ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಯದ ‘ಗಾಯ’

ತೆಲುಗು ಮೂಲ: ಪಸುನೂರಿ ರವೀಂದರ್

ಕನ್ನಡಕ್ಕೆ: ಎಂ.ಜಿ. ಶುಭಮಂಗಳ

ಶಾಂತಮ್ಮನ ಮಗ ಸತ್ತು ಇವತ್ತಿಗೆ ಆರುವರ್ಷ.

ಬೆಳೆದು ಕೈಗೆ ಬಂದಿದ್ದು, ವಯಸ್ಸಾದ ಕಾಲಕ್ಕೆ ಒಂದಿಷ್ಟು ಗಂಜಿ ಹಾಕುತ್ತಾನೆ, ತಂದೆಗೆ ತಲೆಕುಕ್ಕು ಕೂಡ ಇಡುತ್ತಾನೆಂದುಕೊಂಡಿದ್ದ ಮಗ. ಆ ಬೀದಿಯಲ್ಲಿರುವ ಬೇರೆ ಹುಡುಗರೆಲ್ಲರಿಗಿಂತ ಹೆಚ್ಚು ಓದಿದ ಚುರುಕು ಬುದ್ಧಿಯಿದ್ದ, ಎಲ್ಲರ ಬಾಯಲ್ಲೂ ಇವನ ಮಾತುಗಳೇ ಅನ್ನುವಷ್ಟುಪರಿಚಿತನಾಗಿದ್ದ ಮಗ. ಅಕ್ಕಪಕ್ಕದವರು ದಿನಕ್ಕೆ ಒಮ್ಮೆಯಾದರೂ “ಒಳ್ಳೆಯ ಚಿನ್ನದಂಥ ಮಗನನ್ನು ಹೆತ್ತಿದ್ದೀಯ ಶಾಂತಮ್ಮಾ” ಎಂದು ಹೊಗಳಲು ಕಾರಣನಾದ ಮಗ. ಹೆಸರು ಬಾಲರಾಜು.

“ಏನಮ್ಮಾ ನಿಮಗೆ ಇಷ್ಟು ಕಷ್ಟ. ನಾನು ಕೆಲಸ ಮಾಡಿ, ನಿಮ್ಮನ್ನು ಕೂಲಿ ಕೆಲಸದಿಂದ ತಪ್ಪಿಸುತ್ತೇನೆ” ಎನ್ನುತ್ತಿದ್ದನು. ಅವನ ಒಳ್ಳೆಯತನದಿಂದಾಗಿ  ಇಡೀ ಊರಿನವರಿಗೆಲ್ಲ ಅವನೆಂದರೆ ಅದೇನೋ ತಿಳಿಯದ ಅಭಿಮಾನ. ಏಕೆಂದರೆ ಅವನು ತನ್ನ ಮನೆಯ ದುಃಖವಷ್ಟೇ ಅಲ್ಲದೆ,ಎಲ್ಲರ ದುಃಖ ಕಳೆಯಬೇಕೆನ್ನುತ್ತಿದ್ದವನು. ನಾವು ಬದುಕುತ್ತಿರುವ ಈ ಭೂಮಿ ನಮ್ಮ ಕೈಯಲ್ಲಿ ಇಲ್ಲ. ನಮ್ಮ ನೀರು ನಮಗೆ ಬರದಂತೆ ಆಗಿದೆ. ಯಾವುದೂ ನ್ಯಾಯವಾಗಿ ಸಿಗದೆಹೋಯಿತು” ಎಂದು ಪ್ರತಿದಿನವೂ ವಿಶ್ರಾಂತಿಯಿಲ್ಲದೆ ಓಡಾಡುತ್ತಿದ್ದನು. ಶಾಂತಮ್ಮನಿಗೆಭಯವಾಗುತ್ತಿತ್ತು.

“ಮಗನೇ ನೀನು ಹೀಗೆ ಎಲ್ಲರ ಕುರಿತು ಮಾತನಾಡಿದರೆ ಹೇಗೆ? ಒಳ್ಳೆಯ ಮಾತನಾಡುವುದು ಕೂಡ ಪಾಪವೇ ಈ ಕಾಲದಲ್ಲಿ. ನೀನು ಹೀಗೆ ನಾಲ್ಕಾರು ಮಂದಿಯನ್ನು ಗುಡ್ಡೆ ಹಾಕಿಕೊಂಡು ಇಷ್ಟುದ್ದ ಮಾತಾಡಿ ಗಂಟಲು ಹರಿದುಕೊಂಡರೆ ಸರ್ಕಾರ ಸುಮ್ಮನಿರುವುದಿಲ್ಲ ಮಗನೇ.ನಮ್ಮ ನೆಂಟರಿಷ್ಟರಲ್ಲೇ ಎಷ್ಟು ಜನ ಅನ್ಯಾಯವಾಗಿ ಸತ್ತರೋ ನಿನಗೆ ಗೊತ್ತಿಲ್ಲವೇನೋ? ಬೇಡ ಮಗನೇ, ನೀನು ಹಾಗೆ ಆಗುವುದು ನನಗಿಷ್ಟವಿಲ್ಲ. ನನ್ನಪ್ಪ ಒಳ್ಳೆಯ ಹುಡುಗ ಅಲ್ಲವಾ, ಸ್ವಲ್ಪ ಬುದ್ಧಿಯಾಗಿ ಓದಿಕೋ. ಯಾವುದೋ ಒಂದು ಚಿಕ್ಕ ಉದ್ಯೋಗ ಸಿಕ್ಕರೆ ನಮ್ಮ ಜೀವನಬದಲಾಗುತ್ತದೆ” ಎಂದು ಎಷ್ಟು ಬಾರಿ ಕೇಳಿಕೊಂಡಿಲ್ಲ ಬಾಲರಾಜುವನ್ನು.

“ಏನಮ್ಮ ನೀನು ಹೇಳುವುದು, ಅರವತ್ತು ವರ್ಷಗಳಿಂದ ಹೊಡೆದಾಡುತ್ತಲೇ ಇದ್ದೇವೆ. ನಮಗೆ ಸಿಗಬೇಕಿದ್ದ ಭಾಗ ಸಿಕ್ಕಿದೆಯಾ? ಆದರೂ ನಿನಗೆಲ್ಲೋ ಹುಚ್ಚು, ಊರಿನವರೆಲ್ಲರ ಜೀವನ ಚೆನ್ನಾಗಿದ್ದಾಗಲೇ ನಾವು ಚೆನ್ನಾಗಿರೋದು. ಜನರ ದುಃಖ ಕಳೆಯದೆ, ನಮ್ಮ ನೋವುಕಳೆಯುತ್ತದೆಂದು ನಿನಗೇಕೆ ಅನಿಸುತ್ತಿದೆಯೋ ನನಗೆ ಅರ್ಥವಾಗುತ್ತಿಲ್ಲ” ಎಂದು ಜೋರು ಧ್ವನಿಯಲ್ಲಿ ಹೇಳುತ್ತ ಎದ್ದನು ಬಾಲರಾಜು.

