ನಿನ್ನ ಕತಿಯೇನು..? ಎಂದು ಯಾವತ್ತೂ ಕೇಳದಿದ್ದ ಜೋಶಿ ಮಾಲಿಂಗನ ಕಾಯಕದ ನಿಷ್ಟೆಗೆ ಶಹಬ್ಬಾಷಗಿರಿ ಕೊಟ್ಟುದಲ್ಲದೆ ಅವನ ಹೆಸರಿನ ಮ್ಯಾಲ ಒಂದು ಜೀವ ವೀಮೆ ಮಾಡಿಸಲು ಮುಂದಾಗಿದ್ದರು. ನನ್ನ ಸಂಗತಿ ಜೋಶಿ ಗೆಳೆತನ ಅಷ್ಟಕ್ಕಷ.್ಟ ಆದರೂ ವಯ್ಯಾರದ ಅವನ ಹೆಂಡತಿಯ ಶುದ್ಧಾತಿ ಶುದ್ಧತೆ, ಅವನ ಮುದಿ ತಾಯಿಯ ಮಡಿ ಜೀವನಕ್ಕೂ ಅವನ ಬಡವರ ಪ್ರೀತಿಯ ಆದರ್ಶಕ್ಕೂ ಏನಕೇನ ಸಂಬಂಧ ಇಲ್ಲದಾಗಿಯೂ ಅವನೊಬ್ಬ ಕರುಣಾಮೂತರ್ಿ ಅನ್ನಿಸಿದ. ‘ವೀಮೆ ಅಂದ್ರೇನಣ್ಣ’ ಮಾಲಿಂಗನ ಮುಖದ ಮ್ಯಾಗಳ ಮಂದಹಾಸ ಮಾಸಿರಲಿಲ್ಲವಾದರೂ ವಾರದ ಪಗಾರ ಕೈಗೆ ಬರುತ್ತದೋ ಇಲ್ಲವೋ ಎಂಬ ಆತಂಕ ಮನೆಮಾಡಿತ್ತು. ‘ಇಲ್ಲ, ನಿಮ್ಮ ಮಾಲಕ ಮನಶ್ಯಾರಂಗ ಕಾಣ್ತಾನು. ದಗಲ್ಬಾಜಿ ಮಾಡೂದಿಲ್ಲ ತಗೋ, ಹಾಂಗೂ ನೀನ ಏನು ಮುಂದಾಗಿ ಪಾಲಿಸಿ ಮಾಡಸರೀ ಅಂತ ಗಂಟು ಬಿದ್ದಿಲ್ಲ. ಅವನಾಗೆ ಮಾಡಸ್ತಾನಂದ್ರ ಮಾಡಸಲಿ.’ ಎಂದು ಉಚಿತ ಸಲಹೆ ಕೊಟ್ಟಾದ ಮ್ಯಾಲ ಮಾಲಿಂಗ ಗೋಣಾಡಿಸಿ ಎದ್ದು ನಡೆದ.

ಮಳ್ಳಾ ಮರುದಿನ ವಿಮೆಯ ಅರ್ಜಿ ತುಂಬುವಾಗ ಜೋಶಿಯವರ ಹೆಂಡತಿ ಅವನ ಜಾತಿ ಕೇಳಿ ಕಳ್ಳರ ಕುಲದವನೆಂದು ಹಗೂರ ಮಾತಾಡಿದ್ದಳು. ಅವಳ ತಮ್ಮನಂತೂ ಮೈಲಿಗೆ ಆದವನಂತೆ ಹೀಯಾಳಿಸಿ ಕಳುಹಿಸಿದ್ದ. ನಾನಿನ್ನೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ ಮಾಲಿಂಗು ಖೋಲಿ ಚಿಲಕ ಅಳ್ಳಾಡಿಸುತ್ತ ನಿಂತಿದ್ದ. ‘ಅಣ್ಣಾ, ಅವರು ನನ್ನ ಪಗಾರದಾಗ ಐವತ್ತು ರೂಪಾಯಿ ಕತ್ತರಿಸಿಕೊಂಡು ಕೊಡ್ತಾರಂತ’ ಅಂದ. ಅವರು ಅಂದ್ರ ಯಾರ ಯಾರು ? ಹಾಸಿಗೆ ಒತ್ತಟಿಗೆ ಒತ್ತಿಟ್ಟು ಎದ್ದು ಕುಳಿತೆ. ‘ಅದ ನಮ್ಮ ಮಾಲಿಕರ ಹೆಂಡತಿ ತಮ್ಮ ಮತ್ತು ಮಾಲಿಕನ ಹೆಂಡತಿ… ಅಣ್ಣಯ್ಯ ನೀ ಬಂದು ನಮ್ಮ ಮಾಲಕರ ಹಂತ್ಯಾಕ ಮಾತಾಡು, ಇಲ್ಲಾಂದ್ರ ಅವ್ವಗ ಲೆಖ್ಖ ಕೊಟ್ಟ ಮ್ಯಾಲ ತಮ್ಮನ ಸಾಲಿಗೆ ರೊಕ್ಕ ಉಳಿಯೂದಿಲ್ಲ.’ ಮಾಲಿಂಗ ಮನಸ್ಸು ಮಾಡಿ ಸಣ್ಣ ತಮ್ಮನ್ನ ಒನ್ನೇ ನಂಬರ್ ಸಾಲಿಗೆ ಹಾಕಿದ್ದ. ಅವನಿಗೆ ಪಾಠಿಚೀಲ ಅರಿವಿ ಅದು-ಇದು ಅಂತ ಒಂದಿಷ್ಟ ರೊಕ್ಕದ ಅಡಚಣಿ ಇದ್ದದ್ದಕ್ಕಾಗಿ ಮತ್ತು ಬಾಬಾ ಮಾಡಿದ್ದ ಸಾಲ ತೀರಿಸೋ ಜವಾಬ್ದಾರಿ ತನ್ನ ಮ್ಯಾಲ ಇದ್ದದಕ್ಕಾಗಿ ಮಾಲಿಂಗನ ಮೂತಿ ಕಳಾಹೀನವಾಗಿತ್ತು. ಈಗ ಬರಬೇಕಾದಷ್ಟು ರೊಕ್ಕ ಬರದೇ ಹೋದ ಪಕ್ಷದಲ್ಲಿ ತಾಯಿ ದ್ಯಾಮವ್ವ ತಮ್ಮನ ಕೈಯಲ್ಲಿ ತಾಟು-ಫೋಟೋ ಕೊಡೋದ ಖಾತ್ರಿ ಎಂಬುದನ್ನ ಮನಗಂಡಿದ್ದ ಅವನ ಮನಸ್ಸು ಮತ್ತೊಂದು ಯಾವುದನ್ನೋ ಹಳಾಳಿಸುತ್ತಿದ್ದದ್ದು ಕಾಣಿಸಿತು. ‘ಯಾಕ ಮಾಲಿಂಗ ಪುಕ್ಕಲತನ ತೋರಸತೀ… ನಡಿನಡಿ ನಿನ್ನ ತಮ್ಮನ ಸಾಲಿ ಖರ್ಚು ನಾ ನೋಡ್ಕೋತೀನಿ’ ಎಂದು ಧೈರ್ಯ ತುಂಬಿದೆ. ತನಗಾದ ಅವಮಾನದ ಒಂದಂಶವೂ ನನಗ ಗೊತ್ತು ಮಾಡದಂಗ ತಲೆಯಾಡಿಸಿದ. ಆ ದಿನದಿಂದ ಅವನನ್ನ ಕೆಲಸದಿಂದ ಬಿಡಿಸಲಾಗಿತ್ತು. ಇನ್ನೊಂದು ಕೆಲಸ ನೋಡಲಿಕ್ಕ ಹೇಳಿದ್ದರೂ ನನ್ನ ಕೈಲಾದ ಸಹಾಯ ಮಾಡತಿದ್ದಿನೇನೋ… ಆದರ ಅಪಮಾನವನ್ನ ಮೊದಲೇ ನಿರೀಕ್ಷಿಸಿದ್ದ ಕಾರಣಕ್ಕಾಗಿ ಅವನ ಮುಖ ಕಪ್ಪಿಟ್ಟಿತ್ತು. ಮತ್ತೊಮ್ಮೆ ಇತ್ತಾಗ ಬರಲಾರದ ಹಂಗ ಕುಂಡಿ ತಿರುವಿಕೊಂಡ ಹೋದಂವನ ಮನಿತನದ ಕತಿ ಬ್ಯಾರೆನ ಇತ್ತು.

*** *** *** ***

ಮಾಲಿಂಗ ತಿಂಗಳೊಪ್ಪತ್ತು ಕಳೆದರೂ ಖೋಲಿ ಕಡೆ ಮುಖ ಮಾಡಲಿಲ್ಲ. ಅಂವ ಹುಟ್ಟಿನ ದಾಖಲೆ ಬೇಕಾಗಿತ್ತು ಅಂದಿದ್ದರ ನಾ ಅಫಿಡೇವಿಟ್ ಮಾಡಿಸಿ ಕೊಡತಿದ್ದೆ. ಆದರೆ ಅವನ ತಂದೆಯ ಹೆಸರೇ ಅವನನ್ನ ನಗೇಗೀಡು ಮಾಡಿದ್ದಲ್ಲದೆ. ಅವನ ಅಂತರಂಗದ ಕತ್ತಲನ್ನ ಕೆದಕಿತ್ತು. ಅಂವನ ಎದ್ಯಾಗ ನಾಟಿದ್ದ ಬೀಜದ ಉಣಿಸು ಬ್ಯಾರೇ ತೆರನಾದ ವಿಷ ಕಕ್ಕುತ್ತಿದ್ದದ್ದು ನಾ ಗುರುತಿಸಲಾರದವನಾಗಿದ್ದೆ. ಜೋಶಿ ಸಹಿತ ಅವನ ಅನುಪಸ್ಥತಿಯಿಂದ ಏನೂ ಫರಕ ಆಗಿಲ್ಲ ಎಂಬಂತೆ ತಣ್ಣಗೆ ತಾನೇ ತನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದ. ಆ ದಿನ ಅಲ್ಲಿ ಜೋಶಿ ಹೆಂಡತಿ ಮತ್ತು ಭಾವ ಏನು ಮಾತಾಡಿದರು, ಏನೆಲ್ಲ ಅವಾಂತರ ನಡೆಯಿತೆಂಬುದನ್ನು ತೀಳಿಯುವ ಗೋಜಿಗೆ ನಾನು ಹೋಗಲಿಲ್ಲವಾದ್ದರಿಂದ ನನ್ನ ನೆನಪಿನ ಭಾಗದಿಂದ ಕ್ರಮಿಸಿ ದೂರ ಸರಿದು ಹೋದ ಹಾಗೆ ಆಗಿತ್ತು. ಆ ದಿನ ಅವನ ತಮ್ಮತಂಗಿಯರು ಬಸ್ಟ್ಯಾಂಡಿನ ಆ ಮೂಲೆಯಲ್ಲಿ ಮತ್ತೆ ಕಾಣಿಸುತ್ತಿದ್ದಾಗ ಮಾಲಿಂಗನ ನೆನಪಾಯ್ತು.

