ಡಾ ಲಕ್ಷ್ಮಿ ಶಂಕರ ಜೋಶಿ
ಹೂಂಂ..ಅಜ್ಜನ ನೆನಪು ಏಳೂತಲೇ ಆಯ್ತು..
ದಿನವೂ ಬೇಗ ಮಲಗಿ ಬೇಗ ಏಳುವದು ಅಜ್ಜನ ಬಳುವಳಿ ಎನಬೇಕು. ಬೆಳಗಿನ ಐದಕ್ಕೆಲ್ಲ ಪ್ರಾತರ್ವಿಧಿ ಮುಗಿಸಿ ಹೆಚ್ಚಿನ ಕೆಲಸ ಆಗಲೇ ಮಾಡುವದು.ಬರೆಯುವದು, ಓದುವದು (ಈಗಲೂ ನನ್ನ ಪ್ರೀತಿಯ ಕೆಲಸ ಅದು) ಪುಸ್ತಕದ ಕಪಾಟು ಹೊಂದಿಸುವದು. ಇಸ್ತ್ರಿ ಮಾಡುವದು ತರಹೇವಾರಿ ಕೆಲಸಗಳನ್ನು ಹುಡುಕಿ ಮಾಡುವ ರೂಢಿ ನನಗೆ.

ಇವತ್ತು ಬೇಗ ಎಚ್ಚರಾಗಿ ಹೊರಗೆ ಬಂದೆ. ಸಣ್ಣಗೆ ಮಳೆ ಹನೀತಿತ್ತು..ಆಹಾ...ಎಂಥಾ ಸುಂದರ ಬೆಳಗು ಇದು. ಒಂದು ಸಣ್ಣ ವಾಕ್ ಹೋಗಿ ಬಂದರಾಯ್ತು ಎನ್ನುತ್ತ ಒಳ ಬಂದು ಮಲಗಿದವರ ಮೇಲೆ ಇನ್ನೊಂದು ಚಾದರ ಹೊದಿಸಿ, ಎರಡು ತಾಸು ಒಟ್ಟು ಗದ್ದಲ ಆಗದ ಹಾಗೆ, ಬೆಳಗಿನ ಶಾಂತಿ ಕದಡದ ಹಾಗೆ ತಯಾರಿ ಮಾಡಿ ಹೊರಬಿದ್ದೆ. ಚುಮು ಚುಮು ನಸುಕು.. ಸಣ್ಣಗೆ ಮಳೆ ಹನಿ, ಬೇವಿನ ಮರದಿಂದ ಬೀಳುವ ಹನಿ ಹನಿ ನೀರು,ಉಲ್ಲಸಿತ ಗಾಳಿ, ಪಾರಿಜಾತದ ಪರಿಮಳ ಮೂಗಿಗಡರಿ ಮಳೆಯಲ್ಲೆ ಹೆಜ್ಜೆ ಹಾಕಿದೆ.
ಮಳೆ ಎಂದಾಕ್ಷಣ ಧಾರವಾಡ ನೆನಪಾಯ್ತು. ಅಜ್ಜನ ಮನೆ ಧಾರವಾಡಕ್ಕೆ ಹೋವರ ಮನೆ ಹಿತ್ತಿಲು ಕಂಪೌಂಡಿನ ಗೋಡೆಯೆಲ್ಲಾ ಪಾಚಿಮಯ. ಹಿತ್ತಲ ಕಡೆಯಂತೂ ಹುಷಾರಾಗಿ ನಡೆಯಬೇಕು. ಜಾರಿಕೆ ಸೊಯ್ಯಂತ… ಜಾರಿ ಬಿದ್ದಾಗ ಅಜ್ಜ “ಯಾವದೋ ಘಟಾ ಬಿತ್ತ ನೋಡ ಎಬ್ಬಸರಿ”ಅಂತಿದ್ದ. ಬಿದ್ದವರ ಮಾರಿ ಹುಳ್ಳಗೆ ಆಗಿರುತ್ತಿತ್ತು. ಹುಚ್ಚ ನಗಿ ನಗುತ್ತ ನಿಲ್ಲುವ ಪರಿ ಭಾರಿ ಮದಾಗ ಅಜಾ ಕೊಡತಿತ್ತು.
“ಅಯ್ಯ ಬಿದ್ದೇನ” ಮಾಮಿ ಪ್ರಶ್ನೆಯಾದರೆ “ಇಲ್ರೀ ಮಾಮಿ ಕಾಲ ಜಾರಿತ್ರಿ.” ಅನ್ನೂದ್ರೊಳಗಾಗಿ ಮಾಮಾನ ಮಗಾ “ಎರಡೂ ಒಂದ ಅಲಾ”ಅನ್ನುತ್ತ ಕಿಸಿ ಕಿಸಿ ನಗತಿದ್ದ. ಏನ ಆಗಿಲ್ರೀ..”ಅಂದ್ರೂ ..ಹಂಡೇದ ಬೆಂಕಿ ಮುಂದ ಕೂತಾಗ ಅಳು ಬರ್ತಿತ್ತು.”ಎಷ್ಟ ಅಸಂಯ್ಯವಾ.. ಮಾವನ ಮಗಾ ಬಿದ್ದದ್ದ ಎಲ್ಲಾರ ಮುಂದ ಹೇಳಕೋತ ಅಡ್ಡ್ಯಾಡತಾನ. ಸ್ವಗತದಲ್ಲಿ ಮಾತಾಡಕೋತಿದ್ದೆ.. ಅಮ್ಮಾ ಬಂದಾಗ ಹಿತ್ತಿಲು ಕಡೆ ಹೋಗಬೇಕಾದರೆ ಅಜ್ಜ ಟಾರ್ಚ್ ಹಿಡಕೊಂಡು “ಹುಷಾರು ಶೀಲಕ್ಕ” ತಾನೇ ಮುತುವರ್ಜಿ ವಹಿಸಿ ಅವಳ ಕಾಳಜಿ ಮಾಡುತ್ತಿದ್ದ.
ಮಳೆ ಯಾಕೋ ಜೋರಾದ ಹಾಗೆ ಅನಿಸ್ತು. ಮುಂಗುರುಳುಗಳಿಗೆಲ್ಲ ಮಳೆ ಹನಿ ಸಿಂಚನ. ಮನೆಗೆ ಹೋಗುವ ಮನಸ್ಸಿಲ್ಲ… ಸತತ ಹನಿವ ಮಳೆ ನೋಡುತ್ತ ಸಣ್ಣ ಪಡಸಾಲೆಯ ಆರಾಮ ಖುರ್ಚಿಲಿ ಕೂತೆ. ಎಂಥ ಚಂದದ ಹೆಸರು ಮಳೆ ಅಂತ. ಇದೊಂದು ಸ್ರಷ್ಟಿಯ ಅದ್ಭುತವಲ್ಲದೇ ಮತ್ತೇನು? ಈ ಮಳೆ ಎಂಥ ಅರಸಕನಲ್ಲೂ ಅದ್ಭುತ ಸಂಚಲನ ಉಂಟು ಮಾಡುತ್ತದೆ ಅಲ್ಲವೇ?ಏಕಾಂತದಲ್ಲಿ ಒಬ್ಬಳೇ ಧೇನಿಸುತ್ತಿದ್ದೆ. ಜಡಿ ಮಳೆ, ಕುಂಭದ್ರೋಣ ಮಳೆ, ಮುಸಲಧಾರೆ, ಎಷ್ಟೆಲ್ಲ ಉಪಮೆಗಳು…
ಪಿಚ್ ಪಿಚ್ ಕೆಸರು ತುಳಿಯುತ್ತ ಅಂಗಳದ ತುಂಬ ಓಡಾಡಿ ಅಜ್ಜನಿಂದ ಬೈಸಿಕೊಳ್ಳುವದು ನಡೆದಿರುತ್ತಿತ್ತು. ಧಾರವಾಡದ ಕೆಂಪು ಜಿಗುಟು ಮಣ್ಣು ಲಂಗದ ತುದಿಗಳನ್ನು ಕೆಂಪಾಗಿಸುತ್ತಿತ್ತು. ಮರಳಿ ನಮ್ಮೂರಿಗೆ ಹೋದರೂ ಬಿಡಲಾಗದ ನಂಟು ಅದು. ಶ್ರಾವಣದ ಮಳೆಯಲ್ಲಿ ಎಲ್ಲಿ ನೋಡಿದಲ್ಲಿ ಹಸಿರು ಹೊದಿಕೆ. ಅರಿಶಿಣ ಕುಂಕುಮ ಚೆಲ್ಲಿದಂತೆ ಎಲ್ಲೆಡೆಗೂ ಹೂಗಳು. ಹೂವಿನ ಗಲ್ಲ ತಿವಿಯುತ್ತಿರುವ ಪಾತರಗಿತ್ತಿಗಳು. ಗುಂಪು ಗುಂಪಾಗಿ ಪ್ರಣಯ ಲೀಲೆಯಲ್ಲಿ ತೊಡಗಿರುವ ಜೇನ್ನೊಣಗಳು. ನೆನೆಸಿಕೊಂಡರೆ ಮನಸ್ಸು ಹೂವಿಗಿಂತ ಹಗುರವಾಗಿ ಬಿಡುತ್ತದೆ.
ಚೆನ್ನವೀರ ಕಣವಿಯವರ ಹಾಡು ಬಾಯಿಗೆ ಬಂತು.
“ಮುಂಜಾವಿನಲಿ ತುಂತುರಿಒಂದುನ ಸೋನೆಮಳೆ…ಸೋ..ಎಂದು ಶ್ರುತಿ ಹಿಡಿದು ಸುರಾಯುತ್ತಿತ್ತೂ.. ಅದಕೆ ಹಿಮ್ಮೇಳವನೆ ಸೋಸಿಪಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತ್ತಿತ್ತು.

ಇಳೆ ವೆಣ್ಣು ಮೈದೊಳೆದು ಮಕರಂದದರಿಶಿನದಿ
ಹೂ ಮುಡಿದು ಮದುಮಗಳ ಹೋಲುತ್ತಿತ್ತು
ಮೂಡಣದಿ ನೇಸರನ ನಗೆ ಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು.
ಉಷೆಯ ನುಣ್ಗದಪಿನಲಿ ಹರ್ಷ ಭಾಷ್ಪಗಳಂತೆ
ಮರದ ಹನಿ ತಟ ಪಟನೆ ಉದುರುತ್ತಿತ್ತು.
ಸ್ರಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತ್ತಿತ್ತು.
ಕವಿಯ ಮನಸ್ಸು ಮುಂದಿನ ಬಾಳು ನೆನೆದರೆ ನನ್ನದು ಹಿಂದಕ್ಕೋಡಿತ್ತು. ಪುಸ್ತಕ ರುಚಿ ಹಚ್ಚಿದವನೇ ಧಾರವಾಡ ಅಜ್ಜ….
ಬಾಲ್ಯದ ಬುದ್ಧಿ ಬಲಿತಿರದ ದಿನಗಳವು.ನಮ್ಮ ತಾಯಿಯ ದೊಡ್ಡಪ್ಪ ರಾಮಣ್ಣ ಕಾಕಾ ಫೇಡೇದ ಅಜ್ಜ ಎಂದೇ ಪ್ರಸಿದ್ಧಿ. ಸ್ವಾತಂತ್ರ್ಯ ಸೇನಾನಿ, ಆಜನ್ಮ ಬ್ರಹ್ಮಚಾರಿ, ಶಿಸ್ತಿನ ಸಿಪಾಯಿ ಎಂದೇ ಪ್ರಸಿದ್ಧ.
ಮಗಳ ಊರಿಗೆ ವರ್ಷ್ಕಕ್ಕೆ ಒಂದೆರಡು ಬಾರಿ ಬಂದು, ಕೆಲ ದಿನ ಇದ್ದು ಹೋಗುತ್ತಿದ್ದ. ಆತ ಇರುವಷ್ಟು ದಿನ ಮನೆಯನ್ನು ಅತ್ಯಂತ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತಿದ್ದ. ಬೆಳಿಗ್ಗೆ ಐದಕ್ಕೆ ಏಳುವದರಿಂದ ಹಿಡಿದು ತಾಟಿನಲ್ಲಿ ಏನೂ ಚೆಲ್ಲದಂತೆ,ಸರಿಯಾದ ಟೈಮಗೆ ಸ್ಕೂಲಗೆ ಹೋಗಲು, ಇಸ್ತ್ರಿ ಮಾಡಿಕೊಳ್ಳಲು, ಅಮ್ಮನ ಜತೆ ಅಡಿಗೆಗೆ ಸಹಕರಿಸಲು, ಸಂಜೆಗೆ ಶುಭಂಕರೋತಿ ಹೇಳಲು, ಹಾಡಲು, ಹಾಸಿಗೆ ಹಾಕಲು ಬೆನ್ನು ಹತ್ತಿ ಮಾಡಿಸುವ ಶಿಸ್ತಿನ ಸಿಪಾಯಿ ಆತ.
ತಿಪ್ಪ ಮಾಡುವ ಕೆಲಸವೆಲ್ಲಾ ಈತ ನಮಗ್ಯಾಕೆ ಹೇಳ್ತಾನೆ ಅನ್ನೋದೇ ಸೋಜಿಗ ಆಗುತ್ತಿತ್ತು ನಮಗೆ. ಇಂಗ್ಲೀಷ್ ಗ್ರಾಮರ್, ಶುದ್ಧ ಬರಹ, ಗಣಿತ , ಎಲ್ಲಾ ಹೇಳಿಕೊಡುತ್ತಿದ್ದ. ಗೆಳತಿಯರಿಗೂ ಕೂಡ. ಹೀಗಾಗಿ ಆಟಕ್ಕೆ ಖೋತಾ ಆಗುತ್ತಿತ್ತು.
ಅಜ್ಜ ಊರಿಗೆ ಬಂದನೆಂದರೆ ನಮಗೆ ಸ್ವಲ್ಪ ಇರಿಸು ಮುರುಸೇ ಆಗುತ್ತಿತ್ತು. ನನ್ನ ಗೆಳತಿಯರಿಗೂ ಹಾಗೇ ಆಗುತ್ತಿತ್ತು.

ಹಾಗೆಲ್ಲ ಜೋರಾಗಿ ಮನೇಲಿ ಅನ್ನೋ ಹಾಗಿರಲಿಲ್ಲ.”ಅವರು ದೊಡ್ಡವರು.ದೊಡ್ಡವರು ಹೇಳಿಧಂಗ ಕೇಳಬೇಕು” ಅನ್ನೋ ಮಾತು ಅಮ್ಮ, ಅಪ್ಪ, ಅಜ್ಜನ ಬಾಲ್ಲಿ ಕಾಯಂ ಇರ್ತಿತ್ತು. ಹೀಗಾಗಿ ಅಜ್ಜನಿಗೆ ಏನ ಬೈಯೂದಿದ್ರೂ ತುಳಸಿ ಕಟ್ಟಿ ಹಿಂದ ಕೂತು ತಂಗಿ, ಆಕಿ ಗೆಳತಿಯರು, ನಾನು ನನ್ನ ಗೆಳತಿಯರು ಎಲ್ಲಾರೂ ಕೂಡಿ ಸಣ್ಣ ದನಿಯೊಳಗ ಬೈತಿದ್ವಿ.
“ಯಾವಾಗ ಊರಿಗೆ ಹೊಕ್ಕಾರಂತ ಯವ್ವಾಸ್ತಾ ನಿಮ್ಮಜ್ಜಾರು? ಗಾಂಧಿ ಅಜ್ಜನಂಗ ಅನಸ್ತಾರ. ಹೊಳ್ಯಾಗ ಈರ ಅವ್ರು. ತಮ್ಮ ಅರಿಬಿ ತಾವ ಒಕ್ಕೋತಾರ. ಅಗಸರ ನಿಂಗವ್ವ ಒಗದ ಕೊಡತೀನಿ ಅಂದ್ರೂ ಕೊಡಲಿಲ್ಲ.ನೋಡಿಕೆವಾ” ಎಂದೆಂದೂ ಹೊಳೆಗೆ ಕಳಿಸದ ನಮಗೆ ಹೊಳೆಯ ಸುದ್ದಿಯಾದರೂ ಏನು ಗೊತ್ತು? ಊರಲ್ಲಿ ಹೊಳೆ ಇದ್ದರೂ ನಮ್ಮನೆಯಲ್ಲಿ ಕಳಿಸುತ್ತಿದ್ದಿಲ್ಲ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇದ್ದಿಲ್ಲ.
ಧಾರವಾಡದಲ್ಲಿ “ಆದರ್ಶ ವಿದ್ಯಾರ್ಥಿ ನಿಲಯ” ಸ್ಥಾಪಿಸಿ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಓದಲು ಅನುಕೂಲ ಮಾಡಿದ ಮಹಾನುಭಾವ. ಆದರ್ಶ ಜೀವಿ ಆತ. ವಿದ್ಯಾರ್ಥಿ ನಿಲಯದಲ್ಲಿ ಓದಿದ ಹುಡುಗರು ಅತ್ಯಂತ ಉನ್ನತ ಹುದ್ದೆಗಳನ್ನಲಂಕರಿಸಿದ ಸುದ್ದಿ ಸಂಭ್ರಮದಿಂದ ಹೇಳುತ್ತಿದ್ದ.
ಶತಮಾನಕ್ಕಿಂತ ವರ್ಷ ಮೊದಲೇ ಅಂದರೆ 99 ವರ್ಷ ಬಾಳಿ ಹೋದ ಅಜ್ಜ ಹೋಗುವಾಗ ನನಗೆ ಒಂದು ಟ್ರಂಕ್ ಪುಸ್ತಕ ಕೊಟ್ಟಿದ್ದ. ಎಲ್ಲ ಪುಸ್ತಕದಲ್ಲೂ ಅಡಿ ಟಿಪ್ಪಣಿ, ಸಾಲಿನ ಕೆಳಗೇ ಗೀಟು.. ಅಜ್ಜನ ಪುಸ್ತಕ ಜೋಡಿಸುವಾಗ ಅಜ್ಜನೇ ಬಂದಂತೆ.. ಆತನ ಕೃಶ ಕೈಗಳನ್ನು ಮುಟ್ಟಿದಂತೆನಿಸಿ ಮಳೆಯ ಜತೆಗೆ ನನ್ನ ಕಣ್ಣುಗಳೂ ದನಿಗೂಡಿಸಿದವು….






0 Comments