ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಹಾಯುಗ’ ನಾಟಕದ ಒಂದು ನೋಟ..

ಹೆಚ್ ಎಂ ಮಯಬ್ರಹ್ಮಚಾರ್

ನಾಟಕ ಬೆಂಗಳೂರು -18ರ ಕೊನೆಯ ದಿನ 22/ 12/ 2025 ರಂದು ಕಲಾಗ್ರಾಮ ಸಮುಚ್ಛಯ ಭವನ ಮಲ್ಲತಹಳ್ಳಿಯಲ್ಲಿ ಸುಸ್ಥಿರ ಪ್ರತಿಷ್ಠಾನ ತಂಡವು “ಮಹಾಯುಗ” ನಾಟಕವನ್ನು ಜೋಸೆಫ್ ಜಾನ್ ನಿರ್ದೇಶನದಲ್ಲಿ ಪ್ರದರ್ಶಿಸಿತು. ಕೆ ಎಸ್ ರಂಗೇಗೌಡ ಮತ್ತು ಕೆ ಎನ್ ತ್ಯಾಗರಾಜ ಇವರು ಮಹಾಭಾರತದ ಕುರುಕ್ಷೇತ್ರ ಯುದ್ಧದ ಸನ್ನಿವೇಶಗಳ ರಂಗ ಪಠ್ಯವನ್ನು ರಚಿಸಿದ್ದಾರೆ.

ಜೀವನದ ಹಂಗು ತೊರೆದು ಸಂಸಾರಗಳ ಭವ-ಬಂಧನಗಳಿಂದ ಮುಕ್ತಾರಾಗಿ ಯುದ್ಧದಲ್ಲಿ ಗೆಲ್ಲಲೇಬೇಕೆಂದು ಸೈನಿಕರನ್ನು ಹುರಿದುಂಬಿಸುವ ಯುದ್ಧ ಘೋಷಣೆಯಾಗುತ್ತದೆ. ಯುದ್ಧವೆಂದರೆ ಅದು ಆರಂಭವಷ್ಟೇ. ಅಂತ್ಯದ ಅರಿವನ್ನು ಯಾರೂ ತಿಳಿದಿರಲಾರರು. ಯುದ್ಧ ಮಾಡುವವರಿಗೂ ಯುದ್ಧ ಮಾಡಿಸುವವರಿಗೂ ತಿಳಿದಿರುವುದಿಲ್ಲ. ನಾವುಗಳು ಯುದ್ಧದಾಹಿಗಳ ಆಯುಧಗಳು ಮಾತ್ರ ಎಂಬ ಕಟು ಸತ್ಯದ,ನೊಂದವರ ಬದುಕಿಗೆ ಕಷ್ಟದ ಬೆಂಕಿ ಸುರಿದು ಯುದ್ಧವೆಂಬ ಜ್ವಾಲೆಯಲ್ಲಿ ಲೋಕವನ್ನೇ ಸುಡುವ ಸಾಮಾನ್ಯ ಜನರನ್ನು ಸ್ಥಳಾಂತರಿಸುವ, ಸಾವಿರಾರು ಜನರ ಸಾವು ನೋವು ಸಂಕಟಗಳತ್ತ ಧೂಡುವ,ಯುದ್ಧದ ಕಾಲಮಾನದ ಮಿತಿ ಇಲ್ಲದ ಯುಗವೇ ‘ಮಹಾಯುಗ. ಈ ಭೂಮಿ ನನ್ನದು ನನ್ನ ಆಕ್ರಮಿತ ಪ್ರದೇಶ ಈ ಜಾಗವನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂಬ ಛಲವೇ “ಮಹಾಯುಗ”ನಾಟಕದ ಸಾರ.

ಸೂತಪುತ್ರ ಕರ್ಣ , ಅಗ್ರಜನೆಂಬ ಅರಿವಿಲ್ಲದ ಅರ್ಜುನ, ಛಲ ಬಿಡದ ದುರ್ಯೋಧನ, ಗದಾ ಪ್ರಹಾರಿ ಭೀಮನ ಆರ್ಭಟ, ಶ್ರೀ ಕೃಷ್ಣನ ಕುತಂತ್ರ, ಶಕುನಿಯ ಸೇಡಿನ ಜ್ವಾಲೆ ಇವುಗಳ ಸಮೀಕರಣದ ಸಂಗತಿಗಳ ಸುತ್ತ ಸುತ್ತುತ್ತಾ ಅನುಭವಗಳನ್ನು ಅನಾವರಣಗೊಳಿಸುತ್ತಾ ಸಾಗುವ ನಾಟಕದಲ್ಲಿ ಪಾತ್ರಧಾರಿಗಳಿಂದ ನವರಸಗಳ ಆಂಗಿಕಾಭಿನಯಕ್ಕೆ ಒತ್ತುಕೊಟ್ಟು- ಕೂಡಿಯಾಟಂ ನಾಗಮಂಡಲ, ಭೂತಕೋಲ, ಕಲರಿಫೈಟ್ ನೃತ್ಯಗಳ ಮೂಲಕ ಇಡೀ ನಾಟಕವನ್ನು ರೂಪಿಸಿ, ಸಂಗೀತ ಆಲಾಪಗಳೊಂದಿಗೆ ಹಾಡುಗಳ ಮೇಳೈಸಿ, ದೃಶ್ಯ ವೈಭವವನ್ನು ಹೆಚ್ಚಿಸಿದ್ದಾರೆ.

ಯುದ್ಧದ ಭೀಕರತೆಯನ್ನು ಕಡಿಮೆಗೊಳಿಸಿ,ಅಬ್ಬರದ ಸಂಗೀತವನ್ನು ಮಿತಿಗೊಳಿಸಿ, ಕಾಲಾವಧಿಯನ್ನು ಕಡಿಮೆಗೊಳಿಸಿಕೊಂಡರೆ ನಾಟಕವು ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತದೆ. ಪ್ರೇಕ್ಷಕನು ಬಯಸುವುದೂ ಇದನ್ನೇ.

ಮಂಜು ನಾರಾಯಣ್ ರವರ ಬೆಳಕಿನ ಸಂಯೋಜನೆ ಮತ್ತು ನಿರ್ವಹಣೆಯನ್ನ ಅಚ್ಚುಕಟ್ಟಾಗಿ ಪಾತ್ರಧಾರಿಗಳು ನಿಖರವಾದ ಸಂಭಾಷಣೆಯೊಂದಿಗೆ ಬೆಳಕಿನ ಸ್ಪಾಟ್ ಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ . ಪಾತ್ರಧಾರಿಗಳಾಗಿ ಶಶಾಂಕ್ ಪ್ರಕಾಶ್, ಕಿಶನ್, ಜಲಜ ಕುಂದಾಪುರ, ಅಮೂಲ್ಯ ತ್ಯಾಗರಾಜ್, ಜೋಸೆಫ್, ಶಂಕರ ದೇಶಪಾಂಡೆ ಮುಂತಾದವರು ನಾಟಕದಲ್ಲಿ ತಲ್ಲೀನತೆಯಿಂದ ಅಭಿನಯಿಸಿದ್ದಾರೆ. ವಸ್ತ್ರ ವಿನ್ಯಾಸ ಮಹೇಶ್ ಪಲ್ಲಕ್ಕಿ, ಸಂಗೀತದಲ್ಲಿ ಪ್ರಸನ್ನ ಕುಮಾರ್ ಎಂ ಎಸ್, ನೃತ್ಯ ಸಂಯೋಜಕಿಯಾಗಿ ಕು. ಅಮೂಲ್ಯ, ಮೇಕಪ್‌ನಲ್ಲಿ ಜಲಜ…. ಹೀಗೆ ಇವರೆಲ್ಲರಿಂದ ನಿರ್ದೇಶಕ ಜೋಸೆಫ್ ಜಾನ್ ಉತ್ತಮ ನಾಟಕವಾಗಿ ಹೊರಹೊಮ್ಮಲು ದುಡಿಸಿಕೊಂಡಿದ್ದಾರೆ.

ರಂಗ ಸಂಭ್ರಮದ ಕೊನೆಯ ದಿನವಾಗಿದ್ದರಿಂದ ಸಮಾರೋಪ ಸಮಾರಂಭದ ಪ್ರಾಸ್ತಾವಿಕ ನುಡಿಗಳನ್ನು ರಂಗಕರ್ಮಿ ಶಶಿಧರ ಭಾರಿಘಾಟ್ ಹೇಳುತ್ತಾ, ರಂಗ ಸಂಭ್ರಮದಲ್ಲಿ ಪಾಲ್ಗೊಂಡಿದ್ದ 17 ನಾಟಕಗಳ ರಂಗ ಸಂಚಾಲಕರಿಗೆ ನಾಟಕ ಬೆಂಗ್ಳೂರ್ ಸಮಿತಿಯಿಂದ ಗೌರವ ಸಲ್ಲಿಸಲು ವೇದಿಕೆಗೆ ಆಹ್ವಾನಿಸಿದರು. ಎಲ್ಲರಿಗೂ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆವಿ ನಾಗರಾಜ ಮೂರ್ತಿಯವರು ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಬಿ. ನೀಲಮ್ಮ, ಶಶಿಧರ ಭಾರಿಘಾಟ್ ಗೌರವಿಸಿದರು. ಗೌರವ ಕಾರ್ಯದಲ್ಲಿ ಹವೀಶ್, ಅಕ್ಷರ, ಆಚಾರ್, ಶೋಭಾ ವೆಂಕಟೇಶ್, ಡಾ. ಕಶ್ಯಪ್, ವಸಂತ ಕೃಷ್ಣಮೂರ್ತಿ ನೆರವಾದರು. ವಂದನಾರ್ಪಣೆಯನ್ನು ಅಕ್ಷರ- ಆಚಾರ್ ನಾಟಕ ಸಂಭ್ರಮದ ಯಶಸ್ಸಿಗೆ ಸಹಯೋಗ ನೀಡಿದ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಸಹಕಾರ ನೀಡಿದ ಬಹುರೂಪಿ ಪ್ರಕಾಶನಕ್ಕೆ ಹಾಗೂ ಆಗಮಿಸಿದ ಪ್ರೇಕ್ಷಕರೆಲ್ಲರಿಗೂ ವಂದನೆಗಳನ್ನು ಹೇಳುತ್ತಾ ನಾಟಕ ಬೆಂಗ್ಳೂರ್ -18 ರ ರಂಗ ಸಂಭ್ರಮಕ್ಕೆ ವಿದಾಯ ಹೇಳಿದರು.

‍ಲೇಖಕರು Admin

27 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading