ಬಾ ಹುಲಿಕಲ್ ನೆತ್ತಿಗೆ-5 -ಪ್ರೊ. ಶಿವರಾಮಯ್ಯ ದೃಶ್ಯ ಕಟ್ಟುವುದೆಂದರೆ ಮೂಲಕೃತಿಯಲ್ಲಿರುವ ವಿವರಣೆ ವರ್ಣನೆ ಕಥಾಭಾಗವನ್ನು ದೃಶ್ಯೀಕರಿಸುವುದು. ಪಾತ್ರಗಳ ಆಗಮನ ನಿರ್ಗಮನದ ಪ್ರಕಾರ ಮೂಲ ಸಂಭಾಷಣೆಗೆ ಚ್ಯುತಿಬಾರದಂತೆ ಮಾತುಗಳನ್ನು, ಹಾಡುಗಳನ್ನು ಕಟ್ಟಿ ನಿರೂಪಕರ ಮೂಲಕ ಹೇಳಿಸುತ್ತಾ ಕಥೆಯನ್ನು ಮುನ್ನಡೆಸುವುದು. ಮದುಮಗಳು ರಂಗರೂಪದ ವರ್ಕಷಾಪ್ ಹೀಗೆ ಸತತ ಒಂದು ವಾರದ ಮೇಲೆ ನಡೆಯಿತು. ಆಗ ಮೂಲ ಕೃತಿಯಿಂದ ಇಡುವುದನ್ನು ಇಟ್ಟು, ಬಿಡುವುದನ್ನು ಬಿಟ್ಟು, ಉಳಿದದ್ದನ್ನು ಪ್ರೇಕ್ಷಕರ ಊಹೆಗೆ ಸೂರೆಗೊಟ್ಟು ಸ್ಕ್ರಿಪ್ಟ್ ತಯಾರಿಸುತ್ತಿದ್ದೆವು.
ಕಾದಂಬರಿಯ 64 ಅಧ್ಯಾಯಗಳನ್ನು ಮೊದಲು 57 ಸೀನ್ಗಳಿಗೆ ಇಳಿಸಲಾಯಿತು. ಆಮೇಲೆ ಇನ್ನೂ ಒಂದೆರಡು ಕಡಿಮೆಯಾದವು. ಹಾಗೆ ಕಟ್ಟಿದ ಕೆಲವು ಹೊಸ ಸೀನ್ಗಳೆಂದರೆ ನಾಗತ್ತೆ ಸೊಸೆ ನಾಗಕ್ಕನನ್ನು ವೆಂಕಟಪ್ಪನಿಗೆ ಕೂಡಿಕೆ ಮಾಡಿಕೊಡಲು ಹೂಡಿದ ಸನ್ನಾಹ, ದೊಡ್ಡವಳಾದ ಚಿನ್ನಮ್ಮನಿಗೆ ವಸಗೆ ಹಾಕುವುದು; ಕೋಣೂರು ತೋಟದಲ್ಲಿ ಆಳುಗಳು ದ್ರೌಪದಿ ವಸ್ತ್ರಾಪಹರಣ ನಾಟಕ ಪ್ರಾಕ್ಟೀಸ್ ಮಾಡುವುದು; ಬೆಟ್ಟಳ್ಳಿಯಲ್ಲಿ ಬೀಸೆಕಲ್ಲು ಸವಾರಿ; ಕಲ್ಲೂರು ಮಂಜಪ್ಪ ಭಟ್ಟರ ಮನೆ ದೃಶ್ಯ; ಚಿನ್ನಕ್ಕನ ಕನಸಿನಲ್ಲಿ ರಾಕ್ಷಸ ಕಂಡದ್ದು; ಮೇಗರವಳ್ಳಿ ಮಿಷನ್ ಶಾಲೆಯಲ್ಲಿ ಮತಾಂತರದ ದೃಶ್ಯ-ಇತ್ಯಾದಿ. ಕೆವೈಎನ್ ಹೇಗ ಸಂದಭರ್ೋಚಿತವಾಗಿ ದೃಶ್ಯ ಕಟ್ಟಬಲ್ಲ ಎಂಬುದಕ್ಕೆ ನಾಗತ್ತೆ ತನ್ನ ವಿಧವೆ ಸೊಸೆ ನಾಗಕ್ಕನನ್ನು ವೆಂಕಟಪ್ಪನಿಗೆ ಕೂಡಿಕೆ ಮಾಡಿ ಕೊಡುವ ಮುಂಚೆ ನಡೆಸಿದ ಒಳ ಒಪ್ಪಂದದ ಒಂದು ಸ್ಯಾಂಪೆಲ್ ಹೀಗೆದೆ ನೋಡಿ: ನಾಗತ್ತೆ: ನೋಡು ವೆಂಕಟಪ್ಪ ನೀನು ದುಡುಕಿ ಅವಾಂತರ ಮಾಡಬ್ಯಾಡ, ನಾನು ಹೇಳಿದಂಗೆ ಕೇಳು. ವೆಂಕಟಪ್ಪ: ನಿನ್ನ ನಂಬಬೌದಾ…. ಆಸಿಂಬಾವಿ ಹೆಗ್ಗಡೆಗೂ ಹಿಂದೆ ಹೇಳಿದ್ಯಂತೆ. ನಾಗತ್ತೆ: ಮಾತು ಆಡುವಾಗ ಎಷ್ಟೋ ಬರ್ತಾವೆ ಹೋಗ್ತವೆ. ಆ ಮಾತು ಈಗಿಲ್ಲ ಬಿಡು. (ಇಲ್ಲಿ ಇನ್ನೊಂದು ಪುಟದಷ್ಟು ಸಂಭಾಷಣೆ ಇದೆ) ವೆಂಕಟಪ್ಪ: ಅಲ್ಲ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಏನು ಅಂತ, ಅಲ್ದೆ ಈಗಿರೋ ಪರಿಸ್ಥಿತಿನಾಗೆ ಹಂದಿ ಹೊಡ್ಸು ಅಂದ್ರೆ ಹೇಗೆ? ನಾಗತ್ತೆ: ಅಕ್ಕಿ ಮ್ಯಾಲೆ ಆಸೆ ನೆಂಟ್ರುಮ್ಯಾಲೆ ಪ್ರೀತಿ ಅಂದ್ರೆ ಆಗಲ್ಲ. ನಾಗಕ್ಕ ಬೇಕು ಅಂದ್ರೆ ನಾ ಹೇಳಿದಂಗೆ ಮಾಡು. ಅವಳನ್ನ ಕರೆತಂದು ನಿನ್ನ ಕೈಯ್ಯಾಗೆ ಹಾಕದಿದ್ರೆ ನನ್ನೆಸರು ನಾಗತ್ತೇನೇ ಅಲ್ಲ. ವೆಂಕಟಪ್ಪ: ನೀನೀ ಮಾತಿನ ಮ್ಯಾಲಿರು. ನಾನು ಏನಾದ್ರೂ ಮಾಡಿ ಎಲ್ಲ ಸರಿಮಾಡಿಕೊಳ್ತೀನಿ. ಅಂದಂಗೆ ಈ ಗುಟ್ಟೂ ಯಾರಿಗೂ…. ನಾಗಕ್ಕ: ಸೊಸೇನ ಕೂಡಿಕೆ ಮಾಡಿ ಕೊಟ್ಟ ಮ್ಯಾಲೆ ಅತ್ತೇನ ಆಚೆಗ್ಹಾಕಿ ಕೈಗೆ ಚಿಪ್ಪು ಕೊಡಲ್ಲತಾನೆ? ವೆಂಕಟಪ್ಪ: ಏನ್ ಮಾತು ಅಂಥಾ ಆಡ್ತಿಯಾ? ನಿನ್ನ ಸೊಸೆ ನನ್ನ ಹೆಂಡ್ತಿ ಆದ ಮ್ಯಾಲೆ, ನಿಂದ್ ಬ್ಯಾರೆ ನಂದ್ ಬ್ಯಾರೆ ಅಂತ ಇರ್ತದೇನು? ನಂಗೆ ಅತ್ತೆ ಬೇರೆ ಅಲ್ಲ, ಸೊಸೆ ಬೇರೆ ಅಲ್ಲ. *** ಮಲೆನಾಡು ಸೀಮೆಯ ಕನ್ನಡ ಭಾಷೆಯ ಸೊಗಡು ಸೂಸುವ ಕಾಕು ಇರುವ ಈ ಸಂಭಾಷಣೆ ಯಾರಿಗೆ ಪ್ರಿಯವಾಗದು? ಆದರೆ ಇದು ಕುವೆಂಪು ಬರೆದಿದ್ದಲ್ಲ. ನಾರಾಯಣ ಸ್ವಾಮಿ ತಾನೇ ಆ ಸಂದರ್ಭಕ್ಕೆ ಕಟ್ಟಿದ್ದು. ಬಹುಶಃ ಕುವೆಂಪು ನೋಡಿದ್ದರೆ ಮುಗುಳ್ನಗದೆ ಇರುತ್ತಿರಲಿಲ್ಲ! ಚಿನ್ನಮ್ಮನಿಗೆ ವಸಗೆ ಮಾಡುವ ದೃಶ್ಯ ಕೂಡ ಮೂಲದಲ್ಲಿಲ್ಲ; ಕೆವೈಎನ್ ಕಲ್ಪಿತ ನೋಡಿ: ಆಕಾಸ ಉಪ್ಪರೆಗೇಲಿ ಆದಿಮುತ್ತೈದೇರೂ ಸಾಲ್ಗಟ್ಟಿ ನಿಂತವರೆ ಮಡಿಲು ತುಂಬಾ ಬಂದು ಸೋಬಾನವೆನ್ನಿರೆೇ ಸಿರಿಗೌರಿಗೆ ಸೋ|| ಹೀಗೆ ಹಾಡುತ್ತ ಮುತ್ತೈದೆಯರು ಮೈನೆರೆದ ಹುಡುಗಿ ಚಿನ್ನಮ್ಮಗೆ ಸ್ನಾನ ಮಾಡಿಸುವುದೂ ಮರಗಳನ್ನು ಮುಟ್ಟಿಸುವುದೂ ಇತ್ಯಾದಿ ಸಂಭ್ರಮದಲ್ಲಿ ತೊಡಗಿರುತ್ತಾರೆ. ಕುವೆಂಪು ಚಿನ್ನಮ್ಮನ ಮತ್ತು ಮುಕುಂದಯ್ಯನ ಬಾಲ್ಯದ ಹಾಗೂ ಜನ್ಮಾಂತರ ಸಂಬಂಧದ ಕತೆಯನ್ನು ಹೇಳುತ್ತಾ ಹೋದರೆ, ನಾಟಕವು ಹೀಗೆ ಅದನ್ನು ದೃಶ್ಯೀಕರಿಸಿ ನೋಟಕರಿಗೆ ಮುದ ನೀಡುತ್ತದೆ. ಮುಂದುವರೆಯುವುದು……… ]]>ಮಲೆಗಳಲ್ಲಿ ಮದುಮಗಳು : ದೃಶ್ಯ ಕಟ್ಟುವ ಕೆಲಸ





0 Comments