ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಂತೇಶ ಪಾಟೀಲ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’

ಡಾ ಮಹಾಂತೇಶ ಪಾಟೀಲ

ರೇವಣಸಿದ್ದಪ್ಪ ಜಿ.ಆರ್ ಅವರ ‘ಬಾಳನೌಕೆಯ ಬೆಳಕಿನ ದೀಪ’ ಕವನ ಸಂಕಲನ ಓದಿದೆ. ನಿಮ್ಮ ಕವಿತೆಗಳು ಉತ್ತಮವಾಗಿವೆ ಎನ್ನುವುದಕ್ಕಿಂತ ಫಿಲಾಸಫಿಕಲ್ ಆಗಿವೆ ಎನ್ನುವುದು ಸೂಕ್ತ. ಬದುಕಿನ ಅನುಭವಗಳು ಮಾತಿನ ಹಂತ ದಾಟಿ ಕಾವ್ಯವಾಗುವ ಕ್ರಮದ ನಡುಮಧ್ಯದ ರಚನೆಗಳು ಈ ಸಂಕಲನದಲ್ಲಿವೆ.

ಎಲ್ಲೆಲ್ಲಿ ಕಾವ್ಯ ವಾಚ್ಯಾರ್ಥ ಮೀರಿ ವ್ಯಂಗ್ಯ, ಧ್ವನಿಪೂರ್ಣವಾಗಿ ಕವಿತೆಗಳು ಮೂಡಿಬಂದಿವೆ, ಅಂತಹ ಕಡೆಗೆ ಕಾವ್ಯ ಸಿದ್ಧಿಸಿದೆ. ಮಿತಿಯುಳ್ಳ ಕವಿತೆಗಳು ಗದ್ಯಮಯವಾಗಿಲ್ಲ. ಆದರೆ ಆಡುಮಾತಿನ ಶೈಲಿಯು ಹೆಚ್ಚಾದ ಕಡೆಗೆ ಕವಿತ್ವಕ್ಕೆ ಧಕ್ಕೆ ಬಂದಿದೆ.

ಮನುಷ್ಯತ್ವ ಪ್ರೀತಿಗೆ, ಸಾಮೀಪ್ಯ, ಸಂಬಂಧ ಪರಿಶುದ್ಧತೆಗೆ ಹಂಬಲಿಸುವ ಕಾವ್ಯನಾಯಕನ ಮೌನದ ಮಾತು ಕವಿತೆಯಾದರೆ, ಲೋಕರೂಢಿಯ ಆಡುಮಾತುಗಳು ಪೇಲವವೇನಿಸಿವೆ.

ಇಲ್ಲಿನ ಬಹುಪಾಲು ಕವಿತೆಗಳ ವಸ್ತು ಜೀವನ ಮತ್ತು ನಿಸರ್ಗ. ಎರಡೂ ನಿರಂತರವಾದವು, ಏರಿಳಿತಗಳಿಂದ ಕೂಡಿದವು. ಈ ನಿರಂತರತೆಯಲ್ಲಿ ಸುಖ ದುಖಃ ಕ್ಕಿಂತ ಜೀವಂತಿಕೆ, ಇರುವಿಕೆ ಮುಖ್ಯವಾಗಬೇಕು ಎಂಬ ಸದಾಶಯ ನಿಮ್ಮ ಕವಿತೆಗಳಲ್ಲಿ ವ್ಯಕ್ತವಾಗಿದೆ. ಆಶಯ ಕಾವ್ಯಾಕೃತಿಯಲ್ಲಿ ಪೂರ್ಣವಾಗಿ ಮೈದಾಳಿದ್ದರೆ ಸಂಕಲನದ ಶಕ್ತಿ ಭವ್ಯವಾಗುತ್ತಿತ್ತು. ಆದರೆ ಆ ಅವಕಾಶವನ್ನು ಕವಿತೆಗಳು ತಪ್ಪಿಸಿಕೊಂಡಿವೆ.

ಒಳ್ಳೆಯ ಕವಿತೆ ಓದುಗರನ್ನು ತಲುಪುತ್ತದೆ, ತಟ್ಟುತ್ತದೆ. ನಿಮ್ಮ ಕವಿತೆಗಳು ಓದುಗನ ಎದುರುಗಿಡುವ ಪ್ರಶ್ನೆಗಳು ಕಾವ್ಯಾತ್ಮಕವಾಗಿವೆ. ಆದರೆ ಬರೀ ಪ್ರಶ್ನೆಯೇ ಕಾವ್ಯವಾದೀತೆ?

ನಿಮ್ಮ ಕವನದ ಕೆಲವು ಸಾಲು ಒಳ್ಳೆಯ ಕವಿತೆಯ ತುಣುಕುಗಳಂತಿವೆ. ಆ ತುಣಗಳೆಲ್ಲಾ ಸೇರಿಸಿ ಒಂದು ಪರಿಪೂರ್ಣ ಕಾವ್ಯ ಕೌದಿ ರಚನೆಯಾದ ದಿನ ನಿಮ್ಮ ಕಾವ್ಯ ಪಯಣ ಸಾರ್ಥಕ ಸಾಧಿಸಿದಂತಾಗುತ್ತದೆ.

ಯಾವ ಅಂಕೆಯೂ ದೊಡ್ಡದಲ್ಲ; ಯಾವ ಅಂಕೆಯೂ ಚಿಕ್ಕದಲ್ಲ; ಸಣ್ಣದೆನಿಸಿಕೊಂಡ ಸೊನ್ನೆ, ಬ್ರಹ್ಮಾಂಡವನೆ ವ್ಯಾಪಿಸಿದೆ.

ಮನುಷ್ಯನಾದರೆ ಸಾಲದೇ?
ಮಗುವಾದರೂ ಆಗದೇ?

ಯಾರದೋ ಕಣ್ ಪಾಯಿಂಟಿನಲ್ಲಿ ಪರೀಕ್ಷೆ ಬರೆಯುತ್ತಿದ್ದೇವೆ ನಾವೆಲ್ಲ.

ದೇವರ ಕುಲುಮೆಯಲ್ಲಿ ಸೃಜಿಸಿದ
ಅಗಣಿತ ಜೀವಿಗಳಲ್ಲಿ
ನಾಯಿಯೂ ಒಂದು ;
ಮನುಷ್ಯನೂ ಹೌದು!.

ಲೋಕದ ಮೋಟಾರು
ಯಾರೊಬ್ಬರ ಉಸಿರು
ಹೋದಾಗಲೂ
ಪಂಕ್ಚರ್ ಆಗುವುದಿಲ್ಲ.

ಒಬ್ಬರ ಕೈಕುಲುಕುವುದು
ಆಲಂಗಿಸುವುದು
ಹಗುರಾಗುವುದು
ಎಷ್ಟು ಸಲೀಸು.

ಯಾವ ದಾರಿ ಮುಚ್ಚಿದರೂ
ಒಂದು ದಾರಿ
ತನ್ನೆಡೆಗೆ ಸೆಳೆಯುತ್ತದೆ
ಎಲ್ಲರನು ಕೊನೆಗೆ
ಏನೆಲ್ಲ ಗಂಟು ಮಾಡಿ
ಎಲ್ಲಾ ಬಿಟ್ಟು ಹೋಗುತ್ತೇವೆ
ಮರಳಿ ಬರಲು ಬಿಡದ ಬೀಡಿಗೆ!

ಹೀಗೆ ಕೆಲವು ಸಾಲು ಉದ್ಧರಿಸಿ ಕಾವ್ಯ ಸೊಬಗಾಗಿದೆ ಎಂದು ಹೇಳಲಾಗದು. ಕಾವ್ಯದ ಶಕ್ತಿ ಸಮಗ್ರತೆಯಲ್ಲಿದೆ. ಅದರ ಭಾಷೆ, ಭಾವ, ವಸ್ತು ವಿಷಯ, ಲಯ, ಧ್ವನಿ, ಶೈಲಿ, ಆಶಯ, ಆಕೃತಿ – ಇವೆಲ್ಲವೂ ಸಾವಯವ ದಿಂದ ಬೆರೆತಾಗ ಮಹತ್ವಪೂರ್ಣ ಕಾವ್ಯ ಸಿದ್ಧಿಸುತ್ತದೆ. ಕಾವ್ಯದ ಯಾವುದೋ ಒಂದು ಗುಣ ಮಾತ್ರ ಪೋಯಟಿಕ್ ಅಂಶವನ್ನು ಸಾಧಿಸಲಾಗದು.

ರೇವಣಸಿದ್ದಪ್ಪ ಜಿ.ಆರ್ ಕವಿತೆಗಳು ಗಮನ ಸೆಳೆಯುವುದು ಆಶಯದ ಕಾರಣದಿಂದ, ಅದರಾಚೆ ಅವು ಮುನ್ನಡೆದರೆ ಕಾವ್ಯತ್ವವನ್ನು ಸಾಧಿಸಬಲ್ಲವು.

‍ಲೇಖಕರು avadhi

10 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading