ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮಳೆ ಮಾಂತ್ರಿಕ' ಸೃಷ್ಟಿಸಿದ ಮಾಂತ್ರಿಕತೆ

ಶಶಿಕಾಂತ ಯಡಹಳ್ಳಿ

‘ರೇನ್ ಮೇಕರ್’ ಅಮೇರಿಕದ ಪ್ರಸಿದ್ಧ ನಾಟಕಕಾರ ರಿಚರ್ಡನ್ಯಾಶ್ ರಚಿಸಿದ ಸುಪ್ರಸಿದ್ದ ನಾಟಕ. 40ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡು ಪ್ರದರ್ಶನಗೊಂಡಿದೆ. ಈ ನಾಟಕವನ್ನು ಡಾ.ಕೆ.ವೈ.ನಾರಾಯಣಸ್ವಾಮಿಯವರು ‘ಮಳೆಮಾಂತ್ರಿಕ’ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಭಾಗವತರು’ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ‘ರಂಗಬೆಡಗು’ ನಾಟಕೋತ್ಸವದಲ್ಲಿ ಜೂನ್ 17ರಂದು ಈ ನಾಟಕ ಬಿ.ಜಿ.ರಾಮಕೃಷ್ಣರವರ ನಿರ್ದೇಶನದಲ್ಲಿ ‘ರಂಗನಿರಂತರ’ ತಂಡದ ಕಲಾವಿದರಿಂದ ಪ್ರದರ್ಶನಗೊಂಡಿತು.

ರೈತರ ಅಸಹಾಯಕತೆಯನ್ನು ಬಳಸಿಕೊಂಡು ಲಾಭಮಾಡಿಕೊಳ್ಳುವ ವಂಚಕರು ದೇಶ ಭಾಷೆಗಳ ಗಡಿಗಳನ್ನು ಮೀರಿ ಸದಾ ಕ್ರಿಯಾಶೀಲರಾಗಿರುತ್ತಾರೆ, ರೈತರು ಮತ್ತೆ ಮತ್ತೆ ಮೋಸಹೋಗುತ್ತಲೇ ಇರುತ್ತಾರೆಂಬುದಕ್ಕೆ ಈ ನಾಟಕ ಉತ್ತಮ ಉದಾಹರಣೆ. ವಂಚಕರ ಚಾಲಾಕಿತನವನ್ನು ಮತ್ತು ರೈತರ ಅಸಹಾಯಕತೆ ಮತ್ತು ಮುಗ್ಧತೆಯನ್ನು ಈ ನಾಟಕದಲ್ಲಿ ಸಮರ್ಥವಾಗಿ ಅನಾವರಣಗೊಳಿಸಲಾಗಿದೆ. ಬರವನ್ನು ನೀಗುವೆನೆಂದು ಬಂದ ಮಳೆಮಾಂತ್ರಿಕ ಮನೆಯವರ ಮನದೊಳಗಿನ ಬರ ಪರಿಹರಿಸಿದ್ದು ಈ ನಾಟಕದ ವಿಶೇಷತೆ. ಕುತೂಹಲವನ್ನು ಕೆರಳಿಸುತ್ತಾ ಸಾಗುವ ‘ಮಳೆಮಾಂತ್ರಿಕ’ ನಾಟಕವು ಒಂದೇ ರಾತ್ರಿಯಲ್ಲಿ ನಡೆಯುವ ಸನ್ನಿವೇಶಗಳನ್ನು ಹೊಂದಿದ್ದು ಇನ್ನೊಂದು ವಿಶೇಷ.

ಆ ತಂದೆಗೆ ಚಂದ್ರ, ಸೂರಿ ಎನ್ನುವ ಇಬ್ಬರು ಗಂಡು ಮಕ್ಕಳು ಹಾಗೂ ಗೌರಿ ಎನ್ನುವ ಒಬ್ಬ ಹೆಣ್ಣು ಮಗಳು. ಈ ನಾಲ್ಕು ಜನರ ಪುಟ್ಟ ಸಂಸಾರಕ್ಕೆ ಬರ ಎನ್ನುವುದು ಮಾರಕವಾಗಿ ಕಾಡುತ್ತದೆ. ಹೆಂಡತಿ ಓಡಿಹೋದ ಸಬ್ಇನ್ಸಪೆಕ್ಟರ್ ಪ್ರತಾಪ್ ಜೊತೆ ಗೌರಿಯ ಮದುವೆ ಮಾಡಲು ಮನೆಯವರು ಯೋಚಿಸುತ್ತಾರೆ. ಆದರೆ ತಾನು ಸುಂದರಿ ಅಲ್ಲ ಎಂಬ ಕೀಳರಮೆಯಲ್ಲಿದ್ದ ಗೌರಿ ಮದುವೆಯಾಗುವುದನ್ನು ನಿರಾಕರಿಸುತ್ತಾಳೆ. ಬರವನ್ನೇ ಬಂಡವಾಳಮಾಡಿಕೊಂಡ ಜೋಗಿ ಎನ್ನುವ ವಂಚಕ ಮಳೆ ತರಿಸುವುದಾಗಿ ತಂದೆಯನ್ನು ನಂಬಿಸಿ ಹಣ ಪಡೆಯುತ್ತಾನೆ. ಅದನ್ನು ಸೂರಿ ಬೆಂಬಲಿಸುತ್ತಾನೆ. ಚಂದ್ರು ಮತ್ತು ಗೌರಿ ವಿರೋಧಿಸುತ್ತಾರೆ. ಆಮೇಲೆ ಗೌರಿಯಲ್ಲಿದ್ದ ಕೀಳರಮೆಯನ್ನು ತೆಗೆದು ಹಾಕಿ ಆಕೆಯ ಇಚ್ಚಾಶಕ್ತಿಯನ್ನು ಜಾಗೃತಗೊಳಿಸಿದ ಜೋಗಿ ಎನ್ನುವ ಮಳೆಮಾಂತ್ರಿಕನನ್ನು ಆಕೆ ಪ್ರೀತಿಸುತ್ತಾಳೆ. ಕೊನೆಗೆ ವಂಚಕ ಜೋಗಿಯನ್ನು ಪ್ರತಾಪ್ ಬಂಧಿಸಲು ಪ್ರಯತ್ನಿಸಿದಾಗ ಗೌರಿ ತಪ್ಪಿಸಿಕೊಂಡು ಹೋಗಲು ಸಹಕರಿಸುತ್ತಾಳೆ. ಕೊಟ್ಟಕೊನೆಗೆ ಪ್ರತಾಪ ಹಾಗೂ ಜೋಗಿ ಇಬ್ಬರಲ್ಲಿ ಗೌರಿ ಪ್ರತಾಪನನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ. ಜೋರಾಗಿ ಮಳೆ ಸುರಿಯುತ್ತದೆ. ಜೀವನದಲ್ಲಿ ಒಂದಾದರೂ ಪವಾಡ ಮಾಡಿದ ಖುಷಿ ಜೋಗಿಗೆ. ಬದುಕಲ್ಲಿ ಒಂದಾದ ಸಂತೋಷ ಗೌರಿ ಪ್ರತಾಪರಿಗೆ. ಕೊನೆಗೂ ಮನೆಮಗಳಿಗೊಂದು ಗಂಡು ದೊರಕಿದ ಆನಂದ ತಂದೆ ಹಾಗೂ ಸಹೋದರರಿಗೆ. ಒಟ್ಟಾರೆಯಾಗಿ ನಾಟಕ ಸುಖಾಂತ್ಯದಲ್ಲಿ ಕೊನೆಯಾಗುತ್ತಾ ನೋಡುಗರಿಗೆ ಬದುಕಿನ ಪಾಠವನ್ನು ಹೇಳಿಕೊಡುವಂತಿದೆ.

ಕೃಷಿ ಕ್ಷೇತ್ರವೇ ಜಾಗತೀಕರಣದ ಹೊಡೆತಕ್ಕೆ ಸಿಕ್ಕು ತಲ್ಲಣಗೊಂಡಿರುವ ಈ ಕಾಲಘಟ್ಟದಲ್ಲಿ ಕೃಷಿಕ ಕುಟುಂಬವೊಂದರಲ್ಲಿ ನಡೆಯುವ ಸ್ಥಿತ್ಯಂತರಗಳನ್ನು ಪರಿಣಾಮಕಾರಿಯಾಗಿ ತೋರಿಸುವ ನಾಟಕ ‘ಮಳೆ ಮಾಂತ್ರಿಕ’. ಜಾಗತೀಕರಣದ ದುಷ್ಪರಿಣಾಮ ಕುಟುಂಬಗಳ ಮೇಲೆ ಹೇಗಾಗಿದೆ ಎಂಬುದನ್ನು ಸಾಕ್ಷೀಕರಿಸುವಂತೆ ಈ ನಾಟಕ ಮೂಡಿಬಂದಿದೆ. ಸೌಂದರ್ಯದ ಕೀಳರಮೆಗೆ ಬಿದ್ದ ಗೌರಿ ತನ್ನ ಆತ್ಮಸ್ತೈರ್ಯವನ್ನು ಕಳೆದುಕೊಂಡರೆ, ಸೂರಿ ಶ್ರೀಮಂತ ಹುಡುಗಿಯ ಹಿಂದೆ ಬಿದ್ದು ಸ್ವಾಭಿಮಾನವನ್ನೇ ಕಳೆದುಕೊಳ್ಳುತ್ತಾನೆ. ಸಂದರ್ಭದ ಸುಳಿಗೆ ಸಿಕ್ಕ ತಂದೆ ಬರ ಮತ್ತು ಮಗಳ ಮದುವೆ ಸಮಸ್ಯೆ ಬಗೆಹರಿಸಲು ಯಾವುದೇ ರಾಜಿಗೂ ಸಿದ್ದನಾಗುತ್ತಾನೆ. ಯಾವುದನ್ನೂ ನಂಬದ ಚಂದ್ರು ವ್ಯವಹಾರಿಕ ದೃಷ್ಟಿಕೋನದಿಂದಲೇ ಬದುಕನ್ನು ಅಳೆಯುತ್ತಾನೆ. ಹೀಗೆ… ಮನೆಯ ನಾಲ್ಕು ಜನರು ನಾಲ್ಕು ಭಿನ್ನ ದಾರಿಗಳಲ್ಲಿ ನಿಂತು ಮನ ಮತ್ತು ಮನೆಯ ನೆಮ್ಮದಿಯನ್ನು ಕೆಡಿಸಿಕೊಂಡಿರುವಾಗ ವಂಚಕನೊಬ್ಬ ಬಂದು ಇಡೀ ಮನೆಯನ್ನು ಒಂದಾಗಿಸುವ ಮೂಲಕ ತನಗರಿವಿಲ್ಲದಂತೆ ಅಲ್ಲಿ ನೆಮ್ಮದಿ ನೆಲೆಸುವಂತೆ ಮಾಡುವ ವಿಪರ್ಯಾಸ ಈ ನಾಟಕದ ಸಶಕ್ತ ಅಂಶವಾಗಿದೆ.

ಸೌಂದರ್ಯ ಮೀಮಾಂಸೆ ಈ ನಾಟಕದ ಅಂತಸ್ಸತ್ವವಾಗಿದೆ. ಸುಂದರವಾದ ಹೆಂಡತಿಯ ಸೌಂದರ್ಯವನ್ನು ಕಡೆಗಣಿಸಿದ ಪ್ರತಾಪ್ ತನ್ನ ಅಹಂಕಾರದಿಂದಾಗಿ ಪತ್ನಿ ಪರಪುರುಷನೊಂದಿಗೆ ಪರಾರಿಯಾಗಲು ಕಾರಣನಾಗುತ್ತಾನೆ. ಇನ್ನೊಂದುಕಡೆ ‘ತಾನು ಸುಂದರಿಯಲ್ಲ, ತನ್ನಲ್ಲಿ ಆಕರ್ಷನೆ ಇಲ್ಲ’ ಎಂಬ ಕೀಳರಮೆ ಗೌರಿಯನ್ನು ಕಾಡತೊಡಗುತ್ತದೆ. ಅವಳ ಬಾಲ್ಯ ಗೆಳೆಯ ಹಾಗೂ ಸಹೋದರರು ಅವಳಲ್ಲಿ ಆ ರೀತಿಯ ಕೀಳರಮೆ ಹುಟ್ಟಲು ಕಾರಣರಾಗುತ್ತಾರೆ. ವಾಸ್ತವದಲ್ಲಿ ಈ ದೃಶ್ಯಮಾಧ್ಯಮಗಳು, ಸರಕು ಮಾರಾಟದ ಜಾಹೀರಾತುಗಳು ಎಲ್ಲಾ ಸಾಧಾರಣ ಸೌಂದರ್ಯದ ಹೆಣ್ಣುಮಕ್ಕಳಲ್ಲಿ ಕೀಳರಮೆಯನ್ನು ಹುಟ್ಟಿಸುವುದು ಜಾಗತೀಕರಣದ ವ್ಯಾಪಾರೀ ತತ್ವವಾಗಿದೆ. ಆ ಮೂಲಕ ಸೌಂದರ್ಯವರ್ಧಕಗಳ ಮಾರಾಟ ಜಾಗತಿಕ ಮಾರುಕಟ್ಟೆಯ ಮೂಲ ಉದ್ದೇಶವಾಗಿದೆ. ಯಾವಾಗ ಜೋಗಿ ಬಂದು ಗೌರಿಯ ಸೌಂದರ್ಯದ ಪರಿಕಲ್ಪನೆಯನ್ನೇ ಬದಲಾಯಿಸಿ ಅವಳಲ್ಲಿ ನಂಬಿಕೆಯನ್ನು ಹುಟ್ಟಿಸುತ್ತಾನೋ ಆಗ ಅವಳಲ್ಲಿ ನಳನಳಿಸುವ ಜೀವಕಳೆ ತುಂಬಿಕೊಳ್ಳುತ್ತದೆ. ಇನ್ನೊಂದೆಡೆ ಪ್ರತಾಪನ ಪುರುಷಾಹಂಕಾರವೂ ಇಳಿದಿರುತ್ತದೆ. ಇಬ್ಬರೂ ತಮ್ಮ ತಮ್ಮ ಮನಸ್ಥಿತಿಗಳನ್ನು ಪರಿವರ್ತಿಸಿಕೊಂಡು ಒಂದಾಗುತ್ತಾರೆ. ಅಂದರೆ ಕೀಳರಮೆ ಹಾಗೂ ಅಹಂಕಾರಗಳಿಂದ ನೆಮ್ಮದಿಯ ಬದುಕು ಸರ್ವನಾಶವಾಗುತ್ತದೆ ಎಂಬುದನ್ನು ಗೌರಿ ಮತ್ತು ಪ್ರತಾಪ್ ಪಾತ್ರಗಳ ಮೂಲಕ ಬಲು ಸೊಗಸಾಗಿ ಮನವರಿಕೆ ಮಾಡಿಕೊಡುವ ಈ ನಾಟಕ ಪರೋಕ್ಷವಾಗಿ ವ್ಯಕ್ತಿತ್ವ ವಿಕಸನದ ಪಾಠಗಳನ್ನು ಹೇಳುವಂತಿದೆ.

‘ಬರ’ ಇಲ್ಲಿ ನೆಪಮಾತ್ರವಾಗಿದ್ದು ಮನುಷ್ಯ ಸಂಬಂಧಗಳ ತಲ್ಲಣ ತಳಮಳಗಳನ್ನು ಅನಾವರಣಗೊಳಿಸುವ ಪ್ರಯತ್ನವೇ ಈ ನಾಟಕದಾದ್ಯಂತ ಒಳತೋಟಿಯಾಗಿ ಬಿಂಬಿತವಾಗಿದೆ. ಬರ ಎನ್ನುವುದು ಈ ನಾಟಕದಲ್ಲಿ ರೂಪಕವಾಗಿ ಮೂಡಿಬಂದಿದೆ. ಬರ ಎಂದರೆ ಅಭಾವ ಎಂದರ್ಥ. ಪ್ರಾಕೃತಿಕ ಬರವನ್ನು ಹೇಗೋ ಸಹಿಸಿಕೊಳ್ಳಬಹುದಾದರೂ ಮನುಷ್ಯ ನಿರ್ಮಿತ ಆಂತರಿಕ ನೆಮ್ಮದಿಯ ಅಭಾವವನ್ನು ಪರಿಹರಿಸಿಕೊಳ್ಳುವುದು ಕಷ್ಟಸಾಧ್ಯ. ಮಳೆಮಾಂತ್ರಿಕ ಪಾತ್ರ ಇನ್ನೊಂದು ಮೆಟಾಪರ್ ಆಗಿ ಮೂಡಿಬಂದಿದೆ. ಮಳೆಯ ಅಭಾವವನ್ನು ನೀಗಿಸುವೆನೆಂದು ಬರುವ ಈ ಪಾತ್ರ ಹಳಸಿದ ಮನುಷ್ಯ ಸಂಬಂಧಗಳಿಗೆ ಬೆಸುಗೆ ಹಾಕಿದ್ದು ಅದ್ಬುತ ಪರಿಕಲ್ಪನೆ. ಮನದೊಳಗಿನ ಕ್ಲೇಶ ಕಳೆದು, ನೆಮ್ಮದಿಯ ಬರ ಅಳಿದರೆ ಮಳೆಯೂ ಬಂದೀತು ಹರುಷವನ್ನೂ ತಂದೀತು ಎಂಬ ಆಶಯವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ.

ನಾಟಕವನ್ನು ಅದೆಷ್ಟೇ ಕನ್ನಡೀಕರಣಗೊಳಿಸಿದರೂ ನಾಟಕದ ಕಥೆಯೊಳಗೆ ಅಮೇರಿಕನ್ ಮುಕ್ತ ಸಂಸ್ಕೃತಿ ಎದ್ದುಕಾಣುವಂತಿದೆ. ತಂದೆಯ ಮೇಲೆಯೇ ಸವಾರಿ ಮಾಡುವ ಉದ್ದಟ ಮಕ್ಕಳು, ಪೋಲೀಸ್ ಠಾಣೆಗೆ ತೆರಳಿ ಊಟಕ್ಕೆ ಬರಲು ನಿರಾಕರಿಸಿದ ಸಬ್ಇನ್ಸಪೆಕ್ಟರ ಮೇಲೆ ಹಲ್ಲೆ ಮಾಡಲು ಮುಂದಾದ ಮಕ್ಕಳು. ಅಪರಿಚಿತ ವ್ಯಕ್ತಿಯ ಜೊತೆಗೆ ಮಗಳು ರಾತ್ರಿಕಳೆಯುತ್ತಿರುವುದು ಗೊತ್ತಿದ್ದೂ ಬೆಂಬಲಿಸುವ ತಂದೆ. ಮಗ ಯಾವುಳೋ ಚಾಲಾಕಿ ಮಾಡರ್ನ ಹುಡುಗಿಯನ್ನು ಪ್ರೀತಿಸುತ್ತಿರುವುದನ್ನು ಪ್ರಚೋದಿಸುವ ಅಪ್ಪ. ಪತ್ನಿಯಿಂದ ಪರಿತ್ಯಕ್ತನಾದವನ ಜೊತೆಗೆ ಮನೆಮಗಳನ್ನು ಮದುವೆ ಮಾಡಿಕೊಡಲು ದುಂಬಾಲು ಬೀಳುವ ಕುಟುಂಬ, ವಂಚನೆಯೇ ತನ್ನ ಕಾಯಕವೆಂದು ಹೇಳಿದ ಅಲೆಮಾರಿಯನ್ನೇ ಪ್ರೀತಿಸುವ ಹುಡುಗಿ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿ ಬೇರೊಬ್ಬನಿಗೆ ಒಲಿದದ್ದು….. ಹೀಗೆ ಇವೆಲ್ಲಾ ಅಮೇರಿಕದಂತಹ ಸಂಬಂಧಗಳೇ ಹಳಸಿದ ಅಸ್ವಸ್ಥ ಸಮಾಜದಲ್ಲಿ ಸಾಧ್ಯವಾಗುವಂತಹವು. ಆದರೆ…. ನಮ್ಮ ದೇಶದಲ್ಲಿ ಅಂತಹ ವಿದ್ಯಮಾನಗಳು ನಡೆಯುವುದು ಅಪರೂಪ. ಜಾಗತೀಕರಣದ ದುಷ್ಟರಿಣಾಮದಿಂದ ಎಲ್ಲೋ ಕೆಲವೊಂದು ಕಡೆ ನಡೆದರೂ ಅಂತಹುದನ್ನು ಸಾರ್ವಜನಿಕವಾಗಿ ತೋರಿಸುವುದು ನಕಾರಾತ್ಮಕ ಬೆಳವಣಿಗೆ. ಈ ನಿಟ್ಟಿನಲ್ಲಿ ಎಷ್ಟೇ ವೇಷ ದೇಶ ಭಾಷೆ ಬದಲಾದರೂ ಆಂತರ್ಯದಲ್ಲಿ ವಿದೇಶಿ ಸಂಸ್ಕೃತಿಯ ಪ್ರತಿಬಿಂಬವೇ ರೇನ್ಮೇಕರ್ನಲ್ಲಿದೆ.

ರಿಯಾಲಿಸ್ಟಿಕ್ ಮಾದರಿಯ ‘ಮಳೆಮಾಂತ್ರಿಕ’ ನಾಟಕವನ್ನು ಅಚ್ಚುಕಟ್ಟಾಗಿ ಬಿ.ಜಿ.ರಾಮಕೃಷ್ಣ ನಿರ್ದೇಶಿಸಿದ್ದಾರೆ. ಈ ನೆಲದ ಸಂಸ್ಕೃತಿಗೆ ಒಗ್ಗದ ಅಂಶಗಳು ಈ ಹಿಂದಿನ ಪ್ರದರ್ಶನದಲ್ಲಿ ಹೇರಳವಾಗಿದ್ದವು. ಅಂತಹ ಆಭಾಸಕಾರಿ ಅಂಶಗಳನ್ನು ತೆಗೆದು ಹಾಕಿ ಅನುವಾದ ಎಂದು ಅನುಮಾನ ಬಾರದಂತೆ ಈ ಪ್ರದರ್ಶನವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಅದ್ಯಾಕೋ ಆ ಕೆಂಪು ಟೋಪಿಯನ್ನು ಮಾತ್ರ ಅಮೇರಿಕನ್ ಸಂಸ್ಕೃತಿಯ ಕುರುಹಾಗಿ ಹಾಗೇ ಉಳಿಸಿಕೊಂಡಿದ್ದಾರೆ. ಚುರುಕಾದ ಬ್ಲಾಕಿಂಗ್, ಮೂವ್ಮೆಂಟ್, ಎಂಟ್ರಿ-ಎಕ್ಸಿಟ್ಗಳು ನಾಟಕಕ್ಕೆ ಚಲನಶೀಲತೆಯನ್ನು ಒದಗಿಸಿ ನೋಡುಗರನ್ನು ಹಿಡಿದಿಡುವಂತಿವೆ.

ಇದೊಂದು ಮಾತಿನ ನಾಟಕ. ನಾಟಕದ ಕಥೆಯಲ್ಲಿ ಮಳೆಗೆ ಬರ ಇದೆಯಾದರೂ ಮಾತುಗಳಿಗೆ ಬರವಿಲ್ಲ. ಕೆವೈಎನ್ರವರ ಸಂಭಾಷಣೆ ಕಟ್ಟಿ ಕೊಡುವ ಮಾರ್ಮಿಕತೆಯು ಪಾತ್ರಗಳ ಮಾತುಗಳಲ್ಲಿ ಮಾಂತ್ರಿಕತೆಯನ್ನು ಸೃಷ್ಟಿಸಿ ಕೇಳುಗರಿಗೆ ಖುಷಿ ಕೊಡುತ್ತವೆ. ನಟರು ಸಂಬಾಷಣೆ ಹೇಳುವ ರೀತಿಗೆ, ಮಾತಿನ ಏಕತಾನತೆಯನ್ನು ಮೀರಿ ಅಭಿನಯಿಸುವ ಪರಿಗೆ ಪ್ರೇಕ್ಷಕರ ಸಕಾರಾತ್ಮಕ ಪ್ರತಿಕ್ರಿಯೆಯೇ ಸಾಕ್ಷಿ. ಗೌರಿ ಪಾತ್ರದಲ್ಲಿ ಬ್ರಂದಾ.ಕೆ.ಜಿ ರವರ ನಟನೆ ಮನೋಜ್ಞವಾಗಿತ್ತು. ಚೇತನ್ ಮಳೆಮಾಂತ್ರಿಕನಾಗಿ ಪಾದರಸದ ಅಭಿನಯವನ್ನು ಮಾಡಿದ್ದಾರೆ. ಪ್ರತಾಪ ಪಾತ್ರದಲ್ಲಿ ಪ್ರಶಾಂತ ಕುಲಕರ್ಣಿ ತಮ್ಮ ಉತ್ತರ ಕರ್ನಾಟಕದ ಭಾಷಾ ಸೊಗಸಿನಿಂದ ಗಮನ ಸೆಳೆದರೆ, ಸೂರಿಯಾಗಿ ಶ್ರೀಕಾಂತ ಹಾಗೂ ಚಂದ್ರು ಪಾತ್ರದಲ್ಲಿ ಅಜಯ್ಕುಮಾರ್ ನಟನೆ ಪಾತ್ರೋಚಿತವಾಗಿತ್ತು. ಹೊಸ ಕಲಾವಿದರನ್ನು ಆಯ್ದುಕೊಂಡು ಮಾತು ಪ್ರಧಾನ ನಾಟಕವನ್ನು ಸೊಗಸಾಗಿ ಕಟ್ಟಿಕೊಟ್ಟ ನಿರ್ದೇಶಕರು ಅಭಿನಂದನಾರ್ಹರು.

ಇಡೀ ನಾಟಕಕ್ಕೆ ಮಾಂತ್ರಿಕತೆಯನ್ನು ಒದಗಿಸಿದ್ದು ಶಶಿಧರ ಅಡಪರವರ ರಂಗವಿನ್ಯಾಸ ಹಾಗೂ ವಿಠ್ಠಲರವರ ಬೆಳಕುವಿನ್ಯಾಸ. ಒಳಾಂಗಣ ಮತ್ತು ಹೊರಾಂಗಣವನ್ನು ಅಡಪರವರು ಅದ್ಬುತವಾಗಿ ಡಿಸೈನ್ ಮಾಡಿದ್ದರೆ, ಸೈಕ್ ಬಳಸಿ ಹುಣ್ಣಿಮೆಯ ರಾತ್ರಿಯನ್ನು ರಂಗದ ಮೇಲೆ ಸೃಷ್ಟಿಸಿದ ಲೈಟಿಂಗ್ ನಾಟಕಕ್ಕೆ ರಮ್ಯತೆಯನ್ನು ತಂದುಕೊಟ್ಟಿದೆ. ರಾಮಚಂದ್ರ ಹಡಪದರವರ ಹಾಡು ಮತ್ತು ಸಂಗೀತ ದೃಶ್ಯಕ್ಕೆ ಅಗತ್ಯವಾದ ಮೂಡನ್ನು ಹುಟ್ಟಿಸುವಲ್ಲಿ ಸಹಕಾರಿಯಾಗಿವೆ.

ಸಿಜಿಕೆಯವರು ಕಟ್ಟಿ ಬೆಳೆಸಿದ ರಂಗನಿರಂತರ ತಂಡ ಹೊಸ ನಿರ್ದೇಶಕರಿಗೆ ಅವಕಾಶವನ್ನು ಕೊಟ್ಟು, ಉದಯೋನ್ಮುಖ ಕಲಾವಿದರಿಗೆ ರಂಗವೇದಿಕೆ ಒದಗಿಸಿಕೊಟ್ಟು, ಅಪರೂಪದ ನಾಟಕವನ್ನು ನಿರ್ಮಿಸಿದ್ದು ಸಿಜಿಕೆಯವರಿಗೆ ಸಲ್ಲಿಸಬಹುದಾದ ಗೌರವವಾಗಿದೆ. ಆ ನಿಟ್ಟಿನಲ್ಲಿ ರಂಗನಿರಂತರದ ಡಿ.ಕೆ.ಚೌಟರ ನಾಯಕತ್ವ ಹಾಗೂ ಜಿಪಿಓ ಚಂದ್ರುರವರ ಕಾರ್ಯಶೀಲತೆ ಸ್ಮರಣಾರ್ಹವಾಗಿದೆ.

‍ಲೇಖಕರು avadhi

21 June, 2013

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. manyapuragovindaraju

    namaskara sar tumbadinagalananthara nimmma vimarshe oduthaedini

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading