
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.
ಮಲ್ಲಿಕಾರ್ಜುನ ಮಹಾಮನೆ ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.
8
ಆ ರಾತ್ರಿ ನಾನು ಆದಿವಾಲದಲ್ಲಿ ಕಣವಪ್ಪನವರ ಮನೆಯಲ್ಲೇ ತಂಗಿದ್ದೆ. ಬೆಳಗ್ಗೆಯೇ ಆ ಮನೆಯ ಯಜಮಾನ ಮಾತಿನ ಮಲ್ಲಣ್ಣನ ಜೊತೆಗೆ ಆದಿವಾಲದ ಮುಖ್ಯರಸ್ತೆಯಲ್ಲಿ ಒಂದು ರೌಂಡಾಕಿ ಅಲ್ಲಿಯ ಗದ್ದೆ ಸಾಲಿನಲ್ಲಿ ಹಾಗೂ ತೋಟಗಳ ಬೇಲಿಸಾಲಿಗಳಲ್ಲಿ ಹೆಜ್ಜೆ ಹಾಕಿ ಹಸಿರಿನ್ನು ಕಣ್ತುಂಬಿಕೊಂಡು ಅನಂತರ ಅಲ್ಲಿಯ ದೇವಸ್ಥಾನದ ಆ ಪ್ರಶಾಂತತೆಯನ್ನು ಮನದುಂಬಿಕೊಂಡು ಆ ಮೆಳ್ಳಗಣ್ಣಿನ ಹುಡುಗಿಯು ಕೆಲಸ ಮಾಡುವ ಶಾಲೆಯ ಆವರಣದಲ್ಲಿ ಅಡ್ಡಾಡಿ ಮತ್ತೆ ಆ ದಂಪತಿಗಳ ಮನೆಗೆ ಬರುವಷ್ಟರಲ್ಲಿ ಎಳೆಬಿಸಿಲು ಮಾಯವಾಗುತ್ತಿದ್ದ ಹೊತ್ತು… ಆಗಲೇ ಒಂಭತ್ತು ಗಂಟೆ ದಾಟಿತ್ತು.
ಕಣಮಕ್ಕಮ್ಮನವರು ಅಷ್ಟರಲ್ಲಾಗಲೇ ಗಮ್ಮೆನ್ನುವ ಉಪ್ಪಿಟ್ಟು ಮಾಡಿದ್ದರು. ನಾನು ಉಪ್ಪಿಟ್ಟು ಪ್ರಿಯಾ ಕಣ್ರೀ… ಜೊತೆಗೆ ಉಪ್ಪಿನಕಾಯಿ ಇದ್ದರಂತೂ ಕೇಳಲೇಬೇಡಿ. ಅವರೇಕಾಳು ಉಪ್ಪಿಟ್ಟು ಆದರಂತೂ ಸ್ವರ್ಗಕ್ಕೆ ಮೂರೇಗೇಣು… ಮಾಮೂಲಿಗಿಂತಲೂ ಒಂದು ಪಟ್ಟು ಜಾಸ್ತಿ ಹೊಟ್ಟೆಗೆ ಇಳಿಸೇನು.
…ನಾನು ಉಪ್ಪಿಟ್ಟು, ಚಿತ್ರಾನ್ನಾ ಮಾಡುವುದರಲ್ಲಿ ಎತ್ತಿದ ಕೈ… ನನ್ನ ಬ್ಯಾಚುಲರ್ ಬದುಕಿನ ಬಹುತೇಕ ದಿನಗಳಲ್ಲಿ ನನ್ನ ಹೊಟ್ಟೆ ತುಂಬಿಸಿದ್ದು ಈ ಎರಡೇ ಉಣಸುಗಳು ಹಾಗೂ ನಾನು ಮಾಡಿದ ಉಪ್ಪಿಟ್ಟನ್ನು ತಿನ್ನಲು ನನ್ನ ಕೆಲ ಗೆಳೆಯರು ನನ್ನ ಗುಡಿಸಲಿಗೆ ಪಾದಯಾತ್ರೆ ಬರುತ್ತಿದ್ದದ್ದೂ ಉಂಟು. ಅದು ನನ್ನನ್ನು ‘ಉಪ್ಪಿಟ್ ಮಲ್ಲಿ’ ಎಂದು ಜಗತ್ ಪ್ರಸಿದ್ಧನನ್ನಾಗಿಯೂ ಮಾಡಿಬಿಟ್ಟಿತ್ತು. ಗುರುರ‍್ಯ ಎಚ್. ನರಸಿಂಹಯ್ಯನವರ ಉಪ್ಪಿಟ್ಟು ಕತೆಯು ಒಂದು ಮಹಾಪುರಾಣ. ಅವರು ವಿದ್ಯಾಭ್ಯಾಸಕ್ಕೆಂದು ವಿದೇಶದಲ್ಲಿ ಇದ್ದಾಗ ಅವರಿಗೆ ಹೊಟ್ಟೆಯನ್ನು ನಿರಂತರವಾಗಿ ತುಂಬಿಸಿದ್ದು ಉಪ್ಪಿಟ್ಟೇ ಕೆಲವರಿಗೆ ಉಪ್ಪಿಟ್ಟೇ ಜೀವದಾತು, ಜೀವದ್ರವ್ಯ ಪ್ರಾಪಾಮಿತ್ರ…
ಹಲವು ಮಹಿಳೆಯರಿಗೆ ಉಪ್ಪಿಟ್ಟು ಆಪತ್‌ಬಾಂಧವ ಆಕಸ್ಮಿಕವಾಗಿ ಮನೆಗೆ ಅತಿಥಿಗಳೇನಾದರೂ ಬಂದುಬಿಟ್ಟರೆ ಬಹಳ ಬೇಗ ಮಾಡಿಬಿಡಬಹುದಾದ ತಿನಿಸು. ಕೆಲವರು ಉಪ್ಪಿಟ್ಟನ್ನು ಕಾಂಕ್ರೀಟ್ ಅನ್ನುತ್ತಾರೆ ಕಣ್ರೀ. ಅದೇನು ಮೆಚ್ಚುಗೆಗೆ ಹೇಳುತ್ತಾರೋ ಉಪ್ಪಿಟ್ಟನ್ನು ಲೇವಡಿ ಮಾಡುತ್ತಾರೋ ನಾ ಕಾಣೆ… ಏನಾದರಾಗಲೀ ನರಸಿಂಹಯ್ಯನವರ ಪ್ರೀತಿ ಪಾತ್ರ ತಿನಿಸು ಎಂದ್ರೆ ಅದು ಉಪ್ಪಿಟ್ಟು ಕಣ್ರೀ… ಅವರನ್ನು ಬಹಳ ದಿನಗಳ ಕಾಲ ಜೀವಂತವಾಗಿ ಇಟ್ಟಿದ್ದು ಉಪ್ಪಿಟ್ಟೇ ಕಣ್ರವ್ವಾ…

ನನ್ನ ಉಪ್ಪಿಟ್ಟು ಕತೆಯೂ ಒಂದು ಮರಿಪುರಾಣ ಕಣ್ರವ್ವಾ… ಬಂದಂತಾ ಗೆಳೆಯರು ‘ಲೇ ಮಲ್ಲಿ… ಎಷ್ಟು ಚೆನ್ನಾಗಿ ಮಾಡ್ತೀಯೋ ಉಪ್ಪಿಟ್ನಾ ಯಾವ ಹೋಟ್ಲಲ್ಲೂ ಇಂಥಾ ಉಪ್ಪಿಟ್ನಾ… ತಿಂದಿಲ್ಲಾ ಕಣೋ…’ ಎಂತಲೂ ‘ಇಷ್ಟು ಚಂದವಾಗಿ… ರುಚಿಯಾಗಿ ಯಾವ ಹೆಂಗಸ್ರೂ ಮಾಡೋದಿಲ್ಲಾ ಬುಡೋ’ ಎಂದು ನನಗೂ ಇಲ್ದಂಗೆ ಪಾತ್ರೆ ಖಾಲಿ ಮಾಡುತ್ತಿದ್ದ ಸಂದರ್ಭಗಳು ಎಷ್ಟೋ. ಇರಲಿ ನನ್ನ ಉಪ್ಪಿಟ್ಟು, ಚಿತ್ರಾನ್ನಾದ ಪುರಾಣವನ್ನು ಮುಂದೆಂದಾದರೂ ಅವಕಾಶ ಸಿಕ್ಕಾಗ ತಮಗೆ ಬಿತ್ತರಿಸುವ ಮನಸ್ಸು ನನಗೂ ಇದೆ. ಆದ್ರೇ ಈಗ ಅದು ಬೇಡ ಗೆಳೆಯರೇ…
ಆದರೆ ಇನ್ನೊಂದು ಉಪ್ಪಿಟ್ಟು ಪುರಾಣವನ್ನು ನಿಮಗೆ ಹೇಳಿ ನಾನು ನನ್ನ ಕಥನಕ್ಕೆ ಮರಳುತ್ತೇನೆ. ಇದು ರಂಗಭೂಮಿಯ ಸಂದರ್ಭದ ಉಪ್ಪಿಟ್ಟಿನ ಕಥೆ. ನನಗೆ ಹಿರಿಯರು ಹೇಳಿದ್ದು… ರಂಗಭೂಮಿಯ ಪ್ರಧಾನ ಧಾರೆಯಲ್ಲಿ ಇಂತಹ ಅನೇಕ ಕಥೆಗಳು… ಉಪಧಾರೆಗಳು ಮೈದಾಳಿ ರಂಗಭೂಮಿಯಡೆಗೆ ಆಕರ್ಷಿತರಾಗಿ ಬರುವ ಯುವಕರಲ್ಲಿ ಉತ್ಸಾಹ ಹುಟ್ಟಿಸುತ್ತವೆ.
ಬಿ.ಸಿ. ಎಂದೇ ಖ್ಯಾತರಾದ ಪ್ರೊ. ಬಿ. ಚಂದ್ರಶೇಖರ್ ಕನ್ನಡ ರಂಗಭೂಮಿ ಕಂಡ ಖ್ಯಾತ ನಿರ್ದೇಶಕರು. ಗಿರೀಶ್ ಕಾರ್ನಾಡರ ‘ತುಘಲಕ್’ ನಾಟಕವನ್ನು ಪ್ರಪ್ರಥಮ ಬಾರಿಗೆ ನಿರ್ದೇಶಿಸಿದವರು ಹಾಗೂ ‘ಭಾಸ’ನ ಅಷ್ಟೂ ನಾಟಕಗಳನ್ನು ರಂಗಕ್ಕೆ ತಂದು ಮರುವ್ಯಾಖ್ಯಾನ ಮಾಡಿದವರು ಹಾಗೂ ನಾಟಕದ ಮೇಷ್ಟ್ರು… ಹಾಗೂ ಪ್ರೊಫೆಸರ್. ಬಹಳ ಶಿಸ್ತಿನ ಸಿಪಾಯಿ. ಇವರೂ ‘ಉಪ್ಪಿಟ್ಟಿನ ಪ್ರಿಯರೇ’… ನಾಟಕದ ತಾಲೀಮು ಸಂದರ್ಭಕ್ಕೆ ಹಾಗೂ ನಾಟಕದ ಪ್ರದರ್ಶನದ ಸಂದರ್ಭದಲ್ಲಿ ಅವರಿಗೆ ಮತ್ತು ತಂಡದ ಎಲ್ಲಾ ಕಲಾವಿದರಿಗೂ ‘ಉಪ್ಪಿಟ್ಟಿನ ಸಮಾರಾಧನೆ ಆಗಲೇಬೇಕು. ಬೇರೆ ಯಾವುದೇ ಉಪಹಾರ ತಂದರೂ ಅದನ್ನು ಒಪ್ಪುತ್ತಿರಲಿಲ್ಲ… ವಾಪಸ್ ಕಳಿಸಿಬಿಡುತ್ತಿದ್ದರು. ಕಡಿಕ್ ಮನುಷ್ಯ… ತಿಂಡಿಯಲ್ಲೂ ಶಿಸ್ತು… ಆಹಾರದಲ್ಲೂ ಕಡಕ್.
ಯಾವುದೋ ಒಂದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲೋ… ಸಂಸ ರಂಗಮಂದಿರದಲ್ಲೋ ಬಿ.ಸಿ.ಯವರು ನಿರ್ದೇಶಿಸಿದ ನಾಟಕ ಪ್ರದರ್ಶನ… ಸಂಜೆ ಉಪಹಾರಕ್ಕೆ ‘ಉಪ್ಪಿಟ್ಟು’ ಬೇಕೇಬೇಕು. ಸಾಹೇಬರು ಉಪ್ಪಿಟ್ಟಿಗಾಗಿ ಕಾಯುತ್ತಿದ್ದಾರೆ. ಉಪ್ಪಿಟ್ಟು ಬಂದಿರಲಿಲ್ಲ… ಇನ್ನೇನು ನಾಟಕ ರಂಗಕ್ಕೆ ಬರಬೇಕು… ಸಂಘಟಕನಿಗೆ ತಲೆನೋವು ಶುರುವಾಗಿದೆ. ಮೇಷ್ಟ್ರು ಬೇರೆ ‘ಎಲ್ರಯ್ಯಾ ಉಪ್ಪಿಟ್ಟು ಬರಲಿಲ್ವೇ…? ಉಪ್ಪಿಟ್ಟು ಬಂತಾ…?? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಿದ್ದಾರೆ. ತಿಂಡಿ ತರಲು ಹೋದವನು… ‘ಯಾವ ಹೋಟೆಲಲ್ಲೂ ಉಪ್ಪಿಟ್ಟು ಸಿಗಲಿಲ್ಲ ಸಾರ್ ಎಂದು ಕೈ ಅಲ್ಲಾಡಿಸಿಕೊಂಡು ಬಂದ.’ ಇದು ಗುರುಗಳಿಗೆ ಗೊತ್ತಾಗಬಾರದು. ಗೊತ್ತಾದರೆ ಕೆಂಡಾಮಂಡಲವಾಗಿ ಬಿಡುತ್ತಾರೆ.
ನಾಟಕ ಪ್ರದರ್ಶನ ‘ಕ್ಯಾನ್ಸಲ್’ ಅಂದ್ರೂ ಅಂದ್ರೇ… ಅಂಥಾ ಉಪ್ಪಿಟ್ಟು ಪ್ರೇಮಿ… ಅವರು. ಆ ಸಂಘಟಕನಿಗೆ ಏನೂ ಮಾಡಲು ತೋಚಲಿಲ್ಲ… ಪಳಾರ್ ಅಂಥ ಆತನಿಗೆ ಮಿಂಚು ಹೊಳೆಯಿತು… ಆ ಹುಡುಗನನ್ನು ಕರೆದು ‘ಉಪ್ಪಿಟ್ಟು ಸಿಗದಿದ್ರ ಹಾಳಾಗೋಗ್ಲಿ… ರವೆ ಇಡ್ಲಿ ತಂದ್ಬಿಡೋಗು… ಇಲ್ಲಿದ್ಹಂಗೇ ಬಂದ್ಬಿಡು…’ ಅಂದು ಕಳಿಸಿದರು. ಆ ಹುಡುಗ ಓಡಿದ… ಒಂದೇ ಉಸಿರಿಗೆ ಓಡಿ ಬಂದು ರವೆ ಇಡ್ಲಿಯ ಪ್ಯಾಕೆಟನ್ನು ಸಂಘಟಕನ ಕೈಗಿರಿಸಿದ… ಆ ಸಂಘಟಕ ‘ಸಾರ್ ಬಿಸ್ಬಿಸಿ ಉಪ್ಪಿಟ್ಟು ಬಂತು ಸಾರ್… ತರಕ್ಕೋಗಿದ್ದ ಈ ಹುಡ್ಗ ಸ್ವಲ್ಪ ಲೇಟ್ ಮಾಡ್ಬಿಟ್ಟ’ ಎಂದು ಉಪ್ಪಿಟ್ಟಿನ ಪ್ಲೇಟನ್ನು ಬಿ.ಸಿ.ಯ ಮುಂದೆ ಹಿಡಿದರು. ಸಾಹೇಬರು ‘ತುಂಬಾ ಚೆನ್ನಾಗಿದೆ ಕಣಯ್ಯ ಉಪ್ಪಿಟ್ಟು…’ ಎಂದು ಆ ಹುಡುಗನಿಗೆ ಮೆಚ್ಚುಗೆಯನ್ನು ಹೇಳಿ ‘ಆದ್ರೂ ಇನ್ ಟೈಮ್ಗೆ ತರಬೇಕಾಗಿತ್ತು ಕಣಯ್ಯ’ ಎಂದು ತಮ್ಮ ಶಿಸ್ತನ್ನು ಪ್ರದರ್ಶಿಸಿದರು. ‘ಟೈಮ್‌ಸೆನ್ಸ್ ಇರಬೇಕಯ್ಯಾ’ ಎಂದು ಆ ಹುಡುಗ ನಗ್ತಾ ನೋಡಿದರು.

ಆ ಬುದ್ಧಿವಂತ ಸಂಘಟಕ ರವೆ ಇಡ್ಲಿಯನ್ನೇ ಪುಡಿಗೊಳಿಸಿ ಛೂ ಮಂತ್ರಕಾಳಿ ಹಾಕಿ ಉಪ್ಪಿಟ್ಟಾಗಿ ಮಾಡು ಬಿಟ್ಟು ಗುರುಗಳಿಗೆ ‘ಉಪ್ಪಿಟ್ಟು ಸೇವೆ’ ಮಾಡಿದ ಕಥೆ ಇಲ್ಲಿಗೆ ಮುಗಿಯಿತು ಕಣ್ರಪ್ಪ…
ಈ ರಂಗಭೂಮಿಯವರು ಅದೆಷ್ಟು ಪ್ರಚಂಡರು ಇರುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ… ಇವರಿದ್ದರಲ್ಲಾ ಬರಿಗೈಯಲ್ಲಿ ಭೂಮಿ ಆಳುವವರು. ಎಂಥಾ ಸಮಸ್ಯೆಗಳ ಸವಾಲುಗಳು ಎದುರಾದರೂ ಸಂಭಾಳಿಸಿ ಮುಂದೆ ಸಾಗುವವರು.
ಇಲ್ಲಿ ಉಪ್ಪಿಟ್ಟು ಒಂದು ಪತ್ರಿಮೆಯಷ್ಟೇ. ರಂಗಭೂಮಿಯಲ್ಲಿರುವವರಿಗೆ ಎಂಥದೇ ಸುನಾಮಿ ಬೀಸಿದರೂ ಅದನ್ನು ಎಡಗೈಯಿಂದ ಪಕ್ಕಕ್ಕೆ ತಳ್ಳಿ ಬದುಕಿನ ಆಟ ಮುಂದುವರಿಸುವವರು.
‘ಶೋ ಮಸ್ಟ್ ಗೋ ಆನ್…’
ಆಕಾಶ ತಲೆಕೆಳಕಾಗಲಿ
ಪರ್ವತಗಳು ಕುಸಿದು ಬೀಳಲಿ
ಸಾಗರಗಳು ಉಕ್ಕಿ ಹರಿಯಲಿ!
ಭೂಮಿ ಬಿರಿಯಲಿ…
‘ಕೋಗಿಲೆಗಳ ಕಾರ್ಕೋಟ ಹೆಡೆಎತ್ತಿ ನಿಲ್ಲಲ್ಲಿ.
ನರಕದ ಹೆಬ್ಬಾಗಿಲು ಬಿರಿದು ತೆರೆಯಲಿ…
ಬದುಕಿನ ಪ್ರದರ್ಶನ ನಡೆಯುತ್ತೆ.
ನಡೆದೇ ನಡೆಯುತ್ತೇ… ನಿಲ್ಲುವುದಿಲ್ಲ!!!
‘ಶೋ ಮಸ್ಟ್ ಗೋ ಆನ್… !!!
ನನಗೆ ರಂಗಭೂಮಿ ಕಲಿಸಿದ ಪಾಠವೇ ಇದು. ಎಷ್ಟೇ ಸಮಸ್ಯೆಗಳು ಎದುರಾಗಲಿ… ಎಂಥದೇ ಕಷ್ಟಗಳು ಬರಲಿ. ನೋವುಗಳು ಜೀವ ಹಿಂಡಲಿ. ಎಲ್ಲವನ್ನೂ ಎದುರಿಸಿ ಏಳುಬೀಳುಗಳ ಬದುಕನ್ನು ಮುನ್ನಡೆಸುವ ಗಟ್ಟಿತನವನ್ನು… ಮಾರ್ಗವನ್ನು ರಂಗಭೂಮಿ ತನ್ನಲ್ಲಿಗೆ ಬಂದವರೆಲ್ಲರಿಗೂ ಕಲಿಸುತ್ತೆ… ನನಗೆ ಇಂತಹ ಅನೇಕ ಪಾಠಗಳನ್ನು ರಂಗಭೂಮಿ ಕಲಿಸಿದೆ… ಇರಲಿ ನಾನು ನನ್ನ ‘ರಂಗಯಾನ’ವನ್ನು ಬರೆಯುವ ಸಂದರ್ಭದಲ್ಲಿ ವಿಷದವಾಗಿ ಆ ಕುರಿತು ಬರೆದೇನು ಮಿತ್ರರೇ.
ಈಗ ನಾನು ಮತ್ತೆ ಆದಿವಾಲದಕ್ಕೆ ಬರಲು ಅಪ್ಪಣೆ ಕೊಡಿ… ‘ಮಹಾಯಾನ’ದ ಜಾಡಿಗೆ ಬರಲು ನಿಮ್ಮ ಒಪ್ಪಿಗೆ ಇದೆಯಲ್ಲವೇ.
ಹಾಗಾದರೆ ಬನ್ನಿ ಹೋಗೋಣ… ಆದಿವಾಲಕ್ಕೆ
ಆ ಮೆಳ್ಳಗಣ್ಣಿನ ಹುಡುಗಿಯು ನನ್ನೊಡನೆ ನಾಗಮಂಗಲಕ್ಕೆ ಹೊರಡಲು ಸಿದ್ಧವಾಗಿದ್ದಳು. ನಾನೂ ಸಿದ್ಧನಾಗಿ ಬಂದು ಉಪ್ಪಿಟ್ಟಿನ ತಟ್ಟೆಯ ಮುಂದೆ ಕುಳಿತೆ… ಯಾವುದೇ ಸಂಕೋಚವಿಲ್ಲದೆ ತಿಂದೆ. ಮತ್ತೊಂದು ಬಾರಿ ಹಾಕಿಸಿಕೊಂಡು ತಿಂದೆ ಕಣ್ರೀ… ಅರೇ ಉಣ್ಣುವುದರಲ್ಲಿ… ತಿನ್ನುವುದರಲ್ಲಿ ಸಂಕೋಚ ಏನ್ರಿ ಬಂತೂ. ನಾನು ‘ಊಟ ಪ್ರಿಯ’ ಹೊಟ್ಟೆ ತುಂಬಾ ಏನಿದೆಯೋ ಅದನ್ನು ತಿನ್ನುವ ಸ್ವಭಾವದವನು… ಪುಸ್ಕಳ ಊಟವೇ ಬೇಕು… ಭೂರಿ ಭೋಜನವೇ ಆಗಬೇಕು ಎನ್ನುವವನಲ್ಲಾ. ಟೈಮ್‌ಟೈಮ್‌ಗೆ ತಿನ್ನಲು ಸಿಕ್ಕಿದರೆ ಸಾಕೆನ್ನುವವ… ಆದರೆ ಕೆಲವು ವರ್ಷಗಳು ಬಿಟ್ಟರೆ ನನಗೆ ಸರಿಯಾಗಿ ಉಣ್ಣಲು ಊಟವೇ ಸಿಗದಂತಾ ಅನೇಕ ದಿನಗಳು ನನ್ನ ಬದುಕಿನಲ್ಲಿ ಇದಾವೆ… ಈಗ ಬೇಡ ಆ ಕಥೆ ಮುಂದಕ್ಕೋಗೋಣ.
ನಾನು ಮತ್ತು ಆ ಹುಡುಗಿ ಹಿರಿಯೂರಿಗೆ ಬಂದೋ… ಅಲ್ಲಿಂದ ತುಮಕೂರು ಬಸ್ ಹತ್ತಿದೆವು… ಬಸ್ಸು ರಶ್ ಇತ್ತು… ಒಂದಷ್ಟು ಕಾಲ ನಿಂತೇ ಪಯಣ ಬೆಳೆಸಿದೋ… ನಮಗೆ ತುಮಕೂರಿನವರೆಗೂ ಸೀಟೇ ಸಿಗಲ್ಲಾ ಎಂದು ಭಾವಿಸಿದ್ದೆ. ಸಿರಾ ಬಸ್ ಸ್ಟಾಂಡ್ ಬಂತು. ಇಬ್ಬರು ಪಯಣಿಗರು ಇಳಿದರು… ಮುಂಭಾಗದ ಸೀಟೊಂದು ಹಾಗೂ ಅದರ ಹಿಂಭಾಗದ ಸೀಟೊಂದು ಖಾಲಿಯಾಗಿತ್ತು… ಮುಂಭಾಗದ ಸೀಟಿನಲ್ಲಿ ಅವಳೂ ಅದರ ಹಿಂಭಾಗದ ಸೀಟಿನಲ್ಲಿ ನಾನೂ ಕುಳಿತುಕೊಂಡೆವು… ಮಾತಿಲ್ಲ ಕತೆಯಿಲ್ಲ… ಮೌನ ಪಯಣ ಮುಂದೆ ಸಾಗಿತ್ತು.
ಬಸ್ ಮತ್ತೊಂದು ಮುಂದಿನ ನಿಲ್ದಾಣದಲ್ಲಿ ನಿಂತಿತು… ಆಕೆಯ ಪಕ್ಕದಲ್ಲಿದ್ದ ಆ ಹೆಂಗಸರು ಇಳಿದರು. ನಾನು ಹೋಗಿ ಖಾಲಿಯಾಗಿದ್ದ ಆ ಜಾಗದಲ್ಲಿ ಕುಳಿತುಕೊಳ್ಳಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಮದುವೆಯಾಗದ ಹುಡುಗಿಯೊಡನೆ ಪಕ್ಕದಲ್ಲೇ ಕುಳಿತುಕೊಳ್ಳುವುದು ಹೇಗೇಳಿ… ಆಗಿನ ಕಾಲ ಸಂದರ್ಭವೂ ಹಾಗಿತ್ತು… ನಮ್ಮಂಥ ಹಳ್ಳಿ ಹುಡುಗರ ಮನಸ್ಥಿತಿಯೂ ಹಾಗೇ ಇತ್ತು… ಯಾವುದೋ ಸಂಕೋಚ ಯಾವುದೋ ಸಮಾಜಿಕ ಕಟ್ಟಳೆ… ಅದಾವುದೋ ಹಿಂಜರಿಕೆ… ಈಗಿನಂತಾ ಕಾಲವಲ್ಲ ಅದು… ಪರಿಚಿತ ಹೆಣ್ಣು ಗಂಡುಗಳು… ಮದುವೆಗೆ ಸಿದ್ಧವಾಗಿರುವ… ಒಪ್ಪಿರುವ ಭಾವಿ ಪತಿ ಪತ್ನಿ ಒಟ್ಟಿಗೇ ಕೂರಬಹುದು ಎಂಬ ತಿಳಿವಳಿಕೆ ಇಲ್ಲದ ಕಾಲವದು.
ಆದರೆ ಅಪರಿಚಿತ ಇಬ್ಬರು ಹುಡುಗರು ಖಾಲಿಯಾಗಿದ್ದ ಆ ಸೀಟಿನಲ್ಲಿ ಬಂದು ಅವಳ ಪಕ್ಕ ಕುಳಿತರು… ಆಕೆ ಹಿಂದೆ ತಿರುಗಿ ಬೆದರುಗಣ್ಣುಗಳಿಂದ ನನ್ನನ್ನ ನೋಡಿದಳು… ನಾನೇನಾದರೂ ತಿಳಿದಾನೆಂಬ ಆತಂಕವೋ ಏನೋ ಕಾಣೇ… ಅವಳು ಆ ಸೀಟಿನಿಂದ ಎದ್ದು ನಿಂತಳು… ನಾನು ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರಲ್ಲಿ ತಾವು ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವಂತೆ ರಿಕ್ಟೆಸ್ಟ್ ಮಾಡಿಕೊಂಡೆ ಮಹನೀಯರು ಮುಂದೆ ಹೋಗಿ ಕುಳಿತರು.
‘ಬನ್ನಿ ಕುಳಿತುಕೊಳ್ಳಿ’ ಎಂದೆ ನಾನು
ಆ ಮೆಳ್ಳಗಣ್ಣಿ ಮತ್ತು ಬೆದರಿದಳು
ಸೀಟಿನಂಚಿಗೆ ಮುದುಡಿ ಕುಳಿತಳು ಬಾಲೆ
ಬೆವತು ಹೋಗಿದ್ದಳು ಆ ಕಮಲೆ
ನಾಚಿ ನೀರಾಗಿದ್ದಳು ಆ ಮಿಮಲೆ… ನೀಲೆ
ನಾನು ಸನಿಹದಲ್ಲೇ ಕುಳಿತು ನಗುನಗುತ್ತಾ ನೋಡುತ್ತಿದ್ದೆ, ಆ ಲೀಲೆ
ಪಯಣ ಸಾಗಿತು
ತಿಳಿಗಾಳಿ ಸುಳಿಯಿತು
ಮಂದಾನಿಲ ಮುಖವ ಸೋಂಕಿತು
ಮೆಳ್ಳಗಣ್ಣಾ ನಿದುರೆ ಅಪ್ಪಿತು
ಒರುಗು ದಿಂಬಾಯಿತು ಎನ್ನ ಭುಜವು
ಅವಳ ಶಿರವು ಬಾರವನಿಸಲಿಲ್ಲ ಎನಗೆ
ಮಲ್ಲಿಗೆಯ ದಿಂಡೊಂದು
ಎನ್ನ ಬಾಹುಗಳಲ್ಲಿ ಪವಡಿಸುತ್ತಿರುವಂತೆ ಭಾಸವಾಯಿತು ನನಗೆ…
ನಿದ್ರಾದೇವಿ ನನ್ನನ್ನೂ ಆವರಿಸಿಕೊಂಡಳು…
ನಾನು ಸೆರೆಯಾದೆನು ನಿದ್ರಾದೇವಿಗೆ…
ನಾನು ಆಸರೆಯಾದೆನು ಆ ನೀಲಾದೇವಿಗೆ ದಿಗ್‌ನೆಚ್ಚರವಾಯಿತು.
ನನ್ನ ಭುಜದ ಮೇಲೆ ಅವಳು ತಲೆಯಾಡಿಸಿ ಮಲಗಿದ್ದಳು. ಅವಳು ದಿಗ್ಭ್ರಾಂತಗೊಂಡಳು. ಒಮ್ಮೆಲೇ ತನ್ನ ತಲೆ ತೆಗೆದು ನಾಚಿದಳು…. ಗಲಿಬಿಲಿಗೊಂಡಳು… ಸಂಕೋಚಿಸಿದಳು… ಕಳವಳಿಸಿದಳು… ತಳಮಳಿಸಿದಳು… ದಿಗಿಲುಗೊಂಡಳು… ಕಕ್ಕಾಬಿಕ್ಕಿಯಾದಳು… ಬೆರಗಾದಳು… ವಿಸ್ಮಿತಳಾದಳು… ತಾನು ಎಲ್ಲಿರುವೆ… ಯಾರ ಜೊತೆಗಿರುವೆ ಎಂದು ಭ್ರಾಂತಗೊಂಡಳು… ಬೆಚ್ಚಿದಳು…
ಆ ನಿದ್ದೆಗಣ್ಣುಗಳನ್ನು ಮತ್ತೂ ಕಿರುಗೊಳಿಸಿ ನನ್ನ ನೋಡಿದಳು… ಸಮಾಧಾನವಾಯಿತು ಎನಿಸಿರಬೇಕು ಅವಳಿಗೆ… ಅವಳ ತುಟಿಗಳಲಿ ಕಿರುನಗೆ ತೇಲಿತು…
‘ಬನ್ನಿ ತುಮಕೂರು ಬಂತು… ಇಳಿಯೋಣ’ ಎಂದೆ ನಾನು, ಅವಳು ನನ್ನನ್ನು ಹಿಂಬಾಲಿಸಿದಳು… ಅಲ್ಲಿಯ ಬಸ್‌ಸ್ಟಾಂಡ್ ಹೋಟಲ್ ನಲ್ಲಿ ಕಾಫಿ ಕುಡಿದೆವು…

ತುಮಕೂರಿನಿಂದ ಮೈಸೂರಿಗೆ ಹೊರಡುವ ಬಸ್ಸು ನಮಗಾಗಿ ಕಾದಿತ್ತು… ನಾಗಮಂಗಲಕ್ಕೆ ಎರಡು ಟೀಕೆಟ್ ತೆಗೆದುಕೊಂಡೆ ನಾನು…
ಆ ಬಸ್ಸಿನಲ್ಲಿ ನಾವಿಬ್ಬರೂ ಜೊತೆಗೆ ಕುಳಿತುಕೊಂಡೆವು.
ಆ ಮಲ್ಲಿಗೆಯ ದಂಡೆ ನನ್ನ ಭುಜವನಾವರಿಸಿ ಮತ್ತೆ ಮಲಗಬಾರದೆ ಎನಿಸಿತ್ತು ನನಗೆ…
ನಿದುರಾದೇವಿ ಮತ್ತೆ ಅವಳ ಕಡೆ ಸುಳಿಯಲೇ ಇಲ್ಲ… ಹೋಗಲಿ ನನ್ನ ಕಣ್ಣುಗಳ ಕಡೆಗಾದರೂ ಆ ದೇವಿ ಬರಬಾರದಿತ್ತೇ…
ನಾನು ನಟನಾದರೂ… ಕಲಾವಿದನಾದರೂ… ನಿದ್ರೆ ಬಂದಂತೆ ನಟಿಸಿ ಆ ಮೆಳ್ಳಗಣ್ಣಿಯ ಭುಜವ ಸುಪ್ಪತ್ತಿಗೆ ಮಾಡಿಕೊಂಡೇನು ಮಲಗಲಿಲ್ಲಾ ಕಣ್ರೀ…
ತುಸುಮಾತು
ಬಿಸಿಮೌನ
ನಸುನಗು
ಕಿರುನೋಟ
ಸನಿಹ ಸುಖ
ಕುಣಿದ ಕನಸು
ಮಿಲನಗೊಂಡಿತು ಮನಸು ಆಹಾ… ಈ ಪಯಣ ಎಂತ ಸೊಗಸು
ಮಧುರ ಸುಮಧುರದರಮನೆಯಾಯಿತು ಯಾನದಾಣ
ನಾಗಮಂಗಲ ಬಂದಿತು…
ನಾಗಮಂಗಲ ಇಷ್ಟು ಬೇಗ ಬರಬಾರದಿತ್ತು ಎಂದಿತು ನನ್ನ ಮನಸ್ಸು.
ಮೌನ ಮಧುರಾಲಾಪದ ಗುಂಗಿನಲಿ ನಾವು ಮನೆ ಸೇರಿದೆವು.
| ಇನ್ನು ಮುಂದಿನ ವಾರಕ್ಕೆ |






0 Comments