ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಾಧವಿ’ ಎಂಬ ಶ್ರೀಸ್ಮೃತಿಯ ಒಳಧ್ವನಿ…

ಅನಂತ ಕುಣಿಗಲ್

ರಂಗಭೂಮಿಗಿರುವ ಹೊಸ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ಒಂದರಮೇಲೊಂದರಂತೆ ಸಾಧರಪಡಿಸುತ್ತಾ, ನಮ್ಮನ್ನೆಲ್ಲಾ ಸದಾ ಅಚ್ಚರಿಯ ದಡಕ್ಕೆ ಕರೆದೋಯ್ದು ಕೈಬಿಡುವ ರಂಗ ಚಿಂತಕ ಶ್ರೀಪಾದ ಭಟ್ ಸರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ, ನಾಡಿನ ಖ್ಯಾತ ಲೇಖಕಿ ಸುಧಾ ಆಡುಕಳ ಅವರ ರಚನೆಯ “ಮಾಧವಿ” ನಾಟಕವನ್ನು, ಕರ್ನಾಟಕದ ಮೊದಲ ಚಂಡೆ ವಾದಕಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ದಿವ್ಯಾಶ್ರೀ ನಾಯಕ್ ಹಾಗೂ ನಟನೆಯ ವಿವಿಧ ಕೌಶಲಗಳನ್ನು ತನ್ನದಾಗಿಸಿಕೊಂಡಿರುವ ರಂಗಭೂಮಿ ಕಲಾವಿದ ಶರತ್ ಬೋಪಣ್ಣ ಇಬ್ಬರೂ ಸೇರಿ ಅಭಿನಯಿಸಿದ್ದಾರೆ. ಇವರಿಗೆ ತಂತ್ರಜ್ಞನಾಗಿ ಸಾತ್ ನೀಡಿದ ಮತ್ತೋರ್ವ ನೀನಾಸಂ ಕಲಾವಿದ ಗಣೇಶ್ ಹೆಗ್ಗೋಡು.

ದಿನಾಂಕ ಫೆ. 14 ರ ಸಂಜೆ, ಸಂಜಯನಗರದ ಬಹುರೂಪಿ ಬುಕ್ ಹಬ್ ನಲ್ಲಿ ನಡೆದ ಒಂದು ಗಂಟೆಯ ಈ ನಾಟಕ ನನ್ನನ್ನು ಇನ್ನೂ ಕಾಡುತ್ತಲೇ ಇದೆ. ಇದೊಂದು ವಿಶಿಷ್ಟ ಪ್ರಯೋಗವಾಗಿತ್ತು. ಜಿ.ಎನ್ ಮೋಹನ್ ಸರ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ನಾಟಕವನ್ನು ಕೇವಲ 10×10 ಅಡಿಯ ವೇದಿಕೆಯ ಮೇಲೆ ಸುತ್ತಲೂ ಇರುವ ವೈವಿಧ್ಯಮಯ ಪುಸ್ತಕಗಳ ನಡುವೆ ಪ್ರಯೋಗಿಸಲಾಗಿತ್ತು. ಪುಸ್ತಕ ಪ್ರೇಮಿಗಳು ಹಾಗೂ ರಂಗಭೂಮಿ ಆಸಕ್ತರು ಇಬ್ಬರನ್ನೂ ಸೇರಿಸಿ ಪರಸ್ಪರ ಸಂಧಿಸಿ ಅಭಿರುಚಿಯನ್ನು ಹೆಚ್ಚುಮಾಡಿಕೊಳ್ಳಲು ಈ ಕಾರ್ಯಕ್ರಮ ಸಾಕ್ಷಿಯಾಯ್ತು.

ಮಾಧವಿ ಯಯಾತಿಯ ರಾಜನ ಮಗಳು. ಅದು ಹೇಳಿಕೊಳ್ಳುವುದಕ್ಕೆ ಮಾತ್ರ. ಹೂದೋಟದಲ್ಲಿ ಸಖಿಯರೊಂದಿಗೆ, ತನ್ನನ್ನು ಹುಚ್ಚನಂತೆ ಕಾಡುವ ಪ್ರಿಯತಮನೊಂದಿಗೆ, ರಾಜಕುಮಾರಿಯಾಗಿ ಜನರ ಆಗುಹೋಗುಗಳಿಗೆ ಸ್ಪಂದಿಸುತ್ತಾ ಕಳಿಯಬೇಕಿದ್ದ ಅವಳ ಹರೆಯವನ್ನೆಲ್ಲಾ ನಾಲ್ಕಾರು ಜನ ರಾಜರ ತೋಳತೆಕ್ಕೆಯಲ್ಲಿ ಮಕ್ಕಳನ್ನು ಹೆರುವ ಮಷೀನಿನಂತೆ ಕಳೆದಿದ್ದು ಶೋಚನೀಯ ಸಂಗತಿ.

ತದನಂತರದಲ್ಲಿ ಅವಳ ನಿರ್ಣಯ ಇಡೀ ಶ್ರೀಕುಲಕ್ಕೆ ಮಾದರಿ. ಮಾಧವಿ ಯಯಾತಿ ರಾಜನ ಮಗಳು ಮಾತ್ರ ಅಲ್ಲ. ನಮ್ಮೊಂದಿಗೆ ಜನ್ಮಪಡೆದ ಅಕ್ಕ ತಂಗಿಯೋ, ನಮ್ಮನ್ನು ಪೊರೆದ ತಾಯಿಯೋ, ಶಿಕ್ಷಕಿಯೋ, ವೈದ್ಯೆಯೋ, ನಮ್ಮನ್ನು ಹರಸಿ ಬರುವ ಪ್ರೇಯಸಿಯೋ ಅಥವಾ ನಾವೇ ಜನ್ಮ ಕೊಟ್ಟ ಮಗಳಾಗಿಯೋ ನಮ್ಮ ನಡುವೆಯೇ ಇದ್ದಾಳೆ.

ಹೆಣ್ಣು ಕಣ್ಣಿದ್ದೂ ಹುಟ್ಟು ಕುರುಡಿ. ಗಂಡಿನ ಆಸರೆ ಬಯಸಿ ನಂಬಿ ಬರುವ ಅವಳು ಗಂಡು ನಡೆಸಿದಂತೆಲ್ಲಾ ನಡೆಯುತ್ತಾಳೆ. ಕೆಲವೊಮ್ಮೆ ಇತರರು ಸಂಚುಹೂಡಿದ ಹಳ್ಳಕ್ಕೆ ಬಿದ್ದರೆ, ಕೆಲವೊಮ್ಮೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿಲ್ಲವೆಂದು ಗೊತ್ತಾದ ಅನುಚಿತ ಸಂದರ್ಭಗಳಲ್ಲಿ ತಾನೇ ಖೆಡ್ಡಾ ತೋಡಿಕೊಂಡು ಹೂತುಹೋಗುತ್ತಾಳೆ. ತ್ಯಾಗಮಯಿ ಹೃದಯ ಅವಳದು. ಹರಿವ ನೀರಿನಂತೆ ಎಲ್ಲ ಹೊಲಗಳನ್ನು ಹರಿದು ಫಲವಾಗಲು ಕಾರಣಳಾಗಿ, ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಸೂರ್ಯನ ಕಾವಿಗೆ ಆವಿಯಾಗಿಯೋ, ಮಣ್ಣಿನ ಬಾಯೊಳಗೆ ಆಹಾರವಾಗಿಯೋ ಕರಗಿಹೋಗುತ್ತಾಳೆ.

ಇಂತಹ ಸಾಕಷ್ಟು ಸೂಕ್ಷ್ಮ ಹಾಗೂ ವೈಚಾರಿಕ ಒಳನೋಟಗಳಿರುವ ಈ ನಾಟಕದಲ್ಲಿನ ಸಂಭಾಷಣೆಗಳು ಕೂಡ ಅಷ್ಟೇ ಅರ್ಥಗರ್ಭಿತವಾಗಿವೆ. “ಭೂಕಂಪವಾದಷ್ಟೂ ಭೂಮಿ ಗಟ್ಟಿಯಾಗುತ್ತದೆ”

“ಗಂಡು ಹೆಣ್ಣನ್ನು ನೋಯಿಸಿ ನೋಯಿಸಿ ಸೋಲುತ್ತಾನೆ. ಹೆಣ್ಣು ನೊಂದು ನೊಂದು ಗಟ್ಟಿಯಾಗುತ್ತಾಳೆ”
“ಹೆಣ್ಣು ಒಂದು ಭೂಮಿ. ಎಂದಿಗೂ ಫಲದ ಹಕ್ಕುದಾರಳಾಗುವ ಅರ್ಹತೆ ಅವಳಿಗಿಲ್ಲ”

ಏನಿದ್ದರೂ, ಇರದಿದ್ದರೂ ನಾವು ಮಾತ್ರ ಬರಡಾಗಲಾರೆವು ಎಂಬಂತೆ ಈ ನಾಟಕದ ಪ್ರಮುಖ ಶಕ್ತಿಯೇ ಕಲಾವಿದರು. ಮಾಧವಿ ಪಾತ್ರದಲ್ಲಿ ಬಹುಮುಖ ಪ್ರತಿಭೆ ದಿವ್ಯಾಶ್ರೀ ನಾಯಕ್ ತನ್ನ ಇಡೀ ದೇಹವನ್ನು ಸಾಹಿತ್ಯಕ್ಕೆ ಒಗ್ಗಿಸಿದ ಸಂಗೀತದಂತೆ ಬಳಸಿಕೊಂಡಿದ್ದಾರೆ. ಮಾಧವಿಯ ನೋವುಗಳು ಬೇರೆ ಅಲ್ಲಾ, ತನ್ನ ನೋವುಗಳು ಬೇರೆ ಅಲ್ಲ ಎನ್ನುವಷ್ಟು ನಿಖರವಾಗಿ ತಾನೇ ಮಾಧವಿಯಾಗಿ ತನ್ನ ಕಲಾಚಾಕಚಕ್ಯತೆಯನ್ನು ತೋರಿದ್ದಾರೆ.

ಇನ್ನು ಶರತ್ ಬೋಪಣ್ಣನವರು ಗಾಲವನಾಗಿ, ಯಯಾತಿಯಾಗಿ, ವಿಶ್ವಾಮಿತ್ರನಾಗಿ ಹಾಗೂ ಬೇರೆ ಬೇರೆ ದೇಶದ ರಾಜರಾಗಿ, ತಾನು ನಿರ್ವಹಿಸಿದ ಅಷ್ಟೂ ಪಾತ್ರಗಳು ಒಂದು ಪಾತ್ರಕ್ಕಿಂತ ಮತ್ತೊಂದು ಮೇಲು ಎಂಬಂತೆ ನಟನೆಯಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.

ಇವರೊಂದಿಗೆ ಸಂಗೀತ ಮತ್ತು ಬೆಳಕನ್ನು ನಿರ್ವಹಿಸಿದ ಗಣೇಶ್ ಹೆಗ್ಗೋಡು ಅವರದ್ದು ನಾಟಕದುದ್ದಕ್ಕೂ ಅವಿರತ ಪರಿಶ್ರಮ. ಇವರನ್ನೊರತುಪಡಿಸಿ, ರಂಗದ ಮೇಲಿದ್ದ ಮಣ್ಣಿನ ಮಡಿಕೆ ತಾನು ವಾದ್ಯವಾಗಬಲ್ಲುದು, ಮಗುವಾಗಬಲ್ಲುದು. ಹಾಗೆಯೇ ಚಂಡೆಯೂ ಕೂಡ ಮಾಧವಿಯ ಬೇರೆ ಬೇರೆ ಭಾವಗಳಿಗೆ ಸ್ಪಂದಿಸುವಂತೆ ಮಾಧವಿಯ ಅಂತರಾಳದ ಧ್ವನಿಯಾಗಿತ್ತು.

ಒಟ್ಟಿನಲ್ಲಿ ಆ ವರ್ಗ, ಈ ವರ್ಗ, ಆ ಪ್ರಕಾರ, ಈ ಪ್ರಕಾರ ಎಂದು ಪ್ರೇಕ್ಷಕರನ್ನು ವರ್ಗೀಕರಿಸದೆ, ಎಲ್ಲರೂ ಒಮ್ಮೆಯಾದರೂ ನೋಡಬೇಕಾದ ನಾಟಕ ಮಾಧವಿ.

ಇದು ಕೈವಲ್ಯ ಕಲಾಕೇಂದ್ರ ಅರ್ಪಿಸುವ ನಾಟಕವಾಗಿದ್ದು, ಪ್ರದರ್ಶನಗಳಿಗೆ ಮತ್ತು ಹೆಚ್ಚಿನ ವಿವರಗಳಿಗೆ 9663061736 ಮತ್ತು 7204190853 ನಂಬರುಗಳನ್ನು ಸಂಪರ್ಕಿಸಬಹುದಾಗಿದೆ. ಮಾಧವಿ ನಮ್ಮ ಕಣ್ಣಿಂದ ಮರೆಯಾಗುವ ಮುನ್ನ ಆಕೆಯನ್ನು ಒಮ್ಮೆ ಆವರಿಸಿಬಿಡಿ.

‍ಲೇಖಕರು Admin

16 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading