ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಲೆಗಳಲ್ಲಿ ಮದುಮಗಳು ರಂಗಪ್ರಯೋಗ – ನಾ ಕಂಡಂತೆ’ – ರಮೇಶ್ ಗುರುರಾಜರಾವ್

ರಮೇಶ್ ಗುರುರಾಜರಾವ್

ಫೋಟೋ ಕೃಪೆ : ಸುರೇಶ್ ಕುಮಾರ್

ಮೊದಲಿಗೆ ಒಂದಷ್ಟು confessions….. ನಾನು ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿದವನಲ್ಲ….. ಹೀಗಾಗಿ, ಕಾದಂಬರಿಯ ಸೂಕ್ಷ್ಮತೆಗಳ ಅರಿವು ಅಷ್ಟಾಗಿ ಇಲ್ಲ…. ಅಲ್ಪ ಸ್ವಲ್ಪ ರಂಗಭೂಮಿ, ಸಾಹಿತ್ಯ ಪರಿಚಯ….. ಹೀಗಾಗಿ ನಾನು ಮುಂದೆ ಹೇಳುವುದೆಲ್ಲಾ, ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗನ್ನಿಸಿದ್ದು…. ಇದರಲ್ಲಿ ಯಾವುದೇ ಪೂರ್ವಾಗ್ರಹ ಇಲ್ಲ…. ಇಷ್ಟು ದೊಡ್ಡ ಪ್ರಯೋಗವನ್ನು, ಸಣ್ಣ ಲೇಖನದಲ್ಲಿ ಹಿಡಿದಿಡುವುದು ಕಷ್ಟವೇ…. ಪ್ರಯತ್ನಿಸಿದ್ದೇನೆ…. ಮುಂದೆ ನಾನು ಹೇಳುವುದೆಲ್ಲಾ ನನ್ನ ಮನಸ್ಸಿನಾಳಕ್ಕೆ ಇಳಿದದ್ದು… ಕಥಾವಸ್ತುವಿನ ಬಗ್ಗೆ ನಾನು ಮಾತನಾಡುತ್ತಿಲ್ಲ… ಆ ಮಟ್ಟದ ಶಕ್ತಿ ನನಗಿಲ್ಲ… ಒಂದು ರಂಗಪ್ರಯೋಗವನ್ನು ಪ್ರೇಕ್ಷಕನಾಗಿ ನೋಡಿ, ನನ್ನೊಳಗೆ ದಾಖಲಾಗಿದ್ದು ಮಾತ್ರ ಇಲ್ಲಿ ಬರೆದಿದ್ದೇನೆ. ಇಷ್ಟು ಹೇಳಿ, ಮುಂದುವರಿಯುತ್ತೇನೆ.
ನನ್ನ ಮಟ್ಟಿಗೆ, ಕಂಡದ್ದು ನೆನಪಿನಲ್ಲಿ ಇಲ್ಲವಾದರೆ, ಅದು ಅನುಭವವಲ್ಲ… ಅದು ಬರೀ ಕಂಡಿದ್ದು ಅಷ್ಟೇ….
ಇದಕ್ಕೊಂದು ದೊಡ್ಡ ಅಪವಾದ, ಹಿರಿಯ ನಿರ್ದೇಶಕ ಸಿ ಬಸವಲಿಂಗಯ್ಯ (ನಾವು ರಂಗದ ಮಂದಿಗೆ ಅವರು “ಬಸು” “ಬಸು ಸಾರ್”) ನಿರ್ದೇಶನದ ಭರ್ತಿ ಒಂಭತ್ತು ಗಂಟೆಗಳ ರಾತ್ರಿಪೂರ ರಂಗಪ್ರಯೋಗ. ಕೆ ವೈ ನಾರಾಯಣಸ್ವಾಮಿಗಳು, 700+ ಪುಟದ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ನಾಟಕ ರೂಪಕ್ಕೆ ತಂದಿದ್ದೊಂದು ದೊಡ್ಡ ಸಾಹಸವಾದರೆ, ಅದನ್ನು ರಂಗದ ಮೇಲೆ ತಂದು ನಮ್ಮನ್ನು ಬರೋಬ್ಬರಿ 9 ಘಂಟೆಗಳ ಕಾಲ ಹಿಡಿದು ಮಲೆಗಳಲ್ಲಿ ಹಿಡಿದು ಕೂಡಿಸಿದ್ದು ಅದ್ಭುತ ಸಾಧನೆಯೇ.
ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ರಂಗಾಯಣದಲ್ಲಿ ಈ ನಾಟಕ ಆದಾಗ, ನನಗೆ ಹೊಗಲಾಗಲಿಲ್ಲ… ನನಗೆ ಇವತ್ತಿಗೂ ಅದರ ಬಗ್ಗೆ ಖೇದವಿದೆ… ಇವತ್ತಿಗೂ ನನ್ನ ರಂಗಭೂಮಿ ಗೆಳೆಯರು ಈ ಬಗ್ಗೆ ಹೆಮ್ಮೆಯಿಂದ ಮಾತಾಡಿದಾಗ ನನಗೆ ಹೊಟ್ಟೆಕಿಚ್ಚು….
ಈ ಬಾರಿ ಏನೇ ಆಗಲಿ ಹೋಗುವುದೇ ಸೈ ಎಂದು ನಿರ್ಧರಿಸಿದ್ದಾಗಿತ್ತು… ಅದೂ ಮನೆಗೆ ಸಮೀಪದಲ್ಲಿ ಆದಾಗ ಅವಕಾಶ ಬಿಡುವುದುಂಟೆ ? ಆ ವಿಶಿಷ್ಟ ಅನುಭವಕ್ಕೆ , ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ… ಶನಿವಾರ, 20ನೇ ತಾರೀಖು, ಆದ ಪ್ರದರ್ಶನ, ನನಗೇ ಖಂಡಿತಾ ಮೋಸ ಮಾಡಲಿಲ್ಲ.
ಕಲಾಗ್ರಮದ 20+ ಎಕರೆ ವಿಸ್ತೀರ್ಣದ ಜಾಗದಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಜಾಗ ಬಳಸಿಕೊಂಡ ಚಾಣಾಕ್ಷತನ ಬಸು ಅವರದ್ದು…. ಅವರೇ ಹೇಳಿದಂತೆ, ರಂಗಭೂಮಿಯಲ್ಲಿ, ರಂಗಮಂದಿರಗಳೇ ಎಲ್ಲ ಅಲ್ಲ… ನಾವು alternative ಆದ theatre space ಹುಡುಕಬೇಕು (ಗಣೇಶ ಅಮೀನಗಡರ “ಮೈಸೂರು ಮದುಮಗಳು” ಪುಸ್ತಕದಿಂದ ತೆಗೆದುಕೊಂಡ ಸಾಲು)…. ಹೌದು ನನಗೂ ನೆನಪಾಗಿದ್ದು ಮೇಷ್ಟ್ರು ಕಲಾಕ್ಷೇತ್ರದ ಹಿಂಭಾಗದಲ್ಲಿ, ಏನೂ ಇಲ್ಲದ ಜಾಗದಲ್ಲಿ, ಎಲ್ಲವನ್ನೂ ಸೃಷ್ಟಿಸಿ, ಮಾಡಿದ್ದ ರಂಗಕ್ರಾಂತಿ
ಬಸು ಮತ್ತು ಕಲಾವಿದರ ತಂಡ ಸೃಷ್ಟಿಸಿದ್ದು, 4 theatre spaces.
ಮೊದಲನೆಯದ್ದು ಕೆರೆ ಅಂಗಳ… ಇಡೀ ಜಾಗವನ್ನು ಮೇಘರವಳ್ಳಿಯಾಗಿ ಪರಿವರ್ತಿಸಿ, ಕೆರೆ, ಏರಿಗಳನ್ನು ನಿರ್ಮಿಸಿ ಮಾಡಿದ್ದ ರಂಗಸ್ಥಳ. ಎರಡನೆಯದು, ಮನೆಗಳು, ಮನೆಯ ಅಂಗಳಗಳು, ಸೇತುವೆಗಳು, ಇವೆಲ್ಲಾ ನಿರ್ಮಾಣವಾಗಿದ್ದ, ಬಯಲು ರಂಗಮಂದಿರ. ಮುಂದಿನದ್ದು, ಬಿದಿರುಮೆಳೆ ಇದ್ದ, ಅದರ ಮಧ್ಯೆ ಅಂಗಡಿ, ಶಾಲೆ ಭಾವಿ, ಹುತ್ತ, ಮಸೆಗಲ್ಲು ಇದ್ದ ರಂಗಸ್ಥಳ. ಕೊನೆಯದಾಗಿ, ಹೊಂಗೆ ಮರಗಳ ಮಧ್ಯೆ ಇದ್ದ ಕಟ್ಟಡಗಳನ್ನೇ ಬಳಸಿಕೊಂಡು ನಿರ್ಮಿಸಿದ್ದ, ಎರಡು ಮನೆಗಳು, ಅದರ ಪಕ್ಕದಲ್ಲೇ, ಹಳ್ಳ, ತೊರೆ ಇದ್ದ ಹೊಂಗೆರಂಗ (ಈ ರಂಗಸ್ಥಳಗಳ ಬಗ್ಗೆ ಮುಂದೆ ನನಗೆ ಅನ್ನಿಸಿದ್ದು ಮುಂದೆ ಹೇಳುತ್ತೇನೆ)
ಕೆರೆ ಅಂಗಳದ ರಂಗಸ್ಥಳದಲ್ಲಿ ನಾನು ಹೋದಾಗ ಇದ್ದದ್ದು ಕೆಲವೇ ಮಂದಿ…. ಅಯ್ಯೋ, ಇಷ್ಟೇ ಮಂದಿಯಾ ಎಂದುಕೊಂಡವನಿಗೆ, ನಂತರ ತಿಂಡಿ ಕಾಫಿಗಳ ಲಗ್ಗೇಜ್ ಸಮೇತ ದಾಳಿಯಿಟ್ಟ ಜನಸಾಗರ ನೋಡಿ ಆಶ್ಚರ್ಯಭರಿತ ಸಂತೋಷ…. ಜನ ಒಂಭತ್ತು ಘಂಟೆಗಳ ಕಾಲ, ಅದೂ ಪೂರ್ತಿ ರಾತ್ರಿ ಕೂತು, ಗೊಣಗದೆ, ಲೊಚಗುಟ್ಟದೆ, ನಾಟಕ ಆಸ್ವಾದಿಸುತ್ತಾರಾ ಎನ್ನುವುದು ನನ್ನ ಪ್ರಶ್ನೆ ಆಗಿತ್ತು… ಸ್ವಲ್ಪ ಹೊತ್ತಿನಲ್ಲೇ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಯೇಬಿಟ್ಟಿತ್ತು.

ರಂಗನಿರ್ಮಾಣ ಮಾಡಿದ ಶಶಿಧರ ಅಡಪ ಮತ್ತು ತಂಡಕ್ಕೆ hats off… ಅದೆಂಥಾ ಅದ್ಭುತ ಲೋಕ ಸೃಷ್ಟಿಸಿದ್ದರು ಈ ನಾಲ್ಕೂ ಸ್ಥಳಗಳಲ್ಲಿ !! ವಾಹ್…
ನಾಟಕ, ಅರ್ಜುನ ಜೋಗಿಯರ ಪ್ರಾರ್ಥನೆಯೊಂದಿಗೆ ಆರಂಭ. ಮಾದೇವನ ಮಡದಿ ಪಾರ್ವತಿಯನ್ನು ಪ್ರಾರ್ಥಿಸಿದ ಮೇಲೆ, ಅವರುಗಳಿಂದಲೇ ನಾಟಕದ ಎಲ್ಲಾ ಪಾತ್ರಗಳ ಪರಿಚಯ. ಅವರಿಗೆ ಸಿಕ್ಕ ಚಿಕ್ಕೆಯುಂಗುರದ ಲೋಕದಿಂದ ಒಂದೊಂದೇ ಪಾತ್ರಗಳನ್ನು ಪರಿಚಯಿಸಿದ್ದು ವಿಶಿಷ್ಟವಾಗಿತ್ತು. ಗುತ್ತಿ, ಹುಲಿಯಾ, ಕುಂಟ ವೆಂಕಟಪ್ಪ ನಾಯ್ಕ, ಸೇರೇಗಾರ, ಹೀಗೆ.
ಮೇಘರವಳ್ಳಿ ಈ ರಂಗಸ್ಥಳದ ಹಳ್ಳಿ, ಪಾತ್ರಗಳು ಬರುತ್ತಿದ್ದಂತೆ, ಧೂಮಲೀಲೆಯಿಂದ ಮೋಡಗಳ ಚಿತ್ತಾರ ಸೃಷ್ಟಿಸಿದ್ದು ಅದ್ಭುತ. ಹಾಡಿನಲ್ಲಿ ಬಂದ, ಮೇಘರವಳ್ಳಿಯ ಬಗ್ಗೆ ಒಂದು ಸಾಲು “ಪುಟ್ಟಪ್ಪನ ತವರಿನ ಮಗಳು ಪುಟ್ಟ ಮಗಳು” ತುಂಬಾ ಹಿಡಿಸಿತು. ಇದಾದ ಕೂಡಲೇ, ಬಂದದ್ದು ಇಂಬಳ ಮತ್ತು “ಮುಷ್ಠಿ ಗಾತ್ರದ ಸೆಗಣಿಯನ್ನು ಉಂಡೆ ಮಾಡಿ ಅದನ್ನು ತಳ್ಳಿಕೊಂಡು ಬರುವ ಕಾಳುಗಾತ್ರದ” ಸೆಗಣಿಹುಳು. ಹೀಗೆ ಮಲೆನಾಡಿನ ಒಂದು ಪುಟ್ಟ ಅಜ್ಞಾತ ಸ್ಥಳವೊಂದರ ಚಿತ್ರವನ್ನು ಕಟ್ಟಿಕೊಡುತ್ತಾ ಹೊಗುತ್ತಾರೆ… (ನನಗೆ ತಿಳಿದುಬಂದದ್ದು ಕುವೆಂಪು, ಬರೀ ಸೆಗಣಿ ಹುಳುವೊಂದರ ಬಗ್ಗೆಯೇ 8 -10 ಪುಟಗಳಷ್ಟು ವಿವರಣೆ ಕೊಡುತ್ತಾರೆ, ಅವರ ಕಾದಂಬರಿಯಲ್ಲಿ). ಇಲ್ಲಿಂದ ಮುಂದೆ ನಾಟಕ ವೇಗವಾಗಿ ಸಾಗುತ್ತದೆ. ಹಾಡುಗಳು, ನೃತ್ಯ, ಎಲ್ಲವೂ ಉಂಟು ಇಲ್ಲಿ… ಹಂದಿ ಹೊಡೆಯುವ ದೃಶ್ಯ, ಇದೇ ಸಮಯದಲ್ಲಿ, ಕಾಡು ಹಂದಿ, ತುಳಸಿಕಟ್ಟೆ ಬೀಳಿಸುವ ದೃಶ್ಯ ಸಾಕಷ್ಟು ಸಂಕೇತಗಳನ್ನು ಕೊಡುತ್ತದೆ. ಐತ ಮತ್ತು ಗೆಳೆಯರು ಮಾಡುವ ದ್ರೌಪದಿ ವಸ್ತ್ರಾಪಹರಣ ನಾಟಕದ ದೃಶ್ಯ, ಪ್ರೇಕ್ಷಕರನ್ನು ನಗಿಸಿ ಹಗುರವಾಗಿಸುತ್ತದೆ. ಇಲ್ಲಿ ಬರುವ ಪ್ರಮುಖ ಪಾತ್ರಗಳ ಪೈಕಿ ಮುಖ್ಯವಾದವು ಐತ ಮತ್ತು ಪಿಂಚಲು.ಈ ಗಂಡ ಹೆಂಡತಿಯ ಪ್ರೇಮ ಸಲ್ಲಾಪ, ಮುಕುಂದ ಬಂದು ಐತನನ್ನು ಸುಳ್ಳು ನೆಪ ಹೇಳಿ ದೂರ ಕಳಿಸಿ ಪಿಂಚಲುವಿನ ಜೊತೆ ಮಾತನಾಡುವುದು ನಡೆಯುತ್ತದೆ. ಆದರೆ, ಅಷ್ಟರವರೆಗೆ tempo ಕಾದುಕೊಂಡಿದ್ದ ನಾಟಕ ಪಿಂಚಲು ಮತ್ತು ಮುಕುಂದನ ಸಂಭಾಷಣೆಯ ವೇಳೆಗೆ ಯಾಕೋ ಜರ್ರನೆ ಇಳಿಯಿತು. ಪೂರ್ತಿ ಇಳಿಯಿತು ಎನ್ನುವಷ್ಟರಲ್ಲಿ ಸರಕ್ಕನೆ ಮೇಲೇರಿತು. ಐತ ಮತ್ತು ಗೆಳೆಯರು ದ್ರೌಪದಿ ವಸ್ತ್ರಾಪಹರಣದ ನಾಟಕದ ಸಮಯದಲ್ಲಿ ಹೇಳುವ ಮಾತು “ಶ್ರುತಿ ಮೀರೋ ಹಕ್ಕು ಆ ಭರತ ಮುನಿಗೆ ಕೂಡ ಇಲ್ಲಾ” ಯಾಕೋ ತುಂಬಾ ಆಪ್ತವಾಯಿತು. ಈ ಸಮಯದಲ್ಲಿ, ಪಾದ್ರಿ ಜೀವರತ್ನಯ್ಯನ ಬೈಸಿಕಲ್ (ಪಾತ್ರಧಾರಿಗಳ ಬಾಯಲ್ಲಿ ಬಿಸೇಕಲ್) ಐತ ಮತ್ತಿತರ ಆಳುಗಳಿಗೆ ಅಚ್ಚರಿ ಎನಿಸುತ್ತದೆ. ಅದನ್ನು ಹತ್ತಿ ದೇವಯ್ಯ ಬಿದ್ದು ಗಾಯ ಮಾಡಿಕೊಳ್ಳುವ ದೃಶ್ಯ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತದೆ. ಈ ಮಧ್ಯೆ ಒಂದು ಬಹು ಮುಖ್ಯವಾದ ಪಾತ್ರವೆಂದರೆ ಗುತ್ತಿ ಮತ್ತು ಅವನ ನಾಯಿ ಹುಲಿಯಾ… ಈ ಜೋಡಿ ಕೊನೆಯವರೆಗೂ ಪ್ರೇಕ್ಷಕನ ಮನಸ್ಸಿನ ಪ್ರಪಂಚದಲ್ಲಿ ಸುತ್ತಾಡುತ್ತಲೇ ಇರುತ್ತಾರೆ…. ಗುತ್ತಿ ಮದುವೆಯಾಗಬೇಕೆಂದಿರುವ ತಿಮ್ಮಿ , ಅವಳನ್ನು ನೋಡಲು ಗುತ್ತಿ ಪಡುವ ಪಾಡು ಅಷ್ಟಿಷ್ಟಲ್ಲ. ನಾಯಿ ಹುಲಿಯಾ ಗುತ್ತಿಗಿಂತಾ ಒಂದು ಕೈ ಮೀರಿ ಚಪ್ಪಾಳೆ ಗಿಟ್ಟಿಸುತ್ತದೆ. ಕೆರೆಯ ಅಂಗಳ, ಹೈಕಳು ಮರ ಏರುವ ಪರಿ, ಎಲ್ಲವೂ ತುಂಬಾ ಸಹಜವೆನಿಸುತ್ತದೆ… ಹಿರಿಯ ಹೆಗ್ಗಡೆಯವರ ಪಾತ್ರಧಾರಿ ಅದ್ಭುತ…. ನಾಗಕ್ಕ ನಾಗತ್ತೆ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳು.
ಇನ್ನು ರಂಗಸ್ಥಳ ಎರಡು – ಬಯಲು ರಂಗಮಂದಿರ . ಶಶಿಧರ ಅಡಪರ ಅದ್ಭುತ ಕೈ ಚಳಕ ಇಲ್ಲಿ ಪ್ರತ್ಯಕ್ಷವಾಗಿತ್ತು. ಮನೆಗಳು, ಕಂಬಗಳು, ಸೇತುವೆಗಳು ಎಲ್ಲವೂ ಸೂಪರೋ ಸೂಪರ್. ಇಲ್ಲಿ ಅರ್ಜುನ ಜೋಗಿಯರ ಬದಲಾಗಿ ಸುಡುಗಾಡು ಸಿದ್ಧರು ಬಂದು ಕಥೆ ಮುಂದುವರೆಸುತ್ತಾರೆ. ಸೇತುವೆಯ ಮೇಲೆ ಉರಿಯುವ ಕೊಳ್ಳಿ ಸಿಕ್ಕಿಸಿಕೊಂಡ ದೈವ ಬಂದಾಗ ಅಚಾನಕ್ಕಾಗಿ ಬೆನ್ನ ಹಿಂದೆ ಬೆಂಕಿ ಹೊತ್ತುಕೊಂಡಿತು. ಪಾತ್ರಧಾರಿ ತಕ್ಷಣವೇ ಆ ಬಿದಿರಿನ ಕಟ್ಟನ್ನು ಕೆಳಗೆ ಕಳಚಿದ್ದಲ್ಲದೆ, ರಂಗದ ಮೇಲಿದ್ದ ಒಂದಿಬ್ಬರು ಕಲಾವಿದರು ತಕ್ಷಣ ಓಡಿಹೋಗಿ ಬೆಂಕಿ ನಂದಿಸಿದರು…. ಅಲ್ಲಿ ಬೆಂಕಿ ನಂದಿಸುತ್ತಿರುವಾಗ ದೈವದ ಪಾತ್ರಧಾರಿ, ಏನೂ ಆಗಿಲ್ಲವೆಂಬಂತೆ ಪಾತ್ರವನ್ನು ಮುಂದುವರಿಸಿದ್ದು ಆ ಪಾತ್ರಧಾರಿಯ ಸಮಯಪ್ರಜ್ಞೆಗೆ ಸಾಕ್ಷಿಯಾಯಿತು…. ನನಗೆ ತಿಳಿದ ಮಟ್ಟಿಗೆ ಪ್ರತಿಯೊಬ್ಬ ರಂಗಕಲಾವಿದರಿಗೂ ಇರಬೇಕಾದ ಬಹುಮುಖ್ಯ ಗುಣವೆಂದರೆ ಇದೇ. ಈ ರಂಗಸ್ಥಳದಲ್ಲಿ ತುಂಬಾ ಇಷ್ಟವಾದ ಹಾಡು “ಸ್ವಾಮ್ಗುಳು ಸ್ವಾಮ್ಗುಳು…” ನಂತರ ಮುಸಲ್ಮಾನ ಪಾತ್ರಧಾರಿಗಳ ಮಾತು ನೃತ್ಯ (ನಿಜವಾಗಿ ತುಂಬಾ ಸಹಜವಾಗಿತ್ತು… ನಾವು ಮಕ್ಕಳಾಗಿದ್ದಾಗ, ವರ್ಷಕ್ಕೊಮ್ಮೆ, ಮನೆಯ ಮುಂದೆ ಬಣ್ಣ ಹಚ್ಚಿಕೊಂಡು ಬರುತ್ತಿದ್ದ ಮುಸಲ್ಮಾನರು ನೆನಪಾದರು). ದೇವಯ್ಯ ಪಾದ್ರಿಗಳನ್ನು ಮನೆಗೆ ಊಟಕ್ಕೆ ಕರೆದಾಗ ಅವನ ಮನೆಯವರು ಪಾದ್ರಿಯನ್ನು ಹೊರಗೆ ಕೂಡಿಸಿ ಊಟ ಹಾಕುತ್ತಾರೆ. ಅದೇ ಸಮಯಕ್ಕೆ ದೇವಯ್ಯನ ತಂದೆ ಮತ್ತು ದೇವಯ್ಯ ಮನೆಯ ಒಳಗೆ ಕೂತು ಊಟ ಮಾಡುತ್ತಾರೆ. ಇಲ್ಲಿ ಕಂಡದ್ದು ಒಂದು ಅದ್ಭುತ ಸಂಕೇತ… ಹೊರಗೆ ಕೂತ ಪಾತ್ರಗಳಿಗೆ ವಿರುದ್ಧ ದಿಕ್ಕಿನಲ್ಲಿ ಒಳಗೆ ಇರುವ ಪಾತ್ರಗಳು ಕುಳಿತಿರುತ್ತವೆ… ಹೇಳಬೇಕಾದದ್ದನ್ನು ಸಾಂಕೇತಿಕವಾಗಿ ಆದರೆ ಸ್ಪಷ್ಟವಾಗಿ ಹೇಳಿದ್ದಾರೆ ಬಸು ಅವರು…. ಈ ರಂಗಸ್ಥಳದಲ್ಲಿ ಕಂಡ ಮತ್ತೊಂದು ಅದ್ಭುತ ಪಾತ್ರ, ಕುಂಟ ವೆಂಕಟಪ್ಪ ನಾಯ್ಕ…. ಹೆಣ್ಣಿನ ಬಗ್ಗೆ ಹುಚ್ಚು ಹತ್ತಿಸಿಕೊಂಡ ವೆಂಕಟಪ್ಪ, ಅವತ್ತಿನ ರಾತ್ರಿ ಆದ ಅನಾಹುತಕ್ಕೆ ಪಡುವ ಪಾಡು, ನಗು ತರಿಸುತ್ತದೆ…. ನಾಯಿ ಹುಲಿಯಾ ಬರ್ಕದ ವಿರುದ್ಧ ಸೆಣಸಲು ಹೋಗಿ ಕಣ್ಣು ಕಳೆದುಕೊಳ್ಳುತ್ತದೆ, ನನ್ನ ಬದಿ ಕೂತಿದ್ದ ಒಬ್ಬರು, ತಮ್ಮ ಮನೆಯ ನಾಯಿಗೇ ಕಣ್ಣು ಹೋಯಿತೇನೋ ಎಂಬಂತೆ ಭಾವುಕರಾದದ್ದು ಗಮನಕ್ಕೆ ಬಂತು. ಅದು ಆ ಪಾತ್ರದ, ಪಾತ್ರಧಾರಿಯ ತಾಕತ್ತು. ದೃಶ್ಯವೊಂದರಲ್ಲಿ ರಂಗದ ಮೇಲ್ಭಾಗದಲ್ಲಿ (ಛಾವಣಿಯಲ್ಲಿ) ಸಾಲು ದೀಪಗಳನ್ನು ಹೊತ್ತು ಕಲಾವಿದೆಯರು ನಡೆದು ಬಂದಿದ್ದು ತುಂಬಾ ಅದ್ಭುತವಾಗಿತ್ತು.. ಇಲ್ಲಿ, ದುಷ್ಟ ಮನಸ್ಸಿನ ಕೆಲ ಮುಸಲ್ಮಾನರ ನಡುವೆ, ಮಾನವೀಯತೆ ಇರುವ ಮುಸಲ್ಮಾನ ಕೂಡ ಇದ್ದಾನೆ… ಸಂದೇಶ ಸ್ಪಷ್ಟ…. ಒಳ್ಳೆಯತನ, ಮಾನವೀಯತೆ,ಕರುಣೆ , ಪ್ರೀತಿ, ವಿಶ್ವಾಸ, ಸತ್ಯವಂತಿಕೆ ಯಾರಪ್ಪನ ಮನೆಯ ಸೊತ್ತಲ್ಲ, ಯಾವ ಧರ್ಮದ ಸೊತ್ತಲ್ಲ… ಇದೆಲ್ಲದರ ಮಧ್ಯೆ ವಿವೇಕಾನಂದರ ಸಂದೇಶ ಬಂದು ಹೋಗುತ್ತದೆ. ಊಹೆ ಕೂಡ ಮಾಡಲಾಗದ ಎತ್ತರದ ಜಾಗದಲ್ಲಿ, ಬಯಲು ರಂಗಮಂದಿರದ ವಿರುದ್ಧ ದಿಕ್ಕಿನಲ್ಲಿ, ವಿವೇಕಾನಂದರ ಪಾತ್ರಧಾರಿ ಕಾಣಿಸಿಕೊಂಡು, ಅವರ ಚಿಕಾಗೋ ಸಮ್ಮೇಳನದ ಐತಿಹಾಸಿಕ ಭಾಷಣದ ತುಣುಕು ಬಂದುಹೋಗುತ್ತದೆ.

ನಂತರದ ರಂಗಸ್ಥಳ ಬಿದಿರು ಮೆಳೆ ರಂಗಸ್ಥಳ. ಇಲ್ಲಿ ಸಾವು ನೋವುಗಳಾಗುತ್ತವೆ… ಭಾವನೆಗಳ ಮಹಾಪೂರವೇ ಇಲ್ಲಿ ಹರಿಯುತ್ತವೆ….. ಸುಬ್ಬಣ್ಣ ಹೆಗ್ಗಡೆ ಪಾತ್ರಧಾರಿ ಮತ್ತೊಮ್ಮೆ ಹೈಲೈಟ್ ಆಗುತ್ತಾರೆ… ಘಟ್ಟದ ಕೆಳಗಿನಿಂದ ಬಂದ ಕಾವೇರಿ ಎಲ್ಲರ ಕಣ್ಣಿಗೆ, ದುಷ್ಟ ಮನಸ್ಸಿಗೆ, ಕ್ರೂರ ಸಂಚಿಗೆ ಆಹಾರವಾಗುತ್ತಾಳೆ, ಇನ್ನೊಂದು ಹೆಗಡೆ ಮನೆತನದ ತಲೆ ಉರುಳುತ್ತದೆ… ಒಟ್ಟಾರೆ, ಈ ರಂಗಸ್ಥಳದಲ್ಲಿ ಸಾವು ನೋವಿನದೇ ದರ್ಬಾರು…. ಇದೆಲ್ಲದರ ಮಧ್ಯೆ, ಭಾವಿಗಾಗಿ, ಹಸಿರು ಕಡ್ಡಿ ಹಿಡಿದು ನೀರಿರುವ ಸ್ಥಳ ಹುಡುಕುವ ಸನ್ನಿವೇಶ ಪ್ರೇಕ್ಷಕರ ಮನಸ್ಸನ್ನು ಸ್ವಲ್ಪ ಹಗುರಾಗಿಸುತ್ತದೆ.
ನಾಲ್ಕನೇ ಹಾಗು ಕೊನೆಯ ರಂಗಸ್ಥಳ ಹೊಂಗೆರಂಗ… ಹೊಂಗೆ ಮರಗಳ ಮಧ್ಯೆ ಇರುವ ಕಟ್ಟಡಗಳ ಬಳಕೆ ಅದ್ಭುತ…. ಇಲ್ಲಿ ಹಾರಾಡಿದ ದುಷ್ಟಬುದ್ಧಿ ವೆಂಕಟಪ್ಪ ಸಾಯುತ್ತಾನೆ, ಹೆಗಡೆ ಮನೆತನದ ಸೋದರರು ಬೇರಾಗುತ್ತಾರೆ, ಮದುಮಗಳು ಮುಕುಂದನೊಂದಿಗೆ ಹೋಗಿ ಮದುವೆಯಾಗುತ್ತಾಳೆ, ಇದಕ್ಕೆ ಪಿಂಚಲು ತನ್ನ ಧೈರ್ಯದಿಂದ ಮುನ್ನುಗ್ಗಿ ಕಾರ್ಯ ಸಾಧಿಸುತ್ತಾಳೆ….. ಹುಲಿಕಲ್ಲಿನ ನೆತ್ತಿ ಹತ್ತಿ ನಿಂತ ಗುತ್ತಿ ತಿಮ್ಮಿ, ಹುಲಿಯಾ, ಮದುಮಗಳು, ಮುಕುಂದ, ಎಲ್ಲರೂ ಹರಸಾಹಸ ಮಾಡಿದವರೇ. ಅದಕ್ಕಾಗಿ ಸಾಕಷ್ಟು ನೊಂದವರೇ. ಹುಲಿಕಲ್ಲ ನೆತ್ತಿ, ತ್ಯಾಗ ಬೇಡುವ ಸಂದರ್ಭದ ಸಂಕೇತವಾಗುತ್ತದೆ. ಕೊನೆಗೆ ಎಲ್ಲಾ ತಣ್ಣಗಾಗುತ್ತದೆ. ದೋಣಿ ಹತ್ತಿ ಹೊಸ ಬದುಕು ಕಟ್ಟುವ ಆಸೆಯಲ್ಲಿದ್ದ ಗುತ್ತಿ ತಿಮ್ಮಿ ಜೊತೆ ಇದ್ದ ನಾಯಿಯನ್ನು ದೋಣಿಯಲ್ಲಿ ಕರೆದುಕೊಂಡು ಹೋಗಲು ನಿರಾಕರಿಸಿದಾಗ, ಹುಲಿಯಾ ಏರು ಪ್ರವಾಹದ ವಿರುದ್ಧ ಧುಮುಕಿ ಈಜಲು ಹೋಗಿ ಕಳೆದುಹೋಗುತ್ತದೆ. ಯಾವಾಗಲೂ ಗುತ್ತಿ ಪ್ರೀತಿಪೂರ್ವಕ ಸಿಟ್ಟಿನಿಂದ ಅದಕ್ಕೆ ಬೈಯ್ಯುತ್ತಿದ್ದ “ಹಡಬೆಗೆ ಹುಟ್ಟಿದ್ದು” ಬೈಗುಳ, ಇಲ್ಲಿ ಗುತ್ತಿಯ ಮನಸ್ಸಿನಿಂದ ನೋವುಭರಿತ ಆಕ್ರಂದನವಾಗಿ ಹೊರಹೊಮ್ಮುತ್ತದೆ.. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅನೂಹ್ಯವಾದ ಸಂಬಂಧದ ಗಟ್ಟಿಯಾದ ಎಳೆ ಇಲ್ಲಿ ಪದರಗಳನ್ನು ನೇಯುತ್ತದೆ.
ಇನ್ನು ರಂಗಸ್ಥಳದ ಬಗ್ಗೆ ನನ್ನ ಅನಿಸಿಕೆ. ರಂಗಸ್ಥಳಗಳು, ಅವುಗಳೊಳಗೆ ನಡೆಯುವ ದೃಶ್ಯಗಳ ಸಂಕೀರ್ಣತೆಯನ್ನು ಒಳಗೊಳ್ಳುತ್ತವೆ. ಕೆರೆ ಅಂಗಳ, ಹಸಿರು, ನೀರು,
ಸಂತೋಷ, ಉಲ್ಲಾಸ, ಇದೆಲ್ಲವನ್ನು ಒಳಗೊಂಡರೆ, ಬಯಲು ರಂಗಮಂದಿರ ಮನೆಯೊಳಗೇ ನಡೆಯುವ ಅಚಾನಕ್ಕದ ಘಟನೆಗಳು, ಸ್ಥಾನ ಪಲ್ಲಟಗಳಾಗುವ, ಮನೆ ಮನಗಳ ಒಳಗು ಹೊರಗೂ ಎರಡನ್ನೂ ಹೊಂದಿರುವ ಸಂದರ್ಭಗಳಿಗೆ ಸಾಕ್ಷಿಯಾಗುತ್ತದೆ. ಬಿದಿರು ಮೆಳೆ, ಸಾವಿಗೆ ನೋವಿಗೆ ಸಾಕ್ಷಿಯಾದರೆ, ಹೊಂಗೆ ರಂಗ ಎಲ್ಲವನ್ನೂ ಉತ್ತುಂಗಕ್ಕೆ ಕರೆದೊಯ್ದು ಕೊನೆಗೆ ಶಾಂತವಾಗಿ, ನಿರಂತರ ಹರಿಯುವ ಭಾವಗಳನ್ನು ಕಟ್ಟಿಕೊಡುತ್ತದೆ. ಹೊಂಗೆಯ ತಂಪು, ಶಾಂತತೆಯ ಸಂಕೇತವಾಗುತ್ತದೆ.
ಇನ್ನು ಸಂಗೀತ. ರಂಗಸಂಗೀತದ ಹುಚ್ಚು ನನಗೆ ಇರುವುದರಿಂದ, ನಾಟಕದ ಜೊತೆಗೆ ನಡೆಯುವ, ಅಲ್ಲೇ ಕುಳಿತ ರಂಗ ಸಂಗೀತ ತಂಡ, ಹಂಸಲೇಖಾರ ರೆಕಾರ್ಡೆಡ್ ಸಂಗೀತಕ್ಕಿಂತ ಹೆಚ್ಚು ಆಪ್ತವೆನಿಸುತ್ತದೆ. ನನಗೆ, ಹಂಸಲೇಖಾರ ಪ್ರತಿಭೆಯ ಬಗ್ಗೆ ಅಪಾರವಾದ ಗೌರವವಿದೆ. ಇವತ್ತಿಗೂ ಅವರು ರೈತಜೀವಿ ನಾಟಕಕ್ಕೆ ಮಾಡಿದ ಅದ್ಭುತ ಸಂಗೀತ ನೆನಪಿನಲ್ಲಿದೆ. ಜೋಕುಮಾರಸ್ವಾಮಿ ನಾಟಕಕ್ಕೆ ನೀಡಿದ ಸಂಗೀತ ವರ್ಷಗಳ ಕಾಲ ಗುನುಗುನಿಸುವಂತೆ ಮಾಡಿದೆ. ಆದರೆ 120 ವರ್ಷಗಳ ಹಿಂದಿನ ಸಂದರ್ಭಗಳಿಗೆ ಅವರು ಬಳಕೆ ಮಾಡಿದ ವಾದ್ಯಗಳು out of sync ಎನಿಸಿದ್ದು ಸುಳ್ಳಲ್ಲ. ಪುನಃ ಇಲ್ಲಿ ನಾನು ಬಸು ಅವರು ಹೇಳಿದ ಮಾತನ್ನು ತರುತ್ತಿದ್ದೇನೆ “ಹಂಸಲೇಖಾರನ್ನು ಮರೆತು ಹಾಡು ಕೇಳಿ, ಇಷ್ಟವಾಗಬಹುದು” ಈ ವಾಕ್ಯವನ್ನು ನಾನು ಮನದಲ್ಲಿಟ್ಟುಕೊಂಡು, ಆ ಹಾಡುಗಳನ್ನು ಕೇಳಲು ಪ್ರಯತ್ನ ಪಟ್ಟೆ. ಸಾಧ್ಯವಾಗಲಿಲ್ಲ.. ಇದು ಬಹುಷಃ ನನ್ನ ಮಿತಿ ಇರಬಹುದು. ಹಂಸಲೇಖಾ, ದೇಸಿ ವಾದ್ಯಗಳು, ಅವತ್ತಿನ ಕಾಲದ ಶಬ್ಧಗಳನ್ನು ಇಟ್ಟುಕೊಂಡು ಹಾಡುಗಳನ್ನು ಮಾಡಬಹುದಿತ್ತೇನೋ ಅನ್ನಿಸಿತ್ತು (ಕೋಣ ಈದೈತೆ ಸಿನೆಮಾದಲ್ಲಿ, ಹಂಸಲೇಖಾ ಮಾಡಿದ ಪ್ರಯೋಗಗಳನ್ನು ನೆನಪಿಸಿಕೊಳ್ಳಿ)
ಗೆಳೆಯ ಚೀನೀ ಮತ್ತು ತಂಡ ಹಾಡಿದ ಹಾಡುಗಳು ಮನಸ್ಸಿಗೆ ಹತ್ತಿರವಾದವು. ಎಲ್ಲೋ ಕೆಲವು ಮಟ್ಟುಗಳಲ್ಲಿ ಮೇಷ್ಟ್ರ ಛಾಯೆ ಕಾಣಿಸಿದ್ದು ಸುಳ್ಳಲ್ಲ .
ಇನ್ನು ಕಲಾವಿದರ ಬಗ್ಗೆ ಹೇಳುವುದಾದರೆ, ಅವರ ಪ್ರತಿಭೆಗೆ, 35 ದಿನಗಳ ಪರಿಶ್ರಮಕ್ಕೆ, ಶರಣು, ಶರಣು. ತುಂಬಾ ಮುಖ್ಯವಾದ ಅಂಶ ನನ್ನ ಗಮನಕ್ಕೆ ಬಂದದ್ದು, ಪ್ರತಿಯೊಬ್ಬ ಕಲಾವಿದರಿಗೂ ತಮ್ಮ ಚಲನೆಗಳ ಬಗ್ಗೆ ಸ್ಪಷ್ಟತೆ ಇದ್ದದ್ದು ಮತ್ತು, ರಂಗಸ್ಥಳದ ಬಗ್ಗೆ, ಅಲ್ಲಿರುವ ಮೆಟ್ಟಿಲು ದಿಬ್ಬ ಹಳ್ಳ, ಕಂಬ, ಹೀಗೆ ಪ್ರತಿಯೊಂದರ ಬಗ್ಗೆ ತುಂಬಾ ಅರಿವಿದ್ದಿದ್ದು. ಅವರ ಚಲನೆಗಳೇ ಅವರ ಅರಿವನ್ನು ಸ್ಪಷ್ಟವಾಗಿ ಕೂಗಿ ಹೇಳುತ್ತಿತ್ತು.
ಹಿರಿಯ ತಜ್ಞ , ಪರೇಶ್ ಮತ್ತು ತಂಡ ಮಾಡಿದ್ದ ಬೆಳಕಿನ ವಿನ್ಯಾಸ ಯಾವತ್ತಿಗೂ ಹೀಗಾಗಿರಲಿಲ್ಲ. ಇದನ್ನು ಬಸು ಕೂಡ ಕೊನೆಯಲ್ಲಿ ಪ್ರಸ್ತಾಪಿಸಿದರು. ಪಾತ್ರಧಾರಿಗಳ ಮುಖದ ಭಾವನೆಗಳನ್ನು ಸ್ಪಷ್ಟವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ, ಬೆಳಕಿನ ವಿನ್ಯಾಸ ವಿಫಲವಾಯಿತು
ಒಟ್ಟಾರೆ, ಬದುಕಿನ ಉದ್ದಕ್ಕೂ ನೆನಪಿನಲ್ಲಿ ಇಡಬಹುದಾದ, ಮುಂದಿನ ತಲೆಮಾರಿಗೆ, ರಂಗಾಸಕ್ತರಿಗೆ ಗೈಡ್ ಆಗಬಹುದಾದ ಎಲ್ಲಾ ಶಕ್ತಿಯನ್ನು ಹೊಂದಿರುವ ರಂಗಪ್ರಯೋಗ “ಮಲೆಗಳಲ್ಲಿ ಮದುಮಗಳು”
ಪ್ರಯೋಗದಲ್ಲಿ ಮುಕ್ತಾಯವಾಗಿ ಬಂದ ಸಾಲು ಇಲ್ಲಿ ಕೂಡ ಮುಕ್ತಾಯದ ಸಾಲನ್ನಾಗಿ ತೆಗೆದುಕೊಂಡಿದ್ದೇನೆ
“ಇಲ್ಲಿ ಯಾರೂ ಮುಖ್ಯರಲ್ಲ, ಇಲ್ಲಿ ಯಾರೂ ಅಮುಖ್ಯರಲ್ಲ………… ”
 

‍ಲೇಖಕರು avadhi

23 April, 2013

10 Comments

  1. Vishu

    Very opt.

    • Ramesh

      Thank you 🙂

  2. D. Mahendra

    ಮಲೆಗಳಲ್ಲಿ ಮದುಮಗಳು ಊ ಊಊ…. ಓ..ಓ….. ಹಾಡು ಕಿವಿಗಳಲ್ಲಿ ಗು೦ಗಿಡುತ್ತಲೆ ಇರುತ್ತದೆ… 35 ದಿನಗಳಿ೦ದ ಕಲಾಗ್ರಾಮದಲ್ಲಿ ರ೦ಗ ತರಬೇತಿ, ರಿಹಸ೯ಲ್ ನಾಟಕ ವ್ಯವಸ್ಥೆಗಳಲ್ಲಿ ಮುಳುಗಿರುವ ನಮಗೆ ಒ೦ದು ವಿಶೇಷ ಅನುಭವ, ಕಲಾಗ್ರಾಮದ ಸೆಕ್ಯೂರಿಟಿ ಗಾಡ್೯ಗಳು ತಮ್ಮ ಮೊಬೈಲ್ ಗಳಲ್ಲಿ ಇದೇ ಹಾಡುಗಳ ರಿ೦ಗ್ ಟೊನ್ ಮಾಡಿಕೊ೦ಡಿದ್ದಾರೆ,.. ಇದೊ೦ದು ಬಗೆಯ ಮೊಡಿ…
    ಕಲಾಗ್ರಾಮದ ವಿಶಾಲ ಆವರಣವನ್ನೆ ಕ್ಯಾನ್ವಾಸ್ ಮಾಡಿಕೊ೦ಡು ರ೦ಗದ ಹಿ೦ದೆ ಮು೦ದೆ ಓಡಾಡುತ್ತ ನಾಟಕ ಚಿತ್ರಿಸುತ್ತಾ ಸಾಗುವ ಸಿ. ಬಸವಲಿ೦ಗಯ್ಯನವರ ಪ್ರತಿಭೆ, ಶ್ರಮ, ಅಪಾರ ಅನುಭವಗಳ ಪರಿಚಯಗೊಳ್ಳುತ್ತಲೆ ಸಾಗುತ್ತದೆ….
    ನಿರೀಕ್ಷೆಗೆ ಮೀರಿ ಬ‌ರುತ್ತಿರುವ‌ ಪ್ರೇಕ್ಷ‌ಕ‌ರು, ಅವ‌ರಿಗೆ ಅನುಕೂಲ ಕ‌ಲ್ಪಿಸುವ‌ ಕ‌ಸ‌ರ‌ತ್ತುಗ‌ಳು ಇನ್ನು ಪೂಣ೯ಗೊ೦ಡಿಲ್ಲ‌, ಆದ‌ರೆ ಪ್ರೇಕ್ಷ‌ಕರ ಈ ಬ‌ಗ್ಗೆ ತಲೆ ಕೆಡಿಸಿಕೊ೦ಡಿಲ್ಲ!! ಹಾಗ೦ತ ವ್ಯವಸ್ಥೆಗಳು ಅಪೂಣ೯ವಾಗಿಯೇನೂ ಉಳಿಯುವುದಿಲ್ಲ,
    ನಾಟಕ ನೋಡಿ ಬ೦ದು ಬರುವ ಇ೦ಥ ಪ್ರತಿಕ್ರಿಯೆಗಳೇ ನಮಗೆ ಸ್ಪೂತಿ೯… ಥ್ಯಾ೦ಕ್ಸ್

    • Ramesh

      ಮಹೇಂದ್ರ… ಇದು ನಿಮ್ಮೆಲ್ಲರ ಶ್ರಮದ ಫಲ…. ಅಪೂರ್ಣತೆ ಬಗ್ಗೆ ಪ್ರೇಕ್ಷಕರು ತಲೆ ಕೆಡಿಸಿಕೊಂಡಿಲ್ಲ….. ಒಳ್ಳೆಯದಾಗಲಿ…. 🙂

  3. Swarna

    ನಟರು ಬೆಂಕಿಯನ್ನು ನಿಭಾಯಿಸಿದ ರೀತಿ ಮೆಚ್ಚವಂತದ್ದು
    ‘ಶ್ರುತಿ ಮೀರುವ ಹಕ್ಕು ಭರತಮುನಿಗೂ ಇಲ್ಲ’ ಚೆನ್ನಾಗಿದೆ

    • Ramesh

      Thank you Swarna 🙂

  4. Gopaal Wajapeyi

    ”ನೋಡಬೇಕು” ಎಂಬ ಇಚ್ಚೆಯನ್ನು ನೀವೆಲ್ಲ ಹೆಚ್ಚಿಸುತ್ತಿದ್ದೀರಿ… ನಿಮ್ಮೆಲ್ಲರ ಕಣ್ಣುಗಳ ಮೂಲಕ ಮದುಮಗಳನ್ನು ನೋಡಿ ತೃಪ್ತಿಪಟ್ಟುಕೊಳ್ಳುವೆ ಅಷ್ಟೇ…

  5. D. Mahendra

    ನಟರು ಬೆ೦ಕಿಯನ್ನು ನಿಭಾಯಿಸುವುದು ಸುಲಭದ್ದಲ್ಲ!!! ಕಳೆದ ವಾರ ದೈವ ರೂಪ ನಿರೂಪಿಸುವ ನಟ ಪ೦ಜಿನೊ೦ದಿಗೆ ಕೈ ಸುಟ್ಟುಕೊ೦ಡ!! ತಕ್ಷಣಕ್ಕೆ ಬನೋ೯ಲ್ ಇರಲಿಲ್ಲ, ಆದರೆ ಆ ನಟರ ಉತ್ಸಾಹವ೦ತು ಕಿ೦ಚಿತು ಕುಗ್ಗಿಲ್ಲ….. ಇದೇ 4 ಮತ್ತು 5 ಮೇ ಈ ಎರಡೂ ದಿನ ಚುನಾವಣೆಗಾಗಿ ನಾಟಕಕ್ಕೆ ರಜೆ…. ದಯಮಾಡಿ ಟಿಕೇಟ್ ಕೊಳ್ಳಬೇಡಿ….

  6. ರಘುಮುಳಿಯ

    ಉತ್ತಮ ವಿಮರ್ಶೆ.
    ಮೊನ್ನೆ ಶನಿವಾರ ”ಮಲೆಗಳಲ್ಲಿ ಮದುಮಗಳ”ನ್ನು ನೋಡಿದೆ.ರೋಚಕ ಅನುಭವ.ದುಡಿಯುತ್ತಿರುವ ಪ್ರತಿಯೊಬ್ಬನಿಗೂ ಅಭಿನ೦ದನೆಗಳು.
    ಮೇ ತಿ೦ಗಳಲ್ಲಿ ಇನ್ನೊಮ್ಮೆ ನೋಡಬೇಕೆ೦ಬಾಸೆಯಿದೆ.

    • Ramesh Gururajarao

      ಧನ್ಯವಾದ ರಘು 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading