ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮರೆತಿಟ್ಟ ವಸ್ತುಗಳು’ ನಿಧಾನವಾಗಿ ಓದುತ್ತ ಹೋದೆ…

ಭಾರತಿ ಬಿ ವಿ

ನಾನು ಮೊದಲಿನಿಂದ ಮಲಯಾಳಂನ ಕಥೆಗಳ ಅನುವಾದವನ್ನು ಬಹಳ ಇಷ್ಟಪಟ್ಟು ಓದುತ್ತಿದ್ದೆ. ನಮ್ಮದಲ್ಲದ ರೀತಿಯ ಬದುಕು, ಭಾಷಾ ಪ್ರಯೋಗ ಕುತೂಹಲ ಹುಟ್ಟಿಸುತ್ತಿತ್ತು. ಆದರೆ ನನ್ನ ಕವಿತೆಗಳ ಓದು ಬಹಳ ಕಡಿಮೆ ಇದ್ದುದರಿಂದ ಯಾವತ್ತೂ ಬೇರೆ ಭಾಷೆಯ ಕವಿತೆಗಳನ್ನು ಓದಿದವಳಲ್ಲ.

ಮೊದಲ ಸಲ ನಾನು ಬೇರೆ ಭಾಷೆಯ ಕವಿತೆಯಲ್ಲಿ ಆಸಕ್ತಿ ತಳೆದಿದ್ದು ಕಮಲಾ ದಾಸ್‌ರಿಂದ. ಮೊನಚಾದ, ಉತ್ಕಟ ಕವಿತೆಗಳನ್ನು ಓದುತ್ತಾ ಹೋದಂತೆ ಅದರ ಮೋಹಕ್ಕೆ ಬಿದ್ದು, ಅವುಗಳನ್ನು ಅನುವಾದ ಮಾಡಬೇಕೆನ್ನಿಸುವ ಹುಚ್ಚು ಹಿಡಿದಿದ್ದು ಸಹಜ. ಹಾಗೆ ಅನುವಾದ ಮಾಡಿದ್ದನ್ನು ಫೇಸ್‌ಬುಕ್‌‌ನಲ್ಲಿ ಆಗೀಗ ಹಂಚಿಕೊಳ್ಳಲು ಪ್ರಾರಂಭಿಸಿದೆ. ಹಾಗೊಮ್ಮೆ ಹಂಚಿಕೊಂಡಾಗಲೇ ಯಾರೋ ತೇರಳಿ ಶೇಖರ್ ಕಮಲಾ ದಾಸ್‌ರ ಕವಿತೆಗಳನ್ನು ಅನುವಾದ ಮಾಡಿದ್ದು ಓದಿದ್ದೀರಾ ಎಂದು ಪ್ರತಿಕ್ರಯಿಸಿದರು. ಧಿಗ್ಗನೆ ಎದೆಯಲ್ಲೊಂದು ರೀತಿಯ ಸವತಿ ಮಾತ್ಸರ್ಯದ ಕಿಡಿ ಮೂಡಿ ‘ಇದ್ಯಾರು ನನ್ನ ಕಮಲಾದಾಸ್ ಕವಿತೆಗಳಿಗೆ ಹುಟ್ಟಿಕೊಂಡ ಪಾಲುದಾರ’ ಎಂದು ಅವರ ಪೇಜ್‌ ಇಣುಕಿ ನೋಡಲು ಧಾವಿಸಿದ್ದೆ. ಅಲ್ಲಿ ಬಹಳ ಸುಂದರವಾಗಿ ಅನುವಾದಿಸಿದ ಕಮಲಾ ದಾಸ್‌ರ ಕವಿತೆಗಳು ಸಿಕ್ಕಿದ್ದವು.

ಆ ನಂತರ ಅವರ ವಾಲ್‌ ಅನ್ನು ನಾನು ಗಮನಿಸಲಾರಂಭಿಸಿದಾಗ, ಕಮಲಾ ದಾಸ್ ಮಾತ್ರವಲ್ಲದೆ ಮತ್ತೂ ಅನೇಕ ಮಲಯಾಳಂ ಕವಿಗಳ ಕವಿತೆಗಳು ತಮ್ಮ ಹೊಸತನದಿಂದ ಮತ್ತು ಶೇಖರ್ ಅವರ ಗಟ್ಟಿ ಅನುವಾದದಿಂದ ನನ್ನ ಗಮನ ಸೆಳೆಯಲಾರಂಭಿಸಿದವು. ಹಾಗೆ ಪರಿಚಯವಾದ ತೇರಳಿ ಶೇಖರ್ ಆ ನಂತರ ಅದೇ ಕಾರಣವಾಗಿ ನನಗೆ ಆಪ್ತರೂ ಆದರು.

ಹಾಗೊಮ್ಮೆ ಕೇಂದ್ರ ಸಾಹಿತ್ಯ ಅಕಾಡೆಮಿ ಆಫೀಸ್‌‌ಗೆ ಅವರ ಜೊತೆ ಹೋದ ದಿನವೇ ಕೆ. ಸಚ್ಚಿದಾನಂದನ್ ಅವರ ಕವಿತೆಗಳ ಅನುವಾದದ ಆದೇಶ ತೇರಳಿ ಶೇಖರ್ ಅವರ ಕೈಗೆ ಸಿಕ್ಕಿತ್ತು. ಅಲ್ಲಿಯವರೆಗೆ ನಾನು ಸಚ್ಚಿದಾನಂದನ್ ಅವರ ಕವಿತೆಗಳನ್ನು ಓದಿದ ನೆನಪಿರಲಿಲ್ಲ. ಆಗಿನಿಂದ ಬಹಳ ಕುತೂಹಲದಿಂದ ಈ ಪುಸ್ತಕಕ್ಕಾಗಿ ಎದುರು ನೋಡುತ್ತಿದ್ದೆ. ಹಲವಾರು ಸಲ ಮುಗಿಯಿತಾ ಎಂದು ತಲೆ ತಿಂದಿದ್ದೂ ಉಂಟು. ಕೊನೆಗೊಮ್ಮೆ ‘ಮರೆತಿಟ್ಟ ವಸ್ತುಗಳು’ ಎಂಬ ಹೆಸರಿನಿಂದ ಈ ಪುಸ್ತಕ ಪ್ರಕಟವಾದಾಗ, ಅವರದನ್ನು ಕಳಿಸುತ್ತೇನೆ ಎಂದರೂ ಕಾಯುವ ವ್ಯವಧಾನವಿಲ್ಲದೆ ನುಡಿ ಪುಸ್ತಕದವರಿಂದ ತರಿಸಿಕೊಂಡಿದ್ದೆ‌‌.

ಕವಿತೆಗಳು ನನಗೆ ಇಷ್ಟವಾದರೂ ಅವುಗಳನ್ನು ಊಟದಂತೆ ಒಂದೇ ಬಾರಿಗೆ ತಿನ್ನಲಾಗುವುದಿಲ್ಲ. ನನ್ನ ಪ್ರಿಯವಾದ ಸಿಹಿ ತಿನಿಸಿನಂತೆ ಆಗೀಗ ಇಷ್ಟಿಷ್ಟೇ ಮೆಲ್ಲಬೇಕು. ಆರೆಂಟು ಕವಿತೆಗಳಾಚೆ ಓದಿದರೆ ಅವುಗಳನ್ನು ಪ್ರೀತಿಗಿಂತ ಹೆಚ್ಚಾಗಿ ಕರ್ತವ್ಯದಂತೆ ಓದುತ್ತಿರುವೆನಾ ಎನ್ನಿಸಿ ಕಸಿವಿಸಿಯಾಗುತ್ತದೆ. ಹಾಗಾಗಿ ‘ಮರೆತಿಟ್ಟ ವಸ್ತುಗಳು’ ಸಂಕಲನವನ್ನು ನಿಧಾನವಾಗಿ ಓದುತ್ತ ಹೋದೆ.

ಸಚ್ಚಿದಾನಂದನ್ ಕವಿತೆಗಳು ರಮ್ಯತೆಯಲ್ಲಿ ಮೀಯಿಸುವಂಥದ್ದಲ್ಲ, ಬದಲಿಗೆ ಸತ್ಯದೊಡನೆ, ಕಟು ವಾಸ್ತವದೊಡನೆ ಮುಖಾಮುಖಿಯಾಗಿಸುವಂಥವು. ಹಾಗಾಗಿ ಈ ಸಂಕಲನ ಮತ್ತಷ್ಟು ನಿಧಾನವಾಗಿ ಓದಬೇಕಾಯಿತು. ಆದರೆ ಅಡ್ಡಿಯಿಲ್ಲ, ಅಷ್ಟು ನಿಧಾನವಾಗಿ ಸಮಯ ಕೊಟ್ಟು ಓದಿದ್ದಕ್ಕೂ ಸಾರ್ಥಕವೆನ್ನಿಸುವಂಥ ಕವಿತೆಗಳು ನನ್ನ ಪಾಲಿಗೆ ದಕ್ಕಿದವು. ಅವರ ಕವಿತೆಗಳು ಸತ್ಯಕ್ಕೆ ಮುಖಾಮುಖಿಯಾದ್ದರಿಂದ ಹೆಚ್ಚಿನವು ಬೆಚ್ಚಿ ಬೀಳಿಸುವಂತೆಯೇ ಇವೆ.

ತೇರಳಿಯವರು ಮಲಯಾಳಂ ಭಾಷೆಯಿಂದ ನೇರವಾಗಿ ಕನ್ನಡಕ್ಕೆ ತಂದಿರುವ ಕವಿತೆಗಳು ಇವು. ಸಚ್ಚಿದಾನಂದನ್ ಅವರು ತಮ್ಮ ಕವಿತೆಗಳನ್ನು ಸ್ವತಃ ಇಂಗ್ಲಿಷ್‌ಗೆ ಅನುವಾದಿಸುತ್ತಾರೆ. ಅವರು ಒಂದು ಕಡೆ ಹೇಳಿದ್ದಾರೆ ‘ಯಾವ ಕವಿತೆಗಳು ಅನುವಾದಿಸಿಕೊಳ್ಳಲ್ಪಡುತ್ತವೋ ಅವುಗಳನ್ನು ಮಾತ್ರ ಅನುವಾದಿಸುತ್ತೇನೆ. ಕೆಲವು ಕವಿತೆಗಳೊಡನೆ ಮಲಯಾಳಿಗಳು ಮಾತ್ರ ಕನೆಕ್ಟ್ ಆಗಬಲ್ಲರು. ಅಂಥವನ್ನು ಕೂಡಾ ಅನುವಾದಿಸಬಹುದು. ಆದರೆ ಅವು ಇತರರಿಗೆ ಓದಿನ ಖುಷಿ ಕೊಡಲಾರವೇನೋ’ ಎನ್ನುತ್ತಾರೆ.

ಒಂದೆರಡು ಕವಿತೆಗಳನ್ನು ಓದುವಾಗ ನನಗೆ ಕೂಡಾ ಅವುಗಳ context ಅರ್ಥವಾಗಿದ್ದರೆ ಮತ್ತಿಷ್ಟು ಇಷ್ಟವಾಗುತ್ತಿತ್ತೇನೋ ಅನ್ನಿಸಿತಾದರೂ, ಅವು ಓದಿನ ಖುಷಿಯನ್ನು ಕೊಡದಂಥ ಕವಿತೆಗಳು ಎಂದೇನೂ ಅನ್ನಿಸಲಿಲ್ಲ. ಬಹುಶಃ ತೇರಳಿಯವರಂಥ ಸಮರ್ಥ ಅನುವಾದಕರು ಇವುಗಳನ್ನು ಅನುವಾದಿಸಿರುವುದರಿಂದ ಮಲಯಾಳಂನ ಕವಿತೆಗಳನ್ನು ಇಡಿಯಾಗಿ ತಲುಪಿಸುವಲ್ಲಿ ಶಕ್ತರಾಗಿದ್ದಾರೇನೋ ಅನ್ನಿಸಿತು.

ಸಚ್ಚಿದಾನಂದನ್ ಅವರ ಕವಿತೆಗಳ ವಿಷಯ ವೈವಿಧ್ಯತೆ ಬೆರಗುಗೊಳಿಸುತ್ತದೆ. ಅವರೇ ಹೇಳುವ ಹಾಗೆ ‘ಸಮಸ್ಯೆಗಳೆದುರು ಮೌನವಾಗುವ ಸಮಯ ಬಂದಾಗ ನಾನು ಮುಗಿದುಬಿಡಬೇಕು’. ಇಲ್ಲಿಯವರೆಗೆ ಮೌನವಾಗದ ಅವರು ಎದುರಾಗುವ ವಿಷಾದ, ದುಃಖ, ತಾರತಮ್ಯ, ದಬ್ಬಾಳಿಕೆ, ಅಸಹನೆ ಎಲ್ಲದಕ್ಕೂ ದನಿಯಾಗಿದ್ದಾರೆ, ಅಕ್ಷರವಾಗಿದ್ದಾರೆ. ಓದಿ ಮರೆತುಬಿಡುವ ಕವಿತೆಗಳಲ್ಲ ಇವು… ಜೊತೆಗೇ ನಡೆಯುತ್ತವೆ ಮತ್ತು ಓದಿ ಮುಗಿಸಿದ ನಂತರವೂ ಕವನ ಮುಗಿಯದೆ ನಮ್ಮೊಳಗೆ ಮುಂದುವರೆಯುತ್ತದೆ. ಇಡಿಯ ಕವನ ಸಂಕಲನದ ಎಲ್ಲ ಕವಿತೆಗಳಲ್ಲಿ ಕೆಲವು ಇಡಿಯಾಗಿ ಇಷ್ಟವಾದರೆ ಮತ್ತೆ ಕೆಲವು ಕವಿತೆಗಳಲ್ಲಿನ ಸಾಲುಗಳು ತೀವ್ರ ವಿಷಾದದ ಭಾವವನ್ನು ಉಳಿಸಿಬಿಟ್ಟವು.

ಮರೆತಿಟ್ಟ ವಸ್ತುಗಳು ಕವಿತೆಯ:
ಈಗ ಅನ್ನಿಸುತ್ತಿದೆ
ಈ ಭೂಮಿಯನ್ನೇ ದೇವರು ಮರೆತಿಟ್ಟಿದ್ದೆಂದು,
ಅದರಲ್ಲಿ ನಮ್ಮನ್ನೂ ಸಹ
ನೆನಪು ಬಂದಂತೆಲ್ಲ
ಅವನು ವಾಪಸ್ಸು ತೆಗೆದುಕೊಳ್ಳುತ್ತಾನೆ
ನದಿಗಳನ್ನು,
ಕಾಡುಗಳನ್ನು,
ನಮ್ಮನ್ನೂ.
ವೃದ್ದೆಯರು ಕವಿತೆಯ:
ಅವರ ಕಣ್ಣುಗಳಲ್ಲಿ ಈಗಲೂ
ಉಯ್ಯಾಲೆಗಳಿವೆ
ನೆನಪುಗಳಲ್ಲಿ ನೈದಿಲೆಗಳೂ, ಉತ್ಸವಗಳೂ ಉಳಿದಿವೆ
ಚೀತ್ಕಾರ ಕವಿತೆಯ:
ಹೃದಯ ಬಂದಾಗ ಹುಷಾರಾಗಿ ಜಗಿಯಿರಿ
ಆ ರಕುತದಲಿ ಈಗಲೂ
ಕೊಂಚ ಬಂಡಾಯ ಬಾಕಿಯಿದೆ
ಕೊಂಚ ಪ್ರಣಯವೂ.
ಒಗಟುಗಳು ಕವಿತೆಯ:
ಒಗ್ಗೂಡಿರುವಾಗ ಶಕ್ತವಾಗುವ
ಅಗಲಿರುವಾಗ ಅದಕ್ಕಿಂತಲೂ ಶಕ್ತವಾಗಿ ಬಿಡುವ
ಕನಸೆಂಥದು?
ಎಲ್ಲದಕ್ಕೂ ಉತ್ತರ: ಪ್ರಣಯ
ಚಳಿಯಲ್ಲಿ, ಸೆಕೆಯಲ್ಲಿ ಕವಿತೆಯ:
ದೆಹಲಿಯಿಂದ ವಾರಣಾಸಿಗೆ ಹೋಗುವ
ಒಂದೊಂದು ಟ್ರೈನಿನಲ್ಲೂ ಆ ಪಶ್ಚಾತ್ತಾಪಕ್ಕೆ
ಒಂದು ಕಂಪಾರ್ಟ್‌ಮೆಂಟಿದೆ
‘ಮರೆತಿಟ್ಟ ವಸ್ತುಗಳು’ ಸಂಕಲನದಲ್ಲಿ ಅನಿರೀಕ್ಷಿತವಾಗಿ ಎದುರುಗೊಳ್ಳುವ ನೋವಿನಲ್ಲಿ ಅದ್ದಿದ 6 ಬರೆಯದ ಪತ್ರಗಳು ಕರುಳನ್ನು ಇರಿದುಬಿಟ್ಟವು. ನಿಜಕ್ಕೂ ಹೇಳಬೇಕೆಂದರೆ ಬರಹ ದೀರ್ಘವಾಗಿಬಿಡುತ್ತಿರುವ ಕಾರಣಕ್ಕೆ ಆ ಬಗ್ಗೆ ಹೆಚ್ಚು ಬರೆಯುತ್ತಿಲ್ಲವಷ್ಟೇ… ನೀವು ಅದನ್ನು ಓದಬೇಕು… ನೋವು ಅಕ್ಷರರೂಪ ತಾಳುವುದು ಕಣ್ಣೆದುರು ಘಟಿಸುತ್ತಾ ಹೋಗುತ್ತದೆ. ಥ್ಯಾಂಕ್ ಯೂ ತೇರಳಿ ಶೇಖರ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ನಾನು ಇವುಗಳನ್ನು ಓದುವಂತಾಗಿದ್ದಕ್ಕೆ…

ಈ ಸಂಕಲನದಲ್ಲಿ ನನಗೆ ಪ್ರಾಣಪ್ರಿಯವಾದ ಕವಿತೆಯೆಂದರೆ ‘ಒಂದು ವ್ಯಾಕರಣ ಸಮಸ್ಯೆ’. 2008 ರಲ್ಲಿ ಬರೆದ ಈ ಕವಿತೆ, ಏನೇನೆಲ್ಲ ನಡೆಯುತ್ತಿರುವುದಕ್ಕೆ ನಾವು ಸಾಕ್ಷಿಯಾಗಿರುವ ಈ ಕಾಲಕ್ಕೂ ಪ್ರಸ್ತುತವಾಗಿಯೇ ಇದೆ ಎಂದರೆ ವಿಚಿತ್ರ ತಳಮಳ. ಈ ಕವಿತೆಯೊಡನೆ ಬರಹವನ್ನು ಮುಗಿಸುತ್ತೇನೆ. (ಇನ್ನೂ ರಾಶಿ ಬರೆಯುವುದಿದೆ. ಮತ್ತೆಂದಾದರೂ ಬರೆದೇನು)
”ಒಂದು ವ್ಯಾಕರಣ ಸಮಸ್ಯೆ “
ಸರ್ವನಾಮವನ್ನು ಕಲಿಸಿದ ನೀಲಕಂಠನ್
ಮಾಸ್ತರ್
ಯೋಚಿಸಿಯೇ ಇರಲಾರರು
ತಮ್ಮ ವ್ಯಾಕರಣ ಹೀಗೆ
ತಪ್ಪಾಗಿ ಹೋಗಬಹುದೆಂದು.
ಪ್ರಥಮಪುರುಷ ಸರ್ವನಾಮ ಬಹುವಚನದ
ಆ ಕೊಳಕು ದ್ವಿಮುಖದಲ್ಲಿಯೇ
ಅಪಾಯ ಶುರುವಾಗಿಬಿಟ್ಟಿದೆ.
ತೃತೀಯ ಪುರುಷನನ್ನೂ ಸೇರ್ಪಡಿಸಿ
‘ನಾವುಗಳು’ ಎಂದು ಹೇಳುತ್ತಿದ್ದುದು
ಅವನನ್ನು ಕೈಬಿಟ್ಟು
‘ನಾವು’ ಎಂದು ಹೇಳತೊಡಗುವಾಗಲೇ
ಆಲೋಚಿಸಬೇಕಾಗಿತ್ತು.
ಆದರೆ, ಮೊದ ಮೊದಲು ‘ನಾವು’
ಮಿಕಗಳ ಬಾವುಟವಾಗಿದ್ದೇವಲ್ಲ
ಅದು ನ್ಯಾಯಕ್ಕಾಗಿ
ಸಹನೆ ತೋರುವವರ ಸಮರವೂ
ಸಹೋದರತ್ವವೂ ಸೂಚಿಸಿತು.
ಯಾವಾಗ ಅದು ವಿದ್ವೇಷದ
ಪರ್ಯಾಯವಾದುದು?
‘ನಾವು’ ಅಲ್ಲದವರೆಲ್ಲರೂ ‘ಅವರು’ ಆದರು :
‘ಅವರು’ ನಮ್ಮ ಧರ್ಮ ಹಂಚಿಕೊಳ್ಳದವರು.
‘ಅವರ’ ನೆತ್ತರಿಗಾಗಿ ‘ನಾವು’ ಆವೇಶಗೊಂಡವರು.
ಮುಖದ ಮೇಲೆ ನೆತ್ತರು ಎರಚಿಬಿದ್ದಾಗಲೇ ಗೊತ್ತಾದುದು,
ಪ್ರಥಮಪುರುಷ ತೃತೀಯ ಪುರುಷನನ್ನು
ಬಾಗಿಲು ಮುಚ್ಚಿ ದೂರಮಾಡಿದ ವಿಚಾರ.
ತೃತೀಯಪುರುಷ ಸರ್ವನಾಮ ಬಹುವಚನಕ್ಕೆ
ಈಗ ಕೊಂಬು ಬಾಂಬುಗಳ ಮುಖವಾಡವಿದೆ
‘ನಾವುಗಳು’ ಎಂದು ಹೇಳತೊಡಗುವಾಗಲೇ ‘ಅವರು’
‘ನಾವು’ ಎಂದು ತಿದ್ದುತ್ತಾರೆ,
ಪ್ರಥಮ ಪುರುಷನನ್ನೂ
ವಿಸೂ: ಪುಸ್ತಕ ‘ನುಡಿ ಪುಸ್ತಕ’ ದಲ್ಲಿ ಸಿಗುತ್ತದೆ
ದ್ವಿತೀಯ ಪುರುಷನನ್ನೂ
ಒಟ್ಟಿಗೆ ತಿವಿದು ಕೆಡವುತ್ತ.
ಅಲ್ಲಾ, ಮಾಸ್ತರೇ, ಸರ್ವನಾಮವೆಲ್ಲವೂ
ಹೇಗೆ ಪುರುಷನಾದುದು?
ಸ್ತ್ರೀ ಆಗಿದ್ದರೆ ಹೀಗೊಂದು
ವ್ಯಾಕರಣ ಸಮಸ್ಯೆ ಉದ್ಭವಿಸುತ್ತಿತ್ತೇ?

‍ಲೇಖಕರು Admin

23 February, 2022

1 Comment

  1. T S SHRAVANA KUMARI

    ಕುತೂಹಲ ಹುಟ್ಟಿಸಿದ ಲೇಖನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading