ವೀರಣ್ಣ ಮಂಠಾಳಕರ್
ಬೆಳಕು ಮೂಡುವುದಕ್ಕೆ ಕೆಲವೇ ಗಂಟೆ ಮತ್ತು ನಿಮಿಷಗಳಿದ್ದವು. ರಾತ್ರಿಯೆಲ್ಲ ಗಂಡನ ನಿರೀಕ್ಷೆಯಲ್ಲಿ ನಿದ್ರೆ ಇಲ್ಲದೇ ಪ್ರತಿ ಕ್ಷಣಗಳು ಅವಳನ್ನು ಚಿಂತನೆಗೆ ಹಚ್ಚಿತ್ತು. ಗಂಡನ ಜೊತೆಗಿದ್ದ ರಾತ್ರಿಗಳು ಸಹ ಇಂತಹದೊಂದು ಧೀರ್ಘವಾದ ಕತ್ತಲನ್ನು ಸೀಳಿಕೊಂಡು ಹೋಗುತ್ತಿರುವುದು ರಶ್ಮಿ ಹಿಂದೆಂದೂ ಕಂಡಿರಲಿಲ್ಲ. ಚುನಾವಣೆ ನಡೆಯುವ ನೆಪದಲ್ಲಿ ಯಾವುದೋ ರಾಜಕೀಯ ವ್ಯಕ್ತಿಯೊಬ್ಬರ ಸಂದರ್ಶನ ಮಾಡಿ ರಿಪೋರ್ಟ ಬರಿಬೇಕಾಗಿದೆ ಎಂದು ಹೇಳಿ ಬೆಳಗ್ಗೆನೆ ಹೋದವರು ಇನ್ನೂ ಯಾಕೆ ಬರಲಿಲ್ಲ ಎಂಬ ವಿಚಾರವನ್ನು ಕಾಡತೊಡಗಿತ್ತು. ಇತ್ತ ನಾಲ್ಕು ವರ್ಷದ ಮಗಳ ಶೀತ, ಕೆಮ್ಮು, ಜ್ವರ ಮೇಲಿಂದ ಮೇಲೆ ಏರುತ್ತಲೇ ಇತ್ತು.
ಒಬ್ಬಳೇ ಏನೂ ಮಾಡಬೇಕೆಂದು ದಿಕ್ಕು ತೋಚದೇ ಬಾಗಿಲು ತೆರೆದು ನೋಡಿದಳು. ಗವ್ವನೆಂಬ ಕಾರ್ಗತ್ತಲಿನ ನಿಶಬ್ಧದಲ್ಲಿ ಒಂದೂ ನರಪಿಳ್ಳೆಯೂ ಕಾಣಲಿಲ್ಲ. ರಸ್ತೆ ಬದಿಗೆ ಅಂಟಿಕೊಂಡಿದ್ದ ಮನೆ. ಬಡಾವಣೆಯ ಎರಡನೇ ತಿರುವಿನಲ್ಲಿತ್ತು. ಮನೆಯ ಬಾಗಿಲಿನಲ್ಲಿ ನಿಂತು ನೋಡಿದರೆ ಹಗಲಿನಲ್ಲಿ ಹೋಗಿ ಬರುವ ವಾಹನಗಳು ಈ ಸಮಯದಲ್ಲಿ ಇರಲಿಲ್ಲ. ನಿತ್ಯ ಓಡಾಡುವ ಜನರಲ್ಲಿ ಯಾರೊಬ್ಬರ ಸುಳಿವು ಇಲ್ಲ. ರಾತ್ರಿ ಆಗಿದ್ದರಿಂದ ರಸ್ತೆ, ಬಡಾವಣೆ ಬೀದಿಗಳೆಲ್ಲ ಮೌನವನ್ನು ಆವರಿಸಿದ್ದವು. ಬೀದಿ ದೀಪಗಳು ತಮ್ಮ ಕರ್ತವ್ಯ ಪಾಲನೆ ಎಂಬಂತೆ ಉರಿಯುತಿದ್ದವು. ಕಂಬದ ಸುತ್ತಲೂ ಬೆಳಕು, ನೆರಳಿನಾಟ ನಡೆಯುತಿತ್ತು. ರಶ್ಮಿಗೆ ಸ್ವಲ್ಪ ಭಯ ಎನಿಸಿದಂತಾಗಿ ಬಾಗಿಲಲ್ಲಿ ನಿಂತುಕೊಂಡಿದ್ದವಳು ಹಿಂದಕ್ಕೆ ಸರಿದಳು.
ಅತ್ತೆ, ಮೈದುನ, ನಾದಿನಿ ಮತ್ತು ಗಂಡನೊಂದಿಗೆ ವಾಸವಾಗಿದ್ದ ದಿನಗಳು ಮಿಂಚಿನಂತೆ ಸುಳಿದು ಹೋದವು. ಅವರ್ಯಾರು ಇಲ್ಲದ ಹೊತ್ತಿನಲ್ಲಿ ಎಂದೂ ಕಂಡಿರದ ಅನಾಥ ಭಾವ ಮೂಡಿತ್ತು. ಅಲ್ಲಲ್ಲಿ ದೂರದಿಂದ ಬೊಗಳುವ ನಾಯಿಗಳ ಕಿರುಚಾಟ ಕೇಳಿಸಿದ್ದು ಬಿಟ್ಟರೆ ವಾತಾವರಣ ಸಂಪೂರ್ಣ ನಿಶಬ್ಧವಾಗಿತ್ತು. ಬಾಗಿಲಿನಿಂದ ಹೊರಗಿನ ಪಡಸಾಲೆಗೆ ಬಂದು, ಹಜಾರದ ಗೋಡೆಯ ಬೋರ್ಡ್ ಗ್ಗೆ ಗೆ ಕೈ ಹಾಕಿ ಲೈಟ್ ಆನ್ ಮಾಡಿದಳು. ಗಡಿಯಾರದ ಕಡೆ ದೃಷ್ಠಿ ಹರಿಸಿದಳು. ರಾತ್ರಿಯ 3.45 ನಿಮಿಷ ಆಗಿತ್ತು. ಯಾರ ಜೊತೆ ಯಾವ ಪಾರ್ಟಿಯಲ್ಲಿ ಇದ್ದಾರೋ ಎಂದು ಮನದಲ್ಲೇ ಏಣಿಸುತ್ತ ವಾಪಸ್ಸು ಬಂದು ಬಾಗಿಲನ್ನು ಮುಚ್ಚಿ, ಭದ್ರವಾಗಿ ಚಿಲಕ ಜಡಿದು ಹಾಸಿಗೆಗೆ ಬಂದು ಮಂಡಿಯೂರಿದಳು.
ಮಗಳ ತಲೆಯ ಮೇಲೆ ಕೈಯಿಟ್ಟು ಜ್ವರದ ನಿಯಂತ್ರಣ ಪರೀಕ್ಷಿಸಿದಳು. ಎಂದೋ ಒಂದಿನ ಮಗುವಿಗೆ ತೀವ್ರ ಜ್ವರ ಮತ್ತು ಶೀತ ಬಂದಾಗ ಚಿಲ್ಡ್ರನ್ಸ್ ಸ್ಪೇಷಲಿಸ್ಟ್ ಡಾಕ್ಟರ್ ಬಳಿ ತೋರಿಸಿ ತಂದಿಟ್ಟಿದ್ದ ಮಾತ್ರೆಗಳಲ್ಲಿ ಎರಡು ಮಾತ್ರೆ ಹಾಗೇ ಉಳಿದಿದ್ದವು. ಮಾತ್ರೆಯ ಎಕ್ಸಪೈರ್ ಡೇಟ್ ನೋಡಿ, ಖಾತ್ರಿಪಡಿಸಿಕೊಂಡಳು. ನಂತರ ರಾತ್ರಿ 10ರ ಸುಮಾರಿಗೆ ಅರ್ಧ ಮಾತ್ರೆ ಮಗಳಿಗೆ ನುಂಗಿಸಿ ಮಲಗಿಸಿದ್ದಳು. ಜ್ವರದಿಂದ ಸ್ವಲ್ಪವೇ ಚೇತರಿಸಿಕೊಂಡಂತೆ ಮಗು ಗಾಢ ನಿದ್ರೆಗೆ ಜಾರಿತ್ತು. ಮೈ ಬಿಸಿ ಅಷ್ಟೇನು ಕಾಣಿಸದೇ ಇದ್ದಾಗ ಸ್ವಲ್ಪ ನಿಟ್ಟುಸಿರನ್ನು ಬಿಟ್ಟು ನಿದ್ರೆಗೆ ಶರಣಾಗಬೇಕು ಎಂದು ಯೋಚಿಸಿದಳು. ಹಾಗೆ ಮಗುವನ್ನು ಪಕ್ಕಕ್ಕೆ ಎಳೆದುಕೊಂಡು ಮಡಿಲಲ್ಲಿ ಮಗುವನ್ನು ಅಪ್ಪಿಕೊಂಡಳು.
ಒತ್ತಾಯಪೂರ್ವಕವಾಗಿ ಕಣ್ಮುಚ್ಚಿ ಮಲಗಿದರೂ ನಿದ್ರೆ ಮಾತ್ರ ಹತ್ತಿರ ಸುಳಿಯಲಿಲ್ಲ. ಕಳೆದ ಒಂದು ವಾರದ ಹಿಂದೆ ಪಕ್ಷವೊಂದರ ರಾಜಕೀಯ ವ್ಯಕ್ತಿಯೊಬ್ಬರೂ ರಶ್ಮಿಯ ಗಂಡ ರಂಜಿತ್ ನಿಗೆ ಬೆದರಿಕೆಯನ್ನೊಡ್ಡಿದ್ದರು. ‘ಇನ್ನು ಮುಂದೆ ನನ್ನ ಬಗ್ಗೆ ಆಗಲಿ, ನನ್ನ ವ್ಯವಹಾರದಲ್ಲಿ ನೀನು ತಲೆ ಹಾಕಿದರೆ ಹುಷಾರ್! ನಿನ್ನ ಅತಿ ಬುದ್ಧಿವಂತಿಕೆಯ ತಲೆ ಉಳಿಯಲ್ಲ.! ನೀನು ಏನು ಬರೆಯೋದ್ದಿದ್ರೂ ಅದು ನಿನ್ನ ಹತ್ತಿರವೇ ಇಟ್ಕೊ.’ ಎಂದು ಮೊಬೈಲ್ ನಲ್ಲಿಯೇ ಎಚ್ಚರಿಸಿದ್ದನ್ನು ನೆನಪಾಯಿತು.
ಇದೇ ವೇಳೆ ಯಾರೋ ತನ್ನ ಗಂಡನನ್ನು ಬೆನ್ನಟ್ಟಿ ಬರುತಿದ್ದಾರೆ ಎಂದೆನಿಸಿತು. ತಕ್ಷಣವೇ ಮೈಮೇಲೆ ಹಾವು ಹರಿದಾಡಿದಂತಾಗಿ ಗಾಬರಿಯಿಂದ ಎದ್ದು ಕುಳಿತಳು. ಆಗಷ್ಟೇ ರಶ್ಮಿಗೆ ನಿದ್ರೆಯ ಜಂಪು ಹತ್ತುವುದರಲ್ಲಿತ್ತು. ಹಾಸಿಗೆಯಿಂದ ಧಡಕ್ಕನೆಂದು ಏಳುವ ರಭಸಕ್ಕೆ ಮಗು ಕೂಡ ಒಮ್ಮೆಲೆ ಕಣ್ತೆರೆದು ನೋಡಿತು. ಹಾಗೇ, ಮತ್ತೆ ಕಣ್ಮುಚ್ಚಿದಳು. ನಿದ್ರೆಯ ಮಂಪರಿನಲ್ಲಿ ‘ಮಮ್ಮಿ…’ ಎಂಬ ಕಿರು ಧ್ವನಿಯಲ್ಲಿ ಮಗು ನರಳಿತು. ತಾಯಿಯ ಮಡಿಲಿಗೆ ಸೇರಿಕೊಳ್ಳಲು ಅವಸರಿಸಿತ್ತು. ‘ನಾನಿಲ್ಲೇ ಇದ್ದೀನಿ. ಮಲ್ಕೋ ಪುಟ್ಟ’ ಎಂದು ಮಗುವನ್ನು ಸಮಾಧಾನಿಸಲು ಪ್ರಯತ್ನಿಸಿದಳು. ಆದರೆ ರಾಜಕೀಯ ಪುಢಾರಿಯೊಬ್ಬನ ಬೆದರಿಕೆಯ ಮಾತುಗಳು ಮೊಬೈಲ್ ನ ಓಪನ್ ಸ್ಪೀಕರ್ನಲ್ಲಿ ತನ್ನ ಕಿವಿಯಾರೆ ಕೇಳಿಸಿಕೊಂಡಿದ್ದಕ್ಕೆ ಆತಂಕ ಹೆಚ್ಚಾಗತೊಡಗಿತ್ತು. ಯಾರ ದ್ವೇಷ, ಕೋಪಕ್ಕೆ ಏನಾದರೋ ಎಂಬ ಅನುಮಾನ ಸುಳಿಯಿತು. ‘ಬಿಡ್ತು ಅನ್ನು. ಥೂ… ಹಾಗೇನು ಆಗಲ್ಲ ಅವರಿಗೆ’ ಎಂದು ತನಗೆ ತಾನೇ ಸಮಾಧಾನಿಸಿಕೊಳ್ಳಲು ಪ್ರಯತ್ನಿಸಿದಳು. ಆಗಲಿಲ್ಲ.
ರಂಜಿತ್ ನಿಗೆ ಯಾರೋ ಜೀವ ಬೆದರಿಕೆ ಹಾಕಿದವನ ಕುರಿತು ರಶ್ಮಿ ತನ್ನ ಗಂಡನಿಗೆ ಅದೇ ದಿನ ‘ಯಾರವರು?’ ಎಂದು ಪ್ರಶ್ನಿಸಿದಳು. ಅದಕ್ಕೆ ರಂಜಿತ್ ‘ದಿನನಿತ್ಯ ಇಂಥ ಬೆದರಿಕೆ ಕರೆಗಳು ಹತ್ತಾರು ಬರುತ್ತವೆ. ಹೋಗುತ್ತವೆ. ಈ ಗೊಡ್ಡು ಬೆದರಿಕೆಗಳಿಗೆ ಅಂಜುವನಲ್ಲ ನಾನು. ಅದಕ್ಕೆಲ್ಲ ತಲೆ ಕೆಡ್ಸಕ್ಕೊಂಡು, ಅವರಿಗೆ ಹೆದರ್ಕೊಂಡು ಕುಂತ್ ಬಿಟ್ರೆ ಏನೂ ಸಾಧನೆ ಮಾಡಕ್ಕಾಗಲ್ಲ ರಶ್ಮಿ. ಈ ಪತ್ರಿಕಾ ಕ್ಷೇತ್ರನೇ ಹಿಂಗಾದ. ಇದರಲ್ಲಿ ನಮಗ್ಯಾರು ಸ್ನೇಹಿತರಂತ ಇರಲ್ಲ.’ ಪರಿಚಯ ಅಂತ ಮಾಡ್ಕೊಂಡ್ರೆ ಎಲ್ಲರೂ ಆತ್ಮೀಯರೇ. ಕರ್ತವ್ಯ ನಿಭಾಯಿಸುವಾಗ ಪ್ರತಿಯೊಬ್ಬರಿಗೂ ನಾವು ಅಪರಿಚಿತರಂತೆ ನೋಡಬೇಕಾಗುತ್ತದೆ ಎಂದಿದ್ದನು.
‘ಬಡವರ ರಕ್ತ ಹೀರಿ, ತಾವು ಐಷಾರಮದ ಕಾರು, ಬಂಗ್ಲೆಯಲ್ಲಿ ಸುಖವಾಗಿದ್ದು, ಜನರ ಸಮಸ್ಯೆಗಳೇನು ಅಂತ ಅರ್ಥ ಮಾಡಿಕೊಳ್ಳದ ರಾಜಕೀಯ ಜನಗಳನ್ನು ಹೊಗಳಿ ಬರೆದರೆ ಭೇಷ್ ಎನ್ನುವರು. ಅದೇ ಅವರ ತಪ್ಪಿನ ಅರಿವನ್ನು ಮೂಡಿಸಲು ತೆಗಳಿದರೆ ಕೊಚ್ಚಿಬಿಡುವ ಮಾತಾಡುವರು. ನಾವು ಹಾಕಿದ ಓಟಿನಲ್ಲಿ ನೋಟಿನ ಮನೆ ಕಟ್ಟಿಸಿಕೊಂಡವರಿಗೆ ತಕ್ಕ ಪಾಠ ಕಲಿಸಬೇಕು. ಜನರ ಕಣ್ಣಿಗೆ ಮಣ್ಣೆರಚಿ, ಹಣ ಲೂಟಿ ಮಾಡೋರನ್ನ ಯಾವತ್ತೂ ಸುಮ್ನೆ ಬಿಡಲ್ಲ. ನನಗೆ ಇವರೆಲ್ಲ ಯಾವ ಲೆಕ್ಕ ಬಿಡು.’ ಎಂದು ಧೀರ್ಘವಾದ ನಿಟ್ಟುಸಿರು ಬಿಟ್ಟು ಹುಂ…! ಎಂದು ಉಸಿರನ್ನೆಳೆದನು.
ರಂಜಿತ್ ಹೇಳುವುದನ್ನೆಲ್ಲ ಮೌನದಲ್ಲೇ ತಲೆಯಾಡಿಸುತಿದ್ದಳು. ತಿಳಿಯದ ಮಾತಿಗೆ ಕಣ್ಕಣ್ ಬಿಟ್ಟು ನೋಡುತಿದ್ದಳು. ‘ಇನ್ಮೇಲೆ ನೋಡ್ತ ಇರು. ಯಾವ್ಯಾವ ಪಕ್ಷದವರ ಹಣೆಬರಹ ಹ್ಯಾಂಗಾಂಗ್ ಬರೀತಿನಿ ಅನ್ನೋದನ್ನ. ಅದೇ ಅವರಿಗೆಲ್ಲ ಸಿಂಹ ಸ್ವಪ್ನ ಆಗ್ಬೇಕು. ನಾನು ಬರಿಯೋ ವರದಿ-ಲೇಖನಗಳ ಮೇಲೆ ಚುನಾವಣೆ ಫಲಿತಾಂಶದಲ್ಲಿ ಏರುಪೇರು ಮಾಡೇ ಬಿಡ್ತಿನಿ. ಇದು ನಾನು ತೊಟ್ಟಿರುವ ಛಲ, ಬರವಣಿಗೆಯಿಂದ ಬದಲಾವಣೆ ಸಾಧ್ಯ ಎಂಬುದನ್ನು ಸಾಬೀತು ಮಾಡ್ತಿನಿ. ನನ್ನ ಬರಹದ ಬಗ್ಗೆ ನನಗೆ ಆತ್ಮ ವಿಶ್ವಾಸ ಖಂಡಿತ ಇದೆ. ಅನೇಕ ರಾಜಕೀಯ ಪಕ್ಷದವರು ಯಾವ್ಯಾವ ತಪ್ಪುಗಳನ್ನು ಯಾವ ರೀತಿ ಮಾಡ್ತಾರ್, ಜನರನ್ನು ಹ್ಯಾಂಗ್ ಮರಳು ಮಾಡಿ ಓಟ್ ತಗೋತ್ತಾರ್ ಅನ್ನೋದನ್ನ ಬೆಳಕು ಚೆಲ್ತಿನಿ.’ ಎಂದು ದೃಢ ನಿರ್ಧಾರದಿಂದ ಹೇಳಿದನು.
ಈ ಸಮಾಜದ ಜನರ ಕಣ್ಣೆದುರಿಗೆ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರದಲ್ಲಿ ತೊಡಗಿರುವವರ ಚಿತ್ರಣವೇ ತೆರದಿಡ್ತಿನಿ. ಯಾವತ್ತಿಗೂ ಸಮಾಜದ ಹಿತಕ್ಕಾಗಿ ನಾನು ದುಡಿತಿದ್ದೀನಿ ಅಂತ ತಿಳ್ಕೊ. ಇದರಲ್ಲಿ ನನ್ನ ಸ್ವಾರ್ಥ ಅಂತ ಏನೂ ಇಲ್ಲ. ಸಾವಿರಾರು ಜನಕ್ಕ ಮೋಸ ಮಾಡ್ತಿದ್ದಾರ್ ಅಂದ್ರ ಸುಮ್ನೇ ಇರೋಕ್ಕಾಗ್ತದೇನು? ಅಂಥ ಹೊಲಸು ರಾಜಕೀಯದ ಜನಗಳನ್ನು ನೆನಸಕ್ಕೊಂಡ್ರ ಮೈಯೊಳಗಿನ ರಕ್ತ ಹಾಗೇ ತಕತಕ ಕುದಿಯುತ್ತದೆ. ಒಬ್ಬ ನಿಜವಾದ ಪತ್ರಕರ್ತ ಮತ್ತು ಸಮಾಜದ ಒಬ್ಬ ನಿಷ್ಠಾವಂತ ಪ್ರಜೆಯ ಲಕ್ಷಣ ಏನನ್ನಾದು ಆಕ್ರೋಷ, ಹೋರಾಟದಿಂದಲೇ ತಿಳಿತ್ತಾದ್. ಯಾರದೇ ಮುಲಾಜಿನೊಳಗ್ ನಾವಿರೋಲ್ಲ ತಿಳ್ಕೊ. ಬದುಕಿದ್ದರೂ ಅಕ್ಷರದೊಳಗ. ಸತ್ರೂ ಅಕ್ಷರದೊಳಗ್ ನನ್ನ ಹೆಸರು ಜೀವಂತವಾಗಿರ್ಬೇಕು’ ಎಂದು ತನ್ನ ಹೆಂಡತಿಗೆ ಉದ್ದುದ್ದ ಭಾಷಣದ ಉಪದೇಶ ನೀಡಿದನು.
ಹೆಚ್ಚು ಓದಿರದ. ಸಮಾಜದ ಆಗು ಹೋಗುಗಳಿಗೆ ಕಿವಿಗೊಡದ, ಪತ್ರಿಕೆ, ರಾಜಕೀಯದ ಆಳ-ಅಗಲ ಏನೆಂಬುದನ್ನು ಗೊತ್ತಿರದ. ಯಾರ ಬಗ್ಗೆನೂ ತಿಳಿದುಕೊಳ್ಳದ ರಶ್ಮಿಯನ್ನು ರಂಜಿತ್ ತನ್ನಲ್ಲಿರುವ ವಿಚಾರದ ಹೂರಣವನ್ನು ಉಣಬಡಿಸಿ ಗರಬಡಿಸಿದನು. ಅವಳು ಮರು ಮಾತಾಡದೇ ಮೌನವಾಗಿಯೇ ಕೇಳಿಸಿಕೊಂಡಿದ್ದಳು.
ಹಳೆಯ ನೆನಪುಗಳು ರಶ್ಮಿಯ ತಲೆಯೊಳಗೆ ಬಿಡದೇ ಗುಂಗಿ ಹುಳುವಿನಂತೆ ಗುನುಗುತಿದ್ದವು. ಗಂಡನ ಇರುವಿನ ಬಗ್ಗೆ, ಅವನೊಟ್ಟಿಗೆ ನಾಲ್ಕಾರು ಜೀವಗಳ ಜವಾಬ್ದಾರಿ. ಒಂದು ಪುಟ್ಟ ಸಂಸಾರದಲ್ಲಿ ಉಡಾಳನಾಗಿ ತಿರುಗುತ್ತಿದ್ದ ರಂಜಿತ್ ನ ಒಬ್ಬನೇ ಒಬ್ಬ ತಮ್ಮ ಷಣ್ಮುಖ. ಒಬ್ಬ ತಂಗಿ. ಈಗ ಇವರ್ಯಾರ ಹೊಣೆಗಾರಿಕೆನೂ ಇರಲಿಲ್ಲ. ಆದರೆ ‘ಹೆಂಡತಿ, ಒಬ್ಬ ಪುಟ್ಟ ಮಗಳು ಇದ್ದಾಳೆ ಎಂಬ ಪರಿಜ್ಞಾನ ಇಲ್ಲದೇ ಹೋಯಿತ್ತಲ್ಲ ಅವರಿಗೆ’ ಎಂದು ಅಸಮಾಧಾನ ಪಟ್ಟಿದ್ದಳು. ಕೇವಲ ಸಮಾಜ, ನ್ಯಾಯ, ಹೋರಾಟ ಅಂತ ರಂಜಿತ್ ಓಡಾಡ್ತ ಇರೋದನ್ನು ಕಂಡು ರಶ್ಮಿ ತನ್ನೊಳಗೆ ತಾನು ಕೋಪಗೊಂಡಿದ್ದಳು. ಆದರೆ ರಂಜಿತ್ ನೆದುರು ತನ್ನ ವೇದನೆಗಳನ್ನು ಹೇಳಿಕೊಳ್ಳಲಾಗದೇ ಪರಿತಪಿಸುತಿದ್ದಳು. ಗಂಡ ಒಬ್ಬ ಸಮಾಜದ ಗೌರವಾನ್ವಿತ ವ್ಯಕ್ತಿ. ಸಮಾಜ ಸುಧಾರಕ ಎಂಬ ಹೆಮ್ಮೆಯೊಂದು ಅವಳಿಗೆ ಸಮಾಧಾನ ತಂದಿತ್ತು. ಆರ್ಥಿಕ ಸ್ಥಿತಿಯಿಂದ ದುರ್ಬಲರಾಗಿ ಇರುವುದನ್ನು ಕೊರೆಯುವ ಚಿಂತೆಯಾಗಿ ಬಿಟ್ಟಿತ್ತು. ತನ್ನ ವಯೋಮಾನದ ಗೆಳತಿಯರ ಗಂಡಂದಿರೆಲ್ಲ ಲಕ್ಷ, ಕೋಟಿ ವರಮಾನದವರಾಗಿ ಬಾಳುತಿದ್ದರು. ನಾವಿನ್ನೂ ಸಾವಿರಾರು ರೂಪಾಯಿಗಳಿಗಷ್ಟೇ ತೃಪ್ತಿ ಪಡಬೇಕಾಗಿದೆ ಎಂದು ಒಳಗೊಳಗೆ ಗೊಣಗಿಕೊಂಡು ತನ್ನ ಬದುಕಿನ ಬಗ್ಗೆಯೇ ಪಿಚ್ಚೆನಿಸಿತ್ತು. ಇಂತಹ ಒಂದು ಒಳ ವೇದನೆ ತೋಡಿಕೊಳ್ಳಲು ಸಮಯ ನೋಡಿ ಮಾತಾಡಬೇಕು ಎನಿಸಿತ್ತು. ಅವರು ಮೂಡನಲ್ಲಿದ್ದಾಗಲೇ ಇದೆಲ್ಲ ಸಾಧ್ಯ ಎಂದರಿತಳು.

ರಂಜಿತ್ ನ ತಮ್ಮ ಷಣ್ಮುಖ ಗೆಲ್ಲುವ ಕುದುರೆಯ ಬಾಲ ಹಿಡಿದು ಓಡಾಡುವ ವ್ಯಕ್ತಿ. ಸಾಕಷ್ಟು ರಾಜಕೀಯ ಪಕ್ಷಗಳನ್ನು ಬದಲಾಯಿಸಿ ರಾಜಕೀಯದ ಅನುಭವ ಹೊಂದಿದ್ದ. ಕಾಲಕ್ಕೆ ತಕ್ಕಂತೆ ಬದಲಾಗಿದ್ದನು. ಸಮಯವಕಾಶ ಕೂಡಿ ಬಂದರೆ ಅವಕಾಶವಾದಿಯಾಗಿ ಬಾಚಿಕೊಳ್ಳುವ ಸ್ವಭಾವ ಅವನಲ್ಲಿತ್ತು. ದಿನದ ಹೆಚ್ಚಿನ ಸಮಯ ಜನನಾಯಕರು, ರಾಜಕೀಯ ಪ್ರತಿನಿಧಿಗಳ ಹಿಂದೆ, ಹಿಂದೆನೇ ಕಳೆಯುತಿದ್ದನು. ಹೆಸರಾಂತ ರಾಜಕೀಯ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದನು ಶಣ್ಮುಖ. ಮಂತ್ರಿಗಳು, ಶಾಸಕರು, ಸಚಿವರುಗಳೆಲ್ಲ ಶಣ್ಮುಗಂ ಎಂದು ಕರೆದು ಸಂಬೋಧಿಸುತಿದ್ದರು. ಹತ್ತನೇ ಪರೀಕ್ಷೆಯಲ್ಲಿ ಪೇಲಾದ ಶಣ್ಮುಖ ನೂರಾರು ಲಕ್ಷದ ಆಸ್ತಿಗೆ ವಾರಸುದಾರನಾಗಿದ್ದನು. ಒಂದಿಷ್ಟು ಹಣ ಸಂಪಾದನೆ ಮಾಡಿಕೊಂಡು ಪತ್ರಕರ್ತ ಅಣ್ಣನನ್ನೇ ಅಣಕಿಸುವಷ್ಟು ರೀತಿಯಲ್ಲಿ ಅವನ ಜೀವನ ಶೈಲಿ ಬದಲಾಯಿಸಿಕೊಂಡಿದ್ದನು. ಶಣ್ಮುಖನೆಂದರೆ ಸಾಕು. ಮನೆಗೆ ಬಂದಾಗಲೊಮ್ಮೆ ಖುಷಿ ಪಡುವ ತಾಯಿ, ತಂಗಿಗೆ ಹೊಸ ಬಟ್ಟೆ, ಬರೆ, ಹಬ್ಬ ಹರಿದಿನಗಳಲ್ಲಿ ಎಲ್ಲ ಬೇಕು ಬೇಡಗಳನ್ನು ಪೂರೈಸುತಿದ್ದನು. ವಿಧವಿಧವಾದ ತಿಂಡಿ ತಿನಿಸು ತರುತಿದ್ದನು. ಇದರಿಂದ ಅಣ್ಣ ಅತ್ತಿಗೆ ಬಿಟ್ಟರೆ ಬಂಧುಗಳೆಲ್ಲ ಶಣ್ಮುಖನನ್ನೇ ನೆನೆಯುತಿದ್ದರು.
ಒಂದಿನ ರಂಜಿತ್ ನ ತಾಯಿ ‘ತಮ್ಮನ ಅನ್ನದ ಋಣವೇ ನಿಮ್ಮನ್ನು ಬದುಕಿಸಿದೆ. ಅವನ ಶ್ರಮದಿಂದಲೇ ಎಲ್ಲರನ್ನು ಸಾಕುತಿದ್ದಾನೆ ಅಂತ ಅರ್ಥ ಮಾಡ್ಕೊಳ್ರಿ. ನೀನು ತರುವ ಆದಾಯದಲ್ಲಿ ನಿನ್ನ ಹೆಂಡತಿ, ಮಗಳಿಗೆ ಸಾಕಾಗಲ್ಲ. ಇನ್ನೂ ನನ್ನನ್ನು ಸಾಕುವಂಥ ಉತ್ತಮ ಸ್ಥಿತಿ ನಿನಗಿಲ್ಲ. ಇನ್ಮೇಲೆ ನಾನು, ನಿನ್ ತಂಗಿ ಶಣ್ಮುಖನ ಬಳಿ ಇರ್ತೆವೆ.’ ಎಂದು ಖಡಾಖಂಡಿತವಾಗಿ ನುಡಿದಿದ್ದಳು ಹೆತ್ತಮ್ಮ. ಸ್ವತ: ತಾಯಿ ಆದವಳು ಈ ರೀತಿ ಹೇಳಿ ಅಣಕಿಸಿದಳು. ಸ್ವಾಭಿಮಾನಕ್ಕೆ ಕೆಣಕಿದಂತಾಗಿತ್ತು ರಂಜಿತ್ ನಿಗೆ. ಬೇರೆಯವರ ಹಂಗಿನಲ್ಲಿ ನೀನು ಬದುಕುತಿದ್ದಿಯಾ ಎಂದು ನೇರವಾಗಿ ಹೇಳದಿದ್ದರೂ ಅರ್ಥಮಾಡಿಕೊಂಡನು. ಇದರಿಂದ ‘ಯಾರ ಹಂಗಿನಲ್ಲೂ ನಾನು ಬದುಕುವುದಿಲ್ಲ. ನಮಗೆ ನೀವು ಮಾಡಿದ ಖರ್ಚು ಏಷ್ಟಾಗಿದೆ ಅಂತ ಹೇಳಿ. ಬಿಸಾಕ್ತಿನಿ’ ಎಂದು ಹೇಳಿ ಹೆಂಡತಿ ಪುಟ್ಟ ಮಗುವಿನೊಂದಿಗೆ ಉಟ್ಟ ಬಟ್ಟೆಯಲ್ಲಿಯೇ ಮನೆಬಿಟ್ಟು ಹೊರಗಾಗಿದ್ದನು.
ಹೊಲಸು ರಾಜಕೀಯ ಜನರೊಂದಿಗೆ ಬೆರೆತು ಹರಾಮಿ ದುಡ್ಡಿನಲ್ಲಿ ಬಾಳುತಿದ್ದ ಷಣ್ಮುಖನಲ್ಲಿ ಇರುವ ದುಷ್ಟ ವಿಚಾರಗಳು ರಂಜಿತ್ ನಿಗೆ ಹಿಡಿಸಲಿಲ್ಲ. ವರ್ಷದ ಹಿಂದೆ ಸ್ವಂತ ಮನೆಯನ್ನು ಬಿಟ್ಟು, ಇದ್ದಂಥ ಎಲ್ಲ ಸಂಬಂಧಿಕರನ್ನು ದೂರ ಮಾಡಿಕೊಂಡಿದ್ದನು. ಬಾಡಿಗೆ ಮನೆಯೊಂದರಲ್ಲಿ ಹೆಂಡತಿ ಮಗಳೊಂದಿಗೆ ವಾಸವಾಗಿದ್ದ ರಂಜಿತ್. ಒಬ್ಬ ಪತ್ರಕರ್ತನಾಗಿ ದುಡಿಯುವ ಹಣಕ್ಕಿಂತ ರಾಜಕೀಯ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಷಣ್ಮುಖ ಲಕ್ಷಾಧಿಪತಿಯಾಗಿದ್ದನು. ಇಡೀ ಊರಿಗೆ ಚಿರಪರಿಚಿತನಾಗಿ ಬೆಳೆದನು. ಕಣ್ಮುಚ್ಚಿ ಕಣ್ತೆರೆಯುವುದರೊಳಗೆ ಲಕ್ಷಾಂತರ ದುಡ್ಡಿಗೆ ಒಡೆಯನಾಗಿದ್ದ. ಹಣದಿಂದಲೇ ಸಂಬಂಧಗಳನ್ನು ಅಳೆದಿರುವ ತಮ್ಮ, ತಂಗಿ, ತಾಯಿಯಿಂದ ಶಾಶ್ವತವಾಗಿ ದೂರವಾಗಿ ಉಳಿಯುವ ಪ್ರಯತ್ನ ಸಫಲಗೊಂಡಿತ್ತು. ರಂಜಿತ್ ಚಿಕ್ಕವನಿರುವಾಗಲೇ ತಂದೆ ಅನಾರೋಗ್ಯದಿಂದ ಎಂದೋ ಒಂದಿನ ಇಹಲೋಕ ತ್ಯಜಿಸಿರುವುದನ್ನು ಅಸ್ಪಷ್ಟವಾಗಿ ನೆನಪಿತ್ತು. ಅಪ್ಪನ ಸಾವಿನ ಸುದ್ಧಿ ಕೇಳಿ ಗೊಳೋ ಅಂತ ಅತಿದ್ದು ಬಿಟ್ಟರೆ ಬೇರೇನೂ ನೆನಪಿರಲಿಲ್ಲ.
ಶಣ್ಮುಖನ ಸಂಪಾದನೆ, ರಾಜಕೀಯ ವರ್ಚಸ್ಸನ್ನು ನೋಡಿ ಉದ್ಯಮಿಗಳು, ರಾಜಕೀಯ ಮರಿ ಪುಢಾರಿಗಳು, ಸರ್ಕಾರಿ ನೌಕರರು ಹೆಣ್ಣು ಕೊಡಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು. ‘ಇದೊಂದು ಎಲೆಕ್ಷನ್ ಮುಗಿಯಲಿ ಆಮೇಲೆ ಮದುವೆ, ಮುಂಜಿ ಎಲ್ಲ ಎಂದು ಹೇಳಿ’ ಜನರ ಬಾಯಿ ಮುಚ್ಚಿಸಿದನು. ಬೆಳಗಾಗುತಿದ್ದಂತೆ ಮತದಾನ ಮಾಡುವ ಹಕ್ಕು ಎಲ್ಲರಿಗಿತ್ತು. ಈ ಸಂದರ್ಭದಲ್ಲಿ ಎಲ್ಲಿ ಏನು, ಹೇಗೆ, ಜಗಳ, ಗಲಾಟೆ, ಪ್ರತಿಭಟನೆಗಳು ನಡೆಯುತ್ತವೆಯೋ ಎಂದು ರಶ್ಮಿಯ ಮನಸ್ಸಿನಲ್ಲಿ ಚಿಂತನ ಮಂಥನ ಶುರುವಾಗಿತ್ತು.
ಹಣ ಸಂಪಾದನೆಯ ಮಾರ್ಗ ಹುಡುಕದೇ, ಸಂಸಾರದ ಬಗ್ಗೆ ಒಂಚೂರು ಚಿಂತನೆ ಇಲ್ಲದಂತಿದ್ದ. ಸ್ವಾಭಿಮಾನದಿಂದ ಬದುಕುತಿದ್ದ ರಂಜಿತ್ನ ಆದಾಯ ಹೇಳಿಕೊಳ್ಳುವಂಥದ್ದೇನು ಇರಲಿಲ್ಲ. ಹೊಟ್ಟೆ ಬಟ್ಟೆಗೆ ಸಾಕಾಗದಿದ್ದರೂ ಬಿಗುಮಾನದಿಂದ ಜೀವನವನ್ನು ಸಾಗಿಸುತಿದ್ದನು. ‘ಎಷ್ಟೇ ಬೇಡವೆಂದರೂ ಈ ಹಾಳಾದ ಪತ್ರಿಕೋದ್ಯಮ ಅವರು ಬಿಡಲ್ಲ. ನಾನು ಈ ಸಂಸಾರದಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ’ ಎಂದು ಹಲವು ಬಾರಿ ಮನಸ್ಸಿನಲ್ಲೇ ಏನೆಲ್ಲ ಲೆಕ್ಕಾಚಾರ ಹಾಕಿದ್ದಳು. ವಿಚಾರಗಳೆಲ್ಲವೂ ತಲೆ ಕೆಳಗಾಗಿಸಿದವು. ಬರೀ ಪತ್ರಿಕೆ, ಸಮಾಜ, ನ್ಯಾಯ ಅಂತ ಹೋರಾಡುತ್ತ, ಅನ್ಯಾಯ, ಭ್ರಷ್ಟಾಚಾರ, ಮೋಸಕ್ಕೆ ಉರಿದೇಳುವ ರಂಜಿತನಿಗೆ ಊರೆಲ್ಲ ಶತೃಗಳೇ ಆಗಿದ್ದರು. ರಾಜಕೀಯ ವ್ಯಕ್ತಿಗಳಲ್ಲಿ ಹಲವರು ಸ್ನೇಹಿತರಾಗಿದ್ದರೂ ಕೂಡ ಕೆಲವರು ಒಳಗೊಳಗೆ ಕತ್ತಿ ಮಸಿಯುತಿದ್ದರು. ಮೇಲ್ನೋಟಕ್ಕೆ ಮಾತ್ರ ಇಡೀ ಸಮಾಜ ತನ್ನ ಗಂಡನಿಗೆ ಗೌರವಿಸುತ್ತಿದೆಯೋ ಅಥವಾ ಇದೇ ವಾಸ್ತವ ಏನು? ಎಂಬ ಅನುಮಾನ ರಶ್ಮಿಗೆ ಕಾಡಿತ್ತು.
ಯಾರೊಬ್ಬರನ್ನು ಬಿಡದೇ ರಾಜಕೀಯದ ಶಾಸಕ, ಸಚಿವರು, ಮಂತ್ರಿಗಳಿಂದ ಹಿಡಿದು ಗ್ರಾಮ ಪಂಚಾಯತ್, ಜಿಲ್ಲಾ, ತಾಲ್ಲೂಕಾ ಪಂಚಾಯತ್ ಹೀಗೆ ಮುಂತಾದ ಇಲಾಖೆಗಳ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅವ್ಯವಹಾರ, ಭ್ರಷ್ಟಾಚಾರದ ಬಗ್ಗೆ ಪತ್ರಿಕೆಯಲ್ಲಿ ವರದಿಗಳನ್ನು ಬರೆದು ಮುಲಾಜಿಲ್ಲದೇ ಪ್ರಕಟಿಸುತಿದ್ದನು. ಇದರಿಂದ ಹಲವರ ವಿರೋಧ ಕಟ್ಟಿಕೊಂಡು ನಿಷ್ಠುರತೆಗೆ ಒಳಗಾಗಿದ್ದನು. ಜಡಗಟ್ಟಿದ ಸಮಾಜದ ಹೊಲಸನ್ನು ಗುಡಿಸಲು ಸಂಕಲ್ಪ ತೊಟ್ಟಿಂತಿತ್ತು. ಹಲವು ರಾಜಕೀಯ ಜನರ ವಾಸ್ತವಿಕತೆಯ ಬಗ್ಗೆ ಜಗಜ್ಜಾಹಿರು ಮಾಡುವುದಕ್ಕೆ ತೊಡೆ ತಟ್ಟಿ ನಿಂತಿದನು. ಅದಕ್ಕಾಗಿ ರಶ್ಮಿಯ ಮನದಲ್ಲಿ ಕಷ್ಟವಿಲ್ಲದ ಬದುಕು ಸಾಗಿಸುವುದರ ಬಗ್ಗೆ ಸದಾ ಅಪನಂಬಿಕೆ ಬೇರೂರಿತ್ತು. ಆ ದೇವರೆ ಬಂದು, ‘ಇಷ್ಟು ದಿನ ಪರರಿಗಾಗಿ ಬದುಕಿದ್ದು ಸಾಕು. ನಿನಗಾಗಿ, ನಿನ್ನ ಕುಟುಂಬಕ್ಕಾಗಿ ಅಂತ ಏನಾದರೂ ಸಂಪಾದನೆ ಮಾಡಿ ಶ್ರೀಮಂತನಾಗು’ ಎಂದು ಬುದ್ಧಿವಾದ ಹೇಳಿದರೂ ರಂಜಿತ್ ವಿಚಲಿತನಾಗುವ ಹಾಗಿರಲಿಲ್ಲ. ತಟಸ್ಥನಾಗಿ ತನ್ನ ವಿಚಾರ ಲಹರಿಯಿಂದ ದಡ ಸೇರುವ ಆಸೆಯೂ ಅವನಿಗಿರಲಿಲ್ಲ. ದಡ ಸೇರಿದರೂ ಮತ್ತೆ ಹಿಂತಿರುಗಿ ಹೋಗುವ ಅಲೆಗಳಂತೆ ನೆಲೆಯಿಲ್ಲದ ಸ್ಥಾನದಲ್ಲಿಯೇ ಏನೋ ಒಂಥರ ನೆಮ್ಮದಿಯನ್ನು ಕಂಡುಕೊಳ್ಳುವ ಇಚ್ಛೆ ಅವನದ್ದಾಗಿತ್ತು.
ಎಂದಿನಂತೆ ರಸ್ತೆಗಳಲ್ಲಿ ವಾಹನಗಳ ಓಡಾಟ. ರಸ್ತೆ ಬದಿಯಿಂದ ಜನಗಳ ಕಾಲ್ ನಡಿಗೆ, ಪಿಸುಗುಸು ಮಾತು, ಗದ್ದಲ, ಮಕ್ಕಳ ಅಳು, ದೊಡ್ಡವರ ಜಗಳ, ತಕರಾರು, ಹಾಲು ಮಾರುವವನ ಕೂಗಾಟ, ಪೇಪರ್ ಹಾಕುವವನ ಅವಸರ. ತರಕಾರಿ ಮಾರುವವರ ಕಿರುಚಾಟ ಕಿವಿಗೆ ಬಿದ್ದಿತ್ತು. ಥಟ್ಟನೆಂದು ಎದ್ದು ಮುದುಡಿದ ಹಾಸಿಗೆಯಲ್ಲಿ ಕುಳಿತು ಕಣ್ಣುಜ್ಜಿಕೊಂಡಳು. ಬಾಗಿಲ ಸಂದಿನಲ್ಲಿ ಬೆಳಕು. ಸೂರ್ಯನ ಕಿರಣಗಳು ಪ್ರಖರವಾಗಿ ಬೀರುತಿದ್ದವು. ಚಿಲಕವನ್ನು ತೆಗೆದಾಗ ಒಮ್ಮೆಲೆ ಕಣ್ಣು ತೆರೆದು ನೋಡಲು ಆಗಲಿಲ್ಲ. ಆಗಲೇ ಬೆಳಗಿನ 8 ಘಂಟೆ ಆಗಿತ್ತು. ಒಂದು ಹಗಲು ಮತ್ತು ರಾತ್ರಿ ಕಳೆದು ಸೂರ್ಯನ ಬೆಳಕು ಮೂಡಿದರೂ ರಂಜಿತ್ ಮನೆಗೆ ಬಂದು ಹೋಗುವ ಸೂಚನೆಯಿರಲಿಲ್ಲ. ರಶ್ಮಿಗೆ ಇನ್ನಷ್ಟು ಭಯ, ಆತಂಕ! ಹೆಚ್ಚಾಯಿತು. ಪರಿಚಿತರಿಗೆ ಯಾರನ್ನಾದರೂ ಕೇಳಬೇಕೆನಿಸಿದರೂ ಅವಳ ಬಳಿ ಮೊಬೈಲ್ ಕೂಡ ಇರಲಿಲ್ಲ. ಎಂದೋ ಒಂದಿನ ಅಣ್ಣ ತಮ್ಮನ ಗಲಾಟೆಯೊಂದರಲ್ಲಿ ಇದ್ದೊಂದು ಮೊಬೈಲ್ ಹ್ಯಾಂಡ್ಸೆಟ್ ನೆಲಕ್ಕೆ ಬಿದ್ದು ಚೂರು ಚೂರಾಗಿತ್ತು. ಅದನ್ನು ರಿಪೇರಿ ಮಾಡಿಸುವುದಕ್ಕೂ ಆಸಕ್ತಿ ತೋರಲಿಲ್ಲ. ರಂಜಿತ್ ನ ಇಂತಹ ಬೇಜವಾಬ್ದಾರಿತನಕ್ಕೆ ಮರುಗಿದಳು ರಶ್ಮಿ. ಕಣ್ಣಿನಿಂದ ಹನಿಗಳು ಕೆನ್ನೆಗುಂಟ ಜಾರಿ ತೊಟ್ಟಿಕ್ಕಿದವು.
ಎಂದಿಗಿಂತ ಹೆಚ್ಚು ವಾಹನಗಳ ಕರ್ಕಶವಾದ ಶಬ್ಧ! ಗುಂಪು ಗುಂಪು ಜನಗಳ ಓಡಾಟ. ಮನೆ ಮನೆಗೆ ಬಂದು ಹೋಗುತ್ತಿರುವ ಆಟೋ, ಜೀಪ್, ಬೈಕ್ ಗಳಂಥ ವಾಹನಗಳಲ್ಲಿ ವಯಸ್ಸಾದವರನ್ನು ಹತ್ತಿಸಿಕೊಂಡು ತಿರುಗಾಡುತ್ತಿರುವ ಯುವಕರ ದಂಡು. ಬೆರಳಿಗೆ ಕಪ್ಪು ಶಾಯಿ ಹಚ್ಚಿಕೊಂಡು ಬಂದವರ ಮುಖದಲ್ಲಿ ಕಾಣುತ್ತಿರುವ ಮಂದಹಾಸ. ಊರಂತ ಊರು, ಪಟ್ಟಣಗಳೆಲ್ಲ ಮತ್ತೇರಿದಂತೆ ನರ್ತಿಸುತ್ತಿರುವುದನ್ನು ಗೋಚರಿಸಿತ್ತು.
ಚಹಾದಂಗಡಿ, ಹೊಟೇಲ್, ಪಾರ್ಕನಲ್ಲಿ ಸೇರಿದ ಜನರ ಕೈಯಲ್ಲಿ ವಿವಿಧ ಪತ್ರಿಕೆಗಳಿದ್ದವು. ದಿನ ಪತ್ರಿಕೆಗಳ ಪುಟಗಳನ್ನು ತಿರುವುತ್ತ ಚುನಾವಣೆಯ ಕಾವು ಎಲ್ಲಿ ಹೇಗೆ? ಏನೇನಾಗಿದೆ ಎಂದು ತಿಳಿದುಕೊಳ್ಳುವ ಧಾವಂತದಲ್ಲಿ ಮುಳುಗಿ ಹೋಗಿದ್ದರು. ಮುಂತಾದೆಡೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಆರೋಪದಡಿ ಅಭ್ಯರ್ಥಿಗಳ ತನಿಖೆ ಶುರುವಾಗಿತ್ತು. ಕೆಲವರಿಗೆ ವಾರಂಟ್ ಜಾರಿಯಾದರೆ, ಇನ್ನೂ ಕೆಲವರು ಬಂಧನಕ್ಕೊಳಗಾಗಿದ್ದರು. ಚುನಾವಣೆ ಪ್ರಯುಕ್ತ ಸರಬರಾಜಾಗುತಿದ್ದ ಸಾರಾಯಿ ಜಪ್ತಿ. ಮತದಾರರಿಗೆ ಆಸೆ, ಆಮಿಷಕ್ಕೆ ಒಳಪಡಿಸಲು ಕೋಟಿ ಕೋಟಿ ಹಣ ರವಾನೆ, ಸಿಕಿಬಿದ್ದ ಖೋಟಾ ನೋಟುಗಳು, ಮತಯಾಚನೆಗಾಗಿ ಜನರ ಮನೆ ಬಾಗಿಲಿಗೆ ಹೋಗಿ ನೋಟಿನ ಕಂತೆಗಳನ್ನೇ ಹಂಚಿದ ವರದಿ. ಹೀಗೆ ಮುಂತಾದ ಹಗರಣಗಳು ಜನರನ್ನು ಮನರಂಜನೆ ನೀಡಿದರೆ ಅನೇಕರಲ್ಲಿ ಕಸಿವಿಸಿ ಉಂಟಾಗಿತ್ತು. ತಮಗೆ ಬರಬೇಕಾದ ಹಣ ಕೈ ಸೇರುವುದೋ ಇಲ್ಲವೋ ಎಂಬ ತಳಮಳಕ್ಕೆ ಒಳಗಾಗಿದ್ದವರು ಅನೇಕರು. ಪತ್ರಿಕೆಗಳಲ್ಲಿ ಅಚ್ಚಾದ ರಾಜಕೀಯ ಸುದ್ಧಿಗಳನ್ನು ನೋಡಿ ಬೆಚ್ಚಿ ಬೆರಗಾಗಿದ್ದರು. ಹಲವು ಕುಗ್ರಾಮಗಳಲ್ಲಿ ಸರ್ಕಾರದ ಸೌಲಭ್ಯಗಳಿಲ್ಲದೇ ಮತದಾನ ಬಹಿಷ್ಕಾರ. ಬೆದರಿಕೆ, ಮೂಲಭೂತ ಸೌಲಭ್ಯಗಳಿಂದ ಸೊರಗುತ್ತಿರುವ ಜನರ ಹೋರಾಟ, ಪ್ರತಿಭಟನೆಗಳು ಅಲ್ಲಲ್ಲಿ ಶುರುವಾಗಿದ್ದವು. ಎಲ್ಲವೂ ತಣ್ಣಗಿದೆ ಎನ್ನುವಷ್ಟರಲ್ಲಿ ಚುನಾವಣೆ ಕಾವು ಇನ್ನಷ್ಟು ಬಿಸಿಲಿನ ತಾಪಮಾನಕ್ಕಿಂತ ಜೋರಾಗಿಯೇ ಇತ್ತು.
ಹನುಮಾನ ದೇವರ ಕಟ್ಟೆಯ ಮೇಲೆ ಹರಟುತ ಕುಳಿತಿದ್ದ ಯುವಕರ ಗುಂಪಿನ ಮಧ್ಯೆ, ವಯಸ್ಸಾದ ಒಂದಿಬ್ಬರು ಮತದಾನ ಮಾಡಿ ಬಂದು ಕುಳಿತಿದ್ದರು. ಅದರಲ್ಲೊಬ್ಬ ಸಾಮಾಜಿಕ ಕಾರ್ಯಕರ್ತ ಚೆನ್ನಮಲ್ಲೇಶ ರಾಜಕೀಯ, ದೇಶ, ವಿದೇಶ ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುತಿದ್ದನು. ಅದೇ ಸಮಯಕ್ಕೆ ಬಂದ ನಂದೀಶ ಎಂಬ ಕಾಲೇಜ್ ಸಹಪಾಠಿ ‘ಏನು ಸಾಹೇಬ್ರು ಇವತ್ತು ಬಿಡುವಾಗಿದ್ದಿರಿ. ಓಟ್ ಹಾಕಿ ಬಂದು ಕುಂತಿರೇನು?’ ಎಂದು ಕೇಳಿದ್ದೆ ತಡ. ಎಲ್ಲಿ ತುಂಬಿಕೊಂಡಿತ್ತೋ ಚೆನ್ನಮಲ್ಲೇಶನಿಗೆ ಆಕ್ರೋಷ. ಓಟು ಎಂದಾಕ್ಷಣ!? ಆವೇಷದಲ್ಲಿ ಕಣ್ಣು ಕೆಂಪು ಕೆಂಪಾಗಿ ಕೆಂಡದುಂಡೆಯಂತೆ ಬಿಂಬಿಸಿದನು. ಮೈಯೆಲ್ಲ ಚೇಳು ಹರಿದಾಡಿದಂತಾಗಿ ಕುಳಿತಿದ್ದವನು ವೀರಭದ್ರನ ಅವತಾರ ಎತ್ತಿದಂತೆ ವೀರಾವೇಷದಲ್ಲಿ ಎದ್ದು ನಿಂತನು.
ಚೆನ್ನಮಲ್ಲೇಶನ ಶರೀರದ ಕಣಕಣದಲ್ಲೂ ಬಿಸಿರಕ್ತ ತಕತಕನೇ ಕುದಿಯಲು ಹತ್ತಿತು. ‘ಯಾರು ಗೆದ್ದು ಬಂದು ಏನು ಉದ್ಧಾರ ಮಾಡ್ಯಾರಂತ ಓಟು ಹಾಕಬೇಕು? ಗಲ್ಲಿ ಗಲ್ಲಿಗೂ ಚರಂಡಿಗಳಿಲ್ಲ. ದಶಕಗಳಿಂದಲೂ ಹೊಲಸು ನಾರುತ್ತಿರುವ ಪರಿಸರಕ್ಕೆ ಸ್ವಚ್ಛತೆ ಮಾಡುವ ಕಾಳಜಿ ಯಾವನಿಗೂ ಇಲ್ಲ. ರೋಗ, ರುಜಿನಕ್ಕೆ ಬಲಿಯಾಗುತ್ತಿರುವ ಮಕ್ಕಳ, ಮಹಿಳೆಯರ ಆರೋಗ್ಯ ಕಾಪಾಡಲು ಒಂದು ಸೂಕ್ತವಾದ ಸರ್ಕಾರಿ ಆಸ್ಪತ್ರೆಯಿಲ್ಲ. ಬಡವರಿಗಾಗಿ ಇರುವ ಯಾವುದೇ ಯೋಜನೆಗಳು ಮನೆ ಬಾಗಿಲಿಗೆ ಬರುತ್ತಿಲ್ಲ ಎಂಬ ಕೊರಗಿನಲ್ಲಿ ಬಡವರನೇಕರು ಬೀದಿ ಪಾಲಾಗಿದ್ದಾರೆ’ ಎಂದು ಗುಡುಗಿದನು.
‘ಯೋಜನೆಗಳ ಲಾಭ ಪಡೆಯುವ ಫಲಾನುಭವಿಗಳು ಕಚೇರಿಗಳಿಗೆ ತಿರುಗಾಡಿ ಸುಸ್ತಾದರೂ, ಅವರಿಗಿನ್ನೂ ಸರ್ಕಾರದಿಂದ ಘೋಷಣೆ ಆದಂತೆ ಯಾವುದೇ ಫಲ ಸಿಕ್ಕಿಲ್ಲ. ಫಲಾಪೇಕ್ಷೆ ಬಯಸಿ ಸರ್ಕಾರಿ ಇಲಾಖೆಗಳಿಗೆ ಚಪ್ಪಲಿ ಹರಿದುಕೊಂಡು, ನೂರಾರು ಸಲ ಚಕ್ಕರ್ ಹೊಡೆದರೂ ಸಮಯಕ್ಕೆ ಸರಿಯಾಗಿ ಸಿಗದ ಅಧಿಕಾರಿಗಳು. ಇದರ ಬಗ್ಗೆ ಚಕಾರ ಎತ್ತದ ಜನಪ್ರತಿನಿಧಿಗಳು, ಅಧಿಕಾರದ ಗದ್ದುಗೆಯಲ್ಲಿದ್ದಾಗ ತಮ್ ತಮ್ಮ ವಯಕ್ತಿಕವಾದ ಬದುಕನ್ನೇ ನೆಚ್ಚಿಕೊಂಡಿರ್ತಾರೆ. ಒಂದು ಸಾರಿ ಗೆದ್ದು ಬಂದರಂದ್ರ ಮುಗೀತು. ಮೂರು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ, ಹಣ ಸಂಪಾದಿಸಿಕೊಂಡಿರ್ತಾರ್. ಬಡವರು ಬಡವರಾಗಿಯೇ ಉಳಿತಿದ್ದಾರ್. ಶ್ರೀಮಂತ ಜನ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಲಕ್ಕೆ ತಕ್ಕಂತೆ ನಟಿಸುತಿದ್ದಾರ. ಎಲೆಕ್ಷನ್ ಅಂತ ಬಂದಾಗಲೇ ಅವರೆಲ್ಲ ಬಡವರ ಮನೆ ಬಾಗಿಲಿನತ್ತ ಮೂಸಿ ನೋಡುವುದು ತಿಳ್ಕೊಳ್ರಿ.’ ಎಂದು ಮನವರಿಕೆ ಮಾಡಲು ಪ್ರಯತ್ನಿಸುತಿದ್ದನು.
‘ಹಸಿವಿನಿಂದ ನರಳುವ ನಾಯಿಗಳ ತರ ಮನೆ ಮನೆಗೆ ಬಂದು, ಕೈ ಜೋಡಿಸಿ ಓಟು ಕೇಳ್ತಾರ್. ಗೆದ್ದು ಬಂದ್ರೂ ಅಂದ್ರ ನಮ್ಮನ್ನೇ ಝಾಡಿಸಿ ಒದ್ದು ಕಳಿಸ್ತಾರ್. ಇಂಥವರಿಗಿ ನಾವು ಓಟು ಕೊಡ್ಬೇಕಾ? ಹೇಳು ನಂದೀಶ. ನೀನೊಬ್ಬ ವಿದ್ಯಾವಂತ. ಬುದ್ಧಿವಂತ. ಚುನಾವಣೆಗೆ ನಿಂತಿರುವರಲ್ಲಿ ಯಾರೊಬ್ಬರಾದರೂ ನಿನಗೆ ಉತ್ತಮರಾಗಿ ಕಾಣ್ತಾರೇನು ಹೇಳು. ಅಂಥವರೇನಾದ್ರೂ ಇದ್ರ, ನಿನಗಿಂತ ಮುಂಚೆ ನಾನೇ ಓಟ್ ಹಾಕಿ ಬರ್ತಿದ್ದೆ. ‘ದೇವರು ವರ ಕೊಟ್ರೂ, ಪೂಜಾರಿ ಬಿಡಲಿಲ್ಲ ಅಂತಾರಲ್ಲ. ಹಂಗಾಗ್ಯದ ನಮ್ ದೇಶದ ಪರಿಸ್ಥಿತಿ. ಆಶ್ರಯ ಮನೆಗಳ ಹಣ ಕೈಗೆ ಬರುವಷ್ಟರಲ್ಲಿ ಅರ್ಧ ಹಣ ಅಲ್ಲಲ್ಲೇ ಪೋಲಾಗ್ತದ. ಪಂಚಾಯತ್ ನವರಿಗೆ ಮಾಮೂಲು ಕೊಡುವುದರಲ್ಲೇ ಅರ್ಧ ಹಣ ಸೋರಿ ಹೋಗುತ್ತಿದೆ. ನಮ್ಮೆಲ್ಲರ ಅರ್ಧ ಆಯಸ್ಸನ್ನು ಸರ್ಕಾರಿ ಇಲಾಖೆಗಳ ಕಡತಗಳಲ್ಲೇ ನಮ್ಮ ಬದುಕನ್ನು ಹುಡುಕುವುದಾಗಿದೆ. ಹಾಳಾದ ಇಂತಹ ಸಾಮಾಜಿಕ ವ್ಯವಸ್ಥೆಗೆ, ಹದಗೆಟ್ಟ ಆಡಳಿತಕ್ಕೆ ಕ್ಯಾಕ್ಕರಸಿ ಉಗಿಬೇಕ್ರೀ…’ ಎಂದನು. ರಾಜಕೀಯ ಮಾತ್ತೆತಿದ್ದಕ್ಕೆ ತನ್ನೊಳಗಿನ ಸಿಟ್ಟು, ಸೆಡವುಗಳನ್ನು ಹೊರ ಹಾಕಿದನು ಚೆನ್ನಮಲ್ಲೇಶ.
‘ಯಾವನ್ರೀ ನಿಮಗೆ ಓಟ್ ಹಾಕ್ಲೇಬೇಕು ಅಂತ ತಾಕೀತು ಮಾಡಿದ್ದು. ಹೊಲಸು ರಾಜಕೀಯ ಮಾಡೋರಿಗೆ ನಾವು ಓಟ್ ಕೊಡ್ಬೇಕಾ? ಹೋಗ್ರಿ… ಯಾವನೇನು ಕಿಸದು ದಬ್ಬಾಕ್ಕಿಲ್ಲ. ನಮಗಿರೋ ಹಕ್ಕನ್ನು ಕೊಡೋದಕ್ಕೆ ಏನೆಲ್ಲ ಕಾನೂನು ರೂಪಿಸುತ್ತಾರೆ. ಬಡವರನ್ನು ಏಷ್ಟೆಲ್ಲ ಗೋಳು ಹಾಕ್ಕೋಂತಾರ್. ಇನ್ನೂ ಅವ್ರ ಮನೆಯಿಂದ ಏನಾದರೂ ಕೊಡ್ತಿದ್ದಾರೇನೋ ಅನ್ನುವಂಗ ನಮ್ಮನ್ನೆಲ್ಲ ಗುಲಾಮರಂಗ ನೋಡ್ತಾರ್. ತಮ್ ತಮ್ಮ ಮನೆಗಳನ್ನಷ್ಟೇ ಭದ್ರವಾಗಿ ಇಟ್ಕೊಂಡಾರ್ ಇವರೆಲ್ಲ. ಈ ರಾಜಕೀಯ ಜನಗಳು. ಬಡವರ ಹೊಟ್ಟೆಗೆ ತಣ್ಣಿರು ಬಟ್ಟೆ ಕಟ್ಟಿ, ಈಗ ಮೊಸಳೆ ಕಣ್ಣೀರು ಸುರಿಸಿದ್ದ ಮಾತ್ರಕ್ಕ!? ಯಾರಿಗೂ ಕರುಣೆ ಬರಲ್ಲ. ಮತದಾನ ಮಾಡ್ರೀ ಅಂತ ಬೊಬ್ಬೆ ಹೊಡೆದ್ರ ಪ್ರಜ್ಞಾವಂತ ನಾಗರೀಕರೆಲ್ಲ ಹಿಂದಿನ ಕಾಲದವರ್ಹಂಗಲ್ಲ. ಅವರವರಿಗೆ ಅವರದ್ದೇ ಆದ ಯೋಚನಾ ಶಕ್ತಿ ಕೊಟ್ಟಿದ್ದಾನ ದೇವರು. ರಾಜಕೀಯದವರು ಆಡುವ ಗೋಸುಂಬೆ ನಾಟಕ ಯಾರಿಗೂ ಗೊತ್ತಾಗಲ್ಲ ಅನ್ನೋ ಭ್ರಮೆಯಲ್ಲಿದ್ದಾರ್. ಈಗಿನವರಿಗೆ ಯಾರು ಏನು ಹೇಳ್ಬೇಕಾಗಿಲ್ಲ. ಯಾರು ಹ್ಯಾಂಗಿದ್ದಾರ್ ಅನ್ನೋದಕ್ಕ ಗೊತ್ತಾದ. ಅಂಗೈ ನೋಡೋದಕ್ಕ ಕನ್ನಡಿ ಬೇಕಿಲ್ಲರಿ’ ಎಂದು ತನ್ನೊಳಗೆ ಇರುವ ಸಿಟ್ಟನ್ನೆಲ್ಲ ಕಾರಿಬಿಟ್ಟನು. ಕಟ್ಟೆಯ ಮೇಲೆ ಕುಳಿತಿದ್ದ ಹತ್ತಾರು ಜನ ಯುವಕರು, ಮುದುಕರು ಇದೊಂದು ಪ್ರವಚನ ಎಂಬಂತೆ ತಲೆಯಾಡಿಸುತಿದ್ದರು. ಚೆನ್ನಮಲ್ಲೇಶನ ಮಾತಿಗೆ ಮೌನವಾಗಿ ನಕ್ಕು, ನಡು ನಡುವೆ ‘ಹೌದು ಹೌದು. ನಿಜ ಬಿಡ್ರೀ. ಇದೆಲ್ಲ ಖರೆ ಮಾತದ’ ಎನ್ನುತ್ತ ಬೆನ್ನು ತಟ್ಟುತಿದ್ದರು.
ಗುಡುಗು, ಸಿಡಿಲಿನ ಅರ್ಭಟದಂತೆ ಕುಗಾಡುತಿದ್ದ ಚೆನ್ನಮಲ್ಲೇಶ, ಆವೇಶದಲ್ಲಿ ಕೂಗಾಡಿ ಸುಸ್ತಾದಂತೆ ಕಂಡಿತ್ತು. ಮೈಯಲ್ಲಿ ಹರಿಯುತಿದ್ದ ಬೆವರನ್ನು ಒರೆಸಿಕೊಂಡು ಕಟ್ಟೆಯ ಮೇಲೆ ಕುಂಡಿಯೂರಿದನು. ನಂದೀಶನಿಗೆ ಇದೆಲ್ಲ ಖರೆ! ಎನಿಸಿ ಏನೋ ಹೇಳುವುದಕ್ಕೆ ಪ್ರಯತ್ನಿಸಿದನು. ‘ಈ ಸಲದ ಚುನಾವಣೆಗೆ ಸರ್ಕಾರ ಹೊಸ ನೀತಿ ಅಳವಡಿಸ್ಯಾರಂತಲ್ಲ ಸಾಹೇಬ್ರೆ. ಚುನಾವಣೆಗೆ ಸ್ಪರ್ಧಿಸಿರೋ ಅಭ್ಯರ್ಥಿಗಳಲ್ಲಿ ನಮಗೆ ಯಾರೂ ಇಷ್ಟ ಇಲ್ಲಂದ್ರ ಮತದಾನ ಮಾಡೋ ಮಷಿನ್ ನಲ್ಲಿ ಲಾಸ್ಟ್ ಬಟನ್ ಒತ್ತಿರ್ದ ಮುಗೀತು. ಇಷ್ಟೊಂದು ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಉತ್ತಮರಲ್ಲ ಅಂತ ಫ್ರೂವ್ ಆಗ್ತದಂತ. ಈಗ ನಾನು ಮತದಾನ ಕೇಂದ್ರಕ್ಕೆ ಹೋಗ್ತಿನಿ. ಹೋಗಿ ಲಾಸ್ಟ್ ಬಟನ್ ಒತ್ತಿ ಬರ್ತಿನಿ ನೊಡ್ರೀ’ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದನು ನಂದೀಶ.
ಅವನೊಟ್ಟಿಗೆ ಒಂದಿಷ್ಟು ಯುವಕರು ಹಿಂಬಾಲಿಸಿದರು. ಆಗಲೇ ಬೆಳಗಿನ ಹತ್ತು ಗಂಟೆಯಾಗಿತ್ತು. ಬಿಸಿಲು ಏರತೊಡಗಿತ್ತು. ಸ್ವಪ್ರಯತ್ನವಾಗಿ ಯಾರೂ ಮತದಾನ ಕೇಂದ್ರಕ್ಕೆ ಹೋಗಿ ಬರಲು ಮುಂದಾಗಲಿಲ್ಲ. ಒತ್ತಾಯಪೂರ್ವಕ ಮನೆ ಮನೆಗೆ ಹೋಗಿ ಓಟ್ ಹಾಕಿ ಬನ್ರೀ… ಓಟ್ ಹಾಕಿ ಬನ್ರೀ…’ ಎಂದು ವಿವಿಧ ಪಕ್ಷಗಳ ಹಿತೈಷಿಗಳು ಮನವಿ ಮಾಡಿಕೊಳ್ಳುತಿದ್ದರು. ಅಸಹಾಯಕ ಜನರಿಗೆ ಆಸೆ, ಆಮಿಷಗಳನ್ನೊಡ್ಡಿ ಮನ ಪರಿವರ್ತಿಸಲು ರಾಜಕೀಯ ಮರಿ ಪುಢಾರಿಗಳು ಅಲ್ಲಲ್ಲಿ ಫೋಜ್ ಕೊಟ್ಟು ನಿಂತಿದ್ದರು. ಶಣ್ಮುಖನಂಥವರು ಜನ ಜಂಗುಳಿ ಮಧ್ಯೆ ನಿಂತು ಹಲವರ ಮನವೊಲಿಸಲು ಪ್ರಯತ್ನಿಸುತಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲಾ ಬೀರ್ ಬಾರ್ ಗಳು, ವೈನ್ ಶಾಪಗಳೆಲ್ಲ ಮುಚ್ಚಿಕೊಂಡಿದ್ದವು. ಕದ್ದುಮುಚ್ಚಿ ಸಾರಾಯಿ ಮಾರಾಟ ಭರ್ಜರಿಯಾಗಿಯೇ ನಡೆದಿತ್ತು. ಪೊಲೀಸ್ ಬಿಗಿ ಬಂದೋಬಸ್ತ ನಡುವೆ ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಚುನಾವಣೆಯ ಜ್ವರ ಬೇಲಿಗೆ ಸಿಕ್ಕ ಅಂಗಿ ಹರಿದುಕೊಂಡಂತಾಗಿತ್ತು. ಕೆಲವರಿಗೆ ಆಕಾಶದಲ್ಲಿ ತೇಲಾಡುವಂತೆ ಮಾಡಿತ್ತು. ಒಟ್ಟಿನಲ್ಲಿ ಎಲೆಕ್ಷನ್ ಅನ್ನೋದು ಕೆಲವರಿಗಷ್ಟೇ ಭರ್ಜರಿ ಕಲೆಕ್ಷನ್!! ಸೀಜನ್ ಆಗ್ಬಿಟ್ಟಿತ್ತು.
ರಶ್ಮಿ ಮಗಳಿಗೆ ಸ್ನಾನ ಮಾಡಿಸಿ, ತಾನು ಸ್ನಾನ ಮಾಡಿ, ಒಲೆಯ ಮೇಲೆ ಹಾಲು ಕಾಯಿಸಲು ಪಾತ್ರೆಯೊಂದನ್ನು ಇಟ್ಟಿದ್ದಳು. ಹಾಲು ಬಿಸಿ ಆಗಿದೆ ಎಂದು ತಿಳಿಯುವುದಕ್ಕೆ ನೊರೆಯುಕ್ಕಿ ಪಾತ್ರೆಯಿಂದ ಹಾಲು, ಆತ್ಮಹತ್ಯೆ ಮಾಡಿಕೊಳ್ಳುವವರಂತೆ ಉರಿಯುವ ಜ್ವಾಲೆಗೆ ಆಹುತಿಯಾಗುತಿತ್ತು. ಅನಾಹುತಕ್ಕೆ ಒಳಗಾದವರನ್ನು ಸಂರಕ್ಷಿಸಿದಂತೆ ಪಾತ್ರೆ ಕೆಳಗಿಳಿಸಿದಳು. ಉಕ್ಕುವ ನೊರೆ ಪಾತ್ರೆಯೊಳಗೆ ಅಡಗಿತು. ಲೋಟದಲ್ಲಿ ಹಾಲು ಬಗ್ಗಿಸಿದಳು. ಅದಕ್ಕೊಂದಿಷ್ಟು ಸಕ್ಕರೆ ಬೆರೆಸಿ ಮಗಳನ್ನು ಕೂಗಿ ಕರೆದು ‘ಇದನ್ನು ಆರಿದ ಮೇಲೆ ನಿಧಾನಕ್ಕೆ ಕುಡಿದು ಬಿಡು’ ಎಂದು ಹೇಳಿದಳು. ರಂಜಿತ್ ಇನ್ನೂ ಮನೆಗೆ ಬರದೇ ಎಲ್ಲಿ ಹೋದರೂ ಎಂಬ ಚಿಂತೆ ಗಾಢವಾಗಿ ಕಾಡಿತ್ತು. ಮನಸ್ಸಿನ ತಳಮಳಕ್ಕೆ ಸಮಾಧಾನಿಸುವವರು ಯಾರೂ ಇರಲಿಲ್ಲ.
‘ಸಂಜೆ ಆರು ಗಂಟೆಗೆಲ್ಲ ಮತದಾನ ಮುಗಿಯುತ್ತದೆ. ಅದಾದ ನಂತರವಾದರೂ ರಂಜಿತ್ ಮನೆಗೆ ಬರಬಹುದೆಂದು ನಿರೀಕ್ಷಿಸಿದಳು. ‘ಮತಗಟ್ಟೆಗೆ ಹೋಗಿ ಓಟ್ ಹಾಕಿ ಬರುವಷ್ಟರಲ್ಲಿ ಅವರು ಮನೆಗೆ ಬಂದು ಬಿಟ್ಟರೆ ಸಾಕಪ್ಪ ದೇವರೆ’ ಎಂದು ಆಶಿಸಿದಳು. ನಾಲ್ಕು ವರ್ಷದ ಪುಟ್ಟ ಮಗಳಿಗೆ ಕಂಕುಳಲ್ಲಿ ಎತ್ತಿಕೊಂಡು ಮತಗಟ್ಟೆಗೆ ಹೋಗಲು ಆಣಿಯಾಗುತಿದ್ದಂತೆ ಅವಳ ಮೈದುನ ಶಣ್ಮುಖನು ಬೈಕ್ ಮೇಲೆ ರಂಜಿತ್ ನಿಗೆ ಹತ್ತಿಸಿಕೊಂಡು ಬರುತ್ತಿರುವುದನ್ನು ಕಂಡಿತು. ಅವನ ಬೆನ್ನ ಹಿಂದೆ ಅನಾಮಿಕ ವ್ಯಕ್ತಿಯೊಬ್ಬನಿದ್ದನು. ಮೂರು ಜನರ ಸವಾರಿ ಮನೆಯ ಕಡೆ ತಿರುಗಿತು. ಸನ್ನಿವೇಶ ಕಣ್ಣಾರೆ ಕಂಡು ರಶ್ಮಿ ಚಕಿತಳಾದಳು.
ಅಣ್ಣ ತಮ್ಮಂದಿರಲ್ಲಿ ಇರುವ ಜಗಳ, ಮತ್ಸರ, ಬೇಸರಕ್ಕೆಲ್ಲ ಎಲೆಕ್ಷನ್ ಮಾಯೆ! ಎಂಬ ಜಾಲದೊಳಗೆ ಇತಿಶ್ರೀ ಹೇಳಿದಂತಿತ್ತು. ರಶ್ಮಿಯ ಮುಖದಲ್ಲಿ ಈಗೊಂದಿಷ್ಟು ಬಲವಂತದ ನಗು ಅರಳಿಕೊಂಡಿತು. ಬೈಕ್ ಮನೆಯ ಮುಂದೆ ಬಂದು ನಿಂತಾಗ ರಂಜಿತ್ ನ ಭುಜವನ್ನು ಬಳಸಿಕೊಂಡು ಅಪರಿಚಿತ ವ್ಯಕ್ತಿಯೊಬ್ಬರು ರಂಜಿತ್ ನ ಕೈಗಳು ತನ್ನ ಹೆಗಲ ಮೇಲಿಟ್ಟುಕೊಂಡು ಮನೆಯೊಳಗೆ ಕರೆ ತಂದನು. ಬೈಕ್ ಸ್ಟ್ಯಾಂಡ್ ಗೆ ಆಸರೆಯಾಗಿ ನಿಲ್ಲಿಸಿ ಶಣ್ಮುಖನು ರಂಜಿತ್ ನ ಮನೆ ಬಾಗಿಲಿಗೆ ಬಂದು ‘ವೈನಿ ಆರಾಮಿದ್ದಿರಾ…? ಇನ್ನೂ ಓಟ್ ಹಾಕಿ ಬಂದಿಲ್ಲ ಅನ್ನಸ್ತದ.’ ಅಣ್ಣ ರಾತ್ರಿಯೆಲ್ಲ ನಮ್ಮ ಎಂಎಲ್ಎ ಸಾಹೇಬ್ರ ಮನೇಯಲ್ಲೇ ಇದ್ರು. ರಾತ್ರಿ ಡಿನ್ನರ್ ಪಾರ್ಟಿ ಇಟ್ಕೊಂಡಿದ್ ಕ ತಡವಾಗಿತ್ತು. ಅದಕ್ಕಾಗಿ ಅಲ್ಲೇ ಗೆಸ್ಟ್ ಹೌಸ್ ನಲ್ಲಿ ಚರ್ಚೆ, ಮಾತು, ಕತಿ ಆಡ್ಕೊಂತ ಮಧ್ಯರಾತ್ರಿವರೆಗೂ ಕುಂತಿದ್ವಿ. ಅಣ್ಣ ತುಂಬಾ ಸುಸ್ತಾಗ್ಯಾರ. ಒಂದೆರಡು ತಾಸು ಮಲಗಿ ರೆಸ್ಟ್ ಮಾಡಲಿ. ಆಮ್ಯಾಲ್ ಓಟ್ ಹಾಕೋದ್ಕ ಬಂದ್ರಾಯ್ತು. ಈಗಷ್ಟೇ ಮಧ್ಯಾಹ್ನ ಹನ್ನೆರಡು ಗಂಟೆ ಆಗ್ಯಾದ’ ಎಂದು ಹೇಳಿ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ ಮಾಡಿ ‘ಬರ್ತಿನ್ರೀ ವೈನಿ’ ಎನ್ನುತ್ತ ರಸ್ತೆ ದಾಟಿ ಮರೆಯಾದನು ಶಣ್ಮುಖ.
ಒಂದು ಹಗಲು, ಒಂದು ರಾತ್ರಿ ಕಳೆದು ರಂಜಿತ್ ಮನೆಗೆ ಬಂದು ತಲುಪಿದಕ್ಕೆ ರಶ್ಮಿಗೆ ಸಮಾಧಾನ ತಂದಿತ್ತಾದರೂ, ಮನೆಯಿಂದ ಹೊರಗೆ ಹೋಗುವಾಗ ಆಡಿದ ಮಾತು, ಅವನೊಳಗಿರುವ ಸ್ವಾಭಿಮಾನ, ಆತ್ಮವಿಶ್ವಾಸ, ಛಲ ಎಲ್ಲವೂ ಅಡಗಿ ಹೋಗಿತ್ತು. ರಾಜಕೀಯ ಜನಗಳ ವಾಸನೆಯಲ್ಲಿ ರಂಜಿತ್ ನ ಸ್ವಾಭಿಮಾನದ ಬಣ್ಣ ಕಳೆದುಕೊಂಡಿತ್ತು. ಹಾಸಿಗೆಯಲ್ಲಿ ಉದ್ದಕ್ಕೆ ಕಾಲು ಚಾಚಿ ಮಲಗಿದನು. ರಾತ್ರಿ ಪಾರ್ಟಿಯಲ್ಲಿ ಮಿತಿಮೀರಿ ಕುಡಿದಿದ್ದಾನೆ ಎನ್ನುವುದಕ್ಕೆ ನಶೆಯ ಗುಂಗಿನೊಳಗೆ ಕೊರಡಿನಂತೆ ಬಿದ್ದುಕೊಂಡಿದ್ದ ನಿಸ್ತೇಜ ದೇಹವೇ ಸಾಕ್ಷಿಯಾಗಿತ್ತು.
ರಾಜಕೀಯ ಜನಗಳ ವಿರೋಧ ಕಟ್ಟಿಕೊಂಡಿದ್ದ ಪತ್ರಕರ್ತ ರಂಜಿತ್ ನಿಗೆ ಪ್ರತೀಕಾರವಾಗಿ ರಾಜಕೀಯದವರ ಚಾಲಾಕಿತನ, ಆಸೆ, ಆಮೀಷಕ್ಕೆ ಸಿಕ್ಕಿಬಿದ್ದು ಕುತಂತ್ರದಿಂದ ಹೊಸೆದ ದಾರಕ್ಕೆ ಬಲಿಯಾಗಿದ್ದನು. ಬಾಯಿಂದ ಹೊರಡುವ ಕೆಟ್ಟ ವಾಸನೆಗೆ ಪುಟ್ಟ ಮಗಳು, ಹೆಂಡತಿ ಮೂಗು ಮುಚ್ಚಿಕೊಳ್ಳುವಂತಾಗಿತ್ತು. ರಂಜಿತ್ ನ ಪ್ಯಾಂಟ್ ಜೇಬಿನಿಂದ ಹೊರಗೆ ಕಾಲು ಚಾಚಿ ಮಲಗಿದ ಹಾಗೆ ಗರಿಗರಿಯಾದ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟೊಂದು ಇಣುಕಿ ನೋಡುತಿತ್ತು. ಅದೃಷ್ಟವಶಾತವೋ, ಪ್ರಮಾದವೋ ಯಾವುದೋ ಚೆಕ್ ಒಂದನ್ನು ಕೂಡ ನೋಟಿನ ಕಂತೆಯ ನಡುವೆ ಸಿಕ್ಕಿಕೊಂಡಿತ್ತು. 12 ಸಂಖ್ಯೆ ಬಳಿಕ 6 ಸೊನ್ನೆಗಳನ್ನು ಬರೆದ ಹಾಗೆ ಕಾಣಿಸಿತು. ರಾಜಕೀಯ ಪುಢಾರಿ ಶಣ್ಮುಖನು ರಂಜಿತ್ ನಿಗೆ ಮನೆಗೆ ಬಿಟ್ಟು ಹೋಗಿ ಹತ್ತು ನಿಮಿಷ ಕೂಡ ಆಗಿರಲಿಲ್ಲ. ಯಾರದೋ ಫೋನ್ ಕಾಲ್ ಬಂದಿತ್ತು. ಕಿಸೆಯಲ್ಲಿದ್ದ ಮೊಬೈನ್ನಿಂದ ರಿಂಗ್ಟೋನ್ ಎಡಬಿಡದೇ ರಾಗ ಎಳೆಯುತಿತ್ತು. ಕೊರಡಿನಂತೆ ಬಿದ್ದುಕೊಂಡಿದ್ದ ರಂಜಿತ್ ನಿಗೆ ಯಾವುದೇ ಶಬ್ಧಕ್ಕೂ ಎಚ್ಚರಾಗಲಿಲ್ಲ. ರಶ್ಮಿ ಕಾಲ್ ರಿಸೀವ್ ಮಾಡಿದಳು.
‘ಹಲೋ… ನಾನು ಎಂಎಲ್ಎ ಮಹಾದೇವ ಅಂತ ಮಾತಾಡೋದು. ರಂಜಿತ್ ಅವರು ನಿದ್ದೆ ಮಾಡಿ ಎದ್ದ ಕೂಡಲೇ ನಮ್ಮ ಆಫೀಸ್ ಗೆ ಬರುವುದಕ್ಕೆ ಹೇಳಿ ಮೇಡಮ್. ಇವತ್ತೀನ್ ಪೇಪರ್ನಾಗ್ ನನ್ನ ಬಗ್ಗೆ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರ್. ನನ್ನ ರಾಜಕೀಯ ಜೀವನ ಸಾಧನೆ ಬಗ್ಗೆ ಸಂದರ್ಶನ ಮಾಡಿ ಬರೆದಿದ್ಕೂ ಸಾರ್ಥಕ ಆಯ್ತು ಬಿಡಿ. ನಿಮ್ಮ ಮನೆಯವರ ಋಣ ನನ್ ಮ್ಯಾಲ್ ಬಹಳಷ್ಟಾಗ್ಯಾದ.’ ಎಂದು ಹೇಳಿದ್ದಷ್ಟೇ. ಕಾಲ್ ಡಿಸ್ ಕನೆಕ್ಟ್ ಆಯಿತು. ರಶ್ಮಿಗೆ ಮಾತು ಬರದೇ ಮೂಕ ಹಕ್ಕಿಯಂತೆ ಪಿಳಿ ಪಿಳಿ ಕಣ್ ಬಿಟ್ಟು ಗಂಡನತ್ತ ನೋಡಿದಳು. ಒಳಗೆಲ್ಲೋ ಒಂದು ರೀತಿಯ ಖುಷಿಯ ಮಿಂಚೊಂದು ಮರೆಯಾಯ್ತು. ನನ್ನವರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದು ಯಾರು ಎಂಬ ಚಿಂತನೆಯಲ್ಲಿ ಮುಳುಗಿದಳು. ನಮ್ಮೆಲ್ಲರ ಸುಖಕ್ಕೆ ಅವರ ಆತ್ಮ ವಿಶ್ವಾಸಕ್ಕೆ ಬಲಿಕೊಟ್ಟು ಬಿಟ್ಟೆವಾ? ಎನಿಸಿತು. ದ್ರೋಹ ಬಗೆದಿದ್ದು ಯಾರು ಎಂಬಂತೆ ಯೋಚನೆಗೆ ತಳ್ಳಿತ್ತು. ಚುನಾವಣಾ ಆಯೋಗದವರೆಂದು ಹೇಳಿಕೊಂಡು ಯಾರೋ ರಂಜಿತ್ ನ ಮನೆ ಬಾಗಿಲಿಗೆ ಬಂದು ನಿಂತಿದ್ದರು.






ಅವಧಿ ಬ್ಲಾಗ್‍ನಲ್ಲಿ ‘ಮಾಯೆ ಎಂಬ ಜಾಲದೊಳಗೆ’ ನನ್ನ ಕಥೆ ಪ್ರಕಟಿಸಿ ಪ್ರೋತ್ಸಾಹಿಸಿದ ಅವಧಿ ಸಂಪಾದಕರಿಗೆ ಅಭಿನಂದನೆಗಳು. ಅವಧಿಯಲ್ಲಿ ನಾನು ಬರೆದ ಮೂರನೇ ಕಥಾ ಸರಣಿಯಲ್ಲೊಂದು. ಪ್ರಸ್ತುತ ರಾಜಕಾರಣದ ಸುತ್ತ ಮಾಧ್ಯಮದ ವ್ಯಕ್ತಿ ಹೇಗೆ ಬಲಿಯಾಗುತ್ತಾನೆ ಎಂಬ ವಿಷಯ ವಸ್ತುವನ್ನೊಳಗೊಂಡಿದೆ.
Nice story, reality.
ಕಥೆ ಚನ್ನಾಗಿ ಬಂದಿದೆ. ಇನ್ನೋಂಚುರು ಬೀಗಿ ಬಂಧದಲ್ಲಿ ಬೀದರ ಭಾಷೆಯಲ್ಲಿ ಬರೆಯಬೇಕಿತ್ತು ಅನಿಸ್ತದ..
SIR TUMBA CHANNIGI BANDIDE NAMM PRADESHIK BHASHEYA SOGADU BANDIDRE INSTU BHAVANATMAKVADA NYA SHIGTITTU ANT ANSUTE TUMBA CHANNGIDE INSTU BARALI