ಮಾಲಾ ಮ ಅಕ್ಕಿಶೆಟ್ಟಿ
ಬೆಳ್ಳನೆ ಬೆಳಗು
ಗಾಳಿಯ ಒತ್ತಡಕ್ಕೆ ತಲೆ ತೂಗುವ
ಗಿಡ, ಮರ, ಬಳ್ಳಿ ಎಲ್ಲದರಲ್ಲೂ
ಜೀವ ತುಂಬಿದ ಕಳೆ
ಈ ದೃಶ್ಯ ವೈಭವ ನೋಡುತ್ತ
ಅತ್ಯುತ್ಸಾಹದಿಂದ ತೆರೆದ ಕಣ್ಬಿಟ್ಟು
ಸೃಷ್ಟಿಯ ರಚನೆಕಾರನ
ಮನದಲ್ಲೇ ಕೃತಜ್ಞಿಸಿ
ಅಚಾನಕ್ಕಾಗಿ ಗಿಡ, ಬಳ್ಳಿಗಳ
ಮೇಲೆ ಕುಳಿತು, ಹೂವಲ್ಲಿ
ತಲೆ ತೂರಿಸಿ, ಚಿಕ್ ಚಿಕ್
ಎಂದ ಹೆಬ್ಬೆಟ್ಟುದ್ದದ ಚಿಕ್ಕ ಪಕ್ಷಿ
ಪುಟ್ಟ ರೆಕ್ಕೆ ಬಡಿಯುತ್ತ,
ಅತ್ತ ಇತ್ತ ಜಿಗಿಯುತ್ತ,
ಕೊಂಕಲ್ಲಾಡಿಸಿ, ಕಣ್ಣ ಹೊರಳಿಸಿ,
ಭಾವೋದ್ವೇಗದ ಸಣ್ಣ ಪಕ್ಷಿ
ಅದೆಲ್ಲಿತ್ತೋ
ಹಠಾತ್ತನೆ ಹಕ್ಕಿಯ
ಮೇಲೆರಗಿ ಒಂದೇ
ದಾಳಿಗೆ ಬೆಕ್ಕಿನ ಬಾಯಿಗೆ
ಕ್ಷಣಹೊತ್ತಲ್ಲೇ ಆತ್ಮ
ದುಃಖಿಸಿ, ಸೃಷ್ಟಿಯ
ಸೊಬಗ ಪ್ರಶ್ನೆಸಿ
ಮುಖ ಮೇಲೆತ್ತಿ
ಚೆಂದದ ಹಕ್ಕಿಯ
ಪುಕ್ಕಕ್ಕೆ, ಕಣ್ಣಿಗೆ,
ಕಾಲಿಗೆ, ಕುಣಿತಕ್ಕೆ, ಜೀವಕ್ಕೆ
ಹತ್ತಿತೇ ನನ್ನದೇ ಕಣ್ಣು?
0 ಪ್ರತಿಕ್ರಿಯೆಗಳು