ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಧ್ಯಮ ರಂಗಕ್ಕೆ ಆವರಿಸಿಕೊಳ್ಳಲಿರುವ ನುಸಿಪೀಡೆ ಎಂದು ಅನಿಸಿ ಹೋಯಿತು..

ಜಿ ಎನ್ ಮೋಹನ್ 

”ದೇಶ ಎಂದರೆ ಬರೀ ಮಣ್ಣಲ್ಲ, ಮನುಷ್ಯರು..” ಎನ್ನುವ ನಂಬಿಕೆಯನ್ನು ಅಳಿಸಿಹಾಕಿದ್ದು ಜಾಗತೀಕರಣ. ಎಲ್ಲವನ್ನೂ ಮಾರಾಟ ಮಾಡಿಬಿಡಬಹುದು, ಎಲ್ಲವನ್ನೂ ಒತ್ತೆ ಇಡಬಹುದು ಎನ್ನುವ ಕಲ್ಪನೆಗೆ ಕುಮ್ಮಕ್ಕು ಕೊಟ್ಟಿದ್ದೂ ಇದೇ. ದೇಶ ಎಂದರೆ ಅದು ಇಡೀ ದೇಶ ಎನ್ನುವ ಕಲ್ಪನೆಯೂ ಇಲ್ಲವಾಗಿದ್ದು ಇದೇ ಜಾಗತೀಕರಣದಿಂದ. ಯಾವುದೋ ಒಂದು ನಗರ, ಯಾವುದೋ ಒಂದು ಹಳ್ಳಿ ಯನ್ನು ಹೆಕ್ಕಿ ಅದನ್ನು ಹೊಳೆಯುವಂತೆ ಮಾಡಿ, ಮಿಣು ಮಿಣುಕಿನ ಕವರ್ ನಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಇಡಬಹುದು ಎಂದು ಗೊತ್ತಾದದ್ದು ಜಾಗತೀಕರಣದ ಮೂಲಕ. ಈ ಮಾರಾಟಕ್ಕೆ ಹೊಳಪಿನ ಪದಗಳೇ ಆಗಬೇಕು. ಹಾಗಾಗಿ ಬ್ರಾಂಡ್ ಸಿಟಿ ಎನ್ನುವ ಹೆಸರೂ ಚಲಾವಣೆಗೆ ಬಂತು.

‘ಮಾಧ್ಯಮ ರಂಗಕ್ಕೆ ನುಸಿಪೀಡೆ’ ಎನ್ನುವ ಈ ಲೇಖನವನ್ನು ನಾನು ಬರೆದದ್ದು ಇಂತಹದೇ ಸಂದರ್ಭದಲ್ಲಿ. ದೆಹಲಿಯಲ್ಲಿ ಜರುಗಿದ ಸಮ್ಮೇಳನವೊಂದರಲ್ಲಿ ಬೆಂಗಳೂರನ್ನು ಬ್ರಾಂಡ್ ಸಿಟಿ ಮಾಡಲು ಆಯ್ಕೆ ಮಾಡಲಾಗಿತ್ತು. ಆಗ ಮುಖ್ಯ ಮಂತ್ರಿಗಳಾಗಿದ್ದ ಎಸ್ ಎಂ ಕೃಷ್ಣ ಇದರಿಂದ ತುಂಭಾ ಸಂಭ್ರಮ ಪಟ್ಟಿದ್ದರು. ಅದೇ ಸಮಯದಲ್ಲಿ ನಾಡಿನ ಎಲ್ಲೆಡೆ ನುಸಿಪೀಡೆ ಇನ್ನಿಲ್ಲದಂತೆ ಆವರಿಸಿ ರೈತರನ್ನು ತತ್ತರಿಸುವಂತೆ ಮಾಡಿತ್ತು.

ಒಂದೆಡೆ ಬ್ರಾಂಡ್ ಸಿಟಿ ಕಟ್ಟುವ ಕನಸು, ಇನ್ನೊಂದೆಡೆ ನುಸಿಪೀಡೆ ಈ ಎರಡನ್ನೂ ಮಾಧ್ಯಮದ ಕ್ಯಾನ್ವಾಸ್ ನಲ್ಲಿ ಇಟ್ಟು ನೋಡಲು ಪ್ರಯತ್ನಿಸಿದೆ. ಅದಕ್ಕೆ ಕಾರಣವೂ ಇತ್ತು. ಮಾಧ್ಯಮ ರಂಗ ಸಹಾ ಜಾಗತೀಕರಣದಿಂದ ಆಗಲೇ ಅಲುಗಾಡಲು ಶುರುವಾಗಿತ್ತು. ಭಾರತದ ಒಳಗೆ ಪತ್ರಿಕೆ ಆರಂಭಿಸಲು, ಮುದ್ರಿಸಲು, ಬಂಡವಾಳ ಹೂಡಲು ಅವಕಾಶ ನೀಡಬೇಕು ಎನ್ನುವ ಒತ್ತಡವನ್ನು ಬಹುರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಬಲವಾಗಿ ಹೇರಲು ಆರಂಭಿಸಿತ್ತು. ಆಗ ನನಗೆ ಇದು ಮಾಧ್ಯಮ ರಂಗಕ್ಕೆ ಆವರಿಸಿಕೊಳ್ಳಲಿರುವ ನುಸಿಪೀಡೆ ಎಂದು ಅನಿಸಿ ಹೋಯಿತು

ಇದೇ ಸಂದರ್ಭದಲ್ಲಿ ‘ಹೊಸತು’ ಪತ್ರಿಕೆ ವಿಶೇಷಾಂಕಕ್ಕೆ ಸಜ್ಜಾಗಿತ್ತು.  ನನ್ನಿಂದ ಲೇಖನ ಬಯಸಿದಾಗ ಹುಟ್ಟಿದ್ದು ಈ ಲೇಖನ. ಈ ಲೇಖನ ಬರೆದು ವರ್ಷಗಳು ಉರುಳಿದ್ದರೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ. ಎಸ್ ಎಂ ಕೃಷ್ಣ ಬದಲಿಗೆ ನರೇಂದ್ರ ಮೋದಿ ಇದ್ದಾರೆ. ‘ಬ್ರಾಂಡ್’ ಸಿಟಿ ಬದಲು ‘ಸ್ಮಾರ್ಟ್’ ಸಿಟಿ ಮಾಡುವ ಉತ್ಸಾಹ ಹೆಚ್ಚಿದೆ.

ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ 

tvs

‍ಲೇಖಕರು Admin

6 May, 2016

2 Comments

  1. Shama, Nandibetta

    “ವಿದೇಶಿ ಪತ್ರಿಕೆಗಳ ಒಡೆತನ ಹೊಂದಿರುವ ಬಹುರಾಷ್ಟ್ರೀಯ ಸಂಸ್ಥೆಗಳು ದೇಶದ ಹಿತಾಸಕ್ತಿಗೆ ಕೊಡಲಿಪೆಟ್ಟು ನೀಡುತ್ತದೆ. ವೈವಿಧ್ಯಮಯ ಸಂಸ್ಕೃತಿಯನ್ನು ನಾಶಪಡಿಸುತ್ತದೆ. ಪತ್ರಿಕೆ ಎಂಬುದು ಮಾರುಕಟ್ಟೆಯ ವಿಸ್ತರಣೆಯಾಗಿರುತ್ತದೆ. ಕಾಳಜಿಯ ಸ್ಥಾನದಲ್ಲಿ ಮನರಂಜನೆ ಮಾತ್ರ ಇರುತ್ತದೆ. ಈ ಆಸಕ್ತಿಗಳ ಬದಲಾವಣೆಯೇ ದೇಶ ಕಟ್ಟುವುದು ಇನ್ನೂ ಮುಗಿದಿಲ್ಲದ ದೇಶಕ್ಕೆ ಮಾರಕ. ಆಯ್ಕೆಯ ಅವಕಾಶವನ್ನು ಇಲ್ಲವಾಗಿಸುವುದರಿಂದ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕೊನೆಯ ಮೊಳೆ ಜಡಿದಂತೆ.”

    ಅಕ್ಷರಶಃ ನಿಜ. ಇದನ್ನು ಅರ್ಥ ಮಾಡಿಕೊಳ್ಳುವವರು ಯಾರು ? ಅರ್ಥ ಆಗಬೇಕಾದವರಿಗೆ ಅರ್ಥ ಮಾಡಿಸುವವರು ಯಾರು ? ಈ ಪ್ರಶ್ನೆ ಬಹುಶಃ ಉತ್ತರವೇ ಇಲ್ಲದೇ ಹಾಗೇ ಮುಗಿದು ಹೋಗುತ್ತದೇನೋ ?

    “ಸ್ಪರ್ಧೆಯಲ್ಲಿ ಉಳಿಯುವುದು ಹಣ ಬಲ ಉಳ್ಳ ಸಂಸ್ಥೆಗಳು ಮಾತ್ರ.” ಇದು ಪತ್ರಿಕೋದ್ಯಮಕ್ಕೆ ಮಾತ್ರವಲ್ಲ ಇಡೀ ಬದುಕಿಗೆ ಕೂಡ ಅನ್ವಯವೇ. ಜಾಗತೀಕರನ, ಜಾತೀಕರಣ, ಲಿಂಗಿಕರಣಗಳ ಜಗತ್ತಿನಲ್ಲಿ ಮಾನವತೆಯ ಕಟ್ಟಡದ ಕೊನೆಯ ಇಟ್ಟಿಗೆಯೂ ಪುಡಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲಿ ನೋಡಿದರಲ್ಲಿ ಹಣ, ಬಲ ಎರಡಷ್ಟೇ ಗೆಲ್ಲುತ್ತವೆ. ಪ್ರವಾಹದ ವಿರುದ್ಧ ಈಜಬಹುದು, ಪ್ರಭಾವದ ವಿರುದ್ಧ ಕಷ್ಟ.

  2. Ananda Prasad

    ‘ಮಾಧ್ಯಮ ರಂಗಕ್ಕೆ ನುಸಿಪೀಡೆ’ ಎಂಬ ಲೇಖನ ಬರೆದ ಸಮಯಕ್ಕಿಂತಲೂ ಇಂದಿನ ಪರಿಸ್ಥಿತಿ ಮತ್ತಷ್ಟು ಕೆಟ್ಟಿದೆ. ಸಮಾಜದ ಹಾಗೂ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸಬೇಕಾಗಿದ್ದ ಮಾಧ್ಯಮ ರಂಗ ತಾನೂ ಕೊಳೆಯ ಒಂದು ಭಾಗವಾಗಿ ಇಡೀ ವ್ಯವಸ್ಥೆಯೇ ಕೊಳೆಯುತ್ತಾ ಹೋಗುತ್ತಿದೆ. ಇದಕ್ಕೆ ಎರಡು ಇತ್ತೀಚಿನ ಉದಾಹರಣೆಗಳನ್ನು ಕೊಡಬಹುದು:
    ೧. ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನು ಸಮಾಧಿ ಮಾಡಿ ಎಸಿಬಿ ರಚನೆ ಮಾಡುವ ತೀರ್ಮಾನವನ್ನು ಸಿದ್ಧರಾಮಯ್ಯನವರ ಸರ್ಕಾರ ಮಾಡಿದಾಗ ಇದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಕರ್ನಾಟಕ ಘಟಕದವರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರು. ಬೇರೆ ಯಾರೂ ಈ ವಿಚಾರದಲ್ಲಿ ಹೋರಾಟದ ಆರಂಭ ಮಾಡಲು ಮುಂದೆ ಬರದೇ ಇದ್ದ ಸಮಯದಲ್ಲಿ ಇವರು ಹೋರಾಟವನ್ನು ಕೈಗೊಂಡರೂ ಅದಕ್ಕೆ ಕರ್ನಾಟಕದ ಎಲೆಕ್ಟ್ರಾನಿಕ್ ಮಾಧ್ಯಮಗಳು ಯಾವುದೇ ಮಹತ್ವವನ್ನು ಕೊಡಲಿಲ್ಲ. ಕರ್ನಾಟಕದ ಎಲ್ಲಾ ಎಲೆಕ್ಟ್ರಾನಿಕ್ (ಅಂದರೆ ಟಿವಿ) ಮಾಧ್ಯಮಗಳೂ ಈ ವಿಚಾರವನ್ನು ಒಂದು ಪ್ರಧಾನ ವಿಷಯವನ್ನಾಗಿ ತೆಗೆದುಕೊಂಡು ಇದರ ಬಗ್ಗೆ ದಿನವಿಡೀ ನೇರ ಪ್ರಸಾರದ ಚರ್ಚೆ, ಜನಜಾಗೃತಿ ಅಭಿಯಾನ ಕೈಗೊಂಡಿದ್ದರೆ ಇಡೀ ರಾಜ್ಯಾದ್ಯಂತ ಹೋರಾಟದ ಕಿಚ್ಚು ಏಳುತ್ತಿತ್ತು ಹಾಗೂ ಸರ್ಕಾರ ತನ್ನ ಕೆಟ್ಟ ನಿರ್ಧಾರದಿಂದ ಹಿಂದೆ ಸರಿಯಲೆಬೇಕಾದ ಪರಿಸ್ಥಿತಿ ರೂಪುಗೊಳ್ಳುತ್ತಿತ್ತು. ಇಂಥ ಸುವರ್ಣಾವಕಾಶವನ್ನು ಕರ್ನಾಟಕದ ಟಿವಿ ಮಾಧ್ಯಮಗಳು ವ್ಯರ್ಥವಾಗಿಸಿ ಬಿಟ್ಟವು. ಕರ್ನಾಟಕದ ಟಿವಿ ಮಾಧ್ಯಮಗಳು ವಿದೇಶಿ ಬಂಡವಾಳದ ಮೇಲೆ ನಡೆಯುತ್ತಿಲ್ಲವಾದರೂ ಮಾಧ್ಯಮ ಧರ್ಮವನ್ನು ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾದವು.
    ೨. ಮಂಗಳೂರಿನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾರ ಬರ್ಬರ ಕೊಲೆ ನಡೆದು ಒಂದೂವರೆ ತಿಂಗಳು ಕಳೆದರೂ ಕೊಲೆಯ ಸೂತ್ರಧಾರಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಕುರಿತು ಪ್ರಬಲವಾದ ಕ್ರಮ ಕೈಗೊಳ್ಳುವುದು ಬೇಡ ಎಂದು ಗೃಹ ಸಚಿವರ ಮೌಕಿಕ ಆದೇಶ ಆಗಿದೆ ಎಂಬ ಅಭಿಪ್ರಾಯ ಪ್ರಜ್ಞಾವಂತರ ವಲಯದಲ್ಲಿ ಇದೆ. ವಿನಾಯಕ ಬಾಳಿಗರ ಕೊಲೆಯನ್ನು ವಿರೋಧಿಸಿ ವಿಚಾರಣೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿ ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕರುಹಾಗೂ ಸಂಗಡಿಗರು ಹೋರಾಟ ಕೈಗೊಂಡರೂ ಇದನ್ನು ರಾಜ್ಯದ ಟಿವಿ ಮಾಧ್ಯಮಗಳು ಬೆಂಬಲಿಸಿ ಹೋರಾಟ ತೀವ್ರವಾಗುವಂತೆ ಹಾಗೂ ಸರ್ಕಾರ ಬಿಗಿ ಕ್ರಮ ಕೈಗೊಳ್ಳಲೇಬೇಕಾದಂತಹ ಒತ್ತಡ ರೂಪಿಸಲಿಲ್ಲ. ಕೇವಲ ಉತ್ತರ ಭಾರತದಲ್ಲಿ ಕಂಡುಬರುತ್ತಿದ್ದ ಮಾಹಿತಿ ಹಕ್ಕು ಕಾರ್ಯಕರ್ತರ ಕಗ್ಗೊಲೆಯಂಥ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಭೀಕರ ಹತ್ಯೆಗಳು ಕರ್ನಾಟಕದಲ್ಲಿ ನಡೆಸಲು ಪಾತಕಿಗಳು ಆರಂಭಿಸಿದರೂ ಕರ್ನಾಟಕದ ಜನತೆಯಿಂದ ಪ್ರಬಲ ಪ್ರತಿರೋಧ ರೂಪುಗೊಳ್ಳಲಿಲ್ಲ ಎಂದರೆ ಅದಕ್ಕೆ ಬೇಕಾದ ವಾತಾವರಣವನ್ನು ರಾಜ್ಯದ ಟಿವಿ ಮಾಧ್ಯಮಗಳು ರೂಪಿಸಲಿಲ್ಲ ಎಂದೇ ಅರ್ಥ. ಸ್ವದೇಶೀ ಟಿವಿ ಮಾಧ್ಯಮಗಳ ಈ ವಿಫಲತೆಗೆ ಕಾರಣ ಬಂಡವಾಳಶಾಹಿ ಮನೋಧರ್ಮದ ಟಿವಿ ಮಾಲಕರ ಧೋರಣೆಯೇ ಆಗಿದೆ.

    ಈಗ ರಾಜ್ಯದಲ್ಲಿ ಆಡಳಿತ ನಡೆಸುವ ಆಡಳಿತ ಪಕ್ಷಕ್ಕೂ, ಆಡಳಿತದ ವೈಫಲ್ಯಗಳನ್ನು ವಿರೋಧಿಸಬೇಕಾದ ವಿರೋಧ ಪಕ್ಷಕ್ಕೂ ಇಬ್ಬರಿಗೂ ಜವಾಬ್ದಾರಿ ಎಂಬುದೇ ಇಲ್ಲವಾಗಿ ರಾಜ್ಯ ಅರಾಜಕತೆಯತ್ತ ದಾಪುಗಾಲಿಡುತ್ತಿದೆ. ಇಂಥ ಸ್ಥಿತಿಯಲ್ಲಿ ರಾಜ್ಯದ ಜನತೆ ಅನಾಥಪ್ರಜ್ಞೆ ಅನುಭವಿಸುತ್ತಿದ್ದಾರೆ. ಜನರ ಧ್ವನಿ ಆಗಬೇಕಾಗಿದ್ದ ಟಿವಿ ಮಾಧ್ಯಮಗಳು ತಮ್ಮ ಜವಾಬ್ದಾರಿಯ ನೂರನೇ ಒಂದಂಶವನ್ನೂ ನಿಭಾಯಿಸುತ್ತಿಲ್ಲ ಎಂಬ ಕಾರಣದಿಂದಲೇ ಸಮಾಜದಲ್ಲಿ ಅನ್ಯಾಯ, ಅಧರ್ಮ ಮೇಲುಗೈ ಸಾಧಿಸುತ್ತಿದೆ. ರಾಜ್ಯದ ಬುದ್ಧಿಜೀವಿಗಳು, ಸಾಹಿತಿಗಳು, ಗಣ್ಯ ವ್ಯಕ್ತಿಗಳು ಇದನ್ನು ಕಂಡೂ ಕಾಣದಂತೆ ಸಹಿಸುತ್ತಿದ್ದಾರೆ. ಹೀಗಾಗಿಯೇ ಅನ್ಯಾಯ ಅಧರ್ಮಗಳು ದಿನೇದಿನೇ ಹೆಚ್ಚುತ್ತಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading