ರಾಘವೇಂದ್ರ ಕೆಸವಿನಮನೆ ಅವರ ‘ಇಂಚರ’ ಬ್ಲಾಗ್ ನಲ್ಲಿ ಬಂದ ಒಂದು ಬರಹವನ್ನು ಮೆಚ್ಚಿ ಮತ್ತೊಬ್ಬ ಬ್ಲಾಗಿಗ ಡಿ ಎಸ್ ಶ್ರೀನಿಧಿ ಮೇಲ್ ಕಳುಹಿಸಿದ್ದಾರೆ. ‘ಬ್ಲಾಗರ್ ಗೆ ಬ್ಲಾಗರ್ ಮುನಿವಂ’ ಎಂಬ ಮಾತು ಮತ್ತೆ ಸುಳ್ಳಾಗಿದೆ.

ಮಾಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ ಹೊಕ್ಕು ಬೆನ್ನುಹುರಿಯ ಆಳದಿಂದ ನಡುಕ ಹುಟ್ಟಿಸುತ್ತಿದೆ. ಮಹಾ ‘ಮಡಿವಂತ’ ಮನಸು ಕೂಡ ಬೆಳ್ಳಂಬೆಳಿಗ್ಗೆಯ ಹಬೆ ಕಾಫಿಗೆ ಕೈ ಚಾಚುತ್ತದೆ.
ಮಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು.
ನೀವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. “ಶಿವರಾತ್ರಿ ಬಂದಾಗ ಶಿವ ಶಿವಾ…. ಅನ್ನುತ್ತ ಚಳಿ ಓಡಿಹೋಗುತ್ತೆ” ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ.
ಮಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ – ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. ಬಿದ್ದ ಇಬ್ಬನಿಯ ಭಾರ ಕಳೆದು
ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು.





ತನ್ನ ಸುತ್ತಲಿನ ಸಂಗತಿಗಳನ್ನು ಚೆನ್ನಾಗಿ ಅನುಭವಿಸಿ ಬರೆಯಬಲ್ಲ ಬರಹಗಾರ
ನಮ್ಮ ರಾಘವೇಂದ್ರ ಕೆಸವಿನಮನೆ.ಇಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು
ಅಶೋಕ ಉಚ್ಚಂಗಿ