ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಮನೆ ಅಂಕಣ – ತಲೆತಗ್ಗಿಸಿದ ಗಂಗೆ ಹಂಸಗಮನೆಯಾಗಿ ನಡೆದು ಬಂದಳು ಹಸೆಮಣೆಯೆಡೆಗೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

26

ಮಾಧವನ್ ಕಾರಿನಲ್ಲಿ ಹೊರಟ ಮದುವೆ ದಿಬ್ಬಣ ದೊಡ್ಡ ಬಸವಣ್ಣನ ದೇವಾಲಯದ ಮುಂದೆ ನಿಂತಿತು… ನಮ್ಮ ಮನೆಯ ದೇವರು… ಕುಲದ ದೇವರು ಬಸವನಲ್ಲವೆ… ನಾನು ಹಿಂದೆ ತಮಗೆ ಹೇಳಿದ್ದೆ ನಮ್ಮ ಪೂರ್ವಿಕರು ದವಸ ಧಾನ್ಯಗಳನ್ನು ಹಸಿವೆ ಚೀಲಗಳಲ್ಲಿ ತುಂಬಿಕೊಂಡು ಅವುಗಳನ್ನು ಬಸವಗಳ (ಎತ್ತು) ಮೇಲೆ ಹಾಕಿಕೊಂಡು ಊರೂರು ತಿರುಗಿ ವ್ಯಾಪಾರ ಮಾಡುತ್ತಿದ್ದರೆಂದು… ಹಾಗಾಗಿ ತಮ್ಮ ಬದುಕಿಗೆ ಸಹಾಯವಾಗಿದ್ದ… ತಮ್ಮ ಪ್ರಾಣಗಳೇ ಆಗಿದ್ದ `ಬಸವ’ಗಳನ್ನು ಪೂಜಿಸುತ್ತಿದ್ದರೆಂತಲೂ… ಹಾಗೆ ಶ್ರೀಶೈಲದ ಕಡೆಯಿಂದ ಬಂದವರು ಬೆಂಗಳೂರಿನ ಮಾಮೂಲು ಪೇಟೆಯ ಬಸವನನ್ನು…

ಆನಂತರ ಬೆಂಗಳೂರಿನ ಸುಂಕೇನಹಳ್ಳಿಯ ದೊಡ್ಡ ಬಸವನನ್ನು ಪೂಜಿಸಿದವರು…. ಆನಂತರ ಮತ್ತೇ ಉತ್ತರಾಭಿಮುಖವಾಗಿ ಪ್ರಯಾಣ ಬೆಳೆಸಿ ದೇವಲಾಪುರ… ಅಮೃತೂರು ಹುಲಿಯೂರ ದುರ್ಗೆ… ಬಸರಾಳು… ಜಟಕ… ಬಿದಕಕೋಟೆ… ಕ್ಲೋಸ್‌ಪೇಟೆ ಇಲ್ಲೆಲ್ಲ ನೆಲೆ ನಿಂತು ಕವಲುಗಳಾಗಿ ಒಡೆದು ಅಲ್ಲಿಯ ಸಂಬಂಧಗಳನ್ನು ಬೆಳೆಸಿ… ಬೆರೆತವರು ಅಂತಾ… ಅವರೆಲ್ಲ ಈಗಲೂ ಸಹ ನಾಗಮಂಗಲ ಮತ್ತೆ ದೇವಲಾಪುರದ ರಸ್ತೆಯಲ್ಲಿರುವ ಹಾದಿ ಬಸವಣ್ಣನನ್ನು ಹಾಗೂ ನಾಗಮಂಗಲ ಮತ್ತೆ ಬಸರಾಳು ರಸ್ತೆಯಲ್ಲಿರುವ ಯಗಟಿ ಬಸವಣ್ಣನನ್ನು ಶುಭ ಕಾರ್ಯಗಳಲ್ಲಿ ಪೂಜಿಸುತ್ತಾರೆ ಅಂತಾ… ಹಾಗೆಯೇ ನಾವೂ ಸಹ ಬಸವಣ್ಣನಿಗೆ ನಡೆದುಕೊಳ್ಳುವುದು ನಮ್ಮ ಪದ್ಧತಿ… ನಾನು ಬೆಂಗಳೂರಿನಲ್ಲೇ ವಾಸವಿದ್ದವನಾದ್ದರಿಂದ ನಮ್ಮ ಕುಟುಂಬವೂ ಬೆಂಗಳೂರಿನಲ್ಲೆ ಇದ್ದದ್ದರಿಂದ ನಮ್ಮ ಪೂರ್ವಿಕರು ನಡೆದುಕೊಳ್ಳುತ್ತಿದ್ದ ದೇವಾಲಯಕ್ಕೆ ಶುಭಕಾರ್ಯದ ಮುನ್ನಾ ಪೂಜೆಯನ್ನು ಮಾಡಿಸಲು ದೊಡ್ಡ ಬಸವಣ್ಣನ ಗುಡಿಗೆ ಬಂದೆವು… ವಿಘ್ನನಿವಾರಕ ದೊಡ್ಡ ಗಣಪತಿಗೆ ಹಾಗೂ ದೊಡ್ಡ ಬಸವನಿಗೆ ಪೂಜೆ ಮಾಡಿಸಿ… ಶುಭ ಫಲವನ್ನು ಬೇಡಿ ಮತ್ತೆ ಮಾಧವನ್ ಕಾರಿನಲ್ಲಿ ಕುಳಿತೆವು…

ಮಾಧವನ್ ಕಟ್ಟಾ ಕಮ್ಯೂನಿಷ್ಟನೂ… ಪ್ರಗತಿಪರ ಚಳವಳಿಗಳಲ್ಲಿ ಭಾಗಿಯಾದವನು ಹಾಗೂ ಚರಿತಾರ್ಥ ಚಿಕ್ಕಮಗಳೂರು ಎಲೆಕ್ಷನ್‌ನಲ್ಲಿ ಇಂದಿರಾಗಾಂಧಿಯ ವಿರುದ್ಧ ನಿಂತ ಹೋರಾಟಗಾರರ ಜೊತೆಗಿದ್ದು ಬಹಳ ಕ್ಲಿಷ್ಟ ಸಂದರ್ಭಗಳಲ್ಲಿ ಅವರನ್ನೆಲ್ಲಾ ತನ್ನ ಕಾರಿನಲ್ಲಿ ಕೂರಿಸಿಕೊಂಡು ರಕ್ಷಣೆ ಮಾಡುತ್ತಾ ದಡ ಸೇರಿಸುತ್ತಿದ್ದವನು…. ಕಾರ್ಮಿಕ ಚಳವಳಿ… ಡಿವೈಫೈಯ್… ಜ್ಞಾನವಿಜ್ಞಾನ ಜಾಥಾ… ಮಾನವ ಸರಪಳಿ ಇಂತಹ ಹಲವು ಕಾಳಜಿಗಳಲ್ಲಿ ಭಾಗಿಯಾಗಿದ್ದವನು… ಅವನು ದೇವಸ್ಥಾಕ್ಕೇನು ಬರಲಿಲ್ಲ… ನೀವೂ ಹೋಗಿ ಬನ್ನಿಯಪ್ಪಾ… ನಾನು ಬರುವುದಿಲ್ಲೇ ಎಂದು ಹೇಳುತ್ತಾ ದೇವಾಲಯದಿಂದ ದೂರವೇ ನಿಂತವನು… ನನಗೂ ಅಂತಹವೆಲ್ಲವೂ ಇಷ್ಟವಾದರೂ… ಪ್ರಕೃತಿಯೇ ದೊಡ್ಡ ದೇವರು ಎಂದು ನಂಬಿದವನು… ಮಾನವೀಯತೆಯೇ ದೊಡ್ಡ ಧರ್ಮ ಎಂದು ನಂಬಿದವನು ನಾನು… ಆದರೆ ಏನು ಮಾಡುವುದು ಕುಟುಂಬ… ಮನೆ… ಈ ವಾತಾವರಣಗಳಿಂದ ದೂರವಾಗಲಾಗಲಿಲ್ಲ ನನಗೆ… ಅದನ್ನೆಲ್ಲಾ ನಾನು ಪೂರ್ಣಪ್ರಮಾಣದಲ್ಲಿ ಧಿಕ್ಕರಿಸಲೂ ಆಗಲಿಲ್ಲ… ಅನೇಕ ಭಾರತೀಯ ಮನಃಸ್ಥಿತಿಯೇ ಹಾಗೆ…

ಭಾರತೀಯ ಯುವ ಮನಸ್ಸುಗಳಲ್ಲಿ ಇಂತಹ ಅನೇಕ ಗೊಂದಲಗಳಿವೆ. ಭಾರತೀಯ ಸಮಾಜವೇ ಬಹಳ ಸಂಕೀರ್ಣವಾದದು. ಇಲ್ಲಿ ಸರಳವಾಗಿ ಬದುಕಲು ತಿಣಕಾಡಬೇಕು… ನನಗೂ ಈ ಎಲ್ಲಾ ಗೊಂದಲಗಳು ಕಾಡಿದ್ದುಂಟು… ಮಿತ್ರರೇ… ಆದರೆ ಈಗ ನನ್ನ ನಿಲುವುಗಳು ಸ್ಪಷ್ಟವಾಗಿವೆ… ಅತ್ತಲೂ ಇಲ್ಲದ ಇತ್ತಲೂ ಅಲ್ಲದೆ ಅಥವಾ ಎಡಬಿಡಂಗಿಯೂ ಅಲ್ಲದೆ ನೇರವಂತಿಕೆ ನನ್ನದು… ಸರಿ ಇರುವುದನ್ನು ಸರಿ ಎನ್ನುತ್ತಾ… ತಪ್ಪು ಇರುವುದನ್ನು ತಪ್ಪು ಎನ್ನುತ್ತಾ…. ಮೋಟುಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡದೇ… ಹಾಗೆ ನಡೆದುಕೊಳ್ಳದೆ… ಹಾಗೂ ಸ್ವವಿಮರ್ಶೆಯನ್ನು ಮಾಡಿಕೊಳ್ಳುತ್ತಾ… ನನ್ನ ತಪ್ಪುಗಳನ್ನೂ ನಾನೇ ಪ್ರಶ್ನಿಸಿಕೊಳ್ಳುತ್ತಾ ಸರಿದಾರಿಗೆ ಬರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾ (ಎಷ್ಟೇ ಎಚ್ಚರವಾಗಿದ್ದರೂ ಮನುಷ್ಯನಾದವನು ಕೆಲವೊಮ್ಮೆ ತಪ್ಪು ಮಾಡುವುದು ಸಹಜ ಕಣ್ರಪ್ಪ) ಆ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ `ಆನು ಒಲಿದಂತೆ ಹಾಡುತ್ತಾ… ನುಡಿಯುತ್ತಾ’ ಇರುವುದನ್ನು ಮೈಗೂಡಿಸಿಕೊಂಡಿದ್ದೇನೆ.

ನಾನು ಮತ್ತೊಮ್ಮೆ ಹೇಳುತ್ತೇನೆ… ಭಾರತೀಯ ಸಮಾಜ ಎಷ್ಟು ಸಂಕೀರ್ಣವಾದದ್ದು ಎಂದರೆ… ಈ ದೇಶದಲ್ಲಿ ನಾವು ದೇವರು ಹಾಗೂ ಸುಳ್ಳುದೇವರುಗಳು, ನಂಬಿಕೆಗಳು ಹಾಗೂ ಮೂಢನಂಬಿಕೆಗಳು… ಜಾತಿ… ಧರ್ಮದ ಸಂಕೋಲೆಗಳು ಎಡ ಚಿಂತನೆಗಳು ಹಾಗೂ ಬಲಚಿಂತನೆಗಳು… ಮೇಲು ಹಾಗೂ ಕೀಳು…. ಬಡವ ಹಾಗೂ ಶ್ರೀಮಂತ… ಶ್ರೇಷ್ಟತೆಯ ವ್ಯಸನಗಳು… ಶೀಲ ಹಾಗೂ ಅಶ್ಲೀಲಗಳ ತೆಳು ಪದರಗಳು…. ಸ್ನೇಹ ಮತ್ತು ದ್ವೇಷಗಳು… ವಂಚನೆ ಹಾಗೂ ನಿರ್ವಂಚನೆಗಳು ಆಳವಾದ ಇಂತಹ ಅನೇಕ ತಕಲಾಟಗಳು… ಗೊಂದಲಗಳು… ಸಂಘರ್ಷಗಳು ಹಾಗೂ ಸಂಕೀರ್ಣ ವ್ಯವಸ್ಥೆ ಭಾರತದ್ದು… ಇವೆಲ್ಲ ಇಲ್ಲೇ ಬೇರೂರಿವೆ. ಇವುಗಳಿಂದ ತಪ್ಪಿಸಿಕೊಂಡು ಬದಕಲು ಆಗುವುದೇ ಇಲ್ಲ. ಅನೇಕ ಗೋಜಲುಗಳ ಬಲೆ ಇದು… ಇಲ್ಲಿ ನೇರ ನುಡಿ… ನಡೆಯಿಂದ ಬದುಕಲು ತುಂಬಾ ಪ್ರಯಾಸ ಪಡಬೇಕು… ತುಂಬಾ ತುಂಬಾ ಕಷ್ಟ.

ಗೆಳೆಯರೇ ಮುಖ್ಯ ಕಥನವನ್ನು ಬಿಟ್ಟು ನಾನು ವಿಚಾರದೆಡೆಗೆ ಬಂದು ಬಿಟ್ಟೆ… ಬರವಣಿಗೆಯ ವಿಸ್ಮಯವೇ ಹಾಗೂ ಇದರ ಲೋಪವೇ ಹಾಗೆ ಕಣ್ರೀ ನನಗಂತೂ ಈ ಸಮಸ್ಯೆ ಕಾಡದೇ ಇರದು… ನಾನೋ ಮೂಲತಃ ಬರಹಗಾರನಲ್ಲ… ನಾನು ರಂಗಭೂಮಿಯ ಹಿನ್ನೆಲೆಯಿಂದ ಬಂದವನು… ನನಗೆ ಬರವಣಿಗೆ ಅನ್ನುವುದು ಗೊತ್ತಿಲ್ಲ… ಇನ್ನು ಅಕಾಡೆಮಿಕ್ ಅಥವಾ ಸಿದ್ಧಮಾದರಿಯ ಬರವಣಿಗೆ ಎಲ್ಲಿ ಗೊತ್ತಿರಬೇಕೇಳಿ… ನನಗೆ ಕಂಡಂತೆ… ನನಗೆ ದಕ್ಕಿದಂತೆ ಬರೆಯುವವನು ನಾನು… ಓದುಗರಾದ ತಾವು ಇವನ್ನು ಒಪ್ಪಿಸಿಕೊಳ್ಳಬೇಕು ಮಿತ್ರರೇ…

ದೊಡ್ಡ ಬಸವಣ್ಣನ ಗುಡಿಯಿಂದ ನಾವು ಗುರುನರಸಿಂಹ ಕಲ್ಯಾಣ ಮಂಟಪಕ್ಕೆ ಬಂದೆವೆ… ನಮ್ಮ ದಿಬ್ಬಣವನ್ನು ಎದುರುಗೊಳ್ಳಲು ಹೆಣ್ಣಿನವರ ಮನೆಯವರ ಕಡೆಯಿಂದ ಸರಬರ ಓಡಾಟಗಳು ಶುರುವಾದವು… ಯಾರೋ ಒಬ್ಬರು ‘ಓಲಗಾ ಓಲಗಾ’ ಎಂದರು… ಮತ್ತೊಬ್ಬರು ‘ಕಳಸ ತನ್ನಿ… ಕಳಸ ತನ್ನಿ’ ಎಂದರು… ಮಗದೊಬ್ಬರು… ಪೂಜಿಸಿದ ತೆಂಗಿನಕಾಯಿಯನ್ನು ತಂದು ನನ್ನ ಕೈಗಿತ್ತರು. ತೆಂಗಿನಕಾಯಿ ಕೊಡುವುದು ಈಗಲ್ಲ ವೀಳ್ಯೆ ಶಾಸ್ತ್ರದಲ್ಲಿ ಎಂದು ಮಗದೊಬ್ಬರೆಂದು ಆ ತೆಂಗಿನಕಾಯಿಯನ್ನು ಅಲ್ಲಿ ಬಂದವರೊಬ್ಬರು ಹಿಂಪಡೆದರು… ಬೆಳ್ಳಿ ಚೊಂಬನಲ್ಲಿ ಬಿಸಿ ನೀರು ತುಂಬಿ ಹುಡುಗಿಯ ಅಪ್ಪ ಓಡಿ ಬಂದು ನನ್ನ ಕಾಲು ತೊಳೆದರು… ಆ ನಂತರ ನಡೆಯುಡಿಯ ಹಾಸಿದರು… ಆ ನಡೆಯುಡಿಯ ಹಾಸಿನ ಮೇಲೆ ನಾವು ಬಿಜಯಂಗೈದವು… ನಮ್ಮ ಮುಂದೆ ಕಳಸ ಹಿಡಿದ ಮಂಗಳಮ್ಮನವರು ಅವರ ಕೆಲಬಲಗಳಲ್ಲಿ ಫಲ ತಾಂಬೂಲಗಳು ಅರಿಸಿನ-ಕುಂಕುಮದ ಹೂವುಗಳು ತುಂಬಿದ ತಟ್ಟೆಗಳನ್ನು ಹಿಡಿದಿದ್ದ ಮುತ್ತೈದೆಯರು ನಡೆದುಬಂದರು. ಓಲಗದವರು ನಾದಸ್ವರ ನುಡಿಸುತ್ತಿದ್ದರು. ಅದರ ಜೊತೆಗೆ ಡೋಳು… ತಾಳಗಳು ಸಾಥ ನೀಡಿದವು.

ಗಂಧ ಅಕ್ಷತೆ ತನ್ನಿ
ಗಿಂಡಿಯಲಿ ಉದುಕುವ ತನ್ನಿ
ತೆಂಗಿನಕಾಯಿ ತೆಗೆತನ್ನಿ
ತೆಗೆತನ್ನಿ ಎನುತಲಿ ಪುರೋಹಿತರು
ಮಂತ್ರಗಳ ನಗುತಲಿ ನುಡಿದಾರೊ
ಹೂವು ಅಕ್ಷತೆ ತನ್ನಿ
ಪೂಜಿಯಲಿ ಉದುಕವ ತನ್ನಿ
ಬಾಳೆಯ ಹಣ್ಣು ತೆಗೆತನ್ನಿ
ತೆಗೆತನ್ನಿ ಎನುತಲಿ ಪುರೋಹಿತರು
ಮಂತ್ರಗಳ ನಗುತಲಿ ನುಡಿದಾರೋ

ಈಗ ನೋಡಿ ಅದು ಮದುವೆ ಮನೆ ಎನ್ನಿಸಿತು… ಆ ಛತ್ರಕ್ಕೊಂದು ಕಳೆಬಂದಿತು. ಎಲ್ಲೆಡೆಯೂ ನಗೆ ಚೆಲ್ಲಿತು… ಸಂಭ್ರಮವೋ ಸಂಭ್ರಮ… ಸಡಗರವೋ ಸಡಗರ… ಓಡೋಡೋ ಬಂದಳು ನನ್ನ ಕಿರಿಯ ನಾದಿನಿ ರೇಣುಕಮ್ಮ… `ಈಗ ಬಂದ್ರ ಭಾವ…’ ಎಂದು ನನ್ನ ಕೈ ಹಿಡಿದು ಪ್ರೀತಿ ತೋರುತ್ತಾ ನನ್ನ ಅಮ್ಮ ಅಪ್ಪಾಜಿಯವರನ್ನು ಮಾತಾಡಿಸಿದಳು… ನನ್ನ ಭಾವ ಮೈದ ರೇಣುಕಪ್ಪನು… ಮಾವನವರೂ ಪ್ರೀತ್ಯಾಧರಗಳನ್ನು ತೋರಿ ಸ್ವಾಗತಿಸಿದರು… ನಮ್ಮ ಮಾವನ ಮನೆಯಲ್ಲೇ ವಾಸವಿದ್ದ ಸೋದರ ಸಂಬಂಧಿ ಸೋಮಣ್ಣನು… ಹಾಗೂ ಅವರ ತಂದೆಯವರು ಹಾಗೂ ಪ್ರಕಾಶನಗರದಲ್ಲಿ ವಾಸವಿದ್ದ ಸಿದ್ದಕ್ಕಯ್ಯನವರ ಕುಟುಂಬದವರು ಮತ್ತು ಬೊಗಳುಗುಂಟಿಯಲ್ಲಿ ವಾಸವಿದ್ದ ಪೊಲೀಸ ಅವರ ಕುಟುಂಬವೂ ಹಾಗೂ ನನ್ನ ಅತ್ತೆಯ ತೌರೂರಾದ ಮೈಲನಹಳ್ಳಿಯ ಸಂಬಂಧಿಕರು ಎಲ್ಲರೂ ಬಂದು ನನ್ನ ಮಾತಾಡಿಸಿದರು.

ಹಾಗೆಯೇ ನನ್ನ ತಾಯಿಯ ಕುಟುಂಬದ ಅವರ ಅಕ್ಕ ತಂಗಿಯರಾದ ವೀರಾಂಭ ಮುದ್ದಪ್ಪನವರು… ಕೆ.ಆರ್. ನಗರದ ರತ್ನಕ್ಕಯ್ಯ ಹಾಗೂ ಬಿ.ವೈ. ಮಾದಪ್ಪನವರು, ತುಮಕೂರಿನ ಚಿಕ್ಕಮ್ಮ ಸ್ವರ್ಣಕ್ಕಯ್ಯ ಪಾಲನೇತ್ರಪ್ಪ… ಮೈಸೂರಿನ ಚಿಕ್ಕಮ್ಮ ಅಂಜುಜಾ… ಕೆ.ವೈ. ಶಿವಕುಮಾರ್ ಹಾಗೂ ನನ್ನ ಸೋದರ ಮಾವಂದಿರಾದ ಸಿ.ಆರ್. ಚಂದ್ರಶೇಖರ್… ಸುಂದ್ರಮ್ಮ, ಸಿ.ಆರ್. ತಮ್ಮಯ್ಯಪ್ಪ… ಮಣಿ… ಸಿ.ಆರ್. ಪ್ರೇಮಕುಮಾರ್… ಪುಷ್ಪಾ ಅವರ ಮಕ್ಕಳುಗಳು ಹಾಗೂ ನನ್ನ ತಂದೆಯ ಕುಟುಂಬದ ದೇವಲಾಪುರದ ನನ್ನ ಅಣ್ಣಂದಿರಾದ ಪರಮೇಶಣ್ಣ… ಜಗಣ್ಣ… ಸ್ವರ್ಣ, ರಾಜಣ್ಣ… ನನ್ನ ತಮ್ಮನಾದ ಸಚ್ಚಿದಾನಂದ ಕುಟುಂಬ ತುಮಕೂರಿನಿಂದ ಬಸವಣ್ಣ ಮತ್ತೆ ಕುಟುಂಬ ಹಾಗೂ ನಾಗಣ್ಣ ಮತ್ತು ರೇಣುಕಾ… ಬೆಂಗಳೂರಿನ ವಾಸವಿದ್ದ ಅಣ್ಣ ಶಾಂತಣ್ಣ ಮತ್ತೆ ಕುಟುಂಬ ಹೀಗೆ ನನ್ನೆಲ್ಲಾ ಬಂಧು ಬಳಗವೂ ನನ್ನನ್ಹರಸಲು… ಶುಭ ಕೋರಲು ಮದುವೆಗೆ ಆಗಮಿಸಿದ್ದರು.

ನನ್ನ ದೊಡ್ಡಕ್ಕ ಅನ್ನಪೂರ್ಣ ದೊಡ್ಡ ಭಾವ ವರನಂಜುಂಡಪ್ಪನವರು… ಮದುವೆ ನೇತೃತ್ವ ವಹಿಸಿದ್ದ ನೆಲಮಂಗಲದ ಭಾವ ರಾಜಶೇಖರ್ ಅಕ್ಕ ಸುಮಂಗಲಮ್ಮ… ಹಾಗೂ ಬಿಡದಿಯಲ್ಲಿ ವಾಸವಿದ್ದ ನನ್ನ ಮೂರನೇ ಅಕ್ಕ ವಿಜಯಮ್ಮ ಅವರ ಯಜಮಾನರಾದ ಮಲ್ಲಪ್ಪನವರು ಹಾಗೂ ನನ್ನ ತಮ್ಮ ಡಿ.ಬಿ. ಉದಯಕುಮಾರ್ ಇವರುಗಳ ಓಡಾಟ ಮದುವೆ ಮನೆಯಲ್ಲಿ ಹೆಚ್ಚಿತ್ತು. ಎಲ್ಲರೂ ಎಲ್ಲರನ್ನು ಮಾತಾಡಿಸುತ್ತಾ… ಹರ್ಷ ವ್ಯಕ್ತಪಡಿಸುತ್ತ… ನಗೆ ಚೆಲ್ಲುತ್ತಾ ಎಲ್ಲರನ್ನು ಸ್ವಾಗತಿಸುತ್ತಿದ್ದರು…

ಇಡೀ ಮದುವೆ ಮನೆ ಮಾತುಗಳ ಮನೆಯಾಗಿತ್ತು… ಮಾತು ಮಾತು ಮಾತು ಎಲ್ಲೆಡೆಯೂ ಮಾತೇ ಆಗಿತ್ತು… ಬಹುದಿನಗಳಿಂದ ಆಡಬೇಕೆಂದು ತುಂಬಿಟ್ಟುಕೊಂಡಿದ್ದ ಮಾತುಗಳು ನುಡಿಗಳ ನದಿಯಾಗಿ ಹರಿಯುತ್ತಿತ್ತು…
ಅಲ್ಲಿ ಮಾತು… ಇಲ್ಲಿ ಮಾತು… ಎಲ್ಲೆಲ್ಲೂ ಮಾತು ಸಂಭ್ರಮದ ಮಾತು ಸಡಗರದ ಮಾತು ನಗೆ ಮಾತುಗಳು ಚಲ್ಲಾಡುತ್ತಿದ್ದವು.

ಮದುವೆ ಮಂಟಪದಲ್ಲಿ ಮಾತು…
ಊಟದ ಅಂಗಳದಲ್ಲಿ ಮಾತು
ಅಡಿಗೆ ಮನೆಯಲ್ಲಿ ಮಾತು
ಹೆಣ್ಣು ಗಂಡುಗಳ ಕೊಠಡಿಯಲ್ಲಿ ಮಾತು
ಮಾತು ನಗೆ… ನಗೆ ಮಾತು ಎಲ್ಲೆಲ್ಲೂ ತುಂಬಿತ್ತು…
ಗಂಗೆ ಅವಳ ಕೋಣೆಯಲ್ಲಿ ಸಿಂಗರಿಸಿಕೊಳ್ಳುತ್ತಿದ್ದಳು.
ನಾನು ನನ್ನ ಕೋಣೆಯಲ್ಲಿ ಕಚ್ಚೆ ಪಂಚೆಯುಟ್ಟು ಕುಳಿತಿದ್ದೆ…
ನನ್ನೆದೆಯೊಳಗೆ ಅವಳ ಮಾತಿನ ದನಿಯು…
ಅವಳ ಕಣ್ಣೊಳಗೆ ನನ್ನ ಮಾತಿನ ಉಸಿರು…
ಇನಿ ದನಿಯಾಗಿ ಸವಿದನಿಯೂ ನಲಿಯುತ್ತಿತ್ತು…

ಪುರೋಹಿತರು ಕೂಗಿದರು ಎಲ್ಲಿ ವರ… ವರನನ್ನು
ಮಂಟಪಕ್ಕೆ ಕರ‍್ಕೊಂಡು ಬರೋಣವಾಗಲಿ…
ಮಂಗಳ ವಾದ್ಯ ಮತ್ತೆ ಮೊಳಗಿತು…

ಮಹಾಗಣಪತಿಂ ಮನಸಾ ಸ್ಮರಾಮಿ
ವಸಿಷ್ಠ ವಾಮದೇವಾದಿ ವಂದಿತೆ
ಮಹಾಗಣಪತಿಂ…

ಮಹಾದೇವ ಸುತಂ ಗುರುಗುಹನುತಂ
ಮಾರಾಕೋಟಿ ಪ್ರಕಾಶಂ ಶಾಂತಂ
ಮಹಾಕಾವ್ಯ ನಾಟಕಾದಿ ಪ್ರಿಯಂ
ಮೂಷಕ ವಾಹನಂ ಮೋದಕ ಪ್ರಿಯಂ
ಮಹಾಗಣಪತಿಂ… ಮನಸಾ ಸ್ಮರಾಮಿ
ವಸಿಷ್ಠ ವಾಮದೇವಾದಿ ವಂದಿತ
ಮಹಾಗಣಪತಿಂ…

ಪ್ರಥಮ ಪೂಜಿತ ಗಣಪನ ಸ್ತೋತ್ರ ನಾಗಸ್ವರದಲಿ
ನಾದ ತರಂಗದ ಅಲೆಗಳನ್ನು ಮಂಟಪದಲ್ಲಿ ತೇಲಿಸಿತು…

ನನ್ನನ್ನು ನನ್ನ ಕೋಣೆಯಿಂದ ಗುರುಹಿರಿಯರು ಹಸೆಮಣೆಯೆಡೆಗೆ ಕರೆದು ತಂದರು…
ತಲೆ ತಗ್ಗಿಸಿದ ಗಂಗೆ ಹಂಸಗಮನೆಯಾಗಿ ನಡೆದು ಬಂದಳು
ಹಸೆಮಣೆಯೆಡೆಗೆ…

ನಾನು ಅವಳೆಡೆಗೆ ಕಳ್ಳನೋಟ ಬೀರಿದೆ…
ನನಗೆ ನಾನೇ ಹುಸಿ ನಗೆ ನಕ್ಕೆ…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

11 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading