ಮಾಂಸಾಹಾರ ಮತ್ತು ಮಾನವನ ಮೆದುಳಿನ ವಿಕಾಸ

ಜಿ ಎನ್ ನಾಗರಾಜ್
ಭಾರತದಲ್ಲಿ ಸಸ್ಯಾಹಾರದ ಶ್ರೇಷ್ಠತೆಯ ಬಗ್ಗೆ ಹೆಗ್ಗಳಿಕೆಯ ಮಾತುಗಳನ್ನಾಡುತ್ತಾ ಮಾಂಸಾಹಾರವನ್ನು ಹೀಗಳೆಯಲಾಗುತ್ತಿದೆ.
ಈ ವಾದ ಸುಮಾರು ಎರಡು ಸಾವಿರ ವರ್ಷಗಳಿಂದ ವಿವಿಧ ರೂಪಗಳನ್ನು ಪಡೆಯುತ್ತಾ ಬೆಳೆದಿದೆ. ಧಾರ್ಮಿಕ ಕಟ್ಟಲೆಯಾಗಿ ಜನರನ್ನು ಮಾಂಸಾಹಾರ ಮಾಡಲಾಗದಂತೆ ನಿರ್ಭಂಧಿಸಿದೆ. ಮಾಂಸಾಹಾರದಲ್ಲಿಯೂ ಈ ಪ್ರಾಣಿ ಶ್ರೇಷ್ಟ , ಪವಿತ್ರ ಅದನ್ನು ತಿನ್ನಬಾರದು, ಈ ಪ್ರಾಣಿಗಳನ್ನು ತಿನ್ನುವವರು ಕೀಳು ಜಾತಿಯವರೆಂದು ಬಿಂಬಿಸಲಾಗುತ್ತಿದೆ.
ಈ ವ್ಯಾಧಿ ಪ್ರಾಣಿಗಳನ್ನು ದೇವತೆಗಳಿಗೆ ಬಲಿ ಕೊಡುವ ಆಚರಣೆಗೂ ವ್ಯಾಪಿಸಿ ಪ್ರಾಣಿಗಳನ್ನು ಬಲಿಕೊಡುವುದನ್ನು ನಿಷೇಧಿಸುವ ಅಥವಾ ಕೆಲ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಷೇಧಿಸುವ ಕಾನೂನಿಗೂ ಎಡೆ ಮಾಡಿಕೊಟ್ಟಿದೆ. ಅದರಲ್ಲಿ ಅತ್ಯಂತ ಹೆಚ್ಚು ನಿರ್ಭಂಧಕ್ಕೊಳಗಾಗಿರುವುದು ಮಾರಮ್ಮನಿಗೆ ಕೋಣ ಬಲಿ. ಇಂದು ಮಾರಮ್ಮನ ಜಾತ್ರೆಯೆಂದ ಕೂಡಲೇ ಪೋಲೀಸರು ಬಂದು ಕಾವಲು ಕಾಯತೊಡಗುತ್ತಾರೆ. ಹೀಗಾಗಿ ರಾತ್ರಿಯ ವೇಳೆ ಕಳ್ಳತನದಲ್ಲಿ ಕೋಣ ಬಲಿ ಮಾಡುವ ಸಂಕಟಕ್ಕೆ ಮಾರಮ್ಮನ ಭಕ್ತರು ಸಿಲುಕಿದ್ದಾರೆ. ಬಹಳ ಕಡೆ ಕೋಣ ಬಲಿಯನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಕುರಿ, ಮೇಕೆ, ಕೋಳಿ ಮೊದಲಾದ ಪ್ರಾಣಿಗಳ ಬಲಿ ನೀಡಬಹುದಂತೆ ಆದರೆ ಕೋಣ ಬಲಿ ಕೂಡದಂತೆ!
ಮಾನವನ 20 ಲಕ್ಷ ವರ್ಷಗಳ ದೀರ್ಘ ಇತಿಹಾಸದಲ್ಲಿ ಕೃಷಿಯನ್ನು ಕಂಡುಹಿಡಿದು, ಅದು ಜಗತ್ತಿನೆಲ್ಲೆಡೆಗೆ ಹಬ್ಬಿ ಜನರಿಗೆ ಅಗತ್ಯವಾದ ಪ್ರಮಾಣದಲ್ಲಿ ಆಹಾರವನ್ನು ಬೆಳೆಯುವ ಸಾಧ್ಯತೆ ಉಂಟಾಗಿದ್ದೇ ತೀರಾ ಇತ್ತೀಚೆಗೆ. ಕೇವಲ 10 ಸಾವಿರ ವರ್ಷಗಳ ಈಚೆಗೆ. ಭಾರತದಲ್ಲಿ ಕೃಷಿ ಆರಂಭವಾಗಿದ್ದೇ ಕೇವಲ 3,000 ವರ್ಷಗಳ ಈಚೆಗೆ. ಭಾರತಾದ್ಯಂತ ಅದು ಹಬ್ಬಲು ಮತ್ತೆ ಎರಡು ಸಾವಿರ ವರ್ಷಕ್ಕೂ ಹೆಚ್ಚು ಕಾಲ ಬೇಕಾಯಿತು.
ಜನರ ಅಗತ್ಯಗಳಿಗೆ ತಕ್ಕಷ್ಟು ಆಹಾರ ಉತ್ಪಾದಿಸಲು ಮತ್ತಷ್ಟು ಕಾಲ ಬೇಕಾಯಿತು. ಅಲ್ಲಿಯವರೆಗೆ ಮನುಷ್ಯ ಜೀವ ಹಿಡಿದುಕೊಂಡಿದ್ದು ಪ್ರಧಾನವಾಗಿ ಮಾಂಸಾಹಾರದ ಬಲದಿಂದ. ಹೀಗೆ ದಶ ಲಕ್ಷ ವರ್ಷಗಳಷ್ಟು ಕಾಲ ಮಾನವನ ಮುಖ್ಯ ಆಧಾರವಾದದ್ದು ಪ್ರಾಣಿಗಳೇ. ಅಷ್ಟು ಮಾತ್ರವಲ್ಲ ಮಾನವ ವ್ಯಕ್ತಿತ್ವದ ಪ್ರಧಾನ ಅಂಗ ಬುದ್ಧಿವಂತಿಕೆ ಮತ್ತದರ ಬೆಳವಣಿಗೆಗೆ ಅತ್ಯಂತ ಅವಶ್ಯವಾದ ಪ್ರಧಾನ ಅಂಗ ಮೆದುಳು ವಿಕಾಸವಾಗಲು ಕೂಡ ಮಾಂಸಾಹಾರ ಪ್ರಮುಖ ಪಾತ್ರ ವಹಿಸಿದೆ. ಇದು ಇಂದು ಸಸ್ಯಾಹಾರದ ಶ್ರೇಷ್ಟತೆಯ ಬಗ್ಗೆ ವಾದ ಮಾಡುವ ಬಹಳ ಜನಕ್ಕೆ ಗೊತ್ತಿದೆಯೋ ಇಲ್ಲವೋ ಸಂಶಯವಿದೆ.
ವಾನರನಿಂದ ನರನವರೆಗೆ
ಆಧುನಿಕ ಕಾಲಕ್ಕೆ ಜಗತ್ತು ಪ್ರವೇಶಿಸಿದ ಕಾಲದಲ್ಲಿಯೂ ಜಗತ್ತಿನ ವಿವಿಧ ಭಾಗಗಳಲ್ಲಿ ಬೇಟೆ ಮತ್ತು ಸಂಗ್ರಹಣೆಯ ಮೇಲೆ ಆಧರಿಸಿದ, ಕೃಷಿ, ಪಶು ಸಂಗೋಪನೆಗಳನ್ನು ಇನ್ನೂ ಅರಿಯದ ಅಥವಾ ಅಳವಡಿಸಿಕೊಳ್ಳದ ಅನೇಕ ಬುಡಕಟ್ಟುಗಳಿದ್ದವು.. ಆಹಾರ ಮತ್ತು ಜೀವನ ಶೈಲಿ ಆಧಾರಿತ ಕಾಯಿಲೆಗಳು ವ್ಯಾಪಕವಾಗುತ್ತಿದ್ದಂತೆ ‘ಪುರಾತನ ಶಿಲಾಯುಗದ ಮಾನವನ ಆಹಾರ ಪದ್ಧತಿಗೆ ಮರಳೋಣ’ ಎಂಬುದು ಒಂದು ಆಧುನಿಕ ಫ್ಯಾಷನ್ ಆಯಿತು. ಆ ಸಂದರ್ಭದಲ್ಲಿ ಕೃಷಿ ಪದ್ಧತಿ ಬಳಕೆಗೆ ಬರುವ ಮೊದಲು ಮಾನವ ಆಧರಿಸಿದ ಆಹಾರಗಳ ಬಗ್ಗೆ ತಿಳಿದುಕೊಳ್ಳಲು ಈ ಬುಡಕಟ್ಟುಗಳ ಆಹಾರ ಪದ್ಧತಿಯ ಬಗ್ಗೆ ವ್ಯಾಪಕ ಸಮೀಕ್ಷೆಗಳನ್ನು ನಡೆಸಲಾಗಿದೆ.
ಈ ಸಮೀಕ್ಷೆಗಳ ಪ್ರಕಾರ ಇಂದು ಜಗತ್ತಿನಲ್ಲಿ ಜೀವಿಸಿರುವ ಬೇಟೆಗಾರ ಬುಡಕಟ್ಟುಗಳಲ್ಲಿ ಶೇ. 73 ರಷ್ಟು ಬುಡಕಟ್ಟುಗಳ ಆಹಾರದಲ್ಲಿ ಶೇ 50 ರಿಂದ ಶೇ.65ರಷ್ಟು ಕ್ಯಾಲೊರಿ ಲಭ್ಯವಾಗಿದ್ದು ಮಾಂಸಾಹಾರ ಮೂಲಗಳಿಂದ . ಈ ಬುಡಕಟ್ಟುಗಳು ಹೆಚ್ಚಾಗಿ ಜೀವಿಸುತ್ತಿದ್ದದ್ದು ಉಷ್ಣವಲಯದ ಕಾಡುಗಳ ಮಧ್ಯೆ ಅಥವ ಬಳಿಯಲ್ಲಿ. ಆ ಕಾಡುಗಳು ಅವರಿಗೆ ಸಮೃದ್ಧವಾದ ಸಸ್ಯ ಸಂಪತ್ತಿನಿಂದ ಕೂಡಿವೆ. ಆದ್ದರಿಂದ ಸಸ್ಯ ಮೂಲದ ವಿವಿದ ರೀತಿಯ ಹಣ್ಣು, ಬೀಜಗಳು, ಗೆಡ್ಡೆ ಗೆಣಸುಗಳು ಲಭ್ಯವಿದ್ದವು. ವಿಪುಲವಾಗಿದ್ದ ಇವುಗಳನ್ನು ಉಪಯೋಗಿಸಲು ಈ ಮಾನವರಿಗೆ ಅವಕಾಶವಿತ್ತು. ಆದರೂ ಅವರು ಅರ್ಧದಷ್ಟು ಮಾಂಸಾಹಾರದ ಮೇಲೆ ಆಧಾರಪಟ್ಟಿದ್ದರು.
ಅಂತಹ ಸಸ್ಯ ಮೂಲಗಳು ಲಭ್ಯವಾಗದ ಸಂದರ್ಭದಲ್ಲಿ ಆಹಾರ ಮೂಲಗಳು ಯಾವುವು ಎನ್ನುವುದಕ್ಕೆ ಉತ್ತರ ಧೃವ ಪ್ರದೇಶದ ಬುಡಕಟ್ಟುಗಳ ಆಹಾರ ಪದ್ಧತಿ ಉದಾಹರಣೆಯಾಗಬಹುದು. ಗ್ರೀನ್ ಲ್ಯಾಂಡ್ ದೇಶದ ಎಸ್ಕಿಮೋ ಬುಡಕಟ್ಟಾದ ಇನ್ಯುಟ್ ಗಳು ಅಲ್ಲಿನ ಹಿಮ ವಾತಾವರಣದಲ್ಲಿ ಸಸ್ಯಗಳ ಬೆಳವಣಿಗೆ ಅಸಾಧ್ಯವೆನ್ನುವಷ್ಟು ಕಡಿಮೆಯಾದ್ದರಿಂದ ಶೇ. 99ರಷ್ಟು ಮಾಂಸಾಹಾರದ ಮೇಲೆಯೇ ಜೀವಿಸುತ್ತಾರೆ. ಭೂಮಿಯ ಇತಿಹಾಸದಲ್ಲಿ ಹಲವು ಸಾವಿರ ವರ್ಷಗಳ ಕಾಲದಲ್ಲಿ ಭೂಮಿಯ ತುಂಬೆಲ್ಲಾ ಹಿಮವೇ ಆವರಿಸಿದ ಹಿಮ ಯುಗಗಳು ಹಲವು ಬಾರಿ ಸಂಭವಿಸಿವೆ. ಆಗೆಲ್ಲ ಮಾನವನ ಉಳಿವು ಕೇವಲ ಅಥವಾ ಹೆಚ್ಚು ಮಾಂಸಾಹಾರದ ಮೇಲೆ ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು ಎಂಬುದನ್ನು ಈ ಆಹಾರ ಪದ್ಧತಿ ಸೂಚಿಸುತ್ತದೆ.
ನರನ ವಿಕಾಸವಾದದ್ದು ವಾನರನಿಂದ ಎಂಬ ಸಂಗತಿ ಇಂದು ಎಲ್ಲರಿಗೂ ತಿಳಿದಿರುವ ವಿಷಯ. ವಾನರಗಳು ಮತ್ತು ನರನ ದೇಹ ರಚನೆಯ ನಡುವಣ ವ್ಯತ್ಯಾಸವನ್ನು ಅಧ್ಯಯನ ಮಾಡಿದರೆ ಆಹಾರ ಮಾನವನ ವಿಕಾಸದಲ್ಲಿ ವಹಿಸಿದ ಪ್ರಮುಖ ಪಾತ್ರ ಸ್ಪಷ್ಟವಾಗುತ್ತದೆ. ಎಷ್ಟೋ ವಾನರಗಳು ಗೊರಿಲ್ಲಾದಂತೆ ದೈತ್ಯಾಕಾರವುಳ್ಳವುಗಳು ಮತ್ತು ಮಾನವನಿಗೆ ಅತ್ಯಂತ ಹತ್ತಿರದವುಗಳಾದ ವಾನರಗಳು ಚಿಂಪಾಂಜಿ ಮತ್ತು ಗೊರಿಲ್ಲಾಗಳು. . ಆದರೆ ಇವೆಲ್ಲವುಗಳ ದೇಹ ರಚನೆ ಮತ್ತು ಮಾನವನ ದೇಹ ರಚನೆಗಳ ನಡುವೆ ನಮ್ಮ ವಿಷಯಕ್ಕೆ ಪ್ರಸ್ತುತವಾದ ಎರಡು ವ್ಯತ್ಯಾಸ ಮೆದುಳು ಮತ್ತು ಜೀರ್ಣಾಂಗ ವ್ಯೂಹದ ರಚನೆ. ದೇಹದ ಗಾತ್ರಕ್ಕೆ ಹೋಲಿಸಿದರೆ ಮನುಷ್ಯನ ಮೆದುಳಿನ ಗಾತ್ರ ಹೆಚ್ಚು.
ವಾನರನಿಂದ ಮಾನವನವರೆಗೆ ವಿಕಾಸವಾಗಲು ಹತ್ತಾರು ಲಕ್ಷ ವರ್ಷಗಳಾಗಿವೆ. ಹಲವು ಹಂತಗಳಲ್ಲಿ ವಿವಿಧ ಪ್ರಬೇಧಗಳಾಗಿ ಈ ವಿಕಾಸ ಕ್ರಿಯೆ ನಡೆದಿದೆ. ಈ ಪ್ರಬೇಧಗಳನ್ನು ಮನುಷ್ಯನ ಹತ್ತಿರದ ಸಂಬಂಧಿಗಳು ಎಂದು ಕರೆಯಲಾಗಿದೆ. ಈ ಪ್ರಬೇಧಗಳು ಹಂತ ಹಂತವಾಗಿ ಆಯುಧಗಳೆಂಬ ಸಾಧನಗಳನ್ನು ಉಪಯೋಗಿಸಲು ಆರಂಭಿಸಿದವು. ಹೀಗೆ ಆಯುಧಗಳನ್ನು ಉಪಯೋಗಿಸಲು ಆರಂಭ ಮಾಡಿದ ಮೊದಲ ಪ್ರಾಣಿ ಮಾನವ. ಮಾನವನಿಗೆ ಈ ಆಯುಧಗಳ ಅಗತ್ಯ ಏಕೆ ಬಂತು ಎನ್ನುವುದು ನಮಗೆ ಬಹಳ ಮುಖ್ಯ.
ಮಾನವನಿಗೆ ಸಸ್ಯಾಹಾರಿ ಪ್ರಾಣಿಗಳಂತೆ ಹುಲ್ಲು , ಎಲೆಗಳನ್ನು ತಿಂದು ಜೀರ್ಣಿಸಿಕೊಳ್ಳುವ ನಾಲ್ಕು ಹೊಟ್ಟೆಗಳ ಜೀರ್ಣಾಂಗ ವ್ಯೂಹವಿಲ್ಲ. ಬೇಟೆಗಾರ ಮಾಂಸಾಹಾರಿ ಪ್ರಾಣಿಗಳಂತೆ ಉಗುರುಗಳು ಹಲ್ಲುಗಳು ಹಾಗೂ ವೇಗದ ಚಲನೆ ಮತ್ತಿತರ ಸಾಮರ್ಥ್ಯಗಳಿಲ್ಲ. ಇದು ವಾನರಗಳ ಹಂತದಲ್ಲಿಯೇ ಒದಗಿದ ಸಮಸ್ಯೆ. ಮುಂದೆ ಮಾನವನ ವಿಕಾಸದ ವಿವಿಧ ಹಂತಗಳಲ್ಲಿ ಆಹಾರದ ಸಮಸ್ಯೆ ಮತ್ತಷ್ಟು ಮಾನವೀಯ ಜೀವಿಗಳನ್ನು ಕಾಡತೊಡಗಿತು.
ಏಕೆ ಇಂದು ಸೇವಿಸುವ ಆಹಾರ ಧಾನ್ಯಗಳು , ಬೇಳೆ ಕಾಳುಗಳು ಹಣ್ಣು ಹಂಪಲುಗಳಿಂದ ಕೂಡಿದ ಸಸ್ಯಾಹಾರವಿರಲಿಲ್ಲವೇ ? ಎಂದು ಯಾರಾದರೂ ಕೇಳಬಹುದು. ಸುಮಾರು 15-20 ಲಕ್ಷ ವರ್ಷಗಳ ಹಿಂದೆ ಈಗ ಕೃಷಿಯಲ್ಲಿರುವ ಬೆಳೆಗಳು ಯಾವುವೂ ಈ ರೂಪದಲ್ಲಿರಲಿಲ್ಲ. ಯಾರಾದರೂ ಕಾಡು ಮಾವಿನ ಹಣ್ಣನ್ನು ತಿಂದಿದ್ದೀರಾ? ಕಾಡು ಬಾಳೆಯ ಹಣ್ಣನ್ನು ನೋಡಿದ್ದೀರಾ? ಬಹಳ ಹುಳಿ ಮತ್ತು ನಾರಿನಿಂದ ಕೂಡಿದ ಆ ಮಾವಿನ ಹಣ್ಣನ್ನು ಯಾರಾದರೂ ಇಂದು ತಿನ್ನುವರೆ? ಕಾಡು ಬಾಳೆಯ ಹಣ್ಣಿನ ತುಂಬಾ ಮೆಣಸಿನ ಗಾತ್ರದ ಬೀಜಗಳು. ಹಾಗೆಯೇ ಭತ್ತ, ಜೋಳ, ಗೋಧಿಗಳು, ರಾಗಿ ಇವುಗಳು ಹುಲ್ಲಿನ ಸಣ್ಣ ಬೀಜಗಳು.
ಹಸು, ಎಮ್ಮೆ, ಜಿಂಕೆ ಮೊದಲಾದ ಸಸ್ತನಿಗಳಂತೆ ಎಲೆ, ಹುಲ್ಲನ್ನೇ ಇಡಿಯಾಗಿ ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಇರದ ಹೊರತು ಸಸ್ಯಾಹಾರದಿಂದಲೇ ಬೇಕಾದ ಪೋಷಕಾಂಶಗಳು ದೊರಕುವ ಸಾಧ್ಯತೆ ಇರಲಿಲ್ಲ. ಲಕ್ಷಾಂತರ ವರ್ಷಗಳ ಕಾಲದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಈ ಸಸ್ಯ ಸಂಕುಲದಲ್ಲಿ ಮಾನವ ಜೀವಿಗಳು ಮುಖ್ಯವಾಗಿ ಹುಡುಕಿ ಹುಡುಕಿ ಆರಿಸುತ್ತಿದ್ದ ಹಣ್ಣು, ಬೀಜಗಳಿಂದ ಇವು ಹೆಚ್ಚು ಹೆಚ್ಚು ಉತ್ತಮ ಆಹಾರಗಳಾಗಿ ವಿಕಾಸವಾದವು. ಕೃಷಿ ಆರಂಭವಾದ ಮೇಲಂತೂ ಮತ್ತಷ್ಟು ವೇಗವಾಗಿ ಈ ಆಯ್ಕೆ ನಡೆದು ಈಗಿನ ಸ್ವರೂಪವನ್ನು ತಳೆದವು.
ಈ ಪರಿಸ್ಥಿತಿಯ ಜೊತೆಗೆ ಬರಗಾಲ, ಹಿಮಯುಗಗಳು. ಹೀಗಿರುವಾಗ ಆಗ ಮನುಷ್ಯ ಕುಲಕ್ಕೆ ಏನೇನು ಆಹಾರ ತಿನ್ನಲು ಒದಗಿರಬಹುದು ? ಬೇಟೆಯಾಡಲಾಗದ ಮನುಷ್ಯ ಜೀವಿ ಆಗ ಸಿಗುತ್ತಿದ್ದ ಕೆಲವು ಹಣ್ಣು, ಬೀಜಗಳು, ಗೆಡ್ಡೆ ಗೆಣಸುಗಳ ಜೊತೆಗೆ ಕೀಟಗಳು, ಗೆದ್ದಲುಗಳು, ಅವುಗಳ ಮತ್ತು ಪಕ್ಷಿಗಳ ಮೊಟ್ಟೆಗಳು ಸಣ್ಣ ಪ್ರಾಣಿಗಳು ಇವುಗಳನ್ನು ತಿನ್ನುತ್ತಿದ್ದ. ಅವು ಹಸಿವನ್ನು ಪೂರೈಸದೇ ಇದ್ದಾಗ ಮಾಂಸಾಹಾರಿ ಬೇಟೆಗಾರ ಪ್ರಾಣಿಗಳು ಬೇಟೆಯಾಡಿ ತಿಂದು ಬಿಟ್ಟ ಪ್ರಾಣಿಗಳ ದೇಹದಲ್ಲಿ ಉಳಿದಿರುತ್ತಿದ್ದ ಮಾಂಸ ಮೂಳೆಗಳನ್ನು ತಿಂದು ತನ್ನ ಪೋಷಕಾಂಶಗಳ ಅವಶ್ಯಕತೆಯನ್ನು ಪೂರೈಸಿಕೊಳ್ಳಲಾರಂಭಿಸಿದ.
ಈ ಮಾಂಸಾಹಾರ ಮಾನವನ ಮೆದುಳಿನ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸಿತು. ಹೀಗೆ ಮಾನವೀಯ ಜೀವಿಗಳು ಮಿಶ್ರಾಹಾರಿಗಳಾದವು. ಅಂತಹ ಜೀವಿಗಳು ಮಾತ್ರ ಉಳಿದುಕೊಂಡವು. ಉಳಿದವು ಅಳಿದು ಹೋದವು. ಮಾಂಸಾಹಾರ ಸೇವನೆ ಆ ಮಾನವೀಯ ಜೀವಿಗಳಿಗೆ ಅತ್ಯಗತ್ಯವಾಯಿತು. ಆದ್ದರಿಂದ ಪ್ರಾಣಿಗಳನ್ನು ಬೇಟೆಯಾಡಲು ತನ್ನ ಶರೀರ ರಚನೆಯಲ್ಲಿ ಇಲ್ಲದ ಸಾಧನಗಳನ್ನು ಹೊರಗೆ ಆಯುಧಗಳ ಮೂಲಕ ಹುಡುಕಿಕೊಳ್ಳ ಬೇಕಾಯಿತು. ಮೊದಲು ಕಲ್ಲು ಬೀಸುವುದು, ಕೋಲುಗಳನ್ನು ಬಡಿದು ಕೊಲ್ಲುವುದು ಮಾತ್ರ ಸುಲಭವಾಗಿ ಆ ಜೀವಿಗಳಿಗೆ ದಕ್ಕಿದ ಸಾಧನಗಳು. ಇವುಗಳನ್ನು ಉಪಯೋಗಿಸಿ ಬೇಟೆಯಾಡಲು ಮಾನವೀಯ ಜೀವಿ ಒಂದು ಕಡೆ ಬುದ್ಧಿ ಶಕ್ತಿಯನ್ನು, ಮತ್ತೊಂದೆಡೆ ಕೂಡಿ ಬೇಟೆಯಾಡುವ ವಿಧಾನಗಳನ್ನು ಬಳಸಿಕೊಳ್ಳುವ ಅನಿವಾರ್ಯತೆ ಒದಗಿತು.
ಇದರಿಂದ ಸಂಜ್ಞೆಗಳ ಭಾಷೆಯನ್ನು ಬೆಳೆಸಿಕೊಳ್ಳಬೇಕಾಯಿತು. ಮಾನವ ಸಂಘ ಜೀವಿಯಾದ . ಇವೆಲ್ಲವೂ ಕೂಡಿ ಮೆದುಳಿನ ಬೆಳವಣಿಗೆಗೆ ಒತ್ತಡ ಹಾಕಿದವು. ಈ ಪ್ರಕ್ರಿಯೆ ಮಾನವ ಜೀವಿಯ ಪೋಷಕಾಂಶಗಳ ಅಗತ್ಯದ ಮೇಲೆ, ಇತರ ದೈಹಿಕ ಕ್ರಿಯೆಗಳ ಮೇಲೆ ಹಲವು ರೀತಿಯ ಒತ್ತಡಗಳನ್ನುಂಟುಮಡಿತು.
ಮಾನವೀಯ ಜೀವಿಗಳ ಮೆದುಳಿನ ಬೆಳವಣಿಗೆಯ ವಿವಿದ ಹಂತಗಳಲ್ಲಿ ಹೇಗೆ ಸಾಗಿದೆ ನೋಡೋಣ :
ಮೆದುಳಿನ ಒಟ್ಟು ಗಾತ್ರ ( ವಾಲ್ಯೂಮ್ )
ಆಸ್ಟ್ರಲೋಪಿತಿಕಸ್ ಮಾನವ-375-550 ಸಿಸಿ
ಹೋಮೋ ಹ್ಯಾಬಿಲಿಸ್-775-1225 ಸಿಸಿ.
(ಒಂದು ಮಾನವೀಯ ಜೀವಿಯ ಪ್ರಬೇಧ)
ಹೋಮೋ ಸೆಪಿಯನ್ಸ್ ಸೆಪಿಯನ್ಸ್ _1350 ಸಿಸಿ.
( ಆಧುನಿಕ ಮಾನವ.)
ಹೀಗೆ ಆಧುನಿಕ ಮಾನವನ ಮೆದುಳಿನ ಗಾತ್ರ ಇತರ ಮಾನವೀಯ ಜೀವಿಗಳಿಗಿಂತ ಮೂರು ಪಟ್ಟು ಹೆಚ್ಚಾಗಿರುವುದನ್ನು ಕಾಣಬಹುದು. ಮೆದುಳೆಂದರೆ ಇಡೀ ದೇಹದಲ್ಲಿ ಅತ್ಯಂತ ಹೆಚ್ಚು ಮೇಧಸ್ಸು ಅಥವಾ ಕೊಬ್ಬಿನ ಅಂಶವುಳ್ಳ ಭಾಗ. ಮೆದುಳಿನ ನರಜೀವಕೋಶಗಳ ಬೇರೆ ಬೇರೆ ಭಾಗಗಳಲ್ಲಿ ನೀರಿನ ಅಂಶವನ್ನು ಹೊರತು ಪಡಿಸಿದರೆ ಶೇ. 40, ಶೇ.60, ಹಾಗೂ ಶೇ 80ರಷ್ಟು ಕೊಬ್ಬಿನ ಅಂಶ ಇರುತ್ತದೆ ಎಂದು ಮೆದುಳಿನ ಅಧ್ಯಯನಗಳು ಹೇಳುತ್ತವೆ.
ಒಟ್ಟಾರೆಯಾಗಿ ಶೇ.60ರಷ್ಟು ಕೊಬ್ಬಿನ ಅಂಶ ಮೆದುಳಿನಲ್ಲಿರುತ್ತದೆ. ಉಳಿದ ಭಾಗ ಪ್ರೋಟೀನಿನ ಅಂಶ. ಈ ಕೊಬ್ಬಿನಲ್ಲಿ ಕೊಲೆಸ್ಟರಾಲ್ ಒಂದು ಮುಖ್ಯ ಅಂಶ. ಅದರಲ್ಲಿಯೂ ಉದ್ದ ಸರಪಳಿಯ ಕೊಬ್ಬಿನ ಆಮ್ಲಗಳು ಮೆದುಳಿನಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅವುಗಳಲ್ಲಿಯೂ ಡಿ,ಎಚ್.ಎ, ಡಿ.ಟಿ.ಎ, ಏ.ಏ ಎಂಬ ನಿರ್ಧಿಷ್ಠ ರೀತಿಯ ಆಮ್ಲಗಳು ಅಗತ್ಯ ಬೀಳುತ್ತವೆ. ಹಾಗೆಯೇ ಪ್ರೋಟೀನಿನ ರಚನೆಗೆ ಅಗತ್ಯವಾದ 20 ಅಮಿನೋ ಆಮ್ಲಗಳಲ್ಲಿ ಎಂಟು ಅಮಿನೋ ಆಮ್ಲಗಳನ್ನು ಕೂಡ ಹೊರಗಿನಿಂದ ಪಡೆಯಬೇಕಾಗಿದೆ. ಇವುಗಳಲ್ಲಿ ಎಲ್ಲವೂ ಮನುಷ್ಯ ದೇಹದಲ್ಲಿ ತಯಾರಾಗುವುದಿಲ್ಲ.
ಆದ್ದರಿಂದ ಸಸ್ಯಾಹಾರಿ ಪ್ರ್ರಾಣಿಗಳಲ್ಲಿ ಮೆದುಳಿನ ಬೆಳವಣಿಗೆಗೆ ಈ ಆಮ್ಲಗಳು ಮತ್ತು ಪ್ರೊಟೀನಿನ ಕೊರತೆ ಆತಂಕವನ್ನುಂಟು ಮಾಡುತ್ತದೆ. ಕೃಷಿ ಮತ್ತು ಪಶು ಸಂಗೋಪನೆಯನ್ನು ಕಲಿತ ಮಾನವ ಈ ಕೊರತೆಯನ್ನು ಪ್ರಾಣಿಗಳ ಹಾಲಿನಿಂದ ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪಗಳಿಂದ ಪರಿಹರಿಸಿಕೊಂಡಿರಬಹುದು. ಆದ್ದರಿಂದಲೇ ಸಸ್ಯಾಹಾರಿಗಳಲ್ಲಿ ಬೆಣ್ಣೆ, ತುಪ್ಪಗಳಿಗೆ ಎಲ್ಲಿಲ್ಲದ ಆದ್ಯತೆ. ಅವರ ಧಾರ್ಮಿಕ ಆಚರಣೆಗಳಲ್ಲಿ ಕೂಡ ಇವುಗಳಿಗೆ ಪ್ರಾಮುಖ್ಯತೆಯನ್ನು ಕಾಣಬಹುದು. ಆದರೆ ಮಾನವನ ಉಗಮದ ಆ ಕಾಲದಲ್ಲಿ ಆ ಅನುಕೂಲ ಲಭ್ಯವಿರಲಿಲ್ಲ. ಮಾಂಸಾಹಾರದಿಂದಲೇ ಇದನ್ನು ಪೂರೈಸಿಕೊಳ್ಳಬೇಕಾಗಿತ್ತು.
ಈಗಲೂ ಕೂಡ ಕೇವಲ ಹಾಲಿನ ಉತ್ಪನ್ನಗಳಿಂದ ಮಾತ್ರ ಈ ಕೊರತೆಯನ್ನು ತುಂಬಿಕೊಳ್ಳಬೇಕೆಂದರೆ ಅದು ಎಲ್ಲರಿಗೂ ಸಾಧ್ಯವಲ್ಲದ್ದು. ಎಲ್ಲ ಪರಿಸ್ಥಿತಿಗಳಲ್ಲಿಯೂ ಸಾಧ್ಯವಲ್ಲದ್ದು. ಮರುಭೂಮಿಯ ವಾತಾವರಣ, ಬೆಟ್ಟ ಗುಡ್ಡಗಳ ಪ್ರದೇಶ, ಹಿಮಾವೃತ ಪ್ರದೇಶಗಳು ಮಳೆ ಕಡಿಮೆ ಪ್ರದೇಶಗಳು ಮತ್ತು ಬರಗಾಲ ಸಂದರ್ಭಗಳಲ್ಲಿ ಹಾಲಿನ ಮೂಲಕ ಪೋಷéಕಾಂಶಗಳನ್ನು ಪಡೆಯುವ ಕೊರತೆ ಮತ್ತಷ್ಟು ಎದ್ದು ಕಾಣುತ್ತದೆ.
ಮೆದುಳಿನ ಬೆಳವಣಿಗೆ ಹೆಚ್ಚು ಶಕ್ತಿಯನ್ನೂ ಬೇಡುತ್ತದೆ. ಎಚ್ಚರದಿಂದಿರುವಾಗ ಮಾತ್ರವಲ್ಲ ನಿದ್ರಿಸುತ್ತಿರುವಾಗಲೂ ಮೆದುಳಿನ ಶಕ್ತಿಯ ಅಗತ್ಯ ಹೆಚ್ಚು. ಮಾನವ ಸೇರಿದ ಪ್ರಾಣಿಗಳ ಗುಂಪಾದ ಸಸ್ತನಿಗಳ ಮೆದುಳು ವಿಶ್ರಾಂತಿಯಲ್ಲಿರುವಾಗ ಅಥವಾ ನಿದ್ರೆಯಲ್ಲಿರುವಾಗ ಕೇವಲ ಶೆ 4 ರಷ್ಟು ಶಕ್ತಿಯನ್ನು ಬಳಸಿಕೊಂಡರೆ ಮಾನವನ ಹತ್ತಿರದ ಸಂಬಂಧಿಗಳಾದ ವಾನರಗಳು ನಿದ್ರಿಸುತ್ತಿರುವಾಗ ಅವುಗಳ ಮೆದುಳು ಕೇವಲ ಶೇ. 8 ರಷ್ಟು ಶಕ್ತಿಯನ್ನು ಬಳಸಿಕೊಂಡರೆ ಮಾನವನ ಮೆದುಳು ಶೇ. 22ರಿಂದ 25 ರಷ್ಟು ಶಕ್ತಿಯನ್ನು ಬೇಡುತ್ತದೆ. ಅಂದರೆ ವಾನರಗಳಿಗಿಂತ ಮೂರರಷ್ಟು ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಹೀಗೆ ದೇಹದ ಶಕ್ತಿಯ ವಿನಿಯೋಗದಲ್ಲಿ ಮೆದುಳಿನ ಬೆಳವಣಿಗೆಗೆ ಹೆಚ್ಚು ಭಾಗವನ್ನು ಒದಗಿಸಬೇಕಾಯಿತು. ಈ ಅವಶ್ಯಕತೆ ಮನುಷ್ಯನ ದೇಹದ ಬೇರೆಡೆಗಳಲ್ಲಿ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡಬೇಕಾಯಿತು. ಹೀಗೆ ಮನುಷ್ಯನ ದೇಹದ ಶಕ್ತಿಯ ಬಜೆಟ್ ನಲ್ಲಿ ಉಳಿತಾಯ ಮಾಡುವುದಕ್ಕೆ ಮಾಂಸಾಹಾರವೇ ದೊಡ್ಡ ಅನುಕೂಲ ಕಲ್ಪಿಸಿಕೊಟ್ಟಿತು ಎಂಬುದು ವಿಕಾಸವಾದಿ- ಜೀವಶಾಸ್ತ್ರಜ್ಞರ ಅನ್ವೇಷಣೆಯಿಂದ ಗೊತ್ತಾಗಿದೆ.
ಮಾಂಸಾಹಾರವನ್ನು ಉಪಯೋಗಿಸಲಾರಂಭಿಸಿದ ಮೇಲೆ ಮಾನವನಿಗೆ ಜೀವ ವಿಕಾಸದ ಪೂರ್ಣ ಪ್ರಯೋಜನ ಸಿಕ್ಕಿತು. ಸಸ್ಯಾಹಾರವನ್ನು ಜೀರ್ಣಿಸಿಕೊಳ್ಳಲು ಬೇಕಾದ ಮತ್ತು ಹೆಚ್ಚು ಶಕ್ತಿಯನ್ನು ಉಪಯೋಗಿಸುವ ಜೀರ್ಣಾಂಗ ವ್ಯೂಹದ ಅಗತ್ಯ ಬೇಕಾಗಲಿಲ್ಲ. ಒಂದು ಸಸ್ತನಿ ಪ್ರಾಣಿಯಾಗಿ ಮಾನವನ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ಸಸ್ಯಗಳಿಂದ ಸಿದ್ಧ ರೂಪದಲ್ಲಿ ಸಿಗುವುದಿಲ್ಲ. ಅವುಗಳನ್ನು ಇತರ ಸಸ್ಯಾಹಾರಿ ಪ್ರಾಣಿಗಳಂತೆ ಮತ್ತು ಕೆಲ ವಾನರರಂತೆ ತನ್ನ ದೇಹದಲ್ಲಿಯೇ ತಯಾರಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ದೇಹದ ಶಕ್ತಿಯನ್ನು ವಿನಿಯೋಗಿಸಬಾಕಾಗುತ್ತಿತ್ತು ಮತ್ತು ಆಧುನಿಕ ಮಾನವನ ಜೀರ್ಣಾಂಳಲ್ಲಿರುವುದಕ್ಕಿಂತ ಎಷ್ಟೋ ದೊಡ್ಡ ಪ್ರಮಾಣದಲ್ಲಿ ಬ್ಯಾಕ್ಟೀರಿಯ ಮೊದಲಾದ ಕಿರು ಜೀವಿಗಳನ್ನು ಸಾಕಿಕೊಂಡಿರಬೇಕಾಗಿತ್ತು. ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಬೇಕಾಗಿತ್ತು. ಮಾನವ ಮಾಂಸಾಹಾರಿಯಾದ ಮೇಲೆ ಈ ಅವಶ್ಯಕ ಪೋಷಕಾಂಶಗಳಲ್ಲಿ ಹಲವು ನೇರವಾಗಿ ದೊರಕಲಾರಂಭಿಸಿತು.
ಆದ್ದರಿಂದ ಆಧುನಿಕ ಮಾನವನಿಗಿಂತ ಹಿಂದಿನ ಮಾನವೀಯ ಪ್ರಬೇಧಗಳಲ್ಲಿದ್ದ ಸಣ್ಣ ಕರುಳಿನ ಮತ್ತು ದೊಡ್ಡ ಕರುಳಿನ ಪ್ರಮಾಣ ಶೆ 40 ರಷ್ಟು ತಗ್ಗಿತು ಮತ್ತು ಇವುಗಳಲ್ಲಿದ್ದ ಕಿರು ಜೀವಿಗಳ ಸಂಖ್ಯೆಯೂ ಕೂಡ. ಇದರಿಂದ ಪಚನ ಕ್ರಿಯೆಗೆ ಉಪಯೋಗಿಸುತ್ತಿದ್ದ ಶಕ್ತಿಯ ಪ್ರಮಾಣ ಗಣನೀಯವಾಗಿ ತಗ್ಗಿತು. ಹೀಗೆ ಬಿಡುಗಡೆಯಾದ ಈ ಶಕ್ತಿ ಮೆದುಳಿನ ಬೆಳವಣಿಗೆ ಮತ್ತು ಉಪಯೋಗಕ್ಕೆ ದಕ್ಕಿತು. ವಿಕಾಸದ ಒಂದು ಹಂತದಲ್ಲಿ ಆಧುನಿಕ ಮಾನವ ರೂಪುಗೊಳ್ಳುವುದಕ್ಕೆ ಮಾನವೀಯ ಜೀವಿಗಳು ಕಂಡುಕೊಂಡ ಬೆಂಕಿಯ ಬಳಕೆಯೂ ಕೂಡ ಪಚನ ಕ್ರಿಯೆ ಸರಳ ಗೊಳ್ಳುವುದಕ್ಕೆ ಕಾರಣವಾಗಿದೆ. ಈ ಎಲ್ಲದರಿಂದ ಉಳಿಕೆಯಾದ ಶಕ್ತಿಯಿಂದಾಗಿ ಮಾನವನ ಮೆದುಳಿನ ಗಾತ್ರ ಮೂರು ಪಟ್ಟು ಬೆಳೆಯಿತು.
ಬೇಟೆ , ಆಯುಧಗಳು, ಭಾಷೆ ಮತ್ತು ಮೆದುಳಿನ ಬೆಳವಣಿಗೆ
ಮೆದುಳಿನ ಬೆಳವಣಿಗೆಗೆ ಮಾಂಸಾಹಾರದ ಅವಶ್ಯಕತೆ ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಬೇಕಾದ ಅನಿವಾರ್ಯತೆಯನ್ನು ತಂದಿತು. ಪ್ರಾಣಿಗಳನ್ನು ಬೇಟೆಯಾಡುವ ಪ್ರಾಣಿಗಳಂತೆ ಯಾವ ದೈಹಿಕ ಆಯುದ ಮತ್ತು ಇತರ ಸಾಮರ್ಥ್ಯ ಹೊಂದದ ಮನುಷ್ಯ ಆ ಆಯುದಗಳನ್ನು ಹೊರಗೆ ಹುಡುಕಿಕೊಳ್ಳಬೇಕಾಯಿತು. ಇದರಿಂದ ಶಿಲಾಯುಧಗಳ ಆವಿರ್ಭವವಾಯಿತು. ವಿವಿಧ ರೀತಿಯ ಕಲ್ಲುಗಳ, ಮೂಳೆಗಳ ಪ್ರಯೋಗ, ಅವುಗಳಿಂದ ವಿವಿಧ ಅವಶ್ಯಕತೆಗಳಿಗೆ ಅಗತ್ಯವಾದ ವಿವಿಧಾಕಾರದ ವಿವಿಧ ಗಾತ್ರದ ಆಯುಧಗಳ ತಯಾರಿಕೆಗೆ ಎಷ್ಟೊಂದು ಬುದ್ಧಿ ಶಕ್ತಿ ಬೇಕಾಗಬಹುದು ಎಂಬುದನ್ನು ಯೋಚಿಸಿ ನೋಡಿ.
ಲಕ್ಷ ವರ್ಷಗಳಿಗೂ ಮಿಗಿಲಾದ ದೀರ್ಘ ಅವಧಿಯಲ್ಲಿ ಮನುಷ್ಯ ಕಂಡರಿಸಿದ ಆಯುಧಗಳ ಬಾಹುಳ್ಯ ಆಶ್ಚರ್ಯಕರವಾಗಿದೆ. ಈ ಆಯುಧಗಳಲ್ಲಿ ಸಸ್ಯಾಹಾರ ಸಂಗ್ರಹಕ್ಕೆಂದು ಬಳಸಬಹುದಾದವು ಕೆಲವೇ ಕೆಲವು. ಉಳಿದುವೆಲ್ಲಾ ಬೇಟೆ ಮತ್ತು ಮಾಂಸಾಹಾರಕ್ಕೆಂದು ಬಳಸಲ್ಪಟ್ಟವು. ಈ ಆಯುಧಗಳನ್ನು ಕಂಡುಕೊಳ್ಳುವಲ್ಲಿ ಹಲವು ಹಂತಗಳು ಬುದ್ಧಿಶಕ್ತಿಯನ್ನು ಬೆಳವಣಿಗೆಯನ್ನು ಒತ್ತಾಯಿಸುತ್ತವೆ. ಮೊದಲು ಯಾವುದೋ ಒಂದು ಕಲ್ಲೆಸೆದು ಪ್ರಯೋಗ, ಅದರಿಂದುಂಟಾದ ಅನುಭವ, ಅನುಭವದ ಆಧಾರದ ಮೇಲೆ ಹೊಸ ಆಯುಧಗಳ ಬಗ್ಗೆ ಮೆದುಳಿನಲ್ಲಿಯೇ ಯೋಚನೆ, ಯೋಜನೆ ಅದಕ್ಕೆ ತಕ್ಕಂತೆ ಕಲ್ಲುಗಳ ಆಯ್ಕೆ, ಅದರಲ್ಲಿ ಒಂದು ಆಕಾರವನ್ನು ಮೂಡಿಸುವ ಸಂಕೀರ್ಣ ಕ್ರಿಯೆಗಳಲ್ಲಿ ಮನುಷ್ಯನ ಮೆದುಳಿನ ಬೆಳವಣಿಗೆ ಸಾಧಿಸಿದೆ. ಹೀಗೆ ಜೀವ ವಿಕಾಸದ ಕೋಟ್ಯಾಂತರ ವರ್ಷಗಳ ದೀರ್ಘ ಪಯಣದಲ್ಲಿ ಮೊತ್ತ ಮೊದಲು ಆಯುಧಗಳನ್ನು ರೂಪಿಸಿಕೊಳ್ಳಲಾಗಿ ಬುದ್ಧಿಶಕ್ತಿಯನ್ನು ಬೆಳೆಸಿಕೊಂಡು ಮಾನವ ರೂಪುಗೊಂಡ. ಅದಕ್ಕಾಗಿಯೇ ಮಾನವ ಶಾಸ್ತ್ರಜ್ಞರು ಮಾನವನೆಂದರೆ ಆಯುಧಗಳನ್ನು ಉಪಯೋಗಿಸುವ ಪ್ರಾಣಿ ಎಂದು ವಾಖ್ಯೆ ನೀಡಿದ್ದಾರೆ.
ಕೇವಲ ಆಯುಧಗಳ ಬಳಕೆ ಮಾತ್ರವೇ ಬೇಟೆಯ ಸಾಧನವಲ್ಲ , ಮನುಷ್ಯನ ಬೇಟೆ ಏಕಾಂಗಿ ಬೇಟೆಯಲ್ಲ. ಸಾಮೂಹಿಕ ಬೇಟೆ. ಈ ಕ್ರಿಯೆ ಮಾನವನಿಗೆ ಭಾಷೆಯ ಅಗತ್ಯವನ್ನೂ ಸೃಷ್ಠಿಸಿತು. ಬುದ್ಧಿಯ ಬಳಕೆಯ ಹೆಚ್ಚು ಹೆಚ್ಚು ಅಗತ್ಯ ಉಂಟಾಯಿತು. ಇವೆಲ್ಲವೂ ಕೂಡ ಮೆದುಳಿನ ಬೆಳವಣಿಗೆಗೆ ಇಂಬಾಯಿತು. ಹೀಗೆ ಮೆದುಳಿನ ಬೆಳವಣಿಗೆ, ಬುದ್ಧಿಶಕ್ತಿಯ ಉಪಯೋಗ, ಸಾಮಾಜಿಕ ಜೀವನ, ಭಾಷೆಯ ಬೆಳವಣಿಗೆ ಹಲವು ರೀತಿಯಲ್ಲಿ ಮನುಷ್ಯ ಮನುಷ್ಯನಾಗಬೇಕಾದರೆ ಮಾಂಸಾಹಾರದ ಪ್ರಧಾನ ಪಾತ್ರ ಇದೆ. ಮಾನವ ಪ್ರಾಣಿಗಳನ್ನು ಪಳಗಿಸಿ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡದ್ದೂ ಕೂಡ ಹಾಲಿಗಾಗಿ ಅಲ್ಲ. ಮಾಂಸಕ್ಕಾಗಿ ಕೂಡ ಅಲ್ಲ. ಬೇಟೆಯಲ್ಲಿ ಸಹಾಯ ಮಾಡುವುದಕ್ಕಾಗಿ. ನಾಯಿಗಳನ್ನು . ಇದರ ನಂತರ ಹಲವು ಹತ್ತು ಸಾವಿರ ವರ್ಷಗಳ ನಂತರವೇ ಬೇರೆ ಪ್ರಾಣಿಗಳನ್ನು ಮನುಷ್ಯ ಪಳಗಿಸಿಕೊಂಡದ್ದು. ಪ್ರಾಣಿಗಳ ಜೀವನ, ವರ್ತನೆಯ ಅಭ್ಯಾಸ ಕೂಡ ಮನುಷ್ಯನಿಗೆ ಅಗತ್ಯವಾಯಿತು. ಯಾವ ಕಾಲದಲ್ಲಿ, ಯಾವ ಪ್ರದೇಶಗಳಲ್ಲಿ ಯಾವ ಪ್ರಾಣಿಗಳು ಹೆಚ್ಚಾಗಿ ಸಿಗುತ್ತವೆ ಎಂಬುದನ್ನೂ ತಿಳಿದುಕೊಳ್ಳಬೇಕಾಯಿತು. ಇದಕ್ಕಾಗಿಯೇ ಮನುಷ್ಯ ಪ್ರಾಣಿ, ಪಕ್ಷಿಗಳ ವಲಸೆಗಳ ಕಾಲಮಾನವನ್ನು ಅರಿತುಕೊಳ್ಳಬೇಕಾಯಿತು. ಋತುಮಾನಗಳ ಬದಲಾವಣೆಯ ಆದಿಮ ಲೆಕ್ಕಾಚಾರಗಳನ್ನೂ ಮಾಡಬೇಕಾಯಿತು.
ಹೀಗೆ ಮೆದುಳಿನ ಹೆಚ್ಚಾಗುತ್ತಿದ್ದ ಮೆದುಳಿನ ಬೆಳವಣಿಗೆಗೆ ಮತ್ತಷ್ಟು ಹೆಚ್ಚು ಮಾಂಸಾಹಾರದ ಅಗತ್ಯ ಬಂದಿತು. ಆದ್ದರಿಂದ ಪ್ರಾಣಿಗಳ ಬೇಟೆ ಆಹಾರದ ಮುಖ್ಯ ಆಧಾರವಾಯಿತು. ಇದಕ್ಕಾಗಿ ಮನುಷ್ಯ ಕಂಡುಕೊಂಡ ಮುಖ್ಯ ಮಾರ್ಗ ಆಯುಧಗಳ ತಯಾರಿಕೆ ತಾನೆ. ಈ ಆಯುಧಗಳಾದರೂ ಎಂತಹವು ಎಂಬುದನ್ನು ಪರಿಶೀಲಿಸುವುದು ಅಗತ್ಯ.
ಆಯುಧಗಳ ಬೆಳವಣಿಗೆಯನ್ನೇ ಮಾನದಂಡವಾಗಿ ಬಳಸಿ ಮಾನವನ ವಿಕಾಸವನ್ನು ಹಳೆ ಶಿಲಾಯುಗ, ಮಧ್ಯ ಶಿಲಾಯುಗ, ಹೊಸ ಶಿಲಾಯುಗ ಎಂದು ವರ್ಗೀಕರಿಸಲಾಗಿದೆ. ಒಂದೊಂದು ಸಣ್ಣ ಬದಲಾವಣೆಯೂ ಆದಿಮ ಮಾನವನಿಗೆ ದೊಡ್ಡ ಹೆಜ್ಜೆಯಿದ್ದಂತೆ. ಆದ್ದರಿಂದ ಒಂದೊಂದು ಸಣ್ಣ ಬದಲಾವಣೆಯೂ ಹತ್ತಾರು ಸಾವಿರ ವರ್ಷಗಳ ಕಾಲ ತೆಗೆದುಕೊಳ್ಳುತ್ತಿದ್ದವು . ಈ ಎಲ್ಲ ಶಿಲಾಯುಧಗಳ ಅತ್ಯಂತ ಆದಿಮ ಸ್ವರೂಪವನ್ನು ಪರಿಶೀಲಿಸಿ ನೋಡಿದರೆ ಇವುಗಳಿಂದ ಹೇಗೆ ಬೇಟೆ ಮಾಡುತ್ತಿದ್ದರೋ ಕಾಣೆವು ಎನಿಸುತ್ತದೆ. ನೂತನ ಶಿಲಾಯುಗ ಎಂಬುವುದೇನಿದ್ದರೂ 12,000-10,000 ವರ್ಷಗಳಿಂದ ಈಚೆಗೆ ಮಾತ್ರ ಮುಂದೆ ಕಬ್ಬಿಣದ ಯುಗ ಬರುವವರೆಗೆ ಮತ್ತು ಅದರಿಂದಾದ ಆಯುಧಗಳು ಬರುವವರೆಗೆ ಶಿಲಾಯುಧಗಳನ್ನು ಬಳಸುವ ಅನಿವಾರ್ಯತೆ ಮಾನವ ಸಂಕುಲಗಳಿಗೆ.
ಬಾಣಗಳು, ಈಟಿಗಳು ಇವುಗಳಿಗೆ ಕಬ್ಬಿಣವನ್ನು ಬಳಸದೆ ಕಲ್ಲಿನ ಕಿರು ಆಯುಧಗಳನ್ನು ಮರದ ಕೋಲುಗಳ ತುದಿಗೆ ಸಿಕ್ಕಿಸಿ ಉಪಯೋಗಿಸುತ್ತಿದ್ದ ಶೋಧ ಅಂದಿನ ಕಾಲಕ್ಕೆ ಬಹಳ ಬುದ್ಧಿವಂತಿಕೆಯದೇ ಆದರೂ ಅವು ತನ್ನ ಪರಿಣಾಮಕಾರಿತ್ವದಲ್ಲಿ ಕಬ್ಬಿಣದ ಆಯುಧಗಳಿಗೆ ಸಮನಲ್ಲ. ಋತುಮಾನದ ಬದಲಾವಣೆಗಳು, ಬರ ಚಳಿ, ಬೇಸಿಗೆ ಮೊದಲಾದ ಕಾರಣಗಳಿಗೆ ಪ್ರಾಣಿಗಳು ವಲಸೆ ಹೋಗುತ್ತಿದ್ದವು. ಸಾಯುತ್ತಿದ್ದವು ಇತ್ಯಾದಿ ಇವು ಸಾವಿರಾರು ವರ್ಷಗಳ ಕಾಲ ಮನುಷ್ಯನಿಗೆ ಅರ್ಥವಾಗಿರಲಿಲ್ಲ. ಈ ಎಲ್ಲ ಕಾರಣಗಳಿಗಾಗಿ ಬೇಟೆ ಸಿಗುತ್ತಿರಲಿಲ್ಲ. ಇಡೀ ಕುಲ ಹಸಿವಿನಿಂದ ಬಳಲುತ್ತಿತ್ತು. ಹಲವೊಮ್ಮೆ ಬಹು ಭಾಗ ಸಾವನ್ನು ಎದುರು ನೋಡುವ ಅನಿವಾರ್ಯತೆ ಇತ್ತು.
ಆಗೆಲ್ಲಾ ಪ್ರಾಣಿಗಳು ತಮ್ಮ ಈ ಹಸಿವನ್ನು ನೋಡಲಾರದೆ ತಮ್ಮಷ್ಟಕ್ಕೆ ತಾವೇ ಮಾನವರ ಬಳಿಗೆ ಬಂದು ಸಿಕ್ಕಿಹಾಕಿಕೊಳ್ಳುತ್ತಿದ್ದವು ಎಂಬುದು ಅವರ ಭಾವನೆಯಾಗಿತ್ತು. ಮತ್ತು ಅವುಗಳಿಗೆ ಪ್ರಾರ್ಥನೆ ಸಲ್ಲಿಸಿದರೆ ಅವು ತಮ್ಮ ಬಳಿಗೆ ಬರುತ್ತವೆ ತಮ್ಮ ಬೇಟೆಗೆ ತಾವಾಗಿ ಬಂದು ಸಿಲುಕಿಕೊಳ್ಳುತ್ತವೆ ಎಂಬ ಯೋಚನೆ ಅವರದಾಗಿತ್ತು. ಇಂತಹ ಯೋಚನೆಗಳನ್ನು ವಿಶ್ವದ ವಿವಿಧ ಪ್ರದೇಶಗಳ ಆದಿಮ ಜನರ ಆಚರಣೆಗಳಲ್ಲಿ ಕಾಣಬಹುದು. ಇನ್ಯೂಟ್ ಎಂಬ ಹಿಮ ಪ್ರದೇಶದ ಎಸ್ಕಿಮೋ ಜನರು ತಿಮಿಂಗಲಗಳ ಬಗ್ಗೆ ಇತರ ಪ್ರಾಣಿಗಳ ಬಗ್ಗೆ ಕಟ್ಟಿದ ಪುರಾಣಗಳ ಬಗ್ಗೆ ಕೂಡ. ಈ ಆಚರಣೆ ಮತ್ತು ಪುರಾಣಗಳಲ್ಲಿ ಮೇಲೆ ವಿವರಿಸಿದ ಚಿಂತನೆಗಳು ಅಂತರ್ಗತವಾಗಿರುವುದನ್ನು ನೋಡಿದ್ದೀರಿ.
ಅಮೇರಿಕದ ಬುಡಕಟ್ಟುಗಳು ಕಾಡೆಮ್ಮೆ ತಮ್ಮ ವಾಸ ಸ್ಥಾನದ ಕಡೆಗೆ ಬರಲೆಂದು ಪ್ರಾರ್ಥಿಸುವುದು, ಉಪವಾಸ ಮಾಡುವುದು,ಬಲಿ ಕೊಡುವುದು, ಮೂಳೆಗಳ ಪೂಜೆ, ಎಮ್ಮೆಯ ವೇಷ ಧರಿಸಿ ಕುಣಿಯುವುದು ಈ ಎಲ್ಲಾ ಆಚರಣೆಗಳು ಬೇಟೆಯ ಯಶಸ್ಸು ಈ ಸಮುದಾಯಗಳ ಅಳಿವು ಉಳಿವಿನ ಪ್ರಶ್ನೆಯಾಗಿತ್ತು ಎಂಬುದನ್ನು ಎತ್ತಿ ತೋರಿಸುತ್ತದೆ. ಜಗತ್ತಿನೆಲ್ಲ ಬೇಟೆಗಾರ ಸಮುದಾಯಗಳು ಕೂಡ ಇಂತಹ ಆಚರಣೆಗಳನ್ನು ರೂಢಿಸಿಕೊಂಡಿದ್ದವು. ಇದು ಈ ಆತಂಕ ಕೃಷಿಯ ಮೊದಲಿನ ಸಮಾಜದಲ್ಲಿ ವಿಶ್ವಾತ್ಮಕವಾಗಿತ್ತು ಎಂಬುದನ್ನು ಸಾಬೀತು ಮಾಡುತ್ತದೆ.. ಹೀಗೆ ಪ್ರಾಣಿಯೊಂದು ತಮ್ಮ ಬದುಕಿನ ಆಧಾರವೆಂದು ಪೂಜಿಸಲ್ಪಡುವುದಕ್ಕೂ ಕುಲಗಳ ಗುರುತಾಗಿ, ಬಳ್ಳಿ ಬೆಡಗು , ಗೋತ್ರಗಳ ಹೆಸರಾಗಿ ವಿವಿಧ ಪ್ರಾಣಿಗಳು ವಿಜೃಂಭಿಸುವುದಕ್ಕೂ ನೇರ ಸಂಬಂಧವಿದೆ.
ಟೋಟೆಮ್ ಅಥವಾ ಬಳ್ಳಿ, ಬೆಡಗು, ಗೋತ್ರವಾಗಿ ಪ್ರಾಣಿಗಳು
ಜಗತ್ತಿನ ಎಲ್ಲಾ ಜನ ಸಮುದಾಯಗಳು ಒಂದು ಕಾಲದಲ್ಲಿ ಬುಡಕಟ್ಟು ಮೂಲದವಾಗಿದ್ದವು ಈ ಎಲ್ಲ ಬುಡಕಟ್ಟುಗಳು ಪ್ರತ್ಯೇಕವಾಗಿ ಬೇರೆ ಬೇರೆ ಪ್ರದೇಶದಲ್ಲಿ ಜೀವಿಸುತ್ತಿದ್ದವು. ತಮ್ಮ ಬುಡಕಟ್ಟಿನ ಒಳಗೆ ಬುಡಕಟ್ಟಿನ ಬೇರೆ ಬೇರೆ ಗುಂಪುಗಳನ್ನು ಗುರುತಿಸುವ ಮತ್ತು ಒಂದರೊಡನೊಂದು ಸಂಬಂಧಗಳನ್ನು ಏರ್ಪಡಿಸಿಕೊಳ್ಳುವ ಬಗ್ಗೆ ನಿರ್ಧಿಷ್ಟ ನಿಯಮಗಳನ್ನು ರೂಪಿಸಿಕೊಂಡಿದ್ದವು. ಒಂದು ಪ್ರದೇಶದಲ್ಲಿರುವ ಬುಡಕಟ್ಟುಗಳು ಕೆಲವೊಮ್ಮೆ ಪರಸ್ಪರ ಸಂಪರ್ಕಕ್ಕೆ ಬರುತ್ತಿದ್ದವು, ಸಂಧಿಸುತ್ತಿದ್ದವು ಅವುಗಳ ಭಾಗವಾಗಿದ್ದ ವ್ಯಕ್ತಿಗಳು ಒಮ್ಮೊಮ್ಮೆ ಪರಸ್ಪರ ಸಂಪರ್ಕಕ್ಕೆ ಬರುವ ಸಂಭವಗಳು ಇರುತ್ತಿದ್ದವು. ಆಗ ಆ ಬುಡಕಟ್ಟನ್ನು, ಬುಡಕಟ್ಟಿನ ಒಂದು ಗುಂಪನ್ನು ಅಥವಾ ಒಬ್ಬ ವ್ಯಕ್ತಿಯನ್ನು ಗುರುತಿಸುವ ಅವಶ್ಯಕತೆ ಬರುತ್ತಿತ್ತು. ಇದಕ್ಕಾಗಿ ಈ ಬುಡಕಟ್ಟುಗಳು ನಿರ್ಧಿಷ್ಟ ಗುರುತುಗಳನ್ನು ಇಟ್ಟುಕೊಂಡಿದ್ದವು.
ಬುಡಕಟ್ಟಿನ ಒಳಗೇ ಕೂಡ ಈ ಗುರುತು ಅಗತ್ಯವಾಗಿತ್ತು. ಮುಖ್ಯವಾಗಿ ಮದುವೆ ವಿಷಯದಲ್ಲಿ. ಸಹೋದರ ಸಹೋದರಿ ಸಂಬಂಧದ ಮದುವೆಗಳನ್ನು ತಪ್ಪಿಸಲು ಅದರಿಂದ ಮುಂದಿನ ತಲೆಮಾರು ರೋಗ ಪೀಡಿತವಾಗುವುದನ್ನು, ಬಾಲ ಮರಣ ಹೊಂದುವುದನ್ನು ತಪ್ಪಿಸಲು ಇದು ಅಗತ್ಯವಾಗಿತ್ತು. ಇದಕ್ಕೆ ಸಂಬಂಧಿಸಿದ ಸತ್ಯವನ್ನು ಬುಡಕಟ್ಟುಗಳು ಹೇಗೆ ಕಂಡುಕೊಂಡರೋ , ಹೇಗೆ ಅವರ ಅನುಭವಕ್ಕೆ ಬಂದಿತೋ ಆಶ್ಚರ್ಯಕರ. ಮತ್ತೆ ಸಾವಿರಾರು ವರ್ಷಗಳ ಅನುಭವದಲ್ಲಿ ಸಹೋದರ ಸಂಬಂಧಗಳ ಮದುವೆಯೇ ಮಕ್ಕಳ ಸಾವು ಮತ್ತು ತೀವ್ರ ರೋಗಗಳಿಗೆ ಕಾರಣ ಎಂದು ಕಾರಣ ಎಂದು ಕಂಡುಕೊಂಡಿದ್ದಾರೆ.
ಆದರ ಮುಂದುವರಿಕೆಯಾಗಿ ಜಗತ್ತಿನೆಲ್ಲ ಬುಡಕಟ್ಟುಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಯಾರನ್ನು ಮದುವೆಯಾಗಬಾರದು ಮತ್ತು ಯಾರನ್ನು ಮದುವೆಯಾಗಬಹುದು ಎಂದು ಗುರುತಿಸುವ ಒಂದು ಪದ್ಧತಿ ವಿವಿಧ ರೂಪಗಳಲ್ಲಿ ಚಾಲ್ತಿಯಲ್ಲಿದೆ. ಅದಕ್ಕೆ ನಮ್ಮ ಹಳ್ಳಿಗಾಡಿನ ಜನರು ಬಳ್ಳಿ, ಬೆಡಗು ಎಂಬ ಸುಂದರ ಹೆಸರುಗಳಿಂದ ಕರೆದರೆ ಉತ್ತರದ ಆರ್ಯ ಜನರು ಗೋತ್ರ ಎಂದು ಕರೆದರು.
ಈ ಬಳ್ಳಿ, ಬೆಡಗುಗಳ ಹೆಸರುಗಳು ಒಂದು ಪ್ರಾಣಿ, ಅಥವಾ ಸಸ್ಯಗಳ ಹೆಸರುಗಳಾಗಿವೆ. ಪ್ರಾಣಿಗಳಲ್ಲಿ ಈ ಹೆಸರುಗಳು ಮನುಷ್ಯರು ತಮ್ಮ ಆಹಾರವಾಗಿ ಬಳಸುತ್ತಿದ್ದ ಪ್ರಾಣಿಗಳ ಹೆಸರುಗಳಾಗಿರುವುದೇ ಹೆಚ್ಚು. ಆರ್ಯ ಜನರ ಗೋತ್ರಗಳು ಸಪ್ತ ಋಷಿಗಳಿಂದ ಉದ್ಭವಿಸಿವೆ ಎಂದು ಹೇಳಲಾಗುತ್ತದೆ. ಆದರೆ ಅವುಗಳಲ್ಲಿ ಪ್ರತಿಯೊಂದೂ ಒಂದೊಂದು ಪ್ರಾಣಿ ಅಥವಾ ಪಕ್ಷಿ ಮೂಲದ್ದು ಎಂದು ಸಂಶೋಧನೆ ತಿಳಿಸುತ್ತದೆ.
ಋಗ್ವೇದದಲ್ಲಿ ಇತರ ವೇದಗಳಲ್ಲಿ ಬ್ರಾಹ್ಮಣಗಳು ಮೊದಲಾದ ಆರಂಭದ ಶಾಸ್ತ್ರ ಗ್ರಂಥಗಳಲ್ಲಿ ಬರುವ ಅನೇಕ ವಂಶಗಳ ಹೆಸರುಗಳು ಪ್ರಾಣಿ ಮೂಲವನ್ನು ತೋರಿಸುತ್ತವೆ, ಮತ್ಸ್ಯ ರಾಜ ವಂಶ ಎಂಬ ಮೀನಿನ ಹೆಸರಿನ ವಂಶ, ತೈತ್ತಿರೀಯ ಎಂಬ ವೇದ ಶಾಖೆಯೇ ತಿತ್ತಿರ ಎಂಬ ಪಕ್ಷಿಗಳಿಗೆ ಅಜ , ಛಾಗಲೇಯ ಎಂಬುದು ಮೇಕೆಗಳಿಗೆ, ಪಿಪ್ಪಲಾದ ಎಂಬುದು ಮತ್ತೊಂದು ಪಕ್ಷಿಗೆ, ಕೌಶಿಕ ಎಂದರೆ ಗೂಬೆ, ಶೌನಕ ಎಂದರೆ ನಾಯಿ, ಮಂಡೂಕ ಎಂದರೆ ಕಪ್ಪೆ, ಗೋತಮ ಎಂದರೆ ಎತ್ತು, ವತ್ಸ ಎಂದರೆ ಕರು, ಕಾಪೆಯ ಎಂದರೆ ಕೋತಿ, ಶ್ವೇತಾಶ್ವತರ ಎಂದರೆ ಬಿಳಿ ಕುದುರೆ ಹೀಗೆ ಅನೇಕ ಉದಾಹರಣೆಗಳು.
ಅಮೇರಿಕದ ಬುಡಕಟ್ಟುಗಳಲ್ಲಿ ಬರುವ ಹೆಸರುಗಳು ಹೀಗಿವೆ : ಸೆನೆಕಾ ಬುಡಕಟ್ಟಿನಲ್ಲಿ ಕರಡಿ, ತೋಳ,ಆಮೆ,ಜಿಂಕೆ,ಹದ್ದುಗಳ ಹೆಸರುಗಳು ; ಓಜಿಬ್ವಾ ಬುಡಕಟ್ಟಿನಲ್ಲಿ ಕೊಕ್ಕರೆ,ಕರಡಿ ಹೀಗೆ. ಈ ಪದ್ಧತಿಯು ಆಸ್ಟ್ರೇಲಿಯ, ದಕ್ಷಿಣ ಅಮೇರಿಕ, ಆಫ್ರಿಕಾ , ಏಶ್ಯಾ ಖಂಡಗಳಲ್ಲಿಯೂ ಇವೆ. ಭಾರತದಲ್ಲಂತೂ ಹೇರಳ. ಇದರಲ್ಲಿ ಅನೇಕ ಪ್ರಾಣಿಗಳ ಹೆಸರುಗಳಿವೆ . ನಮಗೆ ಪ್ರಸ್ತುತವಿರುವ ಕೋಣನೋರು, ಎನುಮಲೋರು ಎಂಬ ಹೆಸರುಗಳೂ ಕೂಡ ಅನೇಕ ಸಮುದಾಯಗಳಲ್ಲಿವೆ.
ಜಿ ಎನ್ ನಾಗರಾಜ್ ಅವರು ಮಾರಮ್ಮನ ಬಗ್ಗೆ ‘ಅಗ್ನಿ’ ಪತ್ರಿಕೆಗೆ ಲೇಖನ ಮಾಲಿಕೆ ಬರೆಯುತ್ತಿದ್ದರು.
ಅದರಿಂದ ಮಾಂಸಾಹಾರದ ಬಗ್ಗೆ ಇದ್ದ ಭಾಗವನ್ನು ಆಯ್ದು ಇಲ್ಲಿ ನೀಡಲಾಗಿದೆ





I am a non-veterinarian. I like non-veg food more.
But this article is utter non-seance. Not related to any thing. Its a big comedy story. Author trying to link his concept to something. ha… ha…
Instead of this author can tell about the nutrition content of fish, egg and flesh. It may more use full to other.