ಅಮೇರಿಕಾದ ಲೇಖಕಿ, ಕವಯತ್ರಿ, ಬರಹಗಾರ್ತಿ, ನೂರಾರು ಕೊರಳುಗಳಿಗೆ ದನಿಯಾಗಿದ್ದ ಮಾಯಾ ಏಂಜೆಲೋ ಇನ್ನಿಲ್ಲ.
ಅವರು ಸುಮಾರು ೩೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
೧೯೨೮ ಏಪ್ರಿಲ್ ೪ ರಂದು ಜನಿಸಿದ್ದ ಅವರಿಗೆ ೮೬ ವರ್ಷ ವಯಸ್ಸಾಗಿತ್ತು.
ಕನ್ನಡಿಗರಿಗೆ ಮಾಯಾ ಏಂಜೆಲೋರವರನ್ನು ಮತ್ತಷ್ಟು ಹತ್ತಿರವಾಗಿಸಿದ್ದು ನಮ್ಮಲ್ಲಿನ ಮತ್ತೊಬ್ಬ ಸಂವೇದನಾಶೀಲ ಕವಯತ್ರಿ, ಲೇಖಕಿ ಎಂ ಆರ್ ಕಮಲ.
ಮಾಯಾ ಏಂಜೆಲೋರ ಆತ್ಮಕಥೆ “I Know Why The Caged Bird Sings” ಅನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದರ ಹೆಸರು ’ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ’.
ಮಾಯಾ ಅವರು ಇನ್ನಿಲ್ಲವಾದಾಗ ಎಂ ಆರ್ ಕಮಲಾ ಅವರು ಅವರ ಸಂದರ್ಶನಗಳನ್ನು ಹಂಚಿಕೊಂಡಿದ್ದಾರೆ. ಆ ಸಂದರ್ಶನಗಳು ಅವಧಿ ಓದುಗರಿಗಾಗಿ :
ಮಾಯಾ ಸಂದರ್ಶನದ ಅನುವಾದ
೧.ನಿಮ್ಮನ್ನು ನೀವು ಏನೆಂದು ವಿವರಿಸಿಕೊಳ್ತೀರ? ತಾಯಿ, ಹೆಂಡತಿ, ಬರಹಗಾರ್ತಿ, ಕವಿ, ನರ್ತಕಿ, ನಟಿ, ಹೋರಾಟಗಾರ್ತಿ..?
ಇದೆಲ್ಲವನ್ನು ಒಳಗೊಂಡಿರೋದೆ ಜೀವನ. ನೀವು ಚಾರ್ಲ್ಸ್ ಡಿಕನ್ಸ್ , ಜೇಮ್ಸ್ ಬಾಲ್ಡ್ ವಿನ್ ಅಥವಾ ಎಮಿಲಿ ಡಿಕನ್ಸ್ ಇವರ ಯಾರ ಜೀವನ ಚರಿತ್ರೆಯನ್ನಾದರೂ ಓದಿ. ಅವರು ಎಷ್ಟೇ ಪ್ರಾಮಾಣಿಕವಾಗಿ ಬರೆದಿದ್ದರೂ ಸಂಪೂರ್ಣ ಜೀವನವನ್ನು ಹಿಡಿದಿಡೋದಕ್ಕೆ ಸಾಧ್ಯವಾಗಿಲ್ಲ.
ಹೆಣ್ಣು ಮಕ್ಕಳಿಗೆ ಮತ್ತು ಯುವಕರಿಗೆ ನನ್ನ ಕಿವಿ ಮಾತುಗಳೆಂದರೆ ಚೆನ್ನಾಗಿ ಬರೆಯುವುದನ್ನು ಕಲಿತು ಕೊಳ್ಳಬೇಕು ಅಂದರೆ ಚೆನ್ನಾಗಿ ಓದಬೇಕು. ಎಲ್ಲಕ್ಕಿಂತ ಗಟ್ಟಿಯಾಗಿ ಓದಿ. ನಿಮ್ಮ ಕೋಣೆಯಲ್ಲಿ ಕುಳಿತುಕೊಂಡು ನಿಮ್ಮ ಭಾಷೆ ಕಿವಿಗೆ ಹೇಗೆ ಕೇಳುತ್ತೆ ಅನ್ನೋದನ್ನು ಗಮನಿಸಿ. ಕಾವ್ಯ ಅಂದರೆ ಮನುಷ್ಯನ ಕಂಠಕ್ಕೆಂದು ಬರೆದ ಸಂಗೀತ. ಇದೆ ನನ್ನ ಬರವಣಿಗೆಯ ಗುಟ್ಟು. ಮತ್ತೊಂದು ಸಲಹೆ ಎಂದರೆ ಬೇರೊಂದು ಭಾಷೆಯನ್ನೂ ನೀವು ಕಲಿಯಿರಿ.
೨. ನಾನು ಸ್ಪ್ಯಾನಿಷ್ ಕಲಿತಿದ್ದೀನಿ.
ಬಹಳ ಒಳ್ಳೆಯದು. ಆದರೆ ನಿಮಗೆ ಒಳ್ಳೆಯ ಶಿಕ್ಷಕರು ಸಿಗಬೇಕು. ನಾನು ಕೆಲವೊಂದು ಸಲ ನನ್ನ ದ್ವಿತೀಯ ಭಾಷೆ ಫ್ರೆಂಚ್ ಅಂದುಕೊಂಡಿದ್ದೆ. ಆದರೆ ಒಂದು ಸಲ ಫ್ರಾನ್ಸ್ ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಫ್ರೆಂಚ್ ಬಿಟ್ಟು ಸ್ಪ್ಯಾನಿಷ್ ಮಾತಾಡಿ ಸಂದರ್ಶನ ಮಾಡುವವರನ್ನು ಕಕ್ಕಾಬಿಕ್ಕಿ ಮಾಡಿಬಿಟ್ಟೆ. ನನಗೂ ಆಶ್ಚರ್ಯವಾಗಿತ್ತು….ಸ್ಪ್ಯಾನಿಷ್ ನನ್ನ ದ್ವಿತೀಯ ಭಾಷೆ ಅನ್ನಿಸುತ್ತೆ.. ಕವಿತೆ ಮಾಧುರ್ಯ ಪ್ರಧಾನವಾದದ್ದು.. ನಮ್ಮ ಭಾಷೆಯ ಮಾಧುರ್ಯವನ್ನು ಸವಿಯುವುದರ ಜೊತೆ ಜೊತೆಗೆ ಬೇರೆ ಬೇರೆ ಭಾಷೆಗಳನ್ನು ಕೇಳುವುದು ಬರವಣಿಗೆಗೆ ಸಹಾಯ ಮಾಡುತ್ತೆ.
೩.ಇಷ್ಟು ಪಾತ್ರಗಳನ್ನು ನಿರ್ವಹಿಸುತ್ತಿದ್ದೀರಲ್ಲ. ನಿಮಗೆ ಇಷ್ಟವಾದ, ತೃಪ್ತಿ ನೀಡಿದ ಜೀವನದ ಪಾತ್ರ ಯಾವುದು?
ನಾನು ಬರಹಗಾರ್ತಿ. ನನ್ನನ್ನು ನಾನು ವಿವರಿಸಿಕೊಳ್ಳೋದು ಹಾಗೆ. ದೇವರಿಗೂ ಹಾಗೆ ಹೇಳೋದು. ದೇವರೆ, ನೆನಪಿಸಿಕೋ, ನಾನು ಎತ್ತರವಾಗಿರೋ ಕಪ್ಪು ಅಮೇರಿಕನ್ ಬರಹಗಾರ್ತಿ ಅಂತ ಹೇಳ್ತೀನಿ. ಪದ್ಯ ಬರೀಬೇಕಾದ್ರೆ ಒಂದು ಮನಃ ಸ್ಥಿತಿ ಇರುತ್ತೆ. ..ಗದ್ಯ ಬರೀಬೇಕಾದ್ರೆ ಇನ್ನೊಂದು, ಸಿನೆಮಾ ನಿರ್ದೇಶಿಸಬೇಕಾದರೆ ಮತ್ತೊಂದು..
೪. ಮೊದಲ ಹದಿನೆಂಟು ವರ್ಷದ ಜೀವನದಲ್ಲಿ ಏನು ಅನುಭವ ಪಡೆದಿರತಾರೋ ಅದನ್ನೇ ಜೀವಮಾನವಿಡೀ ಬರೀತಾರೆ ಅಂತ ಯಾರೋ ಹೇಳಿದ್ದಾರೆ ಅಲ್ವ?
ಅದನ್ನು ಒಪ್ಕೊತೀರ?
ತೀರ ಹುಚ್ಚು ಮಾತು ಅನ್ನಿಸುತ್ತೆ. ನಿಮಗೆ ೧೯ ವರ್ಷವಾಗಿದ್ದಾಗ ಬಿದ್ದು ,, ಕಾಲು ಮುರಿದುಕೊಂಡು, ಕಾಲು ಕತ್ತರಿಸಬೇಕಾದ ಸ್ಥಿತಿ ಬಂದರೆ ಮುಂದೆ ಅಂಥ ಅನುಭವದ ಬಗ್ಗೆ ಬರೆಯೋದಿಲ್ವ? ವರ್ತಮಾನದಲ್ಲಿರೋದೆ ತುಂಬಾ ಮುಖ್ಯವಾಗಿರೋದು. ನಿಮ್ಮ ಅನುಭವಗಳನ್ನೆಲ್ಲ ವರ್ತಮಾನಕ್ಕೆ ತರಬೇಕು..ಹಾಗೆ ತರುವಾಗ ಧೈರ್ಯ, ಪ್ರಾಮಾಣಿಕತೆ, ಪ್ರೀತಿ ಎಲ್ಲವು ಬೇಕು. ನೀವು ಭೂತದಲ್ಲಿಯೇ ಬಿದ್ದಿದ್ದರೆ ನಿಮ್ಮ ಧ್ವನಿಗೂ ಧೂಳು ಹಿಡಿದು ರೋಗ ಬರುತ್ತೆ..ಹಾಗಂತ ಭವಿಷ್ಯಕ್ಕೂ ಹೋಗಕ್ಕಾಗಲ್ಲ..ನೀವು ವರ್ತಮಾನದಲ್ಲಿದ್ದೀರ ಅಂತ ಅರ್ಥಮಾಡಿಕೊಂಡರೆ ಸಾಕು. ಬರೀ ಹದಿನೆಂಟು ವರ್ಷದ ಬಗ್ಗೆ ಬರೀತಾ ಕೂತ್ಕೊಳ್ಳೋದು ಅಂದರೆ ನೀವು ಸತ್ತು ಹೋಗಿದ್ದೀರಾ ಅಂತ..
೫. ಮಕ್ಕಳಿಗೆ ಓದಿನ ಪ್ರೀತಿಯನ್ನು ಕಲಿಸೋದು ಹೇಗೆ?
ಅವರಿಗೆ ಕವಿತೆಯ ಬಗ್ಗೆ ಮೊದಲು ಪ್ರೀತಿ ಕಲಿಸಬೇಕು..ಅದಕ್ಕೆ ಮೊದಲು ಧ್ವನಿಯನ್ನು, ಭಾಷೆಯನ್ನೂ, ಕಥೆಗಳನ್ನು ಪ್ರೀತಿಸುವುದನ್ನು ಕಲಿಯಬೇಕು. ಮಕ್ಕಳಿಗೆ ಪ್ರತೀ ರಾತ್ರಿ ಏನನ್ನಾದರೂ ಓದಿ ಹೇಳ್ತಾ ಇದ್ದಾರೆ ಅವರಿಗೆ ಓದೋದು ಅಭ್ಯಾಸ ಆಗಿಬಿಡುತ್ತೆ. ಅವರು ನಂಗಿವತ್ತು ಓದೋದು ಇಷ್ಟವಿಲ್ಲ ಅಂದ್ರು ಅವರ ಮುಂದೆ ಪುಸ್ತಕ ಹಿಡಿಯಬೇಕು. ಈಗಾಗಲೇ ಪುಸ್ತಕ ಓದುವ ಹುಚ್ಚನ್ನು ಬೆಳೆಸಿರ್ತೀವಿ ಅಲ್ವ/ ತಕ್ಷಣ ಪುಸ್ತಕ ಹಿಡಿದು ಕೊಳ್ತಾರೆ..
೬.ಅದನ್ನು ಯಾವಾಗ ಮಾಡಬೇಕು?
ಗರ್ಭದಲ್ಲಿದ್ದಾಗಲೇ..ಹುಟ್ಟಿದ ಮೇಲೆ ಹಾಡೋದನ್ನು, ಮಾತಾಡೋದನ್ನು ಮತ್ತು ಅವರೊಂದಿಗೆ ನಗುವುದನ್ನು ಮುಂದುವರಿಸಬೇಕು.

ಓಪ್ರಾ ವಿನ್ ಫ್ರೀ ಮಾಡಿದ ಮಾಯಾ ಏಂಜೆಲೊ ಸಂದರ್ಶನ….
೧.ಮಾಯಾ ಅವರೇ, ನಿಮ್ಮಷ್ಟು ಆತ್ಮ ವಿಶ್ವಾಸ ಇರುವ ವ್ಯಕ್ತಿಯನ್ನು ನಾನು ನೋಡಿಲ್ಲ.. ಇದು ತೋರಿಕೆಯದ್ದಲ್ಲ.. ನನ್ನನ್ನು ಕಾಡುವ ದೊಡ್ಡ ಪ್ರಶ್ನೆಯೆಂದರೆ ನಿಮಗೆ ಇಂತಹ ಆತ್ಮವಿಶ್ವಾಸ ಬಂದಿದ್ದಾದರೂ ಎಲ್ಲಿಂದ?
ಇದಕ್ಕೆ ಬೇಕಾದಷ್ಟು ಕಾರಣಗಳಿವೆ.. ಬಹುಶಃ ಪ್ರೇಮ. ಪ್ರೇಮ ಎಂದರೆ ನನ್ನ ಅರ್ಥದಲ್ಲಿ ಯಾರೊಂದಿಗೋ ಇರೋ ಭಾವುಕ ಸಂಬಂಧ ಅಂತ ಅರ್ಥಮಾಡಿಕೊಳ್ಳಬಾರದು. ಮನುಷ್ಯರು ದೇವರ ಬಗ್ಗೆ ಯೋಚಿಸುವ ಹಾಗೆ ಮಾಡಿದ ಸ್ಥಿತಿಯನ್ನು ಪ್ರೇಮ ಅಂತ ನಾನು ಕರೆದಿದ್ದು. ತೀರಾ ಅಮಾಯಕರು ಅಧ್ಯಾತ್ಮ ಗೀತೆಗಳನ್ನು ಬರೆದ ಕ್ಷಣ.. ಈ ಪ್ರೇಮ ಅನ್ನುವುದು ನಾನು ಅರ್ಥ ಮಾಡಿಕೊಳ್ಳುವುದಕ್ಕಿಂಥ ತೀರ ವಿಶಾಲವಾದದ್ದು. ಆಕಾಶದಲ್ಲಿ ಉದುರದಂತೆ ನಕ್ಷತ್ರಗಳನ್ನು ಹಿಡಿದಿಟ್ಟಿರುವ ಪ್ರೀತಿ. ಬಹುಶಃ ನನಗೆ ಆತ್ಮ ವಿಶ್ವಾಸ ನೀಡಿರುವುದು ಇದೇ ಅನ್ನಿಸುತ್ತೆ.
೨. ಯಾರಾದರೂ ಅತಿ ವಿನಯ ಇರುವವರನ್ನು ಕಂಡಾಗ ಏನನ್ನಿಸುತ್ತೆ?
ಹುಚ್ಚು ಹಿಡಿಯುತ್ತೆ. ಯಾರಾದರು ಹಾಡುಗಾರರಿಗೆ `ಹಾಡು ಹೇಳ್ತೀಯ?’ ಅಂತ ಕೇಳಿದರೆ, `ನನಗೆ ಇಲ್ಲಿ ಹಾಡುವುದು ಕಷ್ಟ’ ಅಂತ ಹೇಳಿದರೆ ಓಡಿ ಹೋಗೋಣ ಅನ್ಸುತ್ತೆ.
೩. ಯಾಕೆ?
ಯಾಕೆಂದರೆ ಅವರು ವಿಶ್ವಾಸಕ್ಕೆ ಅರ್ಹರಲ್ಲ. ವಿನಯವೆನ್ನುವುದು ಕೆಲವೊಮ್ಮೆ ಟೊಳ್ಳುತನವನ್ನು ಹೇಳುತ್ತೆ.
೪. ನಾಟಕೀಯ ವ್ಯಕ್ತಿತ್ವವನ್ನು….
ಸುಳ್ಳುಬುರುಕರು ಎಂಬುದನ್ನು ಸಹ..
೫.ಯಾರನ್ನಾದರು ಬಿಡುಗಡೆಗೊಳಿಸಬೇಕೆಂದರೆ ಅವರನ್ನು ಪ್ರೀತಿಸಿ ಅಂತ ನೀವು ಯಾವಾಗಲೋ ಒಮ್ಮೆ ಹೇಳಿದ್ದನ್ನು ಕೇಳಿದ ನೆನಪು..
ಹೌದು. ಹಾಗೆಂದರೆ ಯಾರದೋ ಪ್ರೇಮದಲ್ಲಿ ಮುಳುಗಿ ಹೋಗುವುದು ಅಂತಲ್ಲ..ಅದು ಅಪಾಯಕಾರಿ. ನೀವು ನಿಮ್ಮ ಮಕ್ಕಳನ್ನು ಪ್ರೀತಿಸುತ್ತಿದ್ದರೆ ಅವರ ಜೀವನದುದ್ದಕ್ಕೂ ಇರ್ತೀರ.. ಆದರೆ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ. ತಪ್ಪು ಮಾಡಿದಾಗ ತಾವೇ ತಿದ್ದಿಕೊಳ್ಳುತ್ತಾರೆ. ಮರಳಿ ನಿಮ್ಮ ಬಳಿಗೆ ಬಂದಾಗ `ತಬ್ಬಿಕೊಳ್ಳಲು ತೋಳುಗಳಿವೆ’ ಎಂಬುದನ್ನು ಮಾತ್ರ ಹೇಳಿ. `ನಾನು ನಿಮ್ಮನ್ನು ನಿಮ್ಮ ಪಾಡಿಗೆ ಬಿಟ್ಟು ಬಿಡ್ತೇನೆ.. ಹುಚ್ಚು ಕುಣಿತ, ರಾಕ್, rap ಕೇಳಬೇಕೆಂದರೆ ಕೇಳಿಕೊಳ್ಳಿ. ಆದರೆ ನನಗಂತೂ ಅದು ಮೂರ್ಖತನ ಅನ್ನಿಸುತ್ತೆ. ಆದರೆ ನಿಮ್ಮನ್ನು ನೀವು ನೋಡಿಕೊಳ್ಳಿ.’ ಅಂತ ಹೇಳಬೇಕು. ಅದನ್ನು ಬಿಟ್ಟು `ನನಗೆ ನಿಮ್ಮನ್ನು ಬಿಟ್ಟು ಇರುವುದಕ್ಕೆ ಆಗುವುದಿಲ್ಲ.. ನೀವು ನನ್ನ ಜೊತೇನೆ ಇರಬೇಕು’ ಅಂತ ಹೇಳಬಾರದು..ನೀವು ನಿಜವಾಗಿಯೂ ಯಾರನ್ನಾದರು ಪ್ರೀತಿಸುತ್ತಿದ್ದರೆ ಅವರ ಮುಖವನ್ನು ಯಾವಾಗಲು ನೋಡ್ತಾನೆ ಇರಬೇಕು ಅಂತೇನು ಇಲ್ಲ. ಜನರು ಪ್ರೀತಿ ಅಂದರೆ `ಒಡೆತನ’ ಅಂತ ತಿಳ್ಕೊಂಡಿದ್ದಾರೆ. ಪ್ರೀತಿಗೂ ಒಡೆತನಕ್ಕು ಯಾವ ಸಂಬಂಧವು ಇಲ್ಲ. `ನಿನಗೆ ನನ್ನ ಮೇಲೆ ನಿಜವಾದ ಪ್ರೀತಿ ಇದ್ದಾರೆ ನನಗೆ ಫೋನ ಮಾಡ್ತೀಯ’ ಅಂತೆಲ್ಲ ಹೇಳಿಬಿಡ್ತೀವಿ
೬’ನಿಮ್ಮನ್ನು ಪ್ರೀತಿಸಿದ ಹುಡುಗನ ಬಗ್ಗೆಯೂ ಇದೆ ಮಾತನ್ನೇ ಹೇಳ್ತೀರಾ?
ಅದು ಕಷ್ಟ. ನನ್ನನ್ನು ಯಾರಾದರು ಪ್ರೀತಿಸಿದರೆ ಅವನು ನನ್ನ ಹಿಂದೆ ಸುತ್ತಬೇಕು ಅಂತ ಬಯಸ್ತೀನಿ. ಅವನು ನನ್ನ ಜೊತೆ ಊಟ ಮಾಡಬೇಕು. ನನ್ನ ಜೊತೇನೆ ಸೂರ್ಯಾಸ್ತ ನೋಡಬೇಕು ಅಂತೆಲ್ಲ …ಅದು ಸಾಧ್ಯವಾಗದಿದ್ದರೆ ಅವನು ನಾನು ನೋಡುತ್ತಿರುವ ಸೂರ್ಯನನ್ನೇ ನೋಡ್ತಿದ್ದಾನೆ ಅಂತ ಭರವಸೆ ಇಟ್ಟುಕೊಳ್ಳೋದು. ಪ್ರೀತಿಸೋದು ಅಂದರೆ ಇಬ್ಬರು ಬಿಡುಗಡೆ ಪಡೆಯೋದು ಅಂತ ಅರ್ಥ. ಆದರೆ ಇಂಥ ಪ್ರೀತಿ ಮಾಗಿದ ಮೇಲೆ, ಕೊಂಚ ವಯಸ್ಸಾದ ಮೇಲೆ ಬರುತ್ತೆ. ನನಗಿದು ಅರ್ಥವಾಗಿದ್ದು ೫೦ ರಿಂದ ೬೦ ವರ್ಷದ ಒಳಗೆ.







ಹಿರಿಯ ಸಾಧಕರು ಕಲಾವಿದರು ಕವಿ ಸಾಹಿತಿಗಳು ನಮ್ಮನ್ನು ಅಗಲಿ ಹೋದಾಗ ಅವರ ಸಾವು ತುಂಬಲಾಗದ ನಷ್ಟ ಎಂದೆಲ್ಲ ಪ್ರತಿಕ್ರಿಯಿಸುತ್ತೇವೆ. ಅಮೆರಿಕದ ಖ್ಯಾತ ಕವಿಯಿತ್ರಿ ಮಾಯಾ ಏಂಜೆಲೋ ಸಾವು ವಿಷಾದವನ್ನು ಉಂಟು ಮಾಡಿದೆ ನಿಜ, ಆದರೆ ಅಕೆ ಬಿಟ್ಟು ಹೋದ ಸಂವೇದನಾಶೀಲ ಕಾವ್ಯ ಎಂದಿಗೂ ಸತ್ತು ಹೋಗುವಂತಹದಲ್ಲ, ಅದು ಚಿರಂತನ. ಆಕೆಯ ರಚನೆ
’ ಸ್ಟಿಲ್ ಐ ರೈಸ್ ’ ಎಲ್ಲ ಕಾಲಕೂ ಶೋಷಿತರ ದಮನಿತರ ಪ್ರಾತಿನಿಧಿಕ ಕವನ, ಆಕೆಯ ಅತ್ಮಕ್ಕೆ ಶಾಂತಿ ದೊರೆಯಲಿ.
ಒಳ್ಳೆಯ ಸಂದರ್ಶನ.