
ಸಂತೋಷ್ ಅನಂತಪುರ
‘ಕುಪ್ಪಿ-ಎಕ್ಕಳಿಸಿ-ಪುಸ್ಕು-ತಾರಮಾರ’ ಶಬ್ದಗಳಿಂದ ತೊಡಗಿ ಬಹುತೇಕ ದಕ್ಷಿಣ ಕನ್ನಡ ಭಾಷೆಯ ಬನಿಯನ್ನು ಓದುತ್ತಿದ್ದರೆ, ಪುಳಕಗಳು ಅರಿಯದೇ ನನ್ನೊಳಗೆ ಪುಟಿದೆದ್ದುವು. ಆಗಣ-ಈಗಣದ ನೋವು, ನಲಿವುಗಳು ಮತ್ತು ಅವನ್ನೆಲ್ಲಾ ಹೊದ್ದಿರುವ ನಿಮ್ಮ ಆತ್ಮದ ತುಣುಕುಗಳು, ಕಾಡೊಳಗಿಂದ ಬಂದ ಪ್ರತಿಯೊಬ್ಬರದ್ದೂ ಆಗಿದೆ. ಇಂತಹ ಸೂಕ್ಷ್ಮ ಆಪ್ತತೆಗಳನ್ನು ಹೆಣೆಯುವ ಮೂಲಕ ನೀವು ಇಷ್ಟವಾಗುತ್ತೀರಿ. ಚದುರಿ ಬಿದ್ದ ಆತ್ಮದ ತುಣುಕುಗಳ ಕಥಾನಕಗಳನ್ನು ಕಾಗೆ ಮುಟ್ಟಿದ್ದೇ ಅವು ಪಿತೃಗಳಿಗೂ ತಲುಪಿ ಬಿಡುತ್ತವೆ.
ನಿಮ್ಮ ನಿತ್ಯದ ಆಗು ಹೋಗುಗಳಲ್ಲಿ ಯಕ್ಷಗಾನವು ಹಬ್ಬಿ ಚಾಚಿದ್ದನ್ನು ಢಾಳಾಗಿ ಕಾಣಬಹುದು. ಪರಿಣಾಮ ನಿಮ್ಮ ಪಯಣದುದ್ದದ್ದಕ್ಕೂ ಅದು ನಿಮ್ಮದೇ ಒಂದು ಭಾಗವಾಗಿ ಬಿಡುತ್ತದೆ. ತಾಳಮದ್ದಳೆಯ ಅರ್ಥಗಾರಿಕೆಯು ಪ್ರೀತಿಸಿದ ಹೆಣ್ಣನ್ನು ಕರುಣಿಸಲು ಕಾರಣವಾದರೆ; ಮಿಕ್ಕಂತೆ ನಿಮ್ಮ ಇತರೆಲ್ಲಾ ಚಟುವಟಿಕೆಗಳಲ್ಲೂ ಯಕ್ಷಗಾನದ ಕೊಡುಗೆಯನ್ನು ಸಾಕಷ್ಟು ಕಾಣಬಹುದು.
ಉದ್ದಕ್ಕೂ ಯಕ್ಷಗಾನದ ಜೊತೆಗಿನ ನಿಮ್ಮ ಅಳಿಸಲಾಗದ ನಂಟು, ಹಾಗೆಯೇ ಯಕ್ಷಗಾನ ಮತ್ತು ನೀವು ಪರಸ್ಪರ ಕೊಟ್ಟು ತೆಗೆದುಕೊಂಡದ್ದು ಕಂಡುಬರುತ್ತದೆ. ಜನಪದ ಮತ್ತು ಯಕ್ಷಗಾನವು ನಿಮಗೆ ನೀಡಿದ್ದನ್ನು ಜೊತೆಗೆ ನೀವು ಆ ಕ್ಷೇತ್ರಕ್ಕೆ ಮಾಡಿದ್ದೆಲ್ಲವನ್ನೂ ನೋಡಿದಾಗ; ಕಲೆಯು ನಮ್ಮನ್ನು ಮನುಷ್ಯನನ್ನಾಗಿಸುತ್ತಲೇ, ಅದಿಲ್ಲದೆ ನಾವಿಲ್ಲ ಎಂಬಲ್ಲಿವರೆಗೆ ನಾವು ಕಲೆಯ ಒಂದು ಅಂಗವಾಗಿ ಬಿಡುತ್ತೇವೆನ್ನುವುದನ್ನು ಮನಗಂಡೆ.
ಆಡಾಡುತ್ತಲೇ ಆಡುವ ಅರ್ಥಗಾರಿಕೆ ಮತ್ತದು ಹೊಮ್ಮಿಸುವ ಕಲ್ಪನೆಗಳು ಚಿಂತನೆಗಳಾಗಿ ಬಿಡುತ್ತವೆ. ಅಂತಹ ಯೋಚನೆಗಳನ್ನು ಒಡೆದು, ಕಟ್ಟಿ ಮತ್ತೆ ಮುರಿದು ಹೊಸದನ್ನು ಕಟ್ಟುವಲ್ಲಿನ ನಿಮ್ಮ ಶ್ರಮ ಅನನ್ಯ. ಸಂಸ್ಕೃತಿ-ಸಂಸ್ಕಾರ, ಭಾಷೆ-ಸಾಹಿತ್ಯ, ಜನಪದ ಹಾಗೂ ನೆಲದ ಬದುಕು ಅಂತ ಎಲ್ಲೆಲ್ಲೋ ಓಡಾಡಿ, ಅನುಭವವನ್ನು ಗಳಿಸಿಕೊಂಡು ಬೆಳೆದು ನಿಂತ ರೀತಿ ಇದೆಯಲ್ಲ ಅದು ನೀವು ನಡೆದು ಬಂದ ದಾರಿಗೆ ಬೆಳಕನ್ನು ಚೆಲ್ಲಿ ಮುಂದಿನ ಹಾದಿಗೆ ದೀಪವಾಗಿಬಿಡುತ್ತದೆ.

ಹಲವಾರು ಬರಹಗಳಲ್ಲಿ ಕಾನನವನ್ನು ನೋಡಿ, ಸುತ್ತಿ ಅನುಭವಿಸಿದ್ದೇನೆ. ಆದರೆ ‘ಬಿಳಿಮಲೆ’ಯನ್ನೂ ಒಳಗೊಂಡಂತೆ ಇತರ ಬಹಳಷ್ಟು ನೀವು ಹೊಕ್ಕ ಮಲೆಗಳೊಳಗೆ ನಮ್ಮನ್ನೂ ಸುತ್ತಿಸಿದಾಗ ಪಡೆದ ಆನಂದಾನುಭವವೇ ಬೇರೆ. ಕಳೆದ ಕಡು ಕಷ್ಟದ ಬಾಲ್ಯವನ್ನು ಓದಿದಾಗ ಕತ್ತಲೆಯೊಳಗೂ ಮತ್ತೆ ಮತ್ತೆ ಕತ್ತಲೆಯೇ ದಟ್ಟವಾಗಿ ಹೊದ್ದು ಮಲಗಿದೆಯೋ ಎಂದೆನಿಸಿಬಿಟ್ಟಿತು. ತುಂಡು ವಸ್ತ್ರವು ನಿಮ್ಮನ್ನು ಅಪ್ಪಿಕೊಂಡ ಕ್ಷಣದವರೆಗಿನ ನಿಮ್ಮ ದಿನಗಳನ್ನು ಓದಿದಾಗ, ಜಪಾನಿನ ಬಿಸಿನೀರ ಬುಗ್ಗೆಯಲ್ಲಿ ನೀವಿಳಿಯುವಿರಿ ಅಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ. ಅದಕ್ಕೆ ಆರೋಗ್ಯ ಕಾರಣವೆನ್ನುವುದನ್ನು ಪುಟಗಳನ್ನು ತಿರುವಿದಾಗ ತಿಳಿದು ಬಂತು.
ಬಾಲ್ಯವನ್ನು ಕಾಡೊಳಗೆ ಕಳೆದುದ್ದಲ್ಲದೆ, ವಿಶಿಷ್ಟ ಪ್ರಾಣಿ, ಕೀಟ, ಪಕ್ಷಿ, ತೊರೆ, ಹಸಿರು ಅಂತೆಲ್ಲವುಗಳ ಜೊತೆಗೆ ಭಾವನಾತ್ಮಕ ಬಂಧವನ್ನು ಬೆಸೆದುಕೊಂಡು, ಸ್ನೇಹವನ್ನೂ ಸಂಪಾದಿಸಿದ್ದನ್ನು ನೋಡಿದಾಗ ‘ರೋಯಿತ’ ನನ್ನ ಪಾಲಿಗೆ ‘ಮೋಗ್ಲಿ’ಯಾಗಿಬಿಟ್ಟ. ನಾಡ ಜಾತ್ರೆಯ ಪ್ರಖರ ಬೆಳಕಲ್ಲಿ ಕಾಡ ಕತ್ತಲೆಯು ನೀಡಿದ ಒಲುಮೆಯನ್ನು ನೀವು ಬಿಟ್ಟುಕೊಟ್ಟಿಲ್ಲ. ಕಾಡಿನ ಅನಂತ ಕತ್ತಲೆಯಲ್ಲಿ ಬಹುತೇಕರು ಕಾಣದ್ದನ್ನು ನೀವು ಕಂಡಿರಿ, ನಮಗೂ ಕಾಣಿಸಿದಿರಿ.
ಭೂಮಿಯ ಮೇಲೆ ಓಡಾಡಿದ ಎಲ್ಲಾ ಮಣ್ಣಲ್ಲೂ ಒಂದಿಷ್ಟು ಬೇರೂರುತ್ತಲೇ ಅಲ್ಲಿನದ್ದಷ್ಟೊಂದನ್ನು ಸ್ವೀಕರಿಸಿ, ಮತ್ತೊಂದರತ್ತ ಜಿಗಿಯುತ್ತಲೇ ಸಾಗುವ ನಿಮ್ಮ ಯಾತ್ರೆಯಲ್ಲಿ ಭಿನ್ನ ನೆಲದ ಸಾಂಸ್ಕೃತಿಕ ಹಾಗೂ ಜನಪದದ ಗಂಧ ಗಟ್ಟಿಯಾಗಿ ಸೂಸುತ್ತಿರುತ್ತದೆ. ಕಡು ಗಾಡಕತ್ತಲೆಯ ಕಾಡಿನ ಅನುಭವವನ್ನು ಮಾಸಿ ಹೋಗದಂತೆ ನೋಡಿಕೊಳ್ಳುವುದಿದೆಯಲ್ಲ ಅದು ನಮ್ಮನ್ನು ನಾವಾಗಿರಿಸಿಕೊಳ್ಳುವ ನಿಜದ ಯತ್ನ. ಅಂತಹ ಪ್ರಾಮಾಣಿಕ ಯತ್ನವನ್ನಿಲ್ಲಿ ಕಾಣಬಹದುದು.
ದೊಡ್ಡದೊಂದು ಬನ್ಸ್ ತಿಂದು, ಸೋಜಿ ಕುಡಿದು ಉಳಿದ ಎಂಟಾಣೆಯನ್ನು ಆಳವಾದ ಚಡ್ಡಿಯೊಳಗಿರಿಸಿ ‘ದೇವೇಂದ್ರನ ಆಡಂಬಲದೊಳ್, ಯಕ್ಷ ಕಿನ್ನರಿಗಳ ಲೋಕದೊಳ್’ ವಿಹರಿಸುತ್ತಿರುವಾಗ ಧುತ್ತೆಂದು ನಿದ್ರೆಯು ಆವರಿಸಿ ಬಿಟ್ಟಿತಲ್ಲ! ಮತ್ತೆ ಎಚ್ಚರವಾದಾಗ ಬಣ್ಣದ ವೇಷಗಳು ಮಸುಕಾಗಿ ಕಂಡವು. ಆದರೂ ಯಕ್ಷಗಾನವನ್ನು ನೋಡಬೇಕೆಂಬ ಆಸೆಯನ್ನು ರೆಪ್ಪೆಗಳು ಮುಚ್ಚಿ ಕಮರಿಸಿಬಿಟ್ಟವು. ಆಗ ಥಟ್ಟನೆ ಮುನ್ನೆಲೆಗೆ ಬಂದದ್ದು ‘ಎಂಟಾಣೆ’! ಹಾಗೆ ಬಂದದ್ದೇ, ಮುಚ್ಚಿದ ರೆಪ್ಪೆಗಳನ್ನು ಬಲವಂತದಿ ತೆರೆಸಿ, ಕಣ್ಣುಜ್ಜಿಕೊಳ್ಳುತ್ತಲೇ ಆಳವಾದ ಚಡ್ಡಿಯ ಜೇಬೊಳಗೆ ಕೈಯನ್ನು ಇಳಿಸಿದರೆ ‘ಇಪ್ಪತ್ತೈದು ಪೈಸೆ’ಯು ಅದೆಲ್ಲೋ ಚೆಲ್ಲಿ ಹೋದದ್ದನ್ನು ಓದಿದಾಗ ಅಲ್ಲಿದದ್ದು ನೀವಾಗಿರದೆ, ಅದು ಅಕ್ಷರಶಃ ನಾನೇ ಆಗಿದ್ದೆ.
ರಂಗದ ಮೇಲಿನ ಕೀಚಕ ಸೈರೇಂದ್ರಿಯನ್ನು ಮೋಹಿಸುತ್ತಿರುವಷ್ಟರಲ್ಲಿ ಗ್ಯಾಸ್ ಲೈಟ್ ತೂಕಡಿಸಲು ತೊಡಗಿತು, ‘ಇರು ಈಗ ಬಂದೆ…’ ಎಂದು ಸೈರೇಂದ್ರಿಗೆ ಹೇಳಿ, ಕೀಚಕನೇ ಹೋಗಿ ತೂಕಡಿಸುತ್ತಿದ್ದ ಗ್ಯಾಸ್ ಲೈಟ್ ಗೆ ಗಾಳಿ ಹಾಕಿ ಎಚ್ಚರಿಸಿ ಮತ್ತೆ ತೂಕಡಿಸದಂತೆ ಮಾಡಿ ಬಂದದ್ದು ಚೌರಿಗ ಕೃಷ್ಣಪ್ಪನೋ? ಯಕ್ಷಲೋಕದ ಕೀಚಕನೋ? ಎನ್ನುವ ಜಿಜ್ಞಾಸೆಯೊಳಗೆ ಇನ್ನೂ ನಾನಿದ್ದೇನೆ. ಪೂಮಲೆ ಬೆಟ್ಟದ ಬುಡದಲ್ಲಿ ಅರಳಿದ ನಿಮಗೆ, ಬಂಟಮಲೆ-ಪೂಮಲೆಯಲ್ಲಿ ರಾಮಾಯಣ-ಮಹಾಭಾರತದ ತುಣುಕುಗಳೂ ಕಾಣಸಿಗುತ್ತವೆ. ಅಲ್ಲೂ ಯಕ್ಷಲೋಕವು ನಿಮ್ಮ ಜೊತೆಗೇ ಇರುತ್ತದೆ.

ನೋವುಗಳನ್ನು ಹಾಸ್ಯದ ಕಣ್ಣಿಂದ ನೋಡುತ್ತೀರಿ. ಹಾಗಾಗಿ ನಿಮ್ಮ ನೋವುಗಳನ್ನು ಹಾಸ್ಯಗಳನ್ನಾಗಿಸಿ ಬದುಕನ್ನು ಮತ್ತೆ ಹಳಿಯ ಮೇಲೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತೀರಿ. ತಮ್ಮನ್ನು ತಾವೇ ಹಾಸ್ಯಕ್ಕೆ ವಸ್ತುವಾಗಿಸಿಕೊಂಡು ಬದುಕಿನ ಏಕತಾನತೆಯನ್ನು ಒಡೆಯುತ್ತೀರಿ. ನಿಮಗೆ ನೀವೇ ಸಮಾಧಾನ ಹೇಳಿಕೊಂಡು ಮುಂದೆ ಸಾಗುತ್ತಿರುತ್ತೀರಿ. ಇದ್ದದ್ದನ್ನು ಇದ್ದಂತೆಯೇ ವಿವರಿಸಿದ ರೀತಿಯಲ್ಲಿ ಆತ್ಮೀಯತೆ ಇದೆ. ನಿಮ್ಮಿಂದ ತಯಾರಿಸಲ್ಪಟ್ಟ ‘ಅಕ್ಷರ ರಸಂ’ ಎಲ್ಲೂ ಏರುಪಾಕವಾಗಲಿಲ್ಲ, ಹದವೂ ತಪ್ಪಲಿಲ್ಲ. ನೀವು ಬಡಿಸಿದ ಆತ್ಮದ ತುಣುಕುಗಳ ರುಚಿ ಚೆನ್ನಾಗಿವೆ. ಅದಕ್ಕೆ ಕಾರಣ, ನೀವು ಬೆಳೆದು ಬಂದ ಪರಿಸರ ಹಾಗು ಪರಿಸ್ಥಿತಿ ಎನ್ನುವುದು ನನ್ನ ಅನಿಸಿಕೆ.
ನಾವೇ ಗುನುಗುವ ನಮ್ಮ ನೆಚ್ಚಿನ ಯಾವುದೋ ರಾಗದಂತೆ, ಹಾಡಿನಂತೆ ಓದಿನುದ್ದಕ್ಕೂ ಏಕಾಂತದ ಅನುಭವವಾಗುತ್ತದೆ. ಆಗಾಗ ‘ರಿಜುವನೆಟ್’ ಆಗಲು ನಮ್ಮದೇ ಆದ ಏಕಾಂತದ ಅಗತ್ಯವಿದೆ. ಅದಕ್ಕೊಂದು ದಾರಿಯನ್ನೂ ತೋರಿದ್ದೀರಿ. ಹೀಗೇ ಎಂದು ಇಲ್ಲದ ಹೇಗೂ ಇರಬಹುದಾದ ನಿಮ್ಮ ಪ್ರಯಾಣ ಸುಖವನ್ನ ಬಲ್ಲವರೇ ಬಲ್ಲರದರ ಸವಿಯನ್ನು. ನಿಮ್ಮ ಅನುಭವ ವಲಯದ ವಿಸ್ತಾರ ದೊಡ್ಡದು. ಭಾಷೆಯ ಮೇಲಿನ ವಾಂಛೆ, ಮೋಹ ಮತ್ತದಕ್ಕಾಗಿ ನಿಮ್ಮನ್ನು ನೀವು ಮುಡುಪಾಗಿರಿಸುವ ಪರಿಯು ವಿಶಿಷ್ಟವೂ, ಅಭಿನಂದನೀಯವೂ ಆಗಿದೆ. ಅಷ್ಟೇ ಯಾಕೆ ಜಪಾನಿನಲ್ಲಿ ‘ಕಲ್ಲುರ್ಟಿ’ ಯನ್ನು ಪ್ರತಿಷ್ಠಾಪಿಸಿದವರು ನೀವು !
ಒಟ್ಟಿನಲ್ಲಿ- ಬಿಳಿಮಲೆಯ ಕಾಡಲ್ಲಿ ಸಿಕ್ಕ ಕರಿಗಲ್ಲಿಗೆ ಅನುಭವದ ಉಳಿಯ ಏಟು ಬಿದ್ದಾಗ ಎದ್ದ ‘ರೋಯಿತ’ ರೂಪಗೊಂಡದ್ದು ‘ಪುರುಷೋತ್ತಮ’ನಾಗಿ. ಇವೆಲ್ಲವನ್ನೂ ಒಬ್ಬ ಸಾಮಾನ್ಯ ಓದುಗನ ನೆಲೆಯಲ್ಲಿ ಹೇಳಬೇಕೆಂದೆನಿಸಿತು. ಅದನ್ನಿಲ್ಲಿ ಅಕ್ಷರ ರೂಪಕ್ಕಿಳಿಸಿದ್ದೇನೆ.






0 Comments