ಮಹಾಮನೆ ಅಂಕಣ – ಬೆಳಕಿಲ್ಲದ ಅರಮನೆಯೊಳಗೆ ಯಾರಿಲ್ಲದೆ ಶತಪಥ ತಿರುಗುವ ಸಾಮ್ರಾಟನಂತೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

10

ನಾಗಮಂಗಲದಲ್ಲಿ ನಮ್ಮ ಮನೆ ಇದ್ದದ್ದು ಸೌಮ್ಯಕೇಶವ ದೇವಸ್ಥಾನ ಹಾಗೂ ನರಸಿಂಹಸ್ವಾಮಿ ದೇವಾಲಯಗಳ ನಡುವಿನಲ್ಲಿ… ಬ್ರಾಹ್ಮಣರ ಮನೆಗಳು ಮುಗಿದು ಒಕ್ಕಲಿಗರ ಕೇರಿ ಪ್ರಾರಂಭವಾಗುವ ಸ್ಥಳದಲ್ಲಿ… ಅಂದರೆ ಸೌಮ್ಯಾಕೇಶವಸ್ವಾಮಿ ದೇವಲಾಯದ ಹಿಂಭಾಗದಲ್ಲಿ… ಹಿಂದೆ… ಅದು ಯಾರೋ ಒಬ್ಬ ಬ್ರಾಹ್ಮಣರ ಮನೆಯಾಗಿತ್ತಂತೆ… ಅವರು ಮೈಸೂರಿನಲ್ಲಿ ಸಟ್ಲ್ ಆಗುವ ಕಾರಣ… ನಮಗೆ ಆ ಮನೆಯನ್ನು ಮಾರಿ ಅವರು ಮೈಸೂರಿನ ಕಡೆ ಹೋಗಿದ್ದರು. ಅಂದವಾದ ಮನೆ… ಮನೆಯ ಮುಂಭಾಗ ಒಂದಷ್ಟು ಆವರಣ… ಅಲ್ಲೆ ಒಂದು ಬದಿಗೆ ಮಹಡಿಗೆ ಹೋಗುವ ಮೆಟ್ಟಿಲು… ಇನ್ನೊಂದು ಬದಿಗೆ… ಬಾವಿ ಆ ಬಾವಿಯಲ್ಲಿ ಸದಾ ಕಾಲವು ನೀರು ಇರುತ್ತಿತ್ತು. ನಮ್ಮ ಪಕ್ಕದ ಮನೆಯವರು ಹಾಗೂ ಇತರ ಒಂದೆರಡು ಮನೆಯವರು ತಮಗೆ ನೀರು ಬೇಕಾದಗೆಲ್ಲ ಅದೇ ಬಾವಿಯಿಂದಲೇ ನೀರು ಸೇದುಕೊಳ್ಳುತ್ತಿದ್ದರು…

ಆಗಿನ ದಿನಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲೂ ರಾಟೆ ಬಾವಿಗಳು ಇರುತ್ತಿದ್ದವೂ. ಈಗಿನಂತೆ ಬೋರು ಪಾರು ಏನೂ ಇರಲಿಲ್ಲ ಕಣ್ರಿ… ಬೆಂಗಳೂರಿನ ಆಗಿನ ಹೊಸ ಬಡಾವಣೆಗಳಾದ ಚಾಮರಾಜಪೇಟೆ… ಬಸವನಗುಡಿ… ಮಲ್ಲೇಶ್ವರಂಗಳಲ್ಲಿಯ ಬಹುತೇಕ ಮನೆಗಳಲ್ಲಿ ಬಾವಿಗಳು ಇರುತ್ತಿದ್ದವು. ಕೇವಲ ೨೦-೩೦ ೬ ಅಡಿಗಳಿಗೆಲ್ಲ ನೀರು ಸಿಕ್ಕಿಬಿಡುತ್ತಿತ್ತು. ಈಗೇನ್ರೀ ೬೦೦-೭೦೦-೮೦೦ ಅಡಿ ಕೊರೆದರೂ ನೀರು ಸಿಗುವುದಿಲ್ಲ. ನಮ್ಮಳ್ಳಿಗಳ ತೋಟಗಳ ನೆಲಬಾವಿಗಳಲ್ಲಂತೂ ಯಾವಾಗ ಸಮೃದ್ಧವಾದ ನೀರು… ಆದರೆ ಈಗ ಎರಡು ಸಾವಿರ ಮೂರು ಸಾವಿರ ಅಡಿಗಳಷ್ಟು ಬೋರು ಕೊರೆದರೂ ನೀರಿಲ್ಲ… ಅಷ್ಟೋ ಇಷ್ಟೋ ನೀರಿದ್ದರಂತೂ ಬೇಸಿಗೆಯಲ್ಲಿ ಒತ್ತಿಹೋಗುತ್ತವೆ… ನಮ್ಮ ರೈತರ ಪಾಡು ಹೇಳತೀರದು… ರೈತಾಪಿ ಜನರ ಗೋಳುಗಳು ಒಂದೆರಡಲ್ಲ ಕಣ್ರೀ…

ನಮ್ಮನ್ನು ಎದುರುಗೊಂಡ ಅಮ್ಮ ನಮಗೆಲ್ಲರಿಗೂ ಬಿಸಿ ಬಿಸಿ ಕಾಫಿಕೊಟ್ಟರು… ತಾವೊ ಕಾಫಿಯನ್ನು ಕುಡಿಯುತ್ತಾ ಯೋಗಕ್ಷೇಮ ಉಭಯಕುಶಲೋಪರಿ ಎಲ್ಲಾ ಕೇಳುತ್ತಾ ಇಬ್ಬರನ್ನು ಆದರಿಸಿದರು. ಮತ್ತೆ ಸ್ನಾನ ಮಾಡಿ ಬನ್ನಿ… ಬಿಸಿ ಬಿಸಿ ಅಡುಗೆ ಮಾಡುತ್ತೇನೆ’ ಎಂದು ಉಪಚರಿಸಿದರು…

ಅಮ್ಮ… ನಾವು ಬರುವಷ್ಟರಲ್ಲಿ ನೀರೊಲೆಯ ಹಂಡೆಗೆ ನೀರು ತುಂಬಿ ಗಣ ಗಣ ನೀರು ಕಾಯಿಸಿದ್ದರು… ಕಾಯ್ಮೊಟ್ಟೆ ಹಾಗೂ ಸೌದೆ ನಮ್ಮ ಕಾಲದ ಉರುವಲು… ಈಗಿನಂತೆ ಸೋಲಾರ್, ಕರೆಂಟ್, ಗ್ಯಾಸ್ ಮತ್ತೊಂದು ಮಗದೊಂದು ಪರಿಚಯವೇ ಇಲ್ಲದ ದಿನಗಳು… ಬೆಂಗಳೂರಿನ ನನ್ನ ಬದುಕೊ… ಹೇಳತೀರದು…

ನೀರು ಸಮೃದ್ಧಿಯಾಗಿ ಸಿಕ್ಕಾಗ ಸ್ನಾನ… ಆಜಾದ್ ನಗರದ ಅಕ್ಕನ ಮನೆಯ ನೀರಿನ ಕತೆ ಒಂದಾದರೆ… ಚಾಮರಾಜಪೇಟೆ ನಾಲ್ಕನೇ ರಸ್ತೆಯಲ್ಲಿ ಇದ್ದ ಆ ಮರಿಯಮ್ಮನ ಮನೆಯ ನೀರಿನ ಕತೆ ಇನ್ನೊಂದು ಆನಂತರ ಹನುಮಂತನಗರದ ಮನೆಗಳು… ಆ ನಂತರ ಬ್ಯಾಂಕ್ ಕಾಲೋನಿಯ ಶ್ರೀನಿವಾಸನಗರದ ಮನೆಯ ನೀರಿನ ಕತೆ ಮಗದೊಂದು… ಸೀತಾ ಸರ್ಕಲ್ ನಲ್ಲಿ ಇದ್ದ ಸಂಜಯ್ ದೊರೆಯ ರೂಮಿನ ನೀರಿನ ಕತೆ… ಆ ನಂತರ ಕುರುಬರ ಹಳ್ಳಿಯ ಮನೆ… ಆ ನಂತರ ಚಂದ್ರ ಲೇ-ಔಟ್ ನ ಬಿ.ಸಿ.ಸಿ. ಬಡಾವಣೆಯ ಮನೆ… ಆ ನಂತರ ಕಮಲಾ ನಗರದಲ್ಲಿದ್ದ ಮನೆಯ ನೀರಿನ ಕತೆ… ಆ ನಂತರ ತಿಪಟೂರಿನ ಶಂಕರಪ್ಪ ಬಡಾವಣೆಯಲ್ಲಿದ್ದ ಮನೆಯ ನೀರಿನ ಕತೆ… ಆ ನಂತರ ಬೆಂಗಳೂರಿನ ಕೆಂಗೇರಿಯ ರಾಜೂ ಲೇ-ಔಟ್ ನಲ್ಲಿದ್ದ ಮನೆಯ ನೀರಿನ ಕತೆ… ಈಗ ಸರ್. ಎಂ.ವಿ. ಬಡಾವಣೆಯ ಮನೆಯ ನೀರಿನ ಕತೆ ಒಂದೊಂದು ಬಹಳ ಬಹಳ ಡಿಪರೆಂಟ್ ಕಣ್ರಪ್ಪಾ… ನನ್ನ ‘ಮಹಾಯಾನ’ದಲ್ಲಿ ನಾನು ವಾಸವಿದ್ದ ಮನೆಗಳ ನೀರಿನ ಕತೆಗಳದೇ ಒಂದು ಸಪರೇಟ್ ಅಧ್ಯಾಯವನ್ನೇ ಬರೆಯಬಹುದು ಅಷ್ಟು ಅನುಭವಗಳು… ನೆನಪುಗಳು ನನ್ನಲ್ಲಿದ್ದಾವೆ…

ನಮ್ಮ ನಾಗರೀಕತೆಗಳು ಬೆಳೆದು ಬಂದದ್ದು ನೀರ ತೀರ ತಾಣಗಳಲ್ಲಿಯಲ್ಲವೇ ನದಿ ತೀರಗಳಲ್ಲಿ ಅಲ್ಲವೆ… ಜಲಮಾತೆಯ ಮಡಿಲಲ್ಲಿ ಮನುಷ್ಯ ತನ್ನ ಬದುಕನ್ನು ಅರಸುತ್ತಾ ಹೋದಂತೆ… ಈಗಲೂ ಸಹ ಮನೆಕೊಳ್ಳುವವರು… ಸೈಟು ಕೊಳ್ಳುವವರು… ಮನೆಗೆ ಬಾಡಿಗೆಗೆ ಬರುವವರು… ಆ ಜಾಗದಲ್ಲಿ ನೀರಿನ ಸೌಕರ್ಯ ಚೆನ್ನಾಗಿದೆಯೇ… ನೀರಿನ ಅನುಕೂಲ ಸರಿ ಇದೆಯೇ ಎಂಬುದನ್ನು ನೋಡಿಕೊಂಡೇ ಅಲ್ಲವೆ ಅಲ್ಲಿ ತಮ್ಮ ತಾಣ ಹೂಡುವುದು.

ಅಯ್ಯೋ ಶಿವ… ಇದೇನು….? ನಾನೆಲ್ಲೋ ಬಂದುಬಿಟ್ಟೆ…
ನೀರೆಯನ್ನು ನಡು ನೀರಿನಲ್ಲಿ ಕೈಬಿಟ್ಟ ನೀರನಂತೆ ಆಯಿತಲ್ಲ ನನ್ನ ಕತೆ…
ಭಗೀರಥ ಋಷ್ಯಶೃಂಗರ ನೀರನ ಕತೆಗಳಂತೆ ನನ್ನದೂ ಒಂದು ನೀರಕತೆಯಾಯಿತಲ್ಲಾ… ಇರಲಿ.
ನೀರೆ ಗಂಭೀರೆ… ಆ ಬಾಲೆ… ಆ ಮೆಳ್ಳಗಣ್ಣಿ… ಆ ಗಂಗಾಂಬಿಕೆಯನ್ನು ಆ ನೀರಲೋಕದಿಂದ ಮತ್ತೆ ಕರೆದು ತರುವೆ….
ರೀ ಇವರೆ… ನೀವು ಹೋಗಿ ಸ್ನಾನ ಮಾಡಿ ಬಂದ್ರೆ ಅಮ್ಮನ ಅಡಿಗೆಗೆ ಸಹಾಯ ಮಾಡಿದಂತೆ ಆಗುತ್ತದೆ’ ಎಂದು ನಾನೇಳಿದ್ದರಿಂದ ಆಕೆಯೇ ಮೊದಲು ಸ್ನಾನ ಮುಗಿಸಿ ಅಮ್ಮನ ಸಹಾಯಕ್ಕ ನಿಂತಳು.

ನಾನೂ ಸಹ ಸ್ನಾನ ಮುಗಿಸಿಹೊರಬರುವಷ್ಟರಲ್ಲಿ ಹೊರಹೋಗಿದ್ದ ಅಪ್ಪಾಜಿಯೂ ಬಂದರು… ಏನಪ್ಪಾ ಸ್ವಾಮಿ ವೆನ್ ಡಿಡ್ ಯೂ ಕಮ್… ನಾನು ಬಸ್ ಸ್ಟಾಂಡ್ ನಲ್ಲೆ ನೀವ್ ಬತ್ತೀರಿ ಅಂತ ಕಾಯ್ತಾ ಇದ್ನೆಲ್ಲಪ್ಪಾ… ನೀವು ಬಂದದ್ದೆ ಗೊತ್ತಾಗಲಿಲ್ಲಪ್ಪ… ಹೆಣ್ಮಗುವನ್ನು ರ್ಕೊಂಡು ಬಂದಿದ್ದಿಯೇನಪ್ಪ… ಎಲ್ಲಿ ಮಗು… ‘ಐ ಯಾಮ್ ವೇಟಿಂಗ್ ಫಾರ್ ಯೂ ಇನ್ ಬಸ್ಸ್ಟಾಂಡ್ ಯು ನೋ… ಎಂದು ಒಂದೇ ಉಸಿರಿಗೆ ಒಂದಾದ ಮೇಲೆ ಒಂದು ಪ್ರಶ್ನೆಗಳನ್ನು ಹಾಕುತ್ತಲೇ… ಅಮ್ಮನ ಬಳಿ ಆಮಗ’ ಇದ್ದದ್ದನ್ನು ಕಂಡು ಅವರೂ ಆಕೆಯ ಯೋಗಕ್ಷೇಮ ಎಲ್ಲ ವಿಚಾರಿಸಿದರು…

‘ಹೋಗಿ ಕೈ ಕಾಲು ತೊಳೆದುಕೊಂಡು ಬಂದ್ಬೀಡಿ… ನೀವು ಊಟ ಮಾಡ್ದಿಯವಿರಂತೆ’ ಎಂದು ಅಮ್ಮ ಹೇಳಿದ್ದರಿಂದ ಅಪ್ಪಾಜಿಯೂ ಊಟಕ್ಕೆ ಸಿದ್ಧವಾಗಿ ಬಂದರು. ಅಪ್ಪಾಜಿ ಹುಟ್ಟಿದ್ದು ತಕ್ಕ ಮಟ್ಟಿಗೆ ಸ್ಥಿತಿವಂತರ ಮನೆಯಲ್ಲೇ ಅವರ ತಂದೆ… ತಾತ… ಮುತ್ತಾಂದಿರು ವ್ಯಾಪಾರ ಮಾಡುತ್ತಾ ಅಲ್ಪ ಸ್ವಲ್ಪ ಹಣಕಾಸು ಕಂಡವರು… ನಮ್ಮ ಪೂರ್ವಿಕರು… ಅಪ್ಪಾಜಿಯ ಹಿಂದಿನ ಸಂತತಿ ಆಂಧ್ರದ ಶ್ರೀಶೈಲದ ಕಡೆಯಿಂದ ಇತ್ತ ದಕ್ಷಿಣಕ್ಕೆ ವಲಸೆ ಬಂದವರಂತೆ… ವ್ಯಾಪಾರವೇ ಅವರ ಮೂಲ ಕಸುಬು… ಅದರಲ್ಲೂ ಅಡಿಕೆ ಮಾರಾಟವೇ ಮುಖ್ಯ… ‘ಗೋಟಡಿಕೆಬಸಪ್ಪ’ನ ವಂಶದವರು…ಅವನೇ ನಮ್ಮ ಪಿರ್ಕದ ಮೂಲ ಪುರುಷ ಇರಬೇಕು…

ಎತ್ತುಗಳ (ಬಸವ) ಮೇಲೆ ಹಸಿಬೆಚೀಲ (ಇಬ್ಬೊಟ್ಟೆಯ ಚೀಲ – ಬಸವನ ಬೆನ್ನು ಮೇಲಿಂದ ಚೀಲವನ್ನು ಇಳಿಬಿಟ್ಟರೆ… ಅದರ ಹೊಟ್ಟೆಯ ಎರಡೂ ಬದಿಯವರೆಗೂ ಚೀಲ ಉದ್ದವಿದ್ದು… ಅದರಲ್ಲಿ ದವಸ ಧಾನ್ಯ ತುಂಬಲು ಅನುಕೂಲವಾಗುವಂತೆ ಹೊಲದಿರುವ ಚೀಲವಾವುದೊ ಅದು ಹಸಬೆ ಚೀಲ) ಹಾಕಿಕೊಂಡು ವ್ಯಾಪಾರ ಮಾಡುತ್ತಾ ಉತ್ತರದ ಕಡೆಯಿಂದ ಹೊರಟವರು ಹಾಗೆಯೇ ದಕ್ಷಿಣಾಭಿಮುಖವಾಗಿ ಬೆಂಗಳೂರಿನ ಈಗಿನ ಮಾಲೂಲುಪೇಟೆ ಹಾಗೂ ಸುಂಕೇನಹಳ್ಳಿ ಅಂದರೆ ಬೆಂಗಳೂರಿನ ಈಗಿನ ಹನುಮಂತನಗರದಲ್ಲಿ ಕೆಲಕಾಲ ತಂಗಿದ್ದು…

ಆ ಪ್ರದೇಶಗಳಲ್ಲಿ ನೆಲೆ ನಿಂತಿರುವ ಬಸವದೇವರು (ಬಸವಣ್ಣನ ದೇವಸ್ಥಾನ) ಗಳನ್ನು ತಮ್ಮ ಕುಲದೇವರಂತೆ ಪೂಜಿಸುತ್ತಾ ಇದ್ದವರು… ಮತ್ತೆ ಅಲ್ಲಿಂದ ಗುಳೇ ಹೊರಟು ನಾಗಮಂಗಲದ ಸೀವೆಯೆಡೆಗೆ ಬದುಕನರಸಿ ಬಂದವರು ಕವಲುಗಳಾಗಿ ಹರಿದು ದೇವಲಾಪುರ… ಅಮೃತೂರು… ಹುಲಿಯೂರು ದುರ್ಗ, ಬಸಿರಾಳು… ದೊಡ್ಡ ಜಟಕ… ಹಿರಿಸಾವೆ ಕ್ಲೊಸ್ಪೇಟೆ (ಕೆ.ಆರ್.ಪೇಟೆ) ಬಿದಿರುಕೋಟೆ ಈ ಊರುಗಳೆಲ್ಲೆಲ್ಲಾ ಹರಡಿಕೊಂಡು ವ್ಯಾಪಾರ ಸಪಾರ ಮಾಡಿಕೊಂಡು… ಹೊಲ ಗದ್ದೆಗಳನ್ನು ಸಂಪಾದನೆ ಮಾಡಿ ಒಕ್ಕಲುತನ ಮಾಡುತ್ತಾ ಊರಿಗೆ ಒಂದು ಕುಳ’ ಎನಿಸಿಕೊಂಡಿದ್ದಾರೆ…

ಮನೆದೇವರು ಮಲ್ಲಿಕಾರ್ಜುನನಿಗೆ ನಡೆದುಕೊಳ್ಳಲು ಅಷ್ಟು ದೂರ ಇರುವ ಶ್ರೀಶೈಲಕ್ಕೆ ಪದೇ ಪದೇ ಹೋಗಲಾಗದ್ದರಿಂದ ತಲಕಾಡ ಬಳಿಯಿರುವ ಮುಡುಕುತೊರೆ ಮಲ್ಲಿಕಾರ್ಜುನನನ್ನು ತಮ್ಮ ಮನೆದೇವರೆಂದು… ತಾಯಿ ಭ್ರಮರಾಂಬಿಕೆಯನ್ನು ತಮ್ಮ ಮನದೇವತೆಯಾಗಿ ಮಾಡಿಕೊಂಡು ಅಲ್ಲಿಗೆ ನಡೆದುಕೊಳ್ಳುತ್ತಿದ್ದಾರೆ. ಕಾಲಾ ನಂತರದಲ್ಲಿ ಬೆಂಗಳೂರಿನ ಮಾಮೂಲು ಪೇಟೆಯಲ್ಲಿರುವ ಬಸವಣ್ಣನಿಗೂ ಹಾಗೂ ಬಸವನಗುಡಿಯ ದೊಡ್ಡ ಬಸವಣ್ಣನ ಗುಡಿಗೂ ಕಾಲಕಾಲಕ್ಕೆ ಹೋಗಲು ಸಾಧ್ಯವಾಗದ್ದರಿಂದ ದೇವಲಾಪುರ-ನಾಗಮಂಗಲದ ರಸ್ತೆಯಲ್ಲಿರುವಹಾದಿ ಬಸವಣ್ಣ’ ಹಾಗೂ ನಾಗಮಂಗಲ ಮಂಡ್ಯ ರಸ್ತೆಯ ನಡುವೆ… ಬಸಿರಾಳಿನ ಬಳಿ ಇರುವ ಯಗಟಿಬಸವಣ್ಣ’ ನನ್ನ ತಮ್ಮ ಕುಲದೈವವೆಂದೂ ನಂಬಿ ನಡೆದುಕೊಳ್ಳುತ್ತಾರೆ…

ಹೀಗೆ ಆಂಧ್ರದ ಕಡೆಯಿಂದ ವಲಸೆ ಬಂದ ಸಂಚಾರಿ ವ್ಯಾಪಾರಿಗಳು ಅಂದರೆ ಬಿಸಿನೆಸ್ ಟ್ರಾವರ್ಸ್ಗಳ ಒಂದು ಕುಡಿ ದೇವಲಾಪುರದಲ್ಲಿ ನೆಲೆಗೊಂಡು ವ್ಯಾಪಾರವನ್ನೇ ತಮ್ಮ ಮುಖ್ಯ ಕಸುಬಾಗಿಸಿಕೊಂಡವರ ಕಳ್ಳು ಬಳ್ಳಿಯೇ ನಮ್ಮಅಪ್ಪಾಜಿ’ ಡಿ.ಎಸ್. ಬಸೆಟ್ಟಪ್ಪನವರು. ಹುಟ್ಟಿದ್ದು ಸ್ಥಿತಿವಂತ ಕುಟುಂಬದಲ್ಲಿ ಬೆಳದಿದ್ದು ಸ್ಥಿತಿವಂತ ಕುಟುಂಬದಲ್ಲಿ… ಆದರೆ ಬದುಕಿದ್ದು ಮಾತ್ರ ಘನಘೋರ ಸ್ಥಿತಿಯಲ್ಲಿ… ಅಪ್ಪಾಜಿಗೆ ಒಂದು ಸರ್ಕಾರಿ ನೌಕರಿ… ಉಪಧ್ಯಾಯ ವೃತ್ತಿ ಇದ್ದರೂ ಸಹ ಅವರ ಆರ್ಥಿಕ ಪರಿಸ್ಥಿತಿ ಬಹಳ ದುಸ್ಥರ… ಇದರಿಂದಾಗಿ ನಮ್ಮ ಕುಟುಂಬ ತುಂಬಾ ತುಂಬಾನೆ ಎಡರು ತೊಡರಿಗೆ ಒಳಗಾಗಬೇಕಾಯಿತು…

ನನ್ನ ಬಾಲ್ಯ… ನನ್ನ ಕುಟುಂಬ… ನನ್ನ ವಿದ್ಯಾಭ್ಯಾಸ… ನನ್ನೂರು ದೇವಲಾಪುರ… ಈ ಎಲ್ಲಾ ಕುರಿತು ಬಲವಾದ ಅಂದರೆ ನನ್ನ ಪೂರ್ವಯಾನ’ವನ್ನು ಬರೆದ ಸಂದರ್ಭದಲ್ಲಿ ಮತ್ತೆಷ್ಟು ನನ್ನ ಬದುಕನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ ಮಿತ್ರರೇ… ಆಗಬಹುದಲ್ಲವೆ…? ಇಂತಹ ಹಿನ್ನೆಲೆಯಿಂದ ಒಂದು ನಾನು ಅಲ್ಲಿ ಇಲ್ಲಿ ಎಡತಾಕಿ ಬೆಂಗಳೂರೆಂಬ ಮಹಾನಗರಿಗೆ ಬಿದ್ದು ದಶಾವತಾರಗಳನ್ನೆತ್ತಿ… ಈಗ ಶೂನ್ಯ ಸಂಪಾದನೆಯ ಮಹಾಪೀಠದಲ್ಲಿ ಬಿಜಂಗೈದು… ನನ್ನ… ನನ್ನ ಭವಣೆ ತುಂಬಿದ ಬದುಕನ್ನು… ನನ್ನ ಬದುಕಲ್ಲಿ ಬಂದವರ ನೆನಪುಗಳನ್ನು… ತಂಪುದಾಣಗಳನ್ನು… ಸಿಹಿಯ ಬುಗ್ಗೆಗಳನ್ನು… ನೆಳಲನ್ನು… ಬಿಸಿಲನ್ನು… ಬೇಗೆಯನ್ನು… ಒಡಲ ಕುದಿಯನ್ನು… ಉರಿವ ಕಿಚ್ಚನ್ನು ಕಾಡುವ ಏಕಾಂಗಿತನದ ದುರ್ಭರತೆಯನ್ನು… ಈ ಕತ್ತಲ ಕಡಲನ್ನು… ಈ ಶೋಕ ಸಾಗರವನ್ನು… ಈ ಹಾಲಾಹಲವನ್ನು… ಸಮಪ್ರಮಾಣದಲ್ಲಿ ಸ್ವೀಕರಿಸಿ… ಹೊತ್ತಿ ಉರಿವ ನನ್ನ ಮನವನ್ನು ತಣ್ಣಗೆ ಮಾಡಿಕೊಂಡು ನನ್ನ ಕತೆಯ ಹೇಳುವುದು… ಮಹಾಮನೆಯಮಹಾಯಾನ’ವನ್ನು ಬರೆಯುವುದಿದೆಯಲ್ಲಾ…????
ನನ್ನ ಕತೆಯೊಳಗೆ ನಾನಿದ್ದೇನೆ…

ನನ್ನ ನಾಟಕದೊಳಗೆ ನಾನೂ ಪಾತ್ರಧಾರಿಯೇ…
ಮತ್ತೆ ಬಣ್ಣ ಹಚ್ಚಿ ಕುಳಿತಿದ್ದೇನೆ…
ಬೆಳಕಿಲ್ಲದ ಅರಮನೆಯೊಳಗೆ ಯಾರಿಲ್ಲದೆ ಶತಪತ ತಿರುಗುವ ಸಾಮ್ರಾಟನಂತೆ ಬೆಳಕಿಗಾಗಿ ತಹತಹಿಸಿದ್ದೇನೆ…
ದಾರಿ ಕಾಣದೆ ದಿಕ್ಕು ತೋರದೆ ದಿಗ್ಭಾçಂತನಾಗಿ ಅಮ್ಮನನ್ನರಸಿ ದಶದಿಕ್ಕುಗಳಿಗೂ ಮುಖ ಮಾಡಿ ಕುಳಿತ ಶಿಶುವಂತೆ… ಹೀಗ ಅಮ್ಮನ ಒಡಲೊಳಗೆ ಕುಳಿತಿದ್ದೇನೆ.
ಖಾಲಿ ಕಂದೀಲಿನೊಳಗೆ ನೆನಪುಗಳೆಂಬ ತೈಲ ತುಂಬಿ…
ನನ್ನ ಲೇಖನಿಯನ್ನೇ ಬತ್ತಿ ಮಾಡಿ…
ನನ್ನೊಡಲ ಬೆಂಕಿಯನ್ನೇ… ತಂದಿಲೆಗೆ ತಾಗಿಸಿ…
ಬರಹದ ಬೆಳಕೆಂಬ ಬೆಳಕಿಂದ ಕತ್ತಲ ಕಡಲಲ್ಲಿ ಯಾನಗೈಯ್ಯುತ್ತಿದ್ದೇನೆ ಮಿತ್ರರೇ…
ಅಮ್ಮ ನಮಗಾಗಿ ಬಿಸಿ ಬಿಸಿ ಗಸಗಸೆ ಪಾಯಸ… ಚಿತ್ರಾನ್ನ… ಕೋಸಂಬರಿ… ಗಮಗಮಿಸುವ ಅನ್ನ… ಸೊಪ್ಪು ಬೇಳೆ ಬಸ್ಸಾರು… ಹಪ್ಪಳ… ಉಪ್ಪಿನಕಾಯಿ ಎಲ್ಲವನ್ನು ಸಿದ್ಧಗೊಳಿಸಿದ್ದರು… ಆ ಬಾಲೆಯೂ ಅಮ್ಮನ ಜೊತೆಗೆ ಸಹಕರಿಸಿದ್ದಳು ಎಂದು ಕಾಣುತ್ತದೆ… ಅಪ್ಪಾಜಿಗೆ ಹಾಗೂ ನನಗೆ ಆ ಮೆಳ್ಳಗಣ್ಣಿಯೇ ಊಟ ಬಡಿಸಿದಳು… ಅಮ್ಮ ಅಡಿಗೆ ಮನೆಯಲ್ಲಿ ನಿಂತು ಆ ಹುಡುಗಿಗೆ ನಿರ್ದೇಶನ ಮಾಡುತ್ತಿದ್ದರು. ಮನೆಗೆ ಸೊಸೆ ಬರುವಳೆಂಬ ಸಂತೋಷವಲ್ಲವೇ… ಖುಷಿಯಿಂದ ಇದ್ದರು…

ಅಪ್ಪಾಜಿ… ಊಟ ಮಾಡುತ್ತಲೇ… ಆ ಹುಡುಗಿಯನ್ನು ತಮ್ಮ ಪ್ರಕಾಂಡ ಇಂಗ್ಲಿಷ್ ನೊಂದಿಗೆ ಮಾತಾಡತೊಡಗಿದ್ದರು…
‘ಬೈ ದಿ ವೇ… ವೇರಿಸ್ ಯುವರ್ ನೆಟೀವ್ ಪ್ಲೇಸ್’ ಮಗು… ಆ ಮಗು ಮೌನವಾಗಿತ್ತು…
‘ಯುವರ್ ಮದರ್ ಅಂಡ್ ಫಾದರ್ ವಾಟ್ ದೇ ಆರ್ ಡೂಯಿಂಗ್’… ಮಗು…’ ಸ್ವಲ್ಪ ಸಾರಾಕಮ್ಮ ಮಗು… ಆ ಮಗು ಮೌನವಾಗೇ ಸಾರಾಕಿತು… ‘ಆರ್ ಯು ನೋ ಇಂಗ್ಲಿಷ್… ಇನ್ನು ಸ್ವಲ್ಪ ಸಾರಾಕಮ್ಮ’ ಆ ಮಗುವಿಗೆ ನನ್ನ ಅಪ್ಪಾಜಿಯವರ ಇಂಗ್ಲಿಷ್ ಅದೇನು ಅರ್ಥವಾಯಿತೋ ನನಗೆ ಗೊತ್ತಿಲ್ಲ ಕಣ್ರೀ… ಅವಳು ನಸುನಗುತ್ತಾ ‘ನಾನು ಹಿಂದೀ ಟೀಚರ್ ಅಪ್ಪ’ ಅಂದಿತು. ಓ ಐಸಿ… ಐ ಯಾಮ್ ಇಂಗ್ಲಿಷ್ ಟೀಚರ್ ಅಂಡ್ ಮ್ಯಾಥ್ಮೇಟೆಕ್ಸ್ ಟೀಚರ್ ಯು ನೋ… ವೂ ಈಸ್ ಯುವರ್ ಹೆಡ್ಮಾಸ್ಟರ್… ವಾಟ್ ಈಸ್ ಇಸ್ ನೇಮ್… ಸ್ವಲ್ಪ ಅನ್ನ ಇಟ್ಟು ಮಜ್ಜಿಗೆ ಹಾಕ್ಬಿಡಮ್ಮಾ…’ ಹೌ ಈಸ್ ಮೈ ಸನ್… ಯು ನೋ… ಹೀ… ಈಸ್ ಎಂ.ಎ. ಗ್ರಾಜ್ಯೂಯೇಟ್ ಅಂಡ್ ಹೀ ರೋಟ್ ಪಯಮ್ಸ್… ಯೂ ನೋ… ಹೀಗೆ ಸಾಗಿತ್ತು ನಮ್ಮ ಅಪ್ಪಾಜಿಯವರ ಇಂಗ್ಲಿಷ್ ಪಾಂಡಿತ್ಯ… ಯಾವಾಗ ಅಡಿಗೆ ಮನೆಯಿಂದ ಅಮ್ಮಅದೇನು ನಿಮ್ದು… ಮನೆಗೆ ಬಂದೋರತ್ರ ಎಲ್ಲಾ ನಿಮ್ಮ ಇಂಗ್ಲಿಷ್ ಬಾರಟ್ಲಾ ಬಿಡ್ತಿರಲ್ಲಾ… ಸುಮ್ನೆ ಕನ್ನಡದಲ್ಲೇ ಮಾತಾಡಕ್ಕಾಗಲ್ವೇ…’ ಎಂದು ದುಮ್ಕು ಹಾಕಿದಾಗ ಅಪ್ಪಾಜಿಯ ಬಾಯಿಂದ ಕನ್ನಡ ಪದಗಳು ಹೊರಬರಲು ಪ್ರಾರಂಭಿಸಿದವು.

‘ಓಹೋ… ರೀ… ನಮ್ಮ ಅಪ್ಪಾಜಿಯ ಇಂಗ್ಲಿಷ್ ಕತೆಯ ಏನ್ ಹೇಳಿಲಿ… ನಮ್ಮ ಅಪ್ಪಾಜಿಯ ಅಪ್ಪ ಅಂದ್ರೆ ನಮ್ಮ ತಾತ ಸಾಹುಕಾರ್ ಶಾಂತ ಮಲ್ಲಪ್ಪನವರು ತಮ್ಮ ಮಗನನ್ನು ಆಗಿನ ಬಾರಟ್ಲಾ’ ಓದಿಸಿ ದೊಡ್ಡಬ್ಯಾರಿಸ್ಟರ್’ ಮಾಡಿಸಬೇಕು ಅಂದುಕೊಂಡಿದ್ರಂತೆ… ಏನ್ ಮಾಡೋದು ನನ್ನ ದುರಾದೃಷ್ಟ. ಬ್ಯಾರಿಸ್ಟರ್ ಮಗನಾಗಿ ಹುಟ್ಟೋದಕ್ಕೆ ಬದ್ಲಿಗೆ ಮಾಸ್ಟರ್’ ಮಗನಾಗಿ ಹುಟ್ಟಬೇಕಾಯಿತು. ‘ಇರ್ಲಿ ಬಿಡಿ… ನಮ್ಮ ಅಪ್ಪಾಜಿ ಮಾಸ್ಟರ್ ಆದ್ರೂ ಬ್ಯಾರಿಸ್ಟರ್ ತರನೇ ಇಂಗ್ಲಿಷ್ ಮಾತಾಡೋರು ಕಣ್ರೀ… ಮಗು… ನಮ್ದು ಊಟ ಮುಗಿಯಿತು… ನಮ್ಮ ಮನೆಯರಿಗೆ ಹೇಳಿ ಎಲೆ, ಅಡಿಕೆ ತಾಟು ತಂದ್ಕೊಡವ್ವ… ಮೇಲೆ ನೀವೂ ಊಟ ಮಾಡ್ಬಿಡಿ’… ಎಂದರು.

ಅಮ್ಮನ ದುಮ್ಕಿ ಕೆಲಸ ಮಾಡಿತ್ತು… ಅಪ್ಪಾಜಿಯಿಂದ ಕನ್ನಡ ಭಾಷೆ ಹೊರಹೊಮ್ಮಿತು… ನಗೆ ಮಲ್ಲಿಗೆಯ ಚೆಲ್ಲಿತು ಆ ಹುಡುಗಿ…
ಆ ಮಗು ಹಾಗೂ ಅಮ್ಮನೂ ಊಟ ಮುಗಿಸಿದರು. ನಾನು ಮತ್ತು ಆ ಬಾಲೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲು ಸಿದ್ಧತೆ ಮಾಡಿಕೊಂಡೆವು.
ಅಮ್ಮ ಆ ಮೆಳ್ಳಗಣ್ಣಿಗೆ ಹೂ ಮುಡಿಸಿ… ಕುಂಕುಮ ಕೊಟ್ಟು ಆಶೀರ್ವದಿಸಿದರು. ನಾನು ಮತ್ತೆ ಆ ಬಾಲೆ ಅಪ್ಪಾಜಿಯ ಪಾದಕ್ಕೆರಗಿದವು.
‘ಗಾಡ್ ಬ್ಲೆಸ್ ಯೂ…’ ಅಪ್ಪಾಜಿಯಿಂದ ಮತ್ತೆ ಇಂಗ್ಲಿಷ್…
ಅರ್ಡ್ ಮಲ್ಲಿಕಾರ್ಜುನ ಅಂಡ್ ಮಾದಪ್ಪ…
ಅಂಥ ಅದೇನೋ ಹೇಳಲು ಹೊರಟವರು ನನ್ನಮ್ಮ ನೋಡಿ ಸುಮ್ಮನಾದರು…
ನಾವು ನಾಗಮಂಗಲದ ಮನೆಯಿಂದ ಹೊರಟೆವು… ಆ ಮೆಳ್ಳಗಣ್ಣಿಯು ಆ ಮನೆಯಿಂದ ಬರುವಾಗ ನನ್ನಮ್ಮನಿಂದ ಅಪ್ಪಣೆ ಪಡೆದು ನನ್ನದೊಂದು ಫೋಟೋವನ್ನು ನನಗೆ ಗೊತ್ತಿಲ್ಲದಂತೆಯೇ ಎಗರಿಸಿಕೊಂಡು ಬಂದಿದ್ದಳು…
ಬಸ್ಸಿನಲ್ಲಿ ಕುಳಿತಾಗ ಆ ಫೋಟೋವನ್ನು ನನಗೆ ತೋರಿಸಿದಳು…
ಅದೇ ಫೋಟೋ ಅದು…!
ಅದರದೇ ಪ್ರತಿ ಇದು…!
ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲರು ನನ್ನನ್ನು ತಮ್ಮ ಮನೆಗೆ ಕರೆಸಿಕೊಂಡಾಗ ನಾನು ಇದೇ ಫೋಟೋದ ಪ್ರತಿಯನ್ನು ಅವರಿಗೆ ಕೊಟ್ಟು ಬಂದಿದೆ…
ಅದೇ ಇದು…!!!

‍ಲೇಖಕರು Admin

August 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: