ಸೌಮ್ಯ ದಯಾನಂದ
ಇಲ್ಲ! ಸಾಧ್ಯವಾಗುತ್ತಿಲ್ಲ! ಹ್ಯಾಂಗೋವರ್ ನಿಂದ ಹೊರಬರಲು ಆಗುತ್ತಿಲ್ಲ. ಮನಸ್ಸಿನ್ನೂ ಮನೆಗೆ ಬಂದಿಲ್ಲ. ಇದರಿಂದ ಹೊರಬರಲು ನೆನಪುಗಳನ್ನು ಹೊರ ಹಾಕದೆ ವಿಧಿಯಿಲ್ಲ! ಮನದೊಳಗೆ ಭಾವಗಳ ಮುಗಿಲು ತುಂಬಿರುವಾಗ, ಮಳೆಯ ಹನಿಯ ಸುರಿಸದಿರುವವೇ ಕಂಗಳು..?! ಮಳೆ ನಿಂತ ಮೇಲೆ ತಾನೆ ಮರದ ಹನಿಗಳ ಆರ್ಭಟ! ಅನುಭವದ ಮಳೆಯಲ್ಲಿ ತೊಯ್ದುಹೋದ ಮನವು ಆರುವ ಮುನ್ನ ಆಗಬೇಕು ಭಾವವಿರೇಚನ!
ಒಂದು ಕ್ಷಣವಾದರೂ ನಾವು ಕಳೆದು ಹೋಗಬೇಕಂತೆ! ನಾವು ಕಳೆದು ಹೋದಾಗ ಮಾತ್ರ ನಮಗೆ ನಾವು ಸಿಗಲು ಸಾಧ್ಯ! ನಿನ್ನೆಯ ಪ್ರವಾಸದಲ್ಲಿ ನಾವು ನಮ್ಮನ್ನು ಕಳೆದುಕೊಂಡೆವು. ನಾವೆಲ್ಲಾ ನೆನಪಿನ ಆಗರವಾದೆವು! ಮಳೆಯ ಭಯದಲ್ಲೇ ಹೊರಟ ನಮಗೆ ಗೆಳತಿಯ ಮುಂಜಾನೆಯ ಹಾಸ್ಯದ ಕಚಗುಳಿಯು ಎಲ್ಲವನ್ನೂ ಮರೆಸಿತು. ಮನಸ್ಸನ್ನು ಮುದಗೊಳಿಸಿತು. ರಸಋಷಿಯ ಆತ್ಮಸಂಗಾತ ದೊರೆತ ಕುಪ್ಪಳಿಯಲ್ಲಿ ನಾವೆಲ್ಲ ಕುಪ್ಪಳಿಸುವ ಮಕ್ಕಳಾದೆವು! ನಮ್ಮನ್ನು ನಾವು ಮರೆತೆವು. ಪ್ರಕೃತಿಯ ಮಡಿಲಿನಲ್ಲಿ ಮಗುವಾಗಿ ಸುಖಿಸಿದೆವು. ಅದರೊಂದಿಗೆ ಎಲ್ಲರ ಆರೈಕೆ, ಪ್ರೀತಿ, ಸ್ನೇಹ, ಮಮತೆಯ ಹಿಮ್ಮೇಳದಲ್ಲಿ ಬಾಲ್ಯ ಮರುಕಳಿಸಿತು. ಏಕ್ ಬಾರ್ ಫಿರ್ ಬಚಪನ್ ಆ ಗಯಾ ಥಾ! ನಮಗೆ ನಮ್ಮ ಸ್ನೇಹದ ಹೊಸದೊಂದು ಪರಿ ಅರ್ಥವಾಯಿತು. ಹೊಸ ಹೊಸ ಅನುಭವಗಳನ್ನು ಪಡೆದೆವು. ಮೌಲ್ಯಗಳನ್ನು ಅರಿತೆವು. ಸ್ಪೂರ್ತಿ ಪಡೆದೆವು.
ಕನ್ನಡ ಎಂದರೆ ಮೂಡುವ ಭಾವನೆಗಳು ವಿಶೇಷವಾದವುಗಳು. ಕನ್ನಡವೆಂದರೆ ಅಮ್ಮನ ಮಡಿಲು. ಚಳಿಯಲ್ಲಿ ಹೊದಿಕೆಯೊಳಗೆ ಮಲಗುವ ಅಪ್ಯಾಯಮಾನತೆ. ಅಪ್ಪನ ಹೆಗಲೇರಿ ಸಂತೆಯನ್ನು ನೋಡುವ ಮಗುವಿನ ಮನದ ಆನಂದದಂತೆ. ಗೆಳೆಯನ ಕೈ ಹಿಡಿದು ಜಾತ್ರೆಯಲ್ಲಿ ನಡೆಯುವ ಆಪ್ತತೆ ಹಾಗೂ ಹೆಮ್ಮೆ. ಈ ಎಲ್ಲಾ ಕನ್ನಡದ ಭಾವನೆಗಳನ್ನು ಒಟ್ಟೊಟ್ಟಾಗಿ ಅನುಭವಿಸಿದ ಭಾಗ್ಯ ನಮ್ಮದು. ಇಂತಹ ಕನ್ನಡದ ಮನಸ್ಸುಗಳೊಂದಿಗೆ ಕುಪ್ಪಳಿಯ ಕವಿಮನೆಯಲ್ಲಿ ಕಳೆದ ಕ್ಷಣಗಳು ಕೋಟಿ ಕೋಟಿ ಕೊಟ್ಟರೂ ಸಿಗಲಾರವು. ಸಮಾನ ಮನಸ್ಕರೊಡನೆ ಕಳೆಯುವ ಸಮಯ ಸ್ವರ್ಗಕ್ಕೆ ಸಮ! ಭಾವ ಸಮ್ಮಿಲನವಾದ ಕ್ಷಣಗಳವು. ಶೃತಿ ಮಾಡಿದ ವೀಣೆಯಂತಾಗಿದ್ದವು ನಮ್ಮೆಲ್ಲರ ಮನಗಳು!!

ಕುವೆಂಪುರವರ ದಿವ್ಯಾಶೀರ್ವಾದವನ್ನು ಪಡೆದ ಸೌಭಾಗ್ಯ ನಮ್ಮದು. ಅಲ್ಲಿನ ಪ್ರಕೃತಿಯನ್ನು, ಅನುಭವಿಸಿದ ಧನ್ಯತಾಭಾವವನ್ನು ವರ್ಣಿಸುವ ಸಾಮರ್ಥ್ಯ ನನಗಿಲ್ಲ. ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳ ಸನ್ನಿವೇಶಗಳು ಅತಿಯಾಗಿ ಕಾಡಿದವು. ಐತಾ-ಪೀಂಚಲು ಇಲ್ಲೇ ಎಲ್ಲೋ ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿರಬಹುದೇನೋ ಎಂದು ಅನಿಸತೊಡಗಿತ್ತು! ಹೂವಯ್ಯನ ಧ್ಯಾನಸ್ಥ ಮನಸ್ಥಿತಿಯನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಳ್ಳಲು ಅಂದಿನ ಮುಂಜಾವಿನ ಪರಿಸರ ಸಹಕರಿಸಿತ್ತು. ಸಣ್ಣಗೆ ಸುರಿಯುತ್ತಿದ್ದ ಸೋನೆ ಮಳೆ, ಸೂರ್ಯೋದಯವಾಗುತ್ತಾ ಎಲ್ಲೆಡೆ ಪಸರಿಸುತ್ತಿದ್ದ ಬೆಳಗು, ಬೇಂದ್ರೆಯವರ ‘ಬೆಳಗಿನೊಂದಿಗೆ’ ಪೈಪೋಟಿಯಿಡುತ್ತಿತ್ತು!!
ಭಾವಾನುಭವದ ಜೇನಿನಲ್ಲಿ ಅದ್ದಿದಂತಿದ್ದ ಎಲ್ಲರ ನುಡಿಗಳು ಹಾಗೂ ಗೆಳತಿಯರ ಗಾನ ಮಾಧುರ್ಯದ ಅಮೃತ ಪಾನ ನಮ್ಮೆಲ್ಲರ ಆನಂದವನ್ನು ಅಮರವಾಗಿಸಿತ್ತು. ಗಾಯಕಿಯರು ಭಾವದೊಳಗೆ ನಾವುಗಳೂ ಮಿಂದೆದ್ದೆವು. ನೆನಪಿನಂಗಳದಲ್ಲಿ ಎಂದೂ ಬಾಡದ ಪಾರಿಜಾತಗಳರಳಿದವು. ಕವಿಶೈಲವನ್ನು ಏರಿದ ಆನಂದವು ಅಲ್ಲಿ ನಾವು ಒಟ್ಟಾಗಿ ಪ್ರಕೃತಿ ಗೀತೆಯನ್ನು ಹಾಡಿದಾಗ ಇಮ್ಮಡಿಸಿತು. ಗೆಳತಿಯರ ಕಂಠದಲ್ಲಿ ಮೂಡಿಬಂದ ಮಾಧುರ್ಯಭರಿತ ಹಾಡುಗಳು ಸುಂದರ ಪ್ರಕೃತಿಯ ಮಡಿಲಿನಲ್ಲಿ ಪರಮಾನಂದವನ್ನು ಮೂಡಿಸಿದವು. ಶ್ರೀ ಕುವೆಂಪುರವರು ಆ ಜಾಗದಲ್ಲಿ ಅನುಭವಿಸಿರಬಹುದಾದ ಧ್ಯಾನಸ್ಥ ಮನದ ಆನಂದದ ವಿದ್ಯುತ್ ಸಂಚಾರ ನಮಗೂ ಆಯ್ತು. ಕುವೆಂಪುರವರ ಒಡನಾಡಿಯೋ ಎಂಬಂತೆ ನಮ್ಮೊಡನೆ ಬೆರೆಯುತ್ತಿದ್ದ ಆ ನಾಯಿಯನ್ನು ನಾನೀಗ ಮರೆತರೆ ಆ ಜೀವಕ್ಕೆ ಅನ್ಯಾಯ ಮಾಡಿದಂತೆ! ಗುತ್ತಿಯನ್ನೇ ಪದೇಪದೇ ನೆನಪಿಸುತ್ತಾ ನಮ್ಮೊಂದಿಗೆ ಬರುತ್ತಿದ್ದ ಆ ಜೀವ, ನಮ್ಮೀ ಪಯಣದ ಅನುಭವಗಳಿಗೊಂದು ಮೂಕಸಾಕ್ಷಿ!
ಕವಿಶೈಲ ಇಳಿಯುವಾಗ ಭಜನೆಯಂತೆ ಗೀತೆಯನ್ನು ಹೇಳಿಕೊಡುತ್ತಾ ಸಾಗಿದ ಪರಿಯು ಎಲ್ಲರನ್ನೂ ಹುರುಪುಗೊಳಿಸಿತ್ತು. ಹೆಜ್ಜೆಹೆಜ್ಜೆಯೂ ದೃಢವಾಗಿತ್ತು. ಕವಿಶೈಲದ ಕಲ್ಲು ಕಲ್ಲುಗಳೂ ಕಿವಿಯಾಗಿದ್ದವು! ಕುವೆಂಪುರವರು ಬೆಳೆದು, ಬಾಳಿ ಬದುಕಿದ ಆ ಮನೆಯು ನಮಗೆ ಅವರ ಜೀವನದ, ಸಾಧನೆಯ ಪರಿಚಯ ನೀಡಿದ್ದಲ್ಲದೇ ನಮ್ಮಲ್ಲಿ ಜ್ಞಾನದೊಂದಿಗೆ ಹೆಮ್ಮೆಯ, ಅಭಿಮಾನದ ಭಾವನೆಯನ್ನು ಮೂಡಿಸಿತು.
ಶಿಕ್ಷಣ ನಿರಂತರವಾದದ್ದು, ಜೀವನದುದ್ದಕ್ಕೂ ಎಡತಾಕುವಂತದ್ದು. ಶೃಂಗೇರಿಯಲ್ಲಿ ನಮ್ಮೆಲ್ಲರ ಶೈಕ್ಷಣಿಕ ಜೀವನಕ್ಕೆ ಆಶೀರ್ವಾದವನ್ನು ಪಡೆಯುವ ಸೌಭಾಗ್ಯದೊಂದಿಗೆ ತಾಯಿಯ ಪ್ರಸಾದವೂ ದೊರೆತದ್ದು ನಮ್ಮ ಅದೃಷ್ಟ. ಸುಂದರ, ಪವಿತ್ರ ವಾತಾವರಣವು ಮನಸ್ಸಿಗೆ ಶಾಂತಿಯನ್ನು ನೀಡಿತು. ಬಾಲ್ಯದ ಜಾತ್ರೆಯ ನೆನಪಿನೊಂದಿಗೆ ಅಲ್ಲಿನ ಸಾಲು ಸಾಲು ಅಂಗಡಿಗಳಿಗೆ ಲಗ್ಗೆಯಿಟ್ಟ ನಾವು ಜಯಶೀಲರಾಗಿಯೇ ಹೊರಬಂದೆವೆಂದು ಬೇರೆ ಹೇಳಬೇಕಾಗಿಲ್ಲ. ಅಕ್ಷರಶಹ ಮಕ್ಕಳಾಗಿದ್ದೆವು ನಾವು!

ಜೈನಧರ್ಮದ ಮೇರು ಮುಂದಾಳು ಕೊಂಡಕುಂದವರ್ಯರ ಧ್ಯಾನದ ಸ್ಥಳವಾದ ಕುಂದಾದ್ರಿಗೆ ಹೋದ ಅನುಭವವನ್ನು ಹೇಳುವಾಗಲೂ ರೋಮಾಂಚನ!. ಕಿರಿದಾದ ಹಾದಿಯಲ್ಲಿ ತೆರೆದ ವಾಹನದಲ್ಲಿ ಮಾಡಿದ ಪಯಣವು ಮೋಡಗಳ ಗರ್ಭದೊಳಗೆ ನಮ್ಮನ್ನು ಸೇರಿಸಿತ್ತು. ಕೊಡೈಕೆನಾಲ್ ನ ಶೀತಲ ವಾತಾವರಣವನ್ನು ನೆನಪಿಸುತ್ತದೆ. ಅಲ್ಲಿಯೂ ತುಂತುರು ಮಳೆಯ ಹಾಡು!
ಆಗುಂಬೆಯ ಸ್ನೇಹ ಸಂಜೆಯಂತೂ ನಮ್ಮ ಬದುಕಿನ ಪಯಣಕ್ಕೊಂದು ನೆನಪಿನ ಬುತ್ತಿ!. ಅಲ್ಲಿನ ಮೋಡಗಳು ಕಣಿವೆಗಳನ್ನು ಆವರಿಸುತ್ತಿದ್ದಂತೆಯೇ ನಮ್ಮ ಮನಗಳು ಪ್ರಕೃತಿಯಲ್ಲಿ ಲೀನವಾಗುತ್ತವೆ. ಹೀಗೆ ನಮ್ಮನ್ನು ಸಮಾಧಿಗಿಳಿಸಿ, ನಮಗೆ ಪದೇ ಪದೇ ಮೆಲುಕು ಹಾಕುವ ನೆನಪುಗಳನ್ನು ನೀಡಿದ್ದಕ್ಕೆ ನಾನಾರಿಗೆ ಕೃತಜ್ಞಳಾಗಿರಲಿ?!






Hi