*** *** *** ***

ಬಾಬಾನ ಹೆಸರು ಪುಂಡರೀಕ ಅನ್ನೋದು ಅವನೊಳಗಿನ ನೋವಾಗಿತ್ತು. ಅವನ ತಾಯಿಯನ್ನ ಬಿಟ್ಟರೆ ತಂದೆ ಯಾರೆಂದು ಅವನಿಗೆ ಗೊತ್ತಿರಲಿಲ್ಲ. ಆ ಕಾರಣಕ್ಕಾಗಿಯೇ ಊರವರೆಲ್ಲ ಅಮಾಸಿ ಅನ್ನುತ್ತಿರಬೇಕೆಂದು ಭಾವಿಸಿದ. ಹಾಗೆ ಅಂದುಕೊಳ್ಳುವುದಕ್ಕೂ ತನಗೂ ಯಾವ ಸಂಬಂಧವಿಲ್ಲ, ತಾನು ತಾನಾಗಿಯೇ ಬಂದಿರಲಾರದ ಹೆಸರು ಹೇಗೆ ಈ ಮಾಲಿಂಗನಿಗೆ ಅಂಟಿಕೊಂಡಿತು ಎಂಬ ಕುತೂಹಲಕ್ಕಾಗಿ ಒದ್ದಾಡುತ್ತಿದ್ದ. ಸಣ್ಣದಾಗಿ ಏನು ಕೇಳಿದರೂ ಅವ್ವ ದೊಡ್ಡ ರಂಪ ಮಾಡಿ ಕೂಗಾಡುತ್ತಿದ್ದಳು. ಹಂಗಾಗಿ ಅವ್ವನೊಟ್ಟಿಗೆ ಏನೂ ಮಾತಾಡದೆ ಮೌನವಾಗಿ ಕೂತಲ್ಲೇ ಕೂತಿರುತ್ತಿದ್ವ. ದ್ಯಾಮವ್ವ ಯಾರ ಮ್ಯಾಲಿನ ಸಿಟ್ಟನ್ನ ಯಾರ ಮ್ಯಾಲೂ ಹಾಕದೇ ತನ್ನ ಮಕ್ಕಳನ್ನು ಹಿಗ್ಗಾಮುಗ್ಗ ಬಡಿಯುವುದು ರೂಢಿಸಿಕೊಂಡಿದ್ದಳು. ಒಂದೊಂದಸಲ ಅವ್ವನ ಈ ಕಿರುಚಾಟ ಮಕ್ಕಳಿಗೆಲ್ಲ ಶ್ರೀರಕ್ಷೆಯಾಗಿರುತ್ತಿತ್ತು. ಆಜೂಬಾಜೂಕಿನ ಮನೆಯ ಮುತ್ತೈದೆ ಹೆಂಗಸರು, ಕಿರಿಕಿರಿ ಗಂಡಸರು, ಉಡಾಳ ಹುಡಗರು ದ್ಯಾಮಕ್ಕನ ಮಕ್ಕಳ ಸಂಗಾಟ ಜಗಳಕ್ಕ ಹೋಗುತ್ತಿರಲಿಲ್ಲ. ಅವಳ ಬಾಯಿ ಬೊಂಬಾಯಿ ಅನ್ನುವ ನೆಪದಿಂದಾಗಿ ಆಕೆಯ ಮಕ್ಕಳು ಯಾರ ಹೆದರಿಕೆಯೂ ಇಲ್ಲಧಂಗ ಓಣಿಗೆ ಖೊಟ್ಟಿಯಾಗಿದ್ದರು. ಆದರ ಮಾಲಿಂಗು ಯಾರೊಂದಿಗೂ ದೋಸ್ತಿ ಬೆಳೆಸಿದವನಲ್ಲ, ಮಾತು ಬೆಳೆಸಿದವನಲ್ಲ, ಓಣಿಯೊಳಗ ಯಾರೇ ಬೈದರೂ ಬೈಸಿಕೊಂಡು ತಣ್ಣಗಿರುತ್ತಿದ್ದ.

ಇವತ್ತು ಎಷ್ಟೆ ತಡವಾದರೂ ಆಕೆಯನ್ನು ತಡೆದು ಅಪ್ಪ ಯಾರು ಎಂದು ತಿಳಿದುಕೊಳ್ಳಲೇಬೇಕಿತ್ತು.

ಅವ್ವ, ತಮ್ಮಂದಿರ ಕೈಯಲ್ಲೊಂದು ಪಟ ಕೊಟ್ಟು ಹೀಗಿಗೆ ಹಿಂಗೆ ಕಾಡಿಸಿ ಪೀಡಿಸಿದರೆ ಕರಳು ಚುರುಗುಟ್ಟೀತು ರಾತ್ರಿ ಹೊತ್ತಿಗೊಂದ ತಟಕು ನುಚ್ಚಾದೀತೆಂದು ಹೇಳಿಕಳಿಸುತ್ತಿದ್ದಳು. ಹಂಗ ಕಳಿಸುವಾಗ ಮಾಲಿಂಗನ ನೆದರು ಬ್ಯಾರೆ ಎಲ್ಲೋ ನೆಟ್ಟಂತೆ ಇದ್ದರೂ ಮನಸ್ಸು ಮಾತ್ರ ತಮ್ಮ ತಂಗಿಯರ ಸುತ್ತ ನೆಲೆಯಾಗಿತ್ತು. ತಮ್ಮನ ಮುಸಡಿಗೂ ತನ್ನ ಮುಖಾರವಿಂದಕ್ಕೂ ಭಾರಿ ಫರಕ ಇರೋದರಿಂದ ಇವನ ಅಂತರಂಗ ಬೇರೆಯದೇ ಕತೆ ಹೇಳುತ್ತಿತ್ತು. ನಮಗೊಬ್ಬೊಬ್ಬರಿಗೂ ಒಬ್ಬೊಬ್ಬ ಅಪ್ಪ ಇದ್ದಿರಬಹುದು.. ಇಲ್ಲ ಅವ್ವ ಸೂಳೆ ಇರಬಹುದು. ತನಗೆ ತಿಳವಳಿಕೆ ಬಂದಾಗಿನಿಂದ, ಬಾಬಾ ಅವ್ವನ್ನ ಬಿಟ್ಟು ಓಡಿ ಹೋದಾಗಿಂದ ನಮ್ಮ ಮನೆಗೆ ಬೇರೆ ಗಂಡಸು ಬಂದಿರೋದನ್ನು ಕಾಣದ ತಾನು ಅವ್ವನನ್ನು ಸೂಳೆ ಅನ್ನುವುದಾದರೂ ಹೇಗೆ? ಕೋಳಿ ಪಿಳ್ಳೆಯಂಥ ನಮ್ಮನ್ನೆಲ್ಲ ಕಟ್ಟಿಕೊಂಡು ಏಗುತ್ತಿರುವ ನಮಗೂ ಅವ್ವ ದ್ಯಾಮವ್ವನಿಗೂ ಏನಕೇನ ಸಂಬಂಧ… ಇಷ್ಟು ದಿನದ ಮ್ಯಾಲೆ ಅಪ್ಪ ಯಾರೆಂಬ ಸಣ್ಣ ಪ್ರಶ್ನೆ ಹುಟ್ಟಲು ಕಾರಣನಾದ ಜೋಶಿ ಈವರೆಗೆ ತನ್ನನ್ನ ಮಗನ ಹಾಗೆ ಕಾಣುತ್ತಿದ್ದವ ಇಂದು ನಿಮ್ಮಪ್ಪನ ಹೆಸರೇನು ? ಎಂದು ಕೇಳಿದಾಗಲೇ ಇವನಿಗೆ ತಾನು ಯಾರೆಂಬುದರ ಅರಿವು ಕಾಡಲು ಸುರುವಾಗಿದ್ದು. ನುಚ್ಚಂಬಲಿ ಉಂಡ ತಮ್ಮ ತಂಗಿಯರು ಮುಸರೆಯನ್ನ ಅಂಗಿಗೆ ನೀವಿಕೊಳ್ಳುತ್ತ ಬಸ್ಟ್ಯಾಂಡ ಕಡೆಗೆ ಓಡುತ್ತಿದ್ದರು. ಅವ್ವ ‘ಮಾಲಿಂಗು ನೀನು ಒಂಚೂರು ಉಣ್ಣಬಾ’ ಎಂದಳು. ಎಂದೂ ಇಲ್ಲದ ಸುಕ್ಕುಗಟ್ಟಿದ್ದ ಗೆರೆಗಳು ಆಕೆಯ ಹಣೆಯ ಮೇಲೆ ಇಂದು ನಿಚ್ಚಳ ಕಾಣುತ್ತಿದ್ದವು. ಅವ್ವ ಮುದುಕಿಯಾದಳೇ..! ‘ಮಾಲಿಂಗಪ್ಪ ತಿಂಗಳಾತು ನೀ ಹಿಂಗ ಸುಮಾಕ ಕುಂತು, ಯಾರ ಏನಂದ್ರು.. ಯಾಕ ಮೈಗೆ ಉಶಾರಿಲ್ಲದಂಗ ಆಗೈತೇನು’ ಅಕ್ಕರೆ ತುಂಬಿದ್ದ ಅವ್ವ ತಲೆಯ ಮ್ಯಾಲೆ ಕೈಯಿಟ್ಟು ಗಲ್ಲ ಸವರಿದಳು. ಒರಾಟದ ಕೈ ಬೆರಳುಗಳಲ್ಲಿ ಜೀವಸೆಲೆ ಮಡುಗಟ್ಟಿತ್ತು. ಅಳುವಿ ಕಟ್ಟೆ ಒಡೆದು ಮಾಲಿಂಗ ಬಾಯಿ ಬಿಚ್ಚಿ ಗಳಗಳ ಅತ್ತುಬಿಟ್ಟ ‘ಯವ್ವ ಅವತ್ತು ನಮ್ಮ ಮಾಲಕರ ಹೆಣ್ತಿ, ನಿಮ್ಮಪ್ಪನ ಹೆಸರೇನು ಅಂತ ಕೇಳಿದಳು.’ ‘ಹೇಳಬೇಕಿತ್ತು ಅದಕ್ಕ್ಯಾಕ ದಣೇವಂತ ಮುಗಲು ಮೈಮ್ಯಾಲ ಹರಕೊಂಡ ಬಿದ್ದಂಗ ಯಾರ ಕೂಡನೂ ಮಾತಾಡದಂಗ ಕುಂತದಿ’ ಎಂದಳು. ‘ಅವತ್ತು ನಾ ಹೇಳಿದೆನಬ್ಬೆ. ನನ್ನ ಹೆಸರು ಮಾಲಿಂಗು ನಮ್ಮಪ್ಪನ ಹೆಸರು ಮಾಲಿಂಗಪ್ಪ ನಮ್ಮ ಮನೆ ಹೆಸರು ಸಿಂದೊಳ್ಳಿ ಅಂತ, ಆದರ ಅವರ ನಂಬಲಿಲ್ಲ. ಖರೇವಂದ್ರೂ ನಮ್ಮಪ್ಪನ ಹೆಸರ ನನಗೂ ಇಟ್ಟಾರಂದ್ರ, ಖೊಳ್ಳಂತ ನಕ್ಕಬಿಟ್ಟರು. ಯವ್ವ ಯಾಕ ನನಗ ಬ್ಯಾರೆ ಹೆಸರು ಇಡಲಿಲ್ಲ’ ತೊಡೆ ಮ್ಯಾಲೆ ತಲೆಯಿಟ್ಟು ಮಲಗಿಕೊಂಡ. ಹರೆಯಕ್ಕ ಬಂದ ಮಗ ಎಳೆಕೂಸಿನಂಗ ಮುದುಡಿಯಾಗಿ ಮಲಗಿದ್ದನ್ನ ಕಂಡ ತಾಯಿಗೆ ತಲಿಮ್ಯಾಲಿನ ಭಾರ ಎದಿಗೆ ಬಂದು ಕುಂತಂಗಾಯ್ತು.

‘ಮಗನ ಇವತ್ತು ದಿವಸ ಕೂಡಿ ಬಂದೈತಿ, ನಿನ್ನ ನಶೀಬಿನ ಕತಿ ಕೇಳು – ನಿಮ್ಮಪ್ಪ ಸರ್ಕಸ್ಸ ಕಂಪನ್ಯಾಗ ಕೆಲಸಕ್ಕಿದ್ದ. ಅವನ ಹೆಸರು ಖರೇವಂದ್ರ ಮಾಲಿಂಗ. ಆದರ ನೀ ಇಷ್ಟು ತ್ರಾಸ ತಗೊಂಡು ದುಃಖ ಮಾಡ್ಕೊಣುದು ಏನೈತಿ, ನಿಮ್ಮಪ್ಪ ಅಗದೀ ಹೌದು ! ಅನ್ನುವಂತಾ ನಕಲೀ್ಪಾರ್ಟ ಮಾಡಾಕ ಹೆಸರಾಗಿದ್ದ… ಮುಖಕೆಲ್ಲ ಮಸಿ ಬಳಕೊಂಡು, ಕೈಯಾಗೊಂದು ರಾಜಸ್ಥಾನಿ ಲಡಕಿ ಹಿಡ್ಕೊಂಡು ಮಂದಿ ಮುಂದ ಬಂದ್ರ,,, ಕುಂತ ಮಂದಿ ಹೋಯ ಅಂತ ಕೂಗ ಹಾಕತಿತ್ತು. ಏನ ನಗಚಾಟಕಿ ಮಾಡತಿದ್ದ ಎಷ್ಟೆಲ್ಲ ನಗಾಡಸತಿದ್ದ, ಮಂದಿ ನಿನಗ ಅಮಾಸೆ ಅಂತಾರಲ್ಲ ಅದು ನಿಮ್ಮಪ್ಪಗ ಊರವರ ಕರಿತಿದ್ದ ಅಡ್ಡಹೆಸರು… ನಾ ನಿಮ್ಮಪ್ಪನ್ನ ಮೆಚ್ಚಿ ಲಗ್ನ ಮಾಡಕೊಂಡು ಊರೂರು ಅಂತ ಅಂವನ ಬೆನ್ನ ಹತ್ತಿ ತಿರಗತಿದ್ನಿ. ನನ್ನಂಗ ಅವನ ಮ್ಯಾಲ ಕಣ್ಣಿಟ್ಟ ಹೆಂಗ್ಸು ಅಂವನಿಗೆ ಮಾಟ ಮಾಡಿಸಿ ಜೀಂವ ತಗದಳು’ ದ್ಯಾಮವ್ವ ತನ್ನ ವಯಸ್ಸಿನ ದಿನಗಳಿಗೆ ಇಳಿದು ಸಣ್ಣವಳಾಗಿ ಮಾತಾಡುತ್ತಿದ್ದಳು. ‘ನಿಮ್ಮಪ್ಪ ಸಾಯೋತನಕ ನಾ ವೈನಾಗೇ ಇದ್ದಾಕಿ, ನೀ ಹೊಟ್ಟ್ಯಾಗ ಇದ್ದಾಗ ನಿಮ್ಮಪ್ಪ ಸತ್ತ ಹೋದ ಅದಕ್ಕ ಅವನ ಹೆಸರು ನಿನಗಿಟ್ಟದ್ದು. ಅಂವ ಸತ್ತಮ್ಯಾಲ ಕರೀಸೆರಗಿನಾಂಗ ಇನ್ನೊಂದ ಗಂಡಸು ಗಂಟುಬಿದ್ದು ದಿವಾಳಿತಗದ..’

ಯಾರು..

ಅವನ ನಿನ್ನ ಬಾಬಾ.

ಇಲ್ಲಿತನಕ ಬಾಬಾನೇ ತನ್ನ ಅಪ್ಪ ಎಂದು ತಿಳಿದಿದ್ದ ಮಾಲಿಂಗನ ಮುಖ ಈಗ ಪಿಚ್ಚನಿಸಿತ್ತು. ಬಾಬಾ ಅಂದ್ರ ಅವ್ವನ ಎರಡನೇ ಗಂಡ. ಭಾಳ ಮೂಬೆರಕಿ ಇದ್ದ ಅಂವ, ಕುಂತಲ್ಲಿ ಕೂತವನಲ್ಲ-ನಿಂತಲ್ಲಿ ನಿಂತವನಲ್ಲ ಚಣಚಣಕ್ಕೂ ಅಲ್ಲಿ-ಇಲ್ಲಿ ಓಡಾಡಿಕೊಂಡಿರುತ್ತಿದ್ದ. ಅವ್ವಗ ಓಣಿಮಂದೆಲ್ಲ ‘ಬಲುಗಟ್ಟಿಗಿತ್ತಿ’ ಅನ್ನೋ ಬಿರುದು ಕೊಟ್ಟದ್ದು ಈತನ ದೆಸೆಯಿಂದಾಗಿಯೇ. ರಾಮನಕೊಳ್ಳ, ಸೋರನಕೊಳ್ಳ, ಹಳ್ಳ, ಗುಡ್ಡನೆಲ್ಲ ಸುತ್ತಾಡಿ ಅದ್ಯಾವದೋ ಗಿಡದ ಬೇರೋ ಎಲೆನೋ ತಂದು ಗೌಟಿವೈದ್ಯನಾಗಿ ಔಷದಿ ಕೊಡುತ್ತಿದ್ದ. ಇನ್ನೊಂದಾವರತಿಗೆ ದನದ ಬಜಾರಿನ ದಲಾಲನಾಗಿ ಅವರ ದನ ಇವರಿಗೆ ಕೊಡಿಸಿ ನಡುವೆ ಕಮಿಷನ್ ಉಳಿಸ್ಕೊಂಡು ಬರತಿದ್ದ. ಒಂದೊಂದ್ಸಲ ಹೆಣ್ಣ ಗಂಡಿನ ಕೊಡತಗೊಳ್ಳೋ ಯಾವಾರದಾಗ ಹಿರಿಯನಾಗಿ ಮದುವಿಕಾರ್ಯನೂ ಮಾಡಿಸಿಬಿಡತಿದ್ದ. ಚೀಟಿಚಿಪ್ಪಾಟಿ, ಮೋಸ, ದಗಲ್ಬಾಜಿ ಮನಶ್ಯಾ ಅಂತ ಗೊತ್ತಿದ್ದರೂ ಇವನ ಮ್ಯಾಲ ಮಂದಿ ಭರೋಸ, ನಂಬಿಕೆ ಇಡುವ ಹಾಂಗ ನಡಕೊಳ್ಳತಿದ್ದ. ಚಾಕಚಕ್ಯತೆಯಲ್ಲಿ ಕಣ್ಮುಂದ ಮಂದಿ ಯಾಮಾರಿಸೋ ಕಲೆ ತಿಳಿದವನಾಗಿದ್ದ. ಮಾತು ಮಾತಿಗೆ ರೊಕ್ಕ ಹುಟ್ಟಿಸುವ ತಲಿವಾನ. ಬಾಳೇವು ಅಂತ ಮಂದಿ ಮಕ್ಕಳ ಮುಂದ ತಲಿತಗ್ಗಿಸಿ ಸೋತವನಲ್ಲ ಅಂದ್ರೂ ವಾರದಾಗ ಎರಡಮೂರು ಜಗಳಗಳು ಮನಿಮುಟ್ಟ ಬಂದು ಬಿಡತಿದ್ದವು. ಬಾಬಾ ಊರತುಂಬ ಸಾಲಸೋಲ ಮಾಡಿದ್ದರೂ ಹೆಂಡತಿ-ಮಕ್ಕಳಿಗೆ ತಂದ ಹಾಕೋದರಲ್ಲಿ ಹಿಂದ ಬಿದ್ದವನಲ್ಲ.

‘ನನ್ನ ನಶೀಬ ಖೊಟ್ಟಿ ಐತ್ಯೋ ಯಪ್ಪಾ.. ನಿಮ್ಮಪ್ಪ ಬ್ಯಾನಿ ಹಚಗೊಂಡು ಸತ್ತಹೋದ, ಅಂವ ಸತ್ತಾಗ ನನಗೇನ ಭಾಳ ವಯಸ್ಸಾಗಿರಲಿಲ್ಲ ನೋಡು, ಹಂಗಾಗಿ ಈ ಮೂಳಿನ ಉಡಕೀ ಕಾರೇವು ಮಾಡಿ ನನ್ನ ಕಟ್ಟಿ ಹಾಕಿದ್ರು. ಒಂದರಮ್ಯಾಲ ಒಂದರಂಗ ಈ ನಾಕ ಕೂಸಗೋಳನ ನನ್ನ ಉಡಿಯಾಗ ಹಾಕಿ ಇವನು ಯತ್ತಲಾಗೋ ಪರಾರಿ ಆದ. ದೇವರ ಬರದದ್ದನ್ನ ಹೆಂಗ ಅಳಕಸೋದು ಹೇಳು ಸರಕಾರ ರಂಡಿಮುಂಡೇರಗೆ ರೊಕ್ಕ ಕೊಡತೈತಿ,ಮುದಕರಿಗೆ ಪಿಂಚಣಿ ಕೊಡ್ತೈತಿ, ನನ್ನಂಥ ಅಬಲೀಗೆ ಏನ ಕೊಡತದ…’ ಗುಡ್ಡದ ಎಲ್ಲವ್ವನ ಫೋಟೋ ನೋಡಿ ನಿಟ್ಟುಸಿರಿಟ್ಟಳು. ಬಾಬಾ ಇದ್ದಕ್ಕಿದ್ದಂಗ ಮನಿ ಬಿಟ್ಟು ಹೋದಾಗೆಲ್ಲ ಅವ್ವ ಕಂಗಾಲಾಗಿ ಅವನ್ನ ಹುಡುಕಿ ಕರಕೊಂಡು ಬರುತ್ತಿದ್ದಳು. ಜಾತ್ರಿ, ಸಂತಿ-ಪ್ಯಾಟಿ ತಿರಗತಿದ್ದ ಬಾಬಾ ರಾತ್ರಿಯಾಗುತಲೇ ಬಗಸಿ ಸೆರೆ ಮುಕ್ಕಿ ಬಂದಿರತಿದ್ದ, ಆ ಉಡಾಳ, ಸುಳ್ಳ, ಮೋಸಗಾರ ಎಲ್ಲೇ ಹೋಗಿರಲಿ ಎಷ್ಟೊತ್ತಿಗೆ ಮನೆಗೆ ಬರಲಿ ಬರುವಾಗ ಖಾಲಿ ಕೈಯಲ್ಲೊಮ್ಮೆನೂ ಬಂದವನಲ್ಲ. ಖಾರ,ಸಿಹಿ, ಹಣ್ಣು-ಹಂಪಲ ತಪ್ಪಿದರ ಒಂದು ಬ್ರೆಡ್ ಪುಡಕಾನಾದ್ರೂ ಹಿಡ್ಕೊಂಡು ಬರುತ್ತಿದ್ದ. ಅಮಾಸ್ಯಾ ಅಂತ ಒದರುತ್ತಿದ್ದ ಹೊರತು ಒಂದು ದಿನವೂ ತನ್ನ ಮಕ್ಕಳ ಹೆಸರ ಹಿಡಿದು ಕರೀತಿರಲಿಲ್ಲ. ‘ದರಿದ್ರ ಮಂದಿ ಹೊಟ್ಟಿ ದೊಡ್ಡದು ಅಂತಾರಲ್ಲ ಅದು ಸುಳ್ಳಲ್ಲ ಮಾಲಿಂಗೂ, ನೀ ಪೆಪರ್ ಹಾಕಿದ್ದು ನಾ ಕಳೆ ತಗಿಲಿಕ್ಕ ಮಂದಿ ದಗದಕ್ಕ ಹೋದದ್ದು ಎಷ್ಟ ಬರ್ತೈತಿ… ಅಂವ ಸತ್ತನೋ ಕೆಟ್ಟನೋ ಒಂದು ತಿಳಿತಿಲ್ಲ. ಗೊಡಚಿ ಜಾತ್ರಿಗೆ ಹ್ವಾದ ಮನಸ್ಯಾ ಹೊಡಮರಳಿ ಬರದಂಗಾದ ಮ್ಯಾಲ ಹೆಣ್ಣಹೆಂಗಸು ಐದ ಮಕ್ಕಳ ಕಟ್ಕೊಂಡು ಬಾಳೂದಾದರೂ ಹೆಂಗ.. ಅದಕ್ಕ ಆ ಸಣ್ಣ ಮಕ್ಕಳ ಕೈಯಾಗ ತಾಟು ಕೊಟ್ಟು ಭಿಕ್ಷಕ್ಕ ಕಳಸು ಯಾಳೇವು ತಂದಿಟ್ಟ ಆ ದೇವರು’ ಸೆರಗೀಲೇ ಕಣ್ಣೊರೆಸುತ್ತಿದ್ದಳು. ಅಗಾ ಅಲ್ಲಿ ಗಂಟ ಕಟ್ಟಿ ಅಟ್ಟಕ್ಕೇರಿಸಿ ಇಟ್ಟಿನಲ್ಲ ಆ ಡ್ರಮ್ಮು ನಿಮ್ಮಪ್ಪನ ಆಸ್ತಿ. ಅದನ್ನ ಹೆಗಲಿಗೆ ಹಕ್ಕೊಂಡು ಊರೂರು ತಿರುಗ್ಯಾಡಿ ಡೊಂಬರಾಟದ ಸೋಗ ಹಾಕಿ ತನ್ನ ಖಾಯಿಲೆ ದಿನದಾಗೂ ನನಗ ತಂದು ಹಾಕಿ ನಿಯತ್ತಿನಿಂದ ಬದುಕಿದ್ದಂವ ನಿಮ್ಮಪ್ಪ. ಅಂಥ ಸುಬೇದಾರನ ಮಗ ನೀನು.. ಅದಕ್ಕ ನಿನ್ನ ಸ್ವಾಭಿಮಾನಕ್ಕ ಪೆಟ್ಟು ಬಿದ್ದದಕ್ಕ ಇಷ್ಟು ಒದ್ದಾಟ ನಡೆಸಿದಿ ಎಂದು ಮತ್ತಷ್ಟು ಕಣ್ಣೀರುಗರೆದಳು.

ತಾ ಮತ್ತ ಕೆಲಸಕ್ಕ ಹೋದರ ಅವನ ಹೆಂಡತಿ ತನ್ನನ್ನ ಜಾತಿಗ್ಯಾರ ಕುಲದಂವ ಅಂತ ಹೊರಗಿಡೋದಲ್ಲದ ಮೊದಲಿನ ಇಸ್ವಾಸ, ನಂಬಿಕಿ ಇಡಲಿಕ್ಕಿಲ್ಲ, ಊರಾಗಿನ ಯಾವ ಸಾವಕಾರನ ಮುಂದ ಕೈ ಕಟ್ಟಿ ನಿಂತರೂ ಜಾತಿ ಹಿಡದು ಹೀಯಾಳಸ್ತಾರು ಅನ್ನೋದು ನಿಕ್ಕಿ ಆಗಿತ್ತು. ಅಟ್ಟದ ತೊಲಿಗೆ ಗಂಟು ಹಾಕಿದ್ದ ಫೈಬರಿನ ಡ್ರಮ್ಮು ಕೆಳಗಿಳಿಸಿ ಧೂಳು ಝಾಡಿಸಿಟ್ಟ. ಅದೆಷ್ಟೋ ದಿನದ ಮ್ಯಾಲ ಹೊಸ ಉಸರು ಕುಡಿಲಿಕ್ಕ ಮುಳ್ಳೂರು ದಾರಿಗುಂಟ ಗುಡ್ಡ ಹತ್ತಿ ಕೆಳಗಿಳಿಬೇಕಾದರ ಅಡ್ಡ ದಾರಿಯೊಳಗ ನನಗೆದುರಾದ. ಅಣ್ಣನ ಮುಖದ ನೆನಪು ಮರೆತವನಂಗ ಕುರಿತಲೆ ನೆಲಕ್ಕಿಟ್ಟು ಕಂಡುಕಾಣದವರ ದೃಷ್ಟಿಯೊಳಗ ದಿಟ್ಟಿಸಿ ತನ್ನಷ್ಟಕ್ಕ ತಾನು ಹೊರಟಿದ್ದ. ಅರೇ ಇಂವ ನಮ್ಮ ಮಾಲಿಂಗು ಏನು? ಗಕ್ಕನೆ ತಿರುಗಿ ನಿಂತು ಅಲ್ಲ ನಾ ಜಾತಿಗ್ಯಾರ ಅಮಾಸ್ಯಾ ಎಂದ. ಧಡಧಡ ಇಳಿದು ಕಬ್ಬಿನ ತೊಟದ ತುದಿ ಅಂಚಿನಲ್ಲಿ ಮರೆಯಾದ.

*** *** *** ***

ಮಳೆ ಕಾಣದ ನೆಲದಲ್ಲಿ ಬಿತ್ತಿದ್ದು ಮಣ್ಣುಪಾಲಾಗಿ ರಣುಗ್ರ ರಣರಣ ನೆತ್ತಿ ಸುಡುವ ಬರಗಾಲದ ಒಂದು ದಿನ ಕತ್ತೆ ಮದುವೆಯ ಕುಚೋದ್ಯ ನೋಡಲು ಊರಿಗೆ ಹೋಗಿದ್ದೆ. ಆ ದಿವಸ ಅಲ್ಲಿ ಕಾಣದಾಗಿದ್ದ ಅಮಾಸ್ಯಾ ಈ ದಿನ ಇಲ್ಲಿ ತನ್ನ ತಮ್ಮ ತಂಗಿಯರನ್ನು ಪಳಗಿಸಿ ಆಟ ಸುರು ಮಾಡಿದ್ದ. ಢಮ್ ಢಮ್ ಢುಮಕ ಢುಮಕ ಢುಮು ಢಮ್ ಢಮ್ ಯಾವ ಅಣ್ಣ ಒಂದ ರೂಪಾಯ ಕೊಡ್ತಾನ ಯಾವ ಅಣ್ಣ ನೋಡಿಯೂ ನೋಡದಂಗ ಹೋಗ್ತಾನ ಎಂದು ತನ್ನ ಗರಡಿಯ ಪಟ್ಟುಗಳನ್ನ ರಸವತ್ತಾಗಿ ಒಂದೊಂದನ್ನೆ ತೋರಿಸುತ್ತಿದ್ದ. ನೂರರ ನೋಟೊಂದನ್ನು ಮುಖದ ಮುಂದಿಟ್ಟು ನೋಡುತ್ತ ನಿಂತಾಗ ಕುಬ್ಜನಾಗಿ ಕುಸಿದು ಕುಂತ, ಆಟವನ್ನೆ ಅರ್ಧಕ್ಕೆ ಬರಖಾಸ್ತ ಮಾಡಿದ. ನನ್ನ ಎರಡು ಕೈ ಹಿಡಿದು ‘ಅಣ್ಣಾ ಅವ್ವ ಸತ್ತಳು. ನಾ ಇನ್ನೇನು ಮಾಡಲೀ..? ಈ ಬರಗಾಲ ಬಡವನ ಹೊಟ್ಟಿಗೆ ಎಳ್ಳುನೀರ ಬಿಟ್ಟದ. ಉಪವಾಸದ ಸಂಕಟ ಇದನ್ನ ಮಾಡಿಸಲಿಕ್ಕ ಹತ್ಯದ, ನಿಮಗ ಕೈಮುಗುತೀನಿ, ನೀವು ಕಣ್ಣೆದುರಿಗಿದ್ದರ ಆಟ ಆಡಲಿಕ್ಕ ಮನಸ್ಸು ಒಪ್ಪತಿಲ್ಲ. ನೀವು ಬರಬ್ಯಾಡ್ರೀ ದೂರ ಹೋಗ್ರೀ’ ಎಂದು ಅಂಗಲಾಚಿದ. ಅವನ ಮುಖದ ಮ್ಯಾಲಿನ ಚಲುವು ಈಗ ನಳನಳಿಸುತ್ತಿತ್ತು. ತಮ್ಮಂದಿರರಿಬ್ಬರೂ ಒಂದೇ ರಿಂಗಿನೊಳಗೆ ದೇಹ ತುರುಕಿ ಪಾರಾಗುವ ಕೌಶಲ ತೋರಿಸುತ್ತಿದ್ದರು. ತಂಗಿ ಡ್ಯಾನ್ಸ್ ಮಾಡುತ್ತಿದ್ದಳು. ಅಮಾಸ್ಯಾ ಉರಿಕೊಳ್ಳಿಗಳನ್ನ ಎರಡು ಕೈಯಾಗ ಹಿಡದು ಗರಗರ ತಿರುಗಿಸುತ್ತಿದ್ದ. ಮೆತ್ತಗಿನ ಮನಸ್ಸು ಈಗ ಕಲ್ಲಾಗಿ ಕುಳಿತಿತ್ತು. ಮಾರನೇ ದಿನ ತಮ್ಮನ ತಲೆಯ ಮೇಲೆ ಗುರಜಿ ಕೂರಿಸಿಕೊಂಡು ಮಳೆಯಾಟ ಆಡಿ ಮನೆಮನೆ ಭಿಕ್ಷ ಎತ್ತುತ್ತಲಿದ್ದ. ಆ ಗುರಜಿ ಕುಣಿಯುವ ಮಾಲಿಂಗನ ಮುಖ, ಧೂಳಗೆಂಪಿನ ಇಳಿ ಹೊತ್ತಿಗೆ ಕುಣದೂ ಕುಣದೂ ಕೆಂಡ ಆದಂತ ಕನಸು ಕಾಣುತಲೆ – ಆ ಬಡವನ ವಡಬಾಗ್ನಿಯ ಹಸಿಹಸಿ ಚಿತ್ರಗಳು ಮನದ ಮುಂದ ಸುಳಿದಾಡುತ್ತವೆ. ಇವನ ಕುಣತಕ್ಕ ನಾಚಿಕೊಂಡು ಸುರಿಬೇಕಾದ ಈ ಮಳಿಯೊಳಗ ಆ ಅವನ ಬಡತನ, ಮುಜುಗರ, ಜಾತಿಗಳೆಲ್ಲವನ್ನು ತೊಳೆಯುವ ಶಕ್ತಿ ಇರತದ ಅಂತಾದರ…..

ಗುರಜಿ ಗುರಜಿ ಎಲ್ಲ್ಯಾಡಿ ಬಂದಿ

ಹಳ್ಳಕೊಳ್ಳ ತಿರಗ್ಯಾಡಿ ಬಂದಿ

ಬಣ್ಣ ಕೊಡತಿನಿ ಬಾರಪ್ಪ ಮಳಿಯೇ

ಸುಣ್ಣ ಕೊಡತಿನಿ ಸುರಿಯಪ್ಪ ಮಳಿಯೇ

ಸುರಿಮಳಿಯೋ… ಸುರಿಮಳಿಯೋ !

ಢಮ್ ಢಮ್ ಢುಮಕ ಢುಮಕ ಢುಮಕ ಢುಮು, ಢಮ್ ಢಮ್ ಢುಮಕ ಢುಮಕ ಢುಮು

 

‍ಲೇಖಕರು G

14 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading