ಶೈಲಜಾ ಹಾಸನ
ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಇಷ್ಟ ಪಡದವರು ಯಾರಿದ್ದಾರೆ. ಅಲ್ಲಿನ ಹಸಿರು ಸಿರಿ, ತಂಪು ವಾತಾವರಣ, ಜುಳುಜುಳು ಹರಿಯುವ ನದಿ, ಧುಮ್ಮಿಕ್ಕುವ ಜಲಪಾತ, ಝರಿ, ಕಾಫಿ,ಅಡಿಕೆ ತೋಟ, ಮರಗಿಡ ಹೀಗೆ ಅಲ್ಲಿನ ರಮಣೀಯತೆಗೆ ಮನಸೋಲದವರೇ ಇಲ್ಲ. ಮಲೆನಾಡಿನ ಪರಿಸರದ ಸವಿ ಸವಿಯಲೆಂದೆ ವಾರಾಂತ್ಯದಲ್ಲಿ ಸಾಕಷ್ಟು ಜನ ತಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಮಲೆನಾಡಿನ ಊರುಗಳಿಗೆ ಸಣ್ಣ ಪ್ರವಾಸ ಹೋಗಿ ಖುಷಿ ಪಟ್ಟು ಬರುವವರಿದ್ದಾರೆ. ಆದರೆ ಮಲೆನಾಡಿನ ಪರಿಸರವನ್ನು ಅಷ್ಟಾಗಿ ಇಷ್ಟ ಪಡೆದವರೂ ಕೂಡ ಇದ್ದಾರೆ ಅಂದರೆ ನಂಬುತ್ತೀರಾ, ನಂಬಲೇ ಬೇಕು ಏಕೆಂದರೆ ಮಲೆನಾಡನ್ನು ಅಷ್ಟಾಗಿ ಇಷ್ಟ ಪಡದವರಲ್ಲಿ ನಾನೂ ಕೂಡ ಒಬ್ಬಳು.
ನಾನು ಮದುವೆಯಾಗಿದ್ದು ಮಲೆನಾಡಿನವರನ್ನು. ನಮ್ಮ ಅಮ್ಮ ತಮ್ಮ ಮಗಳನ್ನು ಮದುವೆಯಾಗುವ ಹುಡುಗ ಚೆನ್ನಾಗಿ ಓದಿರಬೇಕು, ಸರ್ಕಾರಿ ಉದ್ಯೋಗವಿರಬೇಕು ಜೊತೆಗೆ ಸಾಕಷ್ಟು ಆಸ್ತಿ ಪಾಸ್ತಿ ಇರಬೇಕುವ ಅನ್ನೊ ಕಂಡಿಷನ್ ಹಾಕಿಕೊಂಡಿದ್ದರು. ಹಾಗಾಗಿ ಆ ಮೂರು ಅರ್ಹತೆ ಇರುವ ಹುಡುಗನಿಗೇ ಮದುವೆ ಮಾಡಿಕೊಡ ಬೇಕೆಂದು ಬಯಸಿದ್ದರಿಂದ ಅಂತಹ ಹುಡುಗನಿಗೆ ಹುಡುಕಾಟ ನಡೆಸಿದ್ದರು. ಅವರ ಅವಿರತ ಪ್ರಯತ್ನದಿಂದಾಗಿ ಅಂತಹ ವರನೇ ಸಿಕ್ಕೆ ಬಿಟ್ಟರು. ತಡಮಾಡದೆ ಕೂಡಲೇ ಅಮ್ಮಾ ಮದುವೆ ಮಾಡಿ ಬಿಟ್ಟರು ಅದೂ ಮಲೆನಾಡಿನ ಗಂಡಿಗೆ.ನನಗೊ ಮಲೆನಾಡಿನ ಚಿತ್ರಣಗಳನ್ನು ಕಥೆ ಕಾದಂಬರಿಗಳಲ್ಲಿ ಓದಿದ್ದೆ, ಸಿನಿಮಾಗಳಲ್ಲಿ ನೋಡಿದ್ದೆ ಅಷ್ಟೇ.
ಮಲೆನಾಡಿನ ನೆಂಟರು ಕೂಡ ನನಗಿರಲಿಲ್ಲ. ಸ್ನೇಹಿತರಿದ್ದರೂ ಮಲೆನಾಡಿಗೆ ಹೋಗಲಾಗಿರಲಿಲ್ಲ. ಹಾಗಾಗಿ ಮಲೆನಾಡಿನ ಅನುಭವ ವೈಯಕ್ತಿಕವಾಗಿ ನನಗಿರಲಿಲ್ಲ. ಅಲ್ಲಿನ ಆಚಾರ ವಿಚಾರಗಳು ಪರಿಸರ ಎಲ್ಲವೂ ನನಗೆ ಹೊಸದು. ತೋಟದಲ್ಲಿ ಒಂಟಿ ಮನೆ, ಕತ್ತಲಾಗುತ್ತಿದ್ದಂತೆ ಹುಳ ಹುಪ್ಪಡಿಗಳ ಶಬ್ಧ ಭಯ ಹುಟ್ಟಿಸಿದರೂ ಮನೆತುಂಬ ಜನರು ಇರುವ ಕಾರಣಕ್ಕೆ ಮನೆಯೊಳಗೆ ಭಯಕಾಡುತ್ತಿರಲಿಲ್ಲ. ಆದರೆ ರಾತ್ರಿ ಹೊರ ಬರುವ ಧೈರ್ಯವಂತೂ ಇರಲೇ ಇಲ್ಲ. ಮಲೆನಾಡಿನಲ್ಲಿ ನಗರದಲ್ಲಿ ಇದ್ದಂತೆ ಆಗಸದೆತ್ತರದ ಮನೆಗಳಾಗಲಿ, ಅತಿಯಾದ ಜನ ಸಂಖ್ಯೆಯಾಗಲಿ ಕಾಣ ಸಿಗುವುದಿಲ್ಲ.

ಮನೆಗಳ ಸಂಖ್ಯೆ ತೀರಾ ಕಡಿಮೆ, ಆದರೆ ಎಲ್ಲಿ ನೋಡಿದರೂ ಹಸಿರಿನ ಸೊಬಗು ಕಣ್ಣಿಗೆ ಆಹ್ಲಾದವನ್ನು ಉಂಟುಮಾಡುತ್ತಿತ್ತು. ತುಂಬು ಹಸಿರಿನ ಮಧ್ಯ ಇರುವ ಮನೆ . ಮನೆ ಮುಂದೆ ಹಿಂದೆ ಕಾಫಿ ಗಿಡಗಳು, ಕಿತ್ತಲೆ,ಹಲಸು,ನಂದಿ,ಹೊನ್ನೆ,ಸಿಲ್ವರ್ ಮರಗಳು, ಕಪ್ಪು ಮೆಣಸಿನ ಬಳ್ಳಿಗಳ ತೋಟ. ಇನ್ನು ಮನೆಯ ಪಕ್ಕದಲ್ಲಿ ಆಗಸದೆತ್ತರಕ್ಕೆ ಬೆಳೆದ ಎರಡು ಎರಡು ತೆಂಗಿನ ಮರಗಳು. ಒಟ್ಟಿನಲ್ಲಿ ಮಲೆನಾಡಿನ ಸೊಬಗು ಖುಷಿ ನೀಡಿತ್ತು.ಜೊತೆಗೆ ರುಚಿ ರುಚಿಯಾದ ನಾನು ಕಂಡರಿಯದ,ಕೇಳಿರದ ಊಟ ತಿಂಡಿ ಕೂಡ ಇಷ್ಟವಾಗಿತ್ತು.
ಮದುವೆಯಾದ ಹೊಸತರಲ್ಲಿ ತೋಟಕ್ಕೆ ಕರೆದುಕೊಂಡು ಹೋಗಿದ್ದ ಪತಿ ಏಲಕ್ಕಿ ಗಿಡ ತೋರಿಸಿ “ಏಲಕ್ಕಿ ಎಲ್ಲಿ ಬಿಡುತ್ತದೆ ” ಅಂತ ಕೇಳಿದ್ದರು.ಕಾಫಿ ಗಿಡದಲ್ಲಿ ಕಾಫಿ ಬೀಜಗಳು ಬಿಟ್ಟಿದ್ದನ್ನು ನೋಡಿದ್ದ ನಾನು ” ಇನ್ನೆಲ್ಲಿ ಬಿಡುತ್ತದೆ ಗಿಡದೊಳಗೆ ” ಅಂತ ಹೇಳಿದ್ದೆ.” ಅಯ್ಯೋ ದೇವರೇ ಏಲಕ್ಕಿ ಗಿಡದಲ್ಲಿ ಬಿಡಲ್ಲ, ಬುಡದಲ್ಲಿ ಬಿಡುತ್ತದೆ” ಅಂತ ತೋರಿಸಿ ಜೋರಾಗಿ ನಕ್ಕಿದ್ದರು. ಮೊಟ್ಟ ಮೊದಲ ಬಾರಿಗೆ ಏಲಕ್ಕಿ ಗಿಡ ನೋಡಿದ ಸಂಭ್ರಮದಲ್ಲಿ ನಾನೂ ಅವರೊಂದಿಗೆ ಮನದುಂಬಿ ನಕ್ಕಿದ್ದೆ.
ಉದ್ಯೋಗಸ್ಥೆಯಾಗಿದ್ದ ನನಗಾಗಿ ನಗರದಲ್ಲಿ ವಾಸ್ತವ್ಯ ಹೂಡಿದ್ದರೂ ಪತಿಯ ಆಸಕ್ತಿ, ಆಸೆ, ಮನಸ್ಸು ಎಲ್ಲವೂ ತೋಟವೇ ಆಗಿದೆ. ಅದು ನನ್ನ ಪತಿಯ ಮತ್ತೊಂದು ಪ್ರಾಣ ಅಂತ ಅಂದರೂ ತಪ್ಪಿಲ್ಲ. ಸರ್ಕಾರಿ ಉದ್ಯೋಗಲ್ಲಿದ್ದರೂ ತೋಟದ ಕೆಲಸ ಬಿಟ್ಟವರಲ್ಲ. ದುಡಿದುದೆಲ್ಲವನ್ನೂ ತೋಟಕ್ಕೆ ಹಾಕ್ತಿರಾ ಅನ್ನೊ ನನ್ನ ದೂರನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೆ ತೋಟವನ್ನು ಮಗುವಿನಂತೆ ಕಾಪಾಡಿಕೊಳ್ಳುತ್ತಿದ್ದಾರೆ. ಒಮ್ಮೆ ತೋಟಕ್ಕೆ ಹೋಗಿ ನಾನೂ ಕೆಲಸದವರೊಂದಿಗೆ ಅದು ಇದು ಮಾತನಾಡುತ್ತಾ ಮುಂದೆ ಮುಂದೆ ಹೋಗಿದ್ದೆ.
ಹಿಂದಿನಿಂದ ಬಂದ ಭಾವನ ಪುಟ್ಟ ಮಗಳು ಆಂಟಿ ಹಿಂದುಗಡೆ ನಿನ್ನ ಡ್ರೆಸ್ ರಕ್ತದಿಂದ ಕೆಂಪಾಗಿದೆ ಅಂತ ಅಂದಾಗ ಗಾಭರಿ ಆಯ್ತು, ಯಾವುದಾದರೂ ಹುಳ ಕಡಿತಾ, ಕಡಿದಿದ್ದು ಗೊತ್ತಾಗಲೆ ಇಲ್ಲವಲ್ಲ ಅಂತ ಡ್ರೆಸ್ ಎಳೆದು ನೋಡಿದರೆ ರಕ್ತದ ಕಲೆ ಚೆನ್ನಾಗಿಯೆ ಕಾಣಿಸುತ್ತಿದೆ. ಪೀರಿಯಡ್ ಏನಾದರೂ ಆಗಿಬಿಡ್ತಾ ಅಂತ ಮತ್ತಷ್ಟು ಗಾಭರಿಯಾಯ್ತು. ಆದರೆ ಅದಕ್ಕೆ ಇನ್ನೂ ಎರಡು ವಾರ ಇದೆ.ಹೇಗಾದರೂ ಆಗಲಿ ಅಂತ ಗಿಡದ ಮರೆಗೆ ಹೋಗಿ ನೋಡಿಕೊಂಡೆ. ಅದು ಆ ಕಲೆಯಲ್ಲ ಅಂತ ಗೊತ್ತಾಗಿ ಸಮಾಧಾನ ಆಯ್ತು.
ಮತ್ತೆ ಹೇಗಾಯಿತು ಈ ಕಲೆ ಅಂತ ಚಿಂತೆಯಿಂದ ಇರುವಾಗಲೆ ಪಕ್ಕದಲ್ಲಿ ಎಲ್ಲೋ ಇದ್ದ ಅತ್ತೆ ಬಂದಾಗಲೆ ಚಿಂತೆಗೆ ಮುಕ್ತಿ ಸಿಕ್ಕಿದ್ದು. ತೋಟದಲ್ಲಿ ಜಿಗಣೆ ಗಳಿದ್ದು ಅದು ಕಚ್ಚಿ ರಕ್ತ ಹೀರಿ ಬಿಟ್ಟು ಹೋದ ಮೇಲೆ ಕಚ್ಚಿದ ಜಾಗದಿಂದ ರಕ್ತ ಸುರಿಯುತ್ತಲೆ ಇರುತ್ತದೆ. ರಕ್ತ ಸುರಿಯುವುದು ನಿಲ್ಲಬೇಕಾದರೆ ಕಚ್ಚಿದ ಜಾಗಕ್ಕೆ ಹುಳಿ ಹಚ್ಚಬೇಕು ಅಂತ ಅತ್ತೆ ಹೇಳಿ ತಾವೆ ಜಿಗಣೆ ಕಚ್ಚಿದ ಜಾಗ ಹುಡುಕಿ ನಿಂಬೆ ರಸ ಹಚ್ಚಿದರು. ಸಣ್ಣ ಇರುವೆ, ಸೊಳ್ಳೆ ಕಚ್ಚಿದರೂ ಗೊತ್ತಾಗೊ ನಮಗೆ ಜಿಗಣೆ ಕಚ್ಚಿ ಹೊಟ್ಟೆ ತುಂಬಾ ರಕ್ತ ಹೀರಿದರೂ ಅದು ಹೇಗೆ ನನಗೆ ಚೂರು ಗೊತ್ತಾಗಲಿಲ್ಲ ಅನ್ನೋದೆ ನನ್ನ ಯಕ್ಷ ಪ್ರಶ್ನೆ ಯಾಗಿತ್ತು.ಅದಕ್ಕೂ ಅತ್ತೆಯ ಬಳಿ ಉತ್ತರ ಇತ್ತು.
ತೋಟದಲ್ಲಿ ಕೆಲಸ ಮಾಡುವಾಗ ಜಿಗಣೆಗಳು ಕೆಲವೊಮ್ಮೆ ದೇಹಕ್ಕೆ ಕಚ್ಚಿ ರಕ್ತ ಹೀರಿ ಬೀಳುವುದೇ ಗೊತ್ತಾಗುವುದಿಲ್ಲ. ಹಾಗೆಂದು ಜಿಗಣೆಗೆ ಹೆದರಿ ಕೂರುವಂತಿಲ್ಲ. ಮೈಗೆ ಕಚ್ಚಿ ರಕ್ತ ಹೀರುವ ಜಿಗಣೆಯನ್ನು ಕಿತ್ತೆಸೆದು ತಮ್ಮ ಪಾಡಿಗೆ ತಾವು ಕೆಲಸ ಮಾಡುವುದು ಮಲೆನಾಡಿಗರಿಗೆ ರೂಢಿಯಾಗಿರುತ್ತದೆ. ಇವುಗಳು ಮೈಗೆ ಹತ್ತದಂತೆ ಕೈ ಕಾಲುಗಳಿಗೆ ನಿಂಬೆಹಣ್ಣಿನ ರಸ, ಸೋಪಿನ ದ್ರಾವಣ, ತಂಬಾಕು ರಸವನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಜಿಗಣೆ ಕಚ್ಚಿ ಆಸ್ಪತ್ರೆಗೆ ಸೇರಿದವರು ಇಲ್ಲವೇ ಇಲ್ಲ ಎನ್ನಬೇಕು. ಜಿಗಣೆ ಎಂದರೆ ಮಾರು ಉದ್ದ ಓಡುವ, ಅಸಹ್ಯ ಪಡುವ ಜನ ಬಹಳಷ್ಟಿದ್ದಾರೆ. ಆದರೆ ಈ ಜಿಗಣೆಗಳು ಕಚ್ಚುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಮಲೆನಾಡಿನಲ್ಲಿ ಇವುಗಳ ನಡುವೆ ಬದುಕುವವರ ಅನುಭವಕ್ಕೆ ಬಂದಿರುತ್ತದೆ.

ಕಜ್ಜಿ, ವೃಣಗಳ ಜಾಗಕ್ಕೆ ಜಿಗಣೆಗಳು ಕಚ್ಚಿ ರಕ್ತ ಹೀರುವುದರಿಂದ ಬ್ಯಾಕ್ಟೀರಿಯಾ ಜಿಗಣೆಯನ್ನು ಸೇರಿ ಗಾಯಗಳು ವಾಸಿಯಾದ ನಿದರ್ಶನಗಳು ಬೇಕಾದಷ್ಟಿವೆ. ತೋಟ, ಕಾಡುಗಳಲ್ಲಿರುವ ಈ ಜಿಗಣೆಗಳು ಒಂದು ರೀತಿಯಲ್ಲಿ ಉಪದ್ರವಿಯಂತೆ ಕಂಡರೂ ಇವುಗಳಿಂದ ಯಾವುದೇ ತೊಂದರೆಯಿಲ್ಲ. ಇವು ಕಚ್ಚಿದರೂ ನೋವಾಗುವುದಿಲ್ಲ. ಜತೆಗೆ ದೇಹದಲ್ಲಿರುವ ಗಾಯವನ್ನೇ ಹುಡುಕಿ ಕಚ್ಚುವ ಇವು ಕೆಲವೊಮ್ಮೆ ಕಚ್ಚಿದ ಸ್ಥಳದಲ್ಲಿದ್ದ ಗಾಯಗಳು ಬಹುಬೇಗ ಗುಣಮುಖವಾಗುತ್ತವೆ.ಹೀಗೆ ಜಿಗಣೆ ಪುರಾಣವನ್ನೆ ಹೇಳಿದರು.ನನಗಂತೂ ತೋಟಕ್ಕೆ ಹೋದರೆ ಇವತ್ತಿಗೂ ಜಿಗಣೆ ಭಯ ತಪ್ಪಿಲ್ಲ.
ಮಲೆನಾಡಿನ ಮಳೆ ಅನೇಕ ಕವಿಗಳ ಕವಿತೆಗೆ ಸ್ಪೂರ್ತಿಯಾದರೆ ನನಗಂತೂ ಆ ಭೀಕರ ಮಳೆಯು ದಿಗಿಲು ಹುಟ್ಟಿಸುತ್ತದೆ. ಮಳೆ ಮಲೆನಾಡಿನ ಜನಜೀವನದ ಒಂದು ಭಾಗ. ಎಷ್ಟೋ ಬಾರಿ ಹಗಲು ರಾತ್ರಿ ಎನ್ನದೇ ಸುರಿಯುವ ಮಳೆಯು ಮಲೆನಾಡಿಗೇ ವಿಶಿಷ್ಟ. ಸದಾ ಕವಚಿಕೊಂಡಿರುವ ಮೋಡ, ಬೀಸುವಗಾಳಿ, ಆ ಗಾಳಿಯಲ್ಲೂ ಮಳೆಯ ಸಿಂಚನ, ಬಿಸಿಲನ್ನು ಕಾಣದೇ ಮಂಕಾಗಿರುವ ಗಿಡ ಮರಗಳು, ದಬ ದಬ ಸುರಿಯುವ ಮಳೆ, ಆಗಾಗ ಗುಟುರು ಹಾಕುವ ಗುಡುಗು, ಮಿಂಚುಗಳ ಚೆಲ್ಲಾಟ – ಇವೆಲ್ಲವೂ ಸಿನಿಮಾದಲ್ಲಿ ನೋಡಲು ಸೊಗಸು. ನಗರದಲ್ಲಿ ಹುಟ್ಟಿ ಬೆಳೆದ ನನಗೆ ಈ ಮಳೆ ಯಾವತ್ತಿಗೂ ರೇಜಿಗೆ ವಿಷಯವೆ.
ಸದಾ ಸುರಿಯುವ ಮಳೆಯಲ್ಲಿ ಪಾಚಿಕಟ್ಟಿದ ಅಂಗಳದಲ್ಲಿ ಎಷ್ಟೇ ಎಚ್ಚರಿಕೆಯಿಂದ ಹೆಜ್ಜೆ ಇರಿಸಿದರೂ ಜಾರುವ ನನ್ನ ಪರಿಸ್ಥಿತಿ ದೇವರಿಗೆ ಪ್ರೀತಿ.ಕೊರೆಯುವ ಚಳಿ, ಸದಾ ಮನೆಯೊಳಗೆ ಸೆರೆಯಾಗಿಸುವ ಪರಿ, ಕರೆಂಟ್ ಇಲ್ಲದ ದಿನಗಳು ವಾರಗಳು ಅಬ್ಬಬ್ಬಾ ನೆನೆಸಿಕೊಳ್ಳಲೆ ಕಷ್ಟ.ಹಾಗಾಗಿ ಅನಿವಾರ್ಯತೆ ಇರದ ಹೊರತು ಮಳೆಗಾಲದಲ್ಲಿ ಅಲ್ಲಿ ಕಾಲಿಡಲಾರೆ. ಅಂತೂ ಅಲ್ಲಿ ಇರುವುದು ನಮ್ಮನೆ, ಇಲ್ಲಿ ಇರುವುದು ಸುಮ್ಮನೆ ಅನ್ನುವ ಹಾಗಿದೆ ನನ್ನ ಹಾಗು ಮಲೆನಾಡಿನ ಸಂಬಂಧ






0 Comments