ಆದರೂ ಶಾಂತಮ್ಮ ಸುಮ್ಮನಾಗಲಿಲ್ಲ. “ಇಲ್ಲ ಮಗನೇ. ನೀನು ಹೀಗೆ ಮಾಡಿದರೆ ಹೇಗೆ, ನಿನ್ನ ಹಿಂದೆಯೇ ನಿನ್ನ ತಮ್ಮನಿದ್ದಾನೆ. ಅವನು ನಿನ್ನ ದಾರಿಯಲ್ಲೇ ನಡೆಯುತ್ತಾನೆ. ನಿನಗೆ ನೆನಪಿದೆಯೋ ಇಲ್ಲವೋ.. ಚಿಕ್ಕಂದಿನಿಂದಲೂ ಅವನು ನಿನ್ನ ನೆರಳಿನಂತೆ ನಿನ್ನ ಕೈ ಹಿಡಿದೇನಡೆದೋನು. ನೀನು ಎಲ್ಲಿ ಹೋದರೆ ಅಲ್ಲಿ ನಿನ್ನ ಹಿಂದೆಯೇ ಬರುತ್ತಿದ್ದನು. ನೀನು ಯಾವ ಕೆಲಸ ಮಾಡಿದರೆ ಅವನು ಕೂಡ ಅದೇ ಮಾಡುತ್ತಿದ್ದನು. ಅವನಿಗೆ ತಿಳುವಳಿಕೆ ಇಲ್ಲದಿದ್ದಾಗಲೇ ಹಾಗೆ ಮಾಡಿದೋನು. ನಿನ್ನ ಡಿಗ್ರಿ ಓದು ಮುಗಿಯುತ್ತಿದೆಯಲ್ಲವಾ, ಅವನು ಈ ವರ್ಷ ಡಿಗ್ರಿಓದಿಗೇ ಬರುತ್ತಿದ್ದಾನೆ. ನನ್ನ ಅಣ್ಣ ನಡೆಯುವ ಹಾಗೆಯೇ ನಾನೂ ನಡೆಯುತ್ತೇನೆ ಎಂದುಕೊಂಡರೆ, ಅವನು ಕೂಡ ಹಾಳಾಗುವುದಿಲ್ಲವಾ ಹೇಳು ಮಗ?” ದೀನವಾಗಿ ಕೇಳಿಕೊಂಡಳು ಮಗನನ್ನು.

“ಇಗೋ ಅಮ್ಮಾ ನಿನಗೆ ತಿಳಿಯದಿರುವುದು ಏನಿದೆ, ಈ ನೆಲದ ಮೇಲೆ ಹುಟ್ಟಿದ್ದಕ್ಕೆ.. ನನಗಿಂತಲೂ ಮೊದಲ ಮೂರು ತಲೆಮಾರು ನಾಶವಾಯಿತು. ಈಗ ನಮ್ಮ ತಲೆಮಾರು. ಈಗಲಾದರೂ ನಾವು ಅಂದುಕೊಂಡದ್ದು ಸಾಧಿಸದಿದ್ದರೆ, ನಮ್ಮ ನಂತರದ ತಲೆಮಾರು ಕೂಡನಾಶವಾಗುತ್ತದೆ. ನಮ್ಮ ನೀರು ನಮಗೆ ದಕ್ಕಬೇಕು, ನಮಗೆ ನ್ಯಾಯವಾಗಿ ಸಲ್ಲಬೇಕಾದ ನಿಧಿ ನಮಗೆ ಸಿಗಬೇಕು, ನಮ್ಮ ಉದ್ಯೋಗಗಳು ನಮಗೆ ಬರಬೇಕು, ಅಲ್ಲಿಯವರೆಗೂ ನಾನು ನನ್ನ ಹೋರಾಟ ನಿಲ್ಲಿಸುವುದಿಲ್ಲ” ಕಡ್ಡಿ ಮುರಿದಂತೆ ಹೇಳಿದನು.

ಮನೆಯಿಂದ ಹೊರಟನು ಬಾಲರಾಜು. ಶಾಂತಮ್ಮನಿಗೆ ಮನಸು ಕಲುಕಿದಂತಾಯಿತು. ಮಕ್ಕಳು ರೆಕ್ಕೆ ಬಂದ ಪಕ್ಷಿಗಳಾಗುತ್ತಿದ್ದಾರೆಂದು ಅರ್ಥವಾಯಿತು. “ಅನ್ನ ತಿಂದಾದರೂ ಹೋಗು ಮಗನೇ” ಎಂದು ಕರೆದಳು ಶಾಂತಮ್ಮ. ಹಾಗೇ ಕೋಪದಿಂದಲೇ ಹೋದ ಬಾಲರಾಜುಉಸ್ಮಾನಿಯಾ ಯೂನಿವರ್ಸಿಟಿಲ್ಲಿ ಸೀಟು ಗಳಿಸಿದನೆಂದು ತಿಳಿದು ಸಂತೋಷಪಟ್ಟಳು ಶಾಂತಮ್ಮ. ಆದರೆ, ಬಾಲರಾಜುವಿನ ಆವೇಶಕ್ಕೆ ಸರಿಯಾದ ರಂಗ ಸಿಕ್ಕಿದಂತಾಯಿತೆಂಬುದು ಅರ್ಥಮಾಡಿಕೊಳ್ಳಲಾಗಲಿಲ್ಲ.

ಉಸ್ಮಾನಿಯಾ ಗೆ ಕಳುಹಿಸುವ ದಿನ ಶಾಂತಮ್ಮ, ಹೆಣ್ಣು ಮಗಳನ್ನು ಮದುವೆ ಮಾಡಿ ಕಳುಹಿಸಿದಂತೆಯೇ ಅತ್ತಳು. ಏಕೋ ಗೊತ್ತಿಲ್ಲ ತನ್ನ ನೋವೆಲ್ಲ ಕಣ್ಣೀರ ರೂಪವಾಗಿ ಹರಿಯಿತು. ಓಯು ದಲ್ಲಿ ಪೊಲೀಸರ ಲಾಠಿ ಚಾರ್ಜ್ ಎಂದು ಟಿವಿ ವಾರ್ತೆಗಳಲ್ಲಿ ಹೇಳಿದರೆ, ಆ ದಿನಶಾಂತಮ್ಮ ತಿಂಡಿ ತಿನ್ನುತ್ತಿರಲಿಲ್ಲ. ಬಾಲರಾಜು ಹೇಗಿದ್ದಾನೋ, ಏನಾಯಿತೋ ಎಂದು ಕಳವಳ ಪಡುತ್ತಿದ್ದಳು. ಮಲಗಿದರೂ, ಎದ್ದಿದ್ದರೂ ಬಾಲರಾಜುವಿನ ಧ್ಯಾನವೇ ಶಾಂತಮ್ಮನಿಗೆ. ಅಕ್ಕ ಪಕ್ಕದವರನ್ನು ಸ್ವಲ್ಪ ಫೋನ್ ಮಾಡುವಂತೆ ಒಂದೇ ಸಮನೆ ಕೇಳುತ್ತಿದ್ದಳು.ಬಾಲರಾಜು ಯಾವಾಗಲೋ ಒಮ್ಮೆ ಫೋನ್ ತೆಗೆದು ಮಾತನಾಡಿದ್ದು ಬಿಟ್ಟರೆ ಫೋನ್ ತೆಗೆಯುತ್ತಲೇ ಇರಲಿಲ್ಲ. ಅದು ಕೂಡ ಕೋಪದಿಂದಲೇ ಮಾತನಾಡುತ್ತಿದ್ದನು. “ನನಗೇನಾಗುತ್ತದೆ. ನೀನು ಸುಮ್ಮನೆ ಆತಂಕ ಪಟ್ಟುಕೊಳ್ಳಬೇಡ. ನಿನಗೆ ಈ ಮಗ ಹೋದರೂ, ಇನ್ನೊಬ್ಬಮಗನಿದ್ದಾನೆ, ಯೋಚನೆ ಮಾಡಬೇಡ” ಎಂದು ದಬಾಯಿಸುತ್ತಿದ್ದನು.

ಆ ಮಾತಿಗೆ ಶಾಂತಮ್ಮನ ಎದೆಯಲ್ಲಿ ಬೆಂಕಿ ಬಿದ್ದಹಾಗಾಗುತ್ತಿತ್ತು. “ಏನು ಮಗನೇ ನೀನು ಮಾತನಾಡುವುದು. ಒಂದು ಕಣ್ಣಿದೆಯೆಂದು, ಇನ್ನೊಂದು ಕಣ್ಣನ್ನು ಕಿತ್ತುಕೊಳ್ಳುತ್ತಾರಾ. ನೀನು ಸ್ವಲ್ಪ ಹುಷಾರಾಗಿರು. ನನಗೆ ಕಣ್ಣ ರೆಪ್ಪೆ ಮುಚ್ಚಲಾಗುತ್ತಿಲ್ಲ, ರಾತ್ರಿ ಹಗಲುನಿನಗೇನಾಗುತ್ತದೆಯೋ ಎಂಬುದೇ ಯೋಚನೆಯಾಗಿಬಿಟ್ಟಿದೆ. ನನಗೋಸ್ಕರವಾದರೂ ಸ್ವಲ್ಪ ಯೋಚಿಸಪ್ಪಾ” ಎಂದು ಹೇಳುತ್ತಿದ್ದಂತೆಯೇ ಫೋನ್ ಕಟ್ ಮಾಡುತ್ತಿದ್ದನು. ಎಷ್ಟು ಗಲಾಟೆಗಳು, ಎಷ್ಟು ಹೋರಾಟಗಳು. ಓಯೂ ದಲ್ಲಿ ತುಪಾಕಿ ಸಿಡಿದರೆ ಶಾಂತಮ್ಮನ ಎದೆಯಲ್ಲಿಅದರ ಪ್ರತಿಧ್ವನಿ ಧ್ವನಿಸುತ್ತಿತ್ತು. ಶಾಂತಮ್ಮನ ಆತಂಕ, ದುಗುಡ ಮಾತಿನಲ್ಲಿ ಹೇಳಲಾಗದಂತಹದ್ದು. ಸರಿಯಾಗಿ ಊಟ ಮಾಡುತ್ತಿರಲಿಲ,  ಯಾರೊಂದಿಗೂ ಮಾತನಾಡುತ್ತಿರಲಿಲ್ಲ.

ಚಳವಳಿಯ ಕಾಲವೆಲ್ಲಾ.. ಶಾಂತಮ್ಮ ಹೆಸರಿನಲ್ಲಿ ಬಿಟ್ಟರೆ ಎಂದಿಗೂ ಶಾಂತಿಯಿಂದ ಇದ್ದುದಿಲ್ಲ. ಶಾಂತಮ್ಮ ಭಯ ಬಿದ್ದಹಾಗೆಯೇ ಒಂದು ದಿನ, ಹೋರಾಟದ ಜೀವ ಒಂದು ದಿನ ಹತಾಶೆಗೀಡಾಯಿತು.  ದಗಾಕೋರ ನಾಯಕರು ಚಳವಳಿಯ ದಿಕ್ಕು ತಪ್ಪಿಸಿ ಮಾರಿಕೊಳ್ಳಹೊರಟಿದ್ದಾರೆಂದು ಕೆರಳಿ, ತನ್ನನ್ನು ತಾನು ಪೆಟ್ರೋಲ್ ಸುರಿದು ಸುಟ್ಟುಕೊಂಡು ಪ್ರಾಣ ಬಿಟ್ಟನು. ಬಾಲರಾಜು ಸತ್ತಹೋದನೆಂಬ ಸುದ್ದಿ ಶಾಂತಮ್ಮನ ಕಿವಿಗೆ ಬಿದ್ದಿತು. ಕುಸಿದುಬಿದ್ದಳು. ಮಗನಿಗೆ ಹೇಳಿದ ಯಾವ ಎಚ್ಚರಿಕೆಯೂ ಪ್ರಯೋಜನವಾಗಲಿಲ್ಲ. ಉನ್ನತವ್ಯಾಸಂಗವೆಂದು ಪ್ರಾಣದಿಂದ ಹೋದ ಮಗ, ಶವವಾಗಿ ಊರು ಸೇರಿದನು. ಇಡೀ ತೆಲಂಗಾಣ ಬೆಂದುಹೋಯಿತು. ಮಗನ ನೆನಪಿನಲ್ಲಿಯೇ ಮುಳುಗಿದ  ಶಾಂತಮ್ಮ ಎಂದಿನ ಸ್ಥಿತಿಗೆ ಮರಳಲಿಲ್ಲ. ಈ ಆರು ವರ್ಷಗಳಲ್ಲಿ ದೇಹ ಮತ್ತಷ್ಟು ಕೃಶವಾಗಿದೆ. ಇವತ್ತು ಮಗ ಸತ್ತದಿನವೆಂದು, ಆತನ ಫೋಟೋ ಮಡಿಲಲ್ಲಿಟ್ಟುಕೊಂಡು ಸುತ್ತಮುತ್ತ ನೋಡುತ್ತಿದ್ದಾಳೆ. ಮಗನ ಸುಳಿವಿಲ್ಲ.

ಮಗ ಕಂಡ ಜೀವನ ಬದಲಾಗಬೇಕೆಂಬ ಕನಸು ಹಾಗೇ ಉಳಿದಿದೆ. ಮೌನದಿಂದ ಅಳುತ್ತಿದ್ದಾಳೆ. ಸಂತೈಸುವ ದಿಕ್ಕಿಲ್ಲ. ತೂಗು ಹತ್ತುತ್ತಿದೆ,  ಮಗನ ಫೋಟೋ ಹಿಡಿದುಕೊಂಡು ಹಾಗೇ ನಿದ್ದೆಗೆ ಜಾರಿದಳು. ಬಾಲರಾಜು ಬಂದನು. ಪಕ್ಕದಲ್ಲಿಯೇ ಕುಳಿತು ಸಮಾಧಾನಪಡಿಸುತ್ತಿದ್ದಾನೆ. “ಯಾಕಮ್ಮಾ ಅಳುತ್ತೀಯ. ನಿನ್ನಂತಹ ತಾಯಂದಿರು ಅಳಬಾರದು, ಗರ್ವ ಪಡಬೇಕು. ನೀನು ಮಾಡಿದ ತ್ಯಾಗ ಅಂತಿಥದ್ದಲ್ಲ. ಒಂದು ಮಹಾ ಆಶಯಕ್ಕೆ ನಿನ್ನ ಹೆತ್ತ ಕರುಳನ್ನು ದಾನ ಮಾಡಿದ್ದೀಯ. ಅಂತಹ ಮಹಾ ತಾಯಿ ನೀನು, ಅಳುವುದೇಕೆ? ನಾನು ಸತ್ತುಆರು ವರ್ಷವಾದರೂ ನೀನು ಹೀಗೆ ದುಃಖ ಸಾಗರದಲ್ಲಿ ಮುಳುಗಿದ್ದರೆ ಹೇಗೆ ಹೇಳು?” ಎಂದನು. ಶಾಂತಮ್ಮನಿಗೆ ಏನು ಮಾತನಾಡಬೇಕೋ ಅರ್ಥವಾಗುತ್ತಿಲ್ಲ. “ಮತ್ತೆ ಹೇಳುತ್ತೇನೆ ಕೇಳಮ್ಮಾ.. ನಾನು ಇಲ್ಲದಿದ್ದರೂ, ನಿನಗೆ ತಮ್ಮ ಇದ್ದಾನೆ. ತಮ್ಮನಲ್ಲಿಯೇ ನನ್ನನ್ನು ನೋಡು”ಎಂದನು.

ಶಾಂತಮ್ಮನಿಗೆ ಬರುತ್ತಿದ್ದ ಕೋಪದಲ್ಲಿ, “ಯಾಕೋ ಹೀಗೆ ಮಾಡಿದೆ?” ಎಂದು ದಬಾಯಿಸಿ ಕೇಳಬೇಕೆಂದುಕೊಂಡಳು. ಆದರೆ, ಅಪರೂಪಕ್ಕೆ ಬಂದಿರುವ ಮಗ, ಜಗಳ ಮಾಡಿದರೆ ಕಾಣದೆ ಮತ್ತೆ ಎಲ್ಲಿ ಹೊರಟುಹೋಗುವನೋ ಎಂದು ಸುಮ್ಮನಾದಳು. ಮಗನೊಂದಿಗೆ ಸಾಕಷ್ಟುಅದೂ ಇದೂ ಮಾತನಾಡಬೇಕೆಂದುಕೊಂಡಳು. ಸ್ವಲ್ಪಹೊತ್ತು ತನ್ನ ದುಃಖವನ್ನು ಮರೆತು ಗಂಟಲು ಸರಿಮಾಡಿಕೊಂಡಳು. “ಅಮ್ಮಾ..ಅಮ್ಮಾ..” ಎಂದು ಚಿಕ್ಕ ಮಗ ಕೂಗಿದ ಶಬ್ದ ಕೇಳಿ ಶಾಂತಮ್ಮ ಕಣ್ಣು ತೆರೆದಳು. ಇದೆಲ್ಲ ‘ಕನಸಾ’ ಎಂದು ಬಾಧೆಪಟ್ಟಳು. ಬಾಲರಾಜು ಇನ್ನೂಏನು ಹೇಳುತ್ತಿದ್ದನೋ ಎಂದು ಒಂದಷ್ಟು ಛಡಪಡಿಸಿದಳು. ಆ ರಾತ್ರಿ ಮತ್ತೆ ಮಗನಿಗೋಸ್ಕರ ನಿದ್ದೆಯಲ್ಲಿ ಎದುರು ನೋಡುತ್ತ ಕುಳಿತಳು.

“ಏನಮ್ಮಾ ನೀನು ಹೀಗೆ ಬಾಧೆಪಡುವುದು ಯಾಕಮ್ಮಾ? ದೇಶಕ್ಕೆ, ನಂಬಿದ ಪ್ರಜೆಗಳಿಗೆ ಕಷ್ಟ ಬಂದಾಗ ಯಾವ ತಾಯಿಯಾದರೂ ತನ್ನ ಮಕ್ಕಳನ್ನು ಕೂಡ ಆ ಆಶಯಕ್ಕಾಗಿ ಕೊಡಬೇಕು, ಕೊಡುತ್ತಾಳೆ. ನೀನು ಕೂಡ ಅದೇ ಮಾಡಿದೆ ಅಂದುಕೋ” ಎಂದನು. ಶಾಂತಮ್ಮಏನೋ ಕೇಳಬೇಕೆಂದುಕೊಂಡಳು. ತನ್ನ ಮುದ್ದು ಮಗ, ಏನೋ ಹೇಳುತ್ತಿದ್ದರೆ ಕೇಳುವುದೇ ಚೆನ್ನಾಗಿರುತ್ತದೆಯೆಂದು, ಮಗನನ್ನು ಮೈಮರೆತು ನೋಡುತ್ತಿದ್ದಾಳೆ. ಬಾಲರಾಜು ಹೇಳುವ ಮಾತುಗಳನ್ನು ಇವತ್ತು ಕೇಳಬೇಕಾದ್ದೇ ಎಂದುಕೊಂಡಳು. ಇನ್ನು ಇವತ್ತು ಕೆಲಸಮಾಡುವುದು ಅದೂ ಇದೂ ಏನೂ ಇಲ್ಲ. ಹೆತ್ತ ಮಗ ಏನು ಹೇಳಿದರೆ ಅದನ್ನೇ ಕೇಳುತ್ತೇನೆ ಎಂದುಕೊಂಡಳು. “ಅಮ್ಮಾ ನನ್ನ ಹಾಗೆಯೇ ಹದಿಮೂರು ನೂರು ಮಂದಿ ಪ್ರಾಣ ಧಾರೆ ಎರೆದರೆ ಅಲ್ಲವಾ ಈ ನೆಲ ಸ್ವತಂತ್ರವಾದದ್ದು. ಮತ್ತೆ ಆ ತಾಯಂದಿರು ಎಲ್ಲರೂ ನಿನ್ನ ಹಾಗೆಯೇಅಳುತ್ತ ಕುಳಿತರೆ ಹೇಗೆ? ನಾವು ತಲೆಮಾರುಗಳು ಚೆನ್ನಾಗಿರಬೇಕೆಂದು ಬಲಿದಾನದ ಮಾರ್ಗ ಹಿಡಿದೆವು. ಸಂವಿಧಾನ ನಮಗೆ ನೀಡಿದ ಹಕ್ಕುಗಳು ಸಿಗಬೇಕು. ಅದು ಕೇವಲ ಸ್ವಂತ ರಾಜ್ಯವಾದರೆ ಮಾತ್ರ ಸಾಧ್ಯವಾಗುತ್ತದೆ ಎಂದು ನಂಬಿದೆವು…”ಏನೇನೋ ಹೇಳುತ್ತಹೋಗುತ್ತಿದ್ದಾನೆ ಬಾಲರಾಜು.

ತಾಯಿ ಎಷ್ಟುಹೊತ್ತೂ ‘ಊಂ’ಗುಡುತ್ತಿದ್ದಾಳೇ ಹೊರತು, ಕೇಳುತ್ತಿರುವಳೋ ಇಲ್ಲವೋ ಎಂದು ಅನುಮಾನ ಬಂದಿತು ಬಾಲರಾಜುವಿಗೆ. “ನೀನು ಏನೂ ಮಾತನಾಡುತ್ತಿಲ್ಲ ಏಕಮ್ಮಾ” ಎನ್ನುತ್ತ ಅಲುಗಾಡಿಸಿದನು.

ಶಾಂತಮ್ಮ “ನನ್ನನ್ನು ಏನು ಮಾತನಾಡು ಎನ್ನುತ್ತೀಯ ಮಗನೇ. ನನ್ನ ಮಾತು ಯಾವತ್ತಾದರೂ ನೀನು ಕಿವಿಗೆ ಹಾಕಿಕೊಂಡಿದ್ದೀಯ? ಈ ತಾಯಿಯ ದುಗುಡವನ್ನು ನೀನು ಯಾವತ್ತಾದರೂ ಅರ್ಥ ಮಾಡಿಕೊಂಡಿದ್ದೀಯೇನೋ? ನಿನಗೆ ಜಗತ್ತು ಮುಖ್ಯ. ನನಗೆ ನೀನೇ ಮುಖ್ಯ”ಎಂದಳು.  ಹೀಗೆ ಇಬ್ಬರ ನಡುವೆ ಏನೇನೋ ಸಂಭಾಷಣೆಗಳು ನಡೆಯುತ್ತಿವೆ. ಕಾಗೆಗಳ ಕೂಗಾಟ ಕೇಳಿಸುತ್ತಿದೆ. ಪಕ್ಷಿಗಳ ಕಲರವ ಬೆಳಗಾಯಿತೆಂದು ನೆನಪಿಸುತ್ತಿದೆ. ಚಿಕ್ಕಮಗ ಆಗಲೇ ಎದ್ದಿರುವಂತಿದೆ. ಅಮ್ಮನ ಬಳಿ ಬಂದು “ಅಮ್ಮ..ಅಮ್ಮಾ ಇನ್ನೂ ನಿದ್ದೆಯಿಂದ ಎದ್ದಿಲ್ಲವಾ.ಬೆಳಗಾಗಿದೆಯಮ್ಮಾ” ಎಂದನು.

ಶಾಂತಮ್ಮ ಎದ್ದು ಕುಳಿತಳು. ಕನಸಿನಲ್ಲಿ ಬಾಲರಾಜುವನ್ನು ಪೂರ್ತಿ ಮಾತನಾಡಲಿಲ್ಲ. ಚಿಕ್ಕ ಮಗ ಇವತ್ತು ಆ ಎಂಆರ್‍ಒ ಆಫೀಸಿಗೆ ಹೋಗಿಬರುತ್ತೇನೆ, ನಮಗೆ ಮೂರು ಎಕರೆ ಭೂಮಿ ಎಂದು ಹೇಳಿದ್ದರಲ್ಲವಾ. ಇನ್ನೆಷ್ಟು ದಿನ ಓಡಾಡಿಸುತ್ತಾರೋ ಕೇಳಿ ಬರುತ್ತೇನೆ.ಶಾಂತಮ್ಮನಿಗೆ ಮತ್ತೆ ಆತಂಕ ಶುರುವಾಯಿತು. “ಬೇಡ ಮಗನೇ ನಮಗೇಕೋ ಇಲ್ಲಸಲ್ಲದ ಗಲಾಟೆಗಳು” ಎಂದಳು. “ಮತ್ತೆ ಅಣ್ಣ ಸತ್ತ ಸಾವಿಗೆ ಇನ್ನು ಅರ್ಥವೇನಿದೆಯಮ್ಮ. ನಮ್ಮಂತಹ ಬಡವರಿಗೆ ನ್ಯಾಯ ದೊರೆಯದಿದ್ದರೆ ಈ ಸಾಧಿಸಿದ ರಾಜ್ಯ ಏತಕ್ಕೆ?!” ಎಂದನು.

“ಮಗನೇ ನಿನ್ನ ಆವೇದನೆ ಒಳ್ಳೆಯದೇ. ಆದರೆ, ನನ್ನ ಕರುಳಿನ ಕೂಗು ಸ್ವಲ್ಪ ಕೇಳಪ್ಪ. ನಿಮ್ಮ ಅಣ್ಣ ಕೂಡ ಹೀಗೇ ನ್ಯಾಯ, ಧರ್ಮ ಎನ್ನುತ್ತ ತಿರುಗಿ ಕೈಗೆ ಸಿಗದೆ ಹೋದ, ಸಹಿಸಲಾರದ ದುಃಖಕ್ಕೆ ದೂಡಿ ಹೋದ. ಸ್ವಲ್ಪ ನೀನಾದರೂ ಚೆನ್ನಾಗಿ ಓದಿಕೋ ಮಗನೆ” ಎಂದಳು. ಚಿಕ್ಕಮಗನ ಆವೇದನೆಯ ಪ್ರಶ್ನೆಗಳನ್ನು ದೊಡ್ಡಮಗನನ್ನು ಕೇಳಬೇಕೆಂದುಕೊಂಡಳು. ಚಿಕ್ಕ ಮಗ ಆತುರಾತುರವಾಗಿ ಎಂಆರ್‍ಒ ಆಫೀಸಿಗೆ ಹೊರಟನು. ತಂದೆಯಿಲ್ಲದ ಈ ಮನೆಯಲ್ಲಿ ಯಾರ ನೋವು ಅವರದು! ದೊಡ್ಡ ಮಗ ಜನರ ನೋವನ್ನು ತನ್ನ ನೋವೆಂದು ಪ್ರಾಣನೀಡಿದನು. ತಾಯಿ ತನ್ನ ನೋವನ್ನು ಲೆಕ್ಕಿಸದೆ ತನ್ನನ್ನು ಬಿಟ್ಟು ಹೋದದ್ದಕ್ಕೆ ದುಃಖಸಾಗರದಲ್ಲಿ ಮುಳುಗಿದ್ದಾಳೆ. ಮತ್ತೆ ಚಿಕ್ಕ ಮಗನಾದರೂ ತೃಪ್ತಿಯಾಗಿದ್ದುದಿಲ್ಲ. ಎಂಆರ್‍ಒ ಆಫೀಸಿಗೆ ಹೊರಡುತ್ತಿದ್ದಂತೆಯೇ ಎದುರು ಮನೆಯ ಬುಚ್ಚಯ್ಯ ತಾತ ಎದುರಿಗೆ ಬಂದನು. “ಏನಪ್ಪಾರಮೇಶ, ಇನ್ನು ನೀನು ಮದುವೆ ಮಾಡಿಕೊಳ್ಳುವುದಿಲ್ಲವಾ? ನಿನ್ನ ಜೊತೆಯವರಿಗೆ ಮದುವೆಯಾಗಿ ಮೂರು ಮೂರು ಮಕ್ಕಳನ್ನು ಹೆತ್ತಿದ್ದಾರಲ್ಲವಾ?” ಎಂದನು. ರಮೇಶನಿಗೆ ಉರಿದುಹೋಗುತ್ತಿದೆ. ಇಲ್ಲಿ ‘ಗಡ್ಡ ಸುಡುತ್ತಿದ್ದರೆ ಬೀಡಿ ಅಂಟಿಸಿಕೊಳ್ಳುತ್ತೇನೆ’ ಎನ್ನುವ ಹಾಗಾಯಿತುಎಂದುಕೊಂಡನು.

ಬುಚ್ಚಯ್ಯ ತಾತ ರಮೇಶನನ್ನು ಮದುವೆಯ ಕುರಿತು ಕೇಳುತ್ತಿರುವುದು ಇದೇ ಮೊದಲಲ್ಲ. ಸಾಕಷ್ಟು ಬಾರಿ ಕೇಳಿದ್ದಾನೆ. ಬುಚ್ಚಯ್ಯ ತಾತನಂತಹ ಮುದುಕರು ಮದುವೆಯ ಕುರಿತು ಚುಚ್ಚಿ ಚುಚ್ಚಿ ಕೇಳುತ್ತಿದ್ದರೆ, ಇನ್ನು ಮಧ್ಯವಯಸ್ಸಿನವರು ರಮೇಶನನ್ನು ಉದ್ಯೋಗದ ಕುರಿತುಕೇಳಿ ಕೇಳಿ ಪೀಡಿಸುತ್ತಿದ್ದರು. “ಏಯ್ ರಮೇಶ, ಇನ್ಯಾವಾಗ ಉದ್ಯೋಗ ಸಿಗುತ್ತದೆಯೋ ನಿನಗೆ! ವಯಸ್ಸು ತುಂಬುತ್ತಿದ್ದರೂ ಒಂದು ಮದುವೆ-ಗಿದುವೆಯಿಲ್ಲ, ಹೀಗೇ ಇರುತ್ತೀಯಾ?” ಎನ್ನುತ್ತ ಅವಹೇಳನ ಮಾಡಿ ನಗುತ್ತಿದ್ದರು. ಆ ಮಾತುಗಳಿಗೆ ರಮೇಶನಿಗೆ ಕೋಪನೆತ್ತಿಗೇರುತ್ತಿತ್ತು.

ಇಷ್ಟಕ್ಕೂ ತನಗೆ ಉದ್ಯೋಗ ದೊರೆಯದಿರುವುದಕ್ಕೆ ಕಾರಣ ಯಾರು? ತನ್ನ ಅಣ್ಣ, ಅಣ್ಣನೊಂದಿಗೆ ನೂರಾರು ವಿದ್ಯಾರ್ಥಿಗಳು ಪ್ರಾಣತೆತ್ತು ಬಲಿಯಾಗಿದ್ದು ಏತಕ್ಕಾಗಿ? ಮೋಸ ಎಲ್ಲಿ ನಡೆಯುತ್ತಿದೆ? ಯೋಚಿಸಿ, ಯೋಚಿಸಿ ಇನ್ನು ಊರ ಜನರಿಗೆ ಕಾಣಿಸದೆ ಓಡಾಡಬೇಕೆಂದುನಿರ್ಧರಿಸಿದನು. ಅದಕ್ಕೇ ಯೂನಿವರ್ಸಿಟಿಯಲ್ಲಿ ಓದುವಾಗ ಊರೆಲ್ಲ ನಿದ್ದೆ ಮಾಡಿದ ಮೇಲೆ ಅರ್ಧರಾತ್ರಿ ಮನೆ ಸೇರುತ್ತಿದ್ದನು. ಹೀಗೆ ಒಂದೆರಡು ದಿನ ಮನೆಗೆ ಹೋದ ಮೇಲೆ ಹೊರಗೆ ಬರದೆ ಅಮ್ಮನ ಬಳಿಯೇ ಇದ್ದು, ಬೀದಿಯ ಜನಗಳು ನಿದ್ದೆಯಿಂದೇಳುವ ಮುನ್ನ ಮೊದಲನೇಬಸ್ಸಿಗೆ ಪಟ್ಟಣದ ದಾರಿ ಹಿಡಿಯುತ್ತಿದ್ದನು. ಹಾಗೆ ಹೋಗುವಾಗ ರಮೇಶನಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು.

“ನಿನ್ನ..ನ್ ಏನು ಜೀವನ ಇದು? ಜೀವನವಿಡೀ ಏನು ಈ ಪಜೀತಿ? ನಾನು ಯಾವ ಕಳ್ಳತನ ಮಾಡಿದ್ದೀನಿ ಅಂತ ಹೀಗೆ ಎಷ್ಟು ದಿನ ಜನರ ಕಣ್ಣು ತಪ್ಪಿಸಿ ಓಡಾಡಬೇಕು?” ಎಂದು ತನ್ನಲ್ಲೇ ಯೋಚಿಸಿ ಕೊರಗುತ್ತಿದ್ದನು. ಇನ್ನು ಈಗ ಬುಚ್ಚಯ್ಯ ತಾತ ಸಾಲ ನೀಡಿದವರಂತೆಮತ್ತೊಮ್ಮೆ ಮದುವೆಯ ಮಾತೆತ್ತಿದನು. ರಮೇಶ ಮಾತ್ರ ಬಾಯಿಗೆ ಬಂದ ಕೆಟ್ಟಮಾತುಗಳನ್ನು ತಡೆದುಕೊಂಡು, ಒಂದು ಕಿರುನಗೆ ನಕ್ಕು ಬುಚ್ಚಯ್ಯನಿಂದ ತಪ್ಪಿಸಿಕೊಂಡನು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಬಸ್‍ಸ್ಟ್ಯಾಂಡ್ ಬಳಿ ಟೀ ಕುಡಿಯುತ್ತ ಪೇಪರ್ ಓದುತ್ತಿದ್ದವರಲ್ಲಿರಮೇಶನಿಗೆ ದೂರದ ನೆಂಟರಾಗುವ ವೆಂಕನ್ನ ಮಾವ ಕಾಣಿಸಿದನು. ರಮೇಶನನ್ನು ನೋಡುತ್ತಲೇ ನಮಸ್ಕಾರ ಮಾಡಿದನು. ರಮೇಶನು ಕೂಡ ಅಷ್ಟೇ ಗೌರವದಿಂದ “ನಮಸ್ಕಾರ ಮಾವ” ಎನ್ನುತ್ತ ಹತ್ತಿರ ಹೋದನು. “ಟೀ ಕುಡಿ ಅಳಿಮಯ” ಎಂದು ಟೀ ತಂದುಕೊಟ್ಟನು.ರಮೇಶ ಕುಡಿಯುತ್ತಿರುವಾಗಲೆ ಒಂದು ಕಹಿಸುದ್ದಿ ಹೇಳಿದನು. “ಅಳಿಮಯ, ನನ್ನ ಮಗಳು ಸುವರ್ಣ ಕೂಡ ಪಟ್ಟಣದಲ್ಲಿಯೇ ಓದುತ್ತಿದ್ದಾಳಲ್ಲವಾ, ಅವಳ ಓದು ಮುಗಿಯುತ್ತಿದೆ.

ಯಾವುದಾದರೂ ಒಂದು ಒಳ್ಳೆಯ ಸಂಬಂಧ ಇದ್ದರೆ ಸ್ವಲ್ಪ ನೋಡು” ಎಂದನು. ಹಾಗೆ ಹೇಳಿ ಕೂಡಲೇ “ಗುಣದಲ್ಲಿ ನಿನ್ನ ಹಾಗೇ ಇರಬೇಕು. ಆದರೆ, ಯಾವುದಾದರೂ ಉದ್ಯೋಗದಲ್ಲಿರುವ ಹುಡುಗ ಬೇಕು” ಎಂದನು. ರಮೇಶ ಕುಡಿಯುತ್ತಿದ್ದ ಟೀ ಅರ್ಧದಲ್ಲಿಯೇ ಬಿಟ್ಟು “ಸರಿಮಾವ ಬಸ್ ಬಂದಿತು ನಾನು ಹೊರಡುತ್ತೇನೆ” ಎನ್ನುತ್ತ ಎದ್ದು ಹೋದನು. ರಮೇಶನ ಕಣ್ಣಲ್ಲಿ ನೀರು ಸುರಿಯುತ್ತಿದೆ. ಚಿಕ್ಕಂದಿನಿಂದಲೂ ತನಗೇ ಕೊಡುತ್ತೇನೆ ಎನ್ನುತ್ತಿದ್ದ ಸುವರ್ಣಳಿಗೆ, ಈಗ ತನಗೆ ಉದ್ಯೋಗ ಇಲ್ಲವೆಂದು, ಇನ್ನು ಸಿಗುವುದಿಲ್ಲವೆಂದು ವೆಂಕನ್ನ ಮಾವ ಬೇರೆಹುಡುಗನನ್ನು ನೋಡುವಂತೆ ತನಗೇ ಹೇಳಿದ್ದು ರಮೇಶನ ಎದೆಗೆ ಕಲ್ಲು ಬಿದ್ದಂತಾಯಿತು. ಇನ್ನು ಶಾಂತಮ್ಮ ಕನಸಿನಲ್ಲಿ ದೊಡ್ಡ ಮಗನೊಂದಿಗೆ ಮಾತನಾಡಲು ಹಾಗೇ ಮಲಗಿದ್ದಾಳೆ.

ಆದರೆ, ಅಭ್ಯಾಸವಿಲ್ಲದ ಸಮಯದಲ್ಲಿ ನಿದ್ದೆ ಹೇಗೆ ಬರುತ್ತದೆ? ಅತ್ತಿತ್ತ ಕದಲುತ್ತ ನಿದ್ದೆಯನ್ನು “ಬರಬಾರದಾ ತಾಯಿ” ಎನ್ನುತ್ತ ಕೇಳಿಕೊಂಡಳು. ಆದರೂ ಕರೆದಾಗ ಬರಲು ಅದೇನು ಮನುಷ್ಯ ಅಲ್ಲವಲ್ಲ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡಳು. ಇನ್ನು ಲಾಭವಿಲ್ಲ!ರಾತ್ರಿ ಮಲಗಿದರೆ ನಿದ್ದೆ ಬಂದೇ ಬರುತ್ತದೆ. ಆ ನಿದ್ದೆಯಲ್ಲಿ ಬರುವ ಕನಸಿನಲ್ಲಿ ಬಾಲರಾಜು ತಪ್ಪದೆ ಬರುತ್ತಾನೆ. ಚಿಕ್ಕ ಮಗ ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳು ಎನ್ನಬೇಕು ಎಂದುಕೊಂಡಳು ಶಾಂತಮ್ಮ. ಯಾವಾಗ ಹೊತ್ತು ಸರಿಯುತ್ತದಾ ಎಂದು ಎದುರುನೋಡುತ್ತಿದ್ದಾಳೆ.ಕೂಲಿಗೆ ಹೋದ ದಿನ ಕೂಡ ಹೀಗೆ ಹೊತ್ತು ಮುಳುಗುವ ಕುರಿತು ಯೋಚಿಸಿರಲಿಲ್ಲ ಶಾಂತಮ್ಮ.

ಆಕೆ ಎದುರುನೋಡುತ್ತಿರುವುದನ್ನು ಕಂಡು, ಸೂರ್ಯ ಪಶ್ಚಿಮದ ಬೆಟ್ಟಗಳಲ್ಲಿ ಬಾಗಿಹೋದನು. ಊರೆಲ್ಲರಿಗೂ ತೂಗು ಹತ್ತುವ ಮೊದಲೇ ಶಾಂತಮ್ಮ ನಿದ್ದೆಗೆ ಜಾರಿದಳು. “ಅಮ್ಮ ಸ್ವತಂತ್ರ ಆಳ್ವಿಕೆಯಲ್ಲಿ ಜೀವಿಸುವುದಕ್ಕಿಂತಲೂ ಹೆಮ್ಮೆ ಏನಿರುತ್ತದಮ್ಮ” ಎಂದನು ಬಾಲರಾಜು.ಶಾಂತಮ್ಮ ಮಾತ್ರ ಚಿಕ್ಕ ಮಗ ಕೇಳಿದ ಪ್ರಶ್ನೆಯಿಂದ ಕುದಿಯುತ್ತಿದ್ದಾಳೆ. ಆದರೂ ಬಾಲರಾಜು ಈಗಲೇ ಬಂದಿದ್ದಾನೆಂದು ಅವನು ಹೇಳಿದ್ದನ್ನು ಕೇಳುತ್ತಿದ್ದಾಳೆ. “ಹಸಿವಿಗಿಂತ ಆತ್ಮಗೌರವ ಮುಖ್ಯ ಅಮ್ಮಾ, ಅದಕ್ಕೇ ನಾವು ಪ್ರಾಣ ಕೂಡ ತೆತ್ತೆವು. ಸಂಪನ್ಮೂಲಗಳಿದ್ದು,ಜೀವನದಿಗಳಿದ್ದು, ಶೋಷಿತರಾಗಿ ಬದುಕುವುದೇಕೆಂದೇ ನಾವು ಹೋರಾಟದ ಹಾದಿ ಹಿಡಿದೆವು. ಕೊನೆಗೆ ನಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಟ ಮಾಡಿದೆವು. ಈ ಕನಸಿಗಾಗಿ ಎಷ್ಟು ಜನರು, ಎಷ್ಟು ತ್ಯಾಗ ಮಾಡಿದರೋ ನಿನಗೆ ಗೊತ್ತಾ ಅಮ್ಮಾ” ಎಂದು ಆವೇಶದಿಂದಏನೇನೋ ಹೇಳುತ್ತಿದ್ದಾನೆ. ಆ ಮಾತುಗಳಿಗೆ ಶಾಂತಮ್ಮನಿಗೆ ಏನು ಹೇಳಬೇಕೋ ಅರ್ಥವಾಗುತ್ತಿಲ್ಲ. ಹಾಗೆ ಆ ರಾತ್ರಿಯೆಲ್ಲ ಬಾಲರಾಜುವಿನ ಮನಸ್ಸಿನಲ್ಲಿ ಈ ನೆಲದ ಮೇಲಿನ ಮಮಕಾರದ ಆವೇದನೆಯನ್ನು ಕೇಳುತ್ತಲೇ ಇದ್ದಾಳೆ.

ಯಾವಾಗ ಬೆಳಗಾಯಿತೋ ಗೊತ್ತಾಗಲೇ ಇಲ್ಲ. ಪಕ್ಕದ ಮನೆಯ ಲಚ್ಚಮ್ಮ ಬಂದು ಕರೆದಾಗ ಎಚ್ಚರವಾಯಿತು. ಮಗನನ್ನು ಕೇಳಬೇಕೆಂದುಕೊಳ್ಳುವ ಸಮಯಕ್ಕೇ ಯಾರಾದರೂ ಬರುವುದು, ಹೀಗೆ ನಿದ್ದೆ ಹಾಳುಮಾಡುವುದು ಶಾಂತಮ್ಮನಿಗೆ ಬೇಸರ ತರಿಸುತ್ತಿತ್ತು. ರಮೇಶಇವತ್ತು ಬೆಳಗ್ಗೆಯೇ ರೆಡಿ ಆಗಿದ್ದಾನೆ. ಎಲ್ಲಿಗೋ ಹೊರಟಿದ್ದಾನೆ. “ಮಗನೇ ನೀನು ನಿನ್ನ ಅಣ್ಣನ ದಾರಿಯಲ್ಲಿ ನಡೆಯಬೇಡ. ಚೆನ್ನಾಗಿ ಓದಿಕೋ ಮಗನೇ” ಎಂದಳು. ರಮೇಶ ತಾಯಿಯನ್ನು ಕೋಪದಿಂದ ನೋಡಿದ. ಯೂನಿವರ್ಸಿಟಿಗಳಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದೆವು. ರಾಜ್ಯಬಂದರೆ ಉದ್ಯೋಗ ಬರುತ್ತವೆಂದು ಆಸೆಗಣ್ಣಿನಿಂದ ಎದುರು ನೋಡಿದೆವು. ನಿನಗೆ ಒಂದಿಷ್ಟು ಅಗುಳು ಅನ್ನ ಹಾಕಲು ಎಲ್ಲಮ್ಮಾ ನನಗೆ ಉದ್ಯೋಗ? ಇದಕ್ಕೇನಾ ಈ ನೆಲವನ್ನು ಸಾಧಿಸಿಕೊಂಡದ್ದು, ನನ್ನಣ್ಣ ತನ್ನ ಪ್ರಾಣವನ್ನು ಧಾರೆಯೆರೆದದ್ದು” ಆವೇಶದಿಂದ ಏನೇನೋಬೈಯ್ಯುತ್ತ ಹೊರಟುಹೋದನು.

ಶಾಂತಮ್ಮನಿಗೆ ಮತ್ತೆ ಅಶಾಂತಿಯೇ ಉಳಿಯಿತು. ಇನ್ನು ಲಾಭವಿಲ್ಲ. ಬಾಲರಾಜುವನ್ನು ಇವತ್ತು ರಾತ್ರಿ ಕೇಳಬೇಕು. ತಮ್ಮನ ಪ್ರಶ್ನೆಗಳಿಗೆ ಸಮಾಧಾನ ಹೇಳು ಎಂದು ಕೇಳಬೇಕು ಎಂದುಕೊಂಡಳು. ಅಂದುಕೊಂಡಹಾಗೆಯೇ ಇವತ್ತು ಕೂಡ ಬೇಗನೇ ಮಲಗಿಕೊಂಡಳು.ಶಾಂತಮ್ಮನಿಗೆ ಏನೂ ಅರ್ಥವಾಗುತ್ತಿಲ್ಲ. ದೊಡ್ಡ ಮಗನೇನೋ ಎಲ್ಲ ಚೆನ್ನಾಗಿದೆಯೆಂದು ಕನಸಿನಲ್ಲಿ ಮಾತನಾಡುತ್ತಿದ್ದಾನೆ. ನಿಜದಲ್ಲಿ ಚಿಕ್ಕ ಮಗ ಆವೇದನೆಯಿಂದ ಕೆರಳುತ್ತಿದ್ದಾನೆ. ಇದು ತನ್ನೊಬ್ಬಳ ನೋವಾ..? ಅಮರವೀರರ ತಂದೆತಾಯಿಯರೆಲ್ಲರ ನೋವಾ?! ಎಂದುಯೋಚಿಸುತ್ತಿದ್ದಾಳೆ. ಯಾವುದು ಹೇಗೇ ಇರಲಿ ಉತ್ತರ ಸಿಗದ ಈ ಪ್ರಶ್ನೆಗಳಿಗೆ ಉತ್ತರ ಹೇಳುವಂತೆ ಬಾಲರಾಜುವನ್ನು ಕೇಳಬೇಕೆಂದುಕೊಳ್ಳುತ್ತ ನಿದ್ದೆಗೆ ಜಾರಿದಳು.

“ಪ್ರಪಂಚವಿಡೀ ತಲೆಯೆತ್ತಿ ನೋಡಿದ ಈ ಮಹತ್ತರ ಹೋರಾಟ, ಈ ನೆಲಕ್ಕೆ ಹೊಸ ಚರಿತ್ರೆಯನ್ನು ಬರೆದಿದೆ. ಇದಕ್ಕಿಂತಲೂ ಏನು ಬೇಕು. ಈ ಕಾಲದಲ್ಲಿ ಜೀವಿಸಿದವರೆಲ್ಲರೂ ಈ ಇತಿಹಾಸದ ಭಾಗಿಗಳೇ. ಅರ್ಥವಾಯಿತಾ ಅಮ್ಮಾ” ಎನ್ನುತ್ತ ಎಂದಿನಂತೆ ಭಾರಿ ಉಪನ್ಯಾಸನೀಡುತ್ತಿದ್ದಾನೆ ಬಾಲರಾಜು.

ಶಾಂತಮ್ಮನಿಗೆ ಮಾತ್ರ ಇಂದು ಬಾಯಿ ತೆರೆಯದೆ ಸುಮ್ಮನಿರಲಾಗಲಿಲ್ಲ. “ಹಾಗಾದರೆ ನೀವು ಪ್ರಾಣ ಧಾರೆಯೆರೆದರೆ ನೀವು ಕಂಡ ಕನಸುಗಳೆಲ್ಲ ನಿಜವಾಯಿತಾ ಮಗನೇ?”

ಊಹಿಸದ ಪ್ರಶ್ನೆಯಿಂದ ಬಾಲರಾಜುವಿಗೆ ಆಶ್ಚರ್ಯವಾಯಿತು. “ಅದೇನಮ್ಮಾ ಹಾಗೆ ಕೇಳುತ್ತಿದ್ದೀಯ. ದೇಶ ಚೆನ್ನಾಗಿ ಆಗಲಿಲ್ಲವೆಂದು, ದೇಶಕ್ಕೆ ಸ್ವಾತಂತ್ರ್ಯವೇ ಬೇಡವೆಂದು ಕೋರಿಕೊಳ್ಳುತ್ತೇವೆಯಾ ಹೇಳು? ಯಾವುದರ ಲೆಕ್ಕ ಅದರದ್ದೇ! ವಿಮುಕ್ತಿ ವಿಮುಕ್ತಿಯೇ, ಹೋರಾಟಹೋರಾಟವೇ. ಯಾವುದಾದರೂ ನಿಧಾನವಾಗಿ ಬದಲಾಗಬೇಕಾದ್ದೇ. ಇದು ಪ್ರಕೃತಿಯ ಧರ್ಮ” ಎನ್ನುತ್ತ ಇನ್ನೂ ಏನೋ ಹೇಳಹೊರಟಿದ್ದಾನೆ. ತಾಯಿಗೆ ಮಾತ್ರ ಇನ್ನು ಕೇಳುವ ಸಹನೆ ಮೀರಿತು. “ನೀನೇ ಹೇಳುತ್ತಿದ್ದೆ ಅಲ್ಲವಾ ಮಗನೇ? ಇವತ್ತಿಗೆ ಮೂರು ತಲೆಮಾರುನಾಶವಾಯಿತು, ಇನ್ನೆಷ್ಟು ತಲೆಮಾರು ಹಾಳಾಗಬೇಕು ಮಗನೇ? ನಿನ್ನ ತಮ್ಮನಂತಹವರ ಜೀವನ ಬದಲಾಗುವುದು ಎಂದಿಗೋ ಹೇಳು? ಒಂದು ಉದ್ಯೋಗವಿಲ್ಲ, ಮದುವೆ ಗಿದುವೆಯಿಲ್ಲ, ಅದೆಲ್ಲ ಏಕೋ.. ನಮ್ಮ ಗುಡಿಸಲಿನ ಹಣೆಬಹರ ಬದಲಾಗುವುದೆಂದು ಹೇಳು ಮಗನೇ?ನಮಗೇನು ಪ್ರಯೋಜನವಾಯಿತೆಂದು ನಿನ್ನ ತಮ್ಮ ದಿನವೂ ಕೇಳುತ್ತಿದ್ದಾನೆ. ಇಷ್ಟುದಿನ ಬಚ್ಚಿಟ್ಟುಕೊಂಡಿದ್ದ ಪ್ರಶ್ನೆಗಳನ್ನೆಲ್ಲ ಮಗನ ಮೇಲೆ ಮಳೆಗೈದಳು. ಬಾಲರಾಜುವಿಗೆ ಬಾಯಲ್ಲಿ ಮಾತು ಹೊರಡುತ್ತಿಲ್ಲ.

ತಮ್ಮನ ಪ್ರಶ್ನೆಗಳಿಗೆ, ತಾಯಿಯ ಆವೇದನೆಗೆ ಉತ್ತರ ಹೇಳಲಾರದೆ ಬಾಲರಾಜು ಕನಸಿನಿಂದ ಹೊರಟುಹೋದನು. ಆಗಿನಿಂದ ಶಾಂತಮ್ಮನಿಗೆ ಯಾವ ಕನಸೂ ಬರಲಿಲ್ಲ. ಕಾರಣ ಆಕೆಗೆ ಇನ್ನು ಶಾಶ್ವತವಾಗಿ ಸುಳ್ಳು ನಿದ್ದೆಯೇ ಉಳಿಯಿತು. ಇದು ಹದಿಮೂರುನೂರತಾಯಂದಿರ ಕಥೆ.

‍ಲೇಖಕರು avadhi

3 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading