ರುಡಾಲಿ ಹೆಸರಾಂತ ಬಂಗಾಳಿ ಲೇಖಕಿ ಮಹಾಶ್ವೇತಾದೇವಿಯವರ ಕಿರು ಕಾದಂಬರಿ. ಇದು ಹಿಂದಿಭಾಷೆಯಲ್ಲಿ ಕಲ್ಪನಾ ಲಾಜ್ಮಿ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ. ಆ ಚಲನಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಮತ್ತು ರಾಜ್ ಬಬ್ಬರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಹಾಶ್ವೇತಾದೇವಿಯವರು ಸ್ವಾತಂತ್ರ್ಯನಂತರ ಭಾರತ ಕಂಡ ಮಹಾಸಾಹಿತಿಗಳಲ್ಲಿ ಒಬ್ಬರು.
ಅವರು ಬರೆದಂತೆ ಬದುಕಿದ್ದ ಲೇಖಕಿ ಜೊತೆಗೆ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ಆ ಕಾರಣದಿಂದ ಮಹಾಶ್ವೇತಾದೇವಿಯರಿಗೆ ಭಾರತೀಯ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರಿದೆ. ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಬಹುಚರ್ಚಿತ ಲೇಖಕ ಲೇಖಕಿಯರಲ್ಲಿ ಒಬ್ಬರು.
ಮಹಾಶ್ವೇತಾದೇವಿಯವರು ದೇಶ ವಿಭಜನೆಗಿಂತ ಹಿಂದೆ ಅಂದರೆ ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಗಳಾಗುವುದಕ್ಕಿಂತ ಮುಂಚೆ ಇಂದಿನ ಬಾಂಗ್ಲಾದೇಶದ ರಾಜಧಾನಿಯಾಗಿರುವ ಢಾಕಾ ಮಹಾನಗರದಲ್ಲಿ೧೯೨೬ರಲ್ಲಿ ಜನಿಸಿದರು. ಸಾಹಿತ್ಯ ಲೋಕದ ಅತ್ಯಂತ ಚಿರಪರಿಚಿತ ಕುಟುಂಬದಲ್ಲಿ ಅವರ ಜನನವಾಗಿತ್ತು. ಅವರ ತಂದೆ ಹೆಸರಾಂತ ಸಾಹಿತಿ ಮನಿಷ್ ಘಟಕ್ ರವರು. ಅವರು ಜುಬನಾಶ್ವಾ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು.
ಬೆಂಗಾಲಿಯ ಹೆಸರಾಂತ ಚಲನಚಿತ್ರ ನಿರ್ಮಾಪಕ ರಿತ್ವಿಕ್ ಘಟಕ್ ಅವರು ಮಹಾಶ್ವೇತಾದೇವಿಯವರ ಚಿಕ್ಕಪ್ಪ. ಮಹಾಶ್ವೇತಾದೇವಿ ಅವರ ತಾಯಿ ಧರಿತ್ರಿ ದೇವಿ ಕೂಡ ಓರ್ವ ಲೇಖಕಿಯಾಗಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದವರು. ಮಹಾಶ್ವೇತಾದೇವಿಯವರ ಕುಟುಂಬದಲ್ಲಿ ಇನ್ನು ಹಲವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಖ್ಯಾತರಾಗಿ ಹೆಸರು ಮಾಡಿದ್ದಾರೆ. ಇಂತಹ ಕುಟುಂಬದಲ್ಲಿ ಹುಟ್ಟಿದ ಮಹಾಶ್ವೇತಾದೇವಿಯವರಿಗೆ ಸಹಜವಾಗಿಯೇ ಸಾಹಿತ್ಯದ ಕಡೆ ಒಲವು ಮೂಡಿತು.
ಮಹಾಶ್ವೇತಾದೇವಿಯರ ಸಾಹಿತ್ಯ ಕೊಡುಗೆಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿ, ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗಳಲ್ಲದೆ ಇನ್ನು ಹಲವು ಪ್ರಶಸ್ತಿಗಳು ಬಂದಿವೆ.

ಆಧುನಿಕ ಭಾರತದಲ್ಲಿಯೂ ಪ್ರತಿನಿತ್ಯ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ದಬ್ಬಾಳಿಕೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ, ಶೋಷಣೆ, ದಬ್ಬಾಳಿಕೆಗಳು ಇನ್ನು ಹೆಚ್ಚು ಇದ್ದವು. ಬಹಳಷ್ಟು ಮಹಿಳೆಯರ ಬದುಕು ನರಕ ಸದೃಶ್ಯವಾಗಿತ್ತು. ಮಹಾಶ್ವೇತಾದೇವಿಯರು ಈ ರೀತಿ ಶೋಷಣೆಗೆ ಪ್ರತಿಭಟನೆಯ ಧ್ವನಿಯಾಗಿ ಮತ್ತು ಶೋಷಿತರ ಪರವಾಗಿ ನಿಂತು ತಮ್ಮ ಬದುಕಿನ ಕೊನೆಯವರೆಗೂ ಹೋರಾಡಿದವರು.
ಈ ರುಡಾಲಿ ಕಾದಂಬರಿಯೂ ಕೂಡ ಶೋಷಿತ ಬಡ ದಲಿತ ಹೆಣ್ಣುಗಳ ಕತೆಯಾದರೂ ಇಲ್ಲಿನ ನಾಯಕಿ ಶನಿಚರಿ ಎಂಬ ದಲಿತ ಮಹಿಳೆ. ಈ ಕಿರು ಕಾದಂಬರಿಯನ್ನು ಎಚ್ ಎಸ್ ಶ್ರೀಮತಿಯವರು ಕನ್ನಡಕ್ಕೆ ಅದೇ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಅನುವಾದ ಅದ್ಭುತವಾಗಿ ಮೂಡಿಬಂದಿದೆ. ಎಚ್ ಎಸ್ ಶ್ರೀಮತಿಯವರು ಕೂಡ ಕನ್ನಡದಲ್ಲಿ ಸ್ತ್ರೀವಾದಿ ಲೇಖಕಿ ಎಂದು ಪ್ರಸಿದ್ಧರಾದವರು. ಶ್ರೀಮತಿಯವರು ೨೨ ಫೆಬ್ರವರಿ ೧೯೫೦ರಲ್ಲಿ ಇಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದವರು.
ಭಾರತದ ಕೆಲವು ರಾಜ್ಯಗಳಲ್ಲಿ ಶ್ರೀಮಂತರು, ಜಮೀನ್ದಾರರು, ಒಡೆಯರುಗಳು, ಮಾಲೀಕರುಗಳು ಸತ್ತಾಗ ಆ ಮನೆಯ ಮಕ್ಕಳುಗಳು ಅವರ ಹೆಂಡತಿಯಂದಿರು ಬಂಧುಗಳು ಆ ವ್ಯಕ್ತಿಯ ಹಣವನ್ನು ಆಸ್ತಿಯನ್ನು ಭಾಗ ಮಾಡಿಕೊಳ್ಳುವುದರಲ್ಲಿ, ಅವನ ಪೆಟ್ಟಿಗೆಯ ಬೀಗದ ಕೈ ಎಲ್ಲಿದೆ ಎಂದು ಹುಡುಕುವುದರಲ್ಲಿಯೇ ಮುಳುಗಿರುತ್ತಾರೆ. ಆ ಕಾರಣದಿಂದ ಆ ರೀತಿ ವ್ಯಕ್ತಿಗಳು ಸತ್ತಾಗ ಅವನ ಹೆಣದ ಮುಂದೆ ಅಳಲು ಜನ ಬೇಕಾಗುತ್ತದೆ. ಆ ಕಾರ್ಯಕ್ಕಾಗಿ ಶೋಷಿತ ಬಡ ದಲಿತ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುವುದು ಅಥವಾ ಆ ಶ್ರೀಮಂತನ ಭೋಗ ಜೀವನಕ್ಕಾಗಿ ಇಟ್ಟುಕೊಂಡಿದ್ದ ಬಡ ಹೆಣ್ಣು ಮಕ್ಕಳುಗಳುಗಳು ಹೆಣದ ಮುಂದೆ ಬಡಿದುಕೊಂಡು ಕೂಗಿಕೊಂಡು ಅಳುವುದು ರೂಢಿ.
ಆ ರೀತಿ ಕೃತಕವಾಗಿ ಅಳುವ ಮಹಿಳೆಯರನ್ನು ರಾಜಸ್ತಾನ, ಮಧ್ಯಪ್ರದೇಶ, ಛತೀಸ್ಗಡ್, ಉತ್ತರ ಪ್ರದೇಶ, ಬಿಹಾರ್, ಜಾರ್ಕಂಡ್ ರಾಜ್ಯಗಳಲ್ಲಿ ಹೆಚ್ಚು ನೋಡಬಹುದು. ಆ ಮಹಿಳೆಯರನ್ನು ರುಡಾಲಿಗಳು ಎಂದು ಕರೆಯುತ್ತಾರೆ. ಈ ಕಾದಂಬರಿಯ ನಾಯಕಿ ಶನಿಚರಿಯೂ ಕೂಡ ಒಬ್ಬ ರುಡಾಲಿ.

ಶನಿಚರಿ ಶನಿವಾರ ಹುಟ್ಟಿರುವುದರಿಂದ ಅವಳೊಬ್ಬಳು ಅಪಶಕುನದ ನತದೃಷ್ಟೆ ಹೆಣ್ಣು ಎಂದು ಅವಳ ಅತ್ತೆಕೂಡ ಅವಳನ್ನು ಜರಿಯುತ್ತಿರುತ್ತಾಳೆ. ಆದರೆ, ಶನಿಚರಿ ಅದನ್ನು ಒಪ್ಪುವುದಿಲ್ಲ. ನಾನು ಶನಿವಾರ ಹುಟ್ಟಿರುವುದರಿಂದ ಈ ರೀತಿ ಆಗುವುದಾದರೆ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಹುಟ್ಟಿರುವ ನನ್ನ ಗೆಳತಿಯರೆಲ್ಲಾ ಸುಖವಾಗಿದ್ದಾರ? ಎಂಬ ಪ್ರಶ್ನೆಯನ್ನು ಅವಳು ಹಾಕಿಕೊಳ್ಳುತ್ತಾಳೆ. ಅವಳು ಆ ಪ್ರಶ್ನೆಗಳನ್ನು ಹಾಕಿಕೊಂಡರೂ ಅವಳ ಬದುಕು ದುಃಖಮಯವಾಗಿಯೇ ಇರುತ್ತದೆ.
ಅವಳ ಬದುಕೊಂದು ಹೋರಾಟದ ಬದುಕಾಗಿರುತ್ತಾದೆ. ಅವಳು ಎಷ್ಟು ಶ್ರಮಪಟ್ಟರೂ ಹೋರಾಡಿದರೂ ಅವಳು ತನ್ನ ಆಪ್ತರು, ಬಂಧುಗಳನ್ನೆಲ್ಲಾ ಕಳೆದುಕೊಳ್ಳಬೇಕಾಗುತ್ತದೆ. ಅವಳ ಗಂಡ ಮಗ ಕೂಡ ಅವಳ ಮುಂದೆಯೇ ಸಾಯುವಂತಾಗುತ್ತದೆ. ಅವಳ ಸೊಸೆ ಮನೆ ಬಿಟ್ಟು ಹೋಗುತ್ತಾಳೆ. ಅವಳ ಮೊಮ್ಮಗ ಅವಳ ಜೊತೆಯಿದ್ದರೂ ದೂರವಾಗುತ್ತಾನೆ. ದುರಂತವೆಂದರೆ ಆ ಗೋಳಿನ ಬದುಕಿನಲ್ಲಿ ಶನಿಚರಿಗೆ ಒಂದು ಹನಿ ಕಣ್ಣೀರು ಹೊರಗೆ ಹಾಕಲು ಸಮಯವೇ ಸಿಗುವುದಿಲ್ಲ.
ಅವಳ ಬದುಕು ಮತ್ತಷ್ಟು ದುಃಖಮಯವಾಗುತ್ತದೆ. ಅದೇ ಸಂದರ್ಭದಲ್ಲಿ ಅವಳಿಗೆ “ಭಿಕನಿ” ಎಂಬ ಒಬ್ಬ ಮಹಿಳೆಯ ಪರಿಚಯವಾಗಿ ಅವರ ಮಧ್ಯ ಗೆಳೆತನ ಮೂಡುತ್ತದೆ. ಭಿಕನಿ ಕೂಡ ಬದುಕಿನಲ್ಲಿ ತುಂಬಾ ನೋವುಂಡವಳು. ಇಬ್ಬರು ಸಮಾನ ದುಃಖಿಗಳು. ಅವರಿಬ್ಬರೂ ಒಂದೇ ಮನೆಯಲ್ಲಿ ವಾಸಮಾಡಲು ಆರಂಭಿಸುತ್ತಾರೆ. ಒಬ್ಬರಿಗೊಬ್ಬರು ಆಸರೆಯಾಗುತ್ತಾರೆ.
ಇದು ಮೇಲ್ನೋಟಕ್ಕೆ ಒಬ್ಬ ಮಹಿಳೆಯ ದುರಂತದ ಕತೆಯ ರೀತಿ ಕಂಡರೂ ದುರದೃಷ್ಟ ಸಮುದಾಯವೊಂದರ ಬಡತನದ ಬದುಕಿನ ಚಿತ್ರಣವೂ ಆಗಿ ಕಾಣುತ್ತದೆ. ಒಬ್ಬ ಮಹಿಳೆಯ ಮೂಲಕ ಒಂದು ಸಮುದಾಯದ ಚಿತ್ರಣವನ್ನು ಮಹಾಶ್ವೇತಾದೇವಿಯವರು ನಮ್ಮ ಮುಂದೆ ಇಟ್ಟಿದ್ದಾರೆ. ಆ ಕಾರಣದಿಂದ ಅವರ ಬದುಕಿನ ಉದ್ದಕ್ಕೂ ಅವರಿಗೆ ಸ್ತ್ರೀವಾದಿ ಲೇಖಕಿ ಎಂಬ ಹಣೆಪಟ್ಟಿಯನ್ನು ನೀಡಿ ಅವರ ಸಾಹಿತ್ಯವನ್ನು ಸ್ತ್ರೀವಾದಿ ಸಾಹಿತ್ಯವೆಂದು ಪಟ್ಟಿ ಕಟ್ಟಿದ್ದನ್ನು ಅವರು ವಿರೋಧಿಸುತ್ತಿದ್ದರು.

ಈ ರುಡಾಲಿಗಳಲ್ಲಿ ಸಾಮಾನ್ಯವಾಗಿ ವೇಶ್ಯವಾಟಿಕೆಗೆ ಸಿಕ್ಕಿಕೊಂಡ ಅನಾಥ ಮಹಿಳೆಯರೇ ಹೆಚ್ಚು ಎಂದು ಹೇಳಬಹುದು. ಈ ಕಾದಂಬರಿಯ ಕೊನೆಗೆ ರೋಗ ಬಂದು ಶನಿಚರಿಯ ಗೆಳತಿ ಭಿಕನಿ ಕೂಡ ಸತ್ತು ಹೋಗಿರುತ್ತಾಳೆ. ಅದೇ ಸಮಯಕ್ಕೆ ನವಾಗಡದ ಒಡೆಯ ಗಂಭೀರ್ ಸಿಂಗ್ ಕೂಡ ಸತ್ತು ಹೋಗಿರುತ್ತಾನೆ. ಅವನ ಹೆಣದ ಮುಂದೆ ಅಳಲು ಶನಿಚರಿಗೆ ಬರಲು ಹೇಳಿಕಳಿಸಿರುತ್ತಾರೆ.
ಶನಿಚರಿ ಗಂಭೀರ್ ಸಿಂಗ್ ಬಹುದೊಡ್ಡ ಶ್ರೀಮಂತನಾಗಿದ್ದವನು ಅವನ ಹೆಣದ ಮುಂದೆ ಹೆಚ್ಚು ಹೆಚ್ಚು ಜನರು ಹೆಚ್ಚು ಸಮಯ ಹೆಚ್ಚು ಜೋರಾಗಿ ಅತ್ತರೆ ಹೆಚ್ಚು ಹಣಸಿಗುತ್ತದೆ ಎಂದು ತಿಳಿದುಕೊಳ್ಳುತ್ತಾಳೆ. ಆ ಕಾರಣದಿಂದ ಆ ಊರಿನ ಸೂಳೆಗೇರಿಗೆ ಹೋಗಿ ಅಲ್ಲಿನ ವೇಶ್ಯೆಯರನ್ನೆಲ್ಲಾ ಕರೆಯುತ್ತಾಳೆ. ಅಲ್ಲಿ ತನ್ನ ಮಗ ಬುಧವನ ಹೆಂಡತಿ ಅಂದರೆ ತನ್ನ ಸೊಸೆಯನ್ನು ಕಾಣುತ್ತಾಳೆ. ಆದರೂ ಯಾವುದೇ ಉದ್ವೇಗವಿಲ್ಲದೆ ನಿರ್ಲಿಪ್ತವಾಗಿ ಅವಳನ್ನು ರುಡಾಲಿಯಾಗಿ ಉಳಿದ ವೇಶ್ಯೆಯರ ಜೊತೆ ಸೇರಿಕೊಂಡು ತನ್ನ ಜೊತೆ ಬರಲು ಕರೆಯುತ್ತಾಳೆ.
ಆ ವೇಶ್ಯೆಯರು ಶನಿಚರಿಯನ್ನು ತಮ್ಮ ಬಂಧುವಿನ ರೀತಿ ಉಪಚರಿಸುತ್ತಾರೆ. ಶನಿಚರಿ ಅವರನ್ನೆಲ್ಲಾ ಕರೆದುಕೊಂಡು ಗಂಭೀರ್ ಸಿಂಗ್ ನ ವಾಡೆಯಂತಹ ಮನೆಗೆ ಬರುತ್ತಾರೆ. ಅಲ್ಲಿ ಅವನ ಅಣ್ಣನ ಮಗ ಇಷ್ಟೊಂದು ಜನ ಸೂಳೆಯರು ರುಡಾಲಿಗಳಾಗಿ ಬಂದದನ್ನು ಕಂಡು ಬೆಚ್ಚಿ ಬೀಳುತ್ತಾನೆ. ಒಂದು ಕಡೆ ಇಷ್ಟೊಂದು ಜನ ರುಡಾಲಿಗಳಿಗೆ ಹೆಚ್ಚು ಹಣ ಕೊಡಬೇಕಲ್ಲ ಎಂಬುದು ಅವನ ಚಿಂತೆ. ಅದಕ್ಕಾಗಿ ಅವನು ಶನಿಚರಿಗೆ ಪ್ರಶ್ನಿಸುತ್ತಾನೆ. ಶನಿಚರಿ ಗಂಭೀರ್ ಸಿಂಗ್ ಎಂತಹ ದೊಡ್ಡ ವ್ಯಕ್ತಿ ಅವನ ಸಾವಿಗೆ ಹೆಚ್ಚು ರುಡಾಲಿಗಳು ಅತ್ತರೆ ಅವನಿಗೆ ಹೆಚ್ಚು ಬೆಲೆ ಹೆಚ್ಚು ಗೌರವ ಎಂದು ಹೇಳುತ್ತಾಳೆ.
ಇನ್ನೊಂದು ಕಡೆ ಗಂಭೀರ್ ಸಿಂಗ್ ನ ಹೆಣ ಕೊಳೆತು ನಾರುತ್ತಿರುತ್ತದೆ. ಆ ದುರ್ವಾಸನೆಯಲ್ಲೂ ಆ ರುಡಾಲಿಗಳು ಅತ್ತು ಕರೆದು ಮಾಡುತ್ತಿರುತ್ತಾರೆ. ಈ ಎಲ್ಲಾ ಕಾರಣದಿಂದ ಈ ಕಿರು ಕಾದಂಬರಿ ಒಂದು ಮಹಿಳೆಯ, ಅಥವಾ ಒಂದು ಸಮುದಾಯದ ಕತೆಯಾಗದೆ ಇನ್ನೊಂದು ಭಾರತವನ್ನೇ ನಮ್ಮ ಕಣ್ಣ ಮುಂದೆ ತರುತ್ತದೆ. ಆ ಕಾರಣದಿಂದ ಇದು ಕೇವಲ ಐವತ್ತಾರು ಪುಟಗಳ ಕಾದಂಬರಿಯಾದರೂ ನಮಗೆ ಒಂದು ಬೃಹತ್ ಕಾದಂಬರಿಯ ದರ್ಶನ ಮಾಡಿಸುತ್ತದೆ.
ಇಂತಹ ಒಳ್ಳೆಯ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿರುವುದಲ್ಲದೆ ಮಹಾಶ್ವೇತಾದೇವಿಯವರ ಬಗ್ಗೆಯೂ ಒಂದು ಪುಸ್ತಕ ಬರೆದಿರುವ ಎಚ್.ಎಸ್. ಶ್ರೀಮತಿಯವರು ಅಭಿನಂದನಾರ್ಹರು ಮತ್ತು ಅವರ ಈ ಕಾರ್ಯ ತುಂಬಾ ಶ್ಲಾಘನೀಯವಾದದ್ದು.






0 Comments