ಮಲಪ್ರಭೆಯ ಪ್ರಕೋಪಕ್ಕೆ ಊರು ಖಾಲಿ.. ಖಾಲಿ..

ಪ್ರೊ. ಚಂದ್ರಶೇಖರ ಹೆಗಡೆ

ಅದು ನೀರವ ರಾತ್ರಿ. ಇಡೀ ಹಳ್ಳಿಗೆ ಹಳ್ಳಿಯೇ ಮೌನವನ್ನೇ ಹೊದ್ದು ಗಾಢ ನಿದ್ದೆಯಲ್ಲಿ ಮೈಮರೆತುಹೋಗಿದೆ. ಕತ್ತಲೆಯೊಂದಿಗೆ ತಂಗಾಳಿ ಕುಶಲೋಪರಿಗಿಳಿದು ಮೌನ ಸಂವಾದಕ್ಕಿಳಿದಿದ್ದವು. ತಿಂಗಳ ಬೆಳಕಿನಲ್ಲಿ ಮೈಮುರಿಯುತ್ತಾ, ಆಕಳಿಸುತ್ತಾ ಹೊರಳಾಡುತ್ತಿರುವಂತೆ ಮಿನುಗುತ್ತಿದ್ದ ತಾರೆಗಳು ಕತ್ತಲೆಯೊಂದಿಗಿನ ಗಾಳಿಯ ಸಂಭಾಷಣೆಯ ಎಂದಿನ ಕುಶಲೋಪರಿಯನ್ನು ಅರೆತೆರೆದ ಕಣ್ಣು ಹಾಗೂ ಕಿವಿಗಳಿಂದ ಕೇಳಿಸಿಕೊಳ್ಳುತ್ತಿದ್ದವು.

ಗೂಬೆಗಳು ಬೇಟೆಗಿಳಿದು ಕೂಗುತ್ತಿರುವ ಪ್ರಶಾಂತ ಸಮಯ. ನಿಮ್ಮೊಂದಿಗೆ ನಾವೂ ಜೊತೆಗಿದ್ದೇವೆ ಎಂದು ಮೌನಕ್ಕೆ ಸೆಡ್ಡುಹೊಡೆದು ಆಗಸಕ್ಕೆ ಮುಖವಿಟ್ಟು ಮಾತಿಗಿಳಿಯುತ್ತಿದ್ದ ನರಿಗಳ ಕೂಗಾಟ ಆಗಾಗ ಗಾಳಿಯೊಂದಿಗೆ ತೇಲಿ ಬಂದು ಮಾಯವಾಗುತ್ತಿತ್ತು. ಪಿಸುಗುಡುತ್ತಿದ್ದ ಮರಗಳೆಲೆಗಳು ರಾತ್ರಿಗೆ ದನಿಯಾಗಿದ್ದವು. ಇದ್ದಕ್ಕಿದ್ದಂತೆ ಆ ಗಾಢ ಮೌನವನ್ನು ಸೀಳುವಂತೆ ಆದೇಶದ ಮಾನವ ದನಿಯೊಂದು ಗಾಳಿಯಲ್ಲಿ ತೂರಿಬಂತು.

ಆ ಧ್ವನಿ ಏಕಾಏಕಿ ಭಯಗೊಂಡು, ದಿಢೀರನೆ ಅಪ್ಪಳಿಸಿದ ಸುನಾಮಿಯಂತಿತ್ತು. ಮಧ್ಯರಾತ್ರಿ ನರಪಿಳ್ಳೆಯೂ ಸುಳಿಯದ ಕತ್ತಲೆಯಾರಣ್ಯದಲ್ಲಿ ಯಾರೋ ಏಳ್ರಿ ಏಳ್ರಿ ಅನಾಹುತವಾಗುತ್ತಿದೆ ನೀರು ಬರುತ್ತಿದೆ ಆದಷ್ಟು ಬೇಗ ಮನೆ ಖಾಲಿ ಮಾಡಿ ಎಂದು ತಲ್ಲಣಗೊಂಡ ಗಡುಸಾದ ಧ್ವನಿ ರಾತ್ರಿಯ ಮನೆಯನ್ನಪ್ಪಳಿಸಿತ್ತು. ಆ ಧ್ವನಿ  ಬಾಗಿಲು ಬಡಿದ ತಾಳಕ್ಕೆ ತಕ್ಕಂತೆ ಬಾಗಿಲಿಗಪ್ಪಳಿಸಿತು. ಬಾಗಿಲು ಬಡಿತ ಹಾಗೂ ಆರ್ಭಟದ ಏರು ಧ್ವನಿ ನೀರವ  ರಾತ್ರಿಯನ್ನು ಕಂಗೆಡಿಸಿದವು.

ಯಾರದೋ ಆ ಧ್ವನಿ ಊರಿನ ಮನೆಗಳ ಬಾಗಿಲು ಬಡಿಯುತ್ತಾ ಹತ್ತಿರ ಬಂದು ಮತ್ತೆ ದೂರವಾಗುತ್ತಾ ಸರಿಯುತ್ತಿತ್ತು. ಮತ್ತೆ ಹತ್ತಿರವಾದ ಧ್ವನಿ ಬಾಗಿಲ ಮುಂದೆ ನಿಂತ ಹಾಗೆನ್ನಿಸಿತು.

ಯಾರದು ಬಾಗಿಲು ತೆರೆಯಿರಿ.. ಬೇಗ … ಮತ್ತೆ ‘ಟಪ್ ಟಪ್’ ಎಂದು ಜೋರಾಗಿ ತಟ್ಟಿದ ಶಬ್ಧದಿಂದ ಎಚ್ಚರವಾದ ಚಿನ್ನಪ್ಪ ಯಾರು ಮಧ್ಯರಾತ್ರ್ಯಾಗ ಯಾರವರು ಬಾಗಿಲು ಬಡಿಯೋರು? ಎಂದು ಸಂಶಯದ ಧ್ವನಿಯಿಂದ ಬಾಗಿಲ ಮುಂದೆ ನಿಂತು ಕೂಗುತ್ತಿದ್ದ ದನಿಯನ್ನು ಮಾತನಾಡಿಸಲೆತ್ನಿಸಿದ. ಕೆಲ ಸಮಯದ ನಂತರ ಮತ್ತೆ ಅದೇ ಶಬ್ಧ ಟಪ್ ಟಪ್ ಎಂದು ಬಾಗಿಲು ಬಡಿಯಲಾರಂಭಿಸಿತು.

ಈಗ ತಡೆಯಲಾರದೆ ಹೆದರಿಕೆಯಿಂದ ಹಾಸಿಗೆಯಿಂದೆದ್ದ ಚಿನ್ನಪ್ಪ ಬಂದವನೇ ಬಾಗಿಲು ತೆಗೆದ. ನೋಡಿದರೆ ಕಪ್ಪು ಕತ್ತಲೆಯಲ್ಲಿ ಮುಖಗಾಣದೇ ಧ್ವನಿ ಮಾತ್ರ ಕೇಳುತ್ತಿತ್ತು.  ಬೀದಿ ದೀಪಗಳ ಮಬ್ಬುಬೆಳಕಿನಿಂದ ಬಿದ್ದ ನೆರಳಿನಿಂದ ಬಾಗಿಲು ಬಡಿದವ ಪೋಲೀಸ್ ಎಂದು ತಿಳಿದು ಗಾಬರಿಯಾದ.

ಕರಾಳ ರಾತ್ರಿಯ ನಡುವೆ ಪೊಲೀಸನೊಬ್ಬ ಮನೆಯವರೆಗೆ ಬಂದುದನ್ನು ಕಂಡು ಇವನಿಗೆ ಗಾಬರಿಯಾಯಿತು. ತಂಗಾಳಿಯ ಹಿತವಾದ ವಾತಾವರಣದ ಮಧ್ಯೆಯೂ ಬೆವರಿದ.

ಏನ್ರಿ ಸಾಹೇಬ್ರ ಮಧ್ಯರಾತ್ರಿ ಬಂದೀರಿ?.. ಎಂದು ಮಾತಿಗಳಿದ ಚಿನ್ನಪ್ಪ. ನಿಮ್ಮ ಊರಿಗೆ ನೀರು ಬರ್ತೈತಿ. ನೀವೀಗ್ಲೆ ಈ ಊರನ್ನು ಖಾಲಿ ಮಾಡ್ಬೇಕು ಮೇಲಿಂದ ಆದೇಶ ಆಗೇತಿ ನೋಡಿಲ್ಲೆ ಎಂದು ಪೊಲೀಸಪ್ಪ ತನ್ನ ಕೈಯ್ಯಲ್ಲಿರುವ ಆದೇಶವನ್ನು ಇವನಿಗೆ ತೋರಿಸಿದ. ಅನಕ್ಷರತೆಯ ಕತ್ತಲೆಯಲ್ಲಿದ್ದವನಿಗೆ ಈ ಆದೇಶ ಹೇಗೆ ತಾನೇ ಕಂಡೀತು? ಮನೆ ಹಾಗೂ ಮನೆಯ ತುಂಬ ಕತ್ತಲೆ ತುಂಬಿರುವಾಗ ಆದೇಶದ ಅಕ್ಷರಗಳು ಹೇಗೆ ತಾನೆ ಕಂಡಾವು?

ಪೊಲೀಸಪ್ಪನ ಮಾತು ಕೇಳಿ ಚಿನ್ನಪ್ಪನ ಎದೆಯೊಡೆದಂತಾಯಿತು. ಮೈತುಂಬಾ ಬೆವರು ನೀರಿನಂತೆ ಹರಿಯಲಾರಂಭಿಸಿತು. ಹೆಗಲ ಮೇಲಿದ್ದ ವಸ್ತ್ರದಿಂದ ಮುಖದ ಬೆವರನ್ನೊರೆಸಿಕೊಳ್ಳುತ್ತಲೇ ಈಗ್ಲೇ ಖಾಲಿ ಮಾಡ್ಬೇಕಾ ಸಾಹೇಬ್ರ ನಾಳೆ ಬೆಳಿಗ್ಗೆ ಹೋದ್ರ ಆಗೂದಿಲ್ಲನ್ರಿ ಎಂದು ಮುಗ್ಧತೆಯ ಪ್ರಶ್ನೆಯನ್ನೆಸೆದ. ಪೊಲೀಸಪ್ಪ ನನ್ನದೇನೂ ಅಭ್ಯಂತರವಿಲ್ಲ, ನಾನು ಬೇಕಾದ್ರ ತಡೀಬಲ್ಲೆ ನಿನ್ನ ಮಾತು ನೆರೆಯ ನೀರಿಗೆ ಅರ್ಥವಾಗಬೇಕಲ್ಲ ಎಂದ.

ಭೀಕರ ರಾತ್ರಿಗೆ ಬಿರುಗಾಳಿಯಂತೆ ಬಂದಪ್ಪಳಿಸಿದ ಈ ಸುದ್ದಿ ಊರನ್ನೇ ತಲ್ಲಣಗೊಳಿಸಿತು. ಕ್ಷಣಮಾತ್ರದಲ್ಲಿ ಈ ಸುದ್ದಿ ಊರಿಗೆಲ್ಲಾ ಹಬ್ಬಿ ಜನ ಊರ ಬಸವಣ್ಣನ ಗುಡಿಯ ಮುಂದೆ ಸೇರಹತ್ತಿದರು. ನಿದ್ದೆಯ ಮಂಪರಿನಲ್ಲಿದ್ದ ಹಳ್ಳಿ ತಕ್ಷಣ ಹಾಸಿಗೆಯಿಂದೆದ್ದು ಕಣ್ಣೊರೆಸಿಕೊಂಡು  ಎಚ್ಚರವಾಯಿತು. ಗುಸುಗುಸು ಗದ್ದಲ ಪ್ರಾರಂಭವಾಯಿತು. ಇದ್ದಕ್ಕಿದ್ದಂತೆ ಸುನಾಮಿಯ ಹಾಗೆ ಬಂದಪ್ಪಳಿಸಿದ ಸುದ್ದಿ ಕೇಳಿ ಊರಿಗೆ ಊರೇ ಹೌಹಾರಿತು.

ರಾತ್ರಿ ಹಗಲಾಯಿತು. ಕತ್ತಲೆ ಗದ್ದಲದ ಗೂಡಾಯಿತು. ನಿಶಾಚರಿಗಳೆಲ್ಲ ಇಷ್ಟು ಬೇಗ ಬೆಳಗಾಯಿತೆ ಎಂದು ಗೊಂದಲಗೊಂಡು ಚೀರಾಡಲಾರಂಭಿಸಿದವು. ಅಸಹಜ ಬೆಳವಣಿಗೆಯನ್ನು ಗುರ್ತಿಸಿದ ರಾತ್ರಿಯ ಜಗತ್ತು ತನ್ನ ಸ್ವರೂಪವನ್ನು ಬದಲಿಸಿಕೊಂಡಿತು. ಜೀಗುಟ್ಟುತ್ತಿದ್ದ ಜೀವಜಂತುಗಳು ಇನ್ನು ಮನುಷ್ಯನಾಟ ಸಮಯವೆಂದು ಮೌನವಾಗಿ ಗೂಡು ಸೇರಿ ಲಯವನ್ನು ಬದಲಿಸಿಕೊಂಡವು. ಹಾಯಾಗಿ ತಮ್ಮದೇ ಪ್ರಪಂಚವೆಂದು ಓಡಾಡಿಕೊಂಡಿದ್ದ ಮಿಂಚುಹುಳುಗಳು ದೀಪವನ್ನಾರಿಸಿದಂತೆ ಬೆಳಗುವುದನ್ನು ನಿಲ್ಲಿಸಿದವು.

ಕತ್ತಲೆ ಜಗತ್ತಿಗೂ ಒಂದು ಲಯವಿದೆ. ತಾಳದ ಬಣ್ಣನೆಯಿದೆ. ಸ್ವರಮಾಧುರ್ಯವಿದೆ. ಮೌನರಾಗವಿದೆ. ಅದಕ್ಕೆ ಏರಿಳಿತದ ಆಲಾಪವಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ದಟ್ಟ ರಾತ್ರಿಗೊಂದು ಅದರದ್ದೇ ಆದ ಸಹಜ ಸ್ವಾಭಾವಿಕ ಸಂಗೀತವಿದೆ. ಈ ಸುದ್ದಿಯಿಂದಾಗಿ ಆ ಊರಿನ ರಾತ್ರಿ ಸಂಗೀತದ ರಸಮಾಧುರ್ಯ ಅಲ್ಲೋಲ ಕಲ್ಲೋಲವಾಯಿತು. ಇದ್ದಕ್ಕಿದ್ದಂತೆ ಸುನಾಮಿಯಂತೆ ಊರಿಗೆ ಬಂದಪ್ಪಳಿಸಿದ ಪ್ರವಾಹದ ಸುದ್ದಿ ಇಡೀ ಊರನ್ನೇ ನಡುಗುವಂತೆ ಮಾಡಿತು. ದೊಡ್ಡವರ ಗದ್ದಲಕ್ಕೆ ನಿಶ್ಚಿಂತವಾಗಿ ಮಲಗಿದ್ದ ಮಕ್ಕಳ ದನಿಯೂ ಸೇರಿ ರಾತ್ರಿ ಮತ್ತಷ್ಟು ಗದ್ದಲಮಯವಾಯಿತು.

ಅಲ್ಲೇ ಇದ್ದ ಪೊಲೀಸಪ್ಪ ಹಳ್ಳಿಯವರೆಲ್ಲಾ ನೆರೆದದ್ದನ್ನು ಕಂಡು ಗದ್ದಲದ ಮಧ್ಯೆಯೇ ಬಸವಣ್ಣನ ಗುಡಿಯೆದುರಿಗಿನ ಬನ್ನಿಮರದ ಕಟ್ಟೆಯ ಮೇಲೆ ನಿಂತುಕೊಂಡು ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಬರಾಕತ್ತೈತಿ. ಈಗಾಗ್ಲೆ ನಿಮ್ಮ ಪಕ್ಕದ ಹಳ್ಳಿಗೆ ನೀರು ಬಂದು ಇಡೀ ಹಳ್ಳಿಯೇ ಮುಳುಗಿ ಹೊಂಟೈತಿ. ನಿಮ್ಮ ಹಳ್ಳಿಗೂ ಪ್ರವಾಹದ ನೀರುಬರಾಕ ತುದಿಗಾಲ ಮ್ಯಾಲ ನಿಂತೈತಿ. ಅದಕ ನೀವು ಈಗಿಂದೀಗ್ಲೆ ಮನೆ ಖಾಲಿ ಮಾಡ್ಬೇಕು. ಹಾಗಂತ ಆದೇಶಾನೂ ಆಗಿರೋದ್ರಿಂದ ತಡ ಮಾಡದ ಎಲ್ಲರೂ ಹೊಂಡ್ರಿ ಎಂದು ಸರಕಾರದ ಸಂದೇಶವನ್ನು ಆ ಹಳ್ಳಿಗೆ ತಲುಪಿಸಿದ.

ಮೌನವಾಗಿದ್ದು ಬಾಯಿ ತೆರೆದು ಗಾಬರಿಯಾಗಿ ಆಲಿಸುತ್ತಿದ್ದರು. ಪೊಲೀಸಪ್ಪ ತಂದ  ಸುದ್ದಿಯನ್ನು ಕೇಳಿ ಅದುವರೆಗೂ ನಿರಮ್ಮಳವಾಗಿ ನಿದ್ರಾದೇವಿಯ ಮಡಿಲಲ್ಲಿ ಮಲಗಿದ್ದ ಇಡೀ ಊರಿಗೆ ಬೆಂಕಿ ಬಿದ್ದ ಅನುಭವವಾಯಿತು. ಧುತ್ತೆಂದು ಬಂದೆರಗಿದ ಪ್ರವಾಹ ರಕ್ಕಸನಿಂದ ಈ ಮಧ್ಯರಾತ್ರಿ ಪಾರಾಗುವುದೆಂತು? ಹೇಗಾದರೂ ಇಲ್ಲಿದ್ದು ನಾಳೆ ಹೋದರಾಯಿತು ಎಂದರೆ ನೀರ ಹೆಮ್ಮಾರಿ ಊರ ಬಾಗಿಲಿನ  ಮುಂದೆ ಕಾದು ಕುಳಿತಿದೆ.

ಯಾವಾಗ ಮೈಮೇಲೆ ಎರಗುತ್ತೊ ಗೊತ್ತಿಲ್ಲದಂತಹ ಪರಿಸ್ಥಿತಿ ಊರವರದಾಯಿತು. ಎಲ್ಲ ಸೇರಿ ಏನಾದರೂ ಪರಿಹಾರ ಹುಡುಕೋಣವೆಂದರೆ ಸಮಯವಿಲ್ಲ. ಐದು ವರ್ಷ ಬರಗಾಲ ಬಿದ್ದು ತುತ್ತು ಕೂಳು ಹಾಗೂ ಹನಿ ನೀರಿಗೂ ಕಂಗಾಲಾಗಿದ್ದ ಹಳ್ಳಿಗೆ ನೀರು ಹೀಗೆ ಮಾರಿಯಾಗಿ ಬರುವುದೆಂದು ಬಿಸಿಲಪುರದವರು ಅಂದುಕೊಂಡಿರಲಿಲ್ಲ. ಜೀವದುಸಿರಾಗಿ ಬಾಳಿಗೆ ಹಸಿರಾಗಿ ಬದುಕಿಗೆ ಬೆಳಕಾಗಬೇಕಾದ ಗಂಗೆಯ ರೌದ್ರಾವತಾರ ಕಂಡು ಬಿಸಿಲಪುರದವರು ಬೆಚ್ಚಿದರು.

ಜೀವ ನೀಡುವ ಗಂಗೆಯೇ ಜೀವ ತೆಗೆಯಲು ಬರುತ್ತಿರುವುದನ್ನು ನೆನೆದು ಜನ ಕಕ್ಕಾಬಿಕ್ಕಿಯಾದರು. ಪೊಲೀಸಪ್ಪ ತಂದ ಸುದ್ದಿ ಕೇಳಿ ಊರಿಗೆ ಬರಸಿಡಿಲು ಬಡಿದಂತಾಯಿತು. ಜನ ಸಾವರಿಸಿಕೊಳ್ಳಲೂ ಸಮಯವಿಲ್ಲದಂತೆ ಮಾಡಿತ್ತು ನೆರೆ. ನಿದ್ದೆಯಲ್ಲಿದ್ದವರನ್ನು ಇದ್ದಕ್ಕಿದ್ದ ಹಾಗೆ ಎದ್ದು ಹೋಗಿ ಎಂದರೆ ಎಲ್ಲಿಗೆ ಹೋಗುವುದು? ಮಲಗಿದ ಒಡಲಕುಡಿಗಳನ್ನು ಎತ್ತಿಕೊಂಡು ಎಲ್ಲಿಗೆ ಕರೆದೊಯ್ಯುವುದು? ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಕಟ್ಟಿಕೊಂಡು ಹೋಗುವುದೆಲ್ಲಿಗೆ? ಎಂದು ಚಿಂತಿಸುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದ ಚಿನ್ನಪ್ಪ.

ಇರುವ ಎರಡು ಎಕರೆ ಭೂಮಿಯಲ್ಲಿ ಒಣಬೇಸಾಯ ಮಾಡಿಕೊಂಡು ಹೊಟ್ಟೆಗಿದ್ದರೆ ಬಟ್ಟೆಗಿಲ್ಲ ಬಟ್ಟೆಗಿದ್ದರೆ ಹೊಟ್ಟೆಗಿಲ್ಲವೆಂದು ಕಷ್ಟದ ಜೀವನ ಸಾಗಿಸುತ್ತಿದ್ದ ಬಡಕುಟುಂಬ ಚಿನ್ನಪ್ಪನದು. ಸತತ ಐದು ವರ್ಷ ಬಿಸಿಲಪುರಕ್ಕೆ ಬರ ಬಿದ್ದು, ಬೆಳೆ ಒಣಗಿ ಬದುಕುಗಳೆಲ್ಲಾ ಬರಡಾಗಿದ್ದವು. ಸಾಲ ಮಾಡಿ ತೀರಿಸಲಾಗದ ಬೆಟ್ಟದಷ್ಟು ಋಣದ ಶೂಲದಲ್ಲಿ ನೇತಾಡುತ್ತಿದ್ದ ಚಿನ್ನಪ್ಪನ ಬದುಕು ಸಂಕಟದಲ್ಲಿತ್ತು. ಹೇಗೋ ಬರುವ ವರ್ಷವಾದರೂ ಮುಂಗಾರು ಹಂಗಾಮಿನಲ್ಲಿ ಮಳೆ ಬಂದು ಬೆಳೆ ಚಿಗರಿದರೆ ತನ್ನ ಬದುಕೂ ಹಸಿರಾದೀತಲ್ಲ ಎಂಬ ಭರವಸೆಯ ಕಿರಣವೊಂದೇ ಚಿನ್ನಪ್ಪನ ಜೀವನ ದೀವಿಗೆಯಾಗಿತ್ತು.

ಗಂಡ-ಹೆಂಡತಿ ಇಬ್ಬರೂ ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಗಂಜಿ ಕುಡಿದು ಹೇಗೋ ಭಾರವಾದ ಹೆಜ್ಜೆಗಳಿಂದ ಕುಟುಂಬದ ನೊಗವನ್ನು ಹೊತ್ತು ಮುನ್ನಡೆಸುತ್ತಿದ್ದರು. ಇಂತಹ ಸಂದಿಗ್ಧ ಸಂದರ್ಭದಲ್ಲಿ ನೆರೆಯೊಂದು ಯಮನಂತೆ ಬಂದಪ್ಪಳಿಸಿದ್ದು ಚಿನ್ನಪ್ಪನ ಜಂಘಾಬಲವೇ ಉಡುಗಿಸಿತು. ಇದನ್ನು ಚಿಂತಿಸುತ್ತಲೇ ಮನೆಯ ಬಾಗಿಲಲಿ ನಿಂತು ಮಗ್ಗಲು ಹೊರಳಿ ಮಲಗಿರುವ ತನ್ನೆರಡು ಮಾಗದ ವಯಸ್ಸಿನ ಎಳೆಯ ಕಂದಮ್ಮಗಳ ಮುಖಗಳನ್ನೊಮ್ಮೆ ದಿಟ್ಟಿಸಿದ.

ಕಣ್ಣಾಲೆಗಳು ತೇವಗೊಂಡು ಕಣ್ಣೀರು ಉಕ್ಕಿ ಬಂತು. ಮಂಜಾದ ಮಬ್ಬುಕಣ್ಣುಗಳಿಂದಲೇ ದನದ ಕೊಟ್ಟಿಗೆಯ ಕಡೆಗೆ ಒಮ್ಮೆ ಕಣ್ಣಾಡಿಸಿದ ಹೃದಯ ಬಿರಿದಂತಾಯಿತು. ಹೋದ ಬರಗಾಲದ ಹಿಂಗಾರಿನ ತತಿಗೆ ಬಿತ್ತಿ ಬೆಳೆದ ಬಿಳಿ ಜೋಳದ ಮೂರು ಚೀಲಗಳು ಕೈಕಟ್ಟಿ ಶಿಸ್ತಿನಿಂದ ಒಂದರ ಮೇಲೊಂದರಂತೆ ಕುಳಿತಿರುವುದನ್ನು ಕಂಡು ಮಮ್ಮಲ ಮರುಗಿದ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಾದಾಗ ಮಾರಾಟ ಮಾಡಲಾಗದೇ ಬೆಲೆ ಬಂದ ನಂತರ ಮಾರಿದರಾಯಿತು. ಅದರಿಂದ ಒಂದಿಷ್ಟು ಸಾಲವನ್ನಾದರೂ  ತೀರಿಸಿದರಾಯಿತು ಎಂದುಕೊಂಡು ಮನೆಯಲ್ಲಿಟ್ಟಿದ್ದ ಜೋಳದ ಚೀಲಗಳನ್ನು ಕಂಡು ಹೊಟ್ಟೆ ಉರಿಯಲಾರಂಭಿಸಿತು.

ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತಲ್ಲ ಎಂದು ನೆನೆದು ಗದ್ಗದಿತನಾದ. ಐದು ವರ್ಷಗಳ ಬರಗಾಲದಿಂದ ಹಾಳಾದ ಬೆಳೆಗೆ ಮಾಡಿದ ಸಾಲ ಚಕ್ರಬಡ್ಡಿಯ ಸಮೇತ ಬೆಟ್ಟದಂತೆ ಬೆಳೆದು ನಿಂತಿದ್ದನ್ನು ಮನದ ಮುಂದೆ ತಂದುಕೊಂಡು ಗಲಿಬಿಲಿಗೊಳಗಾದ. ಪ್ರವಾಹ ಬಂದ ಪರಿವೆಯಿಲ್ಲದೆ ಸುಖವಾಗಿ ಮಲಗಿದ್ದ ಹೆಂಡತಿಯ ಮುಖ ನೋಡಿ ಗಳಗಳನೆ ಅತ್ತ. ಊರಿನ ಜನರ ಗದ್ದಲ ಪತಿಯ ಅಳುವ ಧ್ವನಿ ಕೇಳಿ ದಿಗ್ಗನೆ ಎದ್ದು ಕುಳಿತ ಹೆಂಡತಿ ಶಾಂತವ್ವ ಗಾಬರಿಗೊಳಗಾದಳು.

ದೆವ್ವಗಳು ಓಡಾಡುವ ಈ ಹೊತ್ತಲ್ಲದ ಹೊತ್ತಿನಲ್ಲಿ ಏನಾಗುತ್ತಿದೆ ಎಂಬುದರ ಅರಿವಿಲ್ಲದ ಹೆಂಡತಿಗೆ ಎದೆಯೊಡೆದಂತಾಗಿ ಯಾಕ್ರಿ ಅಳಾಕತ್ತೀರಿ ಏನಾಗೇತಿ ನಿಮಗ ಅಂತಾದ್ದು? ಎನ್ನುತ್ತಲೇ ಹಾಸಿಗೆಯಿಂದೆದ್ದು ಪಡಸಾಲೆಯಿಂದ ಕೆಳಗಿಳಿದು ಓಡಿ ಬಂದಳು. ಗಂಡನ ಕಣ್ಣೀರಿನ ಪರಿಚಯವೇ ಇಲ್ಲದ ಶಾಂತವ್ವಳಿಗೆ ಗಾಬರಿಯಾಯಿತು. ಕಣ್ಣೊರೆಸಿಕೊಳ್ಳುತ್ತಿದ್ದ ಪತಿ ಚಿನ್ನಪ್ಪ ಮಲಪ್ರಭೆ ತುಂಬಿ ಉಕ್ಕಿ ಬರಾಕತ್ತಾಳಂತ ನಾವು ಈಗಿಂದೀಗ ಊರ ಬಿಡಬೇಕಾಗೇತಿ ಎಂದವನೇ ಕೊಟ್ಟಿಗೆಯಲ್ಲಿ ಕಟ್ಟಿದ  ಜೋಡೆತ್ತುಗಳನ್ನು ಬಿಚ್ಚಲು ಧಾವಿಸಿದ.

ಇದಾವುದರ ಸುಳಿವಿರದ ಶಾಂತವ್ವಳ ಕಿವಿಗೆ ಗಂಡನ ಮಾತುಗಳು ಬಿದ್ದೊಡನೆ, ಎದೆಯೆಂಬ ಒಣಗಿದ್ದ ಮೇವಿನ ಗೂಡಿಗೆ ಒಮ್ಮಿಂದೊಮ್ಮಲೇ ಬೆಂಕಿ ಬಿದ್ದಂತಾಗಿ ಉರಿಯತೊಡಗಿತು. ಕೊರಳು ಉಬ್ಬಿ ಬಂತು. ಗಂಟಲು ಬಿಗಿಯಿತು. ತಡಮಾಡುವಂತಿಲ್ಲ ಮಗ್ಗಲ ಹಳ್ಳ್ಯಾಗ ಆಗಲೇ ನೀರು ಬಂದೈತಿ ಪೊಲೀಸಪ್ಪ ಬಂದ ಹೇಳಾಕತ್ತಾನ ತಡ ಮಾಡೂದು ಬ್ಯಾಡ ಹೊಂಡ ನಡಿ ಮಕ್ಕಳನ್ನೆತ್ತಿಕೊ ಎಂದು ಗರಬಡಿದವರಂತೆ ಬಾಗಿಲಿಗೊರಗಿ ನಿಂತಿದ್ದ ಶಾಂತವ್ವಳನ್ನು ಎಚ್ಚರಿಸಿದ.

ಬದುಕೆಂದರೆ ನಿಂತು ನಿಂತು ಸಾಗುವಂತಹದ್ದಲ್ಲ. ಕಷ್ಟಗಳಿಗೆ ಹೆದರಿ ತಪ್ಪಿಸಿಕೊಂಡು ಓಡುವಂತಹದ್ದೂ ಅಲ್ಲ. ಬಂದಂತೆ ಅನುಭವಿಸುವುದಷ್ಟೇ ನಮ್ಮ ಕೆಲಸ. ಬರುವ ಕಷ್ಟಗಳು ಮಾತ್ರ ನಮ್ಮವು. ಸವಾಲುಗಳೆಂದುಕೊಂಡು ಮುನ್ನುಗ್ಗಿಸರಾಯಿತು ಎಂದುಕೊಂಡು ಸ್ವಗತದಲ್ಲಿ ಸಮಾಧಾನ ತಂದುಕೊಂಡು ದುಃಖವನ್ನು ಒತ್ತಿಹಿಡಿದು ಚಿನ್ನಪ್ಪ ಮತ್ತೆರಡು ಮಕ್ಕಳಂತಿದ್ದ  ಬಡಕಲು ಎತ್ತುಗಳನ್ನು ಹಿಡಿದುಕೊಂಡು ಹೊರಬಂದ ಹೆಂಡತಿ ಶಾಂತವ್ವ ಉಟ್ಟ ಮಾಸಿದ ಸೀರೆಯ ಮಡಿಲಲ್ಲಿ ಮಕ್ಕಳನ್ನು ಎತ್ತಿಕೊಂಡು ಹೊರಬಂದಳು.

ಒಂದು ಮಗುವನ್ನು ತಾನೆತ್ತಿಕೊಂಡು ಮತ್ತೊಂದನ್ನು ಗಂಡನ ಕೈಗಿತ್ತು ಮನೆಯ ಕಡೆಗೊಮ್ಮೆ ಒಳನೋಟ ಬೀರಿದಳು. ಕಣ್ಣುಗಳು ಮಂಜಾಗಿ ಹನಿಗಳುದುರಿದವು. ಕನಿಷ್ಠ ಬದುಕನ್ನೂ ಸಾಗಿಸಲು ಅವಕಾಶ ನೀಡದ ಗಂಗವ್ವಳನ್ನು ಶಪಿಸುತ್ತಾ ಬರಿಗಾಲಿನಲ್ಲಿ ಹೊರಬಂದಳು. ಹಳ್ಳಿಯವರೆಲ್ಲಾ ಕೈಗೆ ದಕ್ಕಿದ ಸಾಮಾನು ಸರಂಜಾಮುಗಳನ್ನೆತ್ತಿಕೊಂಡು ದನಕರುಗಳ ಪರಿವಾರ ಸಮೇತ ಗುಳೇ ಹೊರಟಂತೆ ಹೊರಟು ನಿಂತರು.

ಜನರೆಲ್ಲಾ  ಬಿಸಿಲಪುರದ ಹೊರಗಿನ ಎತ್ತರದ ಬಯಲಿನಲ್ಲಿ ಸರಕಾರ ಅದಾಗಲೇ ಸ್ಥಾಪಿಸಿದ ಗಂಜಿ ಕೇಂದ್ರಕ್ಕೆ ಬಂದರು. ಜೀವನದಿಯಾಗಿ ಜೀವನಗಳನ್ನು ಕಟ್ಟಬೇಕಾಗಿದ್ದ ಗಂಗವ್ವ ಮುನಿದು ಊರನ್ನೇ ನುಂಗಲು ತಯಾರಾಗಿದ್ದನ್ನು ಬಿಸಿಲಪುರಕ್ಕೆ ಅರಗಿಸಿಕೊಳ್ಳಲಾಗಲಿಲ್ಲ. ಮಳೆಯಿಲ್ಲದೇ ನೆರೆ ತಂದ ವಿಧಿಗೆ ರೈತರು ಹಿಡಿಶಾಪ ಹಾಕಿದರು. ಊರಿಗೇ ಊರೇ ದುಃಖದ ಸಾಗರದಲ್ಲಿ ಮಿಂದೆದ್ದಿತು. ಮಕ್ಕಳ ಚೀರಾಟ ದನಗಳ ಕೂಗಾಟ ರೈತರ ತೊಳಲಾಟಗಳೆಲ್ಲಾ ಊರನ್ನು ರಣಭೀಕರತೆಯನ್ನುಂಟು ಮಾಡಿದವು.

ಪ್ರೀತಿಯಿಂದ ನೆಲಕ್ಕಂಟಿಕೊಂಡು ಹೇಗೋ ಸಾಧ್ಯವಾದ ಬದುಕುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದ ಹಲವಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿದ ಹೆಗ್ಗಳಿಕೆಯನ್ನು ಮಲಪ್ರಭೆಯ ಪ್ರವಾಹದ್ದಾಗಿತ್ತು. ವಯಸ್ಸಾದ  ಕೆಲವರಂತೂ ಮನೆ ಬಿಟ್ಟು ಹೊರಬರಲು ಹಿಂಜರಿಯುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ನಮ್ಮ ಹಣೆಬರಹ ಕೆಟ್ಟ ಐತಿ. ನಾವೇನು ಪಾಪ ಮಾಡಿದ್ದೆವೋ ಏನೋ ? ಗಂಗವ್ವ ನಮಗ ಈ ಘೋರ ಪರಿಸ್ಥಿತಿ ತಂದಳು ಎಂದು ತಲೆಯ ಮೇಲೆ ಸಾಮಾನು ಚೀಲ ಹೊತ್ತು ಕೈಯ್ಯಲ್ಲಿ ಕರುವನ್ನು ಹಿಡಿದು ಗೊಣಗುತ್ತಾ ಶಪಿಸಿ ಹೊರಟಿದ್ದ ಪಕ್ಕದ ಮನೆಯ ಮಾನಪ್ಪ.

ಮಲಪ್ರಭೆಗೆ ನಾವೇನು ಅನ್ಯಾಯ ಮಾಡೀವಿ ಅಂತಾ ಊರೊಳಗ ಬರಾಕತ್ತಾಳ ? ವರ್ಷಾ ಈಕಿ ಪೂಜೆ ಮಾಡಿಯೇ ಚರಗ ಚೆಲ್ತೀವಿ. ಅಂದ್ರೂ ನಮ್ಮ ಮ್ಯಾಗ ಕರುಣೆಯಿಲ್ಲಾಂದ್ರ ನಾವು ಎಲ್ಲಿಗೆ ಹೋಗ್ಬೇಕು?  ನಾವೇನು ಮಾಡ್ಬೇಕು ಎಂದು ಕಣ್ಣಹನಿಗಳಿಂದಲೇ ಜೀವನದಿಯನ್ನು ಶಪಿಸುತ್ತಿದ್ದ ರಂಗಪ್ಪ. ಊರೊಳಗೆ ತಾರತಮ್ಯ ಮಾಡುತ್ತಿದ್ದ ಗೌಡ್ರು ವಾಲೀಕಾರರು ಕುಲಕರ್ಣ್ಯಾರೂ ಊರ ಬಿಟ್ಟು ಹೋಗಬೇಕಾಯಿತು. ಮಲಪ್ರಭೆಗೆ ಭೇದ-ಭಾವಗಳ ಹಂಗಿಲ್ಲ.

ಕೊಟ್ಟರೆ ಎಲ್ಲಾರಿಗೂ ಕೊಡತಾಳ. ಬಿಟ್ಟರೆ ಎಲ್ಲರಿಗೂ ಬಿಡುತ್ತಾಳೆ. ದುಃಖದ ಭಾಷೆ ಎಲ್ಲ ವರ್ಗದವರಿಗೂ ಒಂದೇ ರೀತಿಯಾಗಿತ್ತು. ಪ್ರವಾಹದ ಮೂಲಕ ಸಮಾನತೆಯ ದಾರಿ ತೋರಿಸಿದ ಗಂಗವ್ವಳಿಗೆ ಬಿಸಿಲಪುರ ಋಣಿಯಾಗಲೇಬೇಕು! ಎಲ್ಲರಿಗೂ ಒಂದೇ ಗಂಜಿಕೇಂದ್ರ ಎಲ್ಲರಿಗೂ ಒಂದೇ ಆಸರೆ.

ಚಿನ್ನಪ್ಪ ಹಾಗೂ ಹೆಂಡತಿ ಶಾಂತವ್ವ ಮಕ್ಕಳು ಹಾಗೂ ದನಗಳೊಂದಿಗೆ ಸರಕಾರದ ತಗಡುಗಳಿಂದ ನಿರ್ಮಿತವಾದ ಗಂಜಿ ಕೇಂದ್ರಕ್ಕೆ ಭಾರವಾದ ಹೃದಯ ಹೊತ್ತು ಬಂದರು. ನೋಡ ನೋಡುತ್ತಿದ್ದಂತೆ ನೀರು ಊರೊಳಗೆ ಬಂದೇಬಿಟ್ಟಿತು. ದೂರದಲ್ಲಿ ನಿಂತು ಬಿಸಿಲಪುರದ ಜನ ಈ ಅಚ್ಚರಿಯನ್ನುಂಟು ಬಿಟ್ಟ ಕಣ್ಣುಗಳು ಬಿಟ್ಟಂತೆ ನೊಡಲಾರಂಭಿಸಿದರು. ಬೆಳದಿಂಗಳ ಬೆಳಕಿನಲ್ಲಿ ಹೊಳೆಯುತ್ತಿದ್ದ ಭಯಾನಕ ಹೆಬ್ಬಾವೊಂದು ಬಾಯಿ ತೆರೆದು ಊರನ್ನು ನುಂಗಲು ಹೊರಟಿದೆಯೇನೋ ಎನ್ನುವಂತೆ ಮಲಪ್ರಭೆ ಊರೊಳಗೆ ದಾಂಗುಡಿಯಿಟ್ಟದ್ದು ಸ್ಪಷ್ಟವಾಗಿ ಕಾಣುತ್ತಿತ್ತು.

ಇನ್ನೂ ಕೆಲ ಜನ ಹೊರ ಬರುತ್ತಿರುವಾಗಲೇ ಎದುರಿಗೆ ಧಾವಿಸಿದ ಮಲಪ್ರಭೆಯನ್ನು ಕಂಡು ಜನ ದಂಗಾದರು. ಭಯಭೀತರಾಗಿ ಜನರು ಓಡಲಾರಂಭಿಸಿದರೂ ಯಮನಂತೆ ಬೆನ್ನು ಹತ್ತಿ ಬಂದಳು ಗಂಗವ್ವ. ನೋಡನೋಡುತ್ತಿದ್ದಂತೆ ಕುತ್ತಿಗೆಯವರೆಗೆ ಬಂದ ನೀರಿನಲ್ಲಿಯೇ ಜನರು ದಾರಿ ಕಾಣದೇ ಮುಳುಗಲಾರಂಭಿಸಿದರು. ಕೆಲವರ ಕೈಗಳಷ್ಟೇ ಮೇಲೆ ಕಂಡು ಕೆಲ ಹೊತ್ತಿನ ನಂತರ ಕಾಣದಾದವು. ದನಕರುಗಳು ಚೀರಾಡಿ ಹೊರಬರಲು ಪ್ರಯತ್ನಿಸಿ ಸೋತು ನೀರಿನೊಳಗೆ ಮುಳುಗಿದವು. ಜನರು ಹೋ ಎಂದು ಚೀರಿ ನೀರಿನಲ್ಲಿ ಮುಳುಗುತ್ತಿದ್ದ ದೃಶ್ಯ ಎಂಥವರ ಕರುಳನ್ನು ಹಿಂಡುವಂತಿತ್ತು.

ಹೆಗಲ ಮೇಲೆ ಎರಡು ವರ್ಷದ ಮಗುವನ್ನು ಕುಳ್ಳಿರಿಸಿಕೊಂಡು ನೀರನ್ನು ದಾಟುತ್ತಿದ್ದ ಮಲ್ಲಪ್ಪ ಮಲಪ್ರಭೆಯ ರಭಸದ ರಕ್ಕಸದಲೆಗಳಿಗೆ ಸಿಲುಕಿ ಹೊರಬರಲಾಗದೇ ಮಗುವಿನೊಂದಿಗೆ ಕೊಚ್ಚಿಹೋಗುತ್ತಿದ್ದ ದೃಶ್ಯ ಹೃದಯ ಹಿಂಡಿದಂತಿತ್ತು. ಒಮ್ಮೆಲೇ ರೌದ್ರಾವತಾರ ತಾಳಿ ಕುಣಿಯುತ್ತಿದ್ದ ಗಂಗೆಯ ಆರ್ಭಟಕ್ಕೆ ದನಕರುಗಳೆಲ್ಲಾ ತೇಲಿಹೋದವು. ಆಡು ಕುರಿಗಳು ತರಗೆಲೆಗಳಂತೆ ಏರಿಳಿತಗೊಂಡು ಪ್ರವಾಹದೊಂದಿಗೆ ಕೊಚ್ಚಿ ಹೋಗುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಬಿಸಿಲಪುರದ ಜನರ ಬದುಕುಗಳೇ ಬಿದ್ದು ಹೋಗುವಂತೆ ಹಳ್ಳಿಯ ಮನೆಗಳು ನೀರುಂಡು ನಿಲ್ಲಲಾಗದೇ ನೆಲಕಚ್ಚಿದವು. ನೆಮ್ಮದಿಯ ಬದುಕಿಗೆ ಆಸರೆಯಾಗಿದ್ದ ಮನೆಗಳು ಜಲಾಹುತಿಯಾಗುತ್ತಿದ್ದುದನ್ನು ದೂರದಿಂದಲೇ ಕಂಡ ಜನರ ಗೋಳು ಮುಗಿಲುಮುಟ್ಟಿತ್ತು. ತನ್ನ ಬದುಕಿನ ಆಸರೆಯಾಗಿದ್ದ ಗಂಡ, ಮಗುವಿನೊಂದಿಗೆ ಕಣ್ಣೆದುರಿಗೆ ಕೊಚ್ಚಿ ಹೋಗುತ್ತಿದ್ದರೂ ಉಳಿಸಿಕೊಳ್ಳಲು ಸಾಧ್ಯವಾಗದ ತನ್ನ ದುರ್ವಿಧಿಯನ್ನು ನೆನೆದು ನೀಲವ್ವ ಹೊಟ್ಟೆ ಹೊಸೆದುಕೊಂಡು ಗೋಳಾಡಿದಳು. ನೆಲದ ಮೇಲೆ ಬಿದ್ದು ಹೊರಳಾಡಿದಳು. ಪ್ರವಾಹದ ವಿರುದ್ಧ ಈಜುವವರಾರು ?  ದುಃಖದ ಕಂಗಳಿಂದ ಕೊರಗುವುದಷ್ಟೇ ಬಿಸಿಲಪುರಕ್ಕೆ ಉಳಿದ ಹಾದಿಯಾಗಿತ್ತು.

ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದ ಬಿಸಿಲ ಪುರಕ್ಕೆ ದಾರಿ ಕಾಣದಂತಾಯಿತು. ಬಿಸಿಲಪುರ ಅಕ್ಷರಶಃ ಸಾಗರವಾಯಿತು. ಊರಿನ ಯಾವ ಕುರುಹುಗಳೂ ಕಾಣದಂತೆ ನುಂಗಿಹಾಕಿದ್ದಳು ಮಲಪ್ರಭೆ. ಅದೆಷ್ಟೊ ಬದುಕುಗಳನ್ನು ಮುಳುಗಿಸಿ ನೋಡುವವರ ಕಣ್ಣಿಗೆ ತಾನು ಮಾತ್ರ ಬೆಳ್ಳಗೆ ಹೊಳೆಯುತ್ತಿದ್ದ ಉಗ್ರಗಾಮಿನಿಯಂತಾದಳು.

ಕತ್ತಲೆ ಕಳೆಯಿತು. ನಿದ್ದೆಯಿಲ್ಲದೇ ಬಿಟ್ಟ ಕಣ್ಣು ಬಿಟ್ಟಂತೆ ತಲೆಯ ಮೇಲೆ ಕೈ ಹೊತ್ತು ಗಂಜಿ ಕೇಂದ್ರದ ಒಂದು ಮೂಲೆಯಲ್ಲಿ ಕುಳಿತಿದ್ದ ಚಿನ್ನಪ್ಪ ಹಾಗೂ ಹೆಂಡತಿ ಶಾಂತವ್ವಳಿಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದ ಅನುಭವ. ಹೊರಬಂದು ಊರ ಕಡೆಗೆ ದಿಟ್ಟಿ ನೆಟ್ಟು ನೋಡುತ್ತಿದ್ದ ಚಿನ್ನಪ್ಪ. ರಾತ್ರಿಗಿಂತ ನೀರು ಈಗ ಕಡಿಮೆಯಾದಂತೆನಿಸಿತು. ಪ್ರವಾಹ ಇಳಿಮುಖವಾಗುತ್ತಿತ್ತು. ಏನೊಂದೂ ಕಾಣದಂತೆ ಊರ ಮೇಲೆ ನೀರನ್ನೇ ಹೊದಿಸಿದಂತೆ ಆವರಿಸಿದ್ದ ಗಂಗೆಯ ಪ್ರತಾಪ ಕಡಿಮೆಯಾಗಿ, ಊರಿನ ಮಧ್ಯೆದಲ್ಲಿ ಮುರಿದು ಬಿದ್ದ ಬಸವಣ್ಣನ ಗುಡಿಯ ಗೋಪುರದ ಕಲ್ಲುಗಳು ಕಾಣಲಾರಂಭಿಸಿದವು.

ಅದುವರೆಗೂ ಒಂದೇ ಸಮನೆ ಊರಿನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದ ಚಿನ್ನಪ್ಪ ಗಂಗೆ ಇಳಿಮುಖ ಮಾಡ್ಯಾಳ. ನಾ ಹೋಗಿ ಆ ಪೆಟ್ಟಿಗೆ ತರ್ತೀನಿ ಮಕ್ಕಳ ಕಡೆಗೆ ಜೋಪಾನ ಎಂದು ಹೆಂಡತಿಗೆ ಹೇಳಿದವನೇ ಊರೊಳಗೆ ಕಡಿಮೆಯಾಗಿದ್ದ ನೀರಿಗಿಳಿದು ಮನೆಯತ್ತ ಈಜಿ ಧಾವಿಸಿದ. ಬಿದ್ದ ಮನೆಯ ಅಂಗಾಂಗಳನ್ನು ಕಂಡು ಕಣ್ಣೀರು ಹರಿಯಿತು. ಕಲ್ಲುಗಳನ್ನು ತಳ್ಳುತ್ತಾ ಮನೆಯ ಮಧ್ಯದಲ್ಲಿ ಬಂದು ಪೆಟ್ಟಿಗೆಯನ್ನು ಹುಡುಕಾಡಹತ್ತಿದ. ಕೆಂಬಣ್ಣದ ನೀರೊಳಗೆ ಮುಳುಗಿ ಹುಡುಕಲಾರಂಭಿಸಿದ. ನೀರಿನ ಒತ್ತಡ ಹೆಚ್ಚಾಗಲಾರಂಭಿಸಿತು.

ಮೇಲಿನ ಡ್ಯಾಂನಿಂದ ಮತ್ತಷ್ಟು ನೀರನ್ನು ಹರಿಯಬಿಟ್ಟಿದ್ದರಿಂದ ಮತ್ತೆ ನೀರು ಊರೊಳಗೆ ಧುಮ್ಮಿಕ್ಕಿ ಬಂತು. ಸುನಾಮಿಯಂತೆ ಧಾವಿಸಿ ಬಂದ ನೀರನ್ನು ದೂರದಿಂದಲೇ ಕಂಡ ಹೆಂಡತಿ ಶಾಂತವ್ವ  ಹೌಹಾರಿದಳು. ಸಾಗರೋಪಾದಿಯಲ್ಲಿ ಧುಮ್ಮಿಕ್ಕಿದ ಮಲಪ್ರಭೆಯನ್ನು ದಿಟ್ಟಿಸಿದ ಶಾಂತವ್ವನಿಗೆ ಎದೆಯೊಡೆದಂತಾಗಿ ಮೂರ್ಛೆ ಹೋದಳು. ಊರವರ ಸಹಾಯದಿಂದ ಎಚ್ಚೆತ್ತ ಶಾಂತವ್ವ ಗಂಡನಿಗಾಗಿ ಶಿವನನ್ನು ಪ್ರಾರ್ಥಿಸಿದಳು. ಎದೆ ಬಡಿದುಕೊಂಡು ಗೋಳಾಡಿದಳು.

ಧುತ್ತನೆ ತಮ್ಮ ಬಂದೆರಗಿದ ಜಲಾಘಾತ ತಡೆದುಕೊಳ್ಳಲಾಗದೇ ಪರಿಪರಿಯಾಗಿ ದುಃಖಿಸಿದಳು. ತನ್ನ ಗಂಡ ಹೇಗಾದರೂ ತುಂಬಿದ ಹೊಳೆಯನ್ನು ಈಜಿ ಬರುವನೆಂದೇ ನಂಬಿದ ಆಕೆ  ಕಾದಳು. ಪರಿತಪಿಸಿದಳು. ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು. ರಕ್ಷಣಾ ತಂಡ ನೀರಿಗಿಳಿಯಲು ಸಿದ್ಧವಾಗಿ ಬಂದೇಬಿಟ್ಟಿತು. ಪ್ರವಾಹ ಶಾಂತವಾಗಿತ್ತು. ನೀರು ಕಾಲು ಸೋತು ಮಡುಗಟ್ಟಿತ್ತು. ದೋಣಿಯ ಸಹಾಯದಿಂದ ನೀರಿಗಿಳಿದ ತಂಡ ಚಿನ್ನಪ್ಪನನ್ನು ಅವರ ಮನೆಯ ಹತ್ತಿರವಲ್ಲದೇ ಸುತ್ತಮುತ್ತ ಹುಡುಕಾಡಿತು.

ಅಲ್ಲಿ ತೇಲುತ್ತಿದ್ದ ನಾಯಿ, ಹಂದಿ, ಕುರಿ, ಆಡುಗಳಲ್ಲದೇ ಬೇರೆ ನರಪಿಳ್ಳೆಯ ಸುಳಿವು ಕಾಣಿಸಲಿಲ್ಲ. ಕೆಲವಾರು ಗಂಟೆಗಳ ಶೋಧದ ನಂತರ ಹೊರಬಂದ ರಕ್ಷಣಾ ತಂಡ ಖಾಲಿ ಕೈಯ್ಯಲ್ಲಿ ಮರಳಿತ್ತು. ಸಂಜೆಯವೆರೆಗಿನ ಹುಡುಕಾಟದಲ್ಲಿ ನಂತರವೂ ಸಿಗದ ಗಂಡನನ್ನು ನೆನೆದು ದುಃಖ ಉಮ್ಮಳಿಸಿ ಬಂತು. ತಿಳಿವೇ ಇಲ್ಲದ ಕಂದಮ್ಮಗಳನ್ನು ಮುಂದಿಟ್ಟುಕೊಂಡು ಕಂಬನಿಗರೆದಳು. ಆದರೂ ಗಂಡ ಮರಳಿ ಬಂದು ತನ್ನನ್ನು ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗುವನೆಂದೇ ಬಲವಾಗಿ ನಂಬಿದ್ದ ಶಾಂತವ್ವಳಿಗೆ ಮಾರನೇ ದಿನ ಸುದ್ದಿ ಕಾದಿತ್ತು.

ಊರಲ್ಲಿ ಯಾರದೋ ಶವವೊಂದು ನೀರಿನಲ್ಲಿ ತೇಲಾಡುತ್ತಿದೆ ಎಂಬ ಸುದ್ದಿ ಗಾಳಿಯೊಡನೆ ಹೊರಗಿನ ಊರನ್ನೇ ಆವರಿಸಿಕೊಂಡಿತು. ಹೋಗಿ ನೋಡಿದರೆ ಅದು ಚಿನ್ನಪ್ಪನ ಕಳೇಬರ. ತನ್ನ ಪತಿಯೇ ಜಲಸಮಾಧಿಯಾದ ಸುದ್ದಿ ತಿಳಿದ ಶಾಂತವ್ವಳ ಹೃದಯದ ದುಃಖ ಒಡೆದ ಅಣೆಕಟ್ಟೆಯಂತಾಯಿತು. ಬದುಕಲು  ಉಳಿದಿದ್ದ ಏಕೈಕ ಆಸರೆಯೂ ಹೊಳೆಯಲ್ಲಿ ಮುಳುಗಿದ್ದನ್ನು ಕಂಡ ಶಾಂತವ್ವಳ ಗೋಳು ಹೇಳತೀರದಾಯಿತು. ಬದುಕಿನ ಭರವಸೆಯನ್ನೇ ಕಳೆದುಕೊಂಡು ಅನಾಥೆಯಾದಳು.

ಪೆಟ್ಟಿಗೆ ತರುತ್ತೇನೆಂದು ಹೋದ ಗಂಡ ಮರಳಿ ಬಾರದ ಲೋಕಕ್ಕೆ ತೆರಳಿದ್ದು ಅವಳಿಗೆ ಅರಗಿಸಿಕೊಳ್ಳಲಾಗಲಿಲ್ಲ. ನಿಟ್ಟುಸಿರು ಬಿಡುತ್ತಾ ಮಕ್ಕಳ ಮುಖಗಳನ್ನೇ ಕಂಗಳಲ್ಲಿ ತುಂಬಿಕೊಂಡು ಎದೆಗವಚಿಕೊಂಡು ಗಂಡನ ಶವದ ಮುಂದೆ  ಬಾಯಿಬಡಿದುಕೊಳ್ಳುತ್ತಿದ್ದ ದೃಶ್ಯ ಭೀಭತ್ಸವಾಗಿತ್ತು. ಮಲಗಿರಬಹುದು ಎಂದಷ್ಟೇ ಬಾಲ ತಿಳುವಳಿಕೆಯಿಂದ ಎರಡು ಮಕ್ಕಳು ಅಪ್ಪನ ಶವದ ಮೇಲೆ ಬಿದ್ದು ಅಪ್ಪಾ.. ಅಪ್ಪಾ… ಏಳು… ಅಪ್ಪಾ… ಎಂದು ಬಾಲಭಾಷೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಾ ತಮ್ಮಪ್ಪನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದುದನ್ನು ಕಂಡ ಅಲ್ಲಿಯ ಜನರ ಒಡಲಿಗೆ ಕಿಚ್ಚು ಹತ್ತಿ ಉರಿಯುತ್ತಿತ್ತು.

ಪ್ರವಾಹ ಇಷ್ಟೊಂದು ಪರಮಕ್ರೂರಿಯೇ ಇದಕ್ಕೆ ಕಣ್ಣಿಲ್ಲವೇ? ಮುಗ್ಧ ಜೀವಗಳೊಂದಿಗೆ ಯಾಕಿಷ್ಟು ಚೆಲ್ಲಾಟವೋ ಎಂದು ಅಲ್ಲಿದ್ದ ಜನ ಹಿಡಿಶಾಪ ಹಾಕುತ್ತಿದ್ದರು. ತನ್ನ ಮುರಿದ ಬದುಕಿಗೆ ಆಧಾರದಂತಿದ್ದ  ಪತಿಯನ್ನೇ ಬಲಿ ತೆಗೆದುಕೊಂಡ ಗಂಗೆಯನ್ನು ಮನಬಂದಂತೆ ಶಪಿಸಿದಳು. ಮಲಪಹಾರಿ ನದಿಯ ಆಟಾಟೋಪವನ್ನು ಹೀಯಾಳಿಸಿದಳು. ಎರಡು ದಿನಗಳಿಂದ ಮಕ್ಕಳೊಂದಿಗೆ ಉಪವಾಸದಲ್ಲಿಯೇ ದುಃಖವನ್ನನುಭವಿಸಿದ ಶಾಂತವ್ವಳ ಕಣ್ಣೀರು ಬತ್ತಿಹೋದವು.

ಘೋರ ದುರಂತದ ಛಾಯೆ ಮುಖದಲ್ಲಿ ರಾರಾಜಿಸುತ್ತಿತ್ತು. ಮಕ್ಕಳ ಮೊಗದಲ್ಲಿ ಅಪ್ಪ ಮೇಲೇಳದೇ ತಮ್ಮನ್ನು ಸಂತೈಸದ ಕಾರಣಕ್ಕಾಗಿ ಬಿಳಚಿಕೊಂಡಂತಾಗಿತ್ತು. ಆಹಾರವಿಲ್ಲದೇ ಹೂವಿನಂತಿದ್ದ ಬಾಳೆ ಮುಖಗಳು ಬಾಡಿಹೋಗಿದ್ದವು. ಮಕ್ಕಳಿಬ್ಬರೂ ಮತ್ತೆ ಮರಳಿ ತಮ್ಮ ಅಪ್ಪ ಬಂದರೂ ಬರಬಹುದು ಎಂಬ ಬಾಲ ಬಯಕೆಯಿಂದ ಚಿನ್ನಪ್ಪನನ್ನು ಮಣ್ಣು ಮಾಡಿದ ಹೊಲದತ್ತಲೇ ಕಣ್ಣು ಹಾಯಿಸುತ್ತಿದ್ದುದನ್ನು ಕಂಡ  ತಾಯಿ ಶಾಂತವ್ವಳ ಕರುಳು ಕಿತ್ತುಬಂದಂತಾಯಿತು. ಆಕಾಶದತ್ತ ಕಣ್ಣು ಹಾಯಿಸಿ ಭಗವಂತನನ್ನು ಮನದಲ್ಲಿ ಪ್ರಾರ್ಥಿಸಿದಳು ಶಿವನೇ ಗಂಗೆಯನ್ನು ಮರಳಿ ಕರೆಸಿಕೊ ಆಗದಿದ್ದರೆ ನಮ್ಮನ್ನಾದರೂ…

‍ಲೇಖಕರು avadhi

September 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: