ಅಪಸಂಸ್ಕೃತಿ ಮತ್ತು ಯುವ ಜನತೆ
ಡಾ ಎಸ್ ಬಿ ಜೋಗೂರ
ಒಂದು ದೇಶದ ಮಾನವಸಂಪನ್ಮೂಲ ನಿರ್ಮಾಣ ಕಾರ್ಯದಲ್ಲಿ ತೊಡಗಿದರೆ ಆ ದೇಶದ ಅಭ್ಯುದಯ ನಿರೀಕ್ಷೆ ಮೀರಿ ಬೆಳೆಯುತ್ತದೆ. ಆ ದಿಶೆಯಲ್ಲಿ ಜಾಗತಿಕ ಮಹಾಯುದ್ಧಗಳ ಸಂದರ್ಭದಲ್ಲಿ ಅಣುಬಾಂಬಿಗೆ ಸಿಲುಕಿ, ನಲುಗಿ ಇಡೀ ವಿಶ್ವವೇ ಬೆರಗುಗೊಳ್ಳುವಂತೆ ಚೆತರಿಸಿಕೊಂಡ ಜಪಾನ ದೇಶವನ್ನು ನಾವು ಉದಾಹರಿಸಬಹುದು. ಶ್ರಮ ಸಂಸ್ಕೃತಿಯನ್ನು ನಂಬಿರುವ ಯಾವ ದೇಶಗಳೂ ಹಿಂದೆ ಬಿದ್ದಿಲ್ಲ. ಬರೀ ನಿರ್ನಾಮದಲ್ಲಿಯೇ ಖುಷಿ ಕಾಣುವ, ಅದನ್ನೇ ಒಂದು ಸಂಸ್ಕೃತಿಯಾಗಿ ಸ್ವೀಕರಿಸ ಹೊರಟ ಮಾನಸಂಪನ್ಮೂಲ ಇರುವ ರಾಷ್ಟಗಳು ತಮ್ಮ ಸುತ್ತಲೂ ಪಾಪಕೂಪಗಳನ್ನು ಸೃಷ್ಟಿಸಿಕೊಂಡು ಪಶ್ಚಾತ್ತಾಪ ಪಡುತ್ತಿವೆ. ನಮ್ಮಲ್ಲಿ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ಇರುವಾಗಲೂ ಕಳೆದ ಅನೇಕ ದಶಕಗಳಿಂದಲೂ ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕುತ್ತಿರುವ ನಮಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಗುರುತಿಸಿಕೊಳ್ಳಲಾಗುತ್ತಿಲ್ಲ. ಭಾರತದಲ್ಲಿ ಯುವಜನರ ಪ್ರಮಾಣ ಕಡಿಮೆಯಿಲ್ಲ. ಈ ದೇಶದ ಒಟ್ಟು ಜನಸಂಖ್ಯೆಯ 19 ಪ್ರತಿಶತದಷ್ಟು ನಮ್ಮಲ್ಲಿ ಯುವಕರಿದ್ದಾರೆ. [15-24 ವರ್ಷ ವಯೋಮಿತಿಯೊಳಗೆ ಬರುವವರು] ಹೀಗಿರುವಾಗಲೂ ನಮಗೆ ಆ ಯುವಕರನ್ನು, ಅವರಲ್ಲಿಯ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಪರಿಣಾಮವಾಗಿ ಆ ಯುವಕರು ಅಪವರ್ತನೆಯನ್ನೇ ವೃತ್ತಿಯನ್ನಾಗಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಕತ್ತಿನ ಸರಗಳನ್ನು ಲಪಟಾಯಿಸುವಲ್ಲಿ ಈ ಬಗೆಯ ರಿಕಾಮಿ ಯುವಕರು ಹೆಚ್ಚೆಚ್ಚು ಇಳಿಯುತ್ತಿದ್ದಾರೆ. ಹಾಡುಹಗಲಿನಲ್ಲಿಯೇ ಸಿನಮೀಯ ಸ್ಟೈಲಲ್ಲಿ ಬೈಕ್ ಮೇಲೆ ಬರ್ರ್ ಎಂದು ಬಂದವರೇ ಅಸಹಾಯಕ ಮಹಿಳೆಯರ ಕತ್ತಿನ ಚೈನು ಕಸಿಯುವ..ಓಡುವ ಕಿರಾತಕತನದಲ್ಲಿ ತೊಡಗುವವರ ಪ್ರಮಾಣ ರಾಜ್ಯದ ಮಹಾನಗರಗಳಲ್ಲಿ ಹೆಚ್ಚಾಗುತ್ತಿದೆ. ಕೈಲಾಗದವರು..ಅಂಗವಿಕಲರು..ವಯಸ್ಸಾದವರಾರೂ ಈ ಬಗೆಯ ಕೃತ್ಯಗಳನ್ನು ಮಾಡುವದಿಲ್ಲ ಇವರೆಲ್ಲಾ ಬಹುತೇಕವಾಗಿ ಯುವಕರು. ಅದೂ ಗಟ್ಟಿ ಮುಟ್ಟಾಗಿರುವ ಯುವಕರು. ಈ ಬಗೆಯ ಯುವಸಮೂಹ ಇಂಥಾ ಅಪವರ್ತನೆಯಲ್ಲಿ ತನ್ನ ಮೈ-ಮನಸನ್ನು ತೊಡಗಿಸುವದರಿಂದ ಸಮಾಜದ ಮೇಲೆ ..ದೇಶದ ಮೇಲೆ ಕೆಟ್ಟ ಪರಿಣಾಮಗಳು ಗ್ಯಾರಂಟಿ. ತೀರಾ ಅಪರೊಕ್ಕೊಮ್ಮೆ ಈ ಬಗೆ0ು ಅಪರಾತಪರಾಗಳು ನಡೆದರೆ ಜನ ಅಷ್ಟಾಗಿ ಪರಿಗಣಿಸಲಿಕ್ಕಿಲ್ಲ. ದಿನನಿತ್ಯ ಅತ್ಯಂತ ರಾಜಾರೋಷವಾಗಿ ಸಮಾಜದ ಸಮ್ಮತಿಯನ್ನು ಪಡದೇ, ಪೋಲಿಸ್ ವ್ಯವಸ್ಥೆಯ ಗಮನಕ್ಕೆ ತಂದೇ ನಾವು ಹೀಗೆ ಮಾಡುತ್ತಿದ್ದೇವೆ ಎನ್ನುವಷ್ಟರ ಮಟ್ಟಿಗೆ ಈ ಬಗೆಯ ಕಿರಾತಕತನಗಳು ಹೆಚ್ಚಾದರೆ ಆ ಸಮಾಜದ ಭವಿಷ್ಯವೇನು..? ಈ ಬಗೆಯ ಮನ:ಸ್ಥಿತಿಗಳೇ ಸಮಾಜದಲ್ಲಿ ಬಲಗೊಳ್ಳುತ್ತಾ ನಡೆದರೆ ಮುಂಬರುವ ದಿನಗಳಲ್ಲಿ ಮಹಿಳೆಯರಲ್ಲ..ಅಸಹಾಯಕ ಪುರುಷರು ಕೂಡಾ ರಸ್ತೆಯಲ್ಲಿ ಮುಕ್ತವಾಗಿ ಅಲೆಯುವದು ಕಷ್ಟವಾಗುತ್ತದೆ. ಅನಾಮತ್ತಾಗಿ ಯಾವದೋ ಒಬ್ಬ ದುಷ್ಟ ಬಂದು ಚಿನ್ನದ ಸರವನ್ನು ಎಗ್ಗಿಲ್ಲದೇ ಹರಿದು ಫರಾರಿಯಾಗುತ್ತಾನೆಂದರೆ ಸಾಮಾಜಿಕ ನಿಯಂತ್ರಣದ ವ್ಯವಸ್ಥೆ ಮತ್ತು ಅದರ ಶಿಥಿಲತೆ ಯಾವ ಹಂತಕ್ಕೆ ತಲುಪಿದೆ ಎನ್ನುವದರ ಬಗ್ಗೆ ಯೋಚಿಸಬೇಕು. ಹುಬ್ಬಳ್ಳಿ-ಧಾರವಾಡಗಳಲ್ಲಂತೂ ವಾರಕ್ಕೆ ಒಂದೆರಡು ಇಂಥಾ ಸರ ಹರಿದುಕೊಂಡು ಓಡುವ ಪ್ರಕರಣಗಳು ಬಯಲಾಗುತ್ತವೆ.
ಒಂದು ಚಿನ್ನದ ಮಾಂಗಲ್ಯದ ಸರ ಒಂದು ಮಧ್ಯಮ ವರ್ಗದ ಪಾಲಿಗೆ ಹತ್ತಾರು ವರ್ಷದ ಕನಸು. ತೀರಾ ದುಬಾರಿಯ ದಿನಮಾನಗಳಲ್ಲಿ ಸಾಲ ಮಾಡಿಯೋ..ಇಲ್ಲಾ ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ ಹಣದಿಂದ ಖರೀದಿಸಿದ ಚಿನ್ನದ ಸರವನ್ನು ಒಬ್ಬ ದಂಡಪಿಂಡ ಅನಾಮತ್ತಾಗಿ ಎಗರಿಸಿ ಓಡಿ ಹೋಗುತ್ತಾನೆಂದರೆ ಹೇಗಾಗಬೇಡ..? ಅಷ್ಟಕ್ಕೂ ಈ ಚಿನ್ನದ ಸರ ಕದಿಯುವವರದೇ ಒಂದು ವೃತ್ತಿಯಾಗುವಷ್ಟರ ಮಟ್ಟಿಗೆ ಅದನ್ನು ಬೆಳೆಯಲು ಬಿಟ್ಟ ಪೋಲಿಸ್ ವ್ಯವಸ್ಥೆಯ ಬಗ್ಗೆಯೂ ನಾಗರಿಕರು ಯೋಚಿಸದೇ ಇರಲಾರರು. ಒಂದು ಚಿನ್ನದ ಸರ ಲಕ್ಷಗಟ್ಟಲೇ ಬೆಲೆಬಾಳುತ್ತದೆ. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ. ಎನ್ನುವ ಹಾಗೆ ಹಾಗೆ ಬಂದು ಹೀಗೆ ಹರಿದುಕೊಂಡು ಓಡುವ ಅಡ್ನಾಡಿಗಳಿಗೆ ಪೋಲಿಸ್ ವ್ಯವಸ್ಥೆ ತಕ್ಕ ಪಾಠ ಕಲಿಸಬೇಕು. ಹಾಗಾಗದಿರುವದರಿಂದಲೇ ಮತ್ತೆ ಮತ್ತೆ ಇಂಥಾ ಪ್ರಕರಣಗಳು ಮರುಕಳುಹಿಸುತ್ತವೆ. ಸಾಮಾಜಿಕ ವ್ಯವಸ್ಥೆಯಲ್ಲಿಯ ಆಂತರಿಕ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಅತಿ ಮುಖ್ಯ ಹೊಣೆಗಾರಿಕೆ ಪೋಲಿಸ್ ವ್ಯವಸ್ಥೆಯ ಮೇಲಿದೆ. ಈ ರಾಜ್ಯದ ಪೋಲಿಸ್ ವ್ಯವಸ್ಥೆ ತುಂಬಾ ಚುರುಕಾಗಿದೆ ಹೀಗಿರುವಾಗಲೂ ಹಾಡುಹಗಲಲ್ಲಿಯೇ ಹೆಣ್ಣಿನ ಕತ್ತಲ್ಲಿಯ ಮಾಂಗಲ್ಯದ ಸರಗಳನ್ನು ಕಸಿದು ಓಡುವ ಸೈತಾನರ ಪ್ರಮಾಣ ಯಾಕೆ ಹೆಚ್ಚಾಗುತ್ತಿದೆ ಎನ್ನುವದೇ ಒಂದು ನಿಗೂಢ ರಹಸ್ಯ!
ಧಾರವಾಡ, ಹುಬ್ಬಳ್ಳಿಯ ಗಲ್ಲಿಗಲ್ಲಿಗಳಲ್ಲಿ ‘ಸರಗಳ್ಳರಿಂದ ಎಚ್ಚರಿಕೆ’ ಎನ್ನುವ ಬೋರ್ಡ್ಗಳನ್ನು ಪೋಲಿಸ್ ಇಲಾಖೆ ಜಡಿದಿದೆಯಾದರೂ ಮೂಗು ಹಿಡಿದರೆ ಬಾಯಿ ತೆಗೆಯುವ ಸೂತ್ರವಾಗಿ ಈ ಬೋರ್ಡ್ ಗಳು ಕೆಲಸಮಾಡುತ್ತಿಲ್ಲ. ಸರ ಕಳೆದುಕೊಂಡವರು ನಮ್ಮವರಲ್ಲ.. ನಮ್ಮ ಮನೆಯಲ್ಲಿ ಹಾಗಾದರೆ ನೋಡೋಣ ಎನ್ನುವಷ್ಟರ ಮಟ್ಟಿಗಿನ ಔದಾಸೀನ್ಯತೆಯತೂ ನಮಗೆ ಹೊಸತಲ್ಲ. ಹಾಗಾಗಿಯೇ ಈ ಬಗೆಯ ಘಟನೆಗಳು ಮಾಮೂಲು ಎನ್ನುವಷ್ಟರ ಮಟ್ಟಿಗೆ ನಡೆದುಕೊಂಡು ಹೋಗುತ್ತಿವೆ. ಹೀಗೆ ಅಸಹಾಯಕ ಹೆಣ್ಣಿನ ಕತ್ತಲ್ಲಿಯ ಸರ ಕದಿಯುವ ಖದೀಮರು ದೇಶದ ಆರೋಗ್ಯಕರ ಸಂತಾನವಂತೂ ಅಲ್ಲ. ಈ ಬಗೆಯ ಸಂತಾನವನ್ನು ಈಗಿನಿಂದಲೇ ಸರಿಯಾಗಿ ಸೆನ್ಸಾರ್ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಇಡೀ ಸಮಾಜ ರೋಗಗ್ರಸ್ಥವಾಗುವ ಅಪಾಯಗಳಿವೆ. ಖಾಲಿ ಮಿದುಳು ದೆವ್ವಿನ ಕಾರ್ಖಾನೆ ಇದ್ದಂತೆ ಎನ್ನುವ ಮಾತಿದೆ. ಇಂದು ದುಡಿ0ುಬೇಕೆನ್ನುವವರಿಗೆ ಅವಕಾಶಗಳು ಸಾಕಷ್ಟಿವೆ. ನ್ಯಾಯಯುತವಾಗಿ ದುಡಿದು ಗಳಿಸುವದು ಕಷ್ಟ. ಅಪಾಯಗಳಿದ್ದರೂ ಅಡ್ದ ಹಾದಿ0ಯ ಮೂಲಕ ದಿಢೀರನೇ ಶ್ರೀಮಂತರಾಗಬಹುದು ಎನ್ನುವ ವಾಮಮಾರ್ಗದ ಆಲೋಚನೆಯ ಸಂತಾನಕ್ಕೆ ನ್ಯಾಯಮಾರ್ಗದ ದುಡಿಮೆ ಬೇಕಿಲ್ಲ. ನಾನು ಮೊದಲೇ ಹೇಳಿದೆ. ಹೀಗೆ ಹಾಡುಹಗಲಲ್ಲಿ ಸರ ಹರಿಯುವವರು ಅಂಗವಿಕಲರಲ್ಲ..ಕೈಲಾಗದವರಲ್ಲ.. ಗಟ್ಟಿಯಾಗಿದ್ದವರೇ. ಆದರೆ ನ್ಯಾಯಮಾರ್ಗದ ಕಮಾಯಿ ಮಾತ್ರ ಇವರಿಗೆ ಅರಗುವದಿಲ್ಲ. ಹೀಗಾಗಿ ಬೇರೆಯವರ ತುತ್ತನ್ನು ಕಸಿಯುವ ಕಿರಾತಕರಾಗಿ ಹೊಟ್ಟೆ ಹೊರೆಯುವ ಗುಣ ಬೆಳೆಸಿಕೊಂಡಿದ್ದಾರೆ. ಐದಾರು ವರ್ಷ ಅಲ್ಪ ಸ್ವಲ್ಪ ಉಳಿಸಿ ಕೂಡಿಸಿ ಖರೀದಿಸಿದ ಸರವೊಂದು ತನ್ನದೇ ದೇಶದ..ಸಮಾಜದ ಜನರು ಹೀಗೆ ಹರಿದು ಓಡಿದರೆ ಅವರ ಮನಸಿನ ಮೇಲೆ ಆಗಬಹುದಾದ ಪರಿಣಾಮವನ್ನು ಒಮ್ಮೆ ನಾವೆಲ್ಲರೂ ಯೋಚಿಸಲೇಬೇಕು. ಈ ಸಮಾಜ ಇಂಥಾ ಕೆಲ ಚೈನು ಕದಿಯುವವರೊಂದಿಗೆ ಮುಗಿಯುವದಿಲ್ಲ. ಈ ಬಗೆಯ ಅಪಸಂಸ್ಕೃತಿಗಳು ದಿನಗಳೆದಂತೆ ಪ್ರಬಲವಾಗಬಾರದು ಎನ್ನುವದೇ ಈ ಲೇಖನದ ಮುಖ್ಯ ಆಶಯ. ನಮ್ಮ ಮುಂದಿನ ಪೀಳಿಗೆ ಇಲ್ಲಿ ನೆಮ್ಮದಿಯಿಂದ ಬದುಕುವದು ಬೇಡವೇ..? ಪ್ರಜ್ಞಾವಂತ ನಾಗರಿಕ ಎನಿಸಿಕೊಂಡ ಪ್ರತಿಯೊಬ್ಬನು ಈ ದಿಶೆಯಲ್ಲಿ ಗಂಭೀರವಾಗಿ ಆಲೋಚಿಸಬೇಕಿದೆ. ನಮ್ಮ ಮನೆಯ ಮಹಿಳೆಯರ ಕತ್ತಿನ ಚೈನು ನಾಪತ್ತೆಯಾಗುವ ಮೊದಲು ಜಾಗೃತರಾಗುವ ಜರೂರತ್ತಿದೆ. ಹೀಗೆ ಚೈನು ಕದಿಯುವ ಸಂತಾನಕ್ಕೂ ಹೆತ್ತವರಿದ್ದಾರೆ. ಅವರಿಂದ ಸರಿಯಾದ ಸಾಮಾಜೀಕರಣ ಸಾಧ್ಯವಾಗದಿದ್ದುದಕ್ಕೆ ಇವತ್ತು ಆ ಸಂತಾನ ಹೀಗೆ ಸಮಾಜದ ನಿದ್ದೆ ಕೆಡಿಸುವ ಕಾರ್ಯುದಲ್ಲಿ ತೊಡಗಿದೆ. ನಮ್ಮ ದೇಶ ಈ ಪ್ರಮಾಣದಲ್ಲಿ ಯುವಶಕ್ತಿಯನ್ನು ಹೊಂದಿದೆ ಎಂದು ಹೇಳುವಾಗಲೆಲ್ಲಾ ಈ ಬಗೆಯ ಅಪಸಂಸ್ಕೃತಿಯಲ್ಲಿ ತೊಡಗಿದ ಯುವಕರು ನೆನಪಾಗುತ್ತಾರೆ. ಇಂಥವರು ದೇಶದ ಅಭಿವೃದ್ಧಿಯಲ್ಲಿ ಸಂಪನ್ಮೂಲವಾಗದೇ ಸೈತಾನರಾಗಿ ಕಾಡುವದಿದೆ. ಇವರು ಬ್ರಹ್ಮ ರಾಕ್ಷಸರಾಗಿ ಬೆಳೆಯುವ ಮುನ್ನವೇ ಇವರನ್ನು ಮಟ್ಟ ಹಾಕಬೇಕು. ಇಲ್ಲದಿದ್ದರೆ ಇಡೀ ಸಮಾಜವೇ ನರಕಸದೃಶವಾಗುತ್ತದೆ.





0 Comments