ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲೆಗಳಲ್ಲಿ ಮದುಮಗಳು:ಗುತ್ತಿ ರಾತ್ರೋ ರಾತ್ರಿ ತಿಮ್ಮಿಯನ್ನು ಕರೆಕೊಂಡು ಸಿಂಬಾವಿಗೆ ಹೊರಟಿದ್ದ

ಬಾ ಹುಲಿಕಲ್ ನೆತ್ತಿಗೆ-12 -ಪ್ರೊ. ಶಿವರಾಮಯ್ಯ ಬಾ, ಹುಲಿಕಲ್ನೆತ್ತಿಗೆ! ಗುತ್ತಿ ರಾತ್ರೋ ರಾತ್ರಿ ಬೆಟ್ಟಳ್ಳಿ ಕೇರಿಯಿಂದ ತಿಮ್ಮಿಯನ್ನು ಕರೆಕೊಂಡು ಹುಲಿಕಲ್ಲು ಗುಡ್ಡದ ಮೇಲಿನ ದಾರಿಹಿಡಿದು ಸಿಂಬಾವಿಗೆ ಹೊರಟಿದ್ದ. ಅವಳು ನಡೆದುನಡೆದು ಕುಂಟಿ ಕುಂಟಿ ಗುತ್ತಿಯ ಹಿಂದೆ ಗುಡ್ಡ ಹತ್ತುತ್ತಿದ್ದಾಗಲೇ ನೆತ್ತರು ಹೆಪ್ಪುಗಟ್ಟುವಂತಹ ಆ ರುದ್ರ ಘಟನೆ ನಡೆದದ್ದು: ಅದೇ ಸಮಯದಲ್ಲಿ ಐತ ಪೀಂಚಲು ಇಬ್ಬರೂ ಅವರ ಬಿಡಾರದಲ್ಲಿ ಊಟ ಮುಗಿಸಿ ಐತನ ಬತ್ತಲೆ ಮೈಗೆ ಪೀಂಚಲು ತೆಂಗಿನೆಣ್ಣೆ ನೀವುತ್ತಿದ್ದುದ್ದು: ಇದ್ದಕ್ಕಿದ್ದ ಹಾಗೆ ಹೆಬ್ಬಲಿಯ ಆರ್ಭಟೆ ಕಂದರಾದ್ರಿ ವಿಪಿನಗಳನ್ನೆಲ್ಲ ಆಲೋಡಿಸಿತ್ತು; ದೊಡ್ಡಿನ ಹಿಂಡು ಭೂಮಿಯನ್ನೆಲ್ಲ ಗುಡುಗಿಸುವಂತೆ ಓಡಿದ ಸದ್ದಾಗಿತ್ತು! ಐತ ಕಮ್ಮಾರಸಾಲೆಯಲ್ಲಿ ದೊಂದಿ ಹೊತ್ತಿಸಿಕೊಂಡು ಸಿಂಬಾವಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಗುತ್ತಿಯನ್ನು ನೆನೆದು, ಅವನ ಸುರಕ್ಷತೆಗೆ ಕಾತರನಾಗಿ ಪೀಂಚಲುವಿಗೆ ಹೇಳಿದ್ದನು; `ಏನಿರಬೇಕು ಅವನ ಎದೆ? ಆ ಹುಲಿಕಲ್ನೆತ್ತಿ, ಬೆತ್ತದಸರ, ಎಲ್ಲಾ ದಾಟಿಕೊಂಡು ಹೋಗಬೇಕಲ್ಲಾ!’ ಎಂದು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ತಟಕ್ಕನೆ ನಿಂತನು ಗುತ್ತಿ. ಕಿವಿಗೊಟ್ಟನು, ಹುಬ್ಬು ನಿಮಿರಿತು. ಹಣೆ ಬಿತ್ತರಿಸಿತು. ಉಸಿರು ಒಮ್ಮೆಗೆ ನುಗ್ಗಿ ಶ್ವಾಸಕೋಶ ಹಿಗ್ಗಿ ತುಂಬಿತು. ಕ್ಷಣಾರ್ಧದಲ್ಲಿ ಗ್ರಹಿಸಿತ್ತು ಅವನ ಬೇಟೆಗಾರ ಮನಸ್ಸು, ನಡೆಯುತ್ತಿದ್ದುದು ಏನು ಎಂದು. ತೆಕ್ಕನೆ ತಿರುಗಿ, ಜೀವ ಹಾರಿಹೋಯಿತೊ ಎಂಬಂತೆ ಹೆದರಿ ಹೌವ್ವನೆ ಹಾರಿ ತನ್ನನ್ನು ಒತ್ತಿ ನಿಂತಿದ್ದ ತಿಮ್ಮಿಯನ್ನು ಬಳಿಯಿದ್ದ ಒಂದು ಹೆಮ್ಮರದ ಬುಡಕ್ಕೆ ಎಳೆದು ನಿಲ್ಲಿಸಿ, ಅವಳಿಗೆ ಅಡ್ಡಲಾಗಿ ನಿಂತು, ಕೈಯಲ್ಲಿದ್ದ ದೊಂಎಇಯನ್ನು ಬೀಸುತ್ತಲೇ, ಉಜ್ವಲಗೊಳಿಸಿದನು. ದೊಂದಿಯ ತುದಿಯ ಅಗ್ನಿಜ್ವಾಲೆ ಆ ಕತ್ತಲೆಯಲ್ಲಿ ಅಲಾತಚಕ್ರದಂತೆ ಹಿಂದಕ್ಕೂ ಮುಂದಕ್ಕೂ ಬೆಂಕಿಗೆರೆ ಎಳೆಯುತ್ತಿತ್ತು.

ಅವರಿಬ್ಬರಿಗೂ ಹಿಂಬದಿಯ ರಕ್ಷೆಯಾಗಿತ್ತು ಆ ಪ್ರಕಾಂಡ ವೃಕ್ಷೆ ದಿಂದು. ಮುಂದುಗಡೆ ರಕ್ಷೆಯಾಗಿತ್ತು, ಬೀಸುತ್ತಿದ್ದ ದೊಂದಿಯ ಹಿಲಾಲು: ಹುಲಿಯಾಗಲಿ ಹಂದಿಯಾಗಲಿ ಕರಡಿಯಾಗಲಿ ದೊಡ್ಡೆ ಆಗಲಿ ಉರಿಯುವ ಬೆಂಕಿಗೆ ಅಂಜಿ ಅದರ ಬಳಿಸಾರುವುದಿಲ್ಲ -ಎಂಬುದು ಗುತ್ತಿಗೆ ಚೆನ್ನಾಗಿ ಗೊತ್ತಿತ್ತು; ಆ ಧೈರ್ಯದಿಂದಲೇ ಅವನು ತಿಮ್ಮಿಗೆ `ಹೆದರಬೇಡ, ಹಂದದೆ ಸುಮ್ಮನೆ ನಿಂತುಕೊ’ ಎಂದು ಎಚ್ಚರಿಕೆ ಹೇಳಿದ್ದನು.

ಕಾಡಿನಲ್ಲಿ ಹೆಬ್ಬುಲಿಯ ಅಬ್ಬರವನ್ನು ಹತ್ತಿರದಿಂದ ಕೇಳಿದವರಿಗೆ ಮಾತ್ರ ಗೊತ್ತು, ಗಿಡ ಮರ ಕಾಡು ಬೆಟ್ಟ ನೆಲ ಎಲ್ಲ ನಡುಗುತ್ತವೆ ಎಂಬುದರ ಅರ್ಥ! ತಿಮ್ಮೆಯೇನೊ ಹೆದರಿಯೆಸತ್ತು, ತೊಳ್ಳೆ ನಡುಗುತ್ತಾ, ನಿಲ್ಲಲೂ ಆರದೆ, ಮರ ಬುಡಕ್ಕೆ ಒತ್ತಿ ಕುಸಿದು ಕೂತಿದ್ದಳು. ಆದರೆ ಗುತ್ತಿಗೆ ಎದೆನಡುಕವೇನೂ ಇರಲಿಲ್ಲ. ಆ ಅಪಾಯ ಒಂದೆರಡು ನಿಮಿಷಗಳಲ್ಲಿಯೆ ಬಂದ ದಾರಿ ಹಿಡಿದು ಹೋಗುತ್ತದೆ ಎಂಬುದರಲ್ಲಿ ಅವನಿಗೆ ಸಂದೇಹವೂ ಇರಲಿಲ್ಲ; ಆದ್ದರಿಂದ ಅವನೇನೂ ನಡುಗುತ್ತಿರಲಿಲ್ಲ. ಕಾಡು ಭೂಮಿ ಬೆಟ್ಟ ಬಂಡೆಗಳೆಲ್ಲ ನಡುಗುತ್ತಿದ್ದುದಕ್ಕೆ ಅವನ ನಡುಕದ ಕಾರಣ ಇನಿತೂ ಇರಲಿಲ್ಲ, ಅವೇ ನಿಜವಾಗಿಯೂ ನಡುಗುತ್ತಿದ್ದುವು. ಅಲ್ಲಿ ಹೆದರಿಕೊಳ್ಳುವುದಕ್ಕೆ ಯಾವ ಸಚೇತನ ಜೀವಿಯೂ ಇರದೆ ಇದ್ದಿದ್ದರೂ ಆ ಪ್ರಕಂಪನ ವ್ಯಾಪಾರ ಭೌತಮಾತ್ರವಾಗಿಯೂ ನಡೆಯುತ್ತಿತ್ತು;

ಹಾಗಿತ್ತು ಆ ಹೆಬ್ಬುಲಿಯ ಆರ್ಭಟ! ಅದಕ್ಕೆ ಸಮಸ್ಪಧರ್ಿಯಾಗಿ, ನಿಮಿಷಾರ್ಧದಲ್ಲಿಯೆ ಮೊಳಗಿಬಂದಿತ್ತು, ದೊಡ್ಡಿನ ಹಿಂಡು ನುಗ್ಗಿ ಧಾವಿಸಿಬರುತ್ತಿದ್ದ ಮಹಾಸದ್ದು, ಸಣ್ಣ ಪುಟ್ಟ ಮರಗಿಡ ಹುಳುಗಳೆಲ್ಲ ನುಚ್ಚು ನುರಿಯಾಗಿ ನೆಲಸಮವಾಗುವಂತೆ. ಹತ್ತಿರದಲ್ಲಿಯೇ ಸಿಡಿಲು ಬಡಿದಿದ್ದರೆ ಆಗಬಹುದಾದ ಅನುಭವವಾಗಿತ್ತು ಗುತ್ತಿಗೂ! ಹತ್ತೋ ಇಪ್ಪತ್ತೋ ಎಷ್ಟೋ ಕಾಡುಕೋಣ ಕಾಡೆಮ್ಮೆಗಳು ದಿಡು ದಿಡು ದಿಡು ಎಂದು ಇವರು ಆಶ್ರಯಿಸಿ ನಿಂತಿದ್ದ ಹೆಮ್ಮರದ ದಿಕ್ಕಿಗೆ ಮಲೆಯ ನೆತ್ತಿಯಿಂದ ಕೆಳಕ್ಕೆ ಧಾವಿಸಿ ಬರುತ್ತಿದ್ದಂತೆ ತೋರಿತು. ಗುತ್ತಿಯ ನಾಯಿ, ಹುಲಿಯ, ಪ್ರಾರಂಭದಲ್ಲಿ ಒಂದೆರಡು ಸೊಲ್ಲು ಬೊಗುಳಿ ಕಾಡಿನೊಳಕ್ಕೆ ನುಗ್ಗಿ ಹೋದದ್ದು, ಮತ್ತೆ ಹಿಂದಕ್ಕೆ ಓಡಿಬಂದು ಗುತ್ತಿಯ ಮುಂದೆಯೆ ನಿಂತು ಸದ್ದು ಬರುತ್ತಿದ್ದ ದಿಕ್ಕಿನ ಕಡೆಗೆ ಮೊಗಮಾಡಿ ಬೊಗಳತೊಡಗಿತ್ತು. ಆದರೆ ಆ ಹೆಬ್ಬುಲಿಯ ಕೂಗಿನ ಮತ್ತು ದೊಡ್ಡುಗಳ ನುಗ್ಗಿನ ಭಯಂಕರ ರಾವದ ಇದಿರು ನಾಯಿಯ ಬೊಗಳು ನಗಣ್ಯವಾಗಿಬಿಟ್ಟಿತ್ತು. ಬಂದು! ಬಂತು! ಅದೊ ಹತ್ತಿರಕ್ಕೆ ಬರುತ್ತಿದೆ! ಕಣ್ಣಿಗೇನೂ ಕಾಣಿಸದು. ಬೀಸುತ್ತಿದ್ದ ದೊಂದಿಯ ಕೆಂಬೆಳಕಿನಲ್ಲಿ ಅದೊಂದೇ ನಯನೇಂದ್ರಿಯ ವಿಷಯವಾಗಿತ್ತು. ಇನ್ನು ಕಣರ್ೆಂದ್ರಿಯ? ಅದೂ ತನ್ನ ಅಳವಿಗೆ ಮೀರಿದ್ದ ಸಿಡಿಲು ಸದ್ದಿನ ಮಹಾಪ್ರವಾಹದಲ್ಲಿ ಕೊಚ್ಚಿಹೋಗಿತ್ತು, ಮೂಛರ್ೆಹೋದಂತಿತ್ತು. ದೊಡ್ಡಿನ ಹಿಂಡು ನುಗ್ಗುವ ರಭಸಕ್ಕೆ ಸಿಡಿದು ಕಲ್ಲು ಮಣ್ಣು ಇವರು ನಿಂತಿದ್ದೆಡೆಗೆ ಹಾರಬರತೊಡಗಿತು. ಅವುಗಳ ವೇಗದಿಂದ ಉದ್ಭವವಾದ ಗಾಳಿಯೂ ಬಳಿ ಸಾರಿದಂತೆ ಅನುಭವ! ಗುತ್ತಿ, ನರ ಬಿಗಿದು, ಕಾಲಗಲಿಸಿ ದೃಢವಾಗಿ ನಿಂತು, ಒಂದೇ ಸಮನೆ ದೊಂದಿಯನ್ನು ಬೀಸತೊಡಗಿದ್ದನು! ನುಗ್ಗಿ ಬರುತ್ತಿದ್ದ ಪ್ರಾಣಿಗಳಿಗೆ ಅದು ಹೇಗೆ ಕಾಣಿಸಿತೋ ಆ ಕತ್ತಲಲ್ಲಿ? ಇದ್ದಕ್ಕಿದ್ದಹಾಗೆ, ಗುತ್ತಿಯ ದೊಂದಿಯ ಜ್ವಾಲೆ ಪ್ರತಿಫಲಿಸಿತೆಂದು ತೋರುತ್ತದೆ, ಹಳುವಿನ ನಡುನಡುವೆ ಹಲವಾರು ಹೆಗ್ಗಣ್ಣು ಫಳಫಳನೆ ಹೊಳೆದಂತಾಗಿ ಒಡನೆಯೆ, ಬೆಂಕಿಗೆ ಬೆದರಿ ಅವು ದಿಕ್ಕು ಬದಲಯಿಸಿದ್ದರಿಂದ, ಮಾಯವಾಗಿದ್ದವು. ಸದ್ದು ಹೊಳೆ ಬೇರೆ ದಿಕ್ಕಿಗೆ ಹರಿಯತೊಡಗಿತು, ಬರಬರುತ್ತಾ ಕ್ಷೀಣವಾಗಿ, ಮೂರು ನಾಲ್ಕು ನಿಮಿಷಗಳಲ್ಲಿ ಕಾಡು, ಅತ್ಯಂತ ಅಸ್ವಾಭಾವಿಕವೊ ಎಂಬಂತೆ, ಗಾಢವಾಗಿ ನಿಶ್ಶಬ್ದವಾಗಿಬಿಟ್ಟಿತ್ತು. ಹುಲಿಯನ ನಾಲಗೆಯೂ ಅದರ ಗಂಟಲಿನಲ್ಲಿ ಹುದುಗಿ ಮೌನವಾಗಿತ್ತು, ನಡೆದ ಘಟನೆಯ ಭೀಷಣ ಭವ್ಯಾನುಭವಕ್ಕೆ ಸ್ತಂಭೀಭೂತವಾದಂತೆ!
ಹೆದೆಯೇರಿದ ಬಿಲ್ಲಿನಂತೆ ಬಿಗಿದುನಿಂತಿದ್ದ ಮೈಯನ್ನು ಸಡಿಲಿಸಿ, ಶ್ವಾಸಕೋಶ ತುಂಬುವಂತೆ ದೀರ್ಘವಾಗಿ ಉಸಿರೆಳೆದು ಬಿಡುತ್ತಾ, ಗುತ್ತಿ ತಿಮ್ಮಿಯ ಯೋಗಕ್ಷೇಮ ಪರಿಶೀಲನೆಗೆ ತಿರುಗಿದನು. ಅವಳು ಮರದ ಬುಡದಲ್ಲಿ ಮುದ್ದೆಯಾಗಿ ಕೂತಿದ್ದಳು. ಕರೆದರೆ ಮಾತಾಡಲಿಲ್ಲ. ಪಿಳಿಪಿಳಿ ಕಣ್ಣುಬಿಟ್ಟು ಅವನ ಕಡೆಗೆ ನೋಡುತ್ತಿದ್ದಳು. ಭೀತಿಮೂಕೆಯಾಗಿದ್ದ ಅವಳಿಗೆ ಮಾತೂ ನಿಂತುಹೋಗಿತ್ತು. ಅವಳ ಕಾಲುನಡುಕ ಇನ್ನೂ ನಿಂತಿರಲಿಲ್ಲ; ತಾನು ಹಿಡಿದಿದ್ದ ಬುತ್ತಿ ಇರುವ ಗಂಟನ್ನು ಮಾತ್ರ ಭದ್ರವಾಗಿ ಎದೆಗೆ ಅವುಚಿಕೊಂಡಿದ್ದಳು, ಅವಳನ್ನೂ ನಡಸಿಕೊಂಡು ನಿಧಾನವಾಗಿ ಗುಡ್ಡವೇರಿದನು.
ಮುಂದುವರೆಯುವುದು……]]>

‍ಲೇಖಕರು G

3 January, